Saturday, 22 January 2022

ಟೆಲಿವಿಜನ್ ಎಂಬ ಕೊಲೆಪಾತಕ

ಸದ್ಯ ನಮ್ಮ ಮಾಧ್ಯಮ ಮತ್ತು ಜನರ ಪರಿಸ್ಥಿತಿ ಕುರುಡನ ಹೆಗಲೇರಿದ ಹೆಳವನಂತಾಗಿದೆ. ಇಬ್ಬರ ನಡುವೆ ಸಂಯೋಜನೆ ಕೆಟ್ಟರೆ ಇಬ್ಬರಿಗೂ ಅಪಾಯ ತಪ್ಪಿದ್ದಲ್ಲ. ದಾರಿ ಸುಗಮವಾಗಿದ್ದರೆ ಕುರುಡನ ಹೆಗಲೇರಿದ ಮಾರ್ಗದರ್ಶಕನಿಗೆ ದಾರಿ ಹೇಳುವುದು ಸುಲಭ. ದಾರಿಯೇ ಅಡ್ಡಾದಿಡ್ಡಿ, ಹಳ್ಳ ದಿಣ್ಣೆಗಳಿಂದ ಕೂಡಿದ್ದರೆ ನಡೆಯುವವನೂ ಎಚ್ಚರಿಕೆ, ಸಾವಧಾನದಿಂದ ನಡೆಯಬೇಕು, ಹೇಳುವವನೂ ತಾಳ್ಮೆಯಿಂದ, ಜಾಗೃತೆಯಿಂದ ಹೇಳಬೇಕು. ಇಬ್ಬರೂ ಮನಸ್ಸಿಗೆ ತೋಚಿದಂತೆ ವರ್ತಿಸಿದರೆ ಆಗಬಾರದ್ದೇ ಆಗುತ್ತದೆ. ನಮ್ಮ ಸಮಾಜ ಮತ್ತು ಮಾಧ್ಯಮಗಳ ಸಂಯೋಜನೆ ಸದ್ಯ ಹೀಗೇ ಇದೆ. 

ಎಲ್ಲ ಬಗೆಯ ರಚನಾತ್ಮಕ ವೃತ್ತಿಗಳಿಗೂ ಇರುವಂತೆ ಮಾಧ್ಯಮಕ್ಕೂ ವೃತ್ತಿಪರ ಮೌಲ್ಯ, ನೈತಿಕ ನಿಯಮ ಇದೆ, ಇರಬೇಕು. ವಸ್ತುನಿಷ್ಠತೆ, ಗುಣಾತ್ಮಕ ಉತ್ತೇಜನ, ಬದ್ಧತೆ ಮತ್ತು ಪ್ರಾಮಾಣಿಕತೆಯಂಥ ಸಂಗತಿಗಳು ಇದರಲ್ಲಿ ಸೇರುತ್ತವೆ. ಇವು ಹೆಚ್ಚೂ ಕಡಿಮೆ ಅಲಿಖಿತ ಮತ್ತು ಆಯಾ ಮಾಧ್ಯಮಗಳು ವೈಯಕ್ತಿಕವಾಗಿ ಪಾಲಿಸುತ್ತವೆ ಎಂದು ನಂಬಲಾಗುತ್ತದೆ. ಇವುಗಳನ್ನು ಕಾಪಾಡಿಕೊಳ್ಳಲು ಮಾಧ್ಯಮಗಳು ಆಂತರಿಕ ಕ್ರಮಗಳನ್ನು ಅನುಸರಿಸುತ್ತಿವೆ. ಮುಖ್ಯವಾಗಿ ಸಂವಿಧಾನ ಹೇಳಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಇವೆಲ್ಲ ರೂಪುಗೊಂಡಿವೆ. ಲೇಖಕ, ಕಲಾವಿದನ ಅಭಿವ್ಯಕ್ತಿಯಿಂದ ಹಿಡಿದು ಮಾಧ್ಯಮಗಳು ಬರೆಯುವ, ಬಿತ್ತರಿಸುವ ಸುದ್ದಿ, ಚಿತ್ರಣಗಳವರೆಗೆ ಅದರ ವ್ಯಾಪನೆ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದು ಅಭಿವ್ಯಕ್ತಿಸುವವನಿಗೆ ಮಾತ್ರ ಸಂಬಂಧಿಸಿದೆಯೋ ಅಥವಾ ಅದರ ಪರಿಣಾಮ ಅನುಭವಿಸುವವರ ಹಕ್ಕನ್ನೂ ಏನಾದರೂ ಗಮನಿಸುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ. ಸಮಸ್ಯೆ ಇರುವುದೇ ಇಲ್ಲಿ. ನಾನೇನೋ ಹೇಳುತ್ತೇನೆ ಅಥವಾ ಬರೆಯುತ್ತೇನೆ, ಆ ಸ್ವಾತಂತ್ರ್ಯವಿದೆ. ಆದರೆ ಅದನ್ನು ಕೇಳುವ ಅಥವಾ ಓದುವವರ ಗತಿ? ಅವರೇನಿದ್ದರೂ ವಿವೇಚನೆ ಬಳಸಿ ಓದುವ ಸ್ವಾತಂತ್ರ್ಯ ಬಳಸಿಕೊಳ್ಳಬೇಕು. ಇಲ್ಲವೇ ಅಭಿವ್ಯಕ್ತಿಸಿದವರು ಹಣೆದ ಬಲೆಗೆ ಸಿಕ್ಕಿಕೊಳ್ಳಬೇಕು. ಇದರಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಎಂಬ ವ್ಯತ್ಯಾಸವೇನೂ ಇಲ್ಲ. 

ಮಾಧ್ಯಮಗಳು ಹೇಳಿ ಕೇಳಿ ಉದ್ಯಮಗಳಾಗಿವೆ. ಅಂದಮೇಲೆ ಅದಕ್ಕೆ ಇರಬೇಕಾದುದು ಉದ್ಯಮದ ಮೌಲ್ಯ ಮತ್ತು ನೈತಿಕತೆ. ಉದ್ಯಮದ ನೈತಿಕತೆ ಮೂಲತಃ ಲಾಭ ಮತ್ತು ನಷ್ಟದ ಬಾಬ್ತು ಕುರಿತದ್ದು. ಮಿಕ್ಕವೆಲ್ಲ ಅದಕ್ಕೆ ಗೌಣ. ಇಲ್ಲಿ ಲಾಭ ಎಂದರೆ ವೈಯಕ್ತಿಕ ಹಿತಾಸಕ್ತಿ ಕಾಯುವ, ಪೂರಕವಾಗುವ ಏನೆಲ್ಲ ಅಂಶಗಳು. ಮಾಮೂಲಿ ಉದ್ಯಮದಲ್ಲಿ ಕೇವಲ ಹಣವೇ ಪ್ರಧಾನವಾದರೆ, ಮಾಧ್ಯಮ ಉದ್ಯಮದಲ್ಲಿ ಹಣದ ಜೊತೆಗೆ ಪ್ರಭಾವ, ವಶೀಲಿ, ಟಿಆರ್‍ಪಿ (ಟಾರ್ಗೆಟ್ ರೇಟಿಂಗ್ ಪಾಯಿಂಟ್), ಎಬಿಸಿ ವರದಿ (ಆಡಿಟ್ ಬ್ಯೂರೋ ಆಫ್ ಸಕ್ರ್ಯುಲೇಶನ್ಸ್) ಮೊದಲಾದವು ಸೇರುತ್ತವೆ. ಹಾಗಾಗಿ ಮಾಧ್ಯಮ ಉದ್ಯಮದ ಹಿತಾಸಕ್ತಿ ವೈವಿಧ್ಯಪೂರ್ಣವಾದುದು. ಇದರಲ್ಲಿ ಸಾಮಾಜಿಕ ಲಾಭ, ಸೇವೆ ಎಂಬುದೆಲ್ಲ ಆಮೇಲಿನದು.

ಮಾಧ್ಯಮ, ಅದರಲ್ಲೂ ದೃಶ್ಯ-ಶ್ರವಣ ಮಾಧ್ಯಮ (ಟೆಲಿವಿಶನ್-ಟಿವಿ)ಅತ್ಯಂತ ಪ್ರಭಾವಶಾಲಿ ಎಂದು ಹೇಳಲಾಗುತ್ತದೆ. ಈ ಪ್ರಭಾವ ಗುಣಾತ್ಮಕವಾಗಿ ಬಳಕೆಯಾಗುತ್ತಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಕನ್ನಡ ಟಿವಿ ಮಾಧ್ಯಮದ ಕೆಲವು ಆಯಾಮಗಳನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ನಮ್ಮ ದೇಶದಲ್ಲಿ ಟಿವಿ ಪ್ರಭಾವ ಬೀರತೊಡಗಿದ್ದೇ 1984ರ ತರುವಾಯ. ಇಂದಿರಾ ಗಾಂಧಿಯವರ ಅಂತ್ಯ ಸಂಸ್ಕಾರ ಪ್ರಸಾರ ಜನರಿಗೆ ತಮ್ಮ ಮನೆಯಲ್ಲೊಂದು ಟಿವಿ ಅನಿವಾರ್ಯ ಎನಿಸುವಂತೆ ಮಾಡಿತ್ತು. ಅನಂತರ ರಾಮಾಯಣ-ಮಹಾಭಾರತ ಧಾರಾವಾಹಿಗಳು ಅಕ್ಷರಶಃ ಮನೆ ಮನೆಗೆ ಟಿವಿ ಸೆಟ್ ಬರುವಂತೆ ಮಾಡಿಬಿಟ್ಟವು. ಅದುವರೆಗೆ ಸರ್ಕಾರದ ನಿಯಂತ್ರಣದಲ್ಲಿದ್ದ ರೇಡಿಯೊ ಮತ್ತು ಟಿವಿ ಮಾಧ್ಯಮ ಪ್ರಸಾರ 90ರ ದಶಕದಿಂದ ಈಚೆಗೆ ಖಾಸಗೀಕರಣಕ್ಕೊಳಪಟ್ಟು ಸದ್ಯ ವಾರ್ಷಿಕ ಅಂದಾಜು ಐದು ಸಾವಿರ ಕೋಟಿ ರೂ.ಗಳ ವಹಿವಾಟಿನ ಕ್ಷೇತ್ರವಾಗಿ ಬದಲಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿನ ಮಾರುಕಟ್ಟೆಯನ್ನು ಗಮನಿಸಿದ ಖಾಸಗೀ ಮಾಧ್ಯಮ ಕ್ಷೇತ್ರ ಆಯಾ ಭಾಷೆಗಳಲ್ಲಿ ಉದ್ಯಮ ಆರಂಭಿಸಿ ದಶಕದೊಪ್ಪತ್ತಿನಲ್ಲಿ ಬೃಹದಾಕಾರ ತಾಳಿ ನಿಂತಿದೆ. ಕನ್ನಡದಲ್ಲಿ 1994ರಲ್ಲಿ ಮೊದಲು ಆರಂಭವಾದ ಉದಯ ಖಾಸಗಿ ಟಿವಿ ವಾಹಿನಿ 2001ರ ವೇಳೆಗೆ ಶೇ.70ರಷ್ಟು ಮಾರುಕಟ್ಟೆಯನ್ನು ಸೆಳೆದಿತ್ತು. ಇದರ ಪರಿಣಾಮ ಉಳಿದ ಖಾಸಗಿ ಕಂಪನಿಗಳು ಕನ್ನಡದತ್ತ ಲಗ್ಗೆ ಇಡತೊಡಗಿದವು. ಸದ್ಯ ಕನ್ನಡದಲ್ಲಿ 7 ಸಾಮಾನ್ಯ ಮನರಂಜನೆ, 2 ಆಧ್ಯಾತ್ಮಿಕ, 8 ಸುದ್ದಿ ವಾಹಿನಿಗಳು, 3 ಸಂಗೀತ ವಾಹಿನಿಗಳು, ತಲಾ ಒಂದೊಂದು ಹಾಸ್ಯ, ಸಿನಿಮಾ ಮತ್ತು ಮಕ್ಕಳ ವಾಹಿನಿಗಳಿವೆ. 

ಸರ್ಕಾರ ಟಿವಿ ಭಾಗ್ಯ, ಕೇಬಲ್ ಭಾಗ್ಯ ಯೋಜನೆಯನ್ನು ಜಾರಿ ಮಾಡದಿದ್ದರೂ ಕನ್ನಡ ಟಿವಿ ಉದ್ಯಮ ವಾರ್ಷಿಕ 400 ರಿಂದ 500 ಕೋಟಿ ರೂ. ವಹಿವಾಟು ಮಾಡುತ್ತಿದೆ! ಇದರ ಪ್ರಮುಖ ವೀಕ್ಷಕರು ಗೃಹಿಣಿಯರು ಮತ್ತು ಮಕ್ಕಳು. ಹಾಗಾಗಿಯೇ ಎಲ್ಲ ಬಗೆಯ ಜಾಹೀರಾತುಗಳಿಂದ ಹಿಡಿದು ತಲೆ ಚಿಟ್ಟು ಹಿಡಿಸುವ ಧಾರಾವಾಹಿಗಳವರೆಗೆ ಎಲ್ಲ ಕಡೆಯೂ ಮಹಿಳೆ ಮತ್ತು ಮಕ್ಕಳು ಕಡ್ಡಾಯವಾಗಿರುತ್ತಾರೆ. ನರ್ಸರಿಗೆ ಹೋಗುವ ಮಗು ಅಪ್ಪನಿಗೆ ಯಾವುದು ಉತ್ತಮ ಶೇವಿಂಗ್ ಕ್ರೀಂ, ಯಾವುದು ಒಳ್ಳೆಯ ಕಾರು ಎಂದೆಲ್ಲ ಬುದ್ಧಿ ಹೇಳುತ್ತದೆ! ಹಾಗೆಯೇ ಯಾವುದು ಒಳ್ಳೇ ಪಾತ್ರೆ ಸೋಪು ಎಂದು ಸೊಸೆ ಹಿರಿಯ ಅತ್ತೆಗೆ ತಿಳಿಹೇಳುತ್ತಾಳೆ. ಮಹಿಳೆ-ಮಕ್ಕಳ ಮೂಲಕ ಮಾರುಕಟ್ಟೆ ಮನೆ ಯಜಮಾನನ ಜೇಬಿಗೆ ಕತ್ತರಿ ಹಾಕುತ್ತದೆ. ಅದಕ್ಕೆ ಅತ್ಯುತ್ತಮ ಮಾರ್ಗ ಟಿವಿ ಮಾಧ್ಯಮ. 

ಮನರಂಜನೆ ನೀಡುತ್ತದೆ, ಶಿಕ್ಷಣ ಕೊಡುತ್ತದೆ ಇತ್ಯಾದಿ ಮಹಾನ್ ಸಮರ್ಥನೆಗಳನ್ನು ಇಟ್ಟುಕೊಂಡ ಟಿವಿ ಅತ್ಯುತ್ತಮ ಟೈಮ್ ಕಿಲ್ಲರ್ ಎನಿಸಿಕೊಂಡಿತ್ತು. ಇದರ ಜೊತೆಗೆ ಅದು ಜನರ ಆರೋಗ್ಯ, ಮನಸ್ಸು, ಕೌಟುಂಬಿಕ-ಸಾಮಾಜಿಕ ಹೃದ್ಯ ವಾತಾವರಣಗಳನ್ನು ಹಾಳುಗೆಡವುದಕ್ಕಿಂತ ಹೆಚ್ಚಾಗಿ ಬೆಳೆಯುವ ಮಕ್ಕಳ ಬುದ್ಧಿಮತ್ತೆಯನ್ನೂ ನಾಶಗೊಳಿಸುತ್ತಿದೆ. ಜಪಾನಿನ ತೊಹೊಕು ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆ ಹೆಚ್ಚು ಕಾಲ ಟಿವಿ ವೀಕ್ಷಿಸುವ ಮಕ್ಕಳ ಪಾಲಕರು ಬೆಚ್ಚಿ ಬೀಳುವ ಸತ್ಯವನ್ನು ಹೊರಹಾಕಿದೆ. ಹೆಚ್ಚು ಕಾಲ ಟಿವಿ ನೋಡಿದರೆ ಮಿದುಳಿನ ಮುಂಭಾಗದ ಕಾರ್ಟಿಕ್ಸ್‍ನಲ್ಲಿ ಬೂದಿ ಬಣ್ಣದ ಪೊರೆ ದಟ್ಟವಾಗುತ್ತದೆಯಂತೆ. ಹೀಗಾದಾಗ ಮಕ್ಕಳ ಭಾಷಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಮಂಕು ಕವಿಯುತ್ತದೆ ಎನ್ನುತ್ತದೆ ಈ ಸಂಶೋಧನೆ. ಹೆಚ್ಚು ಟಿವಿ ನೋಡಿದಷ್ಟೂ ಈ ಪೊರೆ ದಟ್ಟೈಸುತ್ತದೆ ಎಂಬುದು ಸಂಶೋಧನೆಯ ಸಾರ. 

ಟಿವಿ ವೀಕ್ಷಣೆ ಬುದ್ಧಿ ಬಲಿಯದ ಮಕ್ಕಳನ್ನಷ್ಟೇ ಅಲ್ಲ, ಬುದ್ಧಿ ಬಲಿತಿದೆ ಎಂದು ಭಾವಿಸಲಾದ ವಯಸ್ಕರು-ಹಿರಿಯರನ್ನೂ ಕೆಡಿಸುತ್ತದೆ. ಸಾಮಾಜಿಕ ಒಡನಾಟದ ಸ್ವರೂಪವನ್ನೇ ಬದಲಿಸಿದೆ. ಕುಟುಂಬಗಳು ಸಾಮಾನ್ಯವಾಗಿ ಸೌಹಾರ್ದ ಭೇಟಿ ನಡೆಸುವ ಸಂಜೆಯ ಪ್ರಶಸ್ತ ಸಮಯ ಟಿವಿ ಪಾಲಿಗೆ ಪ್ರೈಂ ಟೈಂ! ಆ ಸಮಯದಲ್ಲಿ ಅವು ಮಹಿಳೆ-ಮಕ್ಕಳ ಭಾವಲೋಕವನ್ನು ಸಾಮಾನ್ಯವಾಗಿ ಕದಡುವ ಭಾವನಾತ್ಮಕ ಸನ್ನಿವೇಶಗಳ ಧಾರಾವಾಹಿಗಳ ಪ್ರಸಾರಕ್ಕೆ ಮೀಸಲಿಡುತ್ತವೆ. ಆ ಸಮಯದಲ್ಲಿ ಮನೆಗೆ ಬಂಧು-ಬಾಂಧವರು, ನೆಂಟರು-ಇಷ್ಟರು ಯಾರೂ ಅವರ ಮತ್ತು ಟಿವಿ ಮಧ್ಯೆ ಬರುವಂತಿಲ್ಲ. ಹಾಗೇನಾದರೂ ಆದರೆ ಅತಿಥಿಯಾಗಿ ಬಂದವರಿಗೆ ಹಿಡಿ ಶಾಪವೇ ಗತಿ! ಹೋಗಲಿ, ಇದಕ್ಕೊಂದು ಮಿತಿ ಇದೆಯೇ? ಒಂದರ ಹಿಂದೊಂದು ತಥಾಕಥಿತ ಕತೆಯುಳ್ಳ ಧಾರಾವಾಹಿಗಳು, ಎಂದೂ ಮುಗಿಯದ ಮೆಗಾ ಧಾರಾವಾಹಿಗಳು. ಕನ್ನಡದಲ್ಲಿರುವ ಸಾಮಾನ್ಯ ಮನರಂಜನೆಯ ಏಳು ವಾಹಿನಿಗಳು ಸೋಮವಾರದಿಂದ-ಶುಕ್ರವಾರದವರೆಗೆ ನಿತ್ಯ 62ಕ್ಕೂ ಹೆಚ್ಚು ಧಾರಾವಾಹಿಗಳನ್ನು ಪ್ರಸಾರ ಮಾಡುತ್ತವೆ! ವಾರಾಂತ್ಯದಲ್ಲಿ ಜನ ಮನೆಯಲ್ಲೇ ಇರದ ಕಾರಣ ವಾಹಿನಿಗಳಲ್ಲಿ ಯಾವ ಪ್ರಮುಖ ಕಾರ್ಯಕ್ರಮಗಳೂ ಇರುವುದಿಲ್ಲ! ಒಂದು ವಾಹಿನಿಯಂತೂ ನಿತ್ಯ 12 ಧಾರಾವಾಹಿಗಳನ್ನು ಪ್ರಸಾರ ಮಾಡುತ್ತದೆ. ಬೆಳಿಗ್ಗೆ ಎಂಟರಿಂದ ರಾತ್ರಿ 10.30 ವರೆಗೆ ಮಾತ್ರ ಅದು ಗೃಹಿಣಿಯರ ಸಮಯ ಕೇಳುತ್ತದೆ. ಉಳಿದಂತೆ ಕೆಲಸಕ್ಕೆ ಹೋಗುವ ಮಹಿಳೆಯರ ಅನುಕೂಲಕ್ಕಾಗಿ ಅದೇ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿರುತ್ತದೆ! ಇದರ ಫಲವಾಗಿ ಊಟ-ತಿಂಡಿ-ನಿದ್ರೆಯಂಥ ಕಾಲಕಾಲಕ್ಕೆ ಸರಿಯಾಗಿ ನಡೆಯಬೇಕಾದ ಸಂಗತಿಗಳೆಲ್ಲ ಪ್ರತಿ ಕುಟುಂಬದಲ್ಲೂ ಅವ್ಯವಸ್ಥೆ ಕಂಡು ಪ್ರತಿ ಮನೆಯಲ್ಲೂ ಇರುವ ಮೂರು ಮತ್ತೊಬ್ಬರ ಆರೋಗ್ಯ ಕೂಡ ಹದಗೆಡುತ್ತಿದೆ. ಹೀಗಾಗಿ ಕಚೇರಿ-ಕೆಲಸಗಳ ಬಿಡುವಿನ ವೇಳೆಯೂ ಟಿವಿ ಕಾರ್ಯಕ್ರಮಕ್ಕೇ ಮೀಸಲಾಗಿ ಕುಟುಂಬಕ್ಕೆ ಅತ್ತ ಸಾಮಾಜಿಕ ಜೀವನವೂ ಇಲ್ಲ, ಇತ್ತ ಆಂತರಿಕ ಸೌಖ್ಯವೂ ಇಲ್ಲದಂತಾಗಿ ಹೋಗಿದೆ. ಟಿವಿ ವೀಕ್ಷಣೆ ಭವಿಷ್ಯದ ಆಶಾಕಿರಣಗಳಾದ ಮಕ್ಕಳ ಕ್ರಿಯಾಶೀಲತೆಯನ್ನೇ ಕೊಲ್ಲುತ್ತದೆ ಎಂಬ ಸಂಶೋಧನೆಯ ಮಾತು ನಿಜಕ್ಕೂ ಆಘಾತಕಾರಿ. ವ್ಯಕ್ತಿಯೊಬ್ಬನ ಕ್ರಿಯಾಶೀಲತೆಯ ಫಲವಾದ ಅದ್ಭುತ ತಂತ್ರಜ್ಞಾನ ಎನಿಸಿದ ಟಿವಿ ಅಂಥ ಕ್ರಿಯಾಶೀಲತೆಯನ್ನೇ ಕೊಲ್ಲುತ್ತಿರುವುದು ಎಂಥ ವ್ಯಂಗ್ಯ ಅಲ್ಲವೇ? 




ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment