ಆಶಯ (ಭಾವ) ಹಾಗೂ ಭಾಷಿಕ ಅಂಶಗಳು
ಪಕ್ಕಿಯ ಕುರುಹ ಬಲ್ಲರು ಪೇಳಿರಿ-ತನ್ನ
ಮಕ್ಕಳಿಗೆ ವೈರಿ ಮೂಜಗದೊಳಗೆಲ್ಲ !!ಪ!!
ಬಣ್ಣ ಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು
ಕಣ್ಣು ಮುಚ್ಚಲಿಲ್ಲ ತೆರೆಯಲಿಲ್ಲ
ಹುಣ್ಣಿಮೆ ಮುಂದಿನ ಬೆಳಗಲಿ ಬಾಹೋದು
ತಣ್ಣನೆ ಹೊತ್ತಲಿ ತವಕಗೊಂಬುವುದು 1
ಕೆಂಬಲ್ಲಿನ ಪಕ್ಷಿ ಕೊಂಬುದು ರಸಗಳ
ಹಂಬಲ ಮಾಳ್ಪುದು ಹರುಷದಿಂದ
ತುಂಬಿ ವರ್ಣನ ತೆತ್ತವೆ ನಾಲ್ಕು ರವೆ ಎಂಟು
ಜಾಂಬವರು ಮೆಚ್ಚುವರು ಜಾಣರಿಗಳವಲ್ಲ 2
ಉಂಡರೂ ದಣಿಯದು ಊರ ಸೇರದ ಪಕ್ಷಿ
ಮಂಡೆಯ ಮೇಲೆರಡು ಕೋಡದಕೆ
ಗುಂಡಿಗೆಯೊಳು ಮೂಲಗಳುಂಟು ಧರೆಯೊಳು
ಗಂಡನ ನುಂಗುವುದು ಗಜಮುಖದ ಪಕ್ಷಿ 3
ಗಿಡ್ಡ ಮೀಸೆಗಳುಂಟು ಗರುಡ ಎನಬೇಡಿ
ಒಡ್ಡನಪ್ಪಿ ಬಾಹೋದು ವರುಷಕೊಮ್ಮೆ
ಗುಡ್ಡದೊಳಿರುವುದು ದೊರೆಗಳಿಗಂಜದು
ಹೆಡ್ಡರಿಗಳವಲ್ಲ ಹೇಮ ವರ್ಣದ ಪಕ್ಷಿ 4
ಹಕ್ಕರಿಕೆ ಗರಿಯಂತೆ ಹರವು ರೆಕ್ಕೆಗಳುಂಟು
ಒಕ್ಕಲು ಮೇಲದು ಒಲಿದವಗೆ
ದಿಕ್ಕಿನಲ್ಲಿ ಕಾಗಿನೆಲೆಯಾದಿಕೇಶವನ
ಮುಕ್ಕಣ್ಣನವತಾರ ಹನುಮಂತ ಬಲ್ಲ 5
ಕನಕದಾಸ (1508-1606) ಕನ್ನಡದ ಒಬ್ಬ ಶ್ರೇಷ್ಠ ಕವಿ, ದಾರ್ಶನಿಕ ಹಾಗೂ ಕರ್ನಾಟಕ ಸಂಗೀತದ ವಾಗ್ಗೇಯಕಾರ. ಇವರನ್ನು ಸಂತಕವಿ ಎಂದರೂ ಸರಿಯೆ. ವ್ಯಾಸತೀರ್ಥರ ಶಿಷ್ಯರಾದ ಇವರು ಮಧ್ವಾಚಾರ್ಯರು ಪ್ರಸ್ತುತಪಡಿಸಿದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ನಳಚರಿತೆ, ಹರಿಭಕ್ತಿಸಾರ, ಮೋಹನತರಂಗಿಣಿ, ನೃಸಿಂಹಸ್ತವ ಸ್ತೋತ್ರ, ಕೀರ್ತನೆ, ಪದ ಮತ್ತು ಉಗಾಭೋಗ ರಚನೆ ಇವರ ಸೃಷ್ಟಿಯಲ್ಲಿ ಮುಖ್ಯವಾದವು. ಅಲೌಕಿಕ ಅನುಭವದ ಕೃತಿಗಳನ್ನು ಇವರು ಹೆಚ್ಚು ರಚಿಸಿದ್ದರೂ ತಮ್ಮ ಲೌಕಿಕ ಅನುಭವದ ಮೂಲಕ ಜೀವನವನ್ನು ಕಂಡು ಆಮೂಲಕ ಜನಸಾಮಾನ್ಯರಿಗೆ ಔನ್ನತ್ಯಕ್ಕೇರುವ ದಾರಿ ತೋರಿಸುವ ರಚನೆಗಳೂ ಇವೆ. ರಾಮಧಾನ್ಯ ಚರಿತೆ ಇಂಥ ಕೃತಿ.
ಕನಕರ ಸೃಷ್ಟಿಯಲ್ಲಿ ಮೇಲ್ನೋಟಕ್ಕೆ ಅರ್ಥ ಒಂದಿರುವ ಆದರೆ ಒಗಟಿನಂತೆ ಒಳಗೊಂದು ಅರ್ಥ ಹುದುಗಿಸಿಕೊಂಡಿರುವ ರಚನೆಗಳಿವೆ. ಇವುಗಳನ್ನು “ಮುಂಡಿಗೆ” ಎಂದು ಗುರುತಿಸಲಾಗಿದೆ. ಅಲ್ಲಮಪ್ರಭುವಿನ ಬೆಡಗಿನ ವಚನಗಳಂತೆ ತೀವ್ರ ಆಧ್ಯಾತ್ಮಿಕ ಅನುಭವವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ರಚನೆಗಳು ಇವು. ಅಭಿವ್ಯಕ್ತಿಗೆ ಸಿಗದ ಅಲೌಕಿಕ ಸತ್ಯವನ್ನು ಹಾಗೂ ದರ್ಶನವನ್ನು ಸಂಕೇತಗಳನ್ನು ಬಳಸಿ ಅಕ್ಷರ ರೂಪದಲ್ಲಿ ಗೇಯ ಗುಣ ಇರುವಂತೆ ಹೇಳಿರುವುದು ಇವುಗಳ ವಿಶೇಷ. ಮುಂಡಿಗೆಗಳಲ್ಲಿ ಬಳಸುವ ಸಂಕೇತಗಳು ಎಲ್ಲರಿಗೂ ಪರಿಚಿತವಾದವು. ಆದರೆ ಅವು ಹೇಳುವ ಒಳಾರ್ಥ ಎಲ್ಲರಿಗೂ ತಿಳಿಯದಂಥವು, ಗುಹ್ಯವಾದವು. ಪ್ರಸ್ತುತ ಉಲ್ಲೇಖಿಸಿರುವ ಮುಂಡಿಗೆ ಅವರ ಇಂಥ ವಿಶಿಷ್ಟ ರಚನೆಗಳಲ್ಲೊಂದು.
ಕನಕರ ಇಂಥ ರಚನೆಗಳಲ್ಲಿ ಮೂರು ಹಂತಗಳಿವೆ. ಮೊದಲನೆಯದು ಸರಳ, ನೇರ ಅರ್ಥವುಳ್ಳ “ಕುಲಕುಲಕುಲವೆಂದು ಹೊಡೆದಾಡದಿರಿ” ಎಂಬಂಥ ಕೃತಿಗಳು. ಎರಡನೆಯದು “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ, ನೀ ದೇಹದೊಳಗೊ ನಿನ್ನೊಳು ದೇಹವೊ; ಬಯಲು ಆಲಯದೊಳಗೊ ಆಲಯವು ಬಯಲೊಳಗೊ...” ಎಂಬಂಥವು. ಇನ್ನು ಮೂರನೆಯದು “ಪಕ್ಕಿಯ ಕುರುಹ ಬಲ್ಲರು ಪೇಳಿರಿ” ಎನ್ನುವಂಥ ರಚನೆಗಳು. ಮೊದಲವರ್ಗದ ರಚನೆಗಳು ಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡಿವೆ. ಎರಡನೆಯ ವರ್ಗದವು ಜೀವನದಲ್ಲಿ ಸ್ವಲ್ಪ ನೊಂದು ಬೆಂದು ಅಧ್ಯಾತ್ಮದತ್ತ ಹೊರಳುವ ಮಧ್ಯಮ ಸ್ತರದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡಿವೆ. ಇನ್ನು ಮೂರನೆಯ ವರ್ಗದವು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ ಸಾಧಕರನ್ನು ದೃಷ್ಟಿಯಲ್ಲಿಟ್ಟುಕೊಂಡಿವೆ. ಹೀಗಾಗಿ ಕನಕರು ಎಲ್ಲರ ಕವಿಯಾಗಿದ್ದರೂ ಎಲ್ಲರಿಗೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಯಾವ ಸ್ತರದವರಿಗೆ ಯಾವುದು ಬೇಕೋ ಅದು ಅವರ ಜೋಳಿಗೆಯಲ್ಲಿದೆ. ಪ್ರಸ್ತುತ ಪರಿಶೀಲಿಸುವ ಮುಂಡಿಗೆ ಮೂರನೆಯ ವರ್ಗಕ್ಕೆ ಸೇರುವ ಸವಾಲೊಡ್ಡುವ ರಚನೆ.
ಆಶಯ:
ಅತಿಮಾನುಷವಾದ ವಸ್ತು, ಘಟನೆ ಹಾಗೂ ಪಾತ್ರಗಳ ವಿವರವನ್ನು ಆಶಯ ಎಂದು ಹೇಳಲಾಗುತ್ತದೆ. ಜನಪದ ಕಥೆಗಳಲ್ಲಿ ಕಂಡುಬರುವ ಮಂತ್ರದಂಡ, ಮಾಯಾಚಾಪೆ; ನೀರಿನಿಂದ ಬೆಂಕಿ ಉರಿಸುವುದು, ನೀರಿನ ಮೇಲೆ ನಡೆಯುವುದು; ಮಾಯಾ ಕುದುರೆ, ಗಂಧರ್ವ ಇತ್ಯಾದಿ ಈ ವರ್ಗದವು. ಈ ಮುಂಡಿಗೆಯಲ್ಲಿ ಕನಕದಾಸರು ಹೇಮ ವರ್ಣದ ಪಕ್ಷಿಯನ್ನು ವರ್ಣಿಸುತ್ತಾರೆ. ಈ ದೃಷ್ಟಿಯಿಂದ ಇದು ಈ ಮುಂಡಿಗೆಯಲ್ಲಿನ ಆಶಯ. ಈ ಆಶಯದ ಮೂಲಕ ಅವರು ಹೇಳುತ್ತಿರುವ ಸಂಗತಿ ಮೇಲ್ನೋಟಕ್ಕೆ ಅಲೌಕಿಕವಾದುದು ಅನಿಸುತ್ತದೆ. ಒಂದು ಓದಿಗೆ ದಕ್ಕುವ ಆಶಯವೂ ಇದಲ್ಲ. ಆತ್ಯಂತಿಕವಾದ ಆಧ್ಯಾತ್ಮಿಕ ದರ್ಶನವನ್ನು ಅವರು ಈ ಕೀರ್ತನೆಯಲ್ಲಿ ದಾಖಲಿಸಿದ್ದಾರೆ.
ಜೀವನ ಹಾಗೂ ಅನುಭವದ ದೃಷ್ಟಿಯಿಂದ ಸ್ವತಃ ಕನಕದಾಸರೇ ಒಂದು ಆಶಯ. ಅವರ ಮುಂಡಿಗೆ ಇಂಥ ಆಶಯದ ಆಶಯ! ಅಂದರೆ ಇದೊಂದು ಅಧಿಆಶಯವೇ. ಹೀಗಿದ್ದಾಗ ಮುಂಡಿಗೆಗಳನ್ನು ಒಡೆದು ಅರ್ಥಮಾಡಿಕೊಂಡು ಮತ್ತೊಬ್ಬರಿಗೆ ಅರ್ಥವಾಗುವಂತೆ ಹೇಳುವುದು ಸುಲಭವಲ್ಲ. ಸದ್ಯ ಈ ಸಂದರ್ಭದಲ್ಲಿ ಆಶಯ ಎಂಬುದನ್ನು ಕೃತಿಯ ಭಾವ ಎಂದು ಇಟ್ಟುಕೊಂಡು ಗಮನಿಸಬಹುದು. ಪ್ರಾನ ಪಕ್ಷಿ ಅಥವಾ ಕಾಲಪಕ್ಷಿ ಈ ಮುಂಡಿಗೆಯಲ್ಲಿ ವರ್ಣಿತವಾಗಿದೆ. ನಾಲ್ಕು ಸಾಲಿನ, ಐದು ಚರಣಗಳ, ಆದಿಪ್ರಾಸವುಳ್ಳ ಮುಂಡಿಗೆ ಇದು.
“ಪಕ್ಕಿಯ ಕುರುಹ ಬಲ್ಲರು ಪೇಳಿರಿ-ತನ್ನ ಮಕ್ಕಳಿಗೆ ವೈರಿ ಮೂಜಗದೊಳಗೆಲ್ಲ” ಎಂಬ ಪಲ್ಲವಿಯ ಸಾಲು ಸ್ವರ್ಗ, ಮತ್ರ್ಯ ಮತ್ತು ಪಾತಾಳ ಈ ಮೂರೂ ಲೋಕಗಳಲ್ಲಿ ತನ್ನ ಮಕ್ಕಳು ಅಂದರೆ ತನ್ನದೇ ಸೃಷ್ಟಿಯನ್ನು ತಾನೇ ಸಾಯಿಸುವ ಹಕ್ಕಿಯ ಗುರುತನ್ನು ಬಲ್ಲವರು ಹೇಳಿರೆಂದು ಆರಂಭವಾಗುತ್ತದೆ. ಇಲ್ಲಿ ಹೇಳಲಾದ ಪಕ್ಕಿ ಪ್ರಾಣಪಕ್ಷಿ.
ಒಂದರಿಂದ ಮೂರನೆಯ ಚರಣಗಳಲ್ಲಿ ಹಕ್ಕಿಯ ವರ್ಣನೆ ಇದೆ. ಅದು ಬಣ್ಣ ಬಣ್ಣದ ಪಕ್ಷಿ, ಅದಕ್ಕೆ ರಂಧ್ರಗಳಿವೆ (ವೆಜ್ಜ), ಅರೆತೆರೆದ ಕಣ್ಣು ಅದರದು. ಅಮಾವಾಸ್ಯೆಗೆ ಬರುವ ಇದಕ್ಕೆ ಸಂಜೆ ವೇಳೆ ವೃದ್ಧಾಪ್ಯ (?) ಬಹಳ ಪ್ರಿಯ (1). ದೇಹದ ಷಡ್ರಸ ಕುಡಿಯುವ ಈ ಹಕ್ಕಿಯ ಹಲ್ಲು ಕೆಂಪು. ನಾಲ್ಕು ಪುರುಷಾರ್ಥಗಳು ಅದಕ್ಕೆ ತೆತ್ತುಕೊಂಡಿವೆ. ಪ್ರಾಣದೇವರ (ಹನುಮಂತನ) ಒಡನಾಡಿಗಳಾದ ಜಾಂಬವರು ಮೆಚ್ಚುತ್ತಾರೆ. ಕೇವಲ ಬುದ್ಧಿವಂತರಿಗೆ ಇವನ ಗ್ರಹಿಕೆ ದಕ್ಕುವುದಿಲ್ಲ (2). ಎಷ್ಟೇ ಪ್ರಾಣಗಳನ್ನು ಹೀರಿದರೂ ತನ್ನ ಮೂಲ ನೆಲೆಗೆ ಅದು ಹೋಗುವುದಿಲ್ಲ. ಇಲ್ಲೇ ಇರುತ್ತದೆ. ತಲೆ ಮೇಲೆ ಅದಕ್ಕೆ ಕೋಡುಗಳಿವೆ (ಯಮನ ವರ್ಣನೆ?), ದೊಡ್ಡ ಮುಖದ ಈ ಹಕ್ಕಿ ಭೂಮಿ ಮೇಲಿನ ಯಜಮಾನನ್ನೂ ನುಂಗುತ್ತದೆ (3).
ಚಿಗುರು ಮೀಸೆ ಇರುವ ಈ ಹಕ್ಕಿ ನಾರಾಯಣನ ವಾಹನ ಗರುಡವಲ್ಲ; ಅದು ಕಾಲಪಕ್ಷಿ. ವರ್ಷಕ್ಕೊಮ್ಮೆ ಬರುತ್ತದೆ (ಯುಗಾದಿ?). ದೊರೆಗಳಿಗೂ ಹೆದರದ ಬಂಗಾರ ಬಣ್ಣದ ಈ ಹಕ್ಕಿ ಹೆಡ್ಡರಿಗೆ ಅರ್ಥವಾಗುವುದಿಲ್ಲ (4).
ಚರ್ಮದ ಮೇಲುಹೊದಿಕೆ ಅದರ ವಿಶಾಲ ರೆಕ್ಕೆ. ಕಾಗಿನೆಲೆಯ ಆದಿಕೇಶವನ ಧ್ಯಾನದ ಹಾದಿಯಲ್ಲಿ ಒಲಿದವನ ಪಾಲಿಗೆ ಅದು ಶ್ರೇಷ್ಠ. ಮುಕ್ಕಣ್ಣ (ರುದ್ರ)ನ ಅವತಾರವಾದ ಹನುಮಂತನಿಗೆ ಮಾತ್ರ ಇವೆಲ್ಲ ಚೆನ್ನಾಗಿ ತಿಳಿದಿದೆ (5).
ಪ್ರಾಣದ ಅರಿವು ಜಾಣರಿಗೂ ಆಗದು, ಹೆಡ್ಡರಿಗೂ ಆಗದು; ಕೇಶವನ ಭಕ್ತರು ಇದನ್ನು ಅರಿತರೆ ಅರಿಯಬಹುದು ಎಂಬುದನ್ನು ತಿಳಿಸುವುದು ಈ ಮುಂಡಿಗೆಯ ಆಶಯ.
ಭಾಷಿಕ ಸ್ವಾರಸ್ಯ:
ಉಪಮೆ, ರೂಪಕ ಮತ್ತು ಶ್ಲೇಷೆಗಳಿಂದ ತುಂಬಿ ಶಬ್ದವೊಂದರಲ್ಲಿ ಏಕಕಾಲಕ್ಕೆ ನಾನಾರ್ಥಗಳು ಹೊರಡುವಂತೆ ಭಾಷೆಯನ್ನು ವಿಶಿಷ್ಟವಾಗಿ ದುಡಿಸಿಕೊಂಡ ಪರಿಯನ್ನು ಇಲ್ಲಿ ಕಾಣಬಹುದು. ಈ ಮುಂಡಿಗೆಯನ್ನು ಶಬ್ದಶಃ ಅರ್ಥಮಾಡಲಾಗದು. ಒಂದು ಚರಣ ಅಥವಾ ಕನಿಷ್ಟ ಪಕ್ಷ ಒಂದು ಸಾಲನ್ನು ಇಡಿಯಾಗಿಯೇ ಗ್ರಹಿಸಬೇಕು. ಹೋಗುವುದು ಎಂಬುದನ್ನು ‘ಹೋಹುದು’ ಎಂದು ಬಳಸಿದಂತೆ ಬರುವುದು ಎಂಬರ್ಥದಲ್ಲಿ ಬಳಸುವ ‘ಬಾಹೋದು’ ಎಂಬುದು ಅಪರೂಪದ ಪ್ರಯೋಗ. ಮೂಜಗ, ಕೆಂಬಲ್ಲು, ಮಂಡೆ, ಗುಂಡಿಗೆ, ಗಿಡ್ಡ, ಒಡ್ಡ, ಹೆಡ್ಡ, ಹಕ್ಕರಿಕೆ, ಒಕ್ಕಲು, ಮುಕ್ಕಣ್ಣ ಇತ್ಯಾದಿ ಆಡುನುಡಿಯ ಸಹಜ ಪದಗಳ ಜೊತೆಗೆ ‘ವೆಜ್ಜ’ ದಂಥ ಭಾರವಾದ ಪದವನ್ನೂ ಬಳಸಲಾಗಿದೆ. ವೈರಿ, ರಸ, ವರ್ಣನ, ಮೂಲ, ಧರೆ ಮುಂತಾದ ಕೆಲವೇ ಕೆಲವು ಸಂಸ್ಕøತ ಪದಗಳನ್ನು ಒಳಗೊಂಡಿದ್ದರೂ ಅವು ಬಳಕೆಯಾದ ರೀತಿ ಮತ್ತು ಸ್ಥಳ ಮುಂಡಿಗೆಯ ಅರ್ಥ ವಿಸ್ತಾರಕ್ಕೆ ಕಾರಣವಾಗಿದೆ.
ಕನ್ನಡ ಆಡುಭಾಷೆ, ಗ್ರಾಂಥಿಕ ಭಾಷೆ ಮತ್ತು ಸಂಸ್ಕøತದ ಅಲ್ಪ ಪರಿಚಯ ಇಲ್ಲದೇ ಈ ಮುಂಡಿಗೆ ಮೇಲ್ನೋಟಕ್ಕೂ ಅರ್ಥವನ್ನು ಬಿಟ್ಟುಕೊಡದು. ಶಬ್ದ ಚಮತ್ಕಾರದ ಮೂಲಕ ಆಧ್ಯಾತ್ಮಿಕ ಅನುಭವವನ್ನು ತಿಳಿಸುವ ಈ ಮುಂಡಿಗೆಯಲ್ಲಿರುವ ಗೇಯಗುಣ ಕಡಿಮೆಯೇ. ಪದ್ಯದಲ್ಲಿನ ಸಂಯುಕ್ತಾಕ್ಷರಗಳ ಹೆಚ್ಚಿನ ಬಳಕೆ ಇದಕ್ಕೆ ಕಾರಣ. ಮೂರು ಚರಣಗಳ ಪ್ರಾಸಸ್ಥಾನದಲ್ಲಿ ಬಂದಿರುವ ಒತ್ತಕ್ಷರಗಳಿಂದ ಕೇಳುಗನ ಮನಸ್ಸಿನ ಮೇಲೆ ಪದ್ಯ ಅಚ್ಚಳಿಯದಂತೆ ಕೂರುವಂತಾಗಿದೆ.
ಈ ಮುಂಡಿಗೆಯ ಅರ್ಥ ಬಿಡಿಸುವುದು ಕಠಿಣ ಹಾಗೂ ಇದೊಂದು ಕಗ್ಗಂಟು ಎನಿಸುವುದೇ ಇದರಲ್ಲಿ ಬಳಕೆಯಾದ ಭಾಷಿಕ ಸಂರಚನೆಯಿಂದ. ಪುರಾಣ, ಸಾವನ್ನು ಕುರಿತ ಜನಪದ ಕಲ್ಪನೆ, ಯಮನ ವರ್ಣನೆ, ಹನುಮಂತನ ಪೌರಾಣಿಕ ಚಿತ್ರಣ ಹಾಗೂ ಲೋಕ ಪರಲೋಕಗಳ ಪರಿಕಲ್ಪನೆ ಮೊದಲಾದವುಗಳನ್ನು ನೆನಪಿಸುವ ಪದಗಳನ್ನೇ ಇಲ್ಲಿ ಬಳಸಲಾಗಿದೆ. ಹೀಗಾಗಿ ಪದ್ಯಕ್ಕೆ ಗೂಢಾರ್ಥ ಪ್ರಾಪ್ತವಾಗಿದೆ. ನಮ್ಮ ಅರಿವಿಗೆ ನಿಲುಕುವ ಯಾವುದೇ ಅರ್ಥವ್ಯಾಪ್ತಿಯಲ್ಲಿ ಇದನ್ನು ಅರ್ಥೈಸಲು ಮುಂದಾದರೂ ಮತ್ತೊಂದು ಅರ್ಥ ಇರುವಂತೆ ಭಾಸವಾಗುತ್ತದೆ. ಹೀಗಾಗಿ ಈ ಮುಂಡಿಗೆಗೆ ಇದೊಂದೇ ಅರ್ಥ, ‘ಇದಮಿತ್ಥಂ’ ಎನ್ನಲಾಗದು. ದೇವ-ಜೀವಗಳ ಭೇದವನ್ನು ಬಿಂಬ-ಪ್ರತಿಬಿಂಬ ತರ್ಕದ ಮೂಲಕ ತಿಳಿಸುವ ಯತ್ನವೂ ಈ ಮುಂಡಿಗೆಯಲ್ಲಿರುವಂತೆ ಕಾಣುತ್ತದೆ.
ಪುಸ್ತಕ:
No comments:
Post a Comment