Wednesday, 26 January 2022

ಜನ್ನ ಚಿತ್ರಿಸಿದ ಅಮೃತಮತಿ

ಹಳಗನ್ನಡದ ಪ್ರಮುಖ ಕವಿ ಜನ್ನನ ಕಾಲ 1190 ರಿಂದ 1230. ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳಲ್ಲಿ ವೀರಶೈವ ಮತದ ಚಳವಳಿ ತೀವ್ರವಾಗಿ ನಡೆದಿತ್ತು. ಜೈನ ಮತ್ತು ವೀರಶೈವ ಮತಗಳ ನಡುವೆ ಘರ್ಷಣೆಗಳೂ ನಡೆಯುತ್ತಿದ್ದವು. ವಿಜಾಪುರ ಜಿಲ್ಲೆಯ ತಾಳಿಕೋಟೆಯ ಶಾಸನದಲ್ಲಿ (ಪಗರಟಿಗೆ 300 ಹಾಗೂ ವಿರುಪರಸನ ಶಾಸನಗಳು) ಜೈನರ ರಕ್ತ ಕಕ್ಕಿಸಿದ, ನಾಲಗೆ ಕಿತ್ತ, ಚರ್ಮ ಸುಲಿದ, ಜೈನ ದೇಗುಲಗಳನ್ನು ನೆಲಸಮ ಮಾಡಿದ ವಿವರಗಳಿವೆ. (ಈ ಬಗ್ಗೆ ಹಂಪನಾ ಅವರ ಲೇಖನ ಗಮನಿಸಬಹುದು- ಜನ್ನ- ಒಂದು ಮರು ಚಿಂತನೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2008, ಪುಟ 1-10)ವೀರಶೈವರ ದಾಳಿಗೆ ಸಿಲುಕಿ ತತ್ತರಿಸಿದ ಜೈನರು ಉತ್ತರ ಭಾಗವನ್ನು ತೊರೆದು ದಕ್ಷಿಣದ ಹೊಯ್ಸಳರ ಆಶ್ರಯಕ್ಕೆ ಬಂದರು. ಮತೀಯ ಸಂಘರ್ಷದ ಹಿಂಸೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ನೈಜ ಹಿಂಸೆಯಷ್ಟೇ ಅಲ್ಲ, ಹಿಂಸೆಯ ಕಲ್ಪನೆ ಕೂಡ ಘೋರ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಪ್ರತಿಪಾದಿಸಿ ಸಮಾಜದಲ್ಲಿ ಅಹಿಂಸೆ ಸ್ಥಾಪಿಸುವ ಉದ್ದೇಶದಿಂದ ಜನ್ನ ರಚಿಸಿದ್ದು ಯಶೋಧರ ಚರಿತೆ.  

ಅಂದಿನ ಕಾಲಘಟ್ಟದಲ್ಲಿ ಗಂಡ ಹೆಂಡತಿ ಕೂಡ ಅನ್ಯ ಮತಾವಲಂಬಿಗಳಾಗಿದ್ದುಕೊಂಡು ಸಂಸಾರ ನಡೆಸುವ ಸಾಧ್ಯತೆ ಖಂಡಿತ ಇತ್ತು. ಬ್ರಹ್ಮಶಿವನ ಸಮಯ ಪರೀಕ್ಷೆಯಲ್ಲಿ ಬರುವ “ಪೆಂಡತಿ ಮಾಹೇಶ್ವರಿ ಗಡ! ಗಂಡಂ ಜೈನಂ ಗಡ!” ಎಂಬ ಮಾತು ಹಾಗೂ ಸ್ವತಃ ಬಸವಣ್ಣನವರ ವಚನದಲ್ಲಿ ಬರುವ “ ಗಂಡ ಶಿವಲಿಂಗದೇವರ ಭಕ್ತ! ಹೆಂಡತಿ ಮಾರಿ ಮಸಣಿಯ ಭಕ್ತೆ” ಎಂಬ ಸಾಲುಗಳು ಈ ಮಾತನ್ನು ಪುಷ್ಟೀಕರಿಸುತ್ತವೆ. ಸ್ವತಃ ಹೊಯ್ಸಳ ರಾಜ ವಿಷ್ಣುವರ್ಧನನ ತಂದೆ ಎರೆಯಂಗ, ತಾಯಿ ಏಚಲದೇವಿ. ತಮ್ಮ ಮೊದಲನೆಯ ಬಲ್ಲಾಳ. ಬಲ್ಲಾಳ ಪರಮ ಶಿವಭಕ್ತ, ವಿಷ್ಣುವರ್ಧನ ಜೈನನಾಗಿದ್ದು ನಂತರ ವೈಷ್ಣವನಾದನೆಂದೂ ಹೇಳುತ್ತಾರೆ. ವಿಷ್ಣುವರ್ಧನನ ಪತ್ನಿ ಶಾಂತಲೆಯ ತಂದೆ ಮಾರಸಿಂಗ ಶೈವ, ತಾಯಿ ಮಾಚಿಕಬ್ಬೆ ಜೈನ ಮತಾವಲಂಬಿ. ಇವರೇನೂ ಪರಸ್ಪರ ಹಿಂಸೆಗೆ ಇಳಿಯಲಿಲ್ಲ. ಒಂದೇ ಕುಟುಂಬದಲ್ಲಿ ಸಾಮರಸ್ಯದಿಂದ ಸಂಸಾರ ನಡೆಸುವ ಪರಿಸ್ಥಿತಿ ಇದ್ದ ಅಂದಿನ ಕಾಲದಲ್ಲಿ ಸಮಾಜದಲ್ಲಿ ಮಾತ್ರ ವೀರಶೈವ-ವೈಷ್ಣವ ಮತ್ತು ಜೈನ ಸಮುದಾಯಗಳ ನಡುವೆ ನಡೆಯುತ್ತಿದ್ದ ಭೀಕರ ರಕ್ತಪಾತ ಜನ್ನನ ಮನನೋಯಿಸಿರಬೇಕು. ಅಹಿಂಸೆಯನ್ನು ಪರಮ ಧರ್ಮವಾಗಿ ಸ್ವೀಕರಿಸುವ ಜೈನ ಧರ್ಮ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ತರಬಲ್ಲುದು ಎಂಬುದನ್ನು ಸಮಾಜಕ್ಕೆ ಮನದಟ್ಟು ಮಾಡಿಸುವ ಪ್ರಯತ್ನವನ್ನು ಜನ್ನ ಯಶೋಧರ ಚರಿತೆಯ ಮೂಲಕ ಮಾಡಿದ್ದಾನೆ ಅನಿಸುತ್ತದೆ. 

ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯಗಳನ್ನು ನೀಡಿದ ಜೈನಧರ್ಮ ಧಾರ್ಮಿಕ ಕಠಿಣ ಸಾಧಕರಿಗೆ ವಿಧಿಸುವ ನಿಯಮಗಳೇ ಬೇರೆ; ಸಾಮಾನ್ಯ ಜನತೆ ಅನುಸರಿಸಲು ಹೇಳುವ ಸರಳ ನಿಯಮಗಳೇ ಬೇರೆ. ನಿತ್ಯ ಬದುಕಿನಲ್ಲಿ ಪಂಚಾಣು ವ್ರತಗಳನ್ನು ಪಾಲಿಸಲು ಅದು ಹೇಳುತ್ತದೆ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಶ್ರಾವಕರಿಗೆ ವ್ಯಾವಹಾರಿಕ ದೃಷ್ಟಿಯಿಂದ ಕೆಲವು ಹಿಂಸೆಗಳಿಗೆ ಅವಕಾಶ ನೀಡಿದರೂ ಛೇದನ, ಬಂಧನ, ವಧೆ ಇತ್ಯಾದಿ ಅತಿಚಾರಕ್ಕೆ ಅಲ್ಲಿಯೂ ಅವಕಾಶವಿಲ್ಲ. ಸಾಧಕರಿಗಂತೂ ಇಂಥ ವಿನಾಯ್ತಿ ಇಲ್ಲವೇ ಇಲ್ಲ. ಜನಸಾಮಾನ್ಯರಿಗಾಗಿ ಜೈನ ಧರ್ಮವನ್ನು ತಿಳಿಸುವ ಉದ್ದೇಶ ಇದ್ದ ಕಾರಣ ಈ ಕಾವ್ಯದಲ್ಲಿ ಲೌಕಿಕ ವಸ್ತುವಿನ ಮೂಲಕ, ಲೌಕಿಕ ವ್ಯವಹಾರಗಳ ಮೂಲಕ ಧರ್ಮ ಸೂಕ್ಷ್ಮವನ್ನು ವ್ಯಕ್ತಪಡಿಸಲು ಜನ್ನ ಯತ್ನಿಸಿದ್ದಾನೆ. ಯಶೋಧರ ಚರಿತೆ ಪುರಾಣ ವಸ್ತುವಲ್ಲ. ನಾಯಕ ಯಶೋಧರ ತೀರ್ಥಕರನಲ್ಲ. ಒಬ್ಬ ಲೌಕಿಕ ವ್ಯಕ್ತಿ. ಆದರೂ ಜನ್ನ ಇದನ್ನು ಧಾರ್ಮಿಕ ಕಾವ್ಯದಂತೆಯೇ ನಿರೂಪಿಸುತ್ತಾನೆ. ಪ್ರತಿ ಅವತಾರದ ಅಂತ್ಯದಲ್ಲೂ “ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದೀ ಶುಭಕಥನಂ” ಎಂದು ಉಕ್ತವಾಗಿದೆ. ಈ ಕಥೆ ಕೇಳಿದವರ ಪಾಪ ಅಳಿಯುತ್ತದೆ ಎಂದೂ ಹೇಳುತ್ತಾನೆ. “ಧರ್ಮದಿಂದಾಗದುದೇಂ” ಎಂದೂ ಪ್ರಶ್ನಿಸುತ್ತಾನೆ. ಯಶೋಧರ ಚರಿತೆಗೆ “ಜೀವದಯಾಷ್ಟಮಿಯ ನೋಂಪಿ ಕಥೆ” ಎಂಬ ಹೆಸರೂ ಇರುವುದನ್ನು ನೆನೆಯಬೇಕು. “ಯಶೋಧರ ಚರಿತೆ ಲೌಕಿಕವಾಗಿ, ಪ್ರಣಯ ಕಥೆಯಾಗಿ ಪರಿಣಮಿಸಿದ್ದರೂ ಅವನ ಉದ್ದೇಶವು ಧಾರ್ಮಿಕವಾದುದು” (ರಾ.ಯ ಧಾರವಾಡಕರ, ಜನ್ನನ ಯಶೋಧರ ಚರಿತೆ, ಸಾಹಿತ್ಯ ಸಮೀಕ್ಷೆ, 1949, ಪುಟ 113) ಎಂಬ ಮಾತು ಹಾಗೂ “ಪ್ರಣಯ ನಿರೂಪಣೆಯಂತೂ ಕವಿಯ ಇಚ್ಛೆ ಅಲ್ಲವೇ ಅಲ್ಲ. ಕಾಮವಿಕಾರ ನಿರೂಪಣೆ ಎಂದರೂ ಕಾಮವಿಕಾರ ನಿರೂಪಣೆಗಾಗಿಯೇ ನಿರೂಪಣೆಯಲ್ಲ. ಈ ಸಂಸಾರ ನಿಸ್ಸಾರ. ವೈರಾಗ್ಯವೇ ಜೀವನದ ಪರಮ ಮಾರ್ಗ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಒತ್ತಿ ಹೇಳುವುದೇ ಕವಿಯ ಉದ್ದೇಶ” (ಕುವೆಂಪು, ದ್ರೌಪದಿಯ ಶ್ರೀಮುಡಿ, ಮೈಸೂರು, 1960, ಪುಟ 21) ಎನ್ನುವ ಅಭಿಪ್ರಾಯಗಳು ಧಾರ್ಮಿಕ ಸಂಗತಿಯ ಪ್ರತಿಪಾದನೆಯೇ ಈ ಕೃತಿಯ ಉದ್ದೇಶ ಎಂದು ಹೇಳುತ್ತವೆ.

ಧರ್ಮದ ಸೂಕ್ಷ್ಮಗಳನ್ನು ಜನ್ನ ಎಲ್ಲೆಂದರಲ್ಲಿ ತರುತ್ತಾನೆ. “ನಿಯತಿಯನಾರ್ ಮೀರಿದಪರ್” “ಮನಸಿಜನ ಮಾಯೆ ವಿಧಿ ವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ” “ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ” ಆರರಿವರಯ್ಯ ವಿಧಿವಿಳಸನಮಂ” ಎಂಬ ಮಾತುಗಳಾಗಲಿ, ಅಥವಾ ಯಶೋಧರ-ಅಮೃತಮತಿಯರು ಕೂಡಿದಾಗ ಹೇಳುವ “ಮನೋಜನಾಡಿಸುವ ಜಂತ್ರದಂತಿರೆ ನೆರೆದರ್” ಎಂಬ ಮಾತಾಗಲಿ-ಇವೆಲ್ಲ ವ್ಯಕ್ತಿಗಳು ಕೇವಲ ಪಾತ್ರಗಳು. ಅವರು “ಮಾಡಿದಂತೆ” ಕಾಣುವ ಕೆಲಸಗಳೆಲ್ಲ “ಆಗುವಂಥವು” ಎಂಬ ಕಾಣ್ಕೆಯನ್ನು ತೋರಿಸುತ್ತವೆ.  

ಜೈನಧರ್ಮ ಪ್ರಮುಖವಾಗಿ ಪ್ರತಿಪಾದಿಸುವ ಸ್ಯಾದ್ವಾದ ಹಾಗೂ ಅಹಿಂಸೆಗಳನ್ನು ಯಶೋಧರ ಚರಿತೆಯಲ್ಲಿ ಜನ್ನ ಸೂಕ್ಷ್ಮವಾಗಿ ತರುತ್ತಾನೆ. ವಸ್ತು/ವಿಷಯವೊಂದಕ್ಕೆ ಅನೇಕ ಗುಣಧರ್ಮಗಳಿರುತ್ತವೆ ಎಂಬುದನ್ನು ಗುರುತಿಸುವುದು ಸ್ಯಾದ್ವಾದ. ವಸ್ತುವಿನ ಅನೇಕ ಸತ್ಯಗಳನ್ನು ಒಪ್ಪುವುದರಿಂದ ಇದು ಅನೇಕಾಂತವಾದ. ಒಂದು ವಸ್ತುವಿನಲ್ಲಿ ಪರಸ್ಪರ ವಿರೋಧಿ ಧರ್ಮಗಳು ಅಪೇಕ್ಷಾಭಾವದಿಂದ ಯಾವ ಬಾಧಕವಿಲ್ಲದೇ ಇರಬಲ್ಲವು ಎಂಬುದನ್ನು ಸ್ಯಾದ್ವಾದ ಹೇಳುತ್ತದೆ. ಕಾಮವೂ ಹಿಂಸೆಗೆ ಮೂಲ ಎಂಬುದನ್ನು ಜೈನ ಧರ್ಮ ಅಲ್ಲಗಳೆಯುವುದಿಲ್ಲ. ಅಮೃತಮತಿಯ ಪಾತ್ರದ ಮೂಲಕ ಜನ್ನ ಇದನ್ನು ತಿಳಿಸುತ್ತಾನೆ. ಉಳಿದ ಪಾತ್ರಗಳು ಪ್ರತಿಪಾದಿಸುವುದು ಅಹಿಂಸೆಯೇ ಶ್ರೇಷ್ಠ ಎಂಬ ತಿಳಿವಳಿಕೆಯನ್ನು. ಇವೆರಡು ಅಂಶಗಳ ಸುತ್ತ ಇಡೀ ಕಥೆ ಹೆಣೆದುಕೊಂಡಿದೆ. ಪಾತ್ರಗಳು “ಜೀವದಯೆ ಜೈನಧರ್ಮಂ” ಎಂಬುದರ ಪ್ರತಿಪಾದನೆಗೆ ದುಡಿಯುತ್ತವೆ.

ಯಾವುದೇ ವಸ್ತು/ಕೃತಿಯ ಆಕೃತಿಯೇ ಅದರ ಉದ್ದೇಶವನ್ನು ಹೇಳುತ್ತದೆ. ಯಶೋಧರ ಚರಿತೆಯ ಆಕೃತಿಯನ್ನು ಅದರ ಕಥಾ ಹಂದರದಲ್ಲೇ ಕಾಣಬಹುದು.

ಯಶೋಧರ ಚರಿತೆಯ ಕಥಾ ಸಾರಾಂಶ ಹೀಗಿದೆ: ರಾಜಪುರವೆಂಬ ಪಟ್ಟಣ. ಅದರ ದೊರೆ ಮಾರಿದತ್ತ. ಆ ಪುರದಲ್ಲಿ ಚಂಡಮಾರಿಯ ಆಲಯವಿತ್ತು. ಅಲ್ಲಿ ಜಾತ್ರೆ ನಡೆಸಿ ಜನ ದೇವಿಯನ್ನು ಆರಾಧಿಸುತ್ತಿದ್ದರು. ಒಮ್ಮೆ ವಸಂತಮಾಸದಲ್ಲಿ ಜಾತ್ರೆ ನಡೆಯಿತು. ಮಾರಿಗೆ ನರಬಲಿ ಕೊಡಲು ಇಬ್ಬರನ್ನು ಹಿಡಿದು ತರಲು ಮಾರಿದತ್ತ ಚಂಡಕರ್ಮನೆಂಬ ತಳಾರನಿಗೆ ಆಜ್ಞಾಪಿಸಿದ. ಆತ ಸುದತ್ತಾಚಾರ್ಯ ಯತಿಯೊಂದಿಗೆ ಆ ಪುರಕ್ಕೆ ಚರಿಗೆಗೆ ಬಂದ ಅಭಯರುಚಿ ಮತ್ತು ಅಭಯಮತಿ ಎಂಬ ಸಣ್ಣವಯಸ್ಸಿನ ಅಣ್ಣ-ತಂಗಿಯರನ್ನು ಹಿಡಿದು ತಂದ. ಮಾರಿಯ ಮನೆ ಭಯಂಕರವಾಗಿತ್ತು. ಅದನ್ನು ಕಂಡು ಅಂಜದ ಈ ಇಬ್ಬರನ್ನು ಗಮನಿಸಿದ ಮಾರಿದತ್ತ ಬೆರಗಾಗಿ ಅವರನ್ನು ಬಲಿಗೊಡದೇ ಅವರ ವೃತ್ತಾಂತ ತಿಳಿಯಬಯಸಿದ. ಅಭಯರುಚಿ ತಮ್ಮ ಕಥೆ ಹೇಳತೊಡಗಿದ.

ಉಜ್ಜಯಿನಿಯ ದೊರೆ ಯಶೌಘ. ಅವನ ಪತ್ನಿ ಚಂದ್ರಮತಿ. ಅವರ ಮಗ ಯಶೋಧರ. ಇವನ ಪತ್ನಿ ಅಮೃತಮತಿ. ಯಶೋಧರ ಮತ್ತು ಅಮೃತಮತಿ ಅನ್ಯೋನ್ಯವಾಗಿದ್ದರು. ಒಂದು ದಿನ ಅವರು ಶಯ್ಯಾಗೃಹದಲ್ಲಿ ನಿದ್ರಾವಶರಾಗಿದ್ದಾಗ ಅರಮನೆಯ ಪಟ್ಟದಾನೆಯ ಮಾವಟಿಗ ಹಾಡತೊಡಗಿದ. ಇದರಿಂದ ಎಚ್ಚರವಾದ ಅಮೃತಮತಿ ಆ ಇನಿದನಿಗೆ ಮಾರುಹೋದಳು. ಆ ಗಾಯಕನನ್ನು ನೋಡುವ-ಕೂಡುವ ಬಯಕೆಯಾಯಿತು. ಬೆಳಗಾದೊಡನೆ ತನ್ನ ದೂತಿಯನ್ನು ಅಲ್ಲಿಗೆ ಕಳುಹಿಸಿದಳು. ಆ ಅಷ್ಟಾವಂಕನನ್ನು ಕಂಡು ಬಂದ ದೂತಿ ಅವನ ಕುರೂಪವನ್ನು ಬಣ್ಣಿಸಿದಳು. ಆತ ನಿನಗೆ ಯಾವ ದೃಷ್ಟಿಯಿಂದಲೂ ಸರಿಯಾಗಲಾರ ಎಂದು ತಿಳಿಸಿಹೇಳಿದಳು. ಈ ಮಾತು ಕೇಳದ ಅಮೃತಮತಿ ದೂತಿಯ ನೆರವಿನಿಂದ ಆತನನ್ನು ಕೂಡುವಳು. ಪತಿಗೆ ಅರಿವಾಗದಂತೆ ಅವನೊಂದಿಗೆ ರಮಿಸತೊಡಗಿದಳು. ಪತಿಯಲ್ಲಿ ಅವಳ ಪ್ರೀತಿ ಕ್ರಮೇಣ ಕ್ಷೀಣಿಸಿತು. 

ಅವಳ ವರ್ತನೆ ಗಮನಿಸಿದ ಯಶೋಧರ ಅವಳನ್ನು ಪರೀಕ್ಷಿಸಲು ಒಮ್ಮೆ ನಿದ್ರೆ ಹೋದವನಂತೆ ನಟಿಸಿದ. ತನ್ನ ತೋಳ್ಸೆರೆಯಿಂದ ಬಿಡಿಸಿಕೊಂಡು ಹೊರಟ ಅವಳನ್ನು ಖಡ್ಗ ಹಿಡಿದು ಹಿಂಬಾಲಿಸಿದ. ತಡಮಾಡಿ ಬಂದ ಆಕೆಯನ್ನು ಅಷ್ಟಾವಂಕ ಮನಬಂದಂತೆ ಬಡಿದ. ಒದ್ದ. ಆಕೆ ಕೇರೆ ಹಾವಿನಂತೆ ಅವನ ಕಾಲಿನ ಬಳಿ ಬಿದ್ದು ಅವನನ್ನು ಸಮಾಧಾನ ಮಾಡತೊಡಗಿದಳು. ಇದನ್ನು ಕಂಡು ರೋಷತಪ್ತನಾದ ಯಶೋಧರ ಇಬ್ಬರನ್ನೂ ಕೊಲ್ಲಲು ಖಡ್ಗ ಎತ್ತಿದ. ಮರುಕ್ಷಣ ಅಸಹ್ಯಹುಟ್ಟಿ ಅವರನ್ನು ಹಾಗೆಯೇ ಬಿಟ್ಟು ಮರಳಿ ಬಂದು ಮಲಗಿದ. ಬೆಳಗಾದ ನಂತರ ಅವನಾಡಿದ ವ್ಯಂಗ್ಯದಿಂದ ತನ್ನ ರಹಸ್ಯ ಬಯಲಾದುದು ಅಮೃತಮತಿಗೆ ಅರಿವಾಯಿತು.

ಬೆಳಿಗ್ಗೆ ಮಗನ ಕಳೆಗುಂದಿದ ಮುಖವನ್ನು ಕಂಡ ಚಂದ್ರಮತಿ ಅವನ ವ್ಯಥೆಗೆ ಕಾರಣ ಕೇಳಿದಾಗ ರಾತ್ರಿ ದುಃಸ್ವಪ್ನ ಕಂಡದ್ದಾಗಿ ಸುಳ್ಳು ಹೇಳುತ್ತಾನೆ ಯಶೋಧರ. ಆ ಸ್ವಪ್ನದ ದೋಷ ನಿವಾರಣೆಗೆ ಕುರಿ ಬಲಿ ಕೊಡಲು ಹೇಳಿದಾಗ ಶಾಂತಂ ಪಾಪಂ ಎನ್ನುತ್ತಾ ಕಿವಿ ಮುಚ್ಚಿಕೊಂಡು “ಮೇಗಂ ಬಗೆವೊಡೆ ವಧೆ ಹಿತಮಾಗದು ಮತ್ರ್ಯಂಗೆ” ಎನ್ನುತ್ತಾನೆ. ಆಗ ಆಕೆ ಹಿಟ್ಟಿನ ಕೋಳಿಯನ್ನಾದರೂ ಬಲಿಕೊಡು ಎಂದು ಹಟ ಹಿಡಿದಳು. ಅದಕ್ಕೆ ಸಮ್ಮತಿಸಿದ ಯಶೋಧರ ಹಿಟ್ಟಿನ ಕೋಳಿಯನ್ನು ಕೊಯ್ದಾಗ ಅದರೊಳಗಿದ್ದ ಬೆಂತರವೊಂದು ಕೂಗುತ್ತಾ ಹೊರನೆಗೆಯಿತು. ಅದನ್ನು ಕೇಳಿ, “ಅಮೃತಮತಿಯೆಂಬ ಪಾತಕಿಯ ಮಾಯೆ ಬನಮಾಯ್ತು, ಚಂದ್ರಮತಿಮಾತೆಯ ಮಾತೆಮಗೆ ಬಲೆಯಾಯ್ತು, ಹಿಂಸನ ಅಮೋಘ ಶರಮಾಯ್ತು, ಕಡೆದುದು ಆತ್ಮ ಕುರಗಂ” ಎನ್ನುತ್ತಾ ತನ್ನಿಂದಾದ ಹಿಂಸೆಗೆ ಬೇಸತ್ತು ಮಗ ಯಶೋಮತಿಗೆ ರಾಜ್ಯವನ್ನು ನೀಡಿ ತಪಸ್ಸಿಗೆ ಹೊರಟ. ಆಗ ಪತಿಯೂ ಅತ್ತೆಯೂ ಅರಮನೆಗೆ ತನ್ನ ಆತಿಥ್ಯಕ್ಕೆ ಬರುವಂತೆ ಬಿನ್ನವಿಸಿದಳು. ಅರೆಮನಸ್ಸಿನಿಂದ ರಾಜ ಹೋದಾಗ ಅವರಿಬ್ಬರನ್ನೂ ವಿಷವಿಕ್ಕಿ ಅಮೃತಮತಿ ಕೊಂದುಬಿಟ್ಟಳು.

ಸತ್ತ ಯಶೋಧರ-ಚಂದ್ರಮತಿಯರು ಮುಂದಿನ ಜನ್ಮಗಳಲ್ಲಿ ನವಿಲು-ನಾಯಿಗಳಾಗಿ, ಹಾವು-ಮುಳ್ಳುಹಂದಿಗಳಾಗಿ, ಮೀನು-ಮೊಸಳೆಗಳಾಗಿ, ಆಡು-ಹೋತಗಳಾಗಿ, ಕೋಣ-ಹೋತಗಳಾಗಿ, ಕಡೆಗೆ ಹೊಲಗೇರಿಯಲ್ಲಿ ಕೋಳಿಪಿಳ್ಳೆಗಳಾಗಿ ಜನಿಸಿದರು. ಅಕಂಪನಮುನಿಗಳ ಉಪದೇಶ ಕೇಳಿದ ಕೋಳಿಗಳು ಜಾತಿಸ್ಮರಗಳಾಗಿ ವ್ರತಧರಿಸಿ ಹರ್ಷದಿಂದ ಕೆಲೆದಾಗ ವನವಿಹಾರಕ್ಕೆ ಹೋಗಿದ್ದ ಯಶೋಮತಿ ಬಾಣದಿಂದ ಅವುಗಳನ್ನು ಕೊಂದ. ಸಮಾಧಿಮರಣದಿಂದ ಅವು ಮಡಿದು ಯಶೋಮತಿಯ ಪತ್ನಿ ಕುಸುಮಾವಳಿಯ ಹೊಟ್ಟೆಯಲ್ಲಿ ಜನಿಸಿದವು. ಆ ಅವಳಿ ಮಕ್ಕಳೇ ಅಭಯರುಚಿ ಮತ್ತು ಅಭಯಮತಿ. ಮುಂದೆ ಅವರು ಸುದತ್ತಾಚಾರ್ಯರಲ್ಲಿ ಶಿಷ್ಯವೃತ್ತಿ ನಡೆಸಿದರು. 

ಈ ವಿಚಿತ್ರ ಕಥೆ ಕೇಳಿದ ಮಾರಿದತ್ತ ವಿಸ್ಮಿತನಾದ. ಪ್ರತ್ಯಕ್ಷಳಾದ ಚಂಡಮಾರಿ ತನಗೆ ಇನ್ನು ಮೇಲೆ ಸಾತ್ವಿಕ ಪೂಜೆ ಸಾಕು, ಪ್ರಾಣಿ ಬಲಿ ನೀಡಿದರೆ ಮುನಿಯುವುದಾಗಿ ಹೇಳಿದಳು. ಮಾರಿದತ್ತ ದೀಕ್ಷೆ ಕೈಗೊಂಡು ತಪಸ್ಸಿನಿಂದ ದೇವನಾದ. ಅಭಯರುಚಿ, ಅಭಯಮತಿಗಳು ತಪವೆಸಗಿ ಈಶಾನಕಲ್ಪದಲ್ಲಿ ದೇವತೆಗಳಾದರು. ಪಾತಕಿಯಾದ ಅಮೃತವತಿ ಧೂಮಪ್ರಭೆ ಎಂಬ ನರಕಕ್ಕೆ ಇಳಿದಳು.

ಕಥೆಯ ಆರಂಭವೇ ಭಯಾನಕ ಎನಿಸುವ ಚಿತ್ರಣದಿಂದ ಕೂಡಿದೆ. ಅಶೋಕ ವೃಕ್ಷ ಉರಿಯ ಉಯ್ಯಾಲೆಯಂತೆ, ನೆಲದ ಮೇಲೆ ಬಿದ್ದ ಮುತ್ತುಗದ ಹೂವುಗಳು ಕೊಚ್ಚಿ ಹಾಕಿದ ಮಾಂಸದಂತೆ! ಕಮಲ ವನ ಕೆಂಡದಂತೆ! ಇತ್ಯಾದಿಯಾಗಿ ವಸಂತ ಮಾಸದ ವರ್ಣನೆ ಮುಂಬರುವ ಹಿಂಸೆಯ ಸೂಚನೆಯಂತೆ ಪೀಠಿಕೆ ರೂಪದಲ್ಲಿ ಬರುತ್ತದೆ. ಅನಂತರ ಚಂಡಮಾರಿಯ ದೇವಾಲಯದ ಬೀಭತ್ಸ ದೃಶ್ಯದ ವರ್ಣನೆಗಳು. “ಅಲ್ಲಿ ಎತ್ತ ನೋಡಿದರೂ ಅಂಗೈ ಮುರಿದಿರಿಸುವ, ಕಣ್ಣುಗಳನ್ನೇ ಕಿತ್ತು ಹೂವಿನಂತೆ ಏರಿಸುವ, ಕರುಳನ್ನು ಬಗೆದು ತೋರಣ ಕಟ್ಟುವ, ಕಾಲುಗಳನ್ನು ಉರಿಸಿ ರಕ್ತದಿಂದ ಅನ್ನ ಬೇಯಿಸುವ ವೀರರು!”

ಇಷ್ಟೆಲ್ಲ ಭಯಾನಕ ಸನ್ನಿವೇಶದಲ್ಲೂ ಅಭಯರುಚಿ ಮತ್ತು ಅಭಯಮತಿಯರು ಹೆದರದೇ ನಸುನಗುತ್ತಾ ನಿಂತಿದ್ದಾರೆ. ಇದರಿಂದ ಮಾರಿದತ್ತನಲ್ಲಿ ಉಂಟಾದ ವಿಸ್ಮಯ ಮುಂದಿನ ಕಥೆಗೆ ನಾಂದಿ ಹಾಡುತ್ತದೆ.

ಎರಡನೆಯ ಅವತಾರದ ಆರಂಭದಲ್ಲೇ ಕಥೆಗೆ ಮಹತ್ವದ ತಿರುವು ದೊರೆಯುತ್ತದೆ. ಅದೇ ಅಮೃತಮತಿಗೆ ಅಷ್ಟಾವಂಕನ ಗಾಯನದಿಂದಾದ ಮರುಳು. ಯಶೋಧರ-ಅಮೃತಮತಿಯರದು ಅನ್ಯೋನ್ಯ ಸಂಸಾರ ಎಂದಷ್ಟೇ ಕವಿ ಹೇಳುತ್ತಾನೆ-ಅವರ ಶೃಂಗಾರದ ವಿವರದ ಮೂಲಕ. ಅಮೃತಮತಿಯ ಹಿನ್ನೆಲೆಯ ವಿವರ ಎಲ್ಲೂ ಇಲ್ಲ. ಅವಳ ಇಷ್ಟಾನಿಷ್ಟಗಳ ವಿವರವೂ ಇಲ್ಲ. ಆಕೆ ರಾಣಿ, ಸುಂದರಿ. ಸುಖವಾಗಿದ್ದಾಳೆ; ಯಶೋಧರ ರಾಜ, ಸುಂದರವಾಗಿದ್ದಾನೆ. ಇಷ್ಟೆ ಅವರ ಸಂಸಾರದ ಸೂತ್ರ. ಅಷ್ಟಾವಂಕನ ಗಾಯನ ಅವಳನ್ನು ಮೋಡಿ ಮಾಡುತ್ತದೆ. ಪರಿಣಾಮ ಅವಳು ಗಾಯನಕ್ಕಲ್ಲ, ಅವಳ ದಾಸಿಯರು ಮಾತ್ರವಲ್ಲ, ನೋಡಿದ ಯಾರಾದರೂ ಹೇಸುವಷ್ಟು ಕುರೂಪನೂ ದುರ್ಗಂಧನೂ ಆದ ಗಾಯಕನಿಗೆ ಸರ್ವಸ್ವವನ್ನೂ ಕೊಟ್ಟುಕೊಳ್ಳುತ್ತಾಳೆ. “ಬಿನದಕ್ಕೆ ಪಾಡುತ್ತಿರೆ ನುಣ್ದನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋಚನೆ ತಿಳಿದಾಲಿಸಿ ಮುಟ್ಟಿದ ಮನಮನೆ ತೊಟ್ಟನೆ ಪಸಾಯದಾನಂಗೊಟ್ಟಳ್” ಎನ್ನುತ್ತ ಆಕೆ ಮಾರುಹೋದುದು ಸಂಗೀತಕ್ಕೆ ಎಂದು ಧ್ವನಿಸುತ್ತಾನೆ. ಆದರೆ ಅನಂತರ ಆಕೆ ಸಂಗೀತದ ಬದಲು ಸಂಗೀತಗಾರನಿಗೆ ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ! ನಿಜಕ್ಕೂ ಆಕೆ ಅವನ ಸಂಗೀತಕ್ಕೆ ಮಾರು ಹೋಗಿದ್ದರೆ ಮತ್ತೆ ಅವನಿಂದ ಹಾಡಿಸುತ್ತಿದ್ದಳೋ ಏನೋ. ಆದರೆ ಕೃತಿಯಲ್ಲಿ ಮತ್ತೆ ಆಕೆ ಅವನ ಸಂಗೀತ ಕೇಳಿ ಮನಸೋತ ನಿದರ್ಶನ ಬರುವುದಿಲ್ಲ. ಅವಳ ಪಾಲಿಗೆ “ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್” ಸಾಲದ್ದಕ್ಕೆ ಆಕೆ “ಒಲವಾದೊಡೆ ರೂಪಿನ ಕೋಟಲೆಯೇವುದೋ” ಎಂದೂ ಕೇಳುತ್ತಾಳೆ. 

ಇವಳ ಕುಟಿಲ ಪ್ರೇಮವನ್ನು ಕಣ್ಣಾರೆ ಕಂಡಾಗ ಮಾತ್ರ ಯಶೋಧರನಲ್ಲಿ ಒಂದು ಬಗೆಯ ವೈರಾಗ್ಯ ಮೂಡುತ್ತದೆ. ಮನಸ್ಸು ಜಡವಾಗುತ್ತದೆ. ಅನಂತರ ಹಿಟ್ಟಿನ ಕೋಳಿಯ ಬಲಿ ನಡೆಯುವುದು, ಅದರಿಂದ ಬೆಂತರ ಬಂದು ಮತ್ತೆ ಯಶೋಧರನಿಗೆ ವ್ಯಥೆಯಾಗುವುದು ನಡೆಯುತ್ತದೆ. ಅಮೃತಮತಿಯ ಈ ಕಾಮ ಪ್ರಸಂಗ ಇರದಿದ್ದಲ್ಲಿ ಕಥೆಗೆ ಇಂಥ ಮಹತ್ವದ ತಿರುವು ಬಹುಶಃ ಲಭಿಸುತ್ತಿರಲಿಲ್ಲ. ಯಶೋಧರ-ಅಮೃತಮತಿಯರು ಸುಖವಾಗಿ ಅರಮನೆಯಲ್ಲಿ ಕಾಲಕಳೆಯುತ್ತಿದ್ದರೋ ಏನೋ. ಯಶೋಧರನ ವೈರಾಗ್ಯಕ್ಕೆ ದುಃಸ್ವಪ್ನ, ನೆರೆಗೂದಲು ಇತ್ಯಾದಿ ತಥಾಕಥಿತ ಕಾರಣಗಳನ್ನು ತಾರದೇ ಕಾಮವನ್ನೇ ಜನ್ನ ತರುತ್ತಾನೆ. ಕಾಮದಿಂದ ಕ್ರೋಧ, ಕ್ರೋಧದಿಂದ ಬುದ್ಧಿನಾಶ, ಬುದ್ಧಿನಾಶದಿಂದ ಆತ್ಮ ಪತನವಾಗುತ್ತದೆ ಎಂದು ಭಗವದ್ಗೀತೆಯೂ ಹೇಳುತ್ತದೆ. ಜೈನಧರ್ಮವೂ ಇದನ್ನು ನಿರಾಕರಿಸುವುದಿಲ್ಲ. ಬುದ್ಧಿನಾಶದಿಂದಲೇ ಆಕೆ ಗಂಡ ಮತ್ತು ಅತ್ತೆಯರನ್ನು ಹತ್ಯೆ ಮಾಡುತ್ತಾಳೆ. ಈ ಹತ್ಯೆ ಆಕೆ ಮಾಡಿದ ತಪ್ಪು. ಅಷ್ಟಾವಂಕನನ್ನು ಮೋಹಿಸಿದ್ದು ತಪ್ಪೆಂದು ಕೃತಿಯಲ್ಲಿ ಎಲ್ಲೂ ಹೇಳಿಲ್ಲ. ಇಂದು ನಾವು ನೋಡುವ ನೈತಿಕತೆಯ ಪ್ರಶ್ನೆಯೂ ಕೃತಿಯಲ್ಲಿ ಇದು ಆಗಿಲ್ಲ. ಆಕೆ ಅಧೋಲೋಕದಲ್ಲಿನ ಧೂಮಪ್ರಭೆ ಎಂಬ ನರಕಕ್ಕೆ ಹೋದಳು ಎಂಬ ಮಾಹಿತಿ ಮಾತ್ರ ಕಥೆಯ ಕೊನೆಯಲ್ಲಿ ಲಭಿಸುತ್ತದೆ. ಆಕೆಯ ಆತ್ಮ ಪತನವಾಗಿರುವುದನ್ನು ತಿಳಿಸುವುದಷ್ಟೇ ಇದರ ಉದ್ದೇಶವಿರಬೇಕೆಂದು ಅನಿಸುತ್ತದೆ. ಕೇವಲ ಅಷ್ಟಾವಂಕನೊಂದಿಗೆ ಸಲ್ಲಾಪದಲ್ಲಿ ತೊಡಗಿ, ಉಳಿದ ಸಂಗತಿಯನ್ನು ಆಕೆ ನಿರ್ಲಕ್ಷಿಸಿದ್ದರೆ...? ಆಕೆ ಪುರುಷನಿಂದ ಪುರುಷನಿಗೆ ಹಾರುತ್ತ ಹೋಗಲಿಲ್ಲ. ಆಕೆಯದು ಅಷ್ಟಾವಂಕನಿಗೆ ನಿಷ್ಠೆ. ಆಕೆಯಲ್ಲೂ ನೀತಿ ಇದೆ. ಆಕೆಯ ಈ ಬಗೆಯ ಉಳಿದೆಲ್ಲ ಸಂಗತಿಯ ಬಗ್ಗೆ ಜನ್ನ ಮೌನವಹಿಸುತ್ತಾನೆ. ಕಥೆಯ ಓಟಕ್ಕೆ ಆಕೆಯ ವರ್ತನೆಯನ್ನು ನೆಪವಾಗಿಸುತ್ತಾನೆ ಜನ್ನ. 

ಅನಂತರ ಕಥೆಯಲ್ಲಿ ಬರುವುದು ಯಶೋಧರ-ಚಂದ್ರಮತಿಯರ ಭವಾವಳಿಗಳ ವಿವರ. ಅಂತಿಮವಾಗಿ ಅಭಯರುಚಿ-ಅಭಯಮತಿಗಳಾಗಿ ಮಾರಿದತ್ತನ ಮುಂದೆ ನಿಂತ ಸಂದರ್ಭ. ಇಷ್ಟಕ್ಕೆಲ್ಲ ಕಾರಣ ಹಿಟ್ಟಿನ ಕೋಳಿಯ ಬಲಿ! ಮತ್ತು ಅದರೊಳಗಿದ್ದ ಬೆಂತರ!

ಸಂಕಲ್ಪ ಹಿಂಸೆಯನ್ನು ಕೂಡ ಇಲ್ಲಿ ತುಂಬಾ ಸೂಕ್ಷ್ಮವಾಗಿ ಜನ್ನ ತಂದಿದ್ದಾನೆ. ಸಂಕಲ್ಪ ಹಿಂಸೆಯನ್ನು ಕೂಡ ಯಾವುದಾದರೂ ಒಂದು ರೀತಿಯಲ್ಲಿ ಕ್ರಿಯೆಗೆ ಇಳಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅದು ಹಿಂಸೆ ಎನಿಸಿಕೊಳ್ಳುವುದಿಲ್ಲ. ಕಥೆಯ ಆರಂಭದಲ್ಲಿ ಯಶೋಮತಿ ನಿಜವಾದ ಕೋಳಿಯನ್ನು ಬಲಿಕೊಡಲು ಹೇಳುತ್ತಾಳೆ. ಆದರೆ ನಿಜವಾದ ಕೋಳಿಯ ಬದಲು ಹಿಟ್ಟಿನ ಕೋಳಿಯನ್ನು ಬಲಿಕೊಡಲಾಗುತ್ತದೆ. ಇದನ್ನು ಸಂಕಲ್ಪ ಹಿಂಸೆ ಅನ್ನಲಾಗಿದೆ. ಅಮೃತಮತಿ ಮತ್ತು ಅಷ್ಟಾವಂಕರ ಸಂಬಂಧವನ್ನು ಕಂಡ ಯಶೋಧರ ಅವರನ್ನು ಕೊಲ್ಲಲು ಸಂಕಲ್ಪಿಸಿ ಕತ್ತಿಯನ್ನು ಕೆಳಗೆ ಬಿಡುತ್ತಾನೆ. ಇಲ್ಲಿ ಇದು ಸಂಕಲ್ಪ ಹಿಂಸೆ ಆಗಿಲ್ಲ. ಏಕೆಂದರೆ ಇಲ್ಲಿ ಯಶೋಧರನ ಯೋಚನೆ ಕ್ರಿಯೆಯಾಗಿಲ್ಲ. ಅಕಸ್ಮಾತ್ ಅಮೃತಮತಿ ಮತ್ತು ಅಷ್ಟಾವಂಕರ ಅವರಿಬ್ಬರ ಪ್ರತಿಕೃತಿಯನ್ನಾದರೂ ಮಾಡಿ ಅವನ್ನು ಕಡಿದಿದ್ದರೆ ಆಗ ಅದು ಸಂಕಲ್ಪ ಹಿಂಸೆ ಎನಿಸಿಕೊಳ್ಳುತ್ತಿತ್ತು ಅನಿಸುತ್ತದೆ. ಕೇವಲ ಹಿಂಸೆಯ ಯೋಚನೆಯನ್ನು ಮಾಡಿ ಯಾವುದೇ ರೀತಿಯಲ್ಲಿ ಕ್ರಿಯೆಗೆ ಇಳಿಸದಿದ್ಧರೆ ಅದು ಸಂಕಲ್ಪ ಹಿಂಸೆ ಎನಿಸಿಕೊಳ್ಳುವುದಿಲ್ಲ ಎಂಬುದನ್ನು ತಿಳಿಸುವುದು ಕೃತಿಯ ಒಂದು ಉದ್ದೇಶವಿರಬೇಕು ಅನಿಸುತ್ತದೆ.

ಇಷ್ಟಾಗಿಯೂ ಆಧುನಿಕ ವಿಮರ್ಶಕರು ಯಶೋಧರಚರಿತೆಯಲ್ಲಿ ಅಮೃತಮತಿಯ ಕಾಮವನ್ನೇ ಪ್ರಧಾನವಾಗಿ ಕಂಡಿದ್ದಾರೆ. ಆಧುನಿಕ ಕನ್ನಡದಲ್ಲಿ ಅಮೃತಮತಿಯ ಪಾತ್ರವನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಗಮನಿಸಲಾಗಿದೆ. ಅಮೃತಮತಿಯ ಕಾಮವನ್ನು ನೈತಿಕಥೆಯ ಮತ್ತು ಕಾಮ ವಿಕಾರದ ಪ್ರಶ್ನೆಯಾಗಿ ನೋಡಲಾಗಿದೆ. “ಅಷ್ಟಾವಂಕನಿಂದ ಅವಳನ್ನು ಪರಾವೃತ್ತ ಮಾಡಬಹುದಾಗಿದ್ದ ಆತನ ಕುರೂಪವು ವಿಧಿವಿಳಸನದ ಮೂಲಕ ಆಕೆಯ ನೈತಿಕವಧೆಯನ್ನು ಪೂರ್ಣ ಮಾಡಲು ಸಹಕಾರಿಯಾದ ಮೇಲೆ ಆತನನ್ನುಕೂಡಬೇಕೆಂಬ ಅವಳ ದುರ್ದಮ್ಯವಾದ ಅಳಿಯಾಸೆ ಅವಳ ಎದೆಯ ಮಿಡುಕನ್ನು ಹೊಡೆದುಹಾಕುತ್ತದೆ. ಕುರುಡುಕಾಮದ ಮೂಲಕ ಆತನ ಕುರುಪು ಕಾಣದಾಗುತ್ತದೆ. “(ಎಲ್ ಆರ್ ಹೆಗಡೆ. ಕಾವ್ಯವ್ಯಾಸಂಗ, ಧಾರವಾಡ, ಸಮಾಜ ಬುಕ್ ಡಿಪೊ, 1967, ಪು 52) ಇದೇ ರೀತಿ ಅಷ್ಟಾವಂಕನ ಅಸಹ್ಯ ವಿಕಾರ ಅತಿಶಯೋಕ್ತಿಯಿಂದ ಕೂಡಿದ್ಧರೂ ಕವಿಯ ಉದ್ದೇಶಕ್ಕೆ ಅದು ಧಕ್ಕೆ ತರುವುದಿಲ್ಲ. ಎಂದು ಡಿ ಎಲ್ ನಸಿಂಹಾಚಾರ್ ಅಭಿಪ್ರಾಯ ಪಡುತ್ತಾರೆ. ಇದನ್ನು ಅತಿರೇಕಕ್ಕೂ ಒಯ್ಯಲಾಗಿದೆ. “ಅಷ್ಟಾವಂಕನ ಸಂಗೀತವೊಂದು ಆ ಹೊತ್ತಿನಲ್ಲಿ ಅಮೃತಮತಿಯ ಕಿವಿಗೆ ಬೀಳದಿದ್ದರೆ ಆಕೆ ಪತಿವ್ರತೆಯೇ ಆಗಿ ಉಳಿಯುತ್ತಿದ್ದಳೇನೋ ಅಥವಾ ಸ್ತ್ರೀಯೊಬ್ಬಳು ಹಾಡಿದ್ದರೆ ಅವಳಲ್ಲಿ ಸ್ವಲಿಂಗ ಪ್ರಣಯ ಜಾಗ್ರತವಾಗುತ್ತತ್ತೇನೋ!” (ಎಲ್ ಆರ್ ಹೆಗ್ಡೆ, ಪೂರ್ವೋಕ್ತ, ಪು.53) ಇಷ್ಟಲ್ಲದೆ ಆಧುನಿಕ ಸ್ತ್ರೀ ವಾದದ ಹಿನ್ನಲೆಯಲ್ಲಿ ನೋಡಿ ಗಮನಿಸಿ ವಿಮರ್ಶಿಸುತ್ತ, ಅಮೃತಮತಿಯ ಕಾಮ  ಪುರುಷಪ್ರಧಾನ ಸಮಾಜದ ದೃಷ್ಟಿಯಲ್ಲಿ ಅನ್ಯೆತ್ತಿಕವಾಗಿ ಕಾಣುತ್ತದೆ. ಪುರುಷರು ವಿವಾಹೇತರ ಸಂಬಂಧವನ್ನು ಇಟ್ಟುಕೊಳ್ಳುವುದು ಸರಿಯಾದರೆ ಅಮೃತವತಿ ಇಂಥ ಸಂಬಂಧವನ್ನು ಇಟ್ಟು ಕೊಳ್ಳುವುದರಲ್ಲಿ ತಪ್ಪೆನಿದೆ?” ಎಂದು ಕೇಳಿದವರೂ ಇದ್ದಾರೆ. ಆದರೆ “ಯಶೋಧರ ಚರಿತೆಯಲ್ಲಿ ಒಂದು ಬಗೆಯ ಪ್ರಣಯಕಥೆ ನಿರೂಪಣೆಯಾಗಿದ್ದರೂ ಅದು ಧರ್ಮಬೋಧೆಗಾಗಿ ಬರೆದ ಗ್ರಂಥ. ಯಶೋಧರನ ಆತ್ಮಪರಿಣತಿಯನ್ನು ಕುರಿತು ಹೇಳುವುದು ಕವಿಯ ಮುಖ್ಯ ಆಶಯ; ಅಮೃತಮತಿಯ ಪ್ರಣಯದ್ರೋಹದ ಪ್ರಕರಣ ಪ್ರಾಸಂಗಿಕ ಇಲ್ಲವೆ ಗೌಣ. ಹೀಗಿಲ್ಲದೆ, ಗ್ರಂಥವನ್ನು ಪ್ರಣಯ ಕಾವ್ಯವೆಂದು ಮಾತ್ರ ಬಗೆಯುವುದಾದರೆ ಅಮೃತಮತಿಯ ದೋಹವನ್ನು ಚಿತ್ರಿಸುವಲ್ಲಿ ಕವಿ ಆ ಹೆಣ್ಣಿಗೆ ಅನ್ಯಾಯ ಮಾಡಿರುವನೆಂದೇ ಹೇಳಬೇಕಾದೀತು. ಕಾಮಕ್ಕೆ ಕಣ್ಣಿಲ್ಲವೆಂಬುದು ನಿಜವಿರಬಹುದು; ಆದರೂ ಅಮೃತಮತಿಯಂಥ ರಾಣಿ ಗಂಡ ಯಶೋಧರನಂಥ ಸುಂದರರಾಜನನ್ನು ಬಿಟ್ಟು ಜಾರ ಅಷ್ಟವಂಕನಂಥ ಕೀಳು ಕುರೂಪಿಯನ್ನು ಅಳುಪಿ ಬಯಸಿದಳು ಎಂದು ನಿರೂಪಿಸಿದರೆ ಅದು ಪ್ರಣಯದ ಸಹಜವ್ಯಾಪಾರದ ಪ್ರತಿಪಾದನೆಗಿಂತ ಅಸ್ವಾಭಾವಿಕ ಕಾಮವಿಕಾರದ ವಿಪರೀತ ಪ್ರತಿಪಾದನೆ ಎಂದು ತೋರೀತು”. (ಯಶೋಧರ ಚರಿತೆ, ಕೆ ವಿ ರಾಘವಾಚಾರ್ (ಸಂ), ಮೈಸೂರು ವಿ ವಿ 1943, ಪು 3) ಎಂದು ಹೇಳಿರುವುದನ್ನು ಗಮನಿಸಬೇಕು.

ಆಧುನಿಕ ಮನೋವಿಜ್ಞಾನವೇ ಸಮಸ್ಯಾತ್ಮಕ. ಅದನ್ನಿಟ್ಟುಕೊಂಡು ಅಮೃತಮತಿಯ ಪಾತ್ರವನ್ನು ಶೋಧಿಸುವುದು ಮತ್ತಷ್ಟು ಸಮಸ್ಯಾತ್ಮಕ. ನಿಜವಾಗಿ ಅಮೃತಮತಿಯನ್ನು ಮೂರು ಬಗೆಯಲ್ಲಿ ಚಿತ್ರಿಸಲಾಗಿದೆ. ಸೋಮದೇವನ ಯಶಸ್ತಿಲಕ ಚಂಪುವಿನ ಅಮೃತವತಿ ತನ್ನನ್ನು ತಾನೇ ವಿಮರ್ಶಿಸಿಕೊಳ್ಳುತ್ತಾಳೆ. ಆಕೆಗೆ ಗಂಡನಲ್ಲಿ ಪ್ರೀತಿ ಇರಲ್ಲಿಲ್ಲ. ವಾದಿರಾಜ ಚಿತ್ರಿಸುವ ಅಮೃತವತಿ ತನ್ನನ್ನು ತಾನು ವಿಮರ್ಶಿಸಿಕೋಳ್ಳದಿದ್ದರೂ, ಸೋಮದೇವನ ಅಮೃತವತಿಯ ಪಾತ್ರವನ್ನು ಅನಿಸರಿಸುತ್ತದೆ. ಆದರೆ ಜನ್ನನ ಅಮೃತಮತಿಗೆ ಅಪಾರ ಪ್ರೀತಿ. ಹೀಗದ್ದೂ ಕಾಮವಕಾರವಾಗಿದೆ ಅಷ್ಟೆ . ಇದು ಸಹಜ. ಅಹಿಂಸೆಯ ಪ್ರತಿಪಾದನೆ ಈ ಕಾವ್ಯದ ಉದ್ದೇಶ. ಹಿಂಸಾರಭಸಮತಿ ಮಾರಿದತ್ತ ಕಾವ್ಯದ ಕೊನೆಯಲ್ಲಿ ಹಿಂಸೆಯನ್ನು ಬಿಟ್ಟನೇ ವಿನಾ ಸಂನ್ಯಾಸಿ ಆಗಲಿಲ್ಲ. ಬಲಿ ಕೇಳುತ್ತಿದ್ದ ಚಂಡಮಾರಿ ಕೂಡ ಬಲಿಯಾನಿತ್ತೊಡೆ ಮುನಿವೆಂ ಎನ್ನುತ್ತಾಳೆ. ಹೀಗಾಗಿ ಜನ್ನನ ಯಶೋಧರಚರಿತೆಯ ಅಮೃತಮತಿಯ ಪಾತ್ರ ಕಾಮ ವಿಕಾರದ ಚಿತ್ರಣಕ್ಕೆ ಅಥವಾ ನೈತಿಕತೆಗೆ ಸಂಬಂಧಿಸಿಲ್ಲ ಎಂಬುದು ಅರಿವಾಗುತ್ತದೆ.

ಇಷ್ಟಾಗಿಯೂ ಕನ್ನಡದ ಆಧುನಿಕ ವಿಮರ್ಶಕರು ಅಮೃತಮತಿಯ ಪಾತ್ರದಲ್ಲಿ ಕಾಮವಿಕಾರವನ್ನು ಮತ್ತು ನೈತಿಕತೆಯನ್ನು ಮಾತ್ರ ಏಕೆ ಪ್ರಧಾನವಾಗಿ ಗಮನಿಸುತ್ತಿದ್ದಾರೆ ಎಂಬುದಕ್ಕೆ ಪಾಶ್ಚಾತ್ಯ ಶಿಕ್ಷಣ,ಮನೋವಿಜ್ಞಾನ, ಸ್ತ್ರೀವಾದದಂಥ ಸಿದ್ಧಾಂತಗಳ ಪ್ರಭಾವ ಕಾರಣವಾಗಿದೆ ಅನಿಸುತ್ತದೆ.

   



ಕೇವಲ ಸಂಕಲ್ಪ ಹಿಂಸೆಯಿಂದಲೇ ತಾವು ಇಷ್ಟೆಲ್ಲ ಘೋರ ಯಾತನೆ ಪಟ್ಟಿರಬೇಕಾದರೆ...ಎಷ್ಟೆಲ್ಲ ನಿಜವಾದ ಹತ್ಯೆ ಮಾಡಿದ/ಮಾಡುತ್ತಿರುವ ನಿನಗೆ (ಮಾರಿದತ್ತ) ನರಕದಲ್ಲೇ ಪರಿಹಾರ ಎಂದು ಅಭಯರುಚಿ ಹೇಳಿದ್ದನ್ನು ಕೇಳಿ ಮಾರಿದತ್ತ ಮಾತ್ರವಲ್ಲ, ಅದುವರೆಗೆ ಬಲಿನೀಡದಿದ್ದರೆ ಮುನಿವೆಂ ಎನ್ನುತ್ತಿದ್ದ ಪಾಪಕಳಾಪಂಡಿತೆಯಾದ ಸ್ವತಃ ಚಂಡಮಾರಿಯೇ “ಬಲಿಯನಿತ್ತೊಡೆ ಮುನಿವೆಂ” ಎನ್ನುವಂತಾಗುತ್ತದೆ! 

ಒಟ್ಟಿನಲ್ಲಿ ಇಡೀ ಕಥನದ ಆಕೃತಿಯಲ್ಲಿ ಪ್ರಧಾನವಾಗಿ ಕಾಣಿಸುವುದು ಅಮೃತಮತಿ ಮಾಡುವ ಹತ್ಯೆ. ಯಶೋಧರ ಚರಿತೆಯ ಕಥೆಗೆ ಭದ್ರ ನೆಲೆಗಟ್ಟು ಹಾಕಿದ ಅಮೃತಮತಿಯ ಪಾತ್ರವನ್ನು ಜನ್ನ ನಿರ್ಲಕ್ಷ್ಯಿಸಿ ಅವಳ ಕೃತ್ಯದಿಂದಾದ ಪರಿಣಾಮದ ಮೂಲಕ ಓದುಗರ ಗಮನವನ್ನು ಜೈನ ಧರ್ಮದ ಕಡೆ ಸೆಳೆಯಲು ಯತ್ನಿಸುತ್ತಾನೆ.

ಚಂಡಮಾರಿ, ಮಾರಿದತ್ತರು ಹಿಂಸೆ ಬೇಡುವ ಅನ್ಯಧರ್ಮಕ್ಕೆ ಸೇರಿದವರು. ಯಶೋಧರ ಪಕ್ಕಾ ಜೈನ. ಹಾಗಾಗಿ ಆತ ಬಲಿ ನೀಡಲು ಒಪ್ಪದೇ ಹೋದರೂ ಸಂಕಲ್ಪ ಹಿಂಸೆ ಮಾಡಿದ್ದಕ್ಕಾಗಿ ಘೋರ ಯಾತನೆ ಪಟ್ಟ. ಚಂದ್ರಮತಿ ಬಹುಶಃ ಜೈನಳಲ್ಲ. ಹಾಗಾಗಿ ಆಕೆ ಕುರಿ ಬಲಿಯ ಸಲಹೆ ನೀಡುತ್ತಾಳೆ. ಅವಳಿಗೆ ಅದು ಶ್ರದ್ಧೆಯ ಕೆಲಸ. ಜೈನಧರ್ಮಕ್ಕೆ ಇದು ವಿರುದ್ಧವಾದ್ದರಿಂದ ಆಕೆಯೂ ಸಂಕಷ್ಟ ಅನುಭವಿಸಿದಳು. ಆದರೆ ಕೊನೆಗೆ ಸದ್ಗತಿ ಕಂಡಳು. ಅಷ್ಟಾವಂಕನೂ ಹಾಡಿನಿಂದ ಅಮೃತಮತಿಯ ಜೀವನದ ದಿಕ್ಕು ತಪ್ಪಿಸಿ ಎಲ್ಲೋ ಹೋಗಿಬಿಡುತ್ತಾನೆ. ಅವನ ಪ್ರಸ್ತಾಪ ಮತ್ತೆ ಬರುವುದೇ ಇಲ್ಲ. ಮಾರಿದತ್ತ, ಚಂಡಕರ್ಮರೂ ದೀಕ್ಷೆ ವಹಿಸಿ ಸದ್ಗತಿ ಕಾಣುತ್ತಾರೆ. ಆದರೆ ಅಮೃತವತಿ ಯಾವ ಧರ್ಮಕ್ಕೂ ಸೇರಿದವಳಲ್ಲ. ಅವಳದು ಸ್ವೇಚ್ಛೆ. ಹಾಗಾಗಿ ಅವಳಿಗೆ ನರಕವೇ “ಗತಿ”. 

ಅಮೃತಮತಿಯನ್ನು ಜನ್ನ ಪಾತಕಿ ಎನ್ನುತ್ತಾನೆಯೇ ವಿನಾ ಪತಿತೆ ಎನ್ನುವುದಿಲ್ಲ. ಗಂಡನನ್ನು ಬಿಟ್ಟು ಅನ್ಯ ಪುರುಷನೊಡನೆ ಸರಸ ನಡೆಸಿದ್ದು ಇಲ್ಲಿ ಅವನಿಗೆ ಮುಖ್ಯವಲ್ಲ. ಆಕೆ ಮಾಡಿದ ಹತ್ಯೆ-ಹಿಂಸೆ ಇಲ್ಲಿ ಪ್ರಧಾನ. ಮಾರಿದತ್ತ ಮಾಡಿದ ಶ್ರದ್ಧೆ-ನಂಬಿಕೆಯ ಹಿಂಸೆಗಿಂತಲೂ ಸ್ವಾರ್ಥ, ಕಾಮಪರವಾದ ಅಮೃತಮತಿಯ ಹಿಂಸೆ ಘೋರವಾದುದು; ಅದಕ್ಕೆ ಪ್ರಾಯಶ್ಚಿತ್ತವಿಲ್ಲ ಎಂಬುದು ಜನ್ನನ ಅಭಿಮತ ಅನಿಸುತ್ತದೆ.

ಜನ್ನ ಯಶೋಧರ ಚರಿತೆಯ ಎರಡನೆಯ ಅವತಾರದಲ್ಲಿ ಅಮೃತಮತಿ ತನ್ನ ಮನಸ್ಸನ್ನು ಹಾಡುಗಾರನ ಗಾಯನಕ್ಕೆ ಉಡುಗೊರೆಯಾಗಿ ನೀಡಿದ ಚಿತ್ರಣ ತರುತ್ತಾನೆ. 28ನೆಯ ಪದ್ಯದಿಂದ 


No comments:

Post a Comment