Thursday, 2 June 2022

ಸಾಹಿತಿಗಳೆಂದರೆ ಸರ್ವಸ್ವವೇ?


ಕಡ್ಡಾಯ ಕನ್ನಡ ಕಲಿಕಾ ಮಾಧ್ಯಮದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ಮೇಲೂ ಇದು ಇನ್ನೂ ತೀವ್ರ ಚರ್ಚೆಯ ವಿಷಯವಾಗಿಯೇ ಇರುವುದು ವಿಷಯದ ಗಂಭೀರತೆಯನ್ನು ತೋರಿಸುತ್ತದೆ.

ಘನ ನ್ಯಾಯಾಲಯದ ತೀರ್ಪು ಯಾವುದೇ ನಿರ್ದಿಷ್ಟ ಭಾಷಾ ಮಾಧ್ಯಮ ಹೇರಿಕೆಯ ವಿರುದ್ಧವಿದ್ದರೂ ನಮ್ಮ ಸರ್ಕಾರ ಮಾತ್ರ ಕನ್ನಡದ ರಕ್ಷಣೆ ಹೇಗಾಗಬಲ್ಲುದು ಎಂಬುದಕ್ಕಿಂತ ಕನ್ನಡ ಮಾಧ್ಯಮ ರಕ್ಷಣೆಗೆ ಪಣ ತೊಟ್ಟಂತೆ ಕಾಣುತ್ತದೆ. ತನ್ನ ಆದೇಶವನ್ನು ಅದು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸದಾ ಸುದ್ದಿ ಬಯಸುವ ಬೆರಳೆಣಿಕೆ ಸಾಹಿತಿಗಳ ಹಾಗೂ ಹೋರಾಟಗಾರರ ಭಾವಾವೇಶದ ಅಭಿಪ್ರಾಯಕ್ಕೆ ಸರ್ಕಾರ ಬಗ್ಗುವಂತೆ ಕಾಣುತ್ತಿದೆ. ತೀರ್ಪನ್ನು ಕುರಿತು ಚರ್ಚಿಸಲು ಸರ್ಕಾರ ಕರೆದ ಸಭೆಯಲ್ಲಿ ಆಹ್ವಾನಿತರಾದವರು ಯಾರು? ಎಲ್ಲ ಜನಪ್ರಿಯ ವಿಷಯಗಳ ಬಗ್ಗೂ ಏನಾದರೂ ಹೇಳಿಕೆ ಕೊಡುವ ಅದದೇ ಸಾಹಿತಿಗಳು, ಕನ್ನಡವೆಂದರೆ ಭಾವುಕರಾಗಿ ವೀರಾವೇಶದಲ್ಲಿ ಹೇಳಿಕೆಕೊಡುವ ಒಂದಿಷ್ಟು ಜನ. ಈ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಕನ್ನಡ ಕಲಿತರೆ ಭವಿಷ್ಯವಿದೆ ಎಂಬ ವಾತಾವರಣ ಹುಟ್ಟಿಸಬೇಕಿದೆ ಎಂದ ಗಿರೀಶ್ ಕಾರ್ನಾಡ್ ಹಾಗೂ ಭಾಷೆಯಾಗಿ ಕನ್ನಡ ಕಲಿಸಲು ಅಡ್ಡಿ ಇಲ್ಲ ಹಾಗೂ ಅಂಥ ವಾತಾವರಣ ರೂಪಿಸಬೇಕು ಎಂದ ಸಿ ಎನ್ ರಾಮಚಂದ್ರನ್ ಅವರ ಮಾತುಗಳನ್ನು ಬಿಟ್ಟರೆ ಉಳಿದವರ ಅಭಿಪ್ರಾಯಗಳೆಲ್ಲ ಹೋರಾಟಗಾರರ ಮಾತಿನಂತೆ ತಥಾಕಥಿತವಾಗಿವೆ.

ಅಷ್ಟಕ್ಕೂ ಈ ಸಭೆಗೆ ಆಮಂತ್ರಿತರಾದವರು ಯಾರು? ಇವರಲ್ಲಿ ಮಕ್ಕಳ ಮನಸ್ಸನ್ನು ಅರಿತ ಮನಶ್ಶಾಸ್ತ್ರಜ್ಞರಿಲ್ಲ, ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದರೆ ಆಗುವ ಲಾಭ ನಷ್ಟ ಕುರಿತು ಸಂಶೋಧನೆ ಮಾಡಿದ ಭಾಷಾ ಸಂಸ್ಥಾನದ ಅಥವಾ ವಾಕ್‍ಶ್ರವಣ ಸಂಸ್ಥೆಯ ತಜ್ಞರಿಲ್ಲ, ಮುಖ್ಯವಾಗಿ-ಈ ವಿಷಯಕ್ಕೆ ಪ್ರಧಾನರಾಗಿರುವ ಪೋಷಕರೇ ಇಲ್ಲ! 2011ರ ಜನಗಣತಿಯಂತೆ ಕರ್ನಾಟಕದಲ್ಲಿ ಶಿಕ್ಷಣ ಪಡೆಯುತ್ತಿರುವ ಸುಮಾರು ಎರಡು ಕೋಟಿ ಮಕ್ಕಳಿದ್ದಾರೆ. ಅವರ ಪಾಲಕರ ಸಂಖ್ಯೆ ತಲಾ ಎರಡು ಎಂದಿಟ್ಟುಕೊಂಡರೂ ನಾಲ್ಕು ಕೋಟಿ! ಇವರನ್ನು ಪ್ರತಿನಿಧಿಸುವ ಒಬ್ಬರೂ ಇಲ್ಲ! ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಿಲ್ಲ. ನಿಜವಾಗಿ ಸಮಸ್ಯೆ-ಪ್ರಕರಣ ಆರಂಭವಾದುದೇ ಪಾಲಕ-ಪೋಷಕ ಹಾಗೂ ಖಾಸಗಿ ಸಂಸ್ಥೆಗಳವರಿಂದ ಎಂಬುದು ಸರ್ಕಾರಕ್ಕೆ ತಿಳಿಯದೇ? ಇವರ ಪ್ರತಿನಿಧಿಗಳನ್ನು ಬಿಟ್ಟು ಒಂದಿಷ್ಟು ಅಧಿಕಾರಿಗಳು, ಬೆರಳೆಣಿಕೆಯ ಸಾಹಿತಿಗಳು, ಹೋರಾಟಗಾರರು ಕುಳಿತು ಪ್ರತ್ಯೇಕ ಶಾಸನ ತರುತ್ತೇವೆ, ಮಾಧ್ಯಮ ಜಾರಿಗೆ ಇನ್ನಿಲ್ಲದ ಯತ್ನ ಮಾಡುತ್ತೇವೆ ಎಂಬಂಥ ತೀರ್ಮಾನಕ್ಕೆ ಬರುವುದು ಎಷ್ಟು ಸರಿ? ಸ್ವಲ್ಪ ಸಮಯ ಹಿಡಿದರೂ ಸರಿ, ಜನತಂತ್ರ ವ್ಯವಸ್ಥೆಯಲ್ಲಿ ಮುಕ್ತ ಜನಾಭಿಪ್ರಾಯ ಸಂಗ್ರಹಣೆ ಮಾಡಿ ಒಂದು ನಿಲುವಿಗೆ ಬರಬೇಕಲ್ಲದೇ ಆಯ್ದ ಒಂದಿಷ್ಟು ಜನರ ಹಠ, ಪಟ್ಟುಗಳನ್ನು ಆಧಾರವಾಗಿಟ್ಟುಕೊಂಡು ಅವಸರದಲ್ಲಿ ಸರ್ಕಾರ ತೀರ್ಮಾನಕ್ಕೆ ಬರಲಾಗದಲ್ಲವೇ? ನಿಜವಾಗಿ ಈ ವಿಷಯ ಶಿಕ್ಷಣಕ್ಕೆ ಸಂಬಂಧಿಸಿದ್ದು. ಈ ಸಭೆಗೆ ಮುಖ್ಯವಾಗಿ ಬರಬೇಕಿದ್ದವರು ಶಿಕ್ಷಣ ತಜ್ಞರು, ಮನಶ್ಶಾಸ್ತ್ರಜ್ಞರು, ಪಾಲಕ-ಪೋಷಕರು ಹಾಗೂ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೇ ವಿನಾ ಸಾಹಿತಿಗಳಲ್ಲ. ಇವರೆಲ್ಲರನ್ನು ಹಾಗೂ ಇಂಥ ಹತ್ತಾರು ಸಂಗತಿಗಳೆಲ್ಲವನ್ನೂ ಸಾಹಿತಿಗಳೇ ಪ್ರತಿನಿಧಿಸಿಬಿಡುತ್ತಾರಾ? 

ಅಷ್ಟಕ್ಕೂ ಎಲ್ಲರ ಕಾಳಜಿ ಏನು? ಕನ್ನಡ ಉಳಿಸಬೇಕು ಎಂಬುದು. ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯವೂ ಸೇರಿದಂತೆ ಯಾರ ತಕರಾರೂ ಇರಲು ಸಾಧ್ಯವಿಲ್ಲ. ಕನ್ನಡ ಉಳಿಸುವುದು ಅಂದರೆ ಏನು? ಕಲಿಕಾ ಮಾಧ್ಯಮವಾಗಿ ಅದನ್ನು ಕಡ್ಡಾಯಮಾಡಿಬಿಟ್ಟರೆ ಆಯಿತೇ? ಅಷ್ಟರಿಂದ ಕನ್ನಡ ಉಳಿಯುತ್ತದೆಯೇ? ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಕಡ್ಡಾಯ ಕಲಿಕಾ ಮಾಧ್ಯಮವಾಗಿಯೇ ಇಲ್ಲಿವರೆಗೂ ಉಳಿದುಬಂದಿದೆಯೇ? ಇಲ್ಲ ಅನಿಸುತ್ತದೆ.

ಕನ್ನಡಕ್ಕೆ ಅದರದೇ ಆದ ಸಾಂಸ್ಕøತಿಕ ಜಗತ್ತಿದೆ. ಈ ಎರಡು ಸಾವಿರ ವರ್ಷ ಕನ್ನಡ ಉಳಿಸಿಕೊಂಡು ಬಂದಿರುವುದು ಅದು. ಈ ಸಾಂಸ್ಕøತಿಕ ಜಗತ್ತು ಯಾವುದು? ಜನಪದ ಸಾಹಿತ್ಯ, ಸಂಪ್ರದಾಯ, ಆಚರಣೆ, ವಿಧಿ-ನಿಷೇಧಗಳು, ಗಮಕ-ವಾಚನ ವ್ಯಾಖ್ಯಾನ ಪರಂಪರೆ, ಕೀರ್ತನೆ-ದಾಸ ಪರಂಪರೆ, ದೊಡ್ಡಾಟ-ಸಣ್ಣಾಟ, ವೀರಗಾಸೆಯಂಥ ಕಲಾಪ್ರಕಾರಗಳು, ಯಕ್ಷಗಾನ, ಭಜನೆಮೇಳಗಳು, ತಾಳಮದ್ದಳೆ, ಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರಲಿಂಗ, ಎಲ್ಲಮ್ಮ ಇತ್ಯಾದಿ ಆರಾಧ್ಯದೈವಗಳನ್ನು ಮನೆಮನೆಗೆ ತಲುಪಿಸುತ್ತಿದ್ದ ಅಸಂಖ್ಯ ಸಂಪ್ರದಾಯಗಳು ಇತ್ಯಾದಿ, ಇತ್ಯಾದಿ. 

ಇವು ರಾಜಕೀಯವಾಗಿ ಬಳಕೆಯಾಗಲು ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ಉತ್ತೇಜನ ಪಡೆದಿವೆ. ಇವುಗಳನ್ನು ಸಾಂಸ್ಕøತಿಕವಾಗಿ ಪುನರುಜ್ಜೀವಗೊಳಿಸುವ ಕೆಲಸ ಎಷ್ಟರಮಟ್ಟಿಗೆ ಆಗಿದೆ ಎಂಬುದು ಪ್ರಶ್ನಿಸಿಕೊಳ್ಳಬೇಕಾದ ಸಂಗತಿ. ಇವು ದೂರವಾಗುತ್ತ ಬಂದಂತೆ ಕನ್ನಡ ಪರಿಸರ ದೂರವಾಗುತ್ತಿದೆ. ಆದರೆ ಇವುಗಳನ್ನು ಅನೇಕ ಕಾರಣಗಳಿಗಾಗಿ ದೂರೀಕರಿಸಲಾಗುತ್ತಿದೆ. ಕೆಲವರಿಗೆ ವೈಜ್ಞಾನಿಕ, ವೈಚಾರಿಕ ಕಾರಣಗಳಿಗೆ ಇವು ಅರ್ಥಹೀನ ಮೌಢ್ಯಗಳಾಗಿ ಕಾಣುತ್ತವೆ. ಇನ್ನು ಕೆಲವರಿಗೆ ಇವುಗಳಿಂದ ಯಾವುದೇ ಲಾಭವಿಲ್ಲದಂತೆ ಕಾಣುತ್ತದೆ. ಮತ್ತೆ ಕೆಲವರಿಗೆ ಇವೆಲ್ಲ ಪುರೋಹಿತಶಾಹಿಯ ಅವಶೇಷಗಳಾಗಿಯೂ ಇವೆಲ್ಲ ದೂರವಾಗದೇ ದೇಶ ಉದ್ಧಾರವಾಗದು ಎಂಬಂತೆಯೂ ಕಾಣುತ್ತದೆ. ಇನ್ನುಳಿದವರಿಗೆ ಇವನ್ನೆಲ್ಲ ಪ್ರೋತ್ಸಾಹಿಸುವುದು ಎಂದರೆ ಕೇಸರೀಕರಣವಾಗಿಯೂ ಪ್ರತಿಗಾಮಿ ಕೆಲಸವಾಗಿಯೂ ಕಾಣುತ್ತದೆ. ಹೀಗಾಗಿ ಸರ್ಕಾರದ ನೀತಿಗಳಲ್ಲಿ ಇವುಗಳ ಉತ್ತೇಜನಕ್ಕೆ ದೊರೆತ ಸ್ಥಾನ ಅಷ್ಟರದ್ದೇ.  ಹೆಚ್ಚೆಂದರೆ ದೊರೆಯುವ ಉತ್ತರ ಇವುಗಳನ್ನು ನೋಡಿಕೊಳ್ಳಲು ಅಕಾಡೆಮಿಗಳಿವೆ ಎಂಬುದಷ್ಟೆ.

ಓದು ಬರಹ ಬಾರದ ನನ್ನಜ್ಜಿ ಕುಮಾರವ್ಯಾಸ ಭಾರತವನ್ನು ಅದು ಹೇಗೆ ಕಂಠಪಾಠ ಮಾಡಿಕೊಂಡಿದ್ದಳು? ಇದೇ ವರ್ಗದ ಸಿರಿಯಜ್ಜಿ ಬಾಯಲ್ಲಿ ಸೋಬಾನೆ ಪದಗಳಾದಿಯಾಗಿ ಅಸಂಖ್ಯ ಪದ್ಯಗಳು ಹೇಗೆ ನೆಲೆಯೂರಿದ್ದವು? ಇಂಥದ್ದೇ ಗುಂಪಿನ ಸುಕ್ರಿ ಬೊಮ್ಮಗೌಡರು ತಾರ್ಲೆ ನೃತ್ಯವನ್ನು, ಅನೇಕಾನೇಕ ಹಾಡನ್ನು ಕೇಳಿದವರು ಮೈಮರೆಯುವಂತೆ ಕನ್ನಡ ಕಂಪಿನಲ್ಲಿ ಹಾಡಲು ಕಲಿತದ್ದು ಹೇಗೆ? ದಾಖಲೆ ಮಾಡಿಕೊಳ್ಳುವ ಹತ್ತಾರು ವಿದ್ವಾಂಸರೇ ಸುಸ್ತಾಗುವಷ್ಟು ವಾರ-ತಿಂಗಳುಗಟ್ಟಲೆ ಗೋಪಾಲನಾಯ್ಕರು ಒಂದೇ ಸಮನೆ ಸಿರಿ ಕಾವ್ಯ ಹಾಡುವುದು ಹೇಗೆ? ಅಚ್ಯುತದಾಸ, ಲಕ್ಷ್ಮಣದಾಸರ ಕೀರ್ತನೆಯನ್ನೋ ವಾಗ್ವೈಖರಿಯನ್ನೋ ಗಂಗಮ್ಮ ಕೇಶವಮೂರ್ತಿಯವರ ಗಮಕವನ್ನೋ ಕೇಳಿ ಕನ್ನಡದ ಸೊಗಸಿಗೆ ಮೈಮರೆಯದಿರುವುದು ಹೇಗೆ? ಇವುಗಳಲ್ಲಿ ಯಾವುದಾದರೂ ಒಂದು ಬಗೆ ಎಳವೆಯಲ್ಲೇ ಕಿವಿಗೆ ಬಿದ್ದವರು ಕನ್ನಡವನ್ನು ಆವರಿಸಿಕೊಳ್ಳದೇ ಬಿಟ್ಟಾರೆಯೇ? ಕನ್ನಡದ ಸಮೃದ್ಧ ಪರಂಪರೆಯ ಉಳಿಕೆ ಇದುವರೆಗೆ ಆಗಿದ್ದು ಹೀಗೆ.

ಆಧುನಿಕ ಶಿಕ್ಷಣ ಕ್ರಮದಲ್ಲಿ ಎಳೆ ಮಕ್ಕಳ ಮನದಲ್ಲಿ ಕನ್ನಡದ ಇಂಥ ಕಂಪು ಬೀಳುವಂತೆ ಮಾಡಲು ಯಾವ ಅಡ್ಡಿಯೂ ಇಲ್ಲ. ಶಿಕ್ಷಣ ಕ್ರಮದಲ್ಲಿ ಇಂಥವನ್ನು ಅಳವಡಿಸಿದರೆ ಕನ್ನಡ ಮಾಧ್ಯಮ ಕಡ್ಡಾಯವಾಗಲಿ ಬಿಡಲಿ, ಕನ್ನಡ ಪರಂಪರೆ, ಪರಿಸರ ತಾನಾಗಿ ಉಳಿಯುತ್ತದೆ. ಸರ್ಕಾರ ಈ ಬಗೆಯ ಕ್ರಮ ಕೈಗೊಳ್ಳಬಾರದೆಂದು ಯಾರೂ ಹೇಳಿಲ್ಲ, ಹೇಳುವುದೂ ಇಲ್ಲ. ಕನ್ನಡದ ಸಾಂಸ್ಕøತಿಕ ಪರಿಸರ ಉಳಿಸುವ ಈ ಬಗೆಯ ನೀತಿಗಳಿಗೆ ಮುಂದಾಗದೇ ಮಾಧ್ಯಮವಿದ್ದರೆ ಸಾಕು, ಶಾಸನ ಬದಲಾಗಬೇಕು ಎಂಬ ಒಣ ಪ್ರತಿಷ್ಠೆಯ ಹಠ ಸಾಧಿಸುತ್ತ ಹೋದರೆ ಮುಂದೊಂದು ದಿನ ಕನ್ನಡ ಮಾಧ್ಯಮ ಇರಬಹುದು ಆದರೆ ಕನ್ನಡ ಇರುವುದಿಲ್ಲ!





ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment