Monday, 24 January 2022

ಒಗಟಿನ ವಿಶ್ವದರ್ಶನ ಮಾಡಿಸುವ ಕೃತಿ

ಕನ್ನಡ ಜಾನಪದ ಸಂಗ್ರಹಣೆ, ವರ್ಗೀಕರಣ ಮತ್ತು ಅಧ್ಯಯನಗಳಲ್ಲಿ ಮಾದರಿ ರೂಪಿಸಿದ ಶ್ರೇಯಸ್ಸು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರುತ್ತದೆ. ಜಾನಪದ ಎಂ.ಎ ತರಗತಿಗಳ ಜೊತೆಗೆ ಬೃಹತ್ ವಸ್ತುಸಂಗ್ರಹಾಲಯ ಸ್ಥಾಪನೆ, ಸಂಶೋಧನೆ, ಜಾನಪದ ಕೃತಿಗಳ ಪ್ರಕಟಣೆ ಮೊದಲಾದವು ಈ ಮಾದರಿಯಲ್ಲಿ ಸೇರುತ್ತವೆ. ಕನ್ನಡ ಜಾನಪದ ಅಧ್ಯಯನಕ್ಕೆ ಶೈಕ್ಷಣಿಕ ಶಿಸ್ತುನೀಡಿ ಮೊದಲ ಸಾಲಿನ ಜಾನಪದ ಶೈಕ್ಷಣಿಕ ವಿದ್ವಾಂಸರನ್ನು ರೂಪಿಸಿದ ಹೆಮ್ಮೆಯೂ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇದೆ. ದೇಜಗೌ, ಜೀಶಂಪ, ರಾಗೌ, ಸಿಪಿಕೆ, ಡಿ ಕೆ ರಾಜೇಂದ್ರ ಮೊದಲಾದ ಜಾನಪದ ವಿದ್ವಾಂಸರ ಈ ಸಾಲಿನಲ್ಲಿ ನಿಲ್ಲುವವರು ಪ್ರೊ. ಸುಧಾಕರ ಅವರು.

ಜಾನಪದ ಸಂಗ್ರಹಣೆ, ವಿಂಗಡಣೆ ಮತ್ತು ವಿಶ್ಲೇಷಣೆಗಳಲ್ಲಿ ಅವರು ತೋರಿದ ಶ್ರದ್ಧೆ ಅವರ ಜಾನಪದ ಕೃತಿಗಳಲ್ಲಿ ಎದ್ದು ಕಾಣುತ್ತದೆ. ಕತೆಗಾರರಾಗಿ ಹೆಸರು ಮಾಡಿದ್ದ ಅವರು ಗಾದೆ ಮತ್ತು ಒಗಟುಗಳ ಸಂಗ್ರಹದಲ್ಲಿ ವಿಶೇಷ ಆಸ್ಥೆ ತೋರಿದ್ದವರು. ಅದರಲ್ಲೂ ಅವರ ಸಂಗ್ರಹದ ಅಚ್ಚುಕಟ್ಟುತನವನ್ನು ‘ಜನಪದ ಬೆಡಗಿನ ವಚನಗಳು’ ಕೃತಿಯಲ್ಲಿ ನೋಡಬಹುದು. ಕನ್ನಡ ಅಧ್ಯಯನ ಸಂಸ್ಥೆಯಿಂದ ಈ ಕೃತಿ ಪ್ರಕಟವಾದುದು 1970ರಲ್ಲಿ. ಆ ವರ್ಷ ಸಂಸ್ಥೆಯಿಂದ ಹೆಚ್ಚು ಪ್ರಮಾಣದಲ್ಲಿ ಜಾನಪದ ಕೃತಿಗಳುಪ್ರಕಟವಾಗುತ್ತಿವೆ ಎಂದು ಮುನ್ನುಡಿ ಬರೆದ ಸಂಸ್ಥೆಯ ಅಂದಿನ ನಿರ್ದೇಶಕರೂ ಜಾನಪದಕ್ಕೆ ಉತ್ತೇಜನ ನೀಡಿದ ಹಾ ಮಾ ನಾಯಕ್ ಅವರು ಬರೆದ ಮಾತುಗಳು ಆ ದಶಕ ಜಾನಪದ ಅಧ್ಯಯನ ಮತ್ತು ಪ್ರಕಟಣೆಯಲ್ಲಿ ಸುಗ್ಗಿಯನ್ನು ಕಂಡಿರುವುದಕ್ಕೆ ಸಾಕ್ಷಿ. ಅತ್ಯಂತ ಶಾಸ್ತ್ರೀಯ ರೀತಿಯಲ್ಲಿ ಕನ್ನಡ ಒಗಟುಗಳ ಸಂಗ್ರಹ ಪ್ರಕಟವಾಗುತ್ತಿರುವುದೂ ಇದೇ ಮೊದಲು ಎಂದೂ ಅವರು ಹೇಳಿದ್ದಾರೆ. ಇದು ನಿಜವೂ ಹೌದು. 

