Monday, 24 January 2022

ತುಮಕೂರು ಜಿಲ್ಲೆಯ ಸಾಂಪ್ರದಾಯಿಕ ಆಹಾರ ಪದ್ಧತಿ

ತುಮಕೂರು ಜಿಲ್ಲೆಯ 10 ತಾಲ್ಲೂಕುಗಳು ಭೌಗೋಳಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳಿಂದ ವೈವಿಧ್ಯವಾಗಿವೆ. ತುಮಕೂರು, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್ಲು, ಮಧುಗಿರಿ, ಪಾವಗಡ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ಹಾಗೂ ಸಿರಾ ತಾಲ್ಲೂಕುಗಳು ಮಳೆ ಪ್ರಮಾಣ, ಅದನ್ನು ಅವಲಂಬಿಸಿದ ಕೃಷಿ, ನೀರಾವರಿ ಅನುಕೂಲ ಮತ್ತು ಬೆಳೆ, ಅರಣ್ಯ, ಬಯಲು ಮೊದಲಾದ ಕಾರಣಗಳಿಂದ ಆಯಾ ಭಾಗದಲ್ಲಿ ವಾಸಿಸುವ ಜನಜೀವನದ ಮೇಲೆ ಪ್ರಭಾವ ಬೀರಿವೆ. ಇಡೀ ಜಿಲ್ಲೆಯ ಒಟ್ಟೂ ಭೂ ಪ್ರದೇಶ 4,092 ಚದರ ಮೈಲುಗಳು. ಜನಸಂಖ್ಯೆ 28,78,980 (2011).

ಜಿಲ್ಲೆಯ ಅತ್ಯಂತ ಉತ್ತರದ ಭಾಗ ಬಿಟ್ಟು ಉಳಿದ ಭಾಗದ ವಾಯುಗುಣ ಹಿತಕರವಾಗಿರುತ್ತದೆ. ಶಿರಾದಿಂದ ಉತ್ತರಕ್ಕಿರುವ ಪ್ರದೇಶದ ಹಾಗೂ ಪಾವಗಡದಲ್ಲಿ ಸದಾ ಒಣಹವೆ. ಇಲ್ಲಿ ಬೇಸಗೆಯಲ್ಲಿ ಹೆಚ್ಚು ಸೆಕೆ. ಜಿಲ್ಲೆಯಲ್ಲಿ ಮಾರ್ಚ್‍ನಿಂದ ಮೇ ವರೆಗೆ ಉಷ್ಣತೆ ಅಧಿಕ. ಏಪ್ರಿಲ್ ಅತ್ಯಂತ ಬಿಸಿಯ ತಿಂಗಳು. ಕೆಲವು ವೇಳೆ 410 ಸೆ.ವರೆಗೂ ಉಷ್ಣತೆ ಏರುವುದುಂಟು. ಜೂನ್‍ನಲ್ಲಿ ಮುಂಗಾರು ಮುಂದುವರಿದಂತೆ ಉಷ್ಣತೆ ಇಳಿಯುತ್ತದೆ. ಅಕ್ಟೋಬರ್‍ನಿಂದ ಗಮನಾರ್ಹವಾಗಿ ಉಷ್ಣತೆ ಇಳಿಯುತ್ತದೆ. ಡಿಸೆಂಬರ್ ಅತ್ಯಂತ ತಂಪಿನ ತಿಂಗಳು. ಚಳಿಗಾಲದಲ್ಲಿ ದೈನಿಕ ಕನಿಷ್ಠ ಉಷ್ಣತೆ ಕೆಲವು ವೇಳೆ 90ಸೆ.ಗೂ ಇಳಿಯುವುದುಂಟು.

ಜಿಲ್ಲೆಯ ಮಣ್ಣು ಸಾಮಾನ್ಯವಾಗಿ ಗಟ್ಟಿ, ಅಷ್ಟೇನೂ ಫಲವತ್ತಾದ್ದಲ್ಲ. ಕೆರೆ ನಾಲೆಗಳಿಂದ ನೀರಾವರಿಗೆ ಒಳಪಟ್ಟು ನೆಲ ಮಾತ್ರ ಉತ್ತಮ. ಜಿಲ್ಲೆಯ ದಕ್ಷಿಣ ಪಶ್ಚಿಮ ತಾಲ್ಲೂಕುಗಳದು ಸಾಮಾನ್ಯವಾಗಿ ಕೆಂಪು ಮಣ್ಣು (ರಾಗಿ ಮಣ್ಣು). ಉತ್ತರದ ತಾಲ್ಲೂಕುಗಳಲ್ಲಿ ತಕ್ಕಮಟ್ಟಿಗೆ ಕಪ್ಪು ಮಣ್ಣು ಇದೆ. ಪೂರ್ವದ ತಾಲ್ಲೂಕುಗಳಲ್ಲಿ ಮರಳು ಮಣ್ಣು ಸಾಮಾನ್ಯ. ಒಟ್ಟಿನಲ್ಲಿ ಜಿಲ್ಲೆಯ ಮಣ್ಣನ್ನು ಕೆಂಪು, ಗರಸು, ಮರಳು, ಜೇಡಿ ಕಪ್ಟು, ಮರಳುಜೇಡಿ-ಎಂದು ವಿಂಗಡಿಸಬಹುದು. ಜಿಲ್ಲೆಯ ಮುಖ್ಯ ಬೆಳೆಗಳು ರಾಗಿ, ಬತ್ತ, ಜೋಳ, ಹುರುಳಿ, ನೆಲಗಡಲೆ, ಮೆಣಸಿನಕಾಯಿ, ಕಬ್ಬು, ತೆಂಗು, ಅಡಿಕೆ, ಬಾಳೆ ಮತ್ತು ಎಣ್ಣೆ ಬೀಜಗಳು. ಚಿಕ್ಕನಾಯಕನಹಳ್ಳಿ ಗುಬ್ಬಿ, ತಿಪಟೂರು ತಾಲ್ಲೂಕುಗಳಲ್ಲಿ ತೆಂಗು ಮತ್ತು ಅಡಿಕೆ ಬೆಳೆ ಅಧಿಕ. ಕೊರಟಗೆರೆ ತಾಲ್ಲೂಕು ಅಗ್ರಹಾರದಲ್ಲಿ ಬಜೆ ಮೂಲಿಕೆ ಬೆಳೆಯುತ್ತಾರೆ. ಹಲಸು, ಮಾವು ಇನ್ನೆರಡು ಫಸಲುಗಳು.

ಜಿಲ್ಲೆಯನ್ನು ಕೃಷಿ ಇಲಾಖೆ ಕೇಂದ್ರ ಒಣ ಪ್ರದೇಶ ; ಪೂರ್ವ ಒಣ ಪ್ರದೇಶ ಹಾಗೂ ದಕ್ಷಿಣ ಒಣ ಪ್ರದೇಶಗಳೆಂದು ಮೂರುಕೃಷಿ ವಲಯಗಳಾಗಿ ವಿಂಗಡಿಸಿದೆ. ಕೇಂದ್ರ ಒಣ ಪ್ರದೇಶದಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ, ಸಿರಾ, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳು ಸೇರಿವೆ. ಪೂರ್ವ ಒಣ ಪ್ರದೇಶಗಳಲ್ಲಿ ಗುಬ್ಬಿ ಮತ್ತು ತುಮಕೂರು ತಾಲ್ಲೂಕುಗಳೂ ದಕ್ಷಿಣ ಒಣ ಪ್ರದೇಶದಲ್ಲಿ ಕುಣಿಗಲ್ಲು ಮತ್ತು ತುರುವೇಕೆರೆ ತಾಲ್ಲೂಕುಗಳೂ ಸೇರಿವೆ. ಜಿಲ್ಲೆಯಲ್ಲಿ ಸರಾಸರಿ ವಾರ್ಷಿಕ ಮಳೆ ಪ್ರಮಾಣ 593.0 ಮಿಮೀ (ಜಿಲ್ಲಾ ಪಂಚಾಯತ್ ಮಾಹಿತಿ 2014). ಜೂನ್ ಮೊದಲ ವಾರದಲ್ಲಿ ನೈಋತ್ಯ ಮಾರುತ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಅಧಿಕ ಮಳೆಯಾಗುತ್ತದೆ.ಜಿಲ್ಲೆಯಲ್ಲಿ ಡಿಸೆಂಬರ್‍ನಿಂದ ಫೆಬ್ರುವರಿಯವರೆಗೆ ಒಣ ಹವೆಯಿರುತ್ತದೆ. ಮಾರ್ಚ್‍ನಿಂದ ಮೇವರೆಗೆ ಬೇಸಗೆ ; ಜೂನ್ -ಸೆಪ್ಟೆಂಬರ್ ಮುಂಗಾರಿನ ಕಾಲ. ಅಕ್ಟೋಬರ್-ನವೆಂಬರ್‍ಗಳಲ್ಲಿ ಹಿಂಗಾರು. ಮೇ-ನವೆಂಬರ್ ಅವಧಿಯಲ್ಲೇ ಮಳೆ ವಿಶೇಷ. ಮುಂಗಾರಿನ ಅನಂತರ-ಅಕ್ಟೋಬರ್ ತಿಂಗಳಲ್ಲಿ ಅತ್ಯಂತ ಹೆಚ್ಚಿನ ಮಳೆಯಾಗುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಸಾಗಿದಂತೆ ಸಾಮಾನ್ಯವಾಗಿ ಮಳೆ ಹೆಚ್ಚು. ಜಿಲ್ಲೆಯ ಪಶ್ಚಿಮಭಾಗದಲ್ಲಿ ಪಶ್ಚಿಮಕ್ಕಿಂತ ಪೂರ್ವದಲ್ಲಿ ಹೆಚ್ಚು ಮಳೆಯಾಗುತ್ತದೆ.ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಬೇಸಾಯ ಹಾಗೂ ಬೆಳೆ ವೈವಿಧ್ಯದಿಂದ ಕೂಡಿದೆ. ಹವಾಗುಣ ಮತ್ತು ಬೆಳೆಗಳ ಆಧಾರದಿಂದ ಸ್ಥೂಲವಾಗಿ - ತುಮಕೂರು, ಕುಣಿಗಲ್, ತುರುವೇಕೆರೆ; ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು; ಹಾಗೂ ಕೊರಟಗೆರೆ, ಶಿರಾ, ಪಾವಗಡ, ಮಧುಗಿರಿ ಎಂದು ಮೂರು ಭಾಗವಾಗಿ ಗಮನಿಸಬಹುದು.

ಮುಂಗಾರು ವೇಳೆಯಲ್ಲಿ ಕೃಷಿ ಚಟುವಟಿಕೆ ತೀವ್ರವಾಗಿರುತ್ತದೆಯಲ್ಲದೇ ರಾಗಿ ಮತ್ತು ಶೇಂಗಾಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಜಿಲ್ಲೆಯ ಸಾಗುವಳಿ ಪ್ರದೇಶದ ಶೇ.70ರಷ್ಟು ಭಾಗದಲ್ಲಿ ಇವನ್ನು ಬೆಳೆಯಲಾಗುತ್ತದೆ. ಉಳಿದಂತೆ ಬತ್ತ, ಮೆಕ್ಕೆ ಜೋಳ ಮತ್ತು ತೊಗರಿ ಪ್ರಮುಖ ಬೆಳೆಗಳಾಗಿವೆ. ಮುಂಗಾರು ಬೆಳೆಯ ಒಟ್ಟು ಪ್ರದೇಶ 5 ಲಕ್ಷ ಹೆಕ್ಟೇರು. ಹಿಂಗಾರು ಬೆಳೆಗೆ 0.15 ಲಕ್ಷ ಹೆಕ್ಟೇರ್ ಭೂ ಪ್ರದೇಶ ಬಳಕೆಯಾಗುತ್ತದೆಯಲ್ಲದೇ 0.30 ಲಕ್ಷ ಹೆಕ್ಟೇರ್ ಪ್ರದೇಶವನ್ನು ಬೇಸಗೆಯಲ್ಲಿ ಕೃಷಿಗೆ ಬಳಸಲಾಗುತ್ತಿದೆ. ಜೋಳ ಮುಂತಾದ ಏಕದಳ ಧಾನ್ಯಗಳ ಉತ್ಪಾದನೆ ಜಿಲ್ಲೆಯ ಅಗತ್ಯಕ್ಕಿಂತಲೂ ಹೆಚ್ಚಾಗಿದೆ (3.87 ಲಕ್ಷ ಟನ್). ಆದರೆ ಅವರೆ, ಬಟಾಣಿಯಂಥ ದ್ವಿದಳ ಧಾನ್ಯ ಹಾಗೂ ಎಣ್ಣೆ ಬೀಜಗಳ ಉತ್ಪಾದನೆ ಕ್ರಮವಾಗಿ 0.306 ಹಾಗೂ 1.06 ಲಕ್ಷ ಟನ್‍ಗಳಷ್ಟಿದ್ದು, ಇವು ಅಗತ್ಯಕ್ಕಿಂತಲೂ ಕಡಿಮೆಯಾಗಿವೆ (ಜಿಲ್ಲಾ ಕೃಷಿ ಇಲಾಖೆ ಮಾಹಿತಿ 2014).ಸಾಗುವಳಿ ನೆಲ ತುಮಕೂರು, ತಿಪಟೂರು, ಪಾವಗಡ, ಶಿರಾ ಮತ್ತು ಗುಬ್ಬಿ ತಾಲ್ಲೂಕುಗಳಲ್ಲಿ ಇತರ ತಾಲ್ಲೂಕುಗಳಲ್ಲಿಯದಕ್ಕಿಂತ ಅಧಿಕ. ಕಾಡಿನ ಪ್ರದೇಶ 1,08,172 ಎಕರೆ. ಶಿರಾ, ಗುಬ್ಬಿ, ಪಾವಗಡ, ಕುಣಿಗಲ್, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಅರಣ್ಯ ಪ್ರದೇಶ ಹೆಚ್ಚು. 

ಒಕ್ಕಲು ಮತ್ತು ಆಹಾರ 

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುನ್ನಾರು ಪೂಜೆ ಮಾಡುವುದರೊಂದಿಗೆ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ರಾಗಿ, ಬತ್ತ, ಜೋಳ, ತೊಗರಿ, ಅವರೆ, ಹುಚ್ಚೆಳ್ಳು, ಹುರುಳಿ, ಸಾಸಿವೆ, ಅಲಸಂದೆ, ಶೇಂಗಾ, ಕಡಲೆ, ಪುಂಡಿಕಾಳು, ಸಜ್ಜೆ, ಗೆಣಸು ಬೆಳೆಗಳ ಕೃಷಿ ನಡೆಯುತ್ತದೆ. ಜೊತೆಗೆ ಎಲ್ಲ ಬಗೆಯ ತರಕಾರಿಗಳನ್ನೂ ಬೆಳೆಯಲಾಗುತ್ತದೆ.

ಪ್ರಾಚೀನ ಕಾಲದಲ್ಲಿ ಒಂದು ಪ್ರದೇಶ 20 ಮೈಲಿ ದೂರವಿದ್ದರೆ ಅದನ್ನು ನಾಡು, ಸೀಮೆ, ಅಥವಾ ದೇಶವೆಂದೇ ಕರೆಯುತ್ತಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ. ಇಂಥ ಒಂದೊಂದು ಸೀಮೆಯ ವಾತಾವರಣ, ಭೂಪ್ರದೇಶಗಳಿಗೆ ಸರಿಹೊಂದುವ ಆಹಾರ ಬೆಳೆದುಕೊಳ್ಳುವ ಪರಿಪಾಠವೂ ಇತ್ತು.ಈ ದೃಷ್ಟಿಯಿಂದ ತುಮಕೂರು ಜಿಲ್ಲೆಯಾದ್ಯಂತ ಆಹಾರ ವೈವಿಧ್ಯ ಇಂದಿಗೂ ಕಾಣಿಸಿಕೊಂಡಲ್ಲಿ ಅಚ್ಚರಿ ಇಲ್ಲ. ಇಂದಿನ ದಿನಗಳಲ್ಲಿ ಆಯಾ ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ಬೆಳೆ ಕಾಣದಂತಾಗಿ ಎಲ್ಲೆಲ್ಲೂ ಹೈಬ್ರಿಡ್ ತಳಿ ರಾರಾಜಿಸುತ್ತಿದೆ.ಸೀಮೆ ಆಹಾರ ಧಾನ್ಯಗಳ ಸಾರಸ್ವತ್ವ ಹೈಬ್ರಿಡ್ ತಳಿಗಳಲ್ಲಿ ಇರುವುದಿಲ್ಲ ಎಂಬುದು ಸ್ಥಾಪಿತ ಸತ್ಯ.ಪ್ರಧಾನ ಆಹಾರ ಬೆಳೆಗಳಾದ ರಾಗಿ ಮತ್ತು ಬತ್ತಗಳಲ್ಲಿ ಹತ್ತಾರು ತಳಿಗಳಿದ್ದವು.ಅಂತೆಯೇ ನವಣೆ, ಸಜ್ಜೆ, ಹಾರಕ, ಕೊರಲೆಯಂಥ ಕಿರುಧಾನ್ಯಗಳ ಬೆಳೆಯೂ ಸಹಜವಾಗಿತ್ತು.ಈಗ ಇವುಗಳ ಕೃಷಿಯನ್ನು ತಿಪಟೂರು ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ಉದ್ದೇಶಪೂರ್ವಕವಾಗಿ ಕಷ್ಟಪಟ್ಟು ಮಾಡಲಾಗುತ್ತಿದೆ.ನೀರಿನ ಲಭ್ಯತೆ, ಶ್ರಮ ಮೊದಲಾದವುಗಳ ದೃಷ್ಟಿಯಿಂದ ಕಿರುಧಾನ್ಯಗಳ ಕೃಷಿ ಸರಳವಾದರೂ ಇವುಗಳ ಒಕ್ಕಣೆ ಮತ್ತು ಧಾನ್ಯ ಸಂಗ್ರಹಣೆ ಕಷ್ಟಕರ, ತುಂಬ ಶ್ರಮದಾಯಕ.ಹೀಗಾಗಿ ಕೃಷಿಕರು ಇವುಗಳ ಬೆಳೆಯನ್ನೇ ಕೈಬಿಟ್ಟಿದ್ದಾರೆ.ಆದರೆ ಮಳೆ ಕಡಿಮೆ ಬೀಳುವ, ನೀರಾವರಿ ಸೌಕರ್ಯವಿಲ್ಲದ ತುಮಕೂರಿನಂಥ ಭೂಮಿಯಲ್ಲಿ ಸೀಮೆ ತಳಿಗಳ ಕೃಷಿಗೆ ಅರ್ಥವಿದೆ.ಸಾಂಪ್ರದಾಯಿಕ ಬತ್ತದ ತಳಿಗಳಾದ ಸಣ್ಣಬತ್ತ, ಕೆಂಬತ್ತಿ, ದಪ್ಪಕ್ಕಿ, ಕೊರಲು, ಚನ್ನಂಗಿ ಬತ್ತ, ಸಣ್ಣ ನೆಲ್ಲು, ಮೊದಲಾದವು ಕೇವಲ ಅಲ್ಪ ಮಳೆ ನೀರಿನಿಂದ ಬೆದ್ದಲು (ಒಣಭೂಮಿ) ನೆಲದಲ್ಲೂಚೆನ್ನಾಗಿ ಬೆಳೆಯಬಲ್ಲವು.ಪಾರಂಪರಿಕ ರೀತಿಯಲ್ಲಿ ಕೃಷಿ ಮಾಡುತ್ತಿರುವ ಬೆರಳೆಣಿಕೆಯ ರೈತರಲ್ಲಿ ಮಾತ್ರ ಇಂಥ ತಳಿಗಳು ಇನ್ನೂ ಉಳಿದಿವೆ. ಆದರೆ ಇವುಗಳ ಉತ್ಪಾದನೆ ಹೆಚ್ಚಿರದ ಕಾರಣ ಮಾರುಕಟ್ಟೆಗೂ ಇವು ಬರುವುದು ವಿರಳ.ಸಾವಯವ ವಿಧಾನದಲ್ಲಿ ಶ್ರಮವಹಿಸಿ ಬೆಳೆಸಿದ ಇಂಥ ಧಾನ್ಯಗಳ ಬೆಲೆಯೂ ದುಬಾರಿಯೇ.ಉದಾಹರಣೆಗೆ ಒಂದು ಕಿಲೋ ಹಾರಕದ ಬೆಲೆ ಕನಿಷ್ಠ 100 ರೂ.ಪರಿಸ್ಥಿತಿ ಹೀಗಿರುವಾಗ ಸಿರಿಧಾನ್ಯಗಳ ಆಹಾರ-ಅವುಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲಾಗುವ ಗುಣಾತ್ಮಕ ಪರಿಣಾಮ ಏನೇ ಇದ್ದರೂ ಅವುಗಳನ್ನು ಖರೀದಿಸುವಾಗ ಜನ ಹಿಂದೇಟುಹಾಕುವಂತಾಗುತ್ತದೆ.ಉತ್ತೇಜನವಿಲ್ಲದ ಕಾರಣ ಕೃಷಿಕರೂ ಇವುಗಳ ಬೆಳೆ ತೆಗೆಯಲು ಮುಂದಾಗುವುದಿಲ್ಲ. ಜನಪ್ರಿಯ ಹೈಬ್ರಿಡ್ ತಳಿಯ, ಲಾಭದಾಯಕ ಬೆಳೆಗಳ ಕೃಷಿ ಹೀಗಾಗಿ ಹೆಚ್ಚು ಪ್ರಚುರವಾಗುತ್ತಿದೆ.ಈ ದೃಷ್ಟಿಯಿಂದ ಎಲ್ಲೆಡೆ ಕಾಣಬರುವ ಆಹಾರ ಧಾನ್ಯಗಳೇ ತುಮಕೂರಿನಲ್ಲೂ ಕಾಣಬರುವುದು ಸಹಜವಾಗಿದೆ.ಸದ್ಯ ತುಮಕೂರು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಧಾನ್ಯಗಳು ಹಾಗೂ ಅವುಗಳಿಂದ ಸಿದ್ಧವಾಗುವ ಆಹಾರ ವಿವರಗಳ ಜೊತೆಗೆ ದವಸ ಧಾನ್ಯಗಳಿಗೂ ವ್ಯಕ್ತಿ, ಊರುಗಳಿಗೂ ಇರುವ ಸಂಬಂಧಗಳಂಥ ಕೆಲವು ಆಹಾರ ಸಂಬಂಧಿ ಸಾಂಸ್ಕøತಿಕ ಸಂಗತಿಗಳನ್ನು ಗಮನಿಸಬಹುದು.

