ವಡ್ಡಾರಾಧನೆ ಕನ್ನಡ ಸಾಹಿತ್ಯದ ಮೊದಲ ಗದ್ಯ ಗ್ರಂಥ. ಕ್ರಿ.ಶ. 920ರ ಕಾಲದಲ್ಲಿ ಇದನ್ನು ಶಿವಕೋಟ್ಯಾಚಾರ್ಯ ರಚಿಸಿದನೆಂದು ಡಿ.ಎಲ್. ನರಸಿಂಹಾಚಾರ್ ಆದಿಯಾಗಿ ಹಲವರೂ, ಭ್ರಾಜಿಷ್ಣು ರಚಿಸಿದನೆಂದು ಹಂ.ಪ. ನಾಗರಾಜಯ್ಯನವರೂ ಹೇಳುತ್ತಾರೆ. ಇದರಲ್ಲಿ 19 ಕಥೆಗಳು ಅಡಕವಾಗಿವೆ. 1930ರಲ್ಲಿ ಡಿ.ಎಲ್. ನರಸಿಂಹಾಚಾರ್ ಇದರಲ್ಲಿನ ಕಥೆಗಳನ್ನು ಸಾಹಿತ್ಯಪರಿಷತ್ ಪತ್ರಿಕೆಯಲ್ಲಿ ಸರಣಿಯೋಪಾದಿಯಲ್ಲಿ ಪ್ರಕಟಿಸಿದ ಮೇಲೆ ಇದಕ್ಕೆ ಎಲ್ಲಿಲ್ಲದ ಮಹತ್ತ್ವ ಪ್ರಾಪ್ತವಾಯಿತು. ಅಂದಿನಿಂದಲೂ ಇಲ್ಲಿನ ಕಥೆಗಳು ಒಂದಲ್ಲ ಒಂದು ರೀತಿಯಲ್ಲಿ ಗಮನಸೆಳೆಯುತ್ತಲೇ ಇವೆ. ಸದ್ಯ ಇಲ್ಲಿ ಗಮನಿಸುತ್ತಿರುವುದು ಈ ಸಂಕಲನದಲ್ಲಿ ಹನ್ನೊಂದನೆಯದಾದ ‘ಕಾರ್ತಿಕ ಋಷಿಯ ಕಥೆ’.
ಕಥೆ ಸಂಕ್ಷಿಪ್ತವಾಗಿ ಹೀಗಿದೆ: ಕೃತ್ತಿಕಾಪುರದ ಅರಸು ಅಗ್ನಿರಾಜ. ವೀರಮತಿ ಅವನ ಪತ್ನಿ. ಇವರಿಗೆ ಆರುಮಂದಿ ಹೆಣ್ಣುಮಕ್ಕಳು. ಕೊನೆಯವಳು ಕೃತ್ತಿಕೆ. ಒಮ್ಮೆ ಪೂಜೆ ಮುಗಿಸಿದ ಈ ಆರೂ ಜನ ಪ್ರಸಾದ ಕೊಡಲು ಅಪ್ಪ ಅಮ್ಮಂದಿರ ಬಳಿ ಬಂದು ಹೋಗುವಾಗ ಅಪ್ಪನ ಕಣ್ಣು ಕೃತ್ತಿಕೆಯ ಮೇಲೆ ಬಿದ್ದು ‘ಆಕೆಯ ರೂಪುಂ ತೇಜಮುಂ ಗಾಡಿಯುಮಂ ಕಂಡು ಆಕೆಗೆ ಆಟಿಸಿದ’. ಅವಳನ್ನು ಪಡೆಯುವ ಬಯಕೆಯಿಂದ ರಾಜ್ಯದಲ್ಲಿರುವ ಅತ್ಯುತ್ತಮ ವಸ್ತು ಯಾರಿಗೆ ಸೇರಬೇಕು ಎಂದು ಮಂತ್ರಿ, ಮಾಗಧರನ್ನೆಲ್ಲ ಕೇಳಿದ. ಅವರೆಲ್ಲ ಹಿಂದು ಮುಂದೆ ನೋಡದೇ ರಾಜನಾದ ನಿನ್ನದೇ ಅಂದರು. ಮುನಿಗಳನ್ನು ಕೇಳಿದ. ನೀನು ಯಾವ ವಸ್ತು ಬಯಸಿದ್ದೀಯಾ ಅದನ್ನು ಮೊದಲು ಹೇಳು; ಆಗ ಅದು ನಿನಗೆ ಸೇರತಕ್ಕದ್ದೇ ಅಲ್ಲವೇ ಎಂದು ಹೇಳುತ್ತೇವೆ ಅಂದರು. ಇವರೆಲ್ಲ ತಲೆಹರಟೆಗಳು ಊರಿಂದ ಹೊರಗಟ್ಟಿ ಎಂದ ರಾಜ. ಹಾಗೇ ಆಯಿತು. ತಾನು ಏನು ಬಯಸಿದ್ದೇನೆಂದು ತಿಳಿಸದೇ ತನ್ನ ಮಾತು ಕೇಳುವ ಜನರಿಂದ ಶ್ರೇಷ್ಠವಾದ ವಸ್ತುಗಳೆಲ್ಲ ರಾಜನಿಗೇ ಸೇರಬೇಕು ಎಂದು ಮೂರು ಬಾರಿ ಹೇಳಿಸಿ ತನ್ನ ಇಷ್ಟಕ್ಕೆ ಜನರ ಒಪ್ಪಿಗೆ ಇದೆ ಎಂದು ಭ್ರಮಿಸಿ, ಪತ್ನಿಯನ್ನು ‘ಕೋರಿ’ ಮಗಳನ್ನು ಮದುವೆಯಾದ.
ವೀರಮತಿ ವ್ರತ ಕೈಗೊಂಡು ಬದುಕಿನಿಂದ ವಿಮುಖಳಾದಳು. ಅಗ್ನಿರಾಜ-ಕೃತ್ತಿಕೆಗೆ ಕಾರ್ತಿಕ ಮತ್ತು ವೀರಶ್ರೀ ಎಂಬ ಮಕ್ಕಳಾದವು. ವಿದ್ಯಾಭ್ಯಾಸ ಮಾಡುತ್ತಿದ್ದಾಗ ಒಮ್ಮೆ ಕಾರ್ತಿಕನೊಬ್ಬನನ್ನು ಹೊರತುಪಡಿಸಿ ಮತ್ತೆಲ್ಲ ಸಹಪಾಠಿಗಳಿಗೆ ಅವರ ಅಜ್ಜನ ಮನೆಯಿಂದ ತಿಂಡಿ ಬಂದಿತು. ಆಗ ಆತ ಚಿಂತಿತನಾಗಿ ತನ್ನ ಅಜ್ಜ ಯಾರೆಂದು ತಾಯಿಯನ್ನು ಕೇಳಿದ. ವಿಚಲಿತಳಾದ ಕೃತ್ತಿಕೆ ಸತ್ಯವನ್ನು ಹೇಳಿದಳು. ಜೀವನದ ಬಗ್ಗೆ ಜುಗುಪ್ಸೆ ಹುಟ್ಟಿದ ಕಾರ್ತಿಕ ಸಂನ್ಯಾಸ ಸ್ವೀಕರಿಸಿದ. ವೀರಶ್ರೀಯನ್ನು ಕ್ರೌಂಚನೆಂಬ ಕೋಗಳಿಯ ರಾಜನಿಗೆ ಮದುವೆಮಾಡಿಕೊಟ್ಟಿದ್ದರು. ಸಂನ್ಯಾಸಿಯಾದ ಕಾರ್ತಿಕ ಒಮ್ಮೆ ಭಿಕ್ಷೆಗೆ ಬಂದಾಗ ಆತ ತನ್ನ ಅಣ್ಣನೆಂದು ಗುರುತಿಸಿದ ವೀರಶ್ರೀ ಆತನನ್ನು ತನ್ನ ಮನೆಗೆ ಬರುವಂತೆ ಬೇಡಿಕೊಳ್ಳುತ್ತಿದ್ದುದನ್ನು ಕಂಡ ಕ್ರೌಂಚ ರಾಜ ಇವರಿಬ್ಬರ ಸಂಬಂಧವನ್ನು ತಪ್ಪಾಗಿ ಅರ್ಥೈಸಿ ಆಕೆಯನ್ನು ದರದರನೆ ಎಳೆದು ಬಿಸಾಡಿ ಕಾರ್ತಿಕನನ್ನು ಕತ್ತಿಯಿಂದ ತಿವಿದು ಕೊಂದ. ಆಘಾತಕ್ಕೊಳಗಾದ ವೀರಶ್ರೀಗೆ ಮಾತು ನಿಂತಿತು. ಇದನ್ನು ಸರಿಪಡಿಸಲು ರಾಜ ಉತ್ಸವ ಏರ್ಪಡಿಸಿದ. ಅಂದಿನಿಂದ ಬಾದುಬ್ಬೆ ಹಬ್ಬ ಆಚರಣೆಗೆ ಬಂದಿತು. ಕಾರ್ತಿಕ ಮುನಿ ಸಮಾಧಿಯಾದ ಸ್ಥಳದಲ್ಲಿ ವೀರಶ್ರೀ ಬಸದಿ ಕಟ್ಟಿಸಿದಳು.
ತನ್ನ ಮಗಳನ್ನೇ ಮೋಹಿಸಿ ನೀಚ ಸಂಪ್ರದಾಯ ಹುಟ್ಟುಹಾಕಿದ ಅಗ್ನಿರಾಜನನ್ನು ಕಂಡು ಜನ “ರಾಜ ಧರ್ಮಿಷ್ಠನಾದರೆ ಪ್ರಜೆಗಳೂ ಧರ್ಮಾತ್ಮರಾಗುವರು, ರಾಜ ಪಾಪಿಯಾದರೆ ಜನರೂ ಪಾಪಿಗಳಾಗುವರು. ರಾಜ ಹೇಗೋ ಪ್ರಜೆಗಳೂ ಹಾಗೇ” ಎಂದು ಮರುಗಿದರು. ರಾಜನಂತೆಯೇ ಆ ಊರಿನ ಜನರೂ ಸಂಬಂಧಗಳಿಗೆ ಬೆಲೆ ಕೊಡದೇ ದುರ್ಜನರಾದರು. ಇದರಿಂದ ನೆರೆ ಊರಿನ ಜನ ಅದನ್ನು ‘ಭೋಗಂಕಾರೋಹಣ’ ಎಂದು ಕರೆದರು.
ಬಸದಿ ನಿರ್ಮಾಣದ ದಾಖಲೆ ಮಾತ್ರವಲ್ಲದೇ ಬಳ್ಳಾರಿಯ ಕೊಟ್ಟೂರಿನ 1020ರ ಕೋಗಳಿ ಶಾಸನ ಕೂಡ ಇದೊಂದು ಹಾಳೂರು ಎಂದೂ ಸಂಬಂಧಕ್ಕೆ ಬೆಲೆ ಕೊಡದ ಜನ ಅವರೆಂದೂ ಹೇಳುತ್ತದೆ! ಹೀಗಾಗಿ ಅಗ್ನಿರಾಜನ ಪ್ರಕರಣ ನಿಜವೇ ಇರಬೇಕು. ಅದೇನೇ ಇರಲಿ. ಮನುಷ್ಯನ ವಿಚಿತ್ರ ವರ್ತನೆ ಹೀಗೂ ಇರುತ್ತದೆ ಎಂಬುದನ್ನು ಸಾವಿರ ವರ್ಷಗಳ ಹಿಂದೆಯೇ ಕನ್ನಡದ ಕಥೆಯೊಂದು ಬಣ್ಣಿಸಿದ ಬಗೆ ಮಾತ್ರ ವಿಸ್ಮಯಕರ. ಪೂರ್ಣ ಕಥೆಯ ಬಿಗು, ಬಂಧಗಳನ್ನು ಮೂಲದಲ್ಲೇ ಓದಿ ಆಸ್ವಾದಿಸಬೇಕು.
ಸಾಮಾನ್ಯವಾಗಿ ಸಾಹಿತ್ಯ, ಮನೋವಿಜ್ಞಾನ, ಸಮಾಜವಿಜ್ಞಾನ ಹಾಗೂ ವೈದ್ಯಕೀಯ ಓದಿದವರಿಗೆ ಮನುಷ್ಯನ ಕೆಲವು ವಿಚಿತ್ರ ವರ್ತನೆಗಳು ಹಾಗೂ ಅವುಗಳನ್ನು ಗುರುತಿಸುವ ಹೆಸರುಗಳು ತಿಳಿದಿರುತ್ತವೆ. ಉದಾಹರಣೆಗೆ ಪಾಲಕರ ಬಗೆಗಿನ ಮಕ್ಕಳ ಲೈಂಗಿಕ ವ್ಯಾಮೋಹ (ಗಂಡುಮಗು ತಾಯಿಯನ್ನೂ ಹೆಣ್ಣು ಮಗು ಅಪ್ಪನನ್ನೂ ಹೆಚ್ಚಾಗಿ ಮೆಚ್ಚುವುದು): ಈಡಿಪಸ್ ಕಾಂಪ್ಲೆಕ್ಸ್; ತಾಯಿಗೆ ಸ್ಪರ್ಧೆ ಒಡ್ಡುವಂತೆ ಹೆಣ್ಣು ಮಗಳು ತನ್ನ ಅಪ್ಪನನ್ನು ಆಕರ್ಷಿಸುವುದು: ಇಲೆಕ್ಟ್ರಾ ಕಾಂಪ್ಲೆಕ್ಸ್; ಮಗಳನ್ನು ಯಾರಿಗೂ ಮದುವೆಯಾಗಲು ಕೊಡದೇ ತಾನೇ ಜಾಗ್ರತೆಯಿಂದ ಕಾಪಾಡುವುದು:ಗ್ರಿಸೆಲ್ಡಾ ಕಾಂಪ್ಲೆಕ್ಸ್; ಮಕ್ಕಳ ಬಗ್ಗೆ ತಾಯಿಯೇ ತಾತ್ಸಾರ ತಾಳುವುದು: ಮೀಡಿಯ ಕಾಂಪ್ಲೆಕ್ಸ್; ತಾಯಿಯ ಬಂಧನದಿಂದ ಬಿಡಿಸಿಕೊಳ್ಳಲು ಮಗ ಯತ್ನಿಸುವುದು: ಆರೆಸ್ಟಸ್ ಕಾಂಪ್ಲೆಕ್ಸ್ ಇತ್ಯಾದಿ. ಆದರೆ ಇವು ಯಾವುದೂ ಈ ಕಥೆಯಲ್ಲಿ ಬರುವ ವರ್ತನೆಯನ್ನು ಬಿಂಬಿಸುವುದಿಲ್ಲ. ಇಂಥ ವರ್ತನೆಗೆ ಆಧುನಿಕ ಮನೋವಿಜ್ಞಾನದಲ್ಲಿ ಯಾವ ಕಾಂಪ್ಲೆಕ್ಸಿನ ಹೆಸರೂ ಇಲ್ಲ. ಆದರೆ ಇಂಥ ವರ್ತನೆ ನಮ್ಮ ಸುತ್ತ ನಡೆಯುತ್ತಲೇ ಇರುತ್ತದೆ - ‘ಅಪ್ಪನಿಂದ ಮಗಳ ಮೇಲೆ ಅತ್ಯಾಚಾರ’; ‘ಮಗಳ ಮೇಲೆ ಲೈಂಗಿಕ ದೌರ್ಜನ್ಯ’; ‘ಗಂಡನ ವಿರುದ್ಧ ದೂರು ನೀಡಿದ ತಾಯಿ’ - ಇಂಥ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ಸಮಾಜದಲ್ಲಿರುವ ಇಂಥ ವಿಚಿತ್ರ ವರ್ತನೆಗೆ ಕನ್ನಡಿ ಹಿಡಿಯುವ ಕಥೆ ಇದು. ಇದರ ‘ಖಳ ನಾಯಕ’ ಅಗ್ನಿರಾಜ. ಹೀಗಾಗಿ ಇಂಥ ವರ್ತನೆಯನ್ನು ನಾವು ‘ಅಗ್ನಿರಾಜ ಕಾಂಪ್ಲೆಕ್ಸ್’ ಎಂದು ಕರೆಯಬಹುದೇನೋ?

No comments:
Post a Comment