ದೇಶದ ಹೂ ಉದ್ಯಮದಲ್ಲಿ ಶೇ75ರಷ್ಟು ಪಾಲು, ಕಾಫಿ ಉದ್ಯಮದಲ್ಲಿ ಶೇ.59, ತೊಗರಿ, ಹತ್ತಿ, ಅಕ್ಕಿ, ಅಡಕೆ, ಏಲಕ್ಕಿ, ಮೆಣಸು, ಕಬ್ಬು, ತಂಬಾಕು, ಗೋಡಂಬಿ, ರಾಗಿ, ಜೋಳ, ಮೆಕ್ಕೆಜೋಳ ಕೃಷಿಯಲ್ಲಿ ರಾಜ್ಯ ಪಡೆದ ಮುಂಚೂಣಿ ಸ್ಥಾನದಲ್ಲಿದೆಯಂತೆ. ಒಂದೆಡೆ ಮೂಲತಃ ರೈತರೇ ಆದ ಮುಖ್ಯಮಂತ್ರಿ ಇದ್ದಾರೆ, ಮತ್ತೊಂದೆಡೆ ಮಣ್ಣಿನ ಮಕ್ಕಳ ಪಕ್ಷ, ಮಗದೊಂದೆಡೆ ಸಂದರ್ಭಾನುಸಾರ ರೈತರನ್ನೇ ಗುತ್ತಿಗೆ ಪಡೆದಂತೆ ಮಾತನಾಡುವ ಬಿಜೆಪಿ, ರೈತರನ್ನೂ ಸಮಾಜವಾದ, ಸಮತಾವಾದದ ಅಡಿಯಲ್ಲಿ ತರಲು ಯತ್ನಿಸುವ ಪಕ್ಷಗಳು, ರಕ್ಷಣಾ ವೇದಿಕೆಗಳು, ಈ ಯಾವ ಪಕ್ಷಗಳೂ ನೆಟ್ಟಗೆ ರೈತರಿಗೆ ನೆರವಾಗುವುದಿಲ್ಲ ಎಂದು ಭಾವಿಸಿ ರೈತ ಹಿತರಕ್ಷಣೆ ಕಾಯಲು ಹುಟ್ಟಿಕೊಂಡ ರೈತಸಂಘ, ಅದರೊಳಗಿನ ಅನೇಕ ಉಪಸಂಘಗಳು ಇತ್ಯಾದಿ, ಇತ್ಯಾದಿಗಳಿದ್ದರೂ ನಿಜವಾಗಿ ಇವುಗಳಿಂದ ರೈತನಿಗೆ ಆಗುತ್ತಿರುವ ಉಪಕಾರ ಮಾತ್ರ ಶೂನ್ಯ.
ಪ್ರತಿಪಕ್ಷ ಯಾವುದೇ ಇರಲಿ, ಅದಕ್ಕೆ ಆಡಳಿತ ಪಕ್ಷ ಕೈಗೊಳ್ಳುವ ಎಲ್ಲ ನಿರ್ಧಾರವೂ ರೈತವಿರೋಧಿಯಾಗಿ ಕಾಣುತ್ತದೆ. ಪ್ರತಿಪಕ್ಷ ಇರುವುದೇ ಆಡಳಿತ ಪಕ್ಷವನ್ನು ವಿರೋಧಿಸಲು, ಅದರ ಕೆಲಸವೇ ವಿರೋಧಿಸುವುದು! ಹೀಗಾಗಿ ಪ್ರತಿಪಕ್ಷ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಯಾವ ಅವಕಾಶವನ್ನೂ ಬಿಡುವುದಿಲ್ಲ. ಸ್ವತಂತ್ರ ಭಾರತದ ಜನತಂತ್ರ ವ್ಯವಸ್ಥೆಯಲ್ಲಿ ಲಾಗಾಯ್ತಿನಿಂದಲೂ ಪ್ರತಿಪಕ್ಷಗಳು ಮಾಡುತ್ತ ಬಂದಿರುವುದು ಇದನ್ನೇ. ಇನ್ನು ಎಲ್ಲ ಪಕ್ಷಗಳ ಗುರಿಯೂ ಅಧಿಕಾರದ ಚುಕ್ಕಾಣಿ ಹಿಡಿಯುವುದೇ ಆಗಿರುವುದರಿಂದ ಸಂಖ್ಯಾ ಬಲದಲ್ಲಿ ದೊಡ್ಡದು ಎನಿಸುವ ಸಮುದಾಯಗಳನ್ನು ಓಲೈಸುವ ಕೆಲಸದಲ್ಲೇ ಅವು ಸದಾ ನಿರತವಾಗುತ್ತವೆಯೇ ವಿನಾ ಸಾಮಾಜಿಕ ಹಿತದ ದೂರದೃಷ್ಟಿ ಅಳವಡಿಸಿಕೊಳ್ಳಲು ಅವುಗಳಿಗೆ ಸಮಯವೇ ಇರುವುದಿಲ್ಲ. ರೈತ ಸಮುದಾಯವನ್ನೇ ಇಟ್ಟುಕೊಂಡು ಈ ಸಂಗತಿಯನ್ನು ನೋಡೋಣ.
ರಾಜ್ಯದ ಶೇ.71 ಜನ ಹಳ್ಳಿಯಲ್ಲಿರುವವರು, ಕೃಷಿ ಅವಲಂಬಿಸಿರುವವರು. ಶೇ. 56 ಜನ ಕೃಷಿ ಕೂಲಿ ಅವಲಂಬಿಸಿರುವವರು. ರಾಜ್ಯದ ಒಟ್ಟೂ ಭೂ ಭಾಗದಲ್ಲಿ 12.31 ದಶಲಕ್ಷ ಹೆಕ್ಟೇರ್ ಅಥವಾ ಶೇ.64.6ರಷ್ಟು ಭೂಮಿ ಕೃಷಿಗೆ ಒಳಪಟ್ಟಿದೆ. ಆದರೆ ಇರದಲ್ಲಿ ಶೇ.26.5ರಷ್ಟು ನೆಲ ಮಾತ್ರವೇ ನೀರಾವರಿಗೆ ಒಳಪಟ್ಟಿದೆ. ಉಳಿದ ಕೃಷಿ ಜಮೀನು ನೈಋತ್ಯ ಮಾರುತವನ್ನೇ ಅವಲಂಬಿಸಿದೆ. ಮಳೆ ಕೈಕೊಟ್ಟರೆ ಅಥವಾ ಅಕಾಲದಲ್ಲಿ ಬಿದ್ದರೆ ಮುಕ್ಕಾಲು ಪಾಲು ರೈತರ ಬದುಕು ಬೀದಿಗೆ ಬರುತ್ತದೆ.
2009ರ ಕೇಂದ್ರ ಬಜೆಟ್‍ನಲ್ಲಿ ಕೃಷಿಗೆ ಮೀಸಲಿಟ್ಟ ಹಣ 1,62,788 ಕೋಟಿ ರೂ. ಅಂದರೆ ಜಿಡಿಪಿಯ ಶೇ.2.7ರಷ್ಟು. ರಾಜಕೀಯ ಕಾರಣಕ್ಕೆ ಮಾಡಿದ ರೈತ ಸಾಲಮನ್ನಾ ಮೊತ್ತ 60,000 ಕೋಟಿ ರೂ. 1997-2005ರ ಅವಧಿಯಲ್ಲಿ ದೇಶಾದ್ಯಂತ ಸುಮಾರು 1.5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೈಗೊಂಡ ರಾಜಕೀಯ ನಿರ್ಧಾರ ಅದಾಗಿತ್ತು. ಓಲೈಕೆಯ ಇಂಥ ನಿರ್ಧಾರಗಳು ರೈತರನ್ನು ರಾಜಕೀಯ ಮತ್ತು ಆರ್ಥಿಕವಾಗಿ ಎಷ್ಟು ಕತ್ತಲಲ್ಲಿ ಇಟ್ಟಿವೆ ಎಂಬುದು ಸುಲಭದಲ್ಲಿ ಅರ್ಥವಾಗುವುದಿಲ್ಲ.
ಇಂಥ ರಾಜಕೀಯ ಘೋಷಣೆಗಳನ್ನೇ ರೈತರ ಉದ್ಧಾರದ ಸೂತ್ರಗಳು ಎನ್ನುವ ಪಕ್ಷಗಳು ರೈತರ ಸರ್ವಾಂಗೀಣ ಬೆಳವಣಿಗೆಗೆ ಸ್ವಾತಂತ್ರ್ಯಾ ನಂತರದಲ್ಲಿ ಮಾಡಿದ್ದು ಏನೂ ಇಲ್ಲ. ಇದಕ್ಕೆ ಸೂಕ್ತ ಕೃಷಿ ನೀತಿ ಇಲ್ಲದಿರುವುದೇ ಕಾರಣ. ಕೃಷಿ ಭೂಮಿ ರಕ್ಷಣೆಗೆ ಮಾಡಿದ ಕಾನೂನು ಕೃಷಿಯೇತರ ಉದ್ದೇಶಕ್ಕೆ ಸುಲಭದ ಪರಿವರ್ತನೆ ಮಾರ್ಗವನ್ನು ಹಾಕಿಕೊಟ್ಟು ಫಲವತ್ತಾದ ಭೂಮಿ ಬಂಡವಾಳಗಾರರ ಕೈ ಸೇರುವಂತೆ ಮಾಡುತ್ತದೆ. ಹೀಗಾಗಿಯೇ ದೇಶದ ಪ್ರತಿ ಜಿಲ್ಲೆಯಲ್ಲೂ ಪ್ರತಿ ವರ್ಷ 1000-2000 ಹೆಕ್ಟೇರ್ ಕೃಷಿಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಜಸಂಖ್ಯೆಯಂತೂ ಪ್ರತಿ ವರ್ಷ 7.85 ಲಕ್ಷ ದರದಲ್ಲಿ ಏರುತ್ತಿದೆ. ಆಹಾರ ಉತ್ಪಾದನೆ ಮಾತ್ರ ಕಳೆದ ಎರಡು ದಶಕಗಳಿಂದ ನಿಂತಲ್ಲೇ ಇದೆ! ಪ್ರತಿ ವರ್ಷ ರೈತರ ಸಂಖ್ಯೆ ಶೇ2ರಿಂದ 3ರಷ್ಟು ಇಳಿಕೆಯಾಗುತ್ತಿದೆ. ಅಂದರೆ ತಿನ್ನುವ ಹೊಟ್ಟೆಗಳು ಹೆಚ್ಚುತ್ತಿರುವಂತೆ ಬೆಳೆಯುವ ಕೈಗಳು, ಬೆಳೆಯುವ ಭೂಮಿ ಹೆಚ್ಚುತ್ತಿಲ್ಲ. ಇದು ಅಪಾಯಕಾರಿ ಸಂಗತಿ. ರೈತರಿಗೆ ಉತ್ತೇಜನ ಕೊಟ್ಟು, ಸ್ಪರ್ಧಾತ್ಮಕತೆ ಬರುವಂತೆ ಮಾಡಿ ಇದರಲ್ಲಿ ಸಮತೋಲನ ತರುವ ಯತ್ನವನ್ನು ಯಾವ ಸಂಘವಾಗಲೀ, ಪಕ್ಷವಾಗಲೀ, ಸರ್ಕಾರವಾಗಲೀ ಮಾಡುವುದಿಲ್ಲ.
ಅಣೆಕಟ್ಟು, ಕಾಲುವೆಗಳ ಮೂಲಕ ನೀರಾವರಿ ಪ್ರದೇಶ ಹೆಚ್ಚಿಸಲು ಸರ್ಕಾರ ಯೋಜಿಸಿ, ಅದು ಫಲ ನೀಡಿದ್ದು ಸತ್ಯ. ಕಳೆದ 29 ವರ್ಷಗಳಲ್ಲಿ ಬಿತ್ತನೆ ಕ್ಷೇತ್ರ ಶೇ.5.39ರಷ್ಟು ಹೆಚ್ಚಿದೆ. ಮೊದಲ ಪಂಚವಾರ್ಷಿಕ ಯೋಜನೆ ವೇಳೆಗೆ ಶೇ.7.27ರಷ್ಟಿದ್ದ ನೀರಾವರಿ ಪ್ರದೇಶ ಒಂಬತ್ತನೆಯ ಯೋಜನೆ ವೇಳೆಗೆ ಶೇ.19.45ರಷ್ಟಾಗಿತ್ತು. ಆದರೇನು ಈ ಭೂಮಿಯಿಂದ ಆಹಾರ ಧಾನ್ಯ ಏರಿಕೆಯಾಗಲಿಲ್ಲ, ಏರಿದ್ದು ವಾಣಿಜ್ಯ ಬೆಳೆ ಉತ್ಪಾದನೆ! ಆಹಾರ ಧಾನ್ಯದಿಂದ ಲಾಭವಿಲ್ಲ ಎಂದರಿತ ರೈತ ಸ್ವತಃ ವಾಣಿಜ್ಯ ಬೆಳೆಗೆ ಮುಂದಾದರೂ ಅಲ್ಲಿಯೂ ಅವನಿಗೆ ಕೈ ಕಚ್ಚುತ್ತದೆ. ಕಬ್ಬು, ಅಡಕೆಯಂಥ ವಾಣಿಜ್ಯ ಬೆಳೆಗಾರರು ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸುವ ಸ್ಥಿತಿ ಇದೆ.
ಯಾವುದೇ ಬೆಳೆಯಲ್ಲಿಯೂ ಬೆಳೆದ ರೈತನಿಗಾಗಲೀ ಪಡೆಯುವ ಗ್ರಾಹಕನಿಗಾಗಲೀ ಏನೂ ಲಾಭವಿಲ್ಲ. ಅದೇನಿದ್ದರೂ ಮಧ್ಯವರ್ತಿಗೆ. ತೊಗರಿ ಬೇಳೆಗೆ ರೈತ ಕೆಜಿಗೆ 40-50ರೂ ಪಡೆದರೆ ಗ್ರಾಹಕನನ್ನು ತಲುಪುವ ವೇಳೆಗೆ ಅದು ಕೆಜಿಗೆ 116ರೂ.ಆಗಿರುತ್ತದೆ. ಇಲ್ಲಿರುವುದು ಉತ್ಪಾದನೆ ಅಥವಾ ಬೇಡಿಕೆಯ ಸಮಸ್ಯೆಯಲ್ಲ. ಸಮರ್ಪಕ ವಿತರಣೆಯದು. ಈ ಜವಾಬ್ದಾರಿಯನ್ನು ಸರ್ಕಾರ ಎಂದೂ ವಹಿಸಿಕೊಂಡಿಲ್ಲ. ಇದೇನಿದ್ದರೂ ಖಾಸಗಿಯವರ ಸ್ವತ್ತು. ಹಾಗಾಗಿ ಎಲ್ಲ ಕೃಷಿ ಉತ್ಪಾದನೆಗೂ ಬೆಲೆ ನಿಗದಿಪಡಿಸುವವರು ಮಧ್ಯವರ್ತಿಗಳೇ. ಅಂದರೆ ಸಮಸ್ಯೆ ಹುಟ್ಟಿಸುವವರು ಮಧ್ಯವರ್ತಿಗಳು, ಸಂಕಟಪಡುವವರು ರೈತರು ಮತ್ತು ಗ್ರಾಹಕರು, ಸಮಸ್ಯೆ ಪರಿಹರಿಸಬೇಕಾದುದು ಮಾತ್ರ ಸರ್ಕಾರ! ಬೆಲೆ ಏರಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಜವಾಬ್ದಾರಿ ಹೊತ್ತುಹಾಕಿದರೆ, ರಾಜ್ಯ ಸರ್ಕಾರ ಕೇಂದ್ರದತ್ತ ಬೆರಳುಮಾಡುತ್ತದೆ.
ರೈತರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ನೀಲನಕ್ಷೆಯೇ ದೇಶದಲ್ಲಿಲ್ಲ. ಒಂದೊಂದು ರಾಜ್ಯಗಳ ನೀತಿ ಒಂದೊಂದು ತೆರ. ವಿದ್ಯುತ್ತನ್ನೇ ನೋಡಿ. ರಾಜ್ಯದಲ್ಲಿ ಲಭ್ಯವಿರುವ ವಿದ್ಯುತ್ತಿನಲ್ಲಿ ಗರಿಷ್ಠ ಎನ್ನುವ ಶೇ.31ರಷ್ಟು ವಿದ್ಯುತ್ ಈಗಲೂ ಕೃಷಿ ಬಳಕೆಗೆ ಇದೆ. ಉದ್ಯಮ ವಲಯ ಪಡೆಯುವ ವಿದ್ಯುತ್ ಶೇ24, ವಾಣಿಜ್ಯ ಪಡೆಯುವ ವಿದ್ಯುತ್ ಶೇ.21. ಪರಿಸ್ಥಿತಿ ಹೀಗಿದ್ದಾಗ ರೈತರನ್ನು ಓಲೈಸಲು ಉಚಿತ ವಿದ್ಯುತ್ ಕೊಡುತ್ತೇವೆ, ನಿರಂತರ ವಿದ್ಯುತ್ ಕೊಡುತ್ತೇವೆ ಎಂದು ರಾಜಕಾರಣಿಗಳು ಹುಸಿ ಆಶ್ವಾಸನೆ ಕೊಡುವುದುಂಟು.
ಇದು ಎಂದೂ ಆಗದ ಮಾತು. ಇಂದಿನ ಪರಿಸ್ಥಿತಿಯನ್ನೇ ನೋಡಿ. ಈರುಳ್ಳಿ ಹಿಡಿದ ಆಕಾಶದ ಮಾರ್ಗವನ್ನು ಟೊಮೆಟೊ ಹಿಡಿದಿದೆ. ಬೇಗನೇ ಕೆಡುವ ಹಾಲು ಮತ್ತು ಅದರ ಉತ್ಪನ್ನಗಳನ್ನು ರಾಜ್ಯಾದ್ಯಂತ ಒಂದೇ ದರದಲ್ಲಿ ಎಲ್ಲರಿಗೂ ನ್ಯಾಯ ಸಿಗುವಂತೆ ವಿತರಿಸುವ ವ್ಯವಸ್ಥೆ ಇರುವ ನಮ್ಮ ಸರ್ಕಾರದಲ್ಲಿ ಈರುಳ್ಳಿ, ಟೊಮೆಟೊಗಳಿಗೆ ರಾಜ್ಯದ ರಾಜಧಾನಿಯಲ್ಲಿ ಗಗನದ ಬೆಲೆ, ಕೋಲಾರ, ಗದಗದಲ್ಲಿ ಕೇಳುವವರಿಲ್ಲದ ಬೆಲೆ! ತರಕಾರಿಗಳಿಗೂ ಹಾಲು ಒಕ್ಕೂಟ ಮಾದರಿಯ ವ್ಯವಸ್ಥೆ ತರಲಾಗದೇ?
ಕೃಷಿ ಮತ್ತು ಕೃಷಿ ಉತ್ಪನ್ನಗಳ ನಿರ್ವಹಣೆಯಲ್ಲಿ ಇಂಥ ಬದಲಾವಣೆ ಬಾರದಿದ್ದರೆ ರೈತರೂ ಕೃಷಿ ಚಟುವಟಿಕೆ ಬಿಟ್ಟು ಯಾವುದೋ ಪಕ್ಷದ ಕಾರ್ಯಕರ್ತರಂತೆ ವರ್ಷವಿಡೀ ಒಂದಲ್ಲ ಒಂದು ಚಳವಳಿ ಮಾಡುತ್ತಿರಬೇಲಾಗುತ್ತದೆ, ಅವರದಷ್ಟೇ ಅಲ್ಲದೇ ಎಲ್ಲ ಕ್ಷೇತ್ರಗಳ ಜನರ ಬದುಕೂ ಹೈರಾಣಾಗುತ್ತದೆ.
No comments:
Post a Comment