ತುಮಕೂರು ಜಿಲ್ಲೆಯಆಹಾರ ಪದ್ಧತಿಯನ್ನು ಕುರಿತು ಸಮಗ್ರ ಸಂಶೋಧನೆಯ ಕೃತಿ ಲಭ್ಯವಿಲ್ಲವಾದರೂ ಅಲ್ಲಲ್ಲಿ ಬಿಡಿ ಬರಹಗಳು, ಬಿಡಿ ಬರಹಗಳ ಸಂಕಲನಗಳು ಪ್ರಕಟವಾಗಿವೆ. ಇವುಗಳಲ್ಲಿ‘ಮಧ್ಯಕಾಲೀನ ಕರ್ನಾಟಕದಲ್ಲಿ ಆಹಾರ ಮತ್ತು ಪಾನೀಯಗಳು’ (ಡಾ.ಎನ್. ನಂದೀಶ್ವರ, 2013) ಗಮನಾರ್ಹವಾದುದು.ಇದರಲ್ಲಿ ಶಾಸನಗಳು, ವಿದೇಶಿ ಪ್ರವಾಸಿಗರ ಪ್ರವಾಸ ಸಾಹಿತ್ಯ, ಹಳಗನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಕೀರ್ತನ ಸಾಹಿತ್ಯ, ಜನಪದ ಮತ್ತು ಶಾಸ್ತ್ರ ಸಾಹಿತ್ಯಗಳಲ್ಲಿ ಲಭಿಸುವ ಆಹಾರ ಪಾನೀಯಗಳ ವಿಸ್ತøತ ವಿವರಣೆಯನ್ನು ನೀಡಲಾಗಿದೆ. ‘ತುಮಕೂರು ಜಿಲ್ಲೆಯ ಜಾನಪದೀಯ ನೆಲೆಗಳು’ ಡಾ.ಚಿಕ್ಕಣ್ಣ ಯಣ್ಣೆಕಟ್ಟೆಯವರ ಸಂಶೋಧನಾ ಬರಹಗಳ ಕೃತಿ (ತುಮಕೂರು ವಿಶ್ವವಿದ್ಯಾನಿಲಯ, 2011). ಪ್ರಸ್ತುತ ಗ್ರಂಥದಲ್ಲಿ ತುಮಕೂರು ಜಿಲ್ಲೆಯ ಜನಪದ ಅಡಿಗೆಗಳು ಎಂಬ ಲೇಖನದಲ್ಲಿ ರಾಗಿಮುದ್ದೆಯನ್ನು ತುಮಕೂರು ಜಿಲ್ಲೆಯಲ್ಲಿ ವರ್ಷದ ಎಲ್ಲ ಸಮಯ ಸಂದರ್ಭಗಳಲ್ಲೂ ಹೇಗೆ ಬಳಸಲಾಗುತ್ತದೆ ಎಂಬ ಮಾಹಿತಿ ನೀಡಲಾಗಿದೆ.ರಾಗಿಯನ್ನು ಜನಪದರು ಹದ ಮಾಡಿಕೊಳ್ಳುವ ಬಗೆ, ಸಾಂಪ್ರದಾಯಿಕ ರೀತಿಯಲ್ಲಿ ಸಿದ್ಧವಾಗುವ ಆಹಾರದ ಗುಣವಿಶೇಷಗಳು, ರಾಗಿಮುದ್ದೆ, ಒತ್ತುಶಾವಿಗೆಯಂಥ ಆಹಾರ ಸೇವೆಯಿಂದ ದೊರೆಯುವ ಆರೋಗ್ಯ ಸಂಬಧಿ ನಂಬಿಕೆ ಮೊದಲಾದವನ್ನು ದಾಖಲಿಸಲಾಗಿದೆ. ಜೊತೆಗೆ ಕುರಿ, ಕೋಳಿ, ಮೇಕೆ, ಉಡ, ಜಿಂಕೆ, ಮೊಲ, ಕಾಡು ಕೋಳಿ, ಕಾಡು ಇಲಿ, ಕಾಡು ಬೆಳ್ಳಿಲಿ, ಆಮೆ, ಮುಂಗಸಿ, ಈರೆ ಹಕ್ಕಿ, ಸೆರೆಲೆ ಹಕ್ಕಿ, ಗೂಜಿನ ಹಕ್ಕಿ, ಪಾರಿವಾಳ, ಬೆಳವನ ಹಕ್ಕಿ, ಹೀಗೆ ಪ್ರಾಣಿ ಪಕ್ಷಿಗಳನ್ನು ಬಳಸಿ ಆಹಾರ ತಯಾರಿಸುವ ಉಲ್ಲೇಖ, ಹುರಿದ ಮಾಂಸ, ತಲೆ ಮಾಂಸ, ಒಣಬಾಡು, ಕರಿಮಿನು, ಸಿಗಡಿ ಪಲ್ಯ, ಸಿಗಡಿಯನ್ನು ಒಣಗಿಸಿ ವರ್ಷಾನುಗಟ್ಟಲೆ ಕೆಡದಂತೆ ಇಟ್ಟುಕೊಳ್ಳುವ ವಿಧಾನಗಳ ವಿವರ ದೊರೆಯುತ್ತದೆ. 

ತುಮಕೂರು ಜಿಲ್ಲೆಯ ಹೊಟೇಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಸ್ಮರಣ ಸಂಚಿಕೆಯಲ್ಲಿ (ಸಾಮರಸ್ಯ, (ಸಂ) ಸಿ ವಿ ಮಹದೇವಯ್ಯ, 2001) ತುಮಕೂರಿನಲ್ಲಿ ಆಧುನಿಕ ಆಹಾರ ತಯಾರಿ ಮತ್ತು ಮಾರಾಟ ಮಾಡುವ ಹೊಟೇಲು ಉದ್ಯಮ ಬೆಳೆದುಬಂದ ಬಗೆಯ ಸುಮಾರು ನೂರೈವತ್ತು ವರ್ಷಗಳ ಇತಿಹಾಸವನ್ನು ದಾಖಲಿಸಲಾಗಿದೆ. ಅದುವರೆಗೆ ಇಲ್ಲಿನ ಜನ ತಾವು ಬೆಳೆದುದನ್ನು ಸಾಂಪ್ರದಾಯಿಕ ರೀತಿಯಲ್ಲಿ ಸಿದ್ಧಗೊಳಿಸಿ, ಹೊಟ್ಟೆತುಂಬ ತಿಂದು ಉಳಿದ ಆಹಾರವನ್ನು ಅಗತ್ಯವಿದ್ದಜನರಿಗೂ ಪಶುಪಕ್ಷಿಗಳಿಗೂ ನೀಡುತ್ತಿದ್ದರೆಂದೂ ಆಹಾರವನ್ನು ಮಾರಾಟ ಮಾಡುವ ಪದ್ಧತಿಯೇ ಇರಲಿಲ್ಲವೆಂದೂ ತಿಳಿದುಬರುತ್ತದೆ. ತುಮಕೂರು ಜಿಲ್ಲೆಯ ಸಾಂಪ್ರದಾಯಿಕ ಆಹಾರ ಪದ್ಧತಿ ಕುರಿತು ಸಮಗ್ರ ಸಂಶೋಧನಾಧ್ಯಯನ ಯಾವುದೂ ನಡೆದಿಲ್ಲ. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಈ ಕುರಿತ ಸಂಶೋಧನ ಕಾರ್ಯಯೋಜನೆ ಸದ್ಯ ನಡೆದಿದೆ (ಪ್ರಧಾನ ಸಂಶೋಧಕರು: ಡಾ. ಶ್ರೀಪಾದಭಟ್, ಯುಜಿಸಿ ಮೇಜರ್ ಪ್ರಾಜೆಕ್ಟ್).

ಜಿಲ್ಲೆಯ ಮುಖ್ಯ ಆಹಾರಧಾನ್ಯ ರಾಗಿ.ಇದರಿಂದ ತಯಾರಿಸುವ ಮುದ್ದೆ ಜಿಲ್ಲೆಯ ಎಲ್ಲ ಪಟ್ಟಣ, ಗ್ರಾಮಗಳಲ್ಲಿ ಎಲ್ಲ ಕಾಲಗಳಲ್ಲೂ ಲಭ್ಯ.ತೀರಾ ಈಚಿನವರೆಗೂ ರಾಗಿಯನ್ನು ಬೀಸುವ ಕಲ್ಲಿನಿಂದ ಬೀಸಿತಮಗೆ ಅಗತ್ಯವಿರುವಷ್ಟು ಹಿಟ್ಟು ಮಾಡಿಕೊಳ್ಳುತ್ತಿದ್ದರು.ಬೀಸುವ ಸಂದರ್ಭದಲ್ಲಿ ಪದ ಹೇಳುತ್ತಿದ್ದರು.ಈಗೀಗ ಯಂತ್ರಗಳಿಂದ ಹಿಟ್ಟು ಮಾಡಿಸುತ್ತಿದ್ದಾರೆ.ಬೀಸುವ ಕಲ್ಲು ಮರೆಯಾದಂತೆ ಬೀಸುವ ಪದಗಳೂ ಮರೆಯಾಗಿವೆ. ಆದರೆ ಯಂತ್ರದ ಪದಗಳೇನೂ ಕೇಳಿಸುತ್ತಿಲ್ಲ! ಜನಪದರ ಮೈಮನಗಳು ಒಟ್ಟಿಗೇ ಕೆಲಸಮಾಡುವಾಗ ಪದ, ಕಥೆಗಳ ರೂಪದಲ್ಲಿ ಅವರ ಸೃಜನಶೀಲತೆ ಹೊರಹೊಮ್ಮುತ್ತಿತ್ತು. ಆದರೆ ಇಂದಿನ ಯಂತ್ರಗಳು ರೈತಾಪಿ ಜನರ ಮೈಮನಗಳ ಸೃಜನಶೀಲತೆಯ ಮೂಲವನ್ನೇ ಕಸಿದುಕೊಂಡಿವೆ ಎನ್ನಲಡ್ಡಿಯಿಲ್ಲ. ಇದೇನಾದರೂ ಇರಲಿ.ಯಂತ್ರದಿಂದ ಮಾಡಿಸಿದ ರಾಗಿ ಹಿಟ್ಟನ್ನುಕುದಿಸಿದ ನೀರಿಗೆ ಸುರಿದು, ಮರದ ಕೋಲಿನಿಂದ ತಿರುವುತ್ತ, ಹದವಾಗಿ ಬೇಯಿಸಿ, ಮುದ್ದೆ ಕಟ್ಟುವಷ್ಟು ಕಣಕವನ್ನು ಹದಮಾಡಿಕೊಂಡು ಹಿಟ್ಟು ಬಿಸಿಇರುವಾಗಲೇ ಮುದ್ದೆ ಮಾಡುತ್ತಾರೆ.ಉಪ್ಪು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು, ಮೆಣಸು ಮತ್ತು ಜೀರಿಗೆಗಳನ್ನು ಒಟ್ಟಿಗೆ ಸೇರಿಸಿ ಹಾಸೆಕಲ್ಲಿನ ಮೇಲೆ ಹಾಕಿ ತಣ್ಣಗಾದ ರಾಗಿಮುದ್ದೆ (ತಂಗಳು ಮುದ್ದೆ)ಯನ್ನು ಸೇರಿಸಿ ತಿನ್ನುವ ಕ್ರಮವೂ ಇದೆ. ತಂಗಳು ಮುದ್ದೆಯನ್ನು ಮೊಸರಿನ ಜೊತೆ ಕಲಸಿ ಬೆಳಗಿನ ಉಪಾಹಾರದಂತೆ ಸೇವಿಸುವ ಪದ್ಧತಿಯೂ ತುಮಕೂರು, ಕುಣಿಗಲ್ಲು, ತುರುವೇಕೆರೆ ಭಾಗಗಳಲ್ಲಿ ಕಂಡುಬರುತ್ತದೆ.ಸಿರಾ ಭಾಗದಲ್ಲಿ ರಾಗಿ ಮುದ್ದೆಗೆ ನುಚ್ಚು ಸೇರಿಸುವ ಪದ್ಧತಿಯೂ ಇದೆ.

ರಾಗಿಮುದ್ದೆಗೆ ನೆಂಚಿಕೆಯಾಗಿ ಅವರೆಕಾಳು, ಅಲಸಂದೆಕಾಳು, ತೊಗರಿಕಾಳು, ಹೆಸರುಕಾಳುಗಳ ಪಲ್ಯ ಅಥವಾ ಅಣ್ಣೇಸೊಪ್ಪು, ಹಾಲೆಸೊಪ್ಪು, ಹೊನಗೊನೆಸೊಪ್ಪು, ನುಗ್ಗೆಸೊಪ್ಪು, ಬಳ್ಳೆಸೊಪ್ಪು, ಸಬ್ಬಸಿಗೆಸೊಪ್ಪು, ಒಂದೆ¯ಗಸೊಪ್ಪು, ದಂಟಿನಸೊಪ್ಪುಗಳಲ್ಲಿ ಯಾವುದಾದರೂ ಒಂದರ ಸಾರನ್ನು ತಯಾರಿಸಲಾಗುತ್ತದೆ.ಈ ರಾಗಿ ರೊಟ್ಟಿ ತುಮಕೂರು, ತುರುವೇಕೆರೆ, ಕುಣಿಗಲ್ಲು, ಗುಬ್ಬಿ, ತಿಪಟೂರು ಪ್ರದೇಶಗಳಲ್ಲಿ ಮುಂಜಾನೆಯ ಉಪಾಹಾರಕ್ಕಾಗಿಸಾಮಾನ್ಯವಾಗಿ ಬಳಕೆಯಾಗುತ್ತದೆ.ಇದಕ್ಕೆ ನೆಂಚಿಕೆಯಾಗಿ ಹುಚ್ಚೆಳ್ಳು, ಪುಂಡಿಕಾಳು, ಹುರುಳಿಕಾಳು, ತೆಂಗಿನಕಾಯಿ ಚಟ್ನಿಯನ್ನು ಬಳಸುತ್ತಾರೆ.

ತುಮಕೂರು ಪರಿಸರದ ದನ ಮತ್ತು ಕುರಿಗಾಹಿಗಳು ಕೆರೆ ಮತ್ತು ಗದ್ದೆ-ತೋಟಗಳ ಬದುಗಳಲ್ಲಿ ದೊರೆಯುವ ಗೂಟಗೆಡ್ಡೆ, ಸಿಯಾಬ್ಲಿಗೆಡ್ಡೆ, ಮೂಡೆಕಾಯಿ ತೋಟದಗೆಣಸನ್ನು ಹಸಿಯಾಗಿಯೋ ಬೇಯಿಸಿಯೋ ಸೇವಿಸುವುದಿದೆ.ಇವುಗಳ ತಿರುಳಿಗೆ ಕೆಲವೊಮ್ಮೆ ಬೆಲ್ಲ ಅಥವಾ ಸಕ್ಕರೆ ಬೆರೆಸಿ ಸೇವಿಸಿ ಹಸಿವು ಹಿಂಗಿಸಿಕೊಳ್ಳುವುದಿದೆ.

ಈ ಭಾಗದ ರೈತಾಪಿ ಜನರಲ್ಲಿ ಶ್ಯಾವಿಗೆ ಕೂಡ ಹೆಚ್ಚು ಜನಪ್ರಿಯವಾಗಿದೆ.ಊಟ, ಹೊಲ-ಗದ್ದೆ ತೋಟಗಳಲ್ಲಿ ಕೆಲಸ ಮಾಡುವ ಜನರ ಎದೆ ನೋವಿಗೆ ಸೇವಿಸುವ ಆಹಾರವಾಗಿದೆ.ರಾಗಿ ಹಿಟ್ಟನ್ನು ಹದವಾಗಿ ಬೇಯಿಸಿ ಹದವಾದ ಹಿಟ್ಟನ್ನು ಶ್ಯಾವಿಗೆ ಕೊಂತ ಅಥವಾ ಶ್ಯಾವಿಗೆ ಒರಳಿಗೆ ಹಾಕಿ ಮೇಲಿನಿಂದ ಒತ್ತಿದಾಗ, ಜರಡಿಯಾಕಾರದ ಒರಳಿನ ರಂಧ್ರಗಳಿಂದ ಎಳೆಎಳೆಯಾಗಿ ಶ್ಯಾವಿಗೆ ಹೊರಬರುತ್ತದೆ.ಇದನ್ನು ತೆಂಗಿನಕಾಯಿ ಹಾಲು ಅಥವಾ ಹಸುವಿನ ಹಾಲಿಗೆ ಬೆಲ್ಲ, ಏಲಕ್ಕಿ ಹಾಕಿ ಕಾಯಿಸಿ, ಹುಚ್ಚೆಳ್ಳುಪುಡಿಯನ್ನು ಬೆರಸಿ ಸೇವಿಸುವ ಪದ್ಧತಿ ಇದೆ.ಎದೆ ನೋವಿಗೆ ಇದು ಔಷಧವಾಗಿಯೂ ಕೆಲಸಮಾಡುತ್ತದೆ ಎಂದು ತಿಳಿಯಲಾಗಿದೆ.

ಜಿಲ್ಲೆಯಜೈನ, ಬ್ರಾಹ್ಮಣರಂಥ ಸಸ್ಯಾಹಾರಿ ಸಮುದಾಯಗಳಲ್ಲಿ ಕೆಲವು ಸಸ್ಯಮೂಲಗಳ ಸೇವನೆ ನಿಷಿದ್ಧ. ನೆಲದೊಳಗೆ ಅದರಲ್ಲೂ ನೆಲದ ಮೇಲ್ತರದಲ್ಲಿ ಬೆಳೆಯುವ ಈರುಳ್ಳಿ, ಬೆಳ್ಳುಳ್ಳಿ, ಗೆಣಸಿನಂಥಗೆಡ್ಡೆಗಳನ್ನು, ಅಣಬೆ, ಕೆಸುವು, ನುಗ್ಗೆಯಂಥ ತರಕಾರಿಗಳನ್ನು ವಿಶೇಷ ಸಂದರ್ಭಗಳಲ್ಲಿ ಬಳಸುವುದಿಲ್ಲ. ವೀರಶೈವ ಸಮುದಾಯದಲ್ಲಿ ಶುಭ ಸಮಾರಂಭದಲ್ಲಿ ಕೆಸುವನ್ನು ಬಳಸುವಂತಿಲ್ಲ. ವ್ಯಕ್ತಿ ನಿಧನನಾದಾಗ ಶವವನ್ನು ಮಣ್ಣುಮಾಡಿ ಬಂದ ಸಂದರ್ಭದಲ್ಲಿ ಯಾವುದೇ ಬಗೆಯ ತರಕಾರಿ, ಧಾನ್ಯವನ್ನೂ ಬಳಸದೇ ಹುಣಿಸೆ ಅಥವಾ ನಿಂಬೆ ಹುಳಿಯ ಗೊಜ್ಜಿನ ಅನ್ನವನ್ನು ಊಟಮಾಡಲಾಗುತ್ತದೆ.ಹನ್ನೊಂದು ಅಥವಾ ಹದಿಮೂರನೆಯ ದಿನ ಸೂತಕ ಕಳೆಯುವವರೆಗೂ ಆತನ ಹತ್ತಿರದ ಬಂಧು ಬಾಂಧವರು ಸಿಹಿ ಅಡುಗೆ ಅಥವಾ ಊಟ ಮಾಡುವಂತಿಲ್ಲ. ಬ್ರಾಹ್ಮಣ ಸಮುದಾಯದಲ್ಲೂ ಈ ನಿಷಿದ್ಧ ಸಮಾನವಾಗಿದೆ.ಬ್ರಾಹ್ಮಣರಲ್ಲಿ ತಿಥಿ-ಶ್ರಾದ್ಧಗಳಲ್ಲಿ ಬಿಟ್ಟರೆ ಉಳಿದ ಶುಭ ಕಾರ್ಯಗಳಲ್ಲಿ ಉದ್ದಿನ ವಡೆ ಅಥವಾ ಉದ್ದಿನಿಂದ ತಯಾರಾದ ಹಪ್ಪಳ ಇತ್ಯಾದಿಗಳ ಬಳಕೆ ಸಂಪೂರ್ಣ ನಿಷಿದ್ಧ.

ತುಮಕೂರು ಜಿಲ್ಲೆಯಲ್ಲಿ ಸಸ್ಯಾಹಾರದ ವೈವಿಧ್ಯವಿರುವಂತೆಯೇ ಮಾಂಸಾಹಾರ ವೈವಿಧ್ಯವೂ ಇದೆ.ಕೋಳಿ, ಕುರಿ, ಮೇಕೆ, ಮೀನು ಮಾಂಸಾಹಾರಿಗಳ ಸಾಮಾನ್ಯ ಆಹಾರ. ಹಬ್ಬ, ಜಾತ್ರೆ ಮತ್ತು ವಿಶೇಷ ಸಂದರ್ಭಗಳಲ್ಲಿ ಹರಕೆ ಕಟ್ಟಿಕೊಂಡವರು ಎರಡು ಕಾಲಿನ ಹರಕೆ (ಕೋಳಿ) ಅಥವಾ ನಾಲ್ಕು ಕಾಲಿನ ಹರಕೆ (ಕುರಿ) ಬಲಿ ನೀಡಿ ಅದನ್ನು ದೇವರಿಗೆ ಎಡೆ ಅರ್ಪಿಸಿ, ನೈವೇದ್ಯವೆಂದು ಭಾವಿಸಿ ಮಾಂಸಾಹಾರ ಸೇವಿಸುವ ಊರಿನ ಎಲ್ಲರಿಗೂ ಹಂಚಿ ಸೇವಿಸುವುದುಂಟು.ನೈವೇದ್ಯದ ಮಾಂಸದಿಂದ ಕೆಲವೊಮ್ಮೆ ಆಹಾರ ಸಿದ್ಧಪಡಿಸಿ ಹಂಚಿದರೆ, ಇನ್ನು ಕೆಲವು ಸಂದರ್ಭಗಳಲ್ಲಿ ಹರಕೆ ಕಟ್ಟಿಕೊಂಡವರು ಮಾಂಸವನ್ನೇ ಪಾಲು ಮಾಡಿಕೊಂಡು ಅನಂತರ ತಮಗೆ ಬೇಕಾದಂತೆ ಅದರಿಂದ ಆಹಾರ ಸಿದ್ಧಪಡಿಸಿಕೊಳ್ಳುವುದೂ ಇದೆ.ಸಾಮಾನ್ಯವಾಗಿ ಇಂಥ ಮಾಂಸದಿಂದ ಅನ್ನ ಬೆರೆಸಿದ ಬಿರಿಯಾನಿ, ಸಾರು ಅಥವಾ ಅಲಸಂದೆ, ಅವರೆ ಕಾಳು ಸೇರಿಸಿದ ಪಲ್ಯವನ್ನು ಮಾಡುವುದಿದೆ.ಹರಕೆ ಹೊತ್ತವರು ಮೀನು ಸೇವಿಸುವವರಾದರೂ ಹರಕೆಗೆ ಮಾತ್ರ ಮೀನು ನೈವೇದ್ಯ ಮಾಡುವುದಿಲ್ಲ. ಮೀನು ಹಿಡಿಯುವಾಗಲೇ ಸಾಮಾನ್ಯವಾಗಿ ಅದು ಸತ್ತೇ ಹೋಗುವುದರಿಂದ ಸತ್ತ ಪ್ರಾಣಿಯನ್ನು ಹರಕೆ ಹೊತ್ತುಕೊಳ್ಳಲಾಗದು ಎಂಬ ನಂಬಿಕೆ ಇದಕ್ಕೆ ಕಾರಣವಿರಬೇಕು.

ತುಮಕೂರು, ತಿಪಟೂರು, ಗುಬ್ಬಿ, ತಾಲ್ಲೂಕುಗಳಲ್ಲಿ ಸಸ್ಯಾಹಾರಿಗಳಾದ ವೀರಶೈವರು ಅಧಿಕವಾಗಿದ್ದಾರೆ.ಈ ಭಾಗದ ಮಾಂಸಾಹಾರಿ ಸಮುದಾಯಗಳು ವಿಶೇಷ ಸಂದರ್ಭ ಮತ್ತು ದೇವತಾ ಕಾರ್ಯಗಳಲ್ಲಿ ಮಾಂಸಾಹಾರ ಬಳಸುತ್ತಾರೆ.ಮಾಂಸಾಹಾರಿ ಸಮುದಾಯಗಳು ನಿತ್ಯವೂ ಮಾಂಸಾಹಾರವನ್ನೇ ಸೇವಿಸುತ್ತವೆ ಎನ್ನಲಾಗದು.ಮಾಂಸಾಹಾರ ಸೇವನೆಯಲ್ಲೂಕೆಲವು ವಿಧಿ ನಿಷೇಧಗಳಿವೆ. ಸಮುದಾಯ ಹಾಗೂ ವ್ಯಕ್ತಿ ನಿಷ್ಠವಾಗಿ ಇವು ಬದಲಾಗುತ್ತವೆ. ಕೆಲವು ಸಮದಾಯಗಳು ವಾರದ ಒಂದೊಂದು ದಿನ ಆಹಾರ ಸೇವಿಸದ ದಿನಗಳಿವೆ. ಉದಾಹರಣೆಗೆ ಭಾನುವಾರದಂದು ರಾಮನ ಒಕ್ಕಲಿನವರು; ಸೋಮವಾರದಂದು ಸಾಮಾನ್ಯವಾಗಿ ಉಳಿದ ಎಲ್ಲ ಸಮುದಾಯಗಳು; ಮಂಗಳವಾರದಂದು ಆಂಜನೇಯ ಒಕ್ಕಲಿನವರು; ಶುಕ್ರವಾರದಂದು ಲಕ್ಷ್ಮೀ ಆರಾಧಕರು; ಶನಿವಾರದಂದು ಶನಿದೇವರ ಅಥವಾ ಜಡೆಮುನಿ ಅಥವಾ ಮುನಿಸ್ವಾಮಿಯ ಭಕ್ತರು ಮಾಂಸಾಹಾರ ಸೇವಿಸುವುದಿಲ್ಲ.ಸಾಮಾನ್ಯವಾಗಿ ಶ್ರಾವಣಮಾಸದಲ್ಲಿ ಮಾಂಸಾಹಾರಿಗಳು ಮಾಂಸಾಹಾರ ಸೇವಿಸುವುದಿಲ್ಲ. ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳಲ್ಲೂ ಮಾಂಸಾಹಾರ ಸಂಬಂಧಿ ವಿಧಿ-ನಿಷೇಧಗಳಿದ್ದೇ ಇವೆ.

ಇಷ್ಟಲ್ಲದೇ ಮಾಂಸಾಹಾರವನ್ನು ಮನೆಯ ಒಳಗಡೆ ಬೇಯಿಸದೆ, ಮನೆಯ ಹೊರಭಾಗದಲ್ಲಿರುವ ಹೊರ ಒಲೆಯಲ್ಲಿ ಬೇಯಿಸಲಾಗುತ್ತದೆ.ಜಿಲ್ಲೆಯಲ್ಲಿ ಕಂಡುಬರುವ ಮಾಂಸಾಹಾರಗಳಲ್ಲಿ ಅನೇಕ ಬಗೆಗಳಿವೆ. ಕರಿಮೀನು, ಸೀಗಡಿ ಪಲ್ಯ, ಏಡಿಸಾರು, ಕರ್‍ಬಾಡು, ಬಾಡಿನಸಾರು, ಕೋಳಿಸಾರು, ಚಾಕಣ, ಮೊಟ್ಟೆಸಾರು ಇತ್ಯಾದಿ ಜನಪ್ರಿಯವಾದವು.ಅಪರೂಪಕ್ಕೆ ಬೇಟೆಯಾಡಿದ ಮೊಲ, ಪಕ್ಷಿಗಳ ಮಾಂಸವನ್ನೂ ಸೇವಿಸುವುದಿದೆ.ಇದಕ್ಕೆ ನೆಂಚಿಕೆಯಾಗಿ ಚಕ್ಕೆ, ಲವಂಗ, ಮೆಣಸು, ಜಿರೀಗೆ, ಉಪ್ಪು, ಹುಣಸೆ, ಮೆಣಸಿನಪುಡಿ, ಧನಿಯಪುಡಿ, ಕೊತ್ತಂಬರಿಸೊಪ್ಪು, ಪುದೀನಾಸೊಪ್ಪು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಗಳನ್ನು ಹದವಾಗಿ ಬೆರೆಸಿ, ಅರೆದು ಮಸಾಲೆ ಮಾಡಿ, ಮಾಂಸದಜೊತೆ ಬೇಯಿಸಿ ರಾಗಿಮುದ್ದೆಯ ಜೊತೆ ಸೇವಿಸಲಾಗುತ್ತದೆ.

ಬಸುರಿ-ಬಾಣಂತಿ, ಶಿಶು, ಕಾಹಿಲೆಬಿದ್ದವರಿಗೆ ಸಸ್ಯ ಮತ್ತು ಮಾಂಸಾಹಾರಗಳಲ್ಲಿ ವಿಧಿ-ನಿಷೇಧಗಳಿವೆ. ಉದಾಹರಣೆಗೆ ಅಣ್ಣೇಸೊಪ್ಪನ್ನು ಬಸುರಿಗೆ ನೀಡುವುದಿಲ್ಲ. ಇದು ತಂಪುಕಾರಕವಾದ್ದರಿಂದ ಬಸುರಿಗೆ ಶೀತವಾಗಿ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಇಂಥ ನಿಷಿದ್ಧ ಹೇಳಲಾಗಿದೆ ಅನ್ನಬಹುದು.

ಮಳೆಯ ಪ್ರಮಾಣ ಕಡಿಮೆಯಾಗಿ ಕೆರೆಕಟ್ಟೆಗಳು ತುಂಬದ ಕಾರಣ ಇಂದಿನ ದಿನಗಳಲ್ಲಿ ಗೋಟಿಗೆಡ್ಡೆ, ಸಿಯಾಬ್ಲಿಗೆಡ್ಡೆ, ಮೂಡೆಕಾಯಿಗಳನ್ನು ಬಳಸುವುದಿರಲಿ, ಅವುಗಳನ್ನು ಕಣ್ಣಾರೆ ಕಂಡವರು ಕೂಡ ಅಪರೂಪವಾಗುತ್ತಿದ್ದಾರೆ.ಭೂಪ್ರದೇಶ, ಹವಾಗುಣಗಳಿಗೆ ಅನುಸಾರವಾಗಿ ಆಹಾರ ಧಾನ್ಯಗಳ ತಳಿಗಳಿದ್ದ ಕಾರಣ ಕೆಲವು ದಶಕಗಳಿಂದ ಈಚೆಗೆ ಜಿಲ್ಲೆಯಾದ್ಯಂತ ಹೈಬ್ರೀಡ್ ತಳಿಗಳು ಚಾಲ್ತಿಗೆ ಬರುವ ಮುನ್ನ ಕೊರಲೆ, ಹಾರಕ, ಸಜ್ಜೆ, ನವಣೆಯಂಥ ದೇಶೀ ತಳಿಗಳು ಹೆಚ್ಚು ಪ್ರಚುರವಾಗಿದ್ದವು.ಮಳೆ ಪ್ರಮಾಣ ಕಡಿಮೆ ಇರುವ ತುಮಕೂರಿನಂಥ ಜಿಲ್ಲೆಯಲ್ಲಿ ಕಡಿಮೆ ನೀರು ಬೇಡುವ ಆಹಾರ ಧಾನ್ಯ ತಳಿಗಳೇ ಸೂಕ್ತವಾದವು ಎಂಬುದನ್ನು ಸಾಂಪ್ರದಾಯಿಕ ಕೃಷಿಕರು ಕಂಡುಕೊಂಡಿದ್ದರು.ಆದರೆ ಲಾಭದ ಹಿಂದೆ ಬಿದ್ದ ರೈತರು ಪಶ್ಚಿಮದ ಬಿಸಿಲು ಹೊಡೆಯದ, ಹೆಚ್ಚು ಸೆಖೆಯಾಗದ ಭೂ ಪ್ರದೇಶದಲ್ಲಿ ಬೆಳೆಯುವ ಅಡಿಕೆಯಂಥ ಬೆಳೆಯ ಕೃಷಿಯನ್ನುವರ್ಷಪೂರ್ತಿ ಹೆಚ್ಚೂ ಕಡಿಮೆ ಬಿರು ಬಿಸಿಲೇ ಇರುವ ತುಮಕೂರಿನ ನೆಲದಲ್ಲಿ ಬೆಳೆಯುತ್ತಿದ್ದಾರೆ.ಹೀಗಾಗಿ ಈ ಬೆಳೆಗೆ ಮಾಡುವ ಕೆಲಸ, ಹೂಡಿದ ಖರ್ಚುಮಣ್ಣುಪಾಲೇ ಸರಿ.ಹೈನುಗಾರಿಕೆ ಮತ್ತು ತೋಟಗಾರಿಕೆಯಿಂದ ಉತ್ಪನ್ನ ಸಾಕಷ್ಟು ಬಂದರೂ ಇವುಗಳನ್ನು ಸಮೃದ್ಧವಾಗಿ ಊಟೋಪಚಾರದಲ್ಲಿ ಬಳಸದೇ ಮಾರಾಟಕ್ಕೆ ಮೀಸಲಿಡುತ್ತಿರುವುದೂ ಇದೆ. ಇದರಿಂದ ದೈಹಿಕ ಪರಿಶ್ರಮದಿಂದ ಬೆಳೆ ಬೆಳೆಯುವವರೇ ಅಪೌಷ್ಠಿಕತೆಯಿಂದ ಬಳಲುವಂತಾಗುತ್ತಿರುವುದು ದುರ್ದೈವದ ಸಂಗತಿ. ಸಾಂಪ್ರದಾಯಿಕ ಆಹಾರ ಧಾನ್ಯಗಳು ಜನತೆಯ ಆರೋಗ್ಯವನ್ನು ಮಾತ್ರವಲ್ಲದೇ ಅವರ ಸಂಸ್ಕøತಿಯಲ್ಲೂ ಹಾಸುಹೊಕ್ಕಾಗಿವೆ, ಸಂಸ್ಕøತಿಯನ್ನು ರೂಪಿಸಿವೆ. “ಹಾರಕ ತಿಂದವನು ಹಾರಾರ್ತ ಇರ್ತಾನೆ” ಅಥವಾ“ಬಾರ್ಲಿ ಉಂಡವನ ಬಾಳೆಲ್ಲಾ ಬಾಲಗೌರಿಯಹಾಗೆ”ಎನ್ನುವ ಗಾದೆಗಳು ಈ ಆಹಾರ ಧಾನ್ಯಗಳು ಮನುಷ್ಯನ ಆರೋಗ್ಯದ ಮೇಲೆ ಉಂಟುಮಾಡುವ ಗುಣಾತ್ಮಕ ಪರಿಣಾಮವನ್ನು ಹೇಳುತ್ತವೆ. ಚನ್ನಂಗಿ, ಕೆಂಬತ್ತಿಯಂಥ ತಳಿಗಳು ಪಶು ಚಿಕಿತ್ಸೆಗೂ ಬಳಕೆಯಾಗುತ್ತಿದ್ದವು. ದನ ಮತ್ತು ಕುರಿಗಳ ಅನಾರೋಗ್ಯಕ್ಕೆ ಕೆಂಬತ್ತಿ ಬತ್ತದ ತಳಿ ಔಷಧವಾಗಿ ಕೆಲಸಮಾಡುತ್ತಿತ್ತು ಎಂದು ಹಳೆಯ ತಲೆಮಾರಿನ ಜನಪದರು ಈಗಲೂ ಹೇಳುವುದುಂಟು.

ಸಾಂಪ್ರದಾಯಿಕ ರೀತಿಯಲ್ಲಿ ಆಹಾರ ಬೆಳೆ ಬೆಳೆಯುವ ಪದ್ಧತಿ ಅನೇಕಾನೇಕ ನಂಬಿಕೆ, ಆಚರಣೆಗಳಿಗೆ ಎಡೆ ಮಾಡಿ ಸಾಂಸ್ಕøತಿಕ ಸಮೃದ್ಧಿಯನ್ನೂ ಹೆಚ್ಚಿಸಿದೆ.ಹೊನ್ನಾರು, ಬಿತ್ತನೆ ಪೂಜೆ, ಕುರಿತುಳಿಸುವುದು, ಹೊಲಕ್ಕೆ ಎಡೆ ಇಡುವುದು, ದನಗಳ ಪೂಜೆ, ಭೂಮಿ ಪೂಜೆ, ಮುನಿಯಪ್ಪನ ಆಚರಣೆ, ಕೊಯ್ಲು ಶಾಸ್ತ್ರ, ಕಣ ಮಾಡುವುದು, ರಾಶಿ ಪೂಜೆ-ಸುಗ್ಗಿ ಮೊದಲಾದವು ಬಿತ್ತನೆಯ ಹಂತದಿಂದ ಸುಗ್ಗಿಯವರೆಗಿನ ಆವರ್ತನದಲ್ಲಿ ಕಂಡುಬರುವ ಸಂಗತಿಗಳು.

ಜಿಲ್ಲೆಯ ಆಹಾರಧಾನ್ಯಗಳಿಗೂ ವ್ಯಕ್ತಿ ಅಥವಾ ಊರಿನ ಹೆಸರಿಗೂ ಸಂಬಂಧ ಇರುವುದನ್ನು ಕೂಡ ಗುರುತಿಸಬಹುದು.ಉದಾಹರಣೆಗೆ ರಾಗಿಮುದ್ದನಹಳ್ಳಿ ಊರಿನ ಹೆಸರನ್ನು ಗಮನಿಸಬಹುದು. ಈ ಊರು ತುಮಕೂರು ತಾಲ್ಲೂಕು ಕೇಂದ್ರದಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು 45 ಕಿ.ಮೀ ದೂರದಲ್ಲಿದೆ. ಹಿಂದೊಮ್ಮೆ ಈ ಊರಿಗೆ ಮದುವೆಯಾಗಿ ಬಂದ ಹೆಣ್ಣಿಗೆ ಗಂಡನ ಮನೆಯವರು ರಾಗಿ ಶ್ಯಾವಿಗೆ ಮಾಡಲು ರಾಗಿ ತಂದುಕೊಟ್ಟರಂತೆ.ಆಕೆ ಇದು ನಮ್ಮ ಊರಿನ ರಾಗಿ ಎಂದಾಗ ಆಕೆಯ ಗಂಡ ಇದು ನಿಮ್ಮ ಊರಿನ ರಾಗಿ ಅಲ್ಲ, ನಮ್ಮೂರಿನದು ಎಂದನಂತೆ.ಆಗ ಆಕೆ ನಮ್ಮೂರ ರಾಗಿ ಶ್ಯಾವಿಗೆ ತುಂಡಾಗದೇ ಬರುತ್ತದೆ; ಬೇರೆ ರಾಗಿ ಶ್ಯಾವಿಗೆ ತುಂಡು ತುಂಡಾಗಿ ಬರುತ್ತದೆ ಎಂದು ಹೇಳಿ ಎರಡರಲ್ಲೂ ಶ್ಯಾವಿಗೆ ಮಾಡಿ ತೋರಿಸಿದಳಂತೆ.ಅಂದಿನಿಂದ ಆಕೆಯ ಮನೆ ಕಡೆಯ ರಾಗಿಯನ್ನೇ ಅವರೂ ಬೆಳೆದು ರಾಗಿ ಶ್ಯಾವಿಗೆ, ಮುದ್ದೆಗೆ ಬಳಸತೊಡಗಿದರಂತೆ.ಅಂದಿನಿಂದ ಈ ಊರಿಗೆ ರಾಗಿಮುದ್ದನ ಹಳ್ಳಿ ಎಂದು ಹೆಸರು ಬಂದಿತು ಎನ್ನಲಾಗುತ್ತದೆ.

ತುಮಕೂರು ತಾಲ್ಲೂಕು  ಕೇಂದ್ರದಿಂದ  ದಕ್ಷಿಣಕ್ಕೆ ಸುಮಾರು 35 ಕಿ.ಮೀ ದೂರದಲ್ಲಿರುವ ನಾಣಿಕೆರೆ  ಗ್ರಾಮ ನಿಡುವಳ್ಳು ಗ್ರಾಮಪಂಚಾಯ್ತಿಗೆ ಸೇರಿದೆ. ಈ ಊರಿನ ಸುತ್ತುಮುತ್ತಲಿನ ಕೆಲಸ ಊರುಗಳ ಹೆಸರಿನೊಂದಿಗೆ ಕತೆಯೊಂದು ತಳಕುಹಾಕಿಕೊಂಡಿದೆ.ಈ ಪ್ರದೇಶ ಹಿಂದೊಮ್ಮೆ ದಟ್ಟ ಕಾಡು ಪ್ರದೇಶವಾಗಿತ್ತಂತೆ.ಇಲ್ಲಿ ಪ್ರಾಣಿಯನ್ನು ಬೇಟೆಯಾಡುವಾಗ ಬೇಟೆಗಾರನಿಂದ ತಪ್ಪಿಸಿಕೊಂಡು ಓಡಿದ ಕಾಡು ಮೊಲವೊಂದು ಇಲ್ಲಿನ ಕೆರೆಯ ಪಕ್ಕದಲ್ಲಿದ್ದ ಸೀಗೆ ಮೆಳೆಗೆ ಸಿಕ್ಕಿಕೊಂಡಿತ್ತಂತೆ.ಬೇಟೆಗಾರನ ಜೊತೆಯಲ್ಲಿದ್ದ ಬೇಟೆ ನಾಯಿ ಆ ಮೊಲವನ್ನು ಹಿಡಿಯಲು ಯತ್ನಿಸಿ ಮೆಳೆಯಲ್ಲಿ ಸಿಕ್ಕಿಕೊಂಡಿತಂತೆ.ಆಗ ಬೇಟೆಗಾರರೆಲ್ಲಸೇರಿ ಮೆಳೆಗೆ ಬೆಂಕಿ ಹಚ್ಚಿದರಂತೆ.ಆಗ ಮೊಲ ತಪ್ಪಿಸಿ ಕೊಂಡು ಹೋಗಿ ಮೊಲ ಹಿಡಿಯಲು ಹೋಗಿದ್ದನಾಯಿ ಆ ಬೆಂಕಿಯಲ್ಲಿ ಬೆಂದುಹೋಗಿತ್ತಂತೆ.ಬೆಂದ ನಾಯಿಯನ್ನೇ ಮೊಲ ಎಂದು ಭಾವಿಸಿ ಈ ಊರಿನ ಜನ ಹಂಚಿ ತಿಂದದ್ದರಿಂದ ಈ ಊರಿಗೆ ನಾಣಿಕೆರೆ ಎಂದು ಹೆಸರು ಬಂದಿತಂತೆ. ಈ ನಾಯಿಯ ಭಾಗವನ್ನು ತಿಂದ ಊರಿನವರು ಯಾವ ಭಾಗ ತಿಂದಿದ್ದರೋ ಅವರ ಊರಿಗೆ ಅದೇ ಹೆಸರು ಬಂದಿದೆ ಎನ್ನಲಾಗುತ್ತದೆ. ಹೀಗಾಗಿ ನಾಯಿ ಮಧ್ಯಭಾಗ ತಿಂದವರಊರು ನಾಯಿ ನಾಣಿಕೆರೆ, ನಡ ತಿಂದವರ ಊರು ನಿಡುವಳ್ಳು, ಕಾಲು ತಿಂದ ಚನ್ನೇನ ಹಳ್ಳಿ ಎಂದು ಈಗಲೂ ಹೇಳಲಾಗುತ್ತದೆ.

ಆಹಾರ ಅಂದರೆ ಹಸಿವಾದಾಗಲೋ ಚಪಲಕ್ಕೋ ಸಿಕ್ಕಿದ್ದನ್ನು ಒಂದಷ್ಟು ತಿನ್ನುವ ಅಥವಾ ಹೊಟ್ಟೆ ತುಂಬಿಸುವ ಮೂಲಕಜನರನ್ನು ಆರಾಮವಾಗಿ ಇರಿಸುವ ಪದಾರ್ಥವಷ್ಟೇ ಅಲ್ಲ. ಅದಕ್ಕೆ ಅನೇಕ ಆಯಾಮಗಳಿವೆ. ಬದಲಾದ ಇಂದಿನ ಜೀವನ ಶೈಲಿಯಿಂದಾಗಿ ಸಿದ್ಧ ಆಹಾರಗಳು ಸುಲಭವಾಗಿ ಲಭ್ಯವಾಗುತ್ತಿವೆ. ಮಾರುಕಟ್ಟೆಯ ವ್ಯಾಪನೆಯಿಂದ ಎಲ್ಲ ಮೂಲೆಗೂ ಸಂಸ್ಕರಿತ ಆಹಾರ ಪದಾರ್ಥಗಳು ತಲುಪುತ್ತಿವೆ. ಇಂಥ ಆಹಾರ ಕೆಡದಿರಲೆಂದು ಅನೇಕ ರೀತಿಯ ರಾಸಾಯನಿಕಗಳ ಮಿಶ್ರಣ ಕೂಡ ನಡೆಯುತ್ತಿದೆ. ಇದರಿಂದ ಅದನ್ನು ತಿನ್ನುವವರ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತಿವೆ. ಈ ಕುರಿತು ಸಮಾಜದಲ್ಲಿ ಉಂಟಾಗುತ್ತಿರುವ ಜಾಗೃತಿ ಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಹೊರಳುವಂತೆ ಮಾಡುತ್ತಿದೆ.ಇದೊಂದು ಗುಣಾತ್ಮಕ ಬೆಳವಣಿಗೆ.