ಈ ಸಂಗ್ರಹಣೆಗಿಂತ ಮೊದಲು ಬಂದ ಒಗಟು ಸಂಬಂಧಿ ಬಿಡಿ ಲೇಖನಗಳನ್ನು, ಬೆರಳೆಣಿಕೆಯ ಕೃತಿಗಳನ್ನು ಸುಧಾಕರ ಅವರೇ ದಾಖಲಿಸಿದ್ದಾರೆ. ದೇವುಡು, ಹಾಮಾನಾ, ಸಿಂಪಿ ಲಿಂಗಣ್ಣ, ಸಿಪಿಕೆ, ಜೀಶಂಪ ಅವರ ಬಿಡಿ ಲೇಖನಗಳ ಉಲ್ಲೇಖವನ್ನು ಹಾಗೂ ಶಂಬಾ ಜೋಶಿ ಯವರ ಒಡಪುಗಳು, ಜೀಶಂಪ ಅವರ ಕನ್ನಡ ಒಗಟುಗಳು ಹಾಗೂ ಚಿಕ್ಕಲೂರು ಚನ್ನಪ್ಪನವರ ಕನ್ನಡ ಒಗಟುಗಳ ಮಾಲೆ ಕೃತಿಗಳನ್ನು ಸುಧಾಕರರು ಪ್ರಸ್ತಾಪಿಸಿದ್ದಾರೆ. ಯಾವುದೇ ಸಂಶೋಧಕ ಅಥವಾ ಕೃತಿಕಾರ ತಾನು ಏನೇ ಬರೆಯಲಿ, ಅದಕ್ಕಿಂತ ಪೂರ್ವದಲ್ಲಿ ಆ ಕ್ಷೇತ್ರದಲ್ಲಿ ಕೆಲಸ ಮಾಡಿದ ಪೂರ್ವಸೂರಿಗಳ ಯತ್ನವನ್ನು ಗಮನಿಸುವುದು ಅತ್ಯಗತ್ಯ. ಇದು ಸಂಶೋಧಕನ ಶಿಸ್ತಿನ ಜೊತೆಗೆ ವಿನಯವನ್ನು ಕೂಡ ತೋರಿಸುತ್ತದೆ.

