ರಾಜ್ಯದಲ್ಲಿ ಈಗ ಬೇರೆ ಸುದ್ದಿಗಳಿಗೆ ಏನೇನೂ ಮಹತ್ವವಿಲ್ಲ (2014). ಅತ್ಯಾಚಾರ ಕುರಿತ ಚರ್ಚೆಗಳು ಹೊಸ ಹೊಸ ಸಂಗತಿಗಳನ್ನು ಹೊರಗೆಳೆಯುತ್ತಿದೆ. ನಮ್ಮ ಸಮಾಜ ತಾನು ಹೇಗಿದ್ದೇನೆ ಎಂಬುದನ್ನು ಕಂಡುಕೊಳ್ಳಲು ಇಂಥ ಪ್ರಕರಣಗಳು ನೆಪವಾಗಿರುವುದು ಮಾತ್ರ ಶೋಚನೀಯ. ಯಾವಾಗಲಾದರೂ ವ್ಯಕ್ತಿಯಾಗಲೀ ಸಮಾಜವಾಗಲೀ ತನ್ನನ್ನು ತಾನು ನೋಡಿಕೊಳ್ಳಲೇಬೇಕಲ್ಲ? ಇದು ಅಂಥ ಸಮಯ.
ಇಂಥ ಪ್ರಕರಣಗಳನ್ನು ಕುರಿತು ಮಾಧ್ಯಮಗಳಲ್ಲಿ ಹುಯಿಲು ಎದ್ದರೆ ನಿಮಗೇನ್ರಿ ಕಷ್ಟ ಎಂಬಂಥ ಪ್ರಶ್ನೆಗಳಿಂದ ಹಿಡಿದು ಪೊಲೀಸು, ನ್ಯಾಯಾಂಗ ಇತ್ಯಾದಿ ವ್ಯವಸ್ಥೆ ಹದಗೆಟ್ಟಿದ್ದರಿಂದಲೇ ನೊಂದವರಿಗೆ ಮಾಧ್ಯಮಗಳು ಆಸರೆ ನೀಡುತ್ತಿವೆ ಎಂಬಂಥ ಸಮರ್ಥನೆಯವರೆಗೆ ಎಲ್ಲ ಬಗೆಯ ಪ್ರತಿಕ್ರಿಯೆಗಳನ್ನೂ ಕಳೆದ ವಾರದ ಲೇಖನ ಬರೆದ ಮೇಲೆ ಎದುರಿಸುತ್ತಿದ್ದೇನೆ. ಕೆಲವರ ಪಾಲಿಗೆ ಕಳೆದ ವಾರದ ಲೇಖನ ಅತ್ಯಾಚಾರಿಗಳ ಪರ! ಇನ್ನು ಕೆಲವರ ಪಾಲಿಗೆ ಇದು ಮನುವಾದ!! ಪುರೋಹಿತಶಾಹಿ!!!
ಈ ಮನುವಾದ, ಪುರೋಹಿತಶಾಹಿ ಅಂದರೆ ಏನು ಅನ್ನುವುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇವೆರಡು ಯಾವುದಾದರೂ ಜಾತಿಗೆ ಆರೋಪಿಸುವ ಪದಗಳೇ? ಯಾವುದೇ ಜಾತಿಯಲ್ಲಿದ್ದರೂ ವ್ಯಕ್ತಿಗಳ ವರ್ತನೆ, ಧೋರಣೆ ಮತ್ತು ಸ್ವಭಾವಕ್ಕೆ ಸಂಬಂಧಿಸಿದ್ದೇ? ಯಾವುದಾದರೂ ಐತಿಹಾಸಿಕ ಸಂಗತಿಗೆ ಆರೋಪಿಸಿದ್ದೇ? ಎದುರಾಳಿಯ ಮಾತುಗಳಿಗೆ ಉತ್ತರ ಇಲ್ಲದಿದ್ದಾಗ ಬಳಸಬೇಕಾದ ಅಸ್ತ್ರಗಳೇ? ಯಾವುದೂ ಸ್ಪಷ್ಟವಿಲ್ಲ. ಕೆಲವರಿಗೆ ನನ್ನ ಹೆಸರಿನಿಂದಲೇ ನಾನೊಬ್ಬ ಪುರೋಹಿತಶಾಹಿ, ಮನುವಾದಿ ಎಂದು ಗೊತ್ತಾಗಿಬಿಡುತ್ತದೆಯಂತೆ! ಇವರು ಒಂದು ಬಗೆಯ ನಾಮಸಾಮುದ್ರಿಕರು. ಹಸ್ತಸಾಮುದ್ರಿಕರು, ಮುಖಸಾಮುದ್ರಿಕರು ಇದ್ದ ಹಾಗೆ.
ಕಾಕತಾಳೀಯವೋ ಎಂಬಂತೆ ಕಳೆದವಾರದ ಅಂಕಣದಲ್ಲಿ ಹೇಳಿದ ಸಂಗತಿಯನ್ನು ರಾಷ್ಟ್ರೀಯ ದೈನಿಕವೊಂದು ಆರು ತಿಂಗಳಿನಿಂದ ಅಧ್ಯಯನ ಮಾಡಿ ಜುಲೈ 30 ರಿಂದ ಇಂದಿನವರೆಗೆ ಸರಣಿಯೋಪಾದಿಯಲ್ಲಿ ಪ್ರಕಟಿಸಿದೆ. ಈ ಅಧ್ಯಯನ ಹೇಳುವಂತೆ ದಾಖಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಶೇ.40 ದುರುದ್ದೇಶದವು! ದೆಹಲಿಯೊಂದರಲ್ಲಿ 2013ರಲ್ಲಿ ರೇಪ್ ಎಂದು ದಾಖಲಾದ ಪ್ರಕರಣಗಳು 1636. ಇವುಗಳಲ್ಲಿ ನಿಜಕ್ಕೂ ಅತ್ಯಾಚಾರ ಪ್ರಕರಣ ಎಂದು ಸಾಬೀತಾದವು 583 ಪ್ರಕರಣಗಳು ಮಾತ್ರ! ಈ ಎಲ್ಲ ಪ್ರಕರಣಗಳಲ್ಲಿ ನಡೆದುದು ಸಮ್ಮತಿ ಸಂಬಂಧ. ಹುಡುಗಿಯ ಪಾಲಕರ ಒತ್ತಡದಿಂದ ಅತ್ಯಾಚಾರ ಎಂದು ದಾಖಲಾದವು ಇವು. ಹುಡುಗನಿಂದ ಆಸ್ತಿ, ಹಣ ಪಡೆಯಲು ಇಂಥ ಮಾರ್ಗವನ್ನೂ ನಮ್ಮ ಸಮಾಜದಲ್ಲಿ ಜನ ಕಂಡುಕೊಂಡಿದ್ದಾರೆ. ಇದು ಕೂಡ ಸಮಾಜದ ಸೃಷ್ಟಿ. ಯಾಕೆಂದರೆ, ಸಮ್ಮತಿ ಸಂಬಂಧಕ್ಕೂ ಸಮಾಜ ಕಟ್ಟುಪಾಡು ಹಾಕಿದೆ. ವಿವಾಹೇತರ ಸಂಬಂಧವನ್ನು ಸಮಾಜ ನೋಡುವ ದೃಷ್ಟಿ ಹಾಗೂ ಇಂಥ ಸಂಬಂಧದ ಗುಟ್ಟು ಹೊರಬಿದ್ದಾಗ ವ್ಯಕ್ತಿಗೆ ಆಗುವ ಅನಾಹುತಗಳ ನಿರೀಕ್ಷೆಯನ್ನು ಇಟ್ಟುಕೊಂಡೇ ಉದ್ದೇಶಪೂರ್ವಕ ಸಂಬಂಧ ಬೆಳೆಸಿ, ತಿಂಗಳು ವರ್ಷಗಳ ಕಾಲ ಇಟ್ಟುಕೊಂಡು, ದಾಖಲೆಗಳನ್ನು ಸೃಷ್ಟಿಸಿಕೊಳ್ಳುತ್ತ ಒಂದು ದಿನ ದಿಢೀರನೆ ವ್ಯಕ್ತಿಗೆ ಸಂಬಂಧ ಬಹಿರಂಗಗೊಳಿಸುವ ಬೆದರಿಕೆ ಒಡ್ಡಬಹುದು. ವ್ಯಕ್ತಿ ಇದಕ್ಕೆ ಬಗ್ಗದಿದ್ದಾಗ ಇಂಥವರು ಖಂಡಿತ ಪೊಲೀಸರ, ನ್ಯಾಯಾಂಗದ ಮೊರೆ ಹೊಗುವುದಿಲ್ಲ. ಅವರ ಉದ್ದೇಶವೂ ನ್ಯಾಯವಲ್ಲ! ಹೀಗಾಗಿಯೇ ಅವರು ಮೊದಲು ಹೋಗುವುದು ಮಾಧ್ಯಮಗಳಿಗೆ!! ಅಲ್ಲಿ ವಿವರ ಬಹಿರಂಗವಾದಾಗ ಆಗುವ ಪರಿಣಾಮ ಎಲ್ಲರಿಗೂ ತಿಳಿದಿದೆ. ಅಲ್ಲಿ ಪುಕ್ಕಟೆ ಪ್ರಚಾರ (ಅಥವಾ ಅಪಪ್ರಚಾರ) ಸಿಗುತ್ತದೆಯೇ ವಿನಾ ನ್ಯಾಯವಲ್ಲ. ನ್ಯಾಯಾಲಯ ಮಾಧ್ಯಮದವರಂತೆ ಆವೇಶದಿಂದ ಕೆಲಸಮಾಡಲಾಗದು. ಗಂಭೀರವಾದ ಇಂಥ ಪ್ರಕರಣಗಳನ್ನು ಗಂಭೀರವಾಗಿಯೇ ನ್ಯಾಯಾಲಯಗಳು ಪರಿಶೀಲಿಸುತ್ತವೆ. ಆಗ ಹೊರಬೀಳುವ ಸತ್ಯಗಳೇ ಬೇರೆ.
ಆರೇಳು ತಿಂಗಳ ಹಿಂದೆ ಬೆಂಗಳೂರಿನ ಹೊರವಲಯದ ಸರ್ಕಾರಿ ಶಾಲೆಯಲ್ಲಿ ಶಾಲಾ ಬಾಲಕಿಯೊಬ್ಬಳ ಮರ್ಮಾಂಗದಿಂದ ರಕ್ತ ಒಸರಿದ್ದನ್ನು ನೋಡಿ ಅವಳ ತಾಯಿ ತಡಮಾಡದೇ ಬಳಗ, ಮಾಧ್ಯಮದವರನ್ನೆಲ್ಲ ಶಾಲೆಗೆ ಕರೆದುಕೊಂಡು ಬಂದು ಆ ಮಗುವಿನ ಕ್ಲಾಸ್ ಟೀಚರ್ ಆಗಿದ್ದ ಮೇಷ್ಟ್ರೊಬ್ಬರಿಗೆ ಚೆನ್ನಾಗಿ ತದುಕಿಸಿದಳು. ಮಾಧ್ಯಮವೂ ಬಿಟ್ಟಿ ಟಿಆರ್‍ಪಿಗಾಗಿ ನೇರ ಪ್ರಸಾರ ಮಾಡಿತು. ಆತ ನನಗೇನೂ ಇದು ಗೊತ್ತಿಲ್ಲ ಎಂದು ಬೇಡಿಕೊಳ್ಳುತ್ತಲೇ ಇದ್ದ. ಎಲ್ಲ ಅಪರಾಧಿಗಳೂ ಹೀಗೇ ಹೇಳುವುದು ಎನ್ನುತ್ತ ನೆರೆದವರು ತಾಮುಂದು, ನಾಮುಂದು ಎನ್ನುತ್ತ ಮೇಷ್ಟ್ರನ್ನು ಬಡಿದೇ ಬಡಿದರು. ಪ್ರಕರಣ ದಾಖಲಾಯ್ತು. ಚುರುಕು ತನಿಖೆ ನಡೆಯಿತು. ಒಂದೇ ತರಗತಿಯ ಇಬ್ಬರು ಬಾಲಕಿಯರು ಕಚ್ಚಾಡುವಾಗ ಒಬ್ಬಳು ಪೆನ್ಸಿಲ್‍ನಿಂದ ಆಕೆಗೆ ಗಾಯ ಮಾಡಿದ್ದಾಳೆ ಎಂಬುದು ಸಿದ್ಧವಾಯಿತು. ಈಗ ಹೇಳಿ ಇಂಥ ಪ್ರಕರಣಗಳಲ್ಲಿ ಆವೇಶ, ಧಾವಂತದಿಂದ ಆಗುವ ಹಾನಿ ಎಂಥದ್ದು? ಆ ಮಹಿಳೆ, ನೆರೆದ-ಹೊಡೆದ ಜನ, ಕೊನೆಗೆ ಮಾಧ್ಯಮ ಕೂಡ ಏನೋ ಗೊತ್ತಾಗಲಿಲ್ಲ ಮೇಷ್ಟ್ರೇ, ತಪ್ಪಾಯ್ತು ಎಂದು ಈಗ ಹೇಳಬಹುದೇ? ಆ ಮೇಷ್ಟ್ರಿಗಾದ ತೇಜೋವಧೆ? ಇದೇನು ಹುಡುಗಾಟವಾ?
ಇಂಥ ಪ್ರಕರಣಗಳಲ್ಲಿ ಖಂಡಿತವಾಗಿಯೂ ಆವೇಶ, ಧಾವಂತದ ನಿರ್ಧಾರಗಳು ಸರಿಯಲ್ಲ. ವಿದ್ಯುನ್ಮಾನ ಮಾಧ್ಯಮಗಳಂತೂ ಇಂಥ ಪ್ರಕರಣ ಸಿಕ್ಕರೆ ಸಾಕು ಎನ್ನುವವರಂತೆ ನ್ಯಾಯಾಲಯ ನಡೆಸಬೇಕಾದ ಕಲಾಪವನ್ನು ತಮ್ಮ ಸ್ಟುಡಿಯೋದಲ್ಲೇ ಶುರುಮಾಡಿಕೊಳ್ಳುತ್ತವೆ! ವಾದ-ಪ್ರತಿವಾದ ಇತ್ಯಾದಿ. ಇನ್ನು ನ್ಯಾಯಾಲಯಕ್ಕೆ ಕೆಲಸವೇ ಇಲ್ಲ? ಆವೇಶಕ್ಕೊಳಗಾದ ಜನ ಕಾನೂನು ಕೈಗೆತ್ತಿಕೊಳ್ಳುವುದು ನಾಗರಿಕ ಸಮಾಜದಲ್ಲಿ ಎಷ್ಟು ತಪ್ಪೋ ನ್ಯಾಯ ಕೊಡಿಸುವ ನೆಪದಲ್ಲಿ ಮಾಧ್ಯಮಗಳು ಕಾನೂನು ವ್ಯವಸ್ಥೆಯ ಅಣಕವಾಡುವುದು ಕೂಡ ಅಷ್ಟೇ ದೊಡ್ಡ ತಪ್ಪು. ಹೀಗಾಗಿಯೇ ಮಾಧ್ಯಮಗಳಿಂದು ವರದಿ ಮಾಡುವುದು ಒಂದನ್ನು ಬಿಟ್ಟು ಮತ್ತೆಲ್ಲ ಮಾಡುತ್ತವೆ ಎನ್ನುವುದು. ವಿದ್ಯುನ್ಮಾನ ಮಾಧ್ಯಮಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮದಲ್ಲಿ ಇಂಥ ಅಚಾತುರ್ಯಗಳಿಗೆ ಅವಕಾಶ ಬಹಳ ಕಡಿಮೆ. ಅವು ಇಂಥ ಪ್ರಕರಣಗಳಲ್ಲಿ ವಾದ-ಪ್ರತಿವಾದಗಳ ಗೋಜಿಗೆ ಹೋಗದೇ ಇಂದಿಗೂ ವರದಿಯನ್ನಷ್ಟೇ (ಯಾವ ಕಡೆ ವಾಲಿದೆ ಎಂಬುದು ಬೇರೆ ಮಾತು) ಮಾಡುತ್ತಿವೆ.
ಸಮ್ಮತಿ ಸಂಬಂಧದ ವಯಸ್ಸನ್ನು ಹುಡುಗಿಗೆ 2013ರಲ್ಲಿ 16ರಿಂದ 18ಕ್ಕೆ ಏರಿಸಿರುವುದು ಕೂಡ ಅತ್ಯಾಚಾರ ಎಂದು ಗುರುತಿಸುವ ಪ್ರಕರಣಗಳ ಏರಿಕೆಗೆ ಕಾರಣ ಎಂದು ನ್ಯಾಯ ವ್ಯವಸ್ಥೆಯವರು ಹೇಳುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಸಂಗತಿ ಕೂಡ ಸಮೀಕ್ಷೆಯಲ್ಲಿದೆ.
2012ರಲ್ಲಿ ದೆಹಲಿಯಲ್ಲಿ ನಡೆದ ಘೋರ ಅತ್ಯಾಚಾರ ಪ್ರಕರಣದ ನಂತರ ಆರೋಪಿಗಳಲ್ಲಿ ಒಬ್ಬ ಬಾಲಾಪರಾಧ-17 ವರ್ಷಕ್ಕಿಂತ ಕಿರಿಯವ ಎಂಬ ಕಾರಣದಿಂದ ಘೋರ ಅಪರಾಧ ಎಸಗಿಯೂ ಆರಾಮವಾಗಿ ಬಚಾವಾಗಿ ಬಂದ. ಈ ದೃಷ್ಟಿಯಿಂದ ಬಾಲಾಪರಾಧಗಳ ಗಂಭೀರತೆಯನ್ನು ಅರಿಯಲು ಅಧ್ಯಯನವೊಂದನ್ನು ಯುನಿಸೆಫ್ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಸರ್ಕಾರೇತರ ಸಂಸ್ಥೆಯ ನೆರವಿನಲ್ಲಿ ನಡೆಸಿದೆ. ಎಸಿಎಚ್‍ಒ ಎಂಬ ಸಂಸ್ಥೆ ಕರ್ನಾಟಕದ ಆರು ಜಿಲ್ಲೆಗಳ 25000 ಬಾಲಾಪರಾಧಿಗಳ ಪ್ರಕರಣ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದೆ. ಇವುಗಳಲ್ಲಿ 50 ಕೇಸ್‍ಸ್ಟಡಿಗಳನ್ನೂ ಮಾಡಲಾಗಿದೆ. ಇದು ನೀಡಿದ ಮಾಹಿತಿ ಆಘಾತಕಾರಿ. ಇದರ ಪ್ರಕಾರ ಬಾಲಾಪರಾಧಿಗಳಲ್ಲಿ ಶೇ.64 ಜನ 16-18 ವಯಸ್ಸಿನವರು. ಕೊಲೆ, ಅತ್ಯಾಚಾರವೂ ಸೇರಿದಂತೆ ಅತ್ಯಂತ ಹೀನ ಅಪರಾಧಗಳನ್ನು ಇವರು ಎಸಗಿದ್ದಾರೆ. ಈ ವಯಸ್ಸಿನವರು ಎಸಗಿದ ಅತ್ಯಾಚಾರ ಪ್ರಕರಣ 2002 ರಿಂದ 2012ರ ಅವಧಿಯಲ್ಲಿ ಶೇ.143ರಷ್ಟು ಏರಿದೆ. ದೇಶಾದ್ಯಂತ ಸದ್ಯ 27,0000 ಬಾಲಾಪರಾಧಿಗಳಿದ್ದು ಇವರಲ್ಲಿ ಹುಡುಗಿಯರ ಪ್ರಮಾಣ ಕೇವಲ ಶೇ.6. ಬಾಲಾಪರಾಧಿಗಳಲ್ಲಿ ಶೇ.94 ಮಕ್ಕಳಿಗೆ ಸರಿಯಾದ ಪಾಲಕತ್ವವೇ ಇಲ್ಲ. ಪಾಲಕ-ಪೋಷಕರು ಇದ್ದೂ ಇಲ್ಲದಂತೆ ಇರುವ ಮಕ್ಕಳೇ ಅಪರಾಧಕ್ಕೆ ಇಳಿದಿದ್ದಾರೆ ಎನ್ನುತ್ತದೆ ವರದಿ.
ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ಬಾಲಾಪರಾಧ ಹೇಳುತ್ತದೆ. ಕೌಟುಂಬಿಕ ವ್ಯವಸ್ಥೆ ಹದಗೆಟ್ಟಿರುವುದು, ಸಮಾಜದಲ್ಲಿ ಯಾರೂ ಯಾರಿಗೂ ಜವಾಬ್ದಾರರೇ ಅಲ್ಲ ಎಂಬಂಥ ವರ್ತನೆ ಸಮಾಜವನ್ನು ವಿಘಟನೆಯತ್ತ ಒಯ್ಯುತ್ತಿರುವುದು ಸುಳ್ಳಲ್ಲ. ಕುಟುಂಬದಲ್ಲಿ ಅಪ್ಪ ಮಕ್ಕಳು ಒಟ್ಟಿಗೆ ಇದ್ದ ಮಾತ್ರಕ್ಕೆ ಕೌಟುಂಬಿಕ ವ್ಯವಸ್ಥೆ ಸರಿಯಾಗಿರುವುದಿಲ್ಲ. ಕೌಟುಂಬಿಕ ವ್ಯವಸ್ಥೆಯನ್ನು ನಿಯಂತ್ರಸುವ ಸಾಮಾಜಿಕ ವ್ಯವಸ್ಥೆ ಕುಸಿದಾಗ ಅಪ್ಪ ಅಥವಾ ಸಹೋದರನೇ ಅತ್ಯಾಚಾರ ಎಸಗುವ ಸನ್ನಿವೇಶಗಳು ಉಂಟಾಗುತ್ತವೆ, ಆಗಿವೆ ಕೂಡ. ಅತ್ಯಾಚಾರ ಹೀನ ಕೃತ್ಯ ಎಂಬುದು ನಿಜ. ಆದರೆ ಆ ನೆವದಲ್ಲಿ ಮತ್ಯಾರದೋ ತೋಜೋವಧೆ ಮಾಡುವುದು ಸರಿಯಲ್ಲ ಎಂಬುದೂ ಅಷ್ಟೇ ನಿಜ. ಇವೆಲ್ಲವೂ ಸದ್ಯ ನಡೆಯುತ್ತಿವೆ, ಹೆಚ್ಚುತ್ತಿವೆ. ಸಮಾಜಕ್ಕೆ ಕನ್ನಡಿ ಹಿಡಿಯುತ್ತಿವೆ. ಇದಕ್ಕೆ ಯಾವ ಉತ್ತರವನ್ನು ಸಮಾಜ ಕಂಡುಕೊಳ್ಳುತ್ತದೋ ಊಹಿಸುವುದು ಕಷ್ಟ.
ಪುಸ್ತಕ:
No comments:
Post a Comment