2012ರಲ್ಲಿ ದೆಹಲಿಯಲ್ಲಿ ನಿರ್ಭಯಾಳ ಮೇಲೆ ನಡೆದ ಹೇಯ ಕೃತ್ಯದ ತರುವಾಯ ಒಂದೆರಡು ವಾರಗಳಿಂದ ಯಾವ ಮಾಧ್ಯಮ ಓದಿದರೂ ನೋಡಿದರೂ ಅತ್ಯಾಚಾರದ್ದೇ ಸುದ್ದಿ. ಇಂಥ ಪ್ರಕರಣಗಳು ನಿರ್ಭಯವಾಗಿ ಹೆಚ್ಚು ಸುದ್ದಿಯಾಗುತ್ತಿವೆ. ಇದು ಗುಣವೋ ದೋಷವೋ ಗೊತ್ತಿಲ್ಲ. ಈಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಮೇಲೆ ಕಾಕತಾಳೀಯವೋ ಎಂಬಂತೆ ಬೆಂಗಳೂರಿನಲ್ಲಿ ನಿತ್ಯ ಒಂದೆರಡು, ರಾಜ್ಯಾದ್ಯಂತ ಒಂದೇದಿನ ಎಂಟು ಇಂಥ ಪ್ರಕರಣಗಳು ವರದಿಯಾದವು. ಮಾಧ್ಯಮಗಳಂತೂ ಅತ್ಯಾಚಾರ ಎಲ್ಲಿಂದ ಎಷ್ಟುಹೊತ್ತಿಗೆ ಬರುತ್ತದೆ ಎಂದು ಕಾದು ಕೂತಿರುವವರಂತೆ ಅಲ್ಲೊಂದು ಅತ್ಯಾಚಾರವಂತೆ ಎಂಬ ಅಂತೆ ಕಂತೆಯನ್ನೂ ಅತ್ಯಾಚಾರವಾಗಿದೆ ಎಂದೇ ಬಿಂಬಿಸಿ ಅವಸರದಿಂದ ವರದಿ ಮಾಡಿಯೇ ಮಾಡಿದರು. ಕಳೆದವಾರ ಬೇರೆಲ್ಲ ಕಡೆಯಿಂದ ಇಂಥ ಸುದ್ದಿ ಬಂದಂತೆ ತುಮಕೂರಿನಿಂದಲೂ ಸುದ್ದಿ ಬಂತು. ದಿನ ಕಳೆದ ಮೇಲೆ ಆ ಹುಡುಗಿಯೇ ಠಾಣೆಗೆ ಹೋಗಿ ನನ್ನ ಮೇಲೆ ಅತ್ಯಾಚಾರವಾಗಿಲ್ಲ ಎಂದು ಹೇಳಿಕೆಕೊಟ್ಟಳು! ಸತ್ಯಾಸತ್ಯತೆ ಏನಿದೆಯೋ?
ಇಂಥ ಸುದ್ದಿಗಳ ಪ್ರಸಾರಕ್ಕೆ ಯಾಕಿಷ್ಟು ಅವಸರ? ಇದೊಂದು ಕ್ರೇಜು ಹುಟ್ಟಿಸುವ ಸಂಗತಿಯೇ? ಅಥವಾ ಇಂಥ ವರದಿಯಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೂಡಲೇ ದೊರೆತೇಬಿಡುತ್ತದಾ? ಇಂಥ ವರದಿಯಿಂದ ಪ್ರಯೋಜನ ಯಾರಿಗೆ? ಕೆಲವರ ಸುದ್ದಿ ಚಪಲ ತೀರಬಹುದು ಅಷ್ಟೆ.
ಇಷ್ಟರ ನಡುವೆ ವಿಧಾನಸಭೆಯಲ್ಲಿ ಅಧಿವೇಶನ ನಡೆಯುವಾಗ ಇಂಥ ಪ್ರಕರಣ ಕುರಿತು ಗಂಭೀರ ಚರ್ಚೆ ನಡೆಯುವಾಗ ಮಾನ್ಯ ಮುಖ್ಯಮಂತ್ರಿಗಳು ನಿದ್ರೆ ಮಾಡುತ್ತಿದ್ದರು! ಸಾಲದ್ದಕ್ಕೆ ಅತ್ಯಾಚಾರ ಪ್ರಕರಣ ಕುರಿತ ಮಾಧ್ಯಮದವರ ಪ್ರಶ್ನೆಗೆ ನಿಮಗೆ ಬೇರೆ ಕೆಲಸ ಇಲ್ವಾ? ಇದೊಂದೇ ಸುದ್ದೀನಾ ನಿಮ್ಮ ಬಳಿ ಇರೋದು? ಎಂದು ಪ್ರಶ್ನಿಸಿ ಉಡಾಫೆತನ ಬೇರೆ ತೋರಿಸಿಬಿಟ್ಟರು. ಇದನ್ನು ರಾಷ್ಟ್ರೀಯ ಚಾನೆಲ್ಲುಗಳು ಮತ್ತೆ ಮತ್ತೆ ಬಿತ್ತರಿಸಿ ನೋಡಿ ನಮ್ಮ ರಾಜಕಾರಣಿಗಳನ್ನು ಎನ್ನುತ್ತ ದೊಡ್ಡ ಚರ್ಚೆಗೆ ಎಡೆಮಾಡಿದವು. ಬಿಬಿಸಿಯಂಥ ಅಂತಾರಾಷ್ಟ್ರೀಯ ಚಾನೆಲ್ಲು ಕೂಡ ಕರ್ನಾಟಕದಲ್ಲಿ ಅತ್ಯಾಚಾರ ಅವ್ಯಾಹತವಾಗಿದೆ ಎಂಬಂತೆ ದಿನವಿಡೀ ಸುಳಿಸುದ್ದಿ (ಫ್ಲಾಶ್ ನ್ಯೂಸ್) ನೀಡಿತು. ಇಂಥ ವಿದ್ಯಮಾನದಿಂದ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗುತ್ತೋ ಬಿಡುತ್ತೋ ರಾಜ್ಯದ ಮಾನವಂತೂ ಮೂರಾಬಟ್ಟೆಯಾಯಿತು.
ಹಾಗೆ ನೋಡಿದರೆ ಮುಖ್ಯಮಂತ್ರಿಗಳು ಹಾಗೆ ಹೇಳಬಾರದಿತ್ತು ಎನ್ನುವಂತೆಯೇ ಅವರು ಹಾಗೆ ಕೇಳಿದ್ದರಲ್ಲಿ ತಪ್ಪೇನಿದೆ ಎಂದೂ ಕೇಳಬಹುದು. ಐಪಿಸಿ 376ನೇ ವಿಧಿಯ ಪ್ರಕಾರ ಅತ್ಯಾಚಾರ ಗಂಭೀರ ಅಪರಾಧ. ಮಾನವನ ಮಟ್ಟಿಗೆ ನೈತಿಕವಾಗಿಯೂ ಇದು ಹೇಯ. ಯಾವ ಧರ್ಮವೂ ಇದನ್ನು ಪುರಸ್ಕರಿಸುವುದಿಲ್ಲ. ದೈಹಿಕ, ಮಾನಸಿಕ ಆರೋಗ್ಯ ಹಾನಿ, ಆಘಾತಗಳಾಗುವ ಕಾರಣ ವೈದ್ಯಕೀಯ ದೃಷ್ಟಿಯಿಂದಲೂ ಆಕ್ಷೇಪಾರ್ಹ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕಾರಣದಿಂದ ಸಾಮಾಜಿಕವಾಗಿಯೂ ನಿಷಿದ್ಧ. ಈ ಎಲ್ಲ ಕಾರಣಗಳಿಂದ ನಾಗರಿಕ ಸಮಾಜ ಅತ್ಯಾಚಾರವನ್ನು ಖಂಡನೀಯ ಕೃತ್ಯವಾಗಿ ಕಾಣುತ್ತದೆ. ಇಷ್ಟೆಲ್ಲ ಸಂಗತಿಗಳಿರುವಾಗ ಹಾಗೂ ದೊಡ್ಡವರ ಇಂಥ ಮಾತುಗಳಿಂದ ಅಪರಾಧ ಎಸಗುವವರಿಗೆ ಇದೇನೂ ಅಂಥ ದೊಡ್ಡ ಸಂಗತಿಯಲ್ಲವಂತೆ ಎಂಬ ಸಂದೇಶ ಹೋಗಿ ಮತ್ತಷ್ಟು ಉತ್ತೇಜನ ದೊರೆಯಬಹುದು ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಯಾದವರೊಬ್ಬರು ಅತ್ಯಾಚಾರದ ಬಗ್ಗೆ ಲಘುವಾಗಿ ಮಾತನಾಡಬಾರದೆಂದು ಈ ಸಮಾಜ ನಿರೀಕ್ಷಿಸುತ್ತದೆ. ಸರಿ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು ಹೀಗಾಗಿ ಮಾಧ್ಯಮಗಳಲ್ಲಿ ಬಂದರೆ ತಪ್ಪೇನು ಎಂಬುದೂ ಸರಿ. ಆದರೆ ಎಷ್ಟು ಬರಬೇಕು? ಹೇಗೆ ಬರಬೇಕು? ಇದಕ್ಕೊಂದು ಇತಿ-ಮಿತಿ, ನೀತಿ-ನಿಯಮ ಇಲ್ಲವೇ? ಘಟನೆಯ ಪೂರ್ವಾಪರ ವಿಚಾರಿಸದೇ ಹೆಣ್ಣೊಬ್ಬಳು ಉದ್ದೇಶಪೂರ್ವಕವಾಗಿ ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರದ ಆರೋಪ ಹೊರೆಸಿಬಿಡುತ್ತಾಳೆ ಅಂದುಕೊಳ್ಳೋಣ. ಇದನ್ನು ಸಂಬಂಧಿಸಿದ ಪೊಲೀಸರಿಗೋ, ವೈದ್ಯ, ವಕೀಲರಿಗೋ ತಿಳಿಸುವ ಮೊದಲು ಆಕೆ ಮಾಧ್ಯಮಕ್ಕೇ ತಿಳಿಸಿದರೆ... ಆ ವ್ಯಕ್ತಿಯನ್ನು ಸುತ್ತಲಿನ ಜನ ಏನುಮಾಡಬಹುದು? ಈಗೀಗ ಇಂಥ ಕೆಲವು ಪ್ರಕರಣಗಳು ವರದಿಯಾಗುತ್ತಿವೆ: ಹುಡುಗ-ಹುಡುಗಿ ಫೇಸ್‍ಬುಕ್‍ನಲ್ಲಿ ಪರಿಚಯಮಾಡಿಕೊಂಡರಂತೆ. ವರ್ಷಗಟ್ಟಲೆ ಅಲ್ಲಿ ಇಲ್ಲಿ ತಿರುಗಿದರಂತೆ. ಸಂಬಂಧ ಮದುವೆಯಾಗುವ ಹಂತಕ್ಕೆ ಹೋಯಿತಂತೆ. ಆತ ಮತ್ತಿಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಬಳಸಿಕೊಂಡನಂತೆ. ಈಕೆಯಿಂದ ಹಣ ಕೀಳುತ್ತಿದ್ದನಂತೆ. ಈ ಹುಡುಗಿ ತನ್ನ ಪಾಲಕರಿಗೆ ಇನ್ನೂ ತನಗೆ ಏನೇನಾಗಿದೆ ಎಂದು ತಿಳಿಸಿಲ್ಲವಂತೆ. ಸದ್ಯ ಪೊಲೀಸರಿಗೆ ದೂರು ಕೊಟ್ಟಿದ್ದಾಳಂತೆ. ಹೀಗೆಂದು ಮಾಧ್ಯಮದ ಮುಂದೆ ಆಕೆ ಅಲವತ್ತುಕೊಳ್ಳುತ್ತಿದ್ದಳು. ಪರಸ್ಪರ ಪ್ರೀತಿಸುತ್ತಿದ್ದ ಗಂಡು-ಹೆಣ್ಣು ಅನೇಕ ತಿಂಗಳ ಹಿಂದೆ ತಿರುಪತಿಗೆ ಹೋದರಂತೆ, ಅಲ್ಲಿ ಆತ ಅತ್ಯಾಚಾರ ಎಸಗಿದನಂತೆ. ಪಾಲಕರಿಗೆ ಇದೆಲ್ಲ ಗೊತ್ತಾದುದೇ ಈಗ! ಇವೆರಡೂ ಈ ವಾರಾಂತ್ಯ ವರದಿಯಾದ ಸುದ್ದಿಗಳು.
ಮಾಧ್ಯಮಗಳು ವರದಿಮಾಡುವ ಅತ್ಯುತ್ಸಾಹದಲ್ಲಿ ಇವುಗಳನ್ನೂ ಅತ್ಯಾಚಾರದ ಪಟ್ಟಿಗೆ ಸೇರಿಸಿಬಿಟ್ಟಿರುತ್ತಾರೆ. ಯಾವುದೇ ಹೆಣ್ಣು ಇಂಥ ವಿಷಯದಲ್ಲಿ ಸುಳ್ಳು ಹೇಳುವುದಿಲ್ಲ ಎಂಬುದು ಇಂದಿನ ದಿನಗಳಲ್ಲಿ ಕೇವಲ ನಂಬಿಕೆ. ಬಹಳಷ್ಟು ಸಂದರ್ಭಗಳಲ್ಲಿ ಇದು ಸಾಬೀತಾಗಿದೆ. ಹಾಗಾಗಿ ಇಂಥ ವರದಿ ಬಂದ ಕೂಡಲೇ ಭಾವೋನ್ಮಾದಕ್ಕೆ ಒಳಗಾಗಬೇಕಿಲ್ಲ. ಆದರೆ ಅಪ್ರಾಪ್ತ, ಎಳೆ ಕಂದಮ್ಮಗಳ ಮೇಲೆ ದೌರ್ಜನ್ಯ ನಡೆದಾಗ ಆ ವಿಷಯವೇ ಬೇರೆ. ಗಮನಿಸಬೇಕಾದ ಸಂಗತಿ ಎಂದರೆ ಮೇಲಿನ ಎರಡೂ ಪ್ರಕರಣಗಳಲ್ಲಿ ಹೆಣ್ಣುಮಕ್ಕಳು ಪ್ರಾಪ್ತ ವಯಸ್ಕರು, ಆಧುನಿಕ ಶಿಕ್ಷಣ ಪಡೆದವರು. ಇವರು ಹೇಳುತ್ತಿರುವ ಘಟನೆಗಳು ನಡೆದು ತಿಂಗಳು-ವರ್ಷಗಳೇ ಕಳೆದಿವೆ. ಇದುವರೆಗೆ ಪಾಲಕರಿಗೂ ಹೇಳದೇ ಮಾಧ್ಯಮಕ್ಕೆ ಹೇಳುತ್ತಿದ್ದಾರೆ! ಪರಸ್ಪರ ಸಮ್ಮತಿಯಿಂದಲೇ ಘಟನೆ ನಡೆದಿದೆ. ಹುಡುಗ ಈಗ ಮದುವೆ ಆಗುವುದಿಲ್ಲ ಎಂದರೆ ಇದು ವಂಚನೆಯಾಗಬಹುದೇ ವಿನಾ ಅತ್ಯಾಚಾರವಾಗುತ್ತದೆಯೇ? ಇವೆಲ್ಲ ಕಾನೂನಿನ ತೀರ್ಮಾನಕ್ಕೆ ಬಿಟ್ಟ ವಿಷಯ. ಆದರೆ ಪ್ರಚಾರ?
ಅತ್ಯಾಚಾರ, ಮಾನಭಂಗ, ಬಲಾತ್ಕಾರ ಇವೆಲ್ಲ ಕೀಚಕನ ಕಾಲದಿಂದಲೂ ದಾಖಲಾಗಿವೆ. ಲೈಂಗಿಕ ಬಯಕೆ ವೈಯಕ್ತಿಕ. ಅದಕ್ಕೆ ಆರೋಪಿಸಲಾದ ಮಾನ ಸಾಮಾಜಿಕ. ಸಮಾಜಜೀವಿಯಾದ ಮಾನವ ಸಮಾಜದ ಕಟ್ಟುಪಾಡುಗಳನ್ನು ಮೀರಲಾಗದು. ಅದರ ವ್ಯಾಪ್ತಿಯಲ್ಲೇ ವೈಯಕ್ತಿಕ ಇಷ್ಟಾನಿಷ್ಟಗಳನ್ನು ಆತ ಪೂರೈಸಿಕೊಳ್ಳಬೇಕಾಗುತ್ತದೆ. ಕಳ್ಳತನ, ಲೈಂಗಿಕತೆ, ಸುಳ್ಳು, ಅಪ್ರಾಮಾಣಿಕತೆಗಳಿಂದ ವ್ಯಕ್ತಿ ಇರುವ ದೂರದ ಮೇಲೆ ಅವನ ಮಾನವನ್ನು ಸಮಾಜ ನಿರ್ಧರಿಸುತ್ತದೆ. ಮಾನ ಕಳೆಯುವವರು ಇರುವಂತೆಯೇ ಮಾನ ಕಾಪಾಡುವವರೂ ಇರುತ್ತಾರೆ. ಸಮಾಜ ಅವರನ್ನು ಗೌರವಿಸಿದೆ.
ಕನ್ನಡ ಶಾಸನಗಳಲ್ಲಿ ಪೆಣ್ಬುಯ್ಯಲ್ (ಹೆಣ್ಣಿನ ಹುಯಿಲು) ಎಂದೂ ಸಾಹಿತ್ಯದಲ್ಲಿ ಉಡೆಉರ್ಚು (ಬಟ್ಟೆ ಬಿಚ್ಚುವುದು) ಎಂದೂ ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ವಿವರಿಸಲಾಗಿದೆ. ಅಙ್ಗರನೆಂಬ ವೀರ ಊರ ಸ್ತ್ರೀಯರ ಮಾನಭಂಗಕ್ಕೆ ಯತ್ನಿಸಿದ ಶತ್ರುಗಳ ವಿರುದ್ಧ ಹೋರಾಡಿ ಮಡಿದ ಪ್ರಸಂಗವನ್ನು ಸೊರಬದ ಮನೆಮನೆ ಗ್ರಾಮದ ಶಾಸನ ವರ್ಣಿಸಿದೆ. ಕ್ರಿ.ಶ. 800ರ ರಾಷ್ಟ್ರಕೂಟರ ಕಾಲದ ಈ ಶಾಸನ ಪೆಣ್ಬುಯ್ಯಲ್ ಪ್ರಸಂಗ ವಿವರಿಸುವ ಮೊದಲ ಶಾಸನ. ಇಂಥ 46 ಶಾಸನಗಳು ಕರ್ನಾಟಕದಲ್ಲಿ ದೊರೆತಿವೆ ಎಂದು ತುಮಕೂರು ವಿವಿಯ ಶಾಸನ ತಜ್ಞರಾದ ಪ್ರೊಫೆಸರ್ ಡಿ ವಿ ಪರಮಶಿವಮೂರ್ತಿ ಹೇಳುತ್ತಾರೆ. ಈ ಬಗ್ಗೆ ಅವರೊಂದು ಕೃತಿಯನ್ನೇ ರಚಿಸಿದ್ದಾರೆ (ಪೆಣ್ಬುಯ್ಯಲ್, ಹಂಪಿ ವಿವಿ, 2010). ಹೀಗೆ ಹೋರಾಡಿದ ವೀರನಿಗೆ ದಾನ ದತ್ತಿಗಳು ಪ್ರಾಪ್ತವಾಗಿವೆಯಾದರೂ ನೊಂದ ಮಹಿಳೆಯರಿಗೆ ಎಲ್ಲೂ ಪರಿಹಾರ ದೊರೆತಿಲ್ಲ ಎಂದೂ ಅವರು ತಿಳಿಸುತ್ತಾರೆ.
ಕಾಲಚಕ್ರ ಉರುಳಿದಂತೆ ಸಮಾಜದ ಜೊತೆಗೆ ಈ ವರ್ತನೆಯೂ ಸಾಗುತ್ತಲೇ ಬಂದಿತು. ಸದ್ಯ ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ ವರದಿ ಮಾಡಿರುವಂತೆ 1971ರಲ್ಲಿ ದೇಶದಲ್ಲಿ 2487 ಇದ್ದ ಅತ್ಯಾಚಾರ ಸಂಖ್ಯೆ 2013ರಲ್ಲಿ 33,707 ಆಗಿದೆ. ಅಂದರೆ ಇದು ಶೇ.1255.3ರಷ್ಟು ಹೆಚ್ಚಿದೆ! ಹಾಗಂತ ಗಾಬರಿಯಾಗುವ ಅಗತ್ಯವಿಲ್ಲ. ಯಾಕೆಂದರೆ ಅಂದಿನ ಜನಸಂಖ್ಯೆ 54,81,59,652. ಇಂದಿನದು ಬರೋಬ್ಬರಿ 120 ಕೋಟಿ! ಅಲ್ಲದೇ ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನಡೆಯುವ ಅತ್ಯಾಚಾರ ಪ್ರಕರಣ ಪ್ರತಿ ಲಕ್ಷ ಜನರಿಗೆ ಶೇ.2 ಮಾತ್ರ. ಪಶ್ಚಿಮ ಯೂರೋಪ್‍ನಲ್ಲಿ ಇದು ಶೇ.8.1; ಲ್ಯಾಟಿನ್ ಅಮೆರಿಕದಲ್ಲಿ ಶೇ.14.7; ಅಮೆರಿಕದಲ್ಲಿ ಶೇ.28.6; ದಕ್ಷಿಣ ಅಮೆರಿಕದಲ್ಲಿ ಶೇ.40.2ರಷ್ಟಿದೆ.
ಕರ್ನಾಟಕದಲ್ಲಿ 2010-13ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳು 2150. ಈಗೀಗ ನಿತ್ಯ ಒಂದೆರಡು, ಕೆಲವೊಮ್ಮೆ ಎಂಟು! ಸಾಮಾನ್ಯವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ದಾಖಲಾಗುವವೇ ಶೇ.10ರಷ್ಟು. ಶೇ.90ರಷ್ಟು ಪ್ರಕರಣಗಳಲ್ಲಿ ಆರೋಪಿ ಸಂಬಂಧಿಕ, ಬಂಧು, ಪರಿಚಿತನೇ ಆಗಿರುತ್ತಾನೆ ಎಂದು ಸಮೀಕ್ಷೆಗಳು ಹೇಳುತ್ತವೆ. ಕೆಲವೊಮ್ಮೆ ಅಪ್ಪ, ಸಹೋದರರೇ ಆಗಿರುತ್ತಾರೆ!
ಅತ್ಯಾಚಾರದ ಹಿಂದೆ ಇಷ್ಟೆಲ್ಲ ಸಂಗತಿಗಳಿರುವಾಗ ಅದನ್ನು ಆಮೂಲಾಗ್ರ ಕಿತ್ತೆಸೆಯುವುದು ಸುಲಭವಲ್ಲ. ಮಾಧ್ಯಮಗಳು ಈಗ ಮಾಡುತ್ತಿರುವಂತೆ ಹುಯಿಲೆಬ್ಬಿಸುವುದರಿಂದಲಂತೂ ಮತ್ತಷ್ಟು ಹಾನಿಯೇ ವಿನಾ ಪ್ರಯೋಜನವಿಲ್ಲ. ಅತ್ಯಾಚಾರಿಗಳನ್ನು ಕಲ್ಲುಹೊಡೆದು ಸಾಯಿಸಿದರೆ, ಅವರ ಪುರುಷತ್ವನಾಶ ಮಾಡಿದರೆ, ಗಲ್ಲಿಗೇರಿಸಿದರೆ ಮುಂದೆ ಆಗುವ ಅಪರಾಧವನ್ನು ತಡೆಯಲು ಸಾಧ್ಯವೇ? ಗೊತ್ತಿಲ್ಲ. ಆದರೆ ಶಾಲೆ, ಕಾಲೇಜುಗಳಲ್ಲಿ, ಪಂಚಾಯ್ತಿ ಕೇಂದ್ರಗಳಲ್ಲಿ ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳ ಮೂಲಕ ಅತ್ಯಾಚಾರದ ವಿರುದ್ಧ ಇರುವ ಕಾನೂನು, ಇಂಥ ಘಟನೆಯಿಂದಾಗುವ ಸಮಸ್ಯೆಗಳ ಕುರಿತು ಜನಜಾಗೃತಿ ಅಭಿಯಾನವನ್ನು ಸರ್ಕಾರ ಹಮ್ಮಿಕೊಳ್ಳುವುದರಿಂದ ಒಂದಿಷ್ಟು ಪ್ರಯೋಜನವಾಗಬಹುದೇನೋ.
ಪುಸ್ತಕ:
ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)
ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298
No comments:
Post a Comment