ಮುಖಾಂತರ 646 ಪುಟಗಳ ಬೃಹತ್ ಕಾದಂಬರಿ. ಇದು 2014ರಲ್ಲಿ ಮೊದಲ ಮುದ್ರಣ ಕಂಡಿತು. ಕಾರ್ಯನಿಮಿತ್ತ ಧಾರವಾಡಕ್ಕೆ ಹೋದಾಗ ಮನೋಹರ ಗ್ರಂಥಮಾಲೆಗೆ ಹಾಗೇ ಒಂದು ಭೇಟಿ ನೀಡುವ ಹವ್ಯಾಸವಿರುವ ನನಗೆ ಈ ಕೃತಿ ಕಣ್ಣಿಗೆ ಬಿತ್ತು. ಈ ಮೊದಲು ಮೊಗಸಾಲೆಯವರ ಉಲ್ಲಂಘನೆ ಓದಿ ಭಿನ್ನ ಅನುಭವ ಪಡೆದಿದ್ದ ನನಗೆ ಮುಖಾಂತರದಲ್ಲೂ ವಿಭಿನ್ನ ಓದು ದೊರೆಯಬಹುದು ಎಂಬ ನಿರೀಕ್ಷೆ ಇತ್ತು. ಸಾಲದ್ದಕ್ಕೆ ಮನೆಗೆ ಎಷ್ಟು ಪುಸ್ತಕ ತಂದಿಟ್ಟರೂ ಸಾಲದೆಂಬಂತೆ ಓದಿ ಮುಗಿಸುವ ನನ್ನ ಅತ್ತೆಯವರಿಗೂ ಒಂದು ಪುಸ್ತಕವಾಯಿತು ಎಂದು ನಾನೂ ನನ್ನ ಪತ್ನಿಯೂ ಮುಖಾಂತರವನ್ನು ಕೊಂಡುತಂದೆವು. ಮನೆಯಲ್ಲಿ ಮೊದಲ ಓದುಗರು ಅತ್ತೆಯವರೇ ಆದರು. ವಾರದೊಪ್ಪತ್ತಿನಲ್ಲಿ ಅವರಿಂದ ಕಾದಂಬರಿಗೆ ಒಂದು ಅದ್ಭುತ ಪ್ರತಿಕ್ರಿಯೆ ದೊರೆಯಿತು. ‘ಬಾಳ ಚೊಲೋ ಅದೇರೀ...ಏನ್ ಬರದಾರ? ಏನ್ ಕತಿ? ಬಾಳ ಕುಶೀ ಆತ್ ಖರೇ...ಒಂದ್ ಮನಿತನದ್ದು ಕತೀ ಅಂದ್ರ ಹೀಂಗ ಇರ್ತದ ನೋಡ್ರೀ... ನಮ್ ಮನಿತನದ ಕತೀನೂ ಹೀಂಗ್ ನೆನಪಾತು...’ ಇತ್ಯಾದಿ. ಹೌದಾ...ತಡೀ ಎಲ್ಲಾ ಹೇಳ್‍ಬ್ಯಾಡಾ, ನಾನೂ ಓದ್‍ಬೇಕಾಗ್ಯದ ಅಂದಳು ಅಶ್ವಿನಿ. ಅವಳೂ ಓದಿ ಮಸ್ತ್ ಅದ ಅಂದಳು. ಎಲ್ಲರ ಓದು ಆದ ಮೇಲೆ ನನ್ನ ಸರದಿ. ತಿಂಗಳು ಗಟ್ಟಲೆ ಸಮಯ ತೆಗೆದುಕೊಂಡು ಓದಿ ಮುಗಿಸಿದೆ. ಅಲ್ಲಿಗೆ ನಿಜಕ್ಕೂ ಒಂದು ವಿಭಿನ್ನ ಓದು ಸಿಕ್ಕಿತ್ತು. ಧಾರವಾಡದಿಂದ ಪುಸ್ತಕ ಹೊತ್ತು ತಂದಿದ್ದೂ ಸಾರ್ಥಕ ಅನಿಸಿತ್ತು. ಪದವಿ ಮಟ್ಟದಲ್ಲಿದ್ದಾಗ ಸಿಕ್ಕಿದ್ದನ್ನೆಲ್ಲ ಓದುತ್ತಿದ್ದ ನಾನು ಸಾಕಷ್ಟು ಕಾದಂಬರಿಗಳನ್ನೂ ಓದಿದ್ದೆ. ಸಿಕ್ಕ ಸಿಕ್ಕ ಸಿನಿಮಾಗಳನ್ನೂ ನೋಡುತ್ತಿದ್ದೆ. ಅನಂತರ ಸಿನಿಮಾ ಮತ್ತು ಕಾದಂಬರಿಗಳ ಆಕರ್ಷಣೆ ಅಷ್ಟಕ್ಕಷ್ಟೆ ಅನ್ನುವಂತಾಯಿತು. ಅಳೆದು ಸುರಿದು, ಕಾದು ಸಿನಿಮಾ ನೋಡುವ, ಕಾಯ್ದು ಕಾದಂಬರಿ ಓದುವ ವಿಶಿಷ್ಟ ವರ್ಗಕ್ಕೆ ಸೇರಿಕೊಂಡೆ!
ಒಂದು ದಿನ ವಿದ್ವಾಂಸ ಮಿತ್ರ ಎಸ್ ಪಿ ಪದ್ಮಪ್ರಸಾದ್ ಮುಖಾಂತರವನ್ನು ಪ್ರಸ್ತಾಪಿಸಿ ನೀವು ಇದಕ್ಕೆ ಸಂಬಂಧಿಸಿ ನಾಡಿನ ಲೇಖಕರ ಬರಹಗಳನ್ನು ಸಂಪಾದಿಸಿಕೊಡಬೇಕಲ್ಲ ಎಂದರು. ಹಿಂಜರಿಕೆಯಿಂದಲೇ ಆಯಿತು ಅಂದೆ. ಈಗ ಮತ್ತೆ ಮುಖಾಂತರಕ್ಕೆ ಮುಖಾಮುಖಿಯಾದೆ.
ಈ ನಡುವೆ ಕನ್ನಡದಲ್ಲಿ ನಾಲ್ಕಾರು ವಿಭಿನ್ನ ಓದು ದೊರಕಿದೆ. ಇವುಗಳಲ್ಲಿ ಶ್ರೀನಿವಾಸ ವೈದ್ಯ ಅವರ ಹಳ್ಳ ಬಂತು ಹಳ್ಳ; ವಿ ಟಿ ಶೀಗೇಹಳ್ಳಿ ಅವರ ತಲೆಗಳಿ; ಗೋಪಾಲಕೃಷ್ಣ ಪೈ ಅವರ ಸ್ವಪ್ನಸಾರಸ್ವತ ಮುಖ್ಯವಾದವು. ಕನ್ನಡದಲ್ಲಿ ನಿತ್ಯ ಒಂದಲ್ಲ ಒಂದು ಕಾದಂಬರಿ ಹೊರಬರುತ್ತಿರುವಾಗ ಈ ಕೆಲವೇ ಕೃತಿಗಳು ವಿಭಿನ್ನ ಅಥವಾ ವಿಶಿಷ್ಟ ಏಕೆ ಅನ್ನುವುದನ್ನು ಹೇಳಬೇಕಿದೆ.
ಸಂಸ್ಕøತದ ಬಾಣನ ಕಾದಂಬರಿಯನ್ನು ತುರಮುರಿಯವರು ಹೊಸಗನ್ನಡ ಗದ್ಯರೂಪದಲ್ಲಿ (1875) ಹೊರತಂದಾಗಿನಿಂದ ಆಧುನಿಕ ಕನ್ನಡದಲ್ಲಿ ಕಾದಂಬರಿ ಹೆಸರು ಪ್ರಚುರವಾಗತೊಡಗಿತು. ಗದ್ಯ ರೂಪದಲ್ಲಿರುವ ಕಥೆ, ಶೈಲಿ, ನಿರೂಪಣೆ, ರಸ, ವರ್ಣನೆ ಮೊದಲಾದವುಗಳ ದೃಷ್ಟಿಯಿಂದ ಇಂಥದ್ದೊಂದು ಸಾಹಿತ್ಯ ಪ್ರಕಾರವನ್ನು ಕನ್ನಡದ ಜನ ಆಸ್ವಾದಿಸಿ ಕಾದಂಬರಿ ಎಂಬ ಹೆಸರನ್ನೇ ಉಳಿಸಿಕೊಂಡರು. ಇಂಥ ಚಹರೆಯನ್ನು ಕೆಂಪುನಾರಾಯಣನ ಮುದ್ರಾಮಂಜೂಷದಲ್ಲಿಯೇ (1823) ಗುರುತಿಸಲು ಸಾಧ್ಯವಿದೆ.
ಇಷ್ಟಾದರೂ ಕನ್ನಡಕ್ಕೆ ‘ನಿಜವಾದ ಕಾದಂಬರಿಗಳ’ ಪ್ರವೇಶವಾದುದು ಇಂಗ್ಲಿಷ್ ಸಾಹಿತ್ಯದ ಪ್ರೇರಣೆ ಮತ್ತು ಪ್ರಭಾವದಿಂದ. ಯೂರೋಪಿನಲ್ಲಿ ರೆನೆಸಾನ್ಸ್ ಯುಗದ ಕಾಲಘಟ್ಟದಲ್ಲಿ ಬೈಬಲ್ಲಿನಲ್ಲಿ ಹೇಳಲಾದ ಆದರ್ಶದಂತೆ ಜೀವಿಸುವ ವ್ಯಕ್ತಿಗಳನ್ನು ಹಾಗೂ ಅವರ ಜೀವನ ಪ್ರಭಾವವನ್ನು ಜನಮಾನಸಕ್ಕೆ ಮುಟ್ಟಿಸುವ ದೃಷ್ಟಿಯಿಂದ ಹುಟ್ಟಿಕೊಂಡ ‘ನಾವೆಲ್ಲಾ’ ಇಂಗ್ಲಿಷ್ ಮೂಲಕ ಭಾರತಕ್ಕೆ ಪ್ರವೇಶಪಡೆಯಿತು. ನಾರ್ಮೆಟಿವ್ ಆದ, ಪ್ರಶ್ನಿಸಲಾಗದ ನಿಯಮಗಳ ಅಡಿಯಲ್ಲಿ ಆ ಆದರ್ಶವಿರುತ್ತದೆ. ಆದರೆ ನಮ್ಮ ದೇಶದಲ್ಲಿ ಬೈಬಲ್ಲಿನಂತೆ ಏಕೈಕ ಆದರ್ಶ ಕೃತಿಯನ್ನಾಗಲೀ ಪ್ರಶ್ನಾತೀತ ಆದರ್ಶಗಳನ್ನಾಗಲೀ ಕಾಣುವುದು ಸಾಧ್ಯವಿಲ್ಲ. ರಾಮನನ್ನು ಆದರ್ಶವಾಗಿಟ್ಟುಕೊಂಡರೆ ಆತ ಸೀತೆಯನ್ನು ಕಾಡಿಗೆ ಕಳುಹಿಸಿದ್ದು ಯಾಕೆ, ವಾಲಿಯನ್ನು ಕದ್ದು ಕೊಂದಿದ್ದು ಯಾಕೆ, ಶೂರ್ಪನಖಿಯ ಮೂಗು ಕೊಯ್ದಿದ್ದು ಸರಿಯೇ ಇತ್ಯಾದಿ ಪ್ರಶ್ನೆಗಳು ಬೆನ್ನಿಗೇ ಹುಟ್ಟಲು ಸಾಧ್ಯವಿದೆ. ಯೂರೋಪ್‍ನ ಆದರ್ಶದಲ್ಲಿ ಇಂಥ ಪ್ರಶ್ನೆಗೆ ಅವಕಾಶವೇ ಇಲ್ಲ. ಆದರೆ ಅಲ್ಲಿನ ಅಂಥ ಚಿತ್ರಣಗಳಲ್ಲಿ ಹಾಸುಹೊಕ್ಕಾದ ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ ಮೊದಲಾದ ವಿವರಗಳು ಪ್ರಪಂಚದ ಎಲ್ಲ ಕಡೆಯೂ ಸಾಮಾನ್ಯವಾಗಿ ಕಾಣುವುದರಿಂದ ಅದರ ಪ್ರೇರಣೆಯಿಂದ ಭಾರತದಲ್ಲೂ ಅಂಥ ಸಾಹಿತ್ಯ ಹುಟ್ಟಲಾರಂಭವಾಯಿತು. ಬಂಗಾಳದಲ್ಲಿ ಮೊದಲು ಇಂಥ ಪ್ರಯೋಗ ನಡೆಯಿತು. ಬಿ. ವೆಂಕಟಾಚಾರ್ಯರು ಬಂಗಾಳಿಯಲ್ಲಿ ಬಂದ ಇಂಥ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಉಣಬಡಿಸತೊಡಗಿದರು. ದುರ್ಗೇಶನಂದಿನಿ (1865) ಇಂಥ ಮೊದಲ ಕೃತಿ. ಅದರ ಪ್ರಭಾವದಿಂದ ಕನ್ನಡದಲ್ಲಿ ಸ್ವತಂತ್ರ ಕಾದಂಬರಿಗಳು ಕಾಣಿಸಿಕೊಳ್ಳಲಾರಂಭಿಸಿದವು. ರೆಂಟ್ಲ ವೆಂಕಟಸುಬ್ಬರಾಯರ ಕೇಸರಿವಿಲಾಸ (1894) ಕನ್ನಡದ ಮೊದಲ ಕಾದಂಬರಿ ಎಂದು ಗೋವಿಂದ ಪೈ ಹೇಳುತ್ತಾರೆ. ಅನಂತರ ಕಾಣಿಸುವುದು ಗುಲ್ವಾಡಿ ವೆಂಕಟರಾಯರ ಇಂದಿರಾಬಾಯಿ (1899). ಇದು ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ ಎನಿಸಿದೆ. ಅಲ್ಲಿಂದ ಮುಂದೆ ಕನ್ನಡದಲ್ಲಿ ಸಮೃದ್ಧ ಕಾದಂಬರಿ ಕೃಷಿ ನಡೆಯುತ್ತ ಬಂದು ಹತ್ತಾರು ಮಜಲುಗಳನ್ನು ಕಂಡಿದೆ.
ಆರಂಭಿಕ ಕಾದಂಬರಿಗಳಲ್ಲಿದ್ದ ಕಲ್ಪಕತೆಯ ಜೊತೆಗೆ ಸಮಾಜದ ವಾಸ್ತವವನ್ನು ಕೃತಿಯಲ್ಲಿ ತರುವ ಧೋರಣೆಯೂ ಆರಂಭವಾಯಿತು. ಆಧುನಿಕತೆ, ರಾಜಕೀಯ ದೃಷ್ಟಿ ಮೊದಲಾದವು ಎಂ ಎಸ್ ಪುಟ್ಟಣ್ಣನವರ ಮಾಡಿದ್ದುಣ್ಣೋ ಮಹಾರಾಯ (1914) ಕಾದಂಬರಿಯಲ್ಲೇ ಕಾಣಿಸುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ಕನ್ನಡದ ಆರಂಭಿಕ ಕಾದಂಬರಿಗಳು ಗಾತ್ರದಲ್ಲಿಯೂ ದೊಡ್ಡದಾಗಿರುತ್ತಿದ್ದುದು. ವಿವರಣೆಯೇ ವಿಸ್ತøತವಾಗಿರುತ್ತಿದ್ದುದು ಇದಕ್ಕೆ ಕಾರಣ. ದೊಡ್ಡ ಗಾತ್ರ ಇರದಿದ್ದರೆ ಅದು ಕಾದಂಬರಿಯೇ ಅಲ್ಲ ಎನ್ನುವ ಸ್ಥಿತಿಯೂ ನಿರ್ಮಾಣವಾಗಿತ್ತು. ಇಂಥ ಗಾತ್ರಕ್ಕೂ ಯೂರೋಪ್ ಕೃತಿಗಳೇ ಪ್ರೇರಣೆ. ಕುವೆಂಪು, ಗೋಕಾಕ್, ಕಾರಂತ, ಭೈರಪ್ಪ ಮೊದಲಾದ ಕಾದಂಬರಿಕಾರರ ಕೃತಿಗಳೆಲ್ಲ ಸಣ್ಣ ಗಾತ್ರದವಲ್ಲ. ಬರಬರುತ್ತ ಕನ್ನಡದಲ್ಲಿ ಕಾದಂಬರಿಗಳ ಭಿನ್ನ ಪ್ರಯೋಗಗಳು ನಡೆದಂತೆ ಗಾತ್ರವೂ ಕುಗ್ಗತೊಡಗಿತು. ತೇಜಸ್ವಿಯವರ ಕರ್ವಾಲೋ, ದೇವನೂರರ ಕುಸುಮಬಾಲೆ ಮೊದಲಾದವು ವಿಶಿಷ್ಟ ವಸ್ತು ಮತ್ತು ಕಥನ, ನಿರೂಪಣಾ ಶೈಲಿಗೆ ಮಾತ್ರವಲ್ಲದೇ ಪರಿಣಾಮಕಾರಿ ಸಣ್ಣಗಾತ್ರದ ಕಾದಂಬರಿಗಳೂ ಹೌದು. ಈಗ ಮತ್ತೆ ಕಾದಂಬರಿಗಳು ಬೃಹತ್ ಗಾತ್ರ ಪಡೆಯುತ್ತಿವೆ. ತಲೆಗಳಿ, ಉಲ್ಲಂಘನೆ, ಸ್ವಪ್ನಸಾರಸ್ವತ, ಮುಖಾಂತರ ಇವೆಲ್ಲ ಗಾತ್ರದಲ್ಲೂ ಹಿರಿದಾಗಿವೆ. ಕನ್ನಡ ಓದುಗರು ಕಾದಂಬರಿಯ ವಸ್ತು, ತಂತ್ರಕ್ಕೆ ಮಾತ್ರವಲ್ಲದೇ ಗಾತ್ರ ಪ್ರಯೋಗಕ್ಕೂ ಒಗ್ಗಿಕೊಂಡಿದ್ದಾರೆ.
ಕಥನ ಪರಂಪರೆ ಭಾರತೀಯ ಸಮಾಜಕ್ಕೆ ಹೊಸದಲ್ಲ. ನಾವು ಬೆಳೆಯುವುದೇ ಕಥೆಗಳ ಒಡಲಲ್ಲಿ. ಕಥೆ ಹೇಳುವುದು ಮತ್ತು ಕೇಳುವುದು ನಮ್ಮ ಸಂಪ್ರದಾಯವೇ ಆಗಿದೆ. ರಾತ್ರಿ ಬೆಳಗು ಮಾತ್ರವಲ್ಲ, ವಾರಗಟ್ಟಲೆ ಕಥೆ ಹೇಳುವ/ಕೇಳುವ ಸಾಮಥ್ರ್ಯ ನಮ್ಮ ಜನಕ್ಕಿದೆ. ಬೃಹತ್ ಗಾತ್ರದ ರಾಮಾಯಣ, ಮಹಾಭಾರತಗಳು ಮಾತ್ರವಲ್ಲ, ಮಲೆ ಮಹದೇಶ್ವರ, ಮಂಟೇಸ್ವಾಮಿ, ಮೈಲಾರಲಿಂಗ, ಜುಂಜಪ್ಪನ ಕಥೆಗಳು ಸಣ್ಣವೇನಲ್ಲ. ಜೊತೆಗೆ ರಾತ್ರಿಬೆಳಗು ನಡೆಯುವ ತಾಳಮದ್ದಲೆ, ಯಕ್ಷಗಾನ, ಗಮಕ ಮೊದಲಾದವುಗಳ ಮೂಲಕ ಕಥೆಗಳನ್ನು ಕೇಳುತ್ತಲೇ ಬೆಳೆದುಬಂದ ಪರಂಪರೆ ನಮ್ಮದು. ಇಲ್ಲೆಲ್ಲ ಹೇಳುವವನಿಗೂ ಕೇಳುವವನಿಗೂ ತಾಳ್ಮೆ ಮುಖ್ಯವಾಗುತ್ತದೆ. ಈ ಮೂಲಕ ಅವಸರವಿಲ್ಲದ ಜೀವನ ದೃಷ್ಟಿಯನ್ನೂ ಆ ಮೂಲಕ ನೆಮ್ಮದಿ, ಆನಂದವನ್ನೂ ಕಾಣಲಾಗುತ್ತದೆ. ಇದು ನಮ್ಮದೇ ಕಥೆ, ನಮ್ಮದೇ ಬದುಕು ಹಾಗೂ ಜೀವನ ದೃಷ್ಟಿ ಅನಿಸುವಂತಿದ್ದರೆ ಗಾತ್ರ ಮುಖ್ಯವೇ ಆಗುವುದಿಲ್ಲ.
ಹೀಗೆ ಬಹುದೊಡ್ಡ ಕಥನ ಪರೆಂಪರೆಯುಳ್ಳ ನಮ್ಮ ಪರಿಸರದಲ್ಲಿ ಕಥೆ ಹೇಳುವ ಕಾದಂಬರಿ ಪ್ರಕಾರವೂ ಹೊಸದಾಗಿ ಸೇರಿಕೊಂಡರೆ ಅಚ್ಚರಿಯೇನೂ ಅನಿಸುವುದಿಲ್ಲ. ನಮ್ಮ ಜನ ಕಥೆಯ ಪ್ರಕಾರ ಯಾವುದೆಂದು ತಲೆಕೆಡಿಸಿಕೊಳ್ಳುವುದಿಲ್ಲ. ಮಾದೇಶ್ವರ, ಮಂಟೇಸ್ವಾಮಿ, ರಾಮಾಯಣ, ಮಹಾಭಾರತ-ಇವೆಲ್ಲ ಕಾವ್ಯಗಳೇ ಪುರಾಣಗಳೇ ಕಥೆಗಳೇ ಎಂದು ಕೇಳಿದರೆ ನಮಗೆ ಉತ್ತರಿಸುವುದು ಇಂದಿಗೂ ಕಷ್ಟವೇ. ಇಲ್ಲೆಲ್ಲ ಜನ ಗಮನಿಸುವುದು ಅವುಗಳ ಪ್ರಕಾರ, ಸಮಯ ಮುಂತಾದವನ್ನಲ್ಲ, ಬದಲಾಗಿ ಅವುಗಳ ಒಟ್ಟೂ ಪರಿಣಾಮವನ್ನು ಮಾತ್ರ. ಇವು ಕೇಳುಗರ ಮೇಲೆ ವಿಭಿನ್ನ ಪರಿಣಾಮವನ್ನು ಉಂಟುಮಾಡುತ್ತವೆ...ತಮ್ಮ ತಮ್ಮ ಜೀವನ ದೃಷ್ಟಿಯನ್ನು ಜನ ಇವುಗಳಲ್ಲಿ ಕಂಡುಕೊಳ್ಳುತ್ತಾರೆ.
ಕಥನ ಪರಂಪರೆ ನಮ್ಮಲ್ಲಿ ನಿಜವಾಗಿ ಬರೀ ಕಥೆ ಹೇಳುವುದಿಲ್ಲ, ಅದು ನಮ್ಮ ‘ಗತ’ವನ್ನು ಕಟ್ಟಿಕೊಡುತ್ತದೆ. ಹೀಗಾಗಿ ನಾವು ಅದನ್ನು ವರ್ತಮಾನದಲ್ಲಿ ಜೀವಿಸುತ್ತೇವೆ. ಈಗಾಗಲೇ ಉಲ್ಲೇಖಿಸಿದ, ಕನ್ನಡದಲ್ಲಿ ಈಚೆಗೆ ಬಂದ ತಲೆಗಳಿ, ಉಲ್ಲಂಘನೆ, ಸ್ವಪ್ನಸಾರಸ್ವತ ಹಾಗೂ ಸದ್ಯದ ಮುಖಾಂತರ ಕೃತಿಗಳಲ್ಲಿ ‘ಗತ’ವನ್ನು ಚಿತ್ರಿಸುವ ಇಂಥ ವರ್ತಮಾನದ ಜೀವನವಿದೆ. ಹೀಗಾಗಿಯೇ ಇವು ಭಿನ್ನವಾಗಿವೆ. ಇವು ನಮ್ಮ ಸಾಂಪ್ರದಾಯಿಕ ನಿರುಮ್ಮಳ ಶೈಲಿಯಲ್ಲಿ ಒಡಮೂಡುವ, ಒಂದೇ ಕೇಂದ್ರವಿಲ್ಲದ ವಸ್ತುವನ್ನು ಹೊಂದಿವೆ. ಆದರೆ ಯೂರೋಪಿನ ನಾವೆಲ್ಲಾ ಪ್ರಕಾರದಿಂದ ಕನ್ನಡದಲ್ಲಿ ಹುಟ್ಟಿದ ಕಾದಂಬರಿಗಳು ಆದರ್ಶವಾದಿ ನೆಲೆಯಲ್ಲಿ ಒಂದೇ ಕೇಂದ್ರದ ಸುತ್ತ ಸುತ್ತುತ್ತವೆ. ಮುಖಾಂತರ ಮುಖ್ಯವಾಗುವುದು ಹಾಗೂ ಭಿನ್ನವಾಗಿ ನಿಲ್ಲುವುದು ಜನಾರ್ದನ ಭಟ್ ಅವರು ಗುರುತಿಸಿರುವಂತೆ ‘ನಮ್ಮ ಆದರ್ಶವಾದೀ ಕಾದಂಬರಿಗಳು ಅಥವಾ ನವೋದಯದ ಹಲವು ಕನ್ನಡ ಕಾದಂಬರಿಗಳಲ್ಲಿ ಜಮೀನುದಾರೀ ಶೋಷಣೆಗೊಳಗಾದ ಅನಕ್ಷರಸ್ಥ ಹಳ್ಳಿಗರಿರುವ, ಅಭಿವೃದ್ಧಿಯಲ್ಲಿ ಹಾಗೂ ಸಂಘಟನೆಯಲ್ಲಿ ಹಿಂದುಳಿದ ಹಳ್ಳಿಗಳಿಗೆ ಪಟ್ಟಣದಲ್ಲಿ ಕಲಿತು ಬರುವ ವಿದ್ಯಾವಂತ ಯುವ ನಾಯಕ ಬದಲಾವಣೆ ಹಾಗೂ ಸುಧಾರಣೆಯ ಅಜೆಂಡಾ ಹಿಡಿದುಕೊಂಡು ಮರಳಿಬರುವುದು ಕಂಡುಬರುತ್ತದೆ. ಈ ಕಾಲಘಟ್ಟದ ಕೆಲವು ಕಾದಂಬರಿಗಳಲ್ಲಿ, ಮುಖ್ಯವಾಗಿ ಮೊಗಸಾಲೆಯವರ ಕಾದಂಬರಿಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಚಲನೆಯೊಂದು ಕಂಡುಬರುತ್ತಿರುವುದು ಅಧ್ಯಯನ ದೃಷ್ಟಿಯಿಂದ ಮುಖ್ಯವಾಗಿದೆ. ಹಳ್ಳಿಯ ಕೃಷಿವ್ಯವಸ್ಥೆ ಛಿದ್ರವಾಗುತ್ತಿದೆ ಎಂದು ಮಾತ್ರವಲ್ಲ; ಆದರ್ಶವಾದೀ ಸಂಘಸಂಸ್ಥೆಗಳು ಕೊನೆಯುಸಿರೆಳೆಯುವುದನ್ನು ಕೂಡಾ ಚಿತ್ರಿಸುವ ಕಥಾನಕಗಳಿವು ಎನ್ನುವುದು ಮುಖ್ಯವಾಗಿದೆ’.
ಇಷ್ಟಾಗಿಯೂ ಮುಖಾಂತರ ಎಲ್ಲರಿಗೂ ಒಂದೇ ಬಗೆಯ ಓದನ್ನು ನೀಡಿಲ್ಲ. ಒಂದು ಕೃತಿ - ಸಾಹಿತ್ಯ, ಕಲೆ, ನಾಟಕ, ನೃತ್ಯ ಇತ್ಯಾದಿ ಏನೇ ಇರಲಿ, ಅದು ಓದುಗನ, ನೋಡುಗನ ದೃಷ್ಟಿಯಿಂದ ಅರ್ಥೈಸಿಕೊಳ್ಳುತ್ತದೆ ಎನ್ನುವುದು ಸಾಮಾನ್ಯ ವಿಚಾರ. ಹಾಗಾಗಿ ಒಂದು ಕೃತಿ ಭಿನ್ನ ರೀತಿಯಲ್ಲಿ ಒಬ್ಬೊಬ್ಬರಿಗೆ ಅರ್ಥವಾಗುತ್ತದೆ. ಕೆಲವೊಮ್ಮೆ ಈ ಗ್ರಹಿಸುವಿಕೆಯಲ್ಲಿ ಸಾಮ್ಯಗಳಿರಬಹುದು. ಹೀಗಿದ್ದಾಗಲೂ ಅದನ್ನು ಕೃತಿಕಾರ ಯಾವ ದೃಷ್ಟಿಯಿಂದ ಬರೆದಿರುತ್ತಾನೋ ಅದೇ ದೃಷ್ಟಿ ಮತ್ತು ಅರ್ಥದಲ್ಲಿ ಗ್ರಹಿಸುವುದು ಅಸಾಧ್ಯ.
ಕನ್ನಡದಲ್ಲಿ ಕಾದಂಬರಿ ಪ್ರಕಾರದ ಬೆಳವಣಿಗೆಯ ಜೊತೆ ಜೊತೆಗೇ ಪಾಶ್ಚಾತ್ಯ ವಿಮರ್ಶೆಯ ಪ್ರಕಾರವೂ ಬೆಳೆಯಿತು. ಕಾದಂಬರಿ ಪ್ರಕಾರದಂತೆಯೇ ವಿಮರ್ಶೆ ಕೂಡ ಕಾವ್ಯಮೀಮಾಂಸೆಯ ರೂಪದಲ್ಲಿ ಭಾರತೀಯ ಸಾಹಿತ್ಯ ಸಂಪ್ರದಾಯದಲ್ಲಿತ್ತು ಎನ್ನುವವರೂ ಇದ್ದಾರೆ. ಆದರೆ ಆಧುನಿಕ ವಿಮರ್ಶೆಯ ದೃಷ್ಟಿಯೇ ಬೇರೆ, ಕಾವ್ಯ ಮೀಮಾಂಸೆಯ ದೃಷ್ಟಿಯೇ ಬೇರೆ. ಆಧುನಿಕ ವಿಮರ್ಶೆ ಪಾಶ್ಚಾತ್ಯ ಸಾಹಿತ್ಯಕ ಸಿದ್ಧಾಂತ ಹಾಗೂ ಐಡಿಯಾಲಜಿಗಳ ಅಡಿಯಲ್ಲಿ ಕೃತಿಯೊಂದನ್ನು ಗ್ರಹಿಸಿ ಅದರಲ್ಲಿ ಲೇಖಕ ಯಾವ ಜಾಡು ಹಿಡಿದಿದ್ದಾನೆ ಹಾಗೂ ಸಿದ್ಧಾಂತ ಅಥವಾ ನಿರ್ದಿಷ್ಟ ಐಡಿಯಾಲಜಿಗೆ ಅದರ ಪಾತ್ರ ಹಾಗೂ ಸನ್ನಿವೇಶಗಳು ಹೇಗೆ ದುಡಿಯುತ್ತವೆ ಎನ್ನುವ ನಿರ್ದಿಷ್ಟ ಚೌಕಟ್ಟಿನೊಳಗಡೆ ವಿಮರ್ಶೆ ನಡೆಯುತ್ತದೆಯಾದರೆ, ಕಾವ್ಯ ಮೀಮಾಂಸೆಯಲ್ಲಿ ಕಾವ್ಯ ರಚನೆ, ಗುಣ ದೋಷ, ಪ್ರಯೋಜನ ಮೊದಲಾದವುಗಳ ಚರ್ಚೆ ಕಾಣಿಸುತ್ತದೆ. ಕನ್ನಡ ನವೋದಯ ಸಂದರ್ಭದ ವಿಮರ್ಶೆ ಕೃತಿಯ ಮಹತ್ತ್ವ, ಮೌಲ್ಯೀಕರಣ, ಭಾಷೆ, ಸೌಂದರ್ಯಾಭಿವ್ಯಕ್ತಿ, ರಸಗಳ ದೃಷ್ಟಿಯಿಂದ ಓದುಗರಲ್ಲಿ ಸಾಹಿತ್ಯಕ ಅಭಿರುಚಿ ಹೆಚ್ಚಿಸುವ ರೀತಿಯಲ್ಲಿದ್ದರೆ ಅನಂತರದ ಪ್ರಗತಿಶೀಲ, ನವ್ಯ, ದಲಿತ-ಬಂಡಾಯಗಳ ಸಂದರ್ಭದಲ್ಲಿ ನಿರ್ದಿಷ್ಟ ಚಿಂತನಾ ಕ್ರಮ (ಐಡಿಯಾಲಜಿ) ಹಾಗೂ ಸಿದ್ಧಾಂತ (ಥಿಯರಿ)ಗಳ ಹಿನ್ನೆಲೆಯಲ್ಲಿ ಕೃತಿಗಳ ಪರಿಶೀಲನೆ ನಡೆಯತೊಡಗಿತು. ಸಮಾಜದಲ್ಲಿರುವ ವಾಸ್ತವವನ್ನು ಕೃತಿ ತೆರೆದಿಡಬೇಕು, ಹುಳುಕುಗಳನ್ನು ಚಿತ್ರಿಸಿ ಸಮಾಜದ ಕನ್ನಡಿಯಂತೆ ಕೆಲಸಮಾಡಬೇಕು, ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ತ್ವದೊರೆಯಬೇಕು, ಸಾಹಿತ್ಯ ಕೃತಿಗಳಿಗೆ ಸಮಾಜ ತಿದ್ದುವ ಜವಾಬ್ದಾರಿಯಿದೆ, ಹೀಗಾಗಿ ಲೇಖಕ ಓದುಗನನ್ನು ನಿರ್ದಿಷ್ಟ ರೀತಿಯಲ್ಲಿ ಸಿದ್ಧಗೊಳಿಸಬೇಕು ಇತ್ಯಾದಿ ದೃಷ್ಟಿಕೋನ ಕಾಣಿಸುವುದು ಈ ಕಾಲಘಟ್ಟದಲ್ಲಿ. ಸಮಾಜ ಸುಧಾರಣೆಯ ಇಂಥ ದೃಷ್ಟಿ ಕುವೆಂಪು, ಕಾರಂತ, ಅನಂತಮೂರ್ತಿ, ತೇಜಸ್ವಿ ಮೊದಲಾದವರಿಂದ ಹಿಡಿದು ಬಹುತೇಕ ಎಲ್ಲ ಕೃತಿಗಳು-ಅದು ಕಾವ್ಯವಿರಲಿ, ಕಾದಂಬರಿಯಿರಲಿ- ಇದೇ ದೃಷ್ಟಿಕೋನವನ್ನು ಒಡಲಲ್ಲಿಟ್ಟುಕೊಂಡಿವೆ.
ನಿರ್ದಿಷ್ಟ ಐಡಿಯಾಲಜಿ ಅಥವಾ ಸಿದ್ಧಾಂತದ ಬೆಂಬಲವಿಲ್ಲದೇ ಕೃತಿ ರಚನೆ ಸಾಧ್ಯವೇ ಇಲ್ಲವೇನೋ ಎನ್ನುವಂಥ ಸಂದರ್ಭದಲ್ಲಿ ಇವುಗಳ ಹಂಗೇ ಇಲ್ಲದ, ಪರಿಚಿತ ಸಮುದಾಯ ಅಥವಾ ಪರಿಸರದ ಕಾಲಾನು ಕ್ರಮ ಬದಲಾವಣೆಯ ಸಹಜ ನಿರೂಪಣೆಯ ಕೃತಿಗಳು ಕಣ್ಣೆದುರೇ ಗತವನ್ನು ಕಟ್ಟಿಕೊಡುವಂತೆ ಬರತೊಡಗದವು. ಹಳ್ಳ ಬಂತು ಹಳ್ಳ, ತಲೆಗಳಿ, ಸ್ವಪ್ನಸಾರಸ್ವತ, ಉಲ್ಲಂಘನೆ ಹಾಗೂ ಮುಖಾಂತರ ಕೃತಿಗಳು ಭಿನ್ನವಾಗುವುದು ಈ ಕಾರಣಕ್ಕೆ.
ಯೂರೋಪಿಯನ್ ವಸಾಹತುಶಾಹಿ ಗ್ರಹಿಸಿ ಕಟ್ಟಿಕೊಟ್ಟ ಭಾರತದ ಸಾಮಾಜಿಕ ಸ್ವರೂಪ ಹಾಗೂ ಯೂರೋಪಿನ ಶಿಕ್ಷಣ ಮಾದರಿಯಲ್ಲಿ ಕಂಡುಕೊಂಡ ವಿಮರ್ಶೆಯಲ್ಲಿ ನಿರ್ದಿಷ್ಟ ಸಿದ್ಧಾಂತ ಹಾಗೂ ಐಡಿಯಾಲಜಿಗಳ ಮೂಲಕ ರೂಪುಗೊಂಡ ನಿರ್ದಿಷ್ಟ ಚೌಕಟ್ಟಿನಲ್ಲೇ ಕೃತಿಯನ್ನು ಗ್ರಹಿಸಲಾಗುತ್ತದೆ. ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ವಿಮರ್ಶೆ ಬೆಳೆದು ಬಂದದ್ದನ್ನು ನೋಡಿದರೆ, ಓದುಗರು ವಿಮರ್ಶೆ ಓದಿಯೇ ಕೃತಿ ಪ್ರವೇಶ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ವಿಮರ್ಶಕ ತನ್ನ ಗ್ರಹಿಕೆಯ ಆಲೋಚನೆಗಳನ್ನು, ಸತ್ಯಾಸತ್ಯತೆ, ನಿಖರತೆಯನ್ನು ಓದುಗರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಾನೆ. ಹೀಗಾಗಿ ನಿರ್ದಿಷ್ಟ ಐಡಿಯಾಲಜಿ ಅಥವಾ ಸಿದ್ಧಾಂತಕ್ಕೆ ಒಳಪಡದ ಕೃತಿಯನ್ನು ಕೈಗೆತ್ತಿಕೊಳ್ಳಲಾರದ ಪರಿಸ್ಥಿತಿ ವಿಮರ್ಶಕನಿಗೆ ಉಂಟಾಗುತ್ತದೆ. ಏಕೆಂದರೆ ಇವುಗಳ ಹೊರತಾಗಿ ಕೃತಿಯನ್ನು ನೋಡಲು ಆತನಿಗೆ ಸಾಧ್ಯವೇ ಆಗುವುದಿಲ್ಲ. ಆದ್ದರಿಂದಲೇ ಯಾವ ಐಡಿಯಾಲಜಿ ಅಥವಾ ಸೈದ್ಧಾಂತಿಕ ಚೌಕಟ್ಟಿನ ಮಿತಿಯನ್ನು ಹೇರಿಕೊಳ್ಳದ ಮುಖಾಂತರದಂಥ ಕೃತಿ ಈ ದೃಷ್ಟಿಯಿಂದ ಮಾತ್ರವೇ ಕೃತಿಯನ್ನು ಗಮನಿಸುವ ವಿಮರ್ಶಕರಿಗೆ ಸವಾಲು ಎಸೆಯುತ್ತವೆ. ಆದರೆ, ಓದುಗನಿಗೆ ಇದು ಸಮಸ್ಯೆಯೂ ಅಲ್ಲ, ಸವಾಲೂ ಅಲ್ಲ! ನಿಜವಾಗಿ ಲೇಖಕ ಕೂಡ ಇಂಥ ಚೌಕಟ್ಟನ್ನು ಪ್ರಜ್ಞಾಪೂರ್ವಕವಾಗಿಯೇ ಹಾಕಿಕೊಳ್ಳಬೇಕಾಗುತ್ತದೆ. ಅದು ಕೃತಕವಾದುದು, ಅಸಹಜವಾದುದು. ಸ್ವತಃ ಮುಖಾಂತರದ ಲೇಖಕರೇ “.....ಒಂದು ಸಿದ್ಧಾಂತಕ್ಕಾಗಿ ಇಲ್ಲವೇ ತಾತ್ತ್ವಿಕ ನೆಲೆಯಲ್ಲಿ ಒಂದು ಕೃತಿಯನ್ನು ಸೃಷ್ಟಿಸುವುದು ಅನೇಕ ಬಾರಿ ಕೃತಕವಾಗುವುದು ಎಂಬ ಎಚ್ಚರ ನನಗಿರುವುದರಿಂದ ಬರೆಯಲು ಹಿಂದೇಟು ಹಾಕಿ ಕುಳಿತೇ ಇದ್ದೆ” (ಪು. ಗಿiii) ಎಂದಿರುವುದನ್ನು ಗಮನಿಸಬೇಕು.
ಇಷ್ಟಾಗಿಯೂ ಮುಖಾಂತರದಲ್ಲಿ ಇಂಥ ಧೋರಣೆ ಅಲ್ಲಲ್ಲಿ ನುಸುಳಿಯೇ ಇಲ್ಲ ಎಂದಿಲ್ಲ. ಬಂಗಾರಣ್ಣನಲ್ಲಿ ಸುಧಾರಣಾವಾದಿಯ ಲಕ್ಷಣಗಳು ಕಾಣುವಂತೆಯೇ ಸಮಕಾಲೀನ ಇಂಗ್ಲಿಷ್ ಶಿಕ್ಷಣ, ಮಾತೃಭಾಷೆಯ ಸ್ಥಿತಿ, ವರ್ಗ ಸಂಘರ್ಷ, ಜಾತಿ ಪರಿಕಲ್ಪನೆ ಮೊದಲಾದ ವಿಷಯಗಳ ಪ್ರಸ್ತಾಪ ಬಂದಾಗ ಲೇಖಕರು ‘ಪ್ರಗತಿಪರ’ತೆಯ ನಿಲುವನ್ನು ಕಾದಂಬರಿಯಲ್ಲಿ ತರುವ ಕೆಲಸ ಮಾಡುತ್ತಾರೆ. ಹಯಗ್ರೀವಾಚಾರ್ಯ ಮತ್ತು ವೆಂಕಪ್ಪಶೆಟ್ಟರ ಪಾತ್ರಗಳು ಕೂಡಿ ಬ್ರಾಹ್ಮಣರ ಮನೆಯಲ್ಲಿ ನಡೆಯುತ್ತಿದ್ದ ಸತ್ಯನಾರಾಯಣ ಪೂಜೆ ಶೂದ್ರರ ಮನೆಯಲ್ಲಿ ನಡೆಯುವಂತೆಯೂ ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿಯೇ ರಚನೆಯಾಗುವಂತೆಯೂ ಮಾಡಿದ್ದು; ಪಾರ್ವತಕ್ಕನಂಥ ದಿಟ್ಟ ಪಾತ್ರಗಳ ನೈಜ ಮಾತು ಲೇಖಕರ ‘ಪ್ರಗತಿಪರತೆಯ’ ಲಕ್ಷಣದಂತೆ ವಿಮರ್ಶಕರಿಗೆ ಅನಿಸುವುದು ಕೂಡ ಇಂಥ ಸೈದ್ಧಾಂತಿಕ ಚೌಕಟ್ಟಿನ ವಿಮರ್ಶೆಯ ನೆಲೆಯಿಂದಲೇ. ಯೂರೋಪಿನ ಶಿಕ್ಷಣ ಚಿತ್ರಿಸಿದ ಭಾರತೀಯ ಸಮಾಜ ಹಾಗೂ ಅದರಲ್ಲಿನ ಜಾತಿ, ವರ್ಗ, ವರ್ಣದ ಪರಿಕಲ್ಪನೆಯ ಹಿನ್ನೆಯಲ್ಲಿ ಕೃತಿಯನ್ನು ನೋಡಿದಾಗ ಮಾತ್ರ ಈ ಬಗೆಯ ಪ್ರಗತಿಪರತೆಯ ಅರಿವಾಗುತ್ತದೆ.
ನಿಜವಾಗಿ ಭಾರತೀಯ ಸಮಾಜದಲ್ಲಿ ಯಾವುದೇ ಸಿದ್ಧಾಂತ ಅಥವಾ ಐಡಿಯಾಲಜಿ ಗೆರೆ ಎಳೆದಂತೆ ಜಾತಿ/ಜನ ಸಮುದಾಯಗಳ ಶ್ರೇಣಿಯನ್ನಾಗಲೀ ಲಕ್ಷಣವನ್ನಾಗಲೀ ಗುರುತಿಸುವುದು ಸಾಧ್ಯವೇ ಇಲ್ಲ. ಸಿದ್ಧಾಂತ ಅಥವಾ ಐಡಿಯಾಲಜಿಯ ಹಂಗಿಲ್ಲದೇ ಮುಖಾಂತರದಲ್ಲಿ ನಿರೂಪಣೆಗೊಳ್ಳುವ ಎಲ್ಲ ಸನ್ನಿವೇಶಗಳಲ್ಲೂ ಇದು ಕಾಣಿಸುತ್ತದೆ. ಉದಾಹರಣೆಗೆ: ಸುರಂಗದೊಳಗೆ ಸಿಕ್ಕು ದುರಂತ ಸಾವು ಕಂಡ ತಿರುಮಲೇಶ ಭಟ್ಟರು ಹಾಗೂ ಅದ್ರಾಮರ ಮರಣದ ಕಾರಣ ತಿಳಿಯಲು ಪಾರ್ವತಕ್ಕ ಆರೂಢ ಪ್ರಶ್ನೆ ಕೇಳಿ, ಅವರು ಸತ್ತ ಸ್ಥಳದಲ್ಲಿ ಮದ್ಯ ಮಾಂಸ ಬೇಡುವ ದುರ್ಗಾಶಕ್ತಿ ಇದ್ದು ವರ್ಷಕ್ಕೊಮ್ಮೆ ಇವನ್ನು ನೈವೇದ್ಯವಾಗಿ ಅರ್ಪಿಸಿ ಅದನ್ನು ಸೇವಿಸಬೇಕು ಎಂಬ ಪರಿಹಾರ ಕಾಣಿಸಿದಾಗ ಅದರಂತೆ ನಡೆದುಕೊಳ್ಳುವುದು ಹೇಗೆ ಎಂದು ಚಿಂತಾಕ್ರಾಂತಳಾಗುತ್ತಾಳೆ. ಆಗ ರಾಮಭಟ್ಟರು ಆಟಿ ಅಮಾವಾಸ್ಯೆಯಲ್ಲಿ ಹಾಳೆಮರದ ತೊಗಟೆಯ ರಸವನ್ನು ವರ್ಷಕ್ಕೊಮ್ಮೆ ಶಾಸ್ತ್ರಕ್ಕೆಂದು ಕುಡಿಯುವುದಿಲ್ಲವೇ ಹಾಗೇ ಇದನ್ನೂ ಮಾಡುವುದು ಎಂದು ಒಪ್ಪಿಸುವ ರೀತಿಯಲ್ಲಿ ಹಾಗೂ ಈ ಕೆಲಸಕ್ಕೆ ಕ್ರಿಶ್ಚಿಯನ್ ಸಮುದಾಯದ ಜನ ಕೂಡ ಅನುಕೂಲ ಮಾಡಿಕೊಡುವ ಹಾಗೂ ಇಂಥದ್ದನ್ನು ಪರಂಪರೆಯ ಬೆಂಬಲದಿಂದ ಸಮರ್ಥಿಸುವುದನ್ನು (ಪು.234-37) ಗಮನಿಸಿದಾಗ ವಿವಿಧ ಸಮುದಾಯಗಳು ಆಚರಣೆಗೆ ಕೊಡುವ ಮಹತ್ತ್ವವನ್ನು ಮಾತ್ರವಲ್ಲದೇ ಭಾರತೀಯ ಸಮಾಜದಲ್ಲಿ ಸಮುದಾಯಗಳು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವ ವಿಶಿಷ್ಟ ರೀತಿ ಅರಿವಾಗುತ್ತದೆ.
ಮುಖಾಂತರ ಕೃತಿಯಲ್ಲಿ ಒಂದು ಸಿದ್ಧಾಂತ ಅಥವಾ ತಾತ್ತ್ವಿಕ ನೆಲೆಯಲ್ಲಿ ಅಂಟಿಕೊಳ್ಳಬಾರದೆಂಬ ನಿಲುವಿದ್ದೂ ಅಲ್ಲಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಂಥ ಸಂಗತಿಗಳು ನುಸುಳಿರುವುದು ವಿಮರ್ಶಕರು ಪ್ರಮುಖವಾಗಿ ಮೂರು ರೀತಿಯಲ್ಲಿ ಕೃತಿಯನ್ನು ಗಮನಿಸುವಂತೆ ಮಾಡಿದೆ.
ಒಂದು ನರಹಳ್ಳಿಯವರು ಹೇಳುವಂತೆ “ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ, ಜಾಗತೀಕರಣದ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗಸಂಘರ್ಷ, ಅನಿಯಂತ್ರಿತ ಆಕರ್ಷಣೆಯ ಸ್ವರೂಪ, ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿರುವ ‘ಮುಖಾಂತರ’ ನಿಸ್ಸಂದೇಹವಾಗಿ ಕನ್ನಡದ ಮುಖ್ಯ ಕಾದಂಬರಿಗಳ ಸಾಲಿಗೆ ಸೇರುತ್ತದೆ” ಅನ್ನುವುದು.
ಇನ್ನೊಂದು ಸುಬ್ರಾಯ ಚೊಕ್ಕಾಡಿಯವರು ಗುರುತಿಸುವಂತೆ “ಕಾದಂಬರಿಯ ಎರಡನೇ ಭಾಗದ ಬರವಣಿಗೆ ಸ್ವಲ್ಪ ಸಡಿಲವಾಗಿದೆ ಹಾಗೂ ಇಲ್ಲಿ ಮೊದಲ ಭಾಗದಲ್ಲಿ ಕಾಣಿಸುವ ಏಕಾಗ್ರತೆ, ಮುಕ್ತ ಸ್ವೀಕರಣ ಮನೋಭಾವ ಅಷ್ಟಾಗಿ ಕಾಣಿಸುತ್ತಿಲ್ಲ ಎಂದು ಹೇಳಬೇಕಾಗುತ್ತದೆ. ಮೊದಲ ಭಾಗದ ಬದುಕು ಕಳೆದು ಹೋದದ್ದಾಗಿದ್ದು, ಲೇಖಕರಿಗೂ, ಅಲ್ಲಿನ ಬದುಕಿಗೂ ಸಾಕಷ್ಟು ಅಂತರವಿರುವುದರಿಂದ ಅದನ್ನು ನಿರ್ಮಮವಾಗಿ ನೋಡಲು ಮೊಗಸಾಲೆಯವರಿಗೆ ಸಾಧ್ಯವಾಗಿದೆ. ಅಲ್ಲದೆ ಈಗಾಗಲೇ ಹೇಳಿರುವಂತೆ ಆ ಜಗತ್ತಿನ ಅಲ್ಲಿನ ಆಗುಹೋಗುಗಳ ವ್ಯಾಪ್ತಿ ಚಿಕ್ಕದು. ಆದರೆ ಈ ಭಾಗದ ಜಗತ್ತು ಇಲ್ಲಿನ ಆಗು ಹೋಗುಗಳ, ಎದುರಾಗುವ ವಿಚಾರಗಳ ವ್ಯಾಪ್ತಿ ದೊಡ್ಡದು. ಸ್ವಾತಂತ್ರ್ಯ ಚಳವಳಿ, ಇಂಗ್ಲಿಷ್ ವಿದ್ಯಾಭ್ಯಾಸ, ಗಾಂಧೀವಾದ, ನಾಗರಿಕತೆಯ ಹೊಸಹೊಸ ರೂಪಗಳು, ಜಾಗತೀಕರಣ, ಕನ್ನಡ ಭಾಷೆಗೆ ಬಂದ ಕುತ್ತು, ಶಾಲೆಗಳ ದುರವಸ್ಥೆ....... ಹೀಗೆ ಹತ್ತು ಹಲವು ವಸ್ತುಗಳನ್ನು ಈ ಗಾತ್ರದಲ್ಲಿ ಚಿಕ್ಕದಾಗಿರುವ ಈ ಭಾಗವು ಒಳಗೊಂಡಿದ್ದು ಕ್ರಮಿಸಬೇಕಾದ ಕ್ರಿಯಾಜಗತ್ತು ದೊಡ್ಡದಾಗಿದೆ. ಅಲ್ಲದೆ ಈ ಜಗತ್ತು ಸಮಕಾಲೀನ ಜಗತ್ತು ಆಗಿರುವ ಕಾರಣ, ಲೇಖಕರಿಗೂ ಕಾದಂಬರಿಯ ಈ ಭಾಗದ ಜಗತ್ತಿಗೂ ಇರುವ ಅಂತರ ಕಡಿಮೆಯಾಗಿ ಸ್ವಂತದ ಆಸಕ್ತಿ ಲೇಖಕರಿಗೆ ತಿಳಿಯದೇನೇ ನುಸುಳಿಕೊಂಡು ಬರವಣಿಗೆಯ ಮೇಲೆ ಪ್ರಭಾವ ಬೀರಿ ಬಿಡುತ್ತದೆ. ಸಮಕಾಲೀನವಾದದ್ದನ್ನೆಲ್ಲ ಹಿಡಿದಿಡಬೇಕೆನ್ನುವ ಹುಮ್ಮಸ್ಸಿನಲ್ಲಿ ಬರವಣಿಗೆ ಸ್ವಲ್ಪ ಆಳ್ಳಕವಾಗಿ ಬಿಟ್ಟಂತೆ ಅನಿಸುತ್ತದೆ. ಮೊದಲ ಭಾಗದಲ್ಲಿನ ತನ್ಮಯತೆ, ಏಕಾಗ್ರತೆ, ಈ ಭಾಗದಲ್ಲಿ ಕೊಂಚ ಭಂಗವಾಯಿತೇನೋ ಅಂತ ಅನಿಸುತ್ತದೆ” ಅನ್ನುವುದು.
ಮತ್ತೊಂದು, ಕಾದಂಬರಿಯಲ್ಲಿನ ಈ ದೃಷ್ಟಿಯನ್ನು ಇನ್ನೊಂದು ರೀತಿಯಲ್ಲಿ ಅಂದರೆ ಸದ್ಯದ ವಿಮರ್ಶಕರ ಸಾಮಾನ್ಯ ನಿರೀಕ್ಷೆಯ ಹಿನ್ನೆಲೆಯಲ್ಲಿ ನೋಡಿದಾಗ ಬೇರೆ ರೀತಿಯಲ್ಲಿ ಕಾಣಿಸುವುದು. ಕುಮಾರ ಚಲ್ಯ ಅವರು ಕಾದಂಬರಿಯ ಎರಡನೆಯ ಭಾಗದ ಮಹತ್ತ್ವದ ಬಗ್ಗೆ ಹೀಗೆ ಹೇಳುತ್ತಾರೆ: “ಈ ನಡುವೆಯೂ ಭಾಷೆ, ಶಿಕ್ಷಣ ಮತ್ತು ಭೂಸುಧಾರಣೆ ಇತ್ಯಾದಿಗಳ ಬಗ್ಗೆ ಲೇಖಕರು ಎತ್ತುವ ಪ್ರಶ್ನೆಗಳು ಸಮಕಾಲೀನ ಸಾಮಾಜಿಕ, ರಾಜಕೀಯ ಇಬ್ಬಂದಿತನವನ್ನು ಬಯಲಿಗೆಳೆಯುತ್ತವೆ : ‘ಈ ಸ್ವಾತಂತ್ರ್ಯ ಹೋರಾಟಗಾರರನ್ನೆಲ್ಲ ಆಗಲೇ ನಾವು ಮರೆತು ಬಿಟ್ಟಾಗಿದೆ. ಅಲ್ಲೊಬ್ಬ ಇಲ್ಲೊಬ್ಬರಿಗೆ ಸರಕಾರದಿಂದ ಒಂದಿಷ್ಟು ಮಾಸಾಶನವೋ ಜಮೀನೋ ಈ ನೆಪದಲ್ಲಿ ಮಂಜೂರಾಗಬಹುದಾದರೂ ಅವುಗಳಲ್ಲಿ ಹೆಚ್ಚಿನದನ್ನು ಕಬಳಿಸಿದ್ದು ಅಪಾತ್ರರೇ... ಅಲ್ಲದೆ ನಮ್ಮ ನಡುವೆ ಇರುವ ರಾಜಕಾರಣಿಗಳಿಗೆ ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಸಾಧನೆ ಏನು ಎನ್ನುವುದನ್ನು ತಿಳಿಯುವ ಮನಸ್ಸೂ ಇಲ್ಲ ಅಂದ ಮೇಲೆ ಗೌರವದ ಮಾತಂತೂ ದೂರವೇ” (ಪು.530). ಕಾದಂಬರಿಯ ಹಲವು ಕಡೆ ಬರುವ ಈ ಬಗೆಯ ವಾಕ್ಯ ಸರಣಿಗಳು, ಒಂದು ಕಲಾತ್ಮಕ ಕಥನ ಎಷ್ಟರ ಮಟ್ಟಿಗೆ ಉತ್ತಮ ಸಮಾಜ ವಿಮರ್ಶೆಯಾಗಬಹುದು ಎಂಬುದನ್ನು ಸಾಬೀತು ಪಡಿಸುತ್ತವೆ. ಪಾತ್ರಗಳ ಮುಖಾಂತರವೇ ಅಂದಂದಿನ ಆಗುಹೋಗುಗಳನ್ನು ಪ್ರಚುರಪಡಿಸುವ (Pಡಿoಠಿಚಿgಚಿಣe) ಕ್ರಮ ಕಾದಂಬರಿಯ ಹೆಚ್ಚುಗಾರಿಕೆಯಾಗಿದೆ”.
ಈ ಕಾದಂಬರಿಯ ದೀರ್ಘ ಸ್ವರೂಪದ, ಸಮಗ್ರ ವಿವರ ನೀಡುವ ಜನಪದ ವಿವರದಂತೆ ಕಾಣಿಸುವ ಶೈಲಿಯನ್ನು ಕೆಲವರು ನ್ಯಾಚುರಲಿಸಮ್ ಎಂದು ಗುರುತಿಸಲು ಯತ್ನಿಸಿದ್ದರೆ, ನರಹಳ್ಳಿಯವರು ‘ನಿಧಾನಶ್ರುತಿ’ ಯ ಕಥನ ಎಂದು ಕರೆದಿದ್ದಾರೆ.
ಇಷ್ಟಾದರೂ “ವಿಮರ್ಶೆ”ಯಿಂದ ಕೃತಿಯೊಂದರ ಒಳ ಹೊರಗು ಹಾಗೂ ಸೂಕ್ಷ್ಮಗಳೆಲ್ಲ ಹೊರಬೀಳುವುದಿದ್ದರೆ ವಿಮರ್ಶಕರೆಲ್ಲರ ಬಹುಪಾಲು ಅಭಿಪ್ರಾಯ ಒಂದೇಬಗೆಯಾಗಿರಬೇಕಿತ್ತು. ಹಾಗಾಗಲಾರದು ಎಂಬುದನ್ನು ಮುಖಾಂತರ ಕೃತಿಯನ್ನು ಕುರಿತ ವಿವಿಧ ಲೇಖನಗಳು ತೋರಿಸುತ್ತವೆ.
ಒಳಗಿನ ಲೇಖನಗಳು ಹೇಳುವಂತೆ, ಸಾಹಿತ್ಯ ಕೃತಿಗಳು ನಿಜ ಜೀವನದ ಅನುಭವಗಳಿಂದಲೇ ರೂಪುಗೊಂಡರೂ ಕಾವ್ಯ-ಕಾದಂಬರಿಗಳು ಈ ಸುತ್ತಮುತ್ತಲಿನ ಜಗತ್ತಿನ ಸೌಂದರ್ಯದ, ಮನುಷ್ಯನ ನಡಾವಳಿಯ ಬಗೆಗಿನ ರೂಪಕಗಳಾಗುತ್ತವೆಯೇ ವಿನಃ ಯಾವುದೋ ನೈಜ ಘಟನೆಯ ಅಂಕಿ-ಅಂಶ, ಸತ್ಯಾಸತ್ಯತೆಗಳ ಬಗ್ಗೆ ಇರುವ ವಿಶ್ಲೇಷಣೆಯಾಗುವುದಿಲ್ಲ. ಮೇಲಾಗಿ ಕೃತಿಕಾರನಿಗೆ ಇದು ತನ್ನ ವೈಯಕ್ತಿಕ ಅನುಭವಗಳ ಕಲ್ಪನೆಯ ಕೂಸು ಮತ್ತು ಇದು ಓದುಗರಿಗೂ ಸಹ ಸಂಪೂರ್ಣವಾದ ವೈಯಕ್ತಿಕ ಅನುಭವ.
ಮುಖಾಂತರ ಕಾದಂಬರಿ ಕೇವಲ ವಿವರಣೆಯಲ್ಲ; ಸಮುದಾಯಗಳ ಊಟತಿಂಡಿಗಳ, ಕೆಲಸ ವಿಶ್ರಾಂತಿಗಳ, ಪೂಜೆ ಪುನಸ್ಕಾರಗಳ, ಶುಭಾಶುಭ ಕಾರ್ಯಕ್ರಮಗಳ ದಾಖಲೀಕರಣ ಇಲ್ಲಿ ನಡೆದಿದೆ. ಕಾದಂಬರಿ ಪ್ರಕಾರ ಇಂತಹ ಆಚರಣಾ ಸಂಸ್ಕøತಿಯ ದಾಖಲೀಕರಣಕ್ಕಾಗಿಯೂ ಮಾನವ ಜನಾಂಗದ ಪ್ರಮುಖ ಸಾಧನವಾಗಿದೆ ಎನ್ನುವುದಕ್ಕೆ ಮೊಗಸಾಲೆಯವರ ಎರಡು ಬೃಹತ್ ಕಾದಂಬರಿಗಳು ಉದಾಹರಣೆಗಳಾಗಿವೆ ಎನ್ನುವುದನ್ನು ಇಲ್ಲಿ ಸಾಂದರ್ಭಿಕವಾಗಿ ಗಮನಿಸಬಹುದು. ಈ ಎಲ್ಲ ಹಿನ್ನೆಲೆಯಿಂದ ಈ ಬಗೆಯ ಕೃತಿಗಳನ್ನು ವಿಮರ್ಶಿಸುವ, ಯೂರೋಪಿಯನ್ ಸಾಹಿತ್ಯ ಸಿದ್ಧಾಂತ, ಐಡಿಯಾಲಜಿಗಳಿಗೆ ಹೊರತಾದ ಮಾನದಂಡ ನಮ್ಮಲ್ಲೇ ರೂಪುಗೊಳ್ಳಬೇಕಾದ ಅಗತ್ಯವಿದೆ ಅನಿಸುತ್ತದೆ. ಮುಖಾಂತರದಂಥ ಕೃತಿಗಳ ಸೃಷ್ಟಿ ಹೆಚ್ಚಿದಷ್ಟೂ ಇಂಥ ಕೃತಿಗಳನ್ನು ಗಮನಿಸುವ ಅಕಡೆಮಿಕ್ ದೃಷ್ಟಿ ಭಿನ್ನವಾಗುತ್ತ, ಹೊಸ ವಿಮರ್ಶಾ ನೋಟವೊಂದು ಕಾಣಿಸುವ ಸಂಭವವಿದೆ. ಅಂಥ ಜರೂರು ಕೂಡ ವಸಾಹತೋತ್ತರ ಚಿಂತನೆಯ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಪ್ರಸ್ತುತ ಸಂಕಲನ ಬಯಸುತ್ತಿರುವುದೂ ಇಂಥ ಬೆಳವಣಿಗೆಯನ್ನೇ ಆಗಿದೆ.
ಈ ಸಂಕಲನದಲ್ಲಿ ಒಟ್ಟೂ 29 ಲೇಖನಗಳಿದ್ದು ಇವೆಲ್ಲ ಮುಖಾಂತರದ ವಿಭಿನ್ನ ಮುಖಗಳನ್ನು ಹಿಡಿದಿಟ್ಟಿವೆ. ಹೀಗಾಗಿಯೇ ಈ ಸಂಕಲನಕ್ಕೆ ‘ವಿಭಿನ್ನ ಆಯಾಮಗಳ ಮುಖಾಂತರ’ ಎಂದು ಹೆಸರಿಸಲಾಗಿದೆ. ನಾಗಣ್ಣನವರ ಒಂದು ಇಂಗ್ಲಿಷ್ ಲೇಖನ ಕೂಡ ಸೇರಿದೆ. ಇಲ್ಲಿ ಯುವಕರಿಂದ ಹಿಡಿದು ಆಮೂರರಂಥ ಹಿರಿಯ ವಯೋಮಾನದ ಲೇಖಕರು ಬರೆದ ಲೇಖನಗಳಿವೆ. ಪಾರ್ವತಕ್ಕನಂಥ ಹೆಣ್ಣಿನ ಪಾತ್ರವಿದ್ದೂ ನನ್ನತ್ತೆ, ಪತ್ನಿಯಂತೆ ಈ ಕಾದಂಬರಿ ಅವರನ್ನು ಅಷ್ಟು ತಟ್ಟಿಯೂ ಯಾವೊಬ್ಬ ಲೇಖಕಿಯೂ ಮುಖಾಂತರ ಕುರಿತು ಬರೆಯದಿರುವ ಕೊರತೆ ಇದರಲ್ಲಿದೆ. ಕಾಲಾವಕಾಶ ಇದ್ದರೆ ಬರೆದುಕೊಡುವ ಇನ್ನೂ ಅನೇಕರು ಸಿದ್ಧವಾಗಿದ್ದರು. ಆದರೆ ಕಾಲಮಿತಿ ಇದಕ್ಕೆ ಅವಕಾಶ ಕೊಡುತ್ತಿಲ್ಲ.
ಲೇಖನಗಳನ್ನು ಲೇಖಕರ ಹೆಸರಿನ ಇಂಗ್ಲಿಷ್ ಅಕಾರಾದಿಯಲ್ಲಿ ನೀಡಲಾಗಿದೆ. ನನಗೆ ಈ ಅವಕಾಶ ಕೊಟ್ಟ ಮೊಗಸಾಲೆಯವರಿಗೆ, ಸಂಪಾದನೆಯ ಎಲ್ಲ ಹಂತಗಳಲ್ಲೂ ನೆರವಾದ ಹಿರಿಯ ವಿದ್ವಾಂಸ ಮಿತ್ರ ಪದ್ಮಪ್ರಸಾದರಿಗೆ, ನನ್ನ ಕುಟುಂಬದ ಎಲ್ಲರಿಗೆ ನೆನಕೆಗಳು.
No comments:
Post a Comment