ಪ್ರಸ್ತುತ ಸಂಕಲನದಲ್ಲಿ ಒಗಟುಗಳ ರೂಪ, ಲಕ್ಷಣ, ಉಗಮ ಮತ್ತು ವಿಕಾಸಗಳಿಗೆ ಸಂಬಂಧಿಸಿದಂತೆ ಪೌರಾತ್ಯ ಮತ್ತು ಪಾಶ್ಚಾತ್ಯ ಸಂಸ್ಕøತಿಗಳ ಮೂಲ ಚೂಲಗಳನ್ನು ಶೋಧಿಸಿ ಲಭ್ಯ ಎಲ್ಲ ಮಾಹಿತಿಗಳನ್ನೂ ಒಪ್ಪವಾಗಿ ನೀಡಿದ್ದಾರೆ. ಇಂದಿನಂತೆ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನದ ಭರಾಟೆ ಇಲ್ಲದ 1970ರ ದಶಕದ ಆರಂಭದಲ್ಲೇ ಸುಧಾಕರರು ವೇದಗಳ ಕಾಲದಿಂದ ಹಿಡಿದು ಗ್ರೀಕ್, ರೋಮನ್, ಯೂರೋಪ್, ಚೀನ ಮೊದಲಾದ ಮೂಲಗಳಲ್ಲಿ ಎಲ್ಲೆಲ್ಲಿ ಒಗಟುಗಳ ಪ್ರಸ್ತಾಪವಿದೆ ಎಂಬುದನ್ನು ಹಿಂಜಿ ಹಿಂಜಿ ಕೊಟ್ಟಿದ್ದಾರೆ. ಕನ್ನಡದ ಜ್ಞಾತಿ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂಗಳಲ್ಲಿ, ಸಂಸ್ಕøತ, ಪ್ರಾಕೃತಗಳಲ್ಲಿ ದೊರೆಯುವ ಲಿಖಿತ ದಾಖಲೆಗಳ ವಿವರಗಳ ಜೊತೆಗೆಅಲಿಖಿತ ಪರಂಪರೆಯ ವಿವರಗಳನ್ನು ಸೇರಿಸಿ ಚರ್ಚೆಗೆ ಮುಂದಾಗುವುದು ಸುಧಾಕರರ ವಿಶಿಷ್ಟ ಗುಣ. ಕನ್ನಡದಲ್ಲಿ ಒಗಟಿನ ಪ್ರಾಚೀನತೆಯನ್ನು ಶೋಧಿಸುತ್ತ ಕವಿರಾಜಮಾರ್ಗಕಾರ ಹೇಳಿಕೆಯ ಏಳು ಪ್ರಭೇದಗಳನ್ನು ಹೇಳುತ್ತಾನೆ ಅನ್ನುತ್ತ ಮೂಲ ಪದ್ಯವನ್ನೇ ಉಲ್ಲೇಖಿಸುತ್ತಾರೆ. ಹಾಗೆಯೇ ನಾಗವರ್ಮನ ಕಾವ್ಯಾವಲೋಕನದ ಸೂತ್ರವನ್ನು (143) ಪೂರ್ಣವಾಗಿ ನೀಡುತ್ತಾರೆ. ಒಬ್ಬ ಸಂಶೋಧಕನ ನಿಜವಾದ ಕೆಲಸ ಇದು. ಓದುಗರಿಗೆ ಎಲ್ಲೂ ಯಾವುದೇ ಅನುಮಾನ ಮೂಡದಂತೆ, ತಾನು ಉಲ್ಲೇಖಿಸಿದ ಮೂಲಪಾಠವನ್ನು ಓದುಗ ಮತ್ತೆಲ್ಲೋ ಹುಡುಕದಂತೆ ಮಾಡುವ, ಅಲ್ಲಲ್ಲೇ ಸಮಸ್ಯೆ ಬಗೆಹರಿಸುವ ರೀತಿ ಮೆಚ್ಚುವಂಥದ್ದು. ಬಹುಶಃ ಸುಧಾಕರ ಅವರಿಗೆ ಶಾಸ್ತ್ರೀಯ ಗ್ರಂಥ ಸಂಪಾದನಾ ಶಾಸ್ತ್ರದ ರೀತಿ ನೀತಿಗಳ ಪ್ರವೇಶ ಇದ್ದುದು ಅವರು ಅಳವಡಿಸಿಕೊಂಡ ಈ ವಿಧಾನಕ್ಕೆ ಕಾರಣವಿರಬೇಕು. 