ಅನುಬಂಧ 1.

ತುಮಕೂರು ಜಿಲ್ಲೆಯ ಆಹಾರ ಮತ್ತು ಧಾನ್ಯಗಳಿಗೆ ಸಂಬಂಧಿಸಿದಂತೆ ಕೆಲವು ಶಾಸನಗಳಲ್ಲಿ ಉಲ್ಲೇಖಗಳು ದೊರೆಯುತ್ತವೆ.ತುಮಕೂರು ಜಿಲ್ಲೆಯ ಅತಿ ಪ್ರಾಚೀನ ದಾನ ಶಾಸನ ಎನಿಸಿದ ಕ್ರಿ. ಶ. 400ರ ಮೆಳೆಕೋಟೆ ಶಾಸನದಲ್ಲೇ ಮೂರು ಖಂಡುಗ ಬೀಜದ ಭೂಮಿಯನ್ನೂ ಮೂವತ್ತು ಖಂಡುಗ ಶ್ಯಾಮಕ (ಬತ್ತ?)ಧಾನ್ಯ ಬೆಳೆಯುವ ಭೂಮಿಯನ್ನೂ ದಾನ ನೀಡಿದ ವಿವರವಿದೆ. 1151ರ ಕೈದಾಳ ಶಾಸನದಲ್ಲಿ ಮುನಿಗಳ ಆಹಾರಕ್ಕಾಗಿ ಭೂದಾನ ಮಾಡಿದ ವಿವರವಿದೆ.1277ರ ಅಮರಾಪುರ ಶಾಸನದಲ್ಲಿ ಮಲ್ಲಿಸೆಟ್ಟಿ ಎಂಬಾತ ತಮ್ಮಡಿಹಳ್ಳಿ ಬಳಿ ಎರೆ ಭೂಮಿಯಲ್ಲಿ ಬೆಳೆಸಿದ್ದ ಎರಡುಸಾವಿರ ಅಡಕೆಮರಗಳ ತೋಟವನ್ನು ಬ್ರಹ್ಮಜಿನಾಲಯಕ್ಕೆ ದಾನನೀಡಿದ ವಿವರವಿದೆ.ಇದೇ ರೀತಿ 1272ರ ಶೆಟ್ಟಿಕೆರೆಯ ಶಾಸನದಲ್ಲಿ ಬಾಣಸಿಗರಿಗೆ, ಪಾಯಸಪಕ್ವಾನ್ನಗಳ ನೈವೇದ್ಯಕ್ಕೆ ದಾನ ನೀಡಿದ ಮಾಹಿತಿ ಇದೆ. ನಿಡಗಲ್ಲು ಬೆಟ್ಟದ 1248ರ ಶಾಸನ, 1560ರ ಎಡೆಯೂರಿನ ಶಾಸನ, 1496ರ ನಾಗೇನಹಳ್ಳಿಯ ಶಾಸನ, 1623ರ ಚಿಕ್ಕನಾಯಕನಹಳ್ಳಿ ಶಾಸನಗಳಲ್ಲಿಯೂ ಇಂಥ ಉಲ್ಲೇಖಗಳಿವೆ. 1248ರ ಚೋಳರ ಇರುಂಗೊಳದೇವನ ನಿಡಗಲ್ಲು ಶಾಸನವಂತೂ ಅವರೆ, ಮೆಣಸು, ಓವ, ಸಾಸುವೆ, ಮೆಂತೆ, ಜೀರಿಗೆ, ಸಬ್ಬಸಿಗೆ, ಕೊತ್ತಂಬರಿ, ಅರಿಶಿನ, ಹುರುಳಿ, ಕಬ್ಬು, ತೆಂಗು, ಬಾಳೆ ಮೊದಲಾದ ಆಹಾರ ಪದಾರ್ಥಗಳನ್ನು ಉಲ್ಲೇಖಿಸಿ ಅವುಗಳ ಮೇಲೆ ಹೇರಿದ ಸುಂಕದ ವಿವರ ನೀಡುತ್ತದೆ. 


ಅನುಬಂಧ 2:

ಮೈಸೂರು ಅರಸರು ರೈತರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ 1888ರಲ್ಲಿ ದಸರಾ ವೇಳೆಗೆ ನಡೆದ ಮೊದಲ ವಸ್ತುಪ್ರದರ್ಶನದಲ್ಲಿ ರೈತರ ಅತ್ಯುತ್ತಮ ಬೆಳೆಯ ಪ್ರದರ್ಶನಕ್ಕೆ ಅನುವುಮಾಡಿಕೊಟ್ಟಿದ್ದರು.ಈ ಸಂದರ್ಭದಲ್ಲಿ ತುಮಕೂರಿನ ರೈತರಿಗೂ ಅವಕಾಶ ಲಭಿಸಿತ್ತು. ಅವರು ಅನೇಕ ಬಹುಮಾನಗಳನ್ನೂ ಗೆದ್ದಿದ್ದರು ಎಂಬುದು ದಾಖಲೆಗಳು ಹೇಳುತ್ತವೆ: ವೈಶಾಖೀ ಬತ್ತ (ಬೇಸಗೆ ಬತ್ತ) ಬೆಳೆದ ಪಾವಗಡದ ಗುಂಡಪ್ಪ; ಮಳೆಗಾಲದ ಕಾರ್ತಿಕ ಬತ್ತ ಬೆಳೆದ ಸಿರಾದ ಷಡಕ್ಷರಿ;ಕೆಂಪುಜೋಳ ಬೆಳೆದ ಪಾವಗಡದವೆಂಟಿಕೊಂಡ ಗುರಪ್ಪ; ಸಾಮೆ ಬೆಳೆದ ತುಮಕೂರಿನ ಪುಟಾಣಿ ಗೌಡ; ಮುಸುಕಿನ ಜೋಳ ಬೆಳೆದ ಕ್ಯಾತ್ಸಂದ್ರದ ಶ್ಯಾಮಣ್ಣ; ಬರಗು ಬೆಳೆದ ಕೊರಟಗೆರೆಯ ತಿಮ್ಮಪ್ಪ; ತೊಗರಿ ಬೆಳೆದ ಹೇರೂರಿನ ಅಪ್ಪಣ್ಣಯ್ಯ; ಕಪ್ಪು ಉದ್ದಿನ ಕಾಳು ಬೆಳೆದ ವೆಂಕಟಪ್ಪ ಮತ್ತು ಹಸಿರು ಉದ್ದಿನ ಕಾಳು ಬೆಳೆದ ಕಪ್ಪಣ್ಣ; ಬಟಾಣಿ ಬೆಳೆದ ಚನ್ನವೀರಗೌಡ; ಅಚ್ಚೆಳ್ಳು ಬೆಳೆದ ಅಬಿದ್ ಅಲಿ; ಕುಸುಂಬೆ ಬೆಳೆದ ಅಬ್ದುಲ್ ರಹೀಮುಸ್ಸಾಬ್ ಮೊದಲಾದವರೆಲ್ಲ ಒಂದಲ್ಲ ಒಂದು ಪ್ರಶಸ್ತಿ ಪಡೆದುದಾಗಿ ತಿಳಿದುಬರುತ್ತದೆ.

ಪರಾಮರ್ಶನ:

  • ತುಮಕೂರು ಜಿಲ್ಲಾ ಗ್ಯಾಸಟೀರ್ಕ
  • ನ್ನಡ ವಿಶ್ವಕೋಶ ಸಂಪುಟಗಳು, ಮೈಸೂರು ವಿವಿ
  • ಸಾಮರಸ್ಯ, ಸಿ ವಿ ಮಹದೇವಯ್ಯ (ಸಂ), ತುಮಕೂರು ಹೊಟೇಲ್ ಮಾಲೀಕರ ಸಹಕಾರ ಸಂಘ, ನಿ., ತುಮಕೂರು, 2001
  • ಎಪಿಗ್ರಾಫಿಯ ಕರ್ಣಾಟಿಕ ಸಂಪುಟಗಳು: 06, 12 ಮತ್ತು 16
  • ತುಮಕೂರು ಜಿಲ್ಲೆಯ ಜಾನಪದೀಯ ನೆಲೆಗಳು, ಡಾ. ಚಿಕ್ಕಣ್ಣ ಎಣ್ಣೆಕಟ್ಟೆ, ತುಮಕೂರು ವಿಶ್ವವಿದ್ಯಾನಿಲಯ, 2011
  • ಮಧ್ಯಕಾಲೀನ ಕರ್ನಾಟಕದಲ್ಲಿ ಆಹಾರ ಮತ್ತು ಪಾನೀಯಗಳು, ಡಾ. ಎನ್ ನಂದೀಶ್ವರ, ಪೂರ್ಣಚಂದ್ರ ತೇಜಸ್ವಿ ಪ್ರಕಾಶನ, ಸಿರಾ, 2013
  • ಉತ್ತರಕನ್ನಡ ಜಿಲ್ಲೆಯ ಕೆಲವು ಜನಸಮುದಾಯಗಳ ಜನಪದ ಆಹಾರ ಪದ್ಧತಿ (ಅಪ್ರಕಟಿತ ಡಿ.ಲಿಟ್ ಮಹಾಪ್ರಬಂಧ), ಡಾ. ಶ್ರೀಪಾದ ಭಟ್, ತುಮಕೂರು ವಿಶ್ವವಿದ್ಯಾನಿಲಯ, 2011
  • http://en.wikipedia.org/wiki/Tumkur_district
  • http://tumkur.nic.in/






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment