Monday, 24 January 2022

ಕನಕರು ಕಲಿಸುವ ಪಾಠ

ಇದೊಂದು ವಿಚಿತ್ರ ಸನ್ನಿವೇಶ. ಕನ್ನಡ ಸಾಹಿತ್ಯದಲ್ಲಿ ಅಷ್ಟೇಕೆ ಇಡೀ ವಿಶ್ವದಲ್ಲಿ ತಮ್ಮ ತಾತ್ತ್ವಿಕ, ದಾರ್ಶನಿಕ, ಸಾಹಿತ್ಯಕ ಮತ್ತು ಸಂಗೀತಾತ್ಮಕ ಕೊಡುಗೆಗಳಿಂದ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಕನಕರ (1509-1609) ನಿಜವಾದ ಹೆಸರಾಗಲಿ, ತಂದೆ ತಾಯಿಯರ ವಿವರವಾಗಲಿ ಎಲ್ಲವೂ ನಂಬಿಕೆಯಾಗಿಯೇ ಉಳಿದುಬಿಟ್ಟಿದೆ. ಯಾಕೆ ಹೀಗೆ ಎಂದರೆ ಒಂದು ಉತ್ತರ “ಅವರು ಸಂತರು” ಎಂಬುದಾಗಬಹುದು. ಸಂತರಿಗೆ ಎಲ್ಲವೂ ನೀರಮೇಲಿನ ಗುಳ್ಳೆ! ಹೀಗಲ್ಲದಿದ್ದಲ್ಲಿ ಪ್ರಪಂಚದ ಬಗ್ಗೆ, ಜನರ ಮನೋಧರ್ಮದ ಸಣ್ಣತನಗಳ ಬಗ್ಗೆ ಬರೆದ ಅವರು ತಮ್ಮ ಬಗ್ಗೆ ಹೇಳಿಕೊಳ್ಳದಿರುತ್ತಿದ್ದರೆ?

ಸಂತರು ಎಂದಲ್ಲ, ನಮ್ಮ ಪರಂಪರೆಯಲ್ಲಿ ಐರೋಪ್ಯ ಆಗಮನ ಆಗುವವರೆಗೂ ಇದ್ದ ದೃಷ್ಟಿಯೇ ಅದು. “ಆನು-ತಾನು” ಎಂಬುದಕ್ಕೆ ಇಲ್ಲಿ ಆಸ್ಪದವೇ ಇರಲಿಲ್ಲ. ಯಾರೋ ಒಬ್ಬಳು ವೇಶ್ಯೆ ಊರ ಹಿತಕ್ಕಾಗಿ ಕೆರೆ ಕಟ್ಟಿಸುತ್ತಾಳೆ. ಅವಳೇನೂ ತನ್ನ ಹೆಸರು ಶಾಶ್ವತವಾಗಿರಲಿ ಎಂದು ಬಯಸಲೇ ಇಲ್ಲ. ಅವಳ ಕೆಲಸ ಮಾತ್ರ ಶಾಶ್ವತವಾಗಿ ನಿಂತಿತು. ಇಂಥ ನಿದರ್ಶನಗಳು ನಮ್ಮ ಪರಂಪರೆಯಲ್ಲಿ ಅಸಂಖ್ಯ. ಜನಸಾಮಾನ್ಯರೆಲ್ಲ ಇರುವುದೇ ಹಾಗೆ. ಅವರಿಗೆ ಕೆಲಸ ಮುಖ್ಯ. ಹೆಸರಲ್ಲ. ಇಂಥ ಜನಸಾಮಾನ್ಯ ಪರಂಪರೆಯಿಂದ ಬಂದ ಕನಕರದೂ ಇದೇ ಮಾರ್ಗ. ಇವರೋ ಸಂತರಾದರು. ಆದರೆ ಇವರು ಜನಸಾಮಾನ್ಯರ ಪ್ರತಿನಿಧಿ ಎಂಬುದನ್ನು ಮರೆಯುವಂತಿಲ್ಲ. 

ಕನಕರು ಇಂದು ಎರಡು ಕಾರಣಕ್ಕೆ ಮುಖ್ಯರಾಗುತ್ತಾರೆ. ತತ್ತ್ವ, ದರ್ಶನಗಳೆಲ್ಲ ಸಂಸ್ಕøತದಲ್ಲಿದ್ದ ಕಾಲದಲ್ಲಿ, ಅವರು ಘನ ತತ್ತ್ವಗಳನ್ನು ಸರಳ ಕನ್ನಡದಲ್ಲಿ ಒಡಮೂಡಿಸಿದರು ಎಂಬುದು ಮೊದಲನೆಯದು. ಅವರ ದರ್ಶನವನ್ನು ಸಾರುವ ಮೋಹನತರಂಗಿಣಿ, ನಳಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯಚರಿತೆ ಕೃತಿಗಳು, ಅಸಂಖ್ಯ ಕೀರ್ತನೆಗಳು, ಉಗಾಭೋಗ ಮತ್ತು ಮುಂಡಿಗೆಗಳು ಎಲ್ಲವೂ ಇರುವುದು ಕನ್ನಡದಲ್ಲಿ. ಸದಾ ಕಾಲ ನಮ್ಮನ್ನು ಆವರಿಸುವ “ನಾನು” ಎಂಬುದನ್ನು ಕಳಚಿಕೊಳ್ಳುವ ವಿಧಾನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಹೇಳಿ ಕೊಟ್ಟರು ಎಂಬುದು ಮತ್ತೊಂದು. ಶಿಷ್ಯರನ್ನು ಕುರಿತು ‘ನಿಮ್ಮಲ್ಲಿ ಮೋಕ್ಷಕ್ಕೆ ಯಾರು ಹೋಗುತ್ತೀರಿ?’ ಎಂದು ವ್ಯಾಸರಾಜರು ಕೇಳಿದಾಗ ಕನಕರು ‘ನಾನು ಹೋದರೆ ಹೋದೇನು’ ಎಂದು ಉತ್ತರಿಸಿದ್ದು ಬಹಳ ಅರ್ಥಗರ್ಭಿತ. ಈ ಚುಟುಕು ಉತ್ತರದಲ್ಲಿ ಪ್ರಜ್ಞೆಯೂ ಇದೆ, ದರ್ಶನವೂ ಇದೆ. 

ನಾವಿಂದು ಬಸ್, ರೈಲು, ವಿಮಾನಗಳಲ್ಲಿ ಓಡಾಡುತ್ತೇವೆ; ಹೊಟೇಲುಗಳಲ್ಲಿ ಆಹಾರ ಸ್ವೀಕರಿಸುತ್ತೇವೆ. ನೂರಾರು ಜನ ಒಟ್ಟಿಗೇ ಇಲ್ಲೆಲ್ಲ ಪ್ರಯಾಣಿಸುತ್ತೇವೆ; ತಿನ್ನುತ್ತೇವೆ, ಕುಡಿಯುತ್ತೇವೆ. ಈ ವ್ಯವಸ್ಥೆಯನ್ನೇ ಗಮನಿಸಿ. ಬಸ್ಸು, ರೈಲು, ವಿಮಾನಗಳ ಚಾಲಕರು ಯಾವ ಜಾತಿ ಎಂದು ನೋಡುತ್ತೇವೆಯೇ? ಹೊಟೇಲಿಗೆ ಬಂದ ಪದಾರ್ಥ ಕೊಟ್ಟವರು, ಬೆಳೆದವರು, ಬೇಯಿಸಿದವರು ಯಾರು ಎಂದು ನೋಡುತ್ತೇವೆಯೇ? ಪುಸ್ತಕ, ಪತ್ರಿಕೆ ಓದುವಾಗ, ಟಿವಿ ನೋಡುವಾಗ, ಸಿನಿಮಾ ವೀಕ್ಷಿಸುವಾಗ ಯಾವಾಗಲಾದರೂ ಅವುಗಳ ಹಿಂದೆ ಕೆಲಸ ಮಾಡಿದ ನೂರಾರು ಕೈಗಳು ಯಾವ ಜಾತಿಯವು ಎಂದೇನಾದರೂ ತಲೆ ಕೆಡಿಸಿಕೊಳ್ಳುತ್ತೇವೆಯೇ? ಇಲ್ಲ. ಅವೆಲ್ಲ ಅನಗತ್ಯ. ಇಷ್ಟಾದರೂ ಜಾತಿ ಜಗಳಗಳು, ಕಚ್ಚಾಟಗಳು ನಿಂತಿವೆಯೇ? ಇಲ್ಲ. ಈ ವಿರೋಧಾಭಾಸವನ್ನು ಕನಕರು ಅಂದೇ ಕಂಡಿದ್ದಾರೆ. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಕೀರ್ತನೆಯಲ್ಲಿ ಅಡಗಿದ ಸತ್ಯ ಮತ್ತು ತತ್ತ್ವ ಇದೇ. ಅವರು ಹೇಳುತ್ತಾರೆ-‘ಎಲ್ಲರೂ ಹುಟ್ಟುವ ದಾರಿ ಒಂದೇ, ತಿನ್ನುವ ಆಹಾರ ಒಂದೇ, ಕುಡಿಯುವ ನೀರೂ ಒಂದೇ, ಮತ್ತೆ ಈ ಕುಲದ ಭೇದವೇಕೆ?’ ಕನಕರು ಅಂದು ಕೇಳಿದ ಈ ಪ್ರಶ್ನೆಯನ್ನು ನಾಗರಿಕ ಸಮಾಜ ಇಂದಿಗೂ ಅರ್ಥಮಾಡಿಕೊಂಡಿಲ್ಲ.

ಯಾರೂ ಯಾವ ಜಾತಿ ಧರ್ಮದಲ್ಲೂ ಹುಟ್ಟುವುದಿಲ್ಲ; ಅವರವರಲ್ಲಿ ಜಾತಿ ಧರ್ಮಗಳು ಹುಟ್ಟಬೇಕಷ್ಟೆ. ‘ಎನ್ನದೆಂದು ತನ್ನದೆಂದು ಹೊನ್ನು ಹೆಣ್ಣು ಮಣ್ಣಿಗಾಗಿ ಬನ್ನಬಟ್ಟು ಬಾಯ ಬಿಡುವೆ ಬರಿದೆ ಮೋಹದಿ’ ಎಂದು ಅವರು ಮನುಷ್ಯರ ಸಾಮಾನ್ಯ ಸ್ವಭಾವವನ್ನು ಚಿತ್ರಿಸಿದ್ದಾರೆ. ಇಂಥವರೆಲ್ಲ ಒಂದೇ ಜಾತಿ ಧರ್ಮದವರು. ಕಷ್ಟಪಟ್ಟು ಬಳಲದೇ ಬರೀ ಸುಖ ಅರಸುವ ಕಾಯಕ್ಕೆ ಕೇಡು ಕಟ್ಟಿಟ್ಟದ್ದು ಎಂಬುದು ಕನಕರ ನುಡಿ. 

ನಾವಿಂದು ಕನಕರು ಯಾರನ್ನು ಕುರಿತು ಹೇಳಿದ್ದಾರೋ ಹಾಗೆಯೇ ಇದ್ದೇವೆ. ನಮ್ಮ ನಮ್ಮ ಭಾಷೆಯನ್ನು ಪರಂಪರೆಯನ್ನು ಮರೆತಿದ್ದೇವೆ. ಅಂದು ಎಲ್ಲೆಡೆ ಮೆರೆಯುತ್ತಿದ್ದ ರಾಜಭಾಷೆಯಾಗಿದ್ದ ಸಂಸ್ಕøತಕ್ಕೆ ಪ್ರತಿಯಾಗಿ ಕನ್ನಡದಲ್ಲೇ ದರ್ಶನವನ್ನು ಕಟ್ಟಿಕೊಟ್ಟ ಕನಕರು ಇಂಗ್ಲಿಷ್‍ನಲ್ಲಿನ ಜ್ಞಾನವನ್ನು ಕನ್ನಡದಲ್ಲೇ ಕಟ್ಟಿಕೊಳ್ಳಲು ನಮಗೆ ಇಂದು ಮಾದರಿಯಾಗಬೇಕಲ್ಲವೇ? 

ಜೀವನದ ಅನಿತ್ಯತೆ ಮತ್ತು ಅನಿಶ್ಚಿತತೆಯನ್ನು ಅರಿತು ಇದ್ದ ಭೋಗಭಾಗ್ಯವನ್ನೆಲ್ಲ ಹಂಚಿ ಜನರಿಂದ ‘ಕನಕ’ ಎಂದು ಕರೆಯಿಸಿಕೊಂಡ ತಿಮ್ಮಪ್ಪ ನಾಯಕರು ಕಾವ್ಯಶಕ್ತಿ, ಭಕ್ತಿ ಮತ್ತು ಸಂತತನದಿಂದ ಜಾತಿ, ಮತಗಳ ಎಲ್ಲೆಯನ್ನು ಮೀರಿದರು. ಆದರೆ ನಾವು ಒಬ್ಬೊಬ್ಬರೂ ಹತ್ತಾರು ಸೈಟು ಮಾಡಲು ಇಲ್ಲದ ಮಸಲತ್ತು ಮಾಡುತ್ತೇವೆ, ರಾಜಕೀಯ ಆರ್ಥಿಕ ಲಾಭ ಪಡೆಯಲು ಒಂದಲ್ಲ ಒಂದು ಜಾತಿಯಲ್ಲಿ ಗುರುತಿಸಿಕೊಳ್ಳಲು ಬಯಸುತ್ತೇವೆ. ಮಾಡಿದ ಸಣ್ಣಪುಟ್ಟ ಕೆಲಸಕ್ಕೂ ಹೆಸರು ಬರಬೇಕೆಂದು ಹಾತೊರೆಯುತ್ತೇವೆ. ಪ್ರಶಸ್ತಿ ಪುರಸ್ಕಾರಗಳಿಗೆ ಬೆನ್ನುಹತ್ತುತ್ತೇವೆ. ಇಲ್ಲಸಲ್ಲದ ಮಾರ್ಗದಿಂದ ಹಣ, ಹೊನ್ನು ಸಂಪಾದಿಸಲು ಹೆಣಗುತ್ತ ಒಳ್ಳೆಯವರಂತೆ ಕಾಣಿಸಿಕೊಳ್ಳಲು ಯತ್ನಿಸುತ್ತೇವೆ. ಅವರು ಇದನ್ನೆಲ್ಲ ಕಂಡವರೇ. ಹಾಗಾಗಿಯೇ ಕನಕರ ಕೀರ್ತನೆಗಳು ನಮ್ಮ ಇಂಥ ವರ್ತನೆಗೆ ಕನ್ನಡಿ ಹಿಡಿಯುತ್ತವೆ. ‘ಎಮ್ಮ ಅರ್ಥ ಎಮ್ಮ ಮನೆಯು ಎಮ್ಮ ಮಕ್ಕಳೆಂಬುವ ಹಮ್ಮು ನಿನಗೆ ಏಕೋ?’ ಎಂದೂ ‘ಅಂತರಂಗದೊಳಗೊಂದು, ಅರ್ಧ ದೇಹದೊಳಗೊಂದು ಚಿಂತನೆಯನುಗೊಳಲೇಕೋ’ ಎಂದೂ ‘ಹತ್ತು ಎಂಟು ಲಕ್ಷಗಳಿಸಿ ಮತ್ತೆ ಸಾಲದೆಂದು ಪರರರ್ಥಕಾಗಿ ಆಸೆಪಟ್ಟು ನ್ಯಾಯಮಾಡುವರೊ, ಬಿತ್ತಿಬೆಳೆವೆವೆಂದು ನೀವು ವ್ಯರ್ಥ ಚಿಂತೆ ಮಾಡಿ ಬರಿದೆ ಸತ್ತು ಹೋದ ಮೇಲೆ ನಿಮ್ಮ ಅರ್ಥವಾರಿಗೊ’ ಎಂದೂ ಕೇಳಿದ್ದಾರೆ. ವಿಜಯನಗರದಂಥ ಮಹಾನ್ ಸಾಮ್ರಾಜ್ಯದ ಏಳು ಬೀಳುಗಳೆರಡನ್ನೂ ಕಂಡವರು ಕನಕರು. ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವವರಿಗೆ ಅವರ ಈ ಮಾತು ಸಾಕು. 

ಲೋಕದ ಸಮಸ್ತವನ್ನೂ ಕಂಡು ಅದರ ನಶ್ವರತೆಯನ್ನು ಅರಿತವರು ಕನಕರು. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ... ಅಂಗಡಿಗಳನು ಹೂಡಿ ವ್ಯಂಗ್ಯ ಮಾತುಗಳಾಡಿ ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ... ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ ಸುಳ್ಳುಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಅವರ ಕೀರ್ತನೆಯಲ್ಲಿ ನಮ್ಮೆಲ್ಲರ ಸುಳ್ಳಿನ ಜೀವನ ಬಯಲಾಗಿದೆ. ಕನಕರು ಅಂದು ಹೇಳಿದ ಮಾತುಗಳು ಇಂದಿಗೂ ಸತ್ಯವೆಂದು ಎಲ್ಲರೂ ಒಪ್ಪುತ್ತಾರೆ. ಅಂದ ಮೇಲೆ ಅವರ ದರ್ಶನವೂ ಸತ್ಯವೇ. ಅದನ್ನೇಕೆ ನಾವು ಪಾಲಿಸುತ್ತಿಲ್ಲ. ಪಾಲಿಸಲು, ಅನುಸರಿಸಲು ಅದೇನು ಕಷ್ಟವೇ? ಅರ್ಥವಾಗದ ಭಾಷೆಯಲ್ಲಿದೆಯೇ? ಅವರು ನುಡಿದ, ನಡೆದ ಮಾರ್ಗ ಅಷ್ಟು ಕಠಿಣವೇ? ಸಾಗಲು ದುರ್ಗಮವೇ?

ಸಂತರಾದ ಕನಕರು ತೋರಿದ ಮಾರ್ಗ ಅಸಾಧಾರಣವಲ್ಲ. ಎಲ್ಲರೂ ಅನುಸರಿಸಬಹುದಾದ ಸರಳ ಮಾರ್ಗ ಅದು. ಆದರೆ ನಾವು ಅದನ್ನು ಮರೆತಿದ್ದೇವೆ. ಈ ಭೂಮಿಗೆ ನಾವೆಲ್ಲ ಎಲ್ಲಿಂದಲೋ ಬಂದ ಅತಿಥಿಗಳು. ಎಷ್ಟು ಕಾಲ ಇರುತ್ತೇವೋ ಯಾರಿಗೂ ತಿಳಿದಿಲ್ಲ. ಅನ್ಯರ ಮನೆಗೆ ಹೋದಾಗ ನಾವೆಷ್ಟು ಎಚ್ಚರದಲ್ಲಿ ಇರುತ್ತೇವೋ ಅಷ್ಟೇ ಎಚ್ಚರದಲ್ಲಿ ಇಲ್ಲೂ ಇರಬೇಕಾದುದು ನಮ್ಮ ಕರ್ತವ್ಯ. ಏಕೆಂದರೆ ಇಲ್ಲಿರುವುದು ಯಾವುದೂ ನಮಗೆ ಯಾರಿಗೂ ಸೇರಿದ್ದಲ್ಲ. ಹೊಟ್ಟೆ ಬಟ್ಟೆಗಳ ಕನಿಷ್ಠ ಅಗತ್ಯ ಪೂರೈಕೆಯೊಂದಿಗೆ ಕಲೆ, ಸಾಹಿತ್ಯ, ಸಂಗೀತಗಳ ಆರಾಧನೆ ಮಾಡುವುದಷ್ಟೇ ನಮ್ಮ ಕೆಲಸ. ಅದರಿಂದ ಸಕಲ ಜೀವಜಗತ್ತಿಗೂ ಕ್ಷೇಮ ಎಂಬುದನ್ನು ತೋರಿಸಿದ್ದಾರೆ ಕನಕರು.






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment