ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2013 ಡಿಸೆಂಬರ್ 14 ರಂದು ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಮರುನಾಮಕರಣ ಮಾಡಲಾಗುವುದು ಎಂದು ವರದಿಯಾಗಿದೆ. 2009 ರಿಂದಲೂ ನೆನೆಗುದಿಗೆ ಬಿದ್ದಿದ್ದ ಮರುನಾಮಕರಣ ಪ್ರಕ್ರಿಯೆಗೆ ಇನ್ನೇನು ತೆರೆ ಬೀಳಲಿದೆ.
ಊರ ಹೆಸರಿನಿಂದ ಇದ್ದ ಈ ನಿಲ್ದಾಣಕ್ಕೆ ನಾಮಕರಣದ ಗಲಾಟೆ ಕಾಟ 2008ರ ವೇಳೆಗೆ ಶುರುವಾಯಿತು. ಕೆಲವರು ಟಿಪ್ಪು ಹೆಸರಿಡಿ ಎಂದೂ ಇನ್ನು ಕೆಲವರು ಬಸವೇಶ್ವರರ ಹೆಸರಿಡಿ ಎಂದೂ ಮತ್ತೆ ಹಲವರು ವಿಶ್ವೇಶ್ವರಯ್ಯನವರ ಹೆಸರಿಡಿ ಎಂದೂ ಮತ್ತಷ್ಟು ಜನ ಕುವೆಂಪು ಹೆಸರಿಡಿ ಎಂದೂ ಇನ್ನೂ ಕೆಲವರು ರಾಜ್‍ಕುಮಾರ್ ಹೆಸರಿಡಿ ಎಂದೂ ಒಂದೇ ಸಮನೆ ಸರ್ಕಾರದ ಮುಂದೆ ಮುಗಿಯದ ಪಟ್ಟಿ ಇಡತೊಡಗಿದರು. ಎಲ್ಲಾ ಅಳೆದು ತೂಗಿ 2009 ಫೆಬ್ರವರಿ 27 ರಂದು ಸರ್ಕಾರ ಕೆಂಪೇಗೌಡರ ಹೆಸರನ್ನು ಇಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ದೇಶದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಸಮೀಕ್ಷೆಯೊಂದರಲ್ಲಿ 2011ರಲ್ಲೇ ಕರೆಸಿಕೊಂಡ ಈ ನಿಲ್ದಾಣ 23 ಮೇ 2008ರಂದು ಹುಟ್ಟಿದ್ದರೂ ಐದು ವರ್ಷಗಳ ನಂತರ ಮತ್ತೆ ನಾಮಕರಣಕ್ಕೆ ಸಿದ್ಧವಾಗುತ್ತಿದೆ.
ಊರು, ಬೀದಿ, ವೃತ್ತ, ಸೇತುವೆ, ಕ್ರೀಡಾಂಗಣ, ಸಭಾಂಗಣದಿಂದ ಹಿಡಿದು ವಿಶ್ವವಿದ್ಯಾನಿಲಯಗಳವರೆಗೆ ವ್ಯಕ್ತಿಗಳ ನಾಮಕರಣ ಮಾಡುವುದರ ಹಿಂದೆ ತರಹೇವಾರಿ ಆಯಾಮಗಳೂ ಕಸರತ್ತುಗಳೂ ಇರುತ್ತವೆ.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಸಿದ್ಧಗಂಗೆಯ ಸಿದ್ಧಪುರುಷರಾದ ಹಿರಿಯ ಶ್ರೀಗಳ ಹೆಸರು ಇಡಲು ಅವರಲ್ಲಿ ಪ್ರಸ್ತಾಪಮಾಡಿದ್ದರು. ಶ್ರೀಗಳು ಮೌನವಾಗಿದ್ದರು. ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಭಾರತ ರತ್ನ ಗೌರವಕೊಡಿಸಲು ಯತ್ನಿಸುವುದಾಗಿ ಹೇಳಿದರು. ಆ ನಿಟ್ಟಿನಲ್ಲಿ ಅವರು ಎಷ್ಟು ಪ್ರಯತ್ನಿಸಿದರೋ ಗೊತ್ತಿಲ್ಲ. ಆದರೆ ಸ್ವಯಂ ಕಾಯಕ ರತ್ನವಾಗಿರುವ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿಯಲ್ಲಿರಲಿ, ಯಾವ ಪ್ರಶಸ್ತಿಯಲ್ಲೂ ಇರುವ ವ್ಯಾಮೋಹ ಅಷ್ಟರದ್ದೇ. ಆಗಲೂ ಅವರ ಉತ್ತರ ಮೌನವೇ. ಇಂಥ ಪ್ರಶಸ್ತಿಗಳಿಂದ ಶ್ರೀಗಳಿಗೆ ಭಾರೀ ಸಂತೋಷವಾಗುತ್ತದೆ, ಆ ಮೂಲಕ ತಮ್ಮ ಇನ್ಯಾವುದೋ ಉದ್ದೇಶ ಈಡೇರುತ್ತದೆ ಎಂದು ರಾಜಕಾರಣಿಗಳು ಭಾವಿಸಿದ್ದರೋ ಏನೋ?
ಆನಂತರ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಶ್ರೀಗಳ ಹೆಸರು ಅನಧಿಕೃತವಾಗಿ ಘೋಷಣೆಯಾಗಿಯೇಬಿಟ್ಟಿತು. ತಮ್ಮ ಮೌನದಿಂದಲೇ ಮೌಲ್ಯಕ್ಕೆ ಅಪಚಾರವಾಗುತ್ತದೆ ಎಂಬುದನ್ನು ಗ್ರಹಿಸಿದ ಶ್ರೀಗಳು ಆಗ ಮಾತಾಡಲೇಬೇಕಾಯಿತು. ವಿಶ್ವವಿದ್ಯಾನಿಲಯಕ್ಕೆ ತಮ್ಮ ಹೆಸರಿಡಕೂಡದು ಎಂದು ಆಗ್ರಹಿಸಿದರು. ತಾವು ಯಾರಿಗೂ ಇದಕ್ಕೆ ಅನುಮತಿಕೊಟ್ಟಿಲ್ಲ ಎಂದೂ ಹೇಳಿದರು. ಅದೇ ಹೊತ್ತಿನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟೊರೇಟಿಗೆ ಶ್ರೀಗಳ ಹೆಸರು ಪ್ರಸ್ತಾಪಿಸಿದಾಗ ಈಗಾಗಲೇ ಒಂದು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟೊರೇಟ್ ಪಡೆದ ಕಾರಣ ಮತ್ತೊಂದು ವಿಶ್ವವಿದ್ಯಾನಿಲಯದ ಅದೇ ಪದವಿ ಪಡೆಯುವುದರಲ್ಲಿ ಅರ್ಥವಿಲ್ಲ ಎಂದು ಅವರು ಇನ್ನೊಂದು ಗೌರವ ಡಾಕ್ಟೊರೇಟನ್ನು ಸ್ವೀಕರಿಸಲೂ ನಿರಾಕರಿಸಿದ್ದರು.
ಶ್ರೀಗಳ ನಿರ್ಧಾರದಲ್ಲಿ ನಾವು ಕಲಿಯಬೇಕಾದ ಎರಡು ಸಂಗತಿಗಳಿವೆ. ಯಾರು ಗುರುತಿಸಲಿ, ಬಿಡಲಿ, ನಿವ್ರ್ಯಾಜ ಪ್ರೇಮದಿಂದ ಸಮಾಜಕ್ಕೆ ಕೆಲಸ ಮಾಡುವುದು ಮತ್ತು ಸಮಾಜ ಅಷ್ಟೇ ಪ್ರೀತಿಯಿಂದ ತೋರಿಸುವ ಗೌರವವನ್ನು ನಿರಾಕರಿಸದಿರುವುದು ಮೊದಲನೆಯದು. ಇದೇ ವೇಳೆಗೆ ಬರುವುದೆಲ್ಲ ತಮ್ಮತ್ತಲೇ ಬರಲಿ ಎನ್ನುತ್ತ, ಬಾಚಿಕೊಳ್ಳದೇ ತಮ್ಮಷ್ಟಕ್ಕೆ ತಾವೇ ಮಿತಿ ವಿಧಿಸಿಕೊಂಡು ಅಷ್ಟೇ ವಿನಯದಿಂದ, ಆತ್ಮತೃಪ್ತಿಯಿಂದ, ವಿವೇಕ ಮತ್ತು ಔಚಿತ್ಯಪ್ರಜ್ಞೆಯಿಂದ ಆಮಿಷಗಳನ್ನು ನಿರಾಕರಿಸುವುದು ಎರಡನೆಯದು. ಅಲ್ಪರು ಒಡ್ಡುವ ಲೌಕಿಕ ಆಮಿಷ ನಿಜ ಜಂಗಮರ ಸ್ಥಿರ ಗುಣವನ್ನು ಭ್ರಷ್ಟಗೊಳಿಸಲಾಗದು. ಇಂಥ ನಿರ್ಧಾರದಿಂದ ಶ್ರೀಗಳ ಘನತೆ ನೂರ್ಮಡಿಯಾಯಿತು.
ಸುಮ್ಮನೇ ನೋಡೋಣ. ಮೈದಾನದಿಂದ ಹಿಡಿದು ವೃತ್ತಗಳವರೆಗೆ ಸಿಕ್ಕ ಸಿಕ್ಕ ಸಾರ್ವಜನಿಕ ಸ್ಥಳಗಳಿಗೆ, ನರ್ಸರಿಯಿಂದ ಹಿಡಿದು ವಿಶ್ವವಿದ್ಯಾನಿಲಯದವರೆಗೆ, ಬಸ್ ನಿಲ್ದಾಣದಿಂದ ಹಿಡಿದು ವಿಮಾನ ನಿಲ್ದಾಣಗಳವರೆಗೆ ಆಯಾ ಊರಿನ ಹೆಸರಿನ ಬದಲು ವ್ಯಕ್ತಿಯ ಹೆಸರನ್ನು ಇಡುವ ಔಚಿತ್ಯವಾದರೂ ಏನು? ಹೆಸರು ಇಡುವುದರಿಂದ, ಪ್ರತಿಮೆ ಸ್ಥಾಪಿಸುವುದರಿಂದ ಆಯಾ ವ್ಯಕ್ತಿಯನ್ನು ಗೌರವಿಸುತ್ತೇವೆಯೇ? ಅಥವಾ ಆ ವ್ಯಕ್ತಿಯ ಆದರ್ಶಗಳನ್ನು ನಾವು ಪಾಲಿಸಿದಂತೆ ಎಂದು ಅರ್ಥವೇ? ಇಂಥ ಉದ್ದೇಶದ ಸಮರ್ಥನೆಗೆ ನೂರು ಉತ್ತಮ ಕಾರಣಗಳಿರಬಹುದು. ಆದರೆ ಅಂತಿಮವಾಗಿ, ವಾಸ್ತವದಲ್ಲಿ ಈಡೇರುವುದು ಓಲೈಕೆಯ ಯತ್ನ ಮಾತ್ರ. ಅಂಬೇಡ್ಕರ್ ಹೆಸರಿನಿಂದ ದಲಿತರ, ಬಸವಣ್ಣನವರ ಹೆಸರಿನಿಂದ ವೀರಶೈವರ, ಕೆಂಪೇಗೌಡರ ಹೆಸರಿನಿಂದ ಒಕ್ಕಲಿಗರ-ಹೀಗೆ ಒಂದೊಂದು ಸಮುದಾಯ ವಿಶೇಷವಾಗಿ ಮೆಚ್ಚಿದ, ಆದರೆ ಸಾರ್ವತ್ರಿಕ ಪ್ರೀತಿಗೆ ಪಾತ್ರರಾದ ವ್ಯಕ್ತಿಗಳ ಹೆಸರು ಅಥವಾ ಪ್ರತಿಮೆಗಳ ಮೂಲಕ ಆಯಾ “ವಿಶೇಷ ಸಮುದಾಯದವರ” ವಿಶ್ವಾಸ ಸಂಪಾದಿಸಬಹುದು ಎಂಬುದು ಒಂದು ಲೆಕ್ಕಾಚಾರ. ಇಂಥ ಗುಣಾಕಾರ, ಭಾಗಾಕಾರಕ್ಕೂ ಜನತಂತ್ರ ವ್ಯವಸ್ಥೆಗೂ ನೇರ ಸಂಬಂಧವಿದೆ. ಸ್ವಾತಂತ್ರ್ಯೋತ್ತರ ದಿನಗಳಲ್ಲೇ ನಮ್ಮಲ್ಲಿ ಇಂತಹ ಪ್ರವೃತ್ತಿ ಹೆಚ್ಚಿರುವುದು ಈ ಮಾತಿಗೆ ಪೂರಕ.
ಈ ಪ್ರವೃತ್ತಿ ದೇಶಾದ್ಯಂತ ಸೋಂಕು ರೂಪ ಪಡೆಯಲು ಅರುವತ್ತು ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಯಜಮಾನಿಕೆ ಸ್ಥಾಪಿಸಿದ್ದ ಏಕೈಕ ಪಕ್ಷ ಕಾಂಗ್ರೆಸ್‍ನ ಕೊಡುಗೆ ಅಪಾರ. ಪಠ್ಯಪುಸ್ತಕಗಳು, ಬರಹಗಳು, ಪುಸ್ತಕಗಳ ಮೂಲಕ ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ದೇಶದ ಇತಿಹಾಸ ನೆಹರೂ ಕುಟುಂಬದಿಂದಲೇ ಆರಂಭವಾಯಿತೇನೋ ಎಂಬ ಭ್ರಮೆ ಉಂಟಾಗುವಷ್ಟು ಪ್ರಚಾರಮಾಡತೊಡಗಿತು. ಸರ್ಕಾರದ ಎಲ್ಲ ಯೋಜನೆ, ಅನುದಾನ ಪಡೆಯುವ ಸಂಸ್ಥೆಗಳಿಗೆ ನೆಹರೂ ಹೆಸರು ರಾರಾಜಿಸತೊಡಗಿತು. ನೆಹರೂ ರಸ್ತೆ, ನೆಹರೂ ಗಲ್ಲಿ, ನೆಹರೂ ಬಸ್-ವಿಮಾನ ನಿಲ್ದಾಣ, ನೆಹರೂ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ನೆಹರೂ ಕ್ರೀಡಾಂಗಣ, ಹೀಗೆ ಎಲ್ಲೆಂದರಲ್ಲಿ ನೆಹರೂ ಜಪ ನಡೆಯುವಂತೆ ಮಾಡುವ ಉದ್ದೇಶ ಇದರಿಂದ ಸಾರ್ಥಕವಾಯಿತು. ನೆಹರೂ ನಂತರ ಇಂದಿರಾ ಕಾಲ. ನಂತರ ರಾಜೀವ್ ಗಾಂಧಿ. ಮುಂದೆ ಸೋನಿಯಾ, ಪ್ರಿಯಾಂಕಾ, ರಾಹುಲ್... ಕಾಲ ಬರಬಹುದು. ಹೀಗೆ ತನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ದೇಶಾದ್ಯಂತ ತನ್ನ ಪಕ್ಷದ ಮುಖಂಡರನ್ನು ಅಜರಾಮರಗೊಳಿಸುವ ಯತ್ನ ಮಾಡಿತು. ಇದೇ ಬುದ್ಧಿಯನ್ನು ಇತರ ಪಕ್ಷಗಳು ತಮ್ಮ ಆಡಳಿತಾವಧಿಯಲ್ಲಿ ಮಾಡತೊಡಗಿದವು. 2009 ರಲ್ಲಿ ಆರಂಭವಾದ ಬಾಂದ್ರಾ-ವರ್ಲಿ ಸಮುದ್ರ ಸೇತುವೆಗೆ ರಾಜೀವ್‍ಗಾಂಧಿ ಹೆಸರನ್ನು ಇಡಲು ಮುಂದಾದಾಗ ಮಹಾರಾಷ್ಟ್ರಾದ್ಯಂತ ಭಾರೀ ಗಲಾಟೆಯೇ ಎದ್ದಿತ್ತು. ನೆರೆಯ ಆಂಧ್ರದಲ್ಲಿ ಜಿಲ್ಲೆಗಳಿಗೂ ವ್ಯಕ್ತಿ ಹೆಸರುಗಳಿವೆ. ತಮ್ಮನ್ನೇ ತಾವು ಎಲ್ಲೆಡೆ ಬಿಂಬಿಸಿಕೊಳ್ಳುವ ಮೂಲಕ ಈ ವಿಷಯದಲ್ಲಿ ಮಾಯಾವತಿಯಂತೂ ಎಲ್ಲರನ್ನೂ ಮೀರಿಸಿದರು. ತಮಿಳುನಾಡಿನ ರಾಜಕೀಯವಂತೂ ವ್ಯಕ್ತಿಪೂಜೆಯಲ್ಲಿ ಅಗ್ರಗಣ್ಯ ಸ್ಥಾನಪಡೆದಿದೆ. ವ್ಯಕ್ತಿ ಪ್ರತಿಮೆ ಸ್ಥಾಪನೆ, ಕಂಡಕಂಡಲ್ಲಿ ವ್ಯಕ್ತಿ ಹೆಸರು ಇಡುವ ವಿಲಕ್ಷಣ ಪದ್ಧತಿ ಅತಿರೇಕ ಕಂಡಿರುವುದೇ ತಮಿಳುನಾಡಿಲ್ಲಿ. ಮಹಾಜ್ಞಾನಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸುವ ಹುಮ್ಮಸ್ಸಿನಲ್ಲೇ ನಿನ್ನೆ ಮೊನ್ನೆ ಬಂದು ಎರಡು ಚಿತ್ರಗಳಲ್ಲಿ ಕಾಣಿಸಿದ ನಟಿಯ ಪ್ರತಿಮೆ, ದೇವಾಲಯವನ್ನೂ ಅವರು ಕೊಂಚವೂ ಭಿಡೆ ಇಲ್ಲದೇ ಕಟ್ಟುತ್ತಾರೆ. ಅಲ್ಲಂತೂ ಮಹಾತ್ಮರಿಗೆಲ್ಲ ಪ್ರತಿಮೆ ಇದೆ ಅಥವಾ ಪ್ರತಿಮೆ ಇಲ್ಲದವರು ಮಹಾತ್ಮರೇ ಅಲ್ಲ. ಇದು ಚಿಕಿತ್ಸೆಯೇ ಇಲ್ಲದ ಒಂದು ಬಗೆಯ ಸೋಂಕು.
ಈ ವ್ಯಾಧಿ ಕರ್ನಾಟಕಕ್ಕೂ ಹರಡಿದೆ. ಆದರೆ ತಮಿಳರ ಅಥವಾ ಉತ್ತರ ಪ್ರದೇಶದವರ ಪ್ರಮಾಣದಲ್ಲಿ ಅಲ್ಲ ಎಂಬುದೇ ಸಮಾಧಾನ. ವಿಶ್ವವಿದ್ಯಾನಿಲಯದಂಥ ಉನ್ನತ ಅಧ್ಯಯನ ಕೇಂದ್ರಗಳಿಗೆ ಯಾವುದೇ ವ್ಯಕ್ತಿಯ ಹೆಸರನ್ನು ಇಡುವುದು ಅಷ್ಟು ಸಮಂಜಸವಲ್ಲವೇನೋ. ಹಾಗೆ ನೋಡಿದರೆ ಆಯಾ ಊರಿನ ಹೆಸರುಳ್ಳ ವಿಶ್ವವಿದ್ಯಾನಿಲಯಗಳು ಪ್ರಸಿದ್ಧವಾದಷ್ಟು ವ್ಯಕ್ತಿ ಹೆಸರಿನ ವಿಶ್ವವಿದ್ಯಾನಿಲಯಗಳು ಪ್ರಸಿದ್ಧವಾಗಿಲ್ಲ. ಹಾರ್ವರ್ಡ್, ಕೇಂಬ್ರಿಜ್, ಆಕ್ಸ್‍ಫರ್ಡ್, ಪ್ರಿನ್ಸ್‍ಟನ್ ಹೀಗೆ ಯಾವುದೇ ವಿವಿಗಳನ್ನು ನೋಡಿ. ವ್ಯಕ್ತಿ ಎಷ್ಟೇ ಉನ್ನತ ಸ್ಥಾನ ತಲುಪಿದರೂ ಅವನಿಗೆ ಮಿತಿ ಇದ್ದೇ ಇದೆ. ವ್ಯಕ್ತಿಯೊಬ್ಬ ಸಮಾಜವಲ್ಲ; ಮನೆಯೊಂದು ಊರಲ್ಲ. ವಿಶ್ವ ವಿಶಾಲ ಚಿಂತನೆ ಕಲಿಸಬೇಕಾದ ವಿಶ್ವವಿದ್ಯಾನಿಲಯ ಯಾವುದೇ ವ್ಯಕ್ತಿ ಹೆಸರಿನೊಂದಿಗೆ ಅಂಟಿಕೊಂಡರೆ ಅನಪೇಕ್ಷಿತವಾಗಿ ಅದಕ್ಕೆ ಮಿತಿ, ಸೀಮಿತತೆ ಪ್ರಾಪ್ತವಾಗುತ್ತದೆ. ಆರಂಭದಲ್ಲಿ ಶಿವಮೊಗ್ಗ ವಿಶ್ವವಿದ್ಯಾನಿಲಯಕ್ಕೆ ಸಹ್ಯಾದ್ರಿ ವಿಶ್ವವಿದ್ಯಾನಿಲಯ ಎಂದು ಹೆಸರಿಡುವ ಉದ್ದೇಶವಿತ್ತು. ಆನಂತರ ಕುವೆಂಪು ಶಿವಮೊಗ್ಗದವರೆಂಬ ಕಾರಣಕ್ಕೆ ಅವರ ಹೆಸರಿನ ಲಾಬಿ ಆರಂಭಿಸಿ, ಕುವೆಂಪು ಹೆಸರನ್ನೇ ಇಡಲಾಯಿತು. ಬೆಟ್ಟಗುಡ್ಡಗಳ “ಸಹ್ಯಾದ್ರಿ” ಹೆಸರೇ ಇದ್ದಿದ್ದರೆ ಯಾರೂ ಯಾರ ಪರವಾಗಿಯೂ ಲಾಬಿ ಮಾಡಲಾಗುತ್ತಿರಲಿಲ್ಲ. ರಾಜಕಾರಣಿಗಳ ಓಲೈಕೆಗೂ ಆಸ್ಪದ ಇರುತ್ತಿರಲಿಲ್ಲ. ವಿಶ್ವವಿದ್ಯಾನಿಲಯಕ್ಕೆ ತಮ್ಮ ಹೆಸರು ಇಡಬೇಡಿ ಎಂದು ಕುವೆಂಪು ಅವರೇ ಹೇಳಬಹುದಿತ್ತು. ಅದು ಅಷ್ಟು ಸುಲಭವಲ್ಲ. ಆದರೆ ಸಿದ್ಧಗಂಗಾ ಶ್ರೀಗಳು ಆ ಕೆಲಸ ಮಾಡಿದ್ದಾರೆ. ಶ್ರೀಗಳ ನಿರ್ಧಾರದ ಉದ್ದೇಶದ ಹಿಂದಿನ ಮೌಲ್ಯ ಇಂದಿಗೂ ಯಾರಿಗೂ ಅರ್ಥವಾಗಿಲ್ಲ. ವ್ಯಕ್ತಿಪೂಜೆಗೂ ಮೌಲ್ಯಾರಾಧನೆಗೂ ವ್ಯತ್ಯಾಸ ತಿಳಿಸುವವರು ಯಾರು ಶಿವನೇ?
ಪುಸ್ತಕ:
ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)
ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298
No comments:
Post a Comment