Thursday, 5 January 2023

ಮತ್ತೊಂದು ಕನ್ನಡ ಸಾಹಿತ್ಯ ಸಮ್ಮೇಳನ

(ಇಂದಿನಿಂದ ಮೂರು ದಿನ, ಅಂದರೆ 6 ಜನವರಿ 2023 ರಿಂದ 8 ಜನವರಿ 2023ರ ವರೆಗೆ, ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ, ಹಿಂದೆ ಪ್ರಕಟಗೊಂಡಿದ್ದಈ ಲೇಖನವು ಪ್ರಸ್ತುತ ಎಂದೆನಿಸಿ ಮತ್ತೆ ಹಾಕಲಾಗಿದೆ).


"ಯೂಸ್ ಕನಡಾ ಆಸ್ ಮಚ್ ಆಸ್ ಪಾಸಿಬಲ್" ಎಂದು ಪ್ರಚಾರ ಮಾಡುವ ಅಥವಾ "ಹ್ಯಾಪಿ ಕನಡಾ ರಾಜ್ಯೋತ್ಸವ" ಎಂದು ಪರಸ್ಪರ ಹಾರೈಸಿಕೊಳ್ಳುವ ವಿಚಿತ್ರ ಕನ್ನಡ ಪರಿಸರದಲ್ಲಿ ನಾವಿದ್ದೇವೆ. ನೆರೆ ಬರಲಿ, ಬರವಿರಲಿ, ವರ್ಷಕ್ಕೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಒಂದು ಸಂಪ್ರದಾಯ ಮತ್ತು ಶಿಷ್ಟಾಚಾರ. 

ಕನ್ನಡ ಭಾಷೆ, ನಾಡು, ನುಡಿಗಳ ಸ್ಥಿತಿಗತಿ ಮತ್ತು ಭವಿಷ್ಯವನ್ನು ಕುರಿತು ವರ್ಷಕ್ಕಾದರೂ ಒಮ್ಮೆ ಗಂಭೀರ ಅವಲೋಕನ ನಡೆಸುವುದು ಈ ಸಮ್ಮೇಳನದ ಗುರಿ. ಆಶಯವೇನೋ ಚೆನ್ನಾಗಿದೆ. ಆದರೆ ಈ ಆಶಯಕ್ಕೆ ಅನುಗುಣವಾಗಿ ಇದುವರೆಗೆ ಸಮ್ಮೇಳನದ ಅಂತ್ಯದಲ್ಲಿ ಕೈಗೊಂಡ ನಿರ್ಣಯಗಳು ಎಷ್ಟರಮಟ್ಟಿಗೆ ಕಾರ್ಯಗತವಾಗಿವೆ, ಎಷ್ಟು ಬಾಕಿ ಇವೆ, ಎಷ್ಟು ನಿರ್ಣಯಗಳು ಯಾವ ಕಾಲದಿಂದ ಬೇಡಿಕೆ ಪಟ್ಟಿಯಲ್ಲಿವೆ ಇತ್ಯಾದಿಗಳ ಚರ್ಚೆಗೇ ಪ್ರತ್ಯೇಕ ಸಮ್ಮೇಳನ ನಡೆಸಬೇಕಿದೆ!

ಈ ಸಮ್ಮೇಳನಗಳನ್ನು ಹೆಮ್ಮೆಯಿಂದಲೂ ವ್ಯಂಗ್ಯದಿಂದಲೂ ಜಾತ್ರೆಗೆ ಹೋಲಿಸಲಾಗುತ್ತದೆ. ಇಲ್ಲಿರುವುದು ವೇದಿಕೆ ಮೇಲಿರುವವರು ಮತ್ತು ಕೆಳಗಿರುವವರು ಎಂಬ ಎರಡೇ ವರ್ಗ. ವೇದಿಕೆ ಮೇಲಿರುವವರು ತಾವು ಕನ್ನಡವನ್ನು ಪ್ರತಿನಿಧಿಸುತ್ತಿದ್ದೇವೆ ಎಂಬ ಧನ್ಯತೆಯನ್ನು ಅನುಭವಿಸುತ್ತಿದ್ದರೆ, ಕೆಳಗಿರುವವರು ತಮ್ಮ ಮುಗ್ಧ ಕನ್ನಡ ಪ್ರೇಮವನ್ನು ಮೆರೆಯುತ್ತ ಕುಳಿತಿರುತ್ತಾರೆ. ಊಟ ವಸತಿಯ ಗದ್ದಲ, ನೆನಪಿನ ಕಾಣಿಕೆ, ಸಾರಿಗೆ ಸೌಕರ್ಯ, ರಜೆ ಸೌಲಭ್ಯ, ಸಿಗಬೇಕಾದ ಮರ್ಯಾದೆ ತಮಗೆ ಸಿಕ್ಕಿಲ್ಲ ಇತ್ಯಾದಿ ಗಲಾಟೆಗಳೆಲ್ಲ ಸೇರಿ ನಿಜಕ್ಕೂ ಮಾರಿ ಜಾತ್ರೆಯ ವಾತಾವರಣವೇ ಅಲ್ಲಿ ನಿರ್ಮಾಣವಾಗಿರುತ್ತದೆ. ಒಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಕನ್ನಡಿಗರ ಮನೋಧರ್ಮ, ವರ್ತನೆ ತೋರಿಸುವ ಸಣ್ಣ ಕನ್ನಡಿ.

ಈ ಸಮ್ಮೇಳನ ಕನ್