ಜನಪದ ಗೀತೆಗಳಾಗಲಿ, ಪುರಾಣ ಸಾಹಿತ್ಯಗಳಾಗಲಿ, ಜನಪದ ಕಲೆಯೇ ಆಗಲಿ ಇಂದು ಶಾಸ್ತ್ರೀಯತೆಗೆ ಒಳಪಟ್ಟು ‘ಮಾರ್ಗ’ ಪರಂಪರೆಗೆ ತಾಯಿಯ ಸ್ಥಾನವನ್ನು ಪಡೆದಿವೆ. ಯಾವುದೇ ರಂಗಕಲೆಯಿರಲಿ ಅದರ ಈಗಿನ ಅಥವಾ ಇವೊತ್ತಿನ ರೂಪ ಹಿಂದೆಯೂ ಇತ್ತು. ಹೀಗೆಯೆ ಮುಂದೆಯೂ ಇರುತ್ತದೆ ಎಂದು ಯಾರೊಬ್ಬರೂ ಹೇಳಲಾರದು. ಏಕೆಂದರೆ ಇವು ಚನಲಶೀಲವಾದವು. ಪ್ರಯೋಗ ಶೀಲತೆಯನ್ನು ಪರಂಪರೆಯ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತಲೇ ನಾವೀನ್ಯವನ್ನು ಪ್ರದರ್ಶಿಸುವ ಇಂಥ ಕಲೆಗಳು ಹೇಗೆಂದರೆ, ಮೊಮ್ಮಗನಲ್ಲಿ ಮುತ್ತಜ್ಜನ ಲಕ್ಷಣಗಳನ್ನು ಗುರುತಿಸುವುದಿಲ್ಲವೇ? ಹಾಗೆ, ಹಿಂದೆ ಯಕ್ಷಗಾನದಲ್ಲಿ ರಾತ್ರಿ ಬೆಳಗು ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ಸೋರೆಬುರುಡೆಯಿಂದ ತಯಾರಿಸಿದ ಶ್ರುತಿಯೊಂದನ್ನು ಊದಲಾಗುತ್ತಿತ್ತೆಂದು ಕಾರಂತರು ಉಲ್ಲೇಖಿಸಿ, ಈಗ ಆ ಕಷ್ಟದ ಬದಲು ಇಂದಿನವರು ಅದನ್ನು ಕಿತ್ತೆಸೆದು, ಹಾರ್ಮೋನಿಯಂ ರೀಡುಗಳನ್ನು ಅಳವಡಿಸಿದ ಶ್ರುತಿ ಪೆಟ್ಟಿಗೆಗಳನ್ನು ಬಳಸುತ್ತಿದ್ದಾರೆ ಎಂದು ಹೇಳುತ್ತಾರೆ. ಸಭಾಲಕ್ಷಣವಾಗಲಿ, ಕೋಡಂಗಿ ಕುಣಿತವಾಗಲಿ, ಬಾಲಗೋಪಾಲರಾಗಲಿ, ಸ್ತ್ರೀವೇಷಧಾರಿಗಳಾಗಲಿ ಇಂದಿನ ಯಕ್ಷಗಾನದ ಆರಂಭದಲ್ಲಿ ಇಲ್ಲವೇ ಇಲ್ಲ ಅನ್ನಬಹುದು. ಊರುಗಳ ‘ಆಡಿಟೋರಿಯಂ’ ಗಳಲ್ಲಿ ಯಕ್ಷಗಾನ ಪ್ರದರ್ಶನ ಕಾಲಮಿತಿಯಲ್ಲಿ ನಡೆಯಬೇಕಾದ ಇಂದಿನ ಸ್ಥಿತಿಯಲ್ಲಿ ರಂಗಸ್ಥಗದ ದಿಕ್ಕು ದೆಸೆಗಳ ಪರಂಪರೆಯ ನಿಷೇಧದ ಮಾತಂತೂ ದೂರವೇ ಉಳಿಯಿತು. ಆದ್ದರಿಂದ ಇವೆಲ್ಲ ಕಾಲಕ್ಕೆ ತಕ್ಕ ಬದಲಾವಣೆಗಳು ಅನ್ನದೇ ವಿಧಿಯಿಲ್ಲ. ಇಂದಿನ ಸಿನಿಮಾ, ವಿಡಿಯೋ ಮುಂತಾದ ಇಲೆಕ್ಟ್ರಾನಿಕ್ ಮಾಧ್ಯಮದ ಯುಗದಲ್ಲಿ ಯಕ್ಷಗಾನದಂಥ ಕಲೆಗೂ ರಸಿಕರಿಸದ್ದಾರಲ್ಲ. ಇದು ಸಮಾಧಾನದ ವಿಷಯ.
ಜನಪದ ಕಲೆಯೊಂದು ಹೇಗೆ ಶಾಸ್ತ್ರೀಯಗೊಳ್ಳುತ್ತದೆ ಅಥವಾ ಶಾಸ್ತ್ರೀಯಗೊಳಿಸಲ್ಪಡುತ್ತದೆ ಎಂಬುದನ್ನು ಈಗಲೂ ಕಣ್ಣಾರೆ ನೋಡಬೇಕಾದರೆ ಒರಿಸ್ಸಾ ಮತ್ತು ಬಿಹಾರಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಚೌಹೂ ಅಥವಾ ಚೌ ಎಂಬ ಕಲೆಯನ್ನು ನೋಡಬೇಕು. ಈ ಕಲೆಗೆ ತೌರೂರು ಬಿಹಾರದ ಸೇರೆಯಿ ಕಲಾ ಹಾಗೂ ಒರಿಸ್ಸಾದ ಮಯೂರ ಭಂಜ್‍ಪ್ರಾಂತಗಳು. ಚೌ ನೃತ್ಯ ಪ್ರದರ್ಶನದಲ್ಲಿ ಒಡಿಸ್ಸಿ ಶೈಲಿಯಲ್ಲಿ ಹಾಡುವ ಸಾಹಿತ್ಯಕ್ಕಾಗಲಿ, ಆಡುವ ಮಾತಿಗಾಗಲಿ ಯಾವ ಪ್ರಾಧಾನ್ಯವೂ ಇಲ್ಲ. ಗೀತ, ನೃತ್ಯ, ವೇಷ ಭೂಷಣಗಳೇ ಪ್ರಧಾನ ಸಾಧನಗಳು, ಮೂಲತಃ ಇದು ಬುಡಕಟ್ಟು ಜನರ ಕಲೆ. ಈ ಪ್ರದರ್ಶನದಲ್ಲಿ ಪಶು ಪಕ್ಷಿಗಳು, ಹುಲಿಕರಡಿಗಳು, ಗಿಡ ಮರಗಳು ಬರುತ್ತವೆ. ಆಯಾ ಪಾತ್ರಕ್ಕೊಪ್ಪುವ ವೇಷಭೂಷಣ, ಮುಖವಾದ ತೊಡುಗೆಗಳಿಂದ ಕಲಾವಿದ ವಿಜೃಂಭಿಸುತ್ತಾನೆ. ದೇಹದ ಚಲನೆ, ವಿವಿಧ ಭಂಗಿಗಳಿಂದ ವಿವಿಧ ಭಾವನೆಗಳನ್ನು ಪ್ರಕಟಿಸುತ್ತಾನೆ. ಮಯೂರಭಂಜ್ ದವರು ಮುಖವಾಡ ಧರಿಸುವುದಿಲ್ಲವಂತೆ.
ಇತ್ತೀಚಿಗೆ ಈ ಕಲೆಯ ಪ್ರದರ್ಶನವನ್ನು ನೋಡುವ ಅವಕಾಶ ಒದಗಿತ್ತು. ಶಿವನ ಆರಾಧಕರಾದ ಬೇಟೆಗಾರ ವೃತ್ತಿಯ ಬುಡಕಟ್ಟಿನ ಕಲೆ ಇದು. ವೇಷ ಭೂಷಣದಲ್ಲಿ ಇದು ಆದಿ ಜನರ ಕಲೆ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಇಲ್ಲಿ ದೊಡ್ಡ ಮದ್ದಳೆ, ಕೊಳಲು, ವಯೋಲಿನ್‍ಗಳನ್ನು ಬಳಸಲಾಗುತ್ತದೆ. ಮದ್ದಳೆಕಾರನದೇ ಹಾಡುಗಾರಿಕೆ. ಹೆಜ್ಜೆಯ ಗತಿಯನ್ನು ಆತ ಹೇಳುತ್ತಾ ಹೋಗುತ್ತಾನೆ. ಯಾವೊಂದು ಕಟ್ಟುಪಾಡಿಲ್ಲದೆ. ಪ್ರದರ್ಶಿಸಲಾಗುತ್ತಿದ್ದ ಈ ಕಲೆಗೆ ‘ಶಾಸ್ತ್ರೀಯ’ ರಾಗ ತಾಳಗಳನ್ನು ಅಳವಡಿಸಿದ ಪರಿಯನ್ನು ಗತಿಗತಿಯಲ್ಲೂ ಕಾಣಬಹುದು. ವೇಷಭೂಷಣ, ಮುಖವಾಡಗಳಿಂದಲೆ ತನ್ನ ಸ್ವಂತಿಕೆಯನ್ನು ಹೇಳುವ ಚೌ-ನೃತ್ಯವಂತೂ ಇದಿನ್ನೂ ಪಕ್ಕಾ ಶಾಸ್ತ್ರೀಯವಾಗಿಲ್ಲವೆಂಬುದನ್ನು ಸುಲಭವಾಗಿ ಹೇಳಿಸುತ್ತದೆ. ನೃತ್ಯದ ವಸ್ತುವಾದರೂ ಭರ್ಚಿ ಹಿಡಿದ ಬೇಡನೊಬ್ಬನ ಬೇಟೆಯ ಸಹಸ, ಅಂಬಿಗನೊಬ್ಬ ಬಿರುಗಾಳಿಯಿಂದ ಪಾರಾಗುವ ಸನ್ನಿವೇಶ...ಇಂಥವೆ ಆಗಿರುತ್ತವೆ. ನೃತ್ಯ ಕಲೆಯಲ್ಲಿ ಶಾಸ್ತ್ರೀಯ ತಾಳಕ್ಕೆ ತಕ್ಕಂತೆ ಕುಣಿಯುವ ಪಕ್ವತೆ ಬಂದಂತೆ ಮುಂದೊಂದು ದಿನ ಇದು ಮಾರ್ಗಕಲೆ, ಜನಪದ ಕಲೆ ಅಲ್ಲ ಎಂಬ ಅಭಿಪ್ರಾಯಗಳೂ ಬರಬಹುದು. ನಗಾರಿ, ಮಹೌರಿಗಳಂಥ ವಾಧ್ಯಗಳು ಈ ಪ್ರದರ್ಶನದಲ್ಲಿ ಇರಲೇ ಇಲ್ಲ, ಕಲೆಯೊಂದರ ಮೂಲರೂಪ ಹೇಗೆ ಬದಲಾವಣಗೆ ಒಳಪಡುತ್ತದೆ ಎಂಬುದನ್ನು ಹೇಳುವುದಷ್ಟೆ ಇಲ್ಲಿನ ಉದ್ದೇಶ.
ಜನಪದ ಸಂಗೀತಕ್ಕೂ ಇದೇ ಮಾತು ಅನ್ವಯವಾಗುತ್ತದೆ. ಜನಪದ ಸಂಗೀತವನ್ನು ಕುರಿತಂತೆ ಅಧ್ಯನ, ಸಂಶೋಧನೆಯನ್ನು ಕೈಗೊಳ್ಳುವುದಕ್ಕಾಗಿಯೇ ಕಲ್ಕತ್ತಾದಲ್ಲಿ ಒಂದು ಸಂಸ್ಥೆ ಇದೆ. ಈ ಮೂಲಕ ಕೆ.ಡಿ. ಉಪಾಧ್ಯಾಯ, ಬಿ. ಚೈತನ್ಯ ದೇವ ಮುಂತಾದ ಘನ ಸಂಗೀತಶಾಸ್ತ್ರ ವಿದ್ವಾಂಸರು ಜನಪದ ಸಂಗೀತದ ಸತ್ವವನ್ನು ತಿಳಿಸಿಕೊಟ್ಟಿದ್ದಾರೆ.
ಕೆ.ಡಿ. ಉಪಾಧ್ಯಾಯ ಹೇಳುವಂತೆ, “ವೇದ ಸಾಹಿತ್ಯದಲ್ಲಿ ಅತ್ಯಂತ ಹಳೆಯದೆಂದರೆ ಋಗ್ವೇದ. ಅದರಲ್ಲಿ ಅತ್ಯಂತ ಹಳೆಯ ಜನಪದ ಗೀತೆಗಳೂ ಲಾವಣಿಗಳೂ ಬರುತ್ತವೆ. ಗೃಹ್ಯ ಸೂತ್ರಗಳಲ್ಲಿ ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಹಾಡುತ್ತಿದ್ದ ಗೀತೆಗಳ ಪುರಾತನ ಮಾದರಿಯ ಅನೇಕ ಗಾದೆಗಳನ್ನು ಕಾಣಬಹುದು”. ಈ ಮಾತಿನಿಂದ ಜನಪದ ಗೀತೆಗಳ ಪ್ರಾಚೀನತೆಯ ಅರಿವೂ ಅಡಗಿರುತ್ತದೆ. ಯಾವುದೇ ಜನಪದ ಗೀತೆಗೂ ಇಂತಿಂಥ ರಾಗ-ತಾಳವೆಂದು ಲಿಖಿತ ನಿಯಮವಿಲ್ಲ. ಪಾರಂಪರಿಕ ಶ್ರುತ ಧಾಟಿಯೇ ಗೀತೆಗಳ ಲಯವನ್ನು ಮುಂದಕ್ಕೊಯ್ಯುತ್ತದೆ. ದಾಸ ಸಂಕೀರ್ತನೆಗಳಿಗೂ ರಾಗ-ತಾಳಗಳನ್ನು ಬರೆದಿಟ್ಟದ್ದು ತೀರ ಈಚೆಗೆಂಬುದು ಎಲ್ಲರಿಗೂ ತಿಳಿದ ವಿಷಯ. ವೇದಗಳು ಪ್ರಾಚೀನ ದಾಖಲೆಯಾಗಿ ಉಳಿದಿರುವ ಹಾಡುಗಳು. ಅವುಗಳ ಹಾಡಿಕೆಯಲ್ಲಿ ತಾಳವಿಲ್ಲ, ವಿನ್ಯಾಸವಿಲ್ಲ. ಹಾಗಾಗಿಯೇ ವೇದವನ್ನು ‘ವೈತಾಳಿಕ’ ಗಾನ-ತಾಳವಿಲ್ಲದ ಹಾಡೆಂದು ಹೇಳುವುದು. ಪದಗಳ ಪರಿಣಾಮವೇ ಪದ್ಯವೆನ್ನುತ್ತ ಖ್ಯಾತ ವಿದ್ವಾಂಸರಾದ ರಾಳ್ಳಪಳ್ಳಿ ಅನಂತಕೃಷ್ಣಶರ್ಮರು ‘ತೆಲುಗಿನಲ್ಲಿ ಪರಮ ಪ್ರಾಚೀನ ಪದ್ಧತಿ ಎಂದು ಹೇಳಬಹುದಾದ ಹಳ್ಳಿಯ ಹಾಡುಗಳು-ಕಪಿಲೆ ಹಾಡುಗಳು ಮುಂತಾದವು-ಕೆಲವು ತಾಳನಿಯಮವಿಲ್ಲದೆಯೇ ಹಾಡಲ್ಪಡುತ್ತಿವೆ’ ಎಂದು ಹೇಳುತ್ತಾರೆ. ಇನ್ನೊಂದೆಡೆ “ದೇಶ ದೇಶಗಳಲ್ಲಿ ಮೂಲೆ ಮೂಲೆಗಳಲ್ಲಿ ಇದ್ದ ಗಾನ ರೀತಿಗಳನ್ನೆಲ್ಲ ಒಮ್ಮುಖವಾಗಿ ಮಾಡಿ ಪರಸ್ಪರ ರಮಣೀಯವಾಗಿ ಒಂದೇ ಕಲೆಯಾಗಿ ತಿದ್ದಿ ತೀರ್ಪುಕೊಟ್ಟ ಮಹನೀಯರು ಭರತ ಮತಂಗಾದಿಗಳು” ಎಂದು ಹೇಳಿದ್ದಾರೆ. ಇಲ್ಲಿ ಸ್ಪಷ್ಟವಾಗುವ ಅಂಶವೆಂದರೆ, ದೇಶೀ ಪರಂಪರೆಯಿಂದ ಮಾರ್ಗ ಪರಂಪರೆ ಬಂದ ಬಗೆ, ತ್ಯಾಗರಾಜರಂಥ ವಾಗ್ಗೇಯಕಾರರು ತಮ್ಮ ದಿವ್ಯ ನಾಮ ಸಂಕೀರ್ತನೆಗಳಿಗೂ, ಗೇಯ ರಚನೆಗಳಿಗೂ ಜನಪದ ಸಂಗೀತದ ಧಾಟಿಗಳನ್ನೇ ಬಳಸಿಕೊಂಡರೆಂಬುದು ಸಂಗೀತ ಶಾಸ್ತ್ರಜ್ಞರ ಅಭಿಮತ. ಖ್ಯಾತ ಸಂಗೀತ ತಜ್ಞರಾದ ಡಾ. ರಾ. ಸತ್ಯನಾರಾಯಣರು ‘ಜನಪದ ಸಂಗೀತ ಬೇರು, ಶಿಷ್ಟ ಸಂಗೀತ ಮೇರು’ ಎಂದಿದ್ದಾರೆ.
ಜನಪದ ಸಂಗೀತದಲ್ಲಿ ರಾಗಗಳನ್ನು ಹುಡುಕುವ ಕೆಲಸವನ್ನು ಹಲವಾರು ವಿದ್ವಾಂಸರು ಮಾಡಿದ್ದಾರೆ.
‘ಜನಪದ ಗೀತೆಗಳು’ ಎಂಬ ತಮ್ಮ ಕೃತಿಯಲ್ಲಿ ಶಿವರಾಮ ಕಾರಂತರು ಈ ಬಗ್ಗೆ ವಿವರಿಸುತ್ತಾರೆ. ಹಳ್ಳಿಯ ಹಿರಿಯರು ಮುಂಜಾನೆ ಎದ್ದು ಹಾಡುವ ಉದಯರಾಗಗಳಲ್ಲಿ ಮೋಹನ, ಭೂಪಾಲಿ, ಅರಭಿ, ರೇಗುಪ್ತಿಯಂತಹ ರಾಗಗಳನ್ನು ಕಾಣಬಹುದೆಂದು ಹೇಳಿದ್ದಾರೆ. ಜೋಗುಳದ ಹಾಡುಗಳಲ್ಲಿ ನವರೋಜ ರಾಗವನ್ನೂ ಸೋಬಾನೆ ಹಾಡುಗಳಲ್ಲಿ ಮಧ್ಯಮಾವತಿ, ಮೋಹನ, ರಾಗಗಳನ್ನು ದೇವಾಲಯಗಳಲ್ಲಿ ಹಾಡುವ ಮಂಗಳ ಗೀತೆಗಳಲ್ಲಿ ಧವಳಾರ ರಾಗವನ್ನು ಗುರುತಿಸಬಹುದು ಎಂದು ಹೇಳುತ್ತಾರೆ. ಜೋಗುಳದ ಲಾಲಿ ಪದಗಳಲ್ಲಿ ನವರೋಜ ರಾಗವನ್ನು ಹಲವು ವಿದ್ವಾಂಸರು ಗುರುತಿಸಿದ್ದಾರೆ. ಖರಹರಪ್ರಿಯ, ಕಾಮವರ್ಧಿನಿ, ಕಾಂಭೋಜಿ, ಭೈರವಿ, ನೀಲಾಂಬರಿ, ಪುನ್ನಾಗವರಾಳಿ, ತೋಡಿ, ಆಹಿರಿ, ಸಾವೇರಿ, ಪೀಲು, ಪಹಾಡಿ ಹೇಗೆ ಅನೇಕ ರಾಗಗಳು ಜನಪದ ಗೀತೆಗಳಲ್ಲಿ ಕಂಡುಬರುವುದಾಗಿ ಸಂಗೀತ ಕ್ಷೇತ್ರದ ವಿದ್ವಾಂಸರು ಹೇಳಿದ್ದಾರೆ.
ಜನಪದ ಗೀತೆಗಳಲ್ಲಿರಬಹುದಾದ ಸಂಗೀತ ಗುಣದೊಂದಿಗೆ ರಾಗ ತಾಳಗಳ ಬಗ್ಗೆ ಸಂಶೋಧನೆ ಮಾಡಬೇಕೆನ್ನುವವರಿಗೆ ಅನುಕೂಲವಾಗುವಂತೆ ಅದೇ ಉದ್ದೇಶಕ್ಕಾಗಿ ರಾಮನಗರಂ ಬಳಿಯ ‘ಜಾನಪದ ಲೋಕ’ ಸಾವಿರಾರು ಗಂಟೆಗಳ ಕಾಲ ಕೇಳಬಹುದಾದಷ್ಟು ಜನಪದ ಗೀತೆಗಳ ಧ್ವನಿಮುದ್ರಣದ ಭಂಡಾರವನ್ನು ಇಟ್ಟಿದೆ. ಜನಪದ ಗೀತೆಗಳ ಶಾಸ್ತ್ರೀಯ ಗುಣಗಳ ಬಗ್ಗೆ ಹೇಳುವಾಗ ಎರಡೂ ಕ್ಷೇತ್ರದಲ್ಲಿ ಪರಿಣತಿ ಇರಬೇಕಾಗುತ್ತದೆ. ಸಂಗೀತ ಶಾಸ್ತ್ರದ ಗಾಯನ-ವಾದನಗಳ ಆಳವಾದ ಅರಿವು ಬೇಕಾಗುತ್ತದೆ. ಕೆಲವು ವಿದ್ವಾಂಸರು ಈಗಾಗಲೇ ಇಂಥ ಕೆಲಸವನ್ನು ಮಾಡಿದ್ದಾರೆ, ಮಾಡಬೇಕಾದ ಕೆಲಸಗಳ ಸೂಚನೆಯನ್ನೂ ನೀಡಿದ್ದಾರೆ.
ಪುರಾತನವಾದ ಜನಪದ ಗೀತಪರಂಪರೆ ಬೆಳೆಯುತ್ತಲಿದೆ ಎನ್ನಲು ಧೈರ್ಯ ಬರುವುದಿಲ್ಲ. ಬದಲಾದ ಆಸ್ಥೆ-ಆಸಕ್ತಿಗಳು ಜನಪದ ಗೀತಸಾಹಿತ್ಯಗಳ ಉಗ್ರಾಣವಾಗಿದ್ದ ಗ್ರಾಮೀಣ ಪ್ರದೇಶಗಳ ಮೇಲೆ ದಾಳಿಯಿಕ್ಕಿವೆ. ಹಳೆಯ ತಲೆಮಾರುಗಳ ಅವಶೇಷಗಳಲ್ಲೆ ಜನಪದ ಪ್ರಕಾರಗಳನ್ನು ಹುಡುಕುವ ಸ್ಥಿತಿ ಬಂದಿದೆ. ಅನೇಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಚಿಂತಿಸಿ ದಾಖಲಾತಿ (Documentation) ಕಾರ್ಯದಲ್ಲಿ ತೊಡಗಿವೆ. ಪರಂಪರೆಯನ್ನು ಗಣಕಯಂತ್ರಗಳಲ್ಲಿ ತುಂಬಿ ಬಿಡುವ ಪ್ರಯತ್ನ ಮುಂದಿನ ಪೀಳಿಗೆಗಾಗಿ ಕಾದಿಡುವ ಕೆಲಸವಾದರೂ ಅಂಥ ಸ್ಥಿತಿ ಬಂದೊದಗಿದೆ ಎಂಬುದು ಖೇದವಲ್ಲದೆ ಮತ್ತೇನು?
ಪುಸ್ತಕ:
No comments:
Post a Comment