‘ಜನಪದರಲ್ಲಿ ಪ್ರಚಲಿತವಾಗಿದ್ದ ಒಗಟುಗಳ ಪರಂಪರೆ ಮುಂದೆ ಕಂತಿ-ಹಂಪನ ಸಮಸ್ಯೆಗಳಲ್ಲಿ, ಅಕ್ಕ-ಅಲ್ಲಮರ ವಚನಗಳಲ್ಲಿ, ಕನಕ-ಪುರಂದರರ ಕೀರ್ತನೆಗಳಲ್ಲಿ, ಸರ್ವಜ್ಞನ ವಚನಗಳಲ್ಲಿ ಮೈದೋರಿದವು; ಮಣೆಯ ಮೇಲೆ ಕುಳಿತು ಮನ್ನಣೆಗೆ ಪಾತ್ರವಾದುವು’ ಎನ್ನುತ್ತ ಈ ಮಾತುಗಳಿಗೆ ಸೋದಾಹರಣ ಸಮರ್ಥನೆ ನೀಡುತ್ತಾರೆ. ವಚನಕಾರರು, ಕೀರ್ತನಕಾರರು, ಸರ್ವಜ್ಞ ಮೊದಲಾದವರೆಲ್ಲ ಜನಪದ ಜೀವನದ ಸಾರಸರ್ವಸ್ವವನ್ನು ಹೀರಿಕೊಂಡವರು, ಹೀಗಾಗಿ ಇವರ ಬೆಡಗಿನ ವಚನಗಳ ಉಗಮ ಸ್ಥಾನ ಜನಪದ ಒಗಟುಗಳೇ ಇರಬಹುದೇ ಎಂಬುದನ್ನು ಚರ್ಚಿಸುತ್ತ ಎಲ್ ಬಸವರಾಜು, ಡಿಎಲ್‍ಎನ್ ಮೊದಲಾದ ವಿದ್ವಾಂಸರು ಹೇಳಿದ ವಚನಕಾರರ ಬೆಡಗಿನ ವಚನಗಳಿಗೆ ಸಂಸ್ಕøತದ ಸ್ತೋತ್ರ ಗದ್ಯ ಮೂಲವಿರಬಹುದು ಎಂಬ ಮಾತನ್ನೂ ಕನ್ನಡ ದೇಶೀ ಪದ್ಯಜಾತಿಯ ಮೂಲವಿರಬಹುದು ಎಂಬ ಚಿದಾನಂದಮೂರ್ತಿಯವರ ಮಾತನ್ನೂ ದಾಖಲಿಸುತ್ತಾರೆ. ಇದನ್ನು ಅತ್ಯಂತ ಗಂಭೀರವಾಗಿಯೂ ನಯವಾಗಿಯೂ ಬದಿಗೆ ತಳ್ಳುವ ಸುಧಾಕರರು ಸಮರೂಪವುಳ್ಳ ಜನಪದ ಮತ್ತು ಗ್ರಂಥಸ್ಥ ಗಾದೆ, ಒಗಟುಗಳಪಟ್ಟಿಯನ್ನೇ ತೌಲನಿಕವಾಗಿ ಗಮನಿಸುತ್ತಾರಲ್ಲದೇ ಗಾದೆ-ಒಗಟುಗಳ ಪರಿಚಯ ಜನಸಾಮಾನ್ಯರೊಂದಿಗೆ ಬೆರೆತ ವಚನಕಾರ, ಕೀರ್ತನಕಾರರಿಗೆ ಇದ್ದೇ ಇತ್ತು ಎನ್ನುತ್ತ ‘ಕೇವಲ ಮೂರು ಸಾಲಿನ, ನಿಯಮ ಬದ್ಧವಾದ, ಲಯಬದ್ಧವಾದ ತ್ರಿಪದಿಯೇ ವಚನ ಪ್ರಕಾರದ ಮೂಲವಿರಬೇಕು ಎನ್ನುವುದಕ್ಕಿಂತ ನಿಯಮವಿದ್ದರೂ ನಿಯಮವಿಲ್ಲದ ಲಯವಿದ್ದರೂ ಲಯವಿಲ್ಲದ ಒಂದು ಸಾಲಿನಿಂದ ಎಷ್ಟು ಸಾಲುಗಳವರೆಗಾದರೂ ಹರವುಳ್ಳ ಮುಕ್ತ ಛಂದದ ಒಗಟಿನ ಪ್ರಕಾರವೇ ವಚನ ಸಾಹಿತ್ಯಕ್ಕೆ ಅದರಲ್ಲೂ ಬೆಡಗಿನ ವಚನಗಳಿಗೆ ಮೂಲವಾಗಿರಬೇಕು ಎನಿಸುತ್ತದೆ’ ಅನ್ನುತ್ತಾರೆ. ಜೊತೆಗೆ ವಚನಕಾರರಿಗಿಂತ ಪೂರ್ವದಲ್ಲೇ ಒಗಟುಗಳ ಪ್ರಸ್ತಾಪ ಇರುವುದನ್ನು ಪುರಾವೆ ಸಹಿತ ಉಲ್ಲೇಖಿಸಿ “ಒಗಟಿನ ಪ್ರಕಾರದಿಂದ ಪ್ರೇರಣೆ ಹೊಂದಿ ಬೆಡಗಿನ ವಚನಗಳು ಮೂಡಿರಬೇಕು ಎಂಬುದೇ ಸರಿ”ಎನ್ನುತ್ತಾರೆ. ಜನಪದ ಮೂಲದ ಬಗ್ಗೆ ಅಪಾರ ನೆಚ್ಚಿಕೆಯುಳ್ಳ ಸುಧಾಕರರು ತಮ್ಮ ನಿಲುವನ್ನು ಯಾವುದೇ ಉದ್ವೇಗವಿಲ್ಲದೇ ಸಮಾಧಾನದಿಂದ, ಸಾಕ್ಷ್ಯಾಧಾರಗಳ ಸಹಿತ ಓದುಗರಮುಂದೆ ಇಡುವ ರೀತಿ ಅನನ್ಯವಾದುದು. ಒಂದು ನಂಬಿಕೆಗೆ ಬದ್ಧರಾದವರು ಇತರರ ವಾದವನ್ನು ಕೇಳಿಸಿಕೊಳ್ಳದ ಅಸಹನೆ ತೋರಿಸುವ ಇಂದಿನ ಸಂದರ್ಭದಲ್ಲಿ ಸುಧಾಕರರು ತೋರಿಸಿದ ಮಾರ್ಗ ಅನುಕರಣೀಯ. 

ಪ್ರಸ್ತುತ ಸಂಕಲನದಲ್ಲಿ 535 ಒಗಟುಗಳು ಅಕಾರಾದಿಯಾಗಿ ಸೇರಿವೆ. ಒಂದರಕೆಳಗೊಂದು ಒಗಟನ್ನು ನೀಡುತ್ತ ಕೊನೆಯಲ್ಲಿ ಆಯಾ ಕ್ರಮಸಂಖ್ಯೆಯ ಒಗಟಿಗೆ ಉತ್ತರ ನೀಡಲಾಗಿದೆ. ಕುತೂಹಲದ ಸಂಗತಿ ಎಂದರೆ ಕ್ರಮಸಂಖ್ಯೆ 43, 167, 447 ಮತ್ತು 450ನೆಯ ಒಗಟುಗಳಿಗೆ ಉತ್ತರ ನೀಡದೇ ಪ್ರಶ್ನಾರ್ಥಕ ಚಿಹ್ನೆ ಉಳಿಸಿದ್ದಾರೆ! ಬಹುಶಃ ಸುಧಾಕರರು ಮಾಹಿತಿದಾರರಿಂದ ಉತ್ತರ ಪಡೆದೇ ಇಲ್ಲಿನ ಎಲ್ಲ ಒಗಟಿಗೂ ಉತ್ತರ ದಾಖಲಿಸಿರಬೇಕು. ವಕ್ತøಗಳು ಉತ್ತರ ನೀಡದೇ ನೀವೇ ಹೇಳಿ ಎಂದ ಒಗಟುಗಳನ್ನು ಹಾಗೆಯೇ ಬಿಟ್ಟಿದ್ದಾರೆ ಅನಿಸುತ್ತದೆ ಅಥವಾ ವಕ್ತøಗಳು ಹೇಳಿದ ಉತ್ತರವನ್ನು ಸರಿಯಾಗಿ ದಾಖಲಿಸಿಕೊಳ್ಳದೇ ಅನುಮಾನವಿದ್ದ ಕಾರಣದಿಂದಲೂ ಹಾಗೆಯೇ ಪ್ರಶ್ನಾರ್ಥಕ ಚಿಹ್ನೆ ಉಳಿಸಿರಲೂ ಸಾಕು. ಉದಾಹರಣೆಗೆ- 

“ಅರಿವಿಲ್ಲದ ಕುರಿ

ಸುರಹೊನ್ನೆ ತೋಟಕೆ ಹೋಗಿ

ತಳ್ಳುಬಿಟ್ಟು ತರಗು ಮೇಯ್ತು” (43)

ಈ ಒಗಟಿಗೆ “ಗಾಳಿ” ಉತ್ತರವಾಗಬಹುದು, ಇನ್ನೇನೋ ಇರಬಹುದು. ಕೇವಲ ಊಹೆಯ ಆಧಾರದಲ್ಲಿ ಅವರು ಉತ್ತರ ನೀಡಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಲೋಕಜ್ಞಾನವಿಲ್ಲದೇ ಗಾದೆ ಸೃಷ್ಟಿ ಅಸಾಧ್ಯ; ಲೋಕಜ್ಞಾನವಿಲ್ಲದೇ ಒಗಟಿಗೆ ಉತ್ತರ ನೀಡುವುದೂ ಅಸಾಧ್ಯ.

“ನಾನು ಸಂಗ್ರಹಿಸಿದ ಸುಮಾರು 700 ಒಗಟುಗಳಲ್ಲಿ ಬೇರೆ ಬೇರೆ ಸಂಕಲನಗಳಲ್ಲಿ ಹೊರಬಂದಿರುವ ಒಗಟುಗಳನ್ನು ಬಿಟ್ಟು, ಕೇವಲ535 ಒಗಟುಗಳನ್ನು ಈ ಸಂಕಲನದಲ್ಲಿ ಸೇರಿಸಿದ್ದೇನೆ-ಪುನರಾವರ್ತನೆ ಆಗದಿರಲೆಂದು. ಆದರೆ ಕೆಲವು ಒಗಟುಗಳನ್ನು ಪುನರುಕ್ತಿ ದೋಷತಟ್ಟಿದರೂ ಉಳಿಸಿಕೊಂಡಿದ್ದೇನೆ. ಕಾರಣ: ಪಾಠಾಂತರವಿದ್ದಾಗ; ವಿಶಿಷ್ಟ ಪದಪ್ರಯೋಗವಿದ್ದಾಗ; ಬಂಧದಲ್ಲಿ ಬಿಗಿ ಇದ್ದಾಗ” ಎಂದು ಅವರು ಹೇಳಿಕೊಂಡಿದ್ದಾರೆ. ಇದು ಕೂಡ ಯೋಗ್ಯ ಜನಪದ ಸಂಗ್ರಹಕಾರ ಗಮನಿಸಬೇಕಾದ ಸಂಗತಿ.

ಒಂದೇ ಉತ್ತರ ನೀಡುವ ಹಲವು ಒಗಟುಗಳು ಇರುವುದು ಸಾಧ್ಯ. 4, 93, 142, 175, ಮತ್ತು 280ನೆಯ ಸಂಖ್ಯೆಯ ಒಗಟುಗಳು ಸೂಜಿ-ದಾರಕ್ಕೆ ಸಂಬಂಧಿಸಿದವು. ಅಂತೆಯೇ ಮಳೆ, ಚೇಳು, ಎಲೆ ಅಡಿಕೆಗಳಿಗೆ ಸಂಬಂಧಿಸಿದ ವಿವಿಧ ಒಗಟುಗಳು ಇದರಲ್ಲಿವೆ. “ಈಟುದ್ದ ಹುಡುಗಿಗೆ ಮಾರುದ್ದ ಜಡೆ” (93) ಮತ್ತು “ಚೋಟುದ್ದೋನಿಗೆ ಮಾರುದ್ದ ಕಚ್ಚೆ” (280) ಒಗಟುಗಳು ಸೂಜಿ-ದಾರ ಉತ್ತರ ಬೇಡುವಂಥವು. ಇವರೆಡರ ಉತ್ತರ ಒಂದೇ ಆದರೂ ಭಾಷಾ ಪ್ರಯೋಗ ಭಿನ್ನವಾಗಿದೆ. ಇಂಥ ಸಂದರ್ಭಗಳಲ್ಲೂ ಒಂದೇ ಉತ್ತರದ ಒಗಟುಗಳು ತಾನೆ ಎಂಬ ಉದಾಸೀನವನ್ನು ಸಂಗ್ರಹಕಾರರು ತೋರಿಸಿಲ್ಲ ಎಂಬುದೂ ಗಮನಾರ್ಹ ಸಂಗತಿ.

ಪ್ರಸ್ತುತ ಸಂಕಲನದಲ್ಲಿ ಕಲ್ಪನಾಶಕ್ತಿಯ ಒಗಟುಗಳು, ಸಂವಾದ ರೂಪದ ಒಗಟುಗಳು, ಸರಪಳಿ ರೀತಿಯ ಒಗಟುಗಳು, ಅನುಕರಣಾತ್ಮಕ ಒಗಟುಗಳು, ಪೌರಾಣಿಕ ವಸ್ತುವುಳ್ಳ ಒಗಟುಗಳು, ಆಚಾರ-ವಿಚಾರ ಸಂಬಂಧಿ ಒಗಟುಗಳು, ವಿನೋದ ಸಂಬಂಧಿ ಒಗಟುಗಳು, ಗಣಿತಾತ್ಮಕ ಹಾಗೂ ಕಥಾಮೂಲದ ಒಗಟುಗಳು ಸೇರಿಕೊಂಡಿವೆ. ಈ ಎಲ್ಲ ಬಗೆಯ ಒಗಟುಗಳನ್ನು ಹಿಡಿದಿಟ್ಟುಕೊಂಡ ಈ ಸಂಕಲನ ಒಗಟುಗಳ ವಿಶ್ವವ್ಯಾಪಕತೆಯನ್ನು ಮತ್ತು ವಿಶ್ವದರ್ಶನವನ್ನು ಮಾಡಿಸುತ್ತದೆ. ಸೂಜಿದಾರದಿಂದ ಆಕಾಶ-ನಕ್ಷತ್ರಗಳವರೆಗೂ ಅವುಗಳ ಹರವು. ಲೋಕದಲ್ಲಿ ಕಾಣುವ, ಅನುಭವಕ್ಕೆ ದಕ್ಕುವ ಯಾವುದಾದರೂ ಒಗಟಿಗೆ ಮೂಲವಾಗಬಲ್ಲುದು ಎಂಬುದನ್ನೂ ಇದು ಮನವರಿಕೆಮಾಡಿಕೊಡುತ್ತದೆ.

“ಕತೆಯತೆಯಾಯ್ತು, 

          ಸಂಸಾರ ಎರಡಾಯ್ತು, 

          ನಿನ್ನೆ ಹೊಡೆದ ಮೊಲ ಎಸರಾಯ್ತು

         ಮೊಲ ಹೊಡೆದೋನು ಸತ್ತು ಮೂರು ದಿಸಾಯ್ತು” ಎಂಬ ಒಗಟಿಗೆ ಕತೆಯ ಹಿನ್ನೆಲೆ ಇಲ್ಲದೇ ಉತ್ತರ ಹೇಳಲಾಗದು. ಇಂಥ ಕಡೆಗಳಲ್ಲಿ ಪೂರಕ ಕತೆಯನ್ನೂ ಅನುಬಂಧದಲ್ಲಿ ನೀಡಿದ್ದಾರೆ. ಸಂಗ್ರಹದ ಕೊನೆಯಲ್ಲಿ ಅರ್ಥಕೋಶವಿದೆ. ಮುನ್ನುಡಿ ಮತ್ತು ಪ್ರಸ್ತಾವನೆಯ 42 ಪುಟಗಳನ್ನು ಬಿಟ್ಟು 83 ಪುಟಗಳಲ್ಲಿ ಹರಡಿಕೊಂಡ ಈ ಸಂಗ್ರಹಣೆ ಇಂದಿಗೂ ಮಾದರಿಯಾದ ಒಗಟಿನ ಸಂಗ್ರಹ ಎನಿಸಿದೆ.

ಈ ಸಂಕಲನ ಬಂದ ಅನಂತರ ಕರ್ನಾಟಕ ವಿಶ್ವವಿದ್ಯಾನಿಲಯದಿಂದ “ಜನಪದ ಒಗಟುಗಳು” (ಎಸ್ ಜಿ ಇಮ್ರಾಪುರ-1978), ಜಯಶ್ರೀ ದಂಡೆಯವರ “ಬೆಡಗಿನ ವಚನಗಳು” (ಗುಲ್ಬರ್ಗಾ ವಿಶ್ವವಿದ್ಯಾಲಯ-1986) ಹಾಗೂ ಭಾರತಿ ಗದ್ದಿಯವರ “ಜನಪದ ಒಡಪುಗಳ ಸಾಂಸ್ಕøತಿಕ ಅಧ್ಯಯನ” (ಕರ್ನಾಟಕ ವಿವಿ 1999) ಮೊದಲಾದ ಪಿಎಚ್.ಡಿ ಪ್ರಬಂಧಗಳು ಹೊರಬಂದವು. ಈ ಅಧ್ಯಯನಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಈ ಸಂಕಲನವೇ ಪ್ರೇರಣೆ-ಪ್ರಭಾವ ಎಂದರೆ ಅತಿಶಯೋಕ್ತಿಯಲ್ಲ. ಉತ್ತಮ ಸಂಗ್ರಹಣೆಯೊಂದು ಮುಂದಿನ ಅಧ್ಯಯನಗಳಿಗೆ ಮಾಡಿಕೊಡುವ ದಾರಿಗೆ ಇದೊಂದು ಸೂಕ್ತ ನಿದರ್ಶನ. 

ಈ ಕೃತಿಯಲ್ಲಿ ಕಾಣುವ ಒಂದೇ ಒಂದು ಕೊರತೆ ಅಂದರೆ ವಕ್ತøಗಳ ವಿವರವನ್ನು ಸ್ಪಷ್ಟವಾಗಿ ನೀಡಿಲ್ಲದಿರುವುದು. ಇಲ್ಲಿ ದಾಖಲಿಸಲಾದ ಒಗಟುಗಳನ್ನು ಮಾಗಡಿಯ ಎಣ್ಣೆಗೆರೆ, ಅರಕಲಗೂಡಿನ ರುದ್ರಪಟ್ಟಣ, ಗುಂಡ್ಲುಪೇಟೆ ಮತ್ತು ಯಳಂದೂರು ಆಸುಪಾಸಿನಿಂದ ಸಂಗ್ರಹಿಸಿದ್ದೇನೆಂದು ಅವರು ಹೇಳಿಕೊಂಡಿದ್ದಾರೆ. ಆದರೆ ವಕ್ತøಗಳ ಹೆಸರು, ವಯಸ್ಸು, ಪಂಗಡ, ಊರು, ವಿದ್ಯಾರ್ಹತೆ ಇತ್ಯಾದಿ ವಿವರಗಳ ಪಟ್ಟಿಯನ್ನು ನೀಡಿದ್ದರೆ ವೈಜ್ಞಾನಿಕ ಸಂಗ್ರಹಣೆಯ ಮತ್ತೊಂದು ಆಯಾಮವೂ ಇದರಲ್ಲಿ ಸೇರಿಕೊಳ್ಳುತ್ತಿತ್ತು ಅನಿಸುತ್ತದೆ.

ಇಲ್ಲಿ ಸಂಗ್ರಹಿಸದ ಒಗಟುಗಳ ಸಾಂಸ್ಕøತಿಕ ಅಧ್ಯಯನಕ್ಕೆ ಇಂದಿಗೂ ಅವಕಾಶವಿದೆ. ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಸಂಗತಿಗಳನ್ನು ಒಡಲಿನಲ್ಲಿಟ್ಟುಕೊಂಡ ಒಗಟುಗಳು ಅನೇಕ ಆಯಾಮಗಳನ್ನು ಬಿಚ್ಚಿಡಬಲ್ಲವು. 

         “ಬಾವಿ ಮನೆಯೋನೆ

          ಬನ್ನೇರುಘಟ್ಟದೋನೆ 

       ಬಾರಯ್ಯ ನಮ್ಮನೆ ಅಳಿಯೂಟಕ್ಕೆ” (ಬದನೆಕಾಯಿ) ಎನ್ನುವ ಒಗಟಾಗಲೀ “ಕೊಟ್ಟು ಕೆಟ್ಟ, ಕೊಡದೆ ಕೆಟ್ಟ, ಮುಟ್ಟಿಕೆಟ್ಟ, ಮುಟ್ಟದೆ ಕೆಟ್ಟ” (ಬಲಿ, ದುರ್ಯೋಧನ, ಕೀಚಕ, ರಾವಣ) ಎನ್ನುವ ಒಗಟಾಗಲೀ ವಿಸ್ತøತ ಅಧ್ಯಯನಕ್ಕೆ ಎಡೆಮಾಡಬಲ್ಲವು. 

ಒಟ್ಟಿನಲ್ಲಿ ಶೈಕ್ಷಣಿಕ ಶಿಸ್ತಿನ ಅಡಿಯಲ್ಲಿ ನಡೆದ ಜಾನಪದ ಸಂಗ್ರಹಣೆಯ ಫಲವಾಗಿ ಶಾಸ್ತ್ರೀಯ ಶಿಸ್ತಿನಲ್ಲಿ ಮೊದಲು ಪ್ರಕಟವಾದ ಪ್ರಸ್ತುತ ಸಂಗ್ರಹ ಇಂದಿಗೂ ಈ ವಿಷಯದಲ್ಲಿ ಮೊದಲನೆಯದಾಗಿಯೇ ಇದೆ.





ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment