Saturday, 22 January 2022

ಮಾಧ್ಯಮದಲ್ಲಿ ಭಾಷಾಂತರ: ಪ್ರಾಯೋಗಿಕ ಸಮಸ್ಯೆಗಳು

ಭಾಷಾಂತರ ಎಂಬುದು ಒಂದು ಕಲೆ. ಅದು ಮೂಲ ಕೃತಿಯನ್ನು ರಚಿಸುವುದಕ್ಕಿಂತಲೂ ಒಂದು ಹೆಜ್ಜೆ ಕಠಿಣ ಎಂಬ ಮಾತು ಮಾಧ್ಯಮಗಳಲ್ಲಿ ಭಾಷಾಂತರ ಮಾಡುವವರ ಎಲ್ಲರ ಅನುಭವಕ್ಕೂ ಬರುತ್ತದೆ. 

ಮಾಧ್ಯಮ ಇಂದಿನ ದಿನಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಅಷ್ಟೇ ಏಕೆ ಕೃಷಿ, ಕೌಶಲ ಕ್ಷೇತ್ರಗಳಲ್ಲಿ ಕೂಡ ಮಾಧ್ಯಮ ಅಪಾರ ಪ್ರಭಾವ ಬೀರುತ್ತಿದೆ. ಇದಕ್ಕೆ ಕಾರಣ ಜನ ಮಾನಸವನ್ನು ತನ್ನತ್ತ ಸೆಳೆಯುವ ಮಾಧ್ಯಮದ ಆಕರ್ಷಣೆ.

ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳನ್ನು ಗುರುತಿಸಲಾಗುತ್ತದೆ. ಜನಪದ ಸಂವಹನ ವಿಧಾನ ಮೌಖಿಕ ಸ್ವರೂಪದ್ದಾಗಿದೆ. ಆದ್ದರಿಂದ ಇದನ್ನು ಬೇರೆಯಾಗಿಯೇ ನೋಡಲಾಗುತ್ತದೆ.

ಯಾವುದೇ ವಿಷಯವನ್ನು ಗ್ರಹಿಸುವಾಗ ವ್ಯಕ್ತಿಯ ಮನದಲ್ಲಿ ಮಾತೃಭಾಷೆಯಲ್ಲೇ ಅದರ ಅರ್ಥ ಸಂಸ್ಕರಣೆಯ ಪ್ರಕ್ರಿಯೆ ನಡೆಯುತ್ತದೆ. ರವೀಂದ್ರನಾಥ ಟಾಗೋರ್, ಗಾಂಧೀಜಿಯವರು ಕೂಡ ಇದನ್ನೇ ಹೇಳಿರುವುದು. ಮಾತೃಭಾಷೆಯಲ್ಲೇ ಶಿಕ್ಷಣ ನಡೆಯಬೇಕೆಂದು ಕುವೆಂಪು ಅವರು ಬಲವಾಗಿ ಪ್ರತಿಪಾದಿಸಿದ್ದೂ ಇದೇ ಕಾರಣದಿಂದ. ಹೀಗಾಗಿ ಯಾವುದೇ ಸಂಗತಿಯನ್ನು ಜನತೆಗೆ ತಿಳಿಸುವಾಗ ಅವರ ಭಾಷೆಯಲ್ಲೇ ತಿಳಿಸುವುದು ಅನಿವಾರ್ಯ ಎಂಬುದನ್ನು ಮಾಧ್ಯಮಗಳು ಚೆನ್ನಾಗಿ ತಿಳಿದಿವೆ. ಮಾಧ್ಯಮಗಳ ಅಸ್ತಿತ್ವ ಇರುವುದೇ ಜನತೆಗೆ ಸ್ವೀಕರಣೆಯಲ್ಲಿ. 

ದೇಶ, ವಿದೇಶಗಳ ಸುದ್ದಿಯನ್ನು ತಲುಪಿಸಲು ಹುಟ್ಟಿಕೊಂಡ ಮಾಧ್ಯಮ ಇಂದು ಮಾನವ ಸಾಧನೆಯ ಕ್ಷೇತ್ರದ ಎಲ್ಲ ಆಯಾಮಗಳನ್ನೂ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡಿದೆ. ಅಲ್ಲದೇ ಮಾಧ್ಯಮವಿಲ್ಲದೇ ಯಾವ ಸಂಗತಿಯೂ ಜನರನ್ನು ತಲುಪದ ಸ್ಥಿತಿ ಇಂದು ಉಂಟಾಗಿದೆ. 

ಮುದ್ರಣವಿರಲಿ, ವಿದ್ಯುನ್ಮಾನವಿರಲಿ ಎಲ್ಲ ಬಗೆಯ ಮಾಧ್ಯಮಕ್ಕೂ ಇಂದು ಭಾಷಾಂತರ ಅನಿವಾರ್ಯ. ಪ್ರಪಂಚದ ಎಲ್ಲ ಭಾಗಗಳಲ್ಲೂ ತಮ್ಮ ಪ್ರತಿನಿಧಿಗಳನ್ನು ಇಡಲಾಗದ ಕಾರಣ ಅವು ಹಲವಾರು ಏಜನ್ಸಿಗಳ ಮೂಲಕ ಮಾಹಿತಿಯನ್ನು ತರಿಸಿಕೊಳ್ಳುತ್ತವೆ, ಸ್ಥಳೀಯ ಭಾಷೆಗೆ ಅವುಗಳನ್ನು ಭಾಷಾಂತರ ಮಾಡಿಕೊಳ್ಳುತ್ತವೆ.

ಇಂಥ ಸಂದರ್ಭದಲ್ಲಿ ಮಾಧ್ಯಮಗಳು ಅನೇಕ ಸವಾಲುಗಳನ್ನು ಎದುರಿಸುತ್ತವೆ. ಇವುಗಳನ್ನು ಮುಖ್ಯವಾಗಿ ಹೀಗೆ ಗುರುತಿಸಬಹುದು:

1. ಆಯಾ ಭಾಷೆಗಳ ಜಾಯಮಾನದ ಗ್ರಹಿಕೆ

2. ಆಯಾ ಭಾಷಿಕ ಸಂಸ್ಕøತಿಗಳ ಆಳವಾದ ಅರಿವು

3. ಭಾಷಿಕ ವಿದ್ಯಮಾನ ಮತ್ತು 

4. ಪದ ಪ್ರಯೋಗದ ಸಂದರ್ಭ

 ಮಾಧ್ಯಮಗಳಲ್ಲಿ ಭಾಷಾಂತರ ಮಾಡುವಾಗ ಈ ಸಂಗತಿಗಳು ಅಲಕ್ಷಿತವಾದಲ್ಲಿ ಆಭಾಸಗಳು ಉಂಟಾಗುತ್ತವೆ. ಇಲ್ಲವಾದಲ್ಲಿ ಭಾಷಾಂತರವೇ ಸಮಸ್ಯೆಯನ್ನು ಉಂಟುಮಾಡುತ್ತದೆ. ಈಚೆಗೆ ತಸ್ಲೀಮಾ ನಸ್ರೀನರ ಲೇಖನವೊಂದನ್ನು ಕನ್ನಡದ ಪ್ರಸಿದ್ಧ ಪತ್ರಿಕೆಯೊಂದು ಅನುವಾದಿಸಿ ಪ್ರಕಟಿಸಿದಾಗ ಉಂಟಾದ ಗಲಾಟೆಗೆ ಕೆಟ್ಟ, ಅರ್ಥ ಗ್ರಹಿಸದ ಅನುವಾದವೇ ಕಾರಣ ಎಂಬುದು ಎಲ್ಲರಿಗೂ ತಿಳಿದ ಸಂಗತಿ. 

ಇಂಥ ಸಂದರ್ಭದಲ್ಲಿ ಸೋರ್ಸ್ ಲಾಂಗ್ವೇಜ್ ಮತ್ತು ಟಾರ್ಗೆಟ್ ಲಾಂಗ್ವೇಜ್ ಎರಡರಲ್ಲೂ ಅನುವಾದಕನಿಗೆ ಹಿಡಿತ ಇರಬೇಕಾಗುತ್ತದೆ.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಕನ್ನಡದಲ್ಲಿ ಮೂಲ ಇಂಗ್ಲಿಷ್ ಪತ್ರಿಕೆಯ ಸ್ವರೂಪ, ವಿನ್ಯಾಸವುಳ್ಳ ಪತ್ರಿಕೆಯನ್ನು ಎರಡು ವರ್ಷ ಹೊರತಂದು ನಿಲ್ಲಿಸಿತು. ಇದು ನಿಂತಿದ್ದಕ್ಕೆ ಭಾಷಾಂತರವಲ್ಲ, ವ್ಯಾವಹಾರಿಕ ಸಮಸ್ಯೆ ಕಾರಣ. ಈ ಪತ್ರಿಕೆ ಇಂಗ್ಲಿಷ್ ಪತ್ರಿಕೆಯ ನೆರಳು, ಕನ್ನಡತನ ಇದರಲ್ಲಿ ಇಲ್ಲ ಎಂದು ಹಲವರು ವರಾತ ತೆಗೆದಿದ್ದರು. ತಟ್ಟನೆ ನೋಡಿದ ಕೂಡಲೇ ಹಾಗೇ ಅನಿಸುತ್ತಿತ್ತು. ಮುಖಪುಟ, ಸಂಪಾದಕೀಯ ಪುಟಗಳಲ್ಲಿ ಇಂಗ್ಲಿಷ್‍ನ ಅಂದಿನ ಆವೃತ್ತಿಯ ಯಥಾವತ್ ಆದರೆ ಕನ್ನಡ ಜಾಯಮಾನದ ಅನುವಾದ ಇರುತ್ತಿತ್ತು. ದೇಶ, ವಿದೇಶ, ಕ್ರೀಡೆ, ಅಂತಾರಾಷ್ಟ್ರೀಯ ಸಂಬಂಧ, ರಾಜಕೀಯ, ರಕ್ಷಣಾ ವಿಷಯಗಳ ವಿಶ್ಲೇಷಣೆ ಅದರಲ್ಲಿ ವಿಶೇಷವಾಗಿ ಇರುತ್ತಿತ್ತು. ಎಂ ಜೆ ಅಕ್ಬರ್, ಪಾರ್ಥಸಾರಥಿ, ಬೋರಿಯಾ ಮಜುಂದಾರ್, ಸ್ವಾಮಿನಾಥನ್ ಅಂಕ್ಲೇಸರಿಯಾ ಅಯ್ಯರ್, ಸ್ವಪನ್ ದಾಸ್ ಗುಪ್ತಾ, ಶಶಿ ತರೂರ್, ನೊಬಲ್ ಪುರಸ್ಕøತ ಅರ್ಥಶಾಸ್ತ್ರಜ್ಞ ಪಾಲ್ ಕ್ರಗ್‍ಮನ್ ಮೊದಲಾದ ಘಟಾನುಘಟಿಗಳು ಬರೆಯುವ ಇಂಥ ಎಲ್ಲ ವಿಷಯಗಳು ಕನ್ನಡದಲ್ಲಿ ಜನತೆಗೆ ಲಭ್ಯವಾಗುತ್ತಿತ್ತು. ಬೇರೆ ಯಾವ ಕನ್ನಡದ ಪತ್ರಿಕೆಯಲ್ಲೂ ಸಿಗದ ಸುದ್ದಿಯಷ್ಟೇ ಅಲ್ಲದ ವಿಶ್ಲೇಷಣಾತ್ಮಕ ಬರಹಗಳು ಅದರಲ್ಲಿ ಇದ್ದವು. ಕೆಲವೊಮ್ಮೆ ಕನ್ನಡಕ್ಕೆ ಒಗ್ಗದ ಅಮೆರಿಕ ಮತ್ತು ಯೂರೋಪಿನ ಸಮಾಜದ ವಿದ್ಯಮಾನಗಳನ್ನು ಕೈಬಿಟ್ಟು ಕನ್ನಡದ ಸಮಸ್ಯೆಗಳನ್ನು ಸ್ಥಳೀಯ ವಿದ್ವಾಂಸರಿಂದ ಬರೆಯಿಸಿ ಆ ಜಾಗದಲ್ಲಿ ಹಾಕಲಾಗುತ್ತಿತ್ತು. ಜನರಿಗೂ ಇದು ಇಷ್ಟವಾಯಿತು. ಆದರೆ ಕೇವಲ ಬೆಂಗಳೂರನ್ನು ಮಾತ್ರ ಸೀಮಿತವಾಗಿಟ್ಟುಕೊಂಡ ಕಾರಣ ನಿರೀಕ್ಷಿತ ಮಟ್ಟದಲ್ಲಿ ಪ್ರತಿಗಳ ಮಾರಾಟ, ಜಾಹೀರಾತು ದೊರೆಯದ ಕಾರಣ ಸಂಸ್ಥೆ ಪತ್ರಿಕೆಯನ್ನು ಬೇರೆ ಸ್ವರೂಪದಲ್ಲಿ ತರಲು ನಿರ್ಧರಿಸಿತು. ಈಗ ಅದು ವಿಜಯ ನೆಕ್ಸ್ಟ್ ಹೆಸರಿನಲ್ಲಿ ಕನ್ನಡದಲ್ಲಿ ಹೊಸಬಗೆಯ ಸಾಪ್ತಾಹಿಕವಾಗಿ ಹೊರಬರುತ್ತಿದೆ. ಅದಿರಲಿ. 

ಟೈಮ್ಸ್ ಆಫ್ ಇಂಡಿಯಾ ಕನ್ನಡ ಆವೃತ್ತಿ ತರುವಾಗ ಪತ್ರಿಕೆಯ ಹೆಸರು ಕೂಡ ಲಿಪ್ಯಂತರ ಮಾತ್ರವೇ ಆಗಿತ್ತು. ಹೀಗಾಗಿ ಜನರಿಗೆ ಮೂಲ ಇಂಗ್ಲಿಷ್ ಪತ್ರಿಕೆ ಓದಿದರಾಯಿತು, ಮತ್ತೆ ಇದೇಕೆ ಕಾಪಿ ಪತ್ರಿಕೆ ಎಂಬ ಭಾವನೆ ಸಹಜವಾಗಿ ಉಂಟಾಗಿತ್ತು. ಸ್ಥಳೀಯ ಭಾಷೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿ ಪ್ರಕಟಿಸುವ ಎಲ್ಲ ಪತ್ರಿಕೆಗಳೂ ಅನುವಾದವನ್ನೇ ಮಾಡಿಕೊಳ್ಳುತ್ತವೆ. ಪ್ರಜಾವಾಣಿಗೂ ಆಫ್ರಿಕದ ಸುದ್ದಿ ಕನ್ನಡದಲ್ಲೇನೂ ಬರುವುದಿಲ್ಲ. ಎಲ್ಲ ಪತ್ರಿಕೆಗಳೂ ಸುದ್ದಿಯನ್ನು ಏಜನ್ಸಿಗಳಿಂದ ಪಡೆದು ಭಾಷಾಂತರ ಮಾಡಿಕೊಳ್ಳುತ್ತವೆ. ಸಾಮಾನ್ಯವಾಗಿ ಏಜನ್ಸಿಗಳಿಂದ ಬರುವ ಸುದ್ದಿ ಇಂಗ್ಲಿಷ್‍ನಲ್ಲಿ ಇರುವುದರಿಂದ ಅದರ ಉದಾಹರಣೆಯೇ ಹೆಚ್ಚಿದೆ ಅಷ್ಟೆ. ಈ ಭಾವನೆ ಹೋಗಲು ಶುರುವಾದ ಹೊತ್ತಿಗೆ ಸಂಸ್ಥೆ ಪತ್ರಿಕೆ ನಿಲ್ಲಿಸಿತು. ಆ ಪತ್ರಿಕೆ ತರುವಾಗ ನಾವು ಎದುರಿಸಿದ್ದ ಭಾಷಾಂತರ ಸಮಸ್ಯೆಗಳು ಒಂದೆರಡಲ್ಲ. ಅಂಕಣಕಾರರ ಅಂಕಣಗಳ ಶೀರ್ಷಿಕೆಯಿಂದ ಹಿಡಿದು ವಾಕ್ಯಗಳಲ್ಲಿದ್ದ ಸಣ್ಣ ಪುಟ್ಟ ಪದಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿತ್ತು. ಅವುಗಳಿಗೆ ಕನ್ನಡದ ವೇಷವಲ್ಲ, ಶರೀರವನ್ನೇ ಕೊಡಬೇಕಿತ್ತು. ಲಿಪ್ಯಂತರದ ಸುಲಭದ ಮಾರ್ಗ ಅಲ್ಲಿರಲಿಲ್ಲ. “ಸ್ಪೀಕಿಂಗ್ ಟ್ರೀ” ಇಂಗ್ಲಿಷ್ ಪತ್ರಿಕೆಯ ಪ್ರಸಿದ್ಧ ಅಧ್ಯಾತ್ಮ ಅಂಕಣ. ಇದು ಕನ್ನಡದಲ್ಲೂ ಜನಪ್ರಿಯವಾಯಿತು. ಈ ಅಂಕಣಕ್ಕೆ ನಾವು ಕೊಟ್ಟ ಶೀರ್ಷಿಕೆ “ಬೋಧಿವೃಕ್ಷ”. ಇದೂ ಜನತೆಗೆ ಹಿಡಿಸಿತ್ತು. ಇಂಥ ಹಲವು ಪ್ರಯೋಗ ಮಾಡಿದೆವು. 

ಸಾಮಾನ್ಯವಾಗಿ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸುವಾಗ ಮೂಲದಲ್ಲಿ 400 ರಷ್ಟಿರುವ ಪದಗಳು ಎಷ್ಟೇ ಕಟ್ಟುನಿಟ್ಟಿನಿಂದ ಅನುವಾದಿಸಿದರೂ 200 ಪದಗಳ ಆಸುಪಾಸಿಗೆ ಬಂದು ನಿಲ್ಲುತ್ತವೆ. ಇದು ದೊಡ್ಡ ಸವಾಲು. ಕಡಿಮೆ ಪದಗಳಲ್ಲಿ ಅದರ ಎರಡರಷ್ಟು ಪದಗಳು ಅಭಿವ್ಯಕ್ತಿಸುವ ಅರ್ಥವನ್ನು ಹೇಳಬೇಕು. ಎರಡೂ ಭಾಷೆಗಳಲ್ಲಿ ಹಿಡಿತವಿದ್ದಾಗ ಮಾತ್ರ ಇದು ಸಾಧ್ಯ. ಇಂಗ್ಲಿಷಿನ ಉದಾಹರಣೆಯನ್ನೇ ಇಟ್ಟುಕೊಂಡು ಕೆಲವು ಸಂದರ್ಭಗಳನ್ನು ನೋಡಬಹುದು.

ಬಹಳಷ್ಟು ಬಾರಿ ಲಿಟ್ಲ್, ಎ ಲಿಟ್ಲ್ ಎಂಬಂಥ ವಿತ್ ವರ್ಬ್ ಮತ್ತು ವಿತೌಟ್ ವರ್ಬ್ ಪದಗಳಿದ್ದಾಗ ಭಾಷಾಂತರಕಾರ ಎಚ್ಚರ ತಪ್ಪುವುದಿದೆ. ನಿಗದಿತ ಕಾಲಮಿತಿಯಲ್ಲಿ, ಒತ್ತಡದಲ್ಲಿ ಕೆಲಸ ಮಾಡುವಾಗ ಇದು ಅರಿವಿಗೆ ಬರುವುದೇ ಇಲ್ಲ. ದೆರೀಸ್ ಲಿಟ್ಲ್ ಸ್ಪೇಸ್ (ಸ್ಥಳಾವಕಾಶವೇ ಇಲ್ಲ); ದೆರೀಸ್ ಎ ಲಿಟ್ಲ್ ಸ್ಪೇಸ್ (ಅಲ್ಪ ಸ್ಥಳಾವಕಾಶವಿದೆ)- ಇಲ್ಲಿ ಈಸ್ ಎಂಬುದು ಗೊಂದಲ ಮಾಡುತ್ತದೆ. ಆದರೆ ಅದು ಇಲ್ಲಿ ನಿಂತಿರುವುದು ‘ಎ’ ಆರ್ಟಿಕಲ್‍ನ ಮೇಲೆ. ಇದನ್ನು ತಿಳಿಯದೇ ದೆರೀಸ್ ಲಿಟ್ಲ್ ಸ್ಪೇಸ್ ಟು ಟಾಕ್ ವಿತ್ ಪಾಕಿಸ್ತಾನ್ ಎಂಬ ಶೀರ್ಷಿಕೆಯನ್ನು “ಪಾಕಿಸ್ತಾನದೊಂದಿಗೆ ಮಾತುಕತೆಗೆ ಸ್ವಲ್ಪ ಅವಕಾಶವಿದೆ” ಎಂದು ಒಬ್ಬರು ಬರೆದಿದ್ದರು. ಆದರೆ ಒಳಗಿನ ವಿಷಯ ತದ್ವಿರುದ್ಧವಾಗಿತ್ತು.

ವರ್ಬ್, ಫ್ರೇಸಲ್ ವರ್ಬ್, ಫ್ರೇಸಸ್ ಮೊದಲಾದವನ್ನು ಎಚ್ಚರಿಕೆಯಿಂದ ನೋಡಿ ಅನುವಾದಿಸಬೇಕಾಗುತ್ತದೆ. ಉದಾಹರಣೆಗೆ ಪ್ರಸಿದ್ಧ ಅಂಕಣಕಾರ ಎಂ ಜೆ ಅಕ್ಬರ್ ಅವರ ಲೇಖನವೊಂದರ ಶೀರ್ಷಿಕೆ ಹೀಗಿತ್ತು: “ಲೆಟ್ ಅಸ್ ಪ್ಲೇ ಹಾರ್ಡ್ ಬಾಲ್ ವಿತ್ ಪಾಕಿಸ್ತಾನ್”. ಇದನ್ನು ವೃತ್ತಿಪರ ಅನುವಾದಕರೊಬ್ಬರು ಪಾಕಿಸ್ತಾನದೊಂದಿಗೆ ಲಗೋರಿ ಆಡೋಣ ಎಂದು ಅನುವಾದಿಸಿ ಅಚ್ಚಿಗೆ ಕಳುಹಿಸುವವರಿದ್ದರು. 

ಕೆಲವೊಂದು ಸಂದರ್ಭಗಳಲ್ಲಿ ಅದರಲ್ಲೂ ಅತ್ಯಂತ ಕಡಿಮೆ ಪದಗಳಲ್ಲಿ ಪರಿಣಾಮಕಾರಿಯಾಗಿ ವಿಷಯ ಮಂಡಿಸುವ ಸಂಪಾದಕೀಯದಂಥ ಬರಹಗಳಲ್ಲಿ, ಅಂಕಣ ಬರಹಗಳಲ್ಲಿ ಫ್ರೇಸ್‍ಗಳ ಬಳಕೆ ಹೆಚ್ಚು. ಅನಗತ್ಯ ವಿಷಯದೊಂದಿಗೆ ಅಗತ್ಯ ಸಂಗತಿಯನ್ನು ಕೈಬಿಟ್ಟ ಸಂದರ್ಭಗಳಲ್ಲಿ ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ “ತ್ರೋ ದ ಬೇಬಿ ವಿತ್ ದಿ ಬೇದಿಂಗ್ ವಾಟರ್” ಎಂಬುದನ್ನು ಬಳಸುತ್ತಾರೆ. ಇದನ್ನು ಅಕ್ಷರಶಃ ಕನ್ನಡಕ್ಕೆ ತರುವಾಗ “ಬಚ್ಚಲು ನೀರಿನೊಂದಿಗೆ ಮಗುವನ್ನೂ ಬಿಸಾಡಿದಂತೆ” ಎಂದು ಅನುವಾದಿಸುತ್ತಾರೆ, ಬಹಳಷ್ಟು ಕಡೆ ಇದು ಬಳಕೆಯೂ ಆಗಿದೆ. ಇದು ನಮ್ಮ ಜನರಿಗೆ ಅರ್ಥವಾಗದು. ಬಚ್ಚಲು ನೀರಿನೊಂದಿಗೆ ಮಗುವನ್ನು ಬಿಸಾಡುವುದೇ? ಹೇಗೆ? ಎಂಬುದು ನಮ್ಮವರ ಪ್ರಶ್ನೆ. ಏಕೆಂದರೆ ನಮ್ಮಲ್ಲಿ ತೊಟ್ಟಿಯಲ್ಲಿ ಸ್ನಾನಮಾಡಿ ಬಚ್ಚಲು ನೀರನ್ನು ಹಿಡಿದಿಟ್ಟು ಆಮೇಲೆ ಚೆಲ್ಲುವ ಪದ್ಧತಿಯೇ ಇಲ್ಲ. ಪಾಶ್ಚಾತ್ಯರಲ್ಲಿ ಇದು ಕ್ರಮ. ಹಾಗಾಗಿ ಅವರಲ್ಲಿ ಈ ನುಡಿಗಟ್ಟು ನೇರ ಸಂವಹನ ಮಾಡುತ್ತದೆ. ಇಂಥ ಸಂದರ್ಭದಲ್ಲಿ ಅರ್ಥ ಸಂವಹನ ಕೆಡದಂತೆ “ಸಿಪ್ಪೆಯೊಂದಿಗೆ ಹಣ್ಣನ್ನೂ ಬಿಸಾಡಿದಂತೆ” ಎಂದು ಅನುವಾದಿಸಿಕೊಂಡರೆ ತಪ್ಪೇನೂ ಇಲ್ಲ. ಇಂಥ ಕಡೆ ಜನಪದ ನುಡಿಗಟ್ಟು, ಗಾದೆಗಳ ಸಂಗ್ರಹ, ಅವುಗಳ ಬಳಕೆಯ ಔಚಿತ್ಯ ಮೊದಲಾದವು ಅನುವಾದಕನಿಗೆ ಚೆನ್ನಾಗಿ ಅರಿವಿರಬೇಕಾಗುತ್ತದೆ. ಯಾವುದೇ ಸಂಸ್ಥೆಗಳು ಭಾಷಾಂತರದ ಪಾಠ ಮಾಡುವಾಗ ಇಂತಹ ಸೂಕ್ಷ್ಮಗಳನ್ನು ಕಲಿಸಲಾಗುವುದಿಲ್ಲ, ಕಲಿಸುವುದೂ ಇಲ್ಲ. ಇವೆಲ್ಲ ಅನುವಾದದ ಅನುಭವದಿಂದಲೇ ಬರಬೇಕು.

ಅನುವಾದಕ್ಕೆ ಶಬ್ದಕೋಶಗಳು ನೆರವಾಗುತ್ತವೆ ನಿಜ. ಆದರೆ ಅವುಗಳಲ್ಲಿ ಭಾಷೆಯ ವಿದ್ಯಮಾನ, ಜಾಯಮಾನ, ಒಂದೇ ಪದಕ್ಕೆ ಇರುವ ಅನೇಕ ಅರ್ಥಗಳಲ್ಲಿ ಯಾವುದನ್ನು ನಮ್ಮ ಅಗತ್ಯ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು ಎಂಬ ವಿವರಗಳು ಇರುವುದಿಲ್ಲ. ಉದಾಹರಣೆಗೆ “ಸ್ಯಾಟಿಲೈಟ್” ಪದಕ್ಕೆ ಉಪಗ್ರಹ ಅರ್ಥವಿದ್ದರೆ ಸ್ಯಾಟಿಲೈಟ್ ಟೌನ್ ಎಂದಾಗ ಉಪನಗರ ಎಂದು ಬರೆಯಬೇಕು ಎಂದು ಶಬ್ದಕೋಶದಲ್ಲಿ ಇರುವುದಿಲ್ಲ. ಶಬ್ದಕೋಶ ನೋಡಿ ಅನುವಾದಿಸುವವರು ಇಂಥ ಕಡೆ ಬೇಸ್ತು ಬೀಳುತ್ತಾರೆ. ಹೀಗಾಗಿ ಕೆಂಗೇರಿ ಸ್ಯಾಟಿಲೈಟ್ ಟೌನ್ ಎಂಬುದನ್ನು ಒಬ್ಬರು ಕೆಂಗೇರಿ ಉಪಗ್ರಹ ನಗರ ಎಂದೇ ಅನುವಾದಿಸಿ ಪ್ರಕಟಿಸಿಯೂಬಿಟ್ಟಿದ್ದರು. ಅಂತೆಯೇ “ಯೂನಿವರ್ಸಿಟಿ ಹ್ಯಾಸ್ ಡಿಸೈಡೆಡ್ ಟು ಸ್ಟಾರ್ಟ್ ಎ ನಾವೆಲ್ ಕೋರ್ಸ್” ಎಂಬುದನ್ನು ವಿಶ್ವವಿದ್ಯಾನಿಲಯವು ಕಾದಂಬರಿ ಕೋರ್ಸನ್ನು ಆರಂಭೀಸಲಿದೆ ಎಂದು ಅನುವಾದಿಸಿದ್ದೂ ಇದೆ. 

ಕಫ್ರ್ಯೂ ಎನ್‍ಫೋಸ್ರ್ಡ್ ಫ್ರಂ ಡಾನ್ ಟು ಡಸ್ಕ್ ಎಂಬುದನ್ನು ಖ್ಯಾತರೊಬ್ಬರು ಡಾನ್‍ನಿಂದ ಡಸ್ಕಿನವರೆಗೆ ಕಫ್ರ್ಯೂ ಜಾರಿ ಮಾಡಲಾಗಿತ್ತು ಎಂದು ಅನುವಾದಿಸಿದ್ದರು. ಪ್ರಸಿದ್ಧ ಪತ್ರಿಕೆಯಲ್ಲಿ ಇದು ಅಚ್ಚೂ ಆಗಿತ್ತು. ಲೇಬರ್, ಟ್ರೇಡ್ ಯೂನಿಯನ್‍ನಂಥ ಸಾಮಾನ್ಯ ಪದಗಳು ಅನನುಭವಿ ಪತ್ರಕರ್ತರಿಗೆ, ಅನುವಾದಕರಿಗೆ ತಲೆತಿನ್ನುತ್ತವೆ. ಇಂಥ ಕಡೆ ಸಂದರ್ಭ ಗ್ರಹಿಸದೇ ಶಬ್ದಕೋಶ ನೋಡಿ ಅನುವಾದಿಸಿದರೆ ಅವಾಂತರ ಸೃಷ್ಟಿಯಾದಂತೆಯೇ. 

ಕಾನೂನು, ವ್ಯಾಪಾರ-ವಾಣಿಜ್ಯ ಸಂಬಂಧಿ ಪದಗಳು ಕನ್ನಡಕ್ಕೆ ಬರುವಾಗ ಅನುಭವ ಇಲ್ಲದವರು ಅನುವಾದಿಸುವುದು ಸಾಧ್ಯವೇ ಇಲ್ಲ. ಓಹೋ ಮಾಡುತ್ತೇನೆ ಎನ್ನುವವರು ಲಿಪ್ಯಂತರ ಮಾಡಿ ಕೂರಬಹುದು. “ಎಕನಾಮಿಕ್ ಸ್ಯಾಂಕ್ಷನ್ ಅಗೇಯ್ನ್‍ಸ್ಟ್ ರೊಡೀಶಿಯ” ಎಂಬುದನ್ನು ಒಬ್ಬರು ರೊಡೀಶಿಯಾಕ್ಕೆ ಆರ್ಥಿಕ ಮಂಜೂರಾತಿ ಎಂದು ಅನುವಾದಿಸಿದ್ದರು. ಇಲ್ಲಿರುವುದು ಆರ್ಥಿಕ ನಿರ್ಬಂಧ ಹೇರಿಕೆಯೇ ವಿನಾ ಮಂಜೂರಾತಿಯಲ್ಲ. 

ಅಂತೆಯೇ ಕೊರಿಯಾ ಬಗ್ಗೆ ಸುದ್ದಿ ಬರೆಯುವಾಗ ಲೇಖನವೊಂದರಲ್ಲಿ ಅದನ್ನು “ಸ್ಟಾಲಿನಿಸ್ಟ್ ಸ್ಟೇಟ್” ಎಂಬ ವಿಶೇಷಣದಿಂದ ಕರೆಯಲಾಗಿತ್ತು. ಹಿರಿಯರೊಬ್ಬರು ಅವಸರದಲ್ಲಿ ಇದನ್ನು ಸ್ಟಾಲಿನ್ ರಾಜ್ಯವೆಂದೇ ಬರೆದುಬಿಟ್ಟಿದ್ದರು. “ಸ್ಟೇಟ್” ಪದ ಎಲ್ಲ ಕಡೆಯೂ ರಾಜ್ಯ ಎಂಬ ಅರ್ಥದಲ್ಲಿಯೇ ಬಳಕೆಯಾಗುವುದಿಲ್ಲ. 

ಇಂಥ ಸಂದರ್ಭದಲ್ಲಿ ನೆರವಿಗೆ ತಕ್ಕಮಟ್ಟಿಗಾದರೂ ಬರುವುದು ಮೈಸೂರು ವಿವಿಯ ಇಂಗ್ಲಿಷ್-ಕನ್ನಡ ಶಬ್ದಕೋಶ. ಅದರ ನೆರವಿನಿಂದ ಹೊಸ ಸೂಕ್ತ ಪದಗಳನ್ನು ಹುಡುಕಿಕೊಳ್ಳಲು ಸಾಧ್ಯವಿದೆ. ಅನುವಾದ ಸಂದರ್ಭದಲ್ಲಿ ಪತ್ರಕರ್ತರು ಎದುರಿಸುವ ಪಾಡು ಗಮನಿಸಿದ ಮಾಧ್ಯಮ ಅಕಾಡೆಮಿ ಜಿ ವೆಂಕಟಸುಬ್ಬಯ್ಯನವರ ನೆರವಿನಿಂದ “ಪತ್ರಿಕಾ ಪದಕೋಶ” ಪ್ರಕಟಿಸಿದೆ. ಅಂತೆಯೇ ಅದರ ನೆರವಿನಿಂದ “ಮಾಧ್ಯಮ ಪಾರಿಭಾಷಿಕ” ಕೃತಿಯನ್ನೂ ಹೊರತಂದಿದೆ. ಇವೆರಡೂ ಈಗ ಲಭ್ಯವಿಲ್ಲ. ಆದರೆ ಇವು ಕೂಡ ಅಪರಿಪೂರ್ಣ. ಅಗತ್ಯ ಸಂದರ್ಭದಲ್ಲಿ ಕೈ ಹಿಡಿಯಲಾರವು, ಮಿತಿಗಳಿವೆ.

ಸಾಹಿತಿಗಳಾದವರು ಪತ್ರಕರ್ತರಾದರೆ ಅನುಕೂಲವಿದೆ. ಡಿವಿಜಿ, ಸಿದ್ಧವನಹಳ್ಳಿ ಕೃಷ್ಣಶರ್ಮ, ತಿತಾ ಶರ್ಮ, ರಾಮಯ್ಯ ಮೊದಲಾದವರು ಪತ್ರಕರ್ತರಾಗಿ ಸಾಧಿಸಿದ್ದು, ಕನ್ನಡಕ್ಕೆ ಹೊಸ ಆಕರ್ಷಕ ಪದಗಳನ್ನು ಕೊಡಲು ಸಾಧ್ಯವಾದುದು ಇದರಿಂದ. ಸುಗ್ರೀವಾಜ್ಞೆ, ವಾಗ್ದಂಡನೆ (ರಿಪ್ರಿಮಾಂಡ್), ದೋಷಾರೋಪ (ಇಂಪೀಚ್‍ಮೆಂಟ್), ಶ್ವೇತಪತ್ರ ಮೊದಲಾದ ಕನ್ನಡದ್ದೇ ಆಗಿ ಹೋದ ಪದಗಳನ್ನು ಕೊಟ್ಟವರು ಇಂಥವರು. ಜಿ ಎಸ್ ಸದಾಶಿವ, ಜಿ ಎನ್ ರಂಗನಾಥ ರಾವ್ ಅವರು ಆಗಿಹೋದ ಮೇಲೆ ಇಂತಹ ಪೀಳಿಗೆಯೇ ಕಾಣುತ್ತಿಲ್ಲ. ನಾವೇನಿದ್ದರೂ ಈಗ ಹೊಸ ಪದ ಟಂಕಿಸುತ್ತಿಲ್ಲ, ಇಂಗ್ಲಿಷಿನಿಂದ ಎರವಲು ಪಡೆಯುತ್ತೇವೆ. ಏಕೆಂದರೆ ಇದು ಬಹಳ ಸುಲಭ. ಟಂಕಿಸಿದರೂ ಅದು “ವಿಕಲಚೇತನ”ವಾಗುತ್ತದೆ! ಫಿಸಿಕಲಿ ಚಾಲೆಂಜ್ಡ್ ಎಂಬುದನ್ನು ವಿಕಲಚೇತನ ಎಂದಿದ್ದಾರೆ. ಅಂಗವಿಕಲ ಎಂಬುದು ಅವಮಾನವಂತೆ. ಅದಕ್ಕೆ ವಿಕಲಚೇತನ! ದೇಹದ ಅಂಗ ವಿಕಲವಾಗಲು ಸಾಧ್ಯ. ಚೇತನ ಎಂದಾದರೂ ವಿಕಲವಾಗುವುದೇ? ಇದು ಅಂಗವಿಕಲರಿಗೆ ಇನ್ನೂ ಅವಮಾನ ಮಾಡುವ ಪದ. ದುರದೃಷ್ಟ ಎಂದರೆ ಈ ಪದವನ್ನು ಕೊಟ್ಟವರೂ ಜಿವೆಂ! ಇಂಥ ಆಭಾಸವಾಗದಂತೆ ಮಾಧ್ಯಮಗಳಲ್ಲಿ ನೋಡಿಕೊಳ್ಳುವುದು ಸುಲಭವಲ್ಲ.

ಮಾಧ್ಯಮ ಒಂದು ಅವಸರದ ಸಾಹಿತ್ಯ. ಇದರಲ್ಲಿನ ಅನುವಾದದ ಕಷ್ಟವನ್ನು ಅಥವಾ ಸಾಹಿತ್ಯವನ್ನು ಶೈಕ್ಷಣಿಕವಾಗಿ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಮಾಧ್ಯಮದಲ್ಲಿನ ಅನುವಾದ ಎಂಬುದು ಸಾಹಿತ್ಯದಲ್ಲಿ ಸಿನಿಮಾ ಸಾಹಿತ್ಯ ದೂರವಾದಂತೆಯೇ ಪಂಡಿತರ ಪಾಲಿಗೆ ದೂರವಾಗಿದೆ. ಇದು ಮಾಧ್ಯಮಕ್ಕೂ ಒಳಿತಲ್ಲ, ಶಿಕ್ಷಣಕ್ಕೂ ಹಿತವಲ್ಲ. ಕನ್ನಡಕ್ಕಂತೂ ಮೊದಲೇ ಅಲ್ಲ.                        

ಇನ್ನು ಮಾಧ್ಯಮಗಳಲ್ಲಿನ ಜಾಹೀರಾತುಗಳ ಅನುವಾದ.

ಈಗೀಗ ಇದು ಯಾವ ದಾರಿ ಹಿಡಿಯುತ್ತಿದೆ ಎಂದರೆ ಭಾಷೆಗಾಗಲಿ, ಕನ್ನಡಕ್ಕಾಗಲಿ, ಮಾಧ್ಯಮಕ್ಕಾಗಲಿ, ಗ್ರಾಹಕರಿಗಾಗಲಿ, ಜಾಹೀರಾತು ಕೊಟ್ಟ ಉದ್ಯಮಕ್ಕಾಗಲಿ ಯಾವುದೇ ಪ್ರಯೋಜನ ಇಲ್ಲ. ವೈದ್ಯಕೀಯ ಜಾಹೀರಾತುಗಳಂತೂ ಲಿಪ್ಯಂತರದಿಂಲೇ ಕೂಡಿರುತ್ತವೆ. ಕಾರ್ಡಿಯೋ ವಸ್ಕ್ಯುಲರ್ ಟ್ರೀಟ್‍ಮೆಂಟ್, ಆರ್ಥೋಪೆಡಿಕ್ ಪ್ರಾಬ್ಲಂ, ರೆಸ್ಪರೇಟರಿ ಸಮಸ್ಯೆಗಳಿಗೆ ಇಲ್ಲಿಗೆ ಭೇಟಿಕೊಡಿ ಎಂದು ಜಾಹೀರಾತು ಹಾಕುತ್ತಾರೆ. ನಮ್ಮಲ್ಲಿರುವುದೇ ಶೇ.52ರಷ್ಟು ಅನಕ್ಷರಸ್ಥರು. ಕನ್ನಡ ಅಕ್ಷರ ಬಲ್ಲವರೇ ಇಂಥ ಜಾಹೀರಾತು ನೋಡಿ ಓದಲಾರರು. ಅವರಿಗೆ ಇಂಗ್ಲಿಷೇ ಸುಲಭ ಎನಿಸುತ್ತದೆ. ಇಂಗ್ಲಿಷ್‍ನಿಂದ ಕನ್ನಡಕ್ಕೆ ಲಿಪ್ಯಂತರ ಮಾಡಿದಾಗ ಕನ್ನಡಕ್ಕೆ ಅಸಹಜ ಎನಿಸುವಷ್ಟು ಒತ್ತಕ್ಷರಗಳು ಬರುತ್ತವೆ. ಅದನ್ನು ಇಂಗ್ಲಿಷ್ ಸ್ಪೆಲಿಂಗ್‍ನ ಧ್ವನಿ ಬರುವಂತೆ ಮಾಡಿಕೊಂಡು ಅರ್ಥಮಾಡಿಕೊಳ್ಳುವುದು ಸುಲಭವಲ್ಲ, ಅದಕ್ಕೆ ಮತ್ತೆ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗುತ್ತದೆ. ಉಚ್ಚರಣಾ ಕ್ರಮ ವ್ಯತ್ಯಾಸವಾದಾಗ ಅರ್ಥವ್ಯತ್ಯಾಸವಾಗುವುದು ಮೊದಲಾದವೆಲ್ಲ ನಡೆಯುತ್ತವೆ. ಇದೊಂದು ಅಧ್ವಾನದ ಅನುವಾದ ಕ್ರಮ. ಲಿಪಿ ಕನ್ನಡದಲ್ಲಿದ್ದರೆ ಅನುವಾದವಾದಂತೆ ಎಂಬ ಧೋರಣೆಯೂ ಬೆಂಗಳೂರಿನ ಉದ್ಯಮಿಗಳಲ್ಲಿ ಕಾಣಿಸುತ್ತಿದೆ. ಇದು ಅಪಾಯಕಾರಿ.  

 “ಈ ತೈಲವನ್ನು ಬಳಸಿದರೆ ಕೂದಲು ಮುರಿಯುವುದಿಲ್ಲ” ಎಂಬಂಥ ಹೇಳಿಕೆಗಳು ಜಾಹೀರಾತಿನಲ್ಲಿರುತ್ತವೆ. ಕೂದಲು ಮುರಿಯುವುದು ಎಂಬುದು ನೇರವಾಗಿ ಇಂಗ್ಲಿಷಿನಿಂದ ಮಾಡಿದ ಪದಶಃ ಅನುವಾದದ ಫಲ ಎಂಬುದು ಕೂಡಲೇ ತಿಳಿಯುತ್ತದೆ.

ಯಾವುದೇ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಿಸುವಾಗ ಭಾಷೆಯ ಸಂದರ್ಭ, ಸಂಸ್ಕøತಿ, ಜಾಯಮಾನ ಮತ್ತು ವಿದ್ಯಮಾನದ ಅರಿವಿಲ್ಲದಿದ್ದರೆ ಅರ್ಥಹೀನ. ತೆಲುಗಿನಲ್ಲಿ ಬಳಸುವ ಅರ್ಥದಲ್ಲಿ ಕನ್ನಡದವರು “ರಾಷ್ಟ್ರ” ಪದವನ್ನು ಬಳಸುವುದಿಲ್ಲ, ಅಂತೆಯೇ ರಾಜ್ಯ ಮತ್ತು ಜಾತಿಯನ್ನು ಕೂಡ. ಇಂಗ್ಲಿಷ್-ತಮಿಳು ಬಲ್ಲ, ಆದರೆ ಕನ್ನಡವನ್ನು ಸ್ವಲ್ಪ ತಿಳಿದ ವ್ಯಕ್ತಿಯೊಬ್ಬರು ಇಂದಿರಾಗಾಂಧಿಯವರ ಚಿಂತನೆಯನ್ನು ಕನ್ನಡಕ್ಕೆ ಅನುವಾದಿಸಿದ್ದರು. “ಇಂದಿರಾ’ಸ್ ಕಾಲ್ ಫಾರ್ ಪೀಪಲ್ ಆಫ್ ಇಂಡಿಯಾ” ಎಂಬ ಇಂಗ್ಲಿಷ್ ಮೂಲದ ಶೀರ್ಷಿಕೆಯನ್ನು ಅವರು “ನಾಡಿನ ಮಕ್ಕಳನ್ನು ಉದ್ದೇಶಿಸಿ ಇಂದಿರಾ ಭಾಷಣ” ಎಂದು ಅಚ್ಚು ಹಾಕಿದ್ದರು. ತಮಿಳರಿಗೆ ನಾಡ ಮಕ್ಕಳ್ ಎಂದರೆ ದೇಶದ ಜನತೆ. ನಮಗೆ? ಇಂಥ ಸೂಕ್ಷ್ಮ ವ್ಯತ್ಯಾಸ ಅರಿವಿಗೆ ಬರುವುದು ಅನುಭವದಿಂದಲೇ. 

“ಇಂಗ್ಲಿಷಿನಿಂದ ಕನ್ನಡಕ್ಕೆ ವಾಕ್ಯಗಳನ್ನು ತರುವಾಗ ವಾಕ್ಯದ ಹಿಂದಿನಿಂದ ಹೋಗಿ, ಆಗ ಅದು ದಕ್ಕುತ್ತದೆ, ಮುಂದಿನಿಂದ ಹಿಡಿಯಲು ಹೋದರೆ ಝಾಡಿಸುತ್ತದೆ” ಎಂದು ಹಿರಿಯ ಪತ್ರಕರ್ತರಾದ, ನಮಗೆ ಕಲಿಸಿದ ಖಾದ್ರಿ ಅಚ್ಯುತನ್ ಯಾವಾಗಲೂ ಹೇಳುತ್ತಿದ್ದರು. ಇದು ಸತ್ಯವಾದ ಮಾತು. ಹೀಗೆ ಮಾಡಿದಾಗ ಇಂಗ್ಲಿಷ್‍ನ ಮಾತು ಕನ್ನಡದ ಜಾಯಮಾನಕ್ಕೆ ಬರುತ್ತದೆ. ಇದನ್ನೆಲ್ಲ ಯಾವ ಶಾಲೆಯೂ ಹೇಳಿಕೊಡುವುದಿಲ್ಲ. ಕಲಿಕೆಯಿಂದ ಇವೆಲ್ಲ ಗೊತ್ತಾಗುತ್ತ ಹೋಗುತ್ತವೆ.  

ಕನ್ನಡಕ್ಕೆ ಹೋಲಿಸಿದರೆ ಹಿಂದಿ ಭಾಷೆಯವರು ಇಂಗ್ಲಿಷಿನ ಪದಗಳನ್ನು ಸಂಸ್ಕøತ ಮತ್ತು ಉರ್ದುಗಳ ನೆರವಿನಿಂದ ತಮ್ಮದನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಸಂಸದ್, ಪರ್ಯಾವರಣ್, ನಿರ್ವಚನ್ ಮೊದಲಾದ ಪದಗಳನ್ನು ಟಂಕಿಸಿಕೊಂಡು ಚಲಾವಣೆಗೆ ತಂದುಕೊಳ್ಳುತ್ತಾರೆ. ಅದನ್ನು ಎಲ್ಲರೂ ಹಾಗೆಯೇ ಬಳಸುತ್ತಾರೆ. ನಮ್ಮಲ್ಲಿ ಒಂದು ಪತ್ರಿಕೆಯವರು ಟಂಕಿಸಿದ ಪದ ಸರಿ ಇದ್ದರೂ ಅವರು ಮಾಡಿದ್ದನ್ನು ನಾವೇಕೆ ಅನುಸರಿಸಬೇಕು ಎಂಬ ಸಣ್ಣತನ ಅಂಥ ಪದಗಳ ಚಲಾವಣೆಗೆ ಅಡ್ಡಿಯಾಗುತ್ತದೆ.  

ತಂತ್ರಜ್ಞಾನದ ನೆರವು ಇಂಗ್ಲಿಷಿನಿಂದ ಕನ್ನಡ ಅನುವಾದದಲ್ಲಿ ಏನೇನೂ ಇಲ್ಲ. ಟ್ರಾನ್ಸ್ ಲಿಟರೇಶನ್ ಟೂಲ್‍ಗಳಿವೆ. ಇದರಿಂದ ಉಪಯೋಗವಿಲ್ಲ. ಸದ್ಯ ಅನುಭವದ ಆಧಾರದಲ್ಲಿ ಮಾಧ್ಯಮಗಳು ಮಾನವ ಶಕ್ತಿಯನ್ನೇ ನೆಚ್ಚಿ ಅನುವಾದಿಸಬೇಕಿದೆ. ಕನ್ನಡ ಸುಲಭವಾಗಿ ತಂತ್ರಜ್ಞಾನದಿಂದ ಅನುವಾದಗೊಳ್ಳುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಕನ್ನಡ ಪದಗಳ ಅರ್ಥ ಬದಲಾಗುತ್ತದೆ. ಕನ್ನಡ ಪದಕ್ಕೆ ಇನ್ನೆರಡು ಅರ್ಥ ಎಂಬುದು ಇದಕ್ಕಾಗಿ. ಸಿಐಐಎಲ್ ಈಚೆಗೆ ಹೊರತಂದ 11 ಭಾಷೆಗಳ ಪದಪ್ರಯೋಗ ಕೋಶ, ಪ್ರಶಾಂತ್ ಮಾಡ್ತರ ಪದನಿಧಿ ಕೋಶ ಮೊದಲಾದವಲ್ಲದೇ ಕ್ಯಾತನಹಳ್ಳಿ ರಾಮಣ್ಣ ಮೊದಲಾದವರ ಜಾನಪದ ಕೋಶಗಳ ಅಧ್ಯಯನದ ಅರಿವಿಲ್ಲದೇ ಹೋದರೆ ಮಾಧ್ಯಮದಲ್ಲಿನ ಕನ್ನಡ ಅನುವಾದ ಬಡವಾತಿಬಡವವಾಗುತ್ತದೆ. ಇಂಥ ಅಧ್ಯಯನದ ಕೊರತೆ ಇರುವುದು ಈಗಾಗಲೇ ಗಮನಕ್ಕೆ ಬರುತ್ತಿದೆ. ಇದನ್ನು ಸರಿಪಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. 





ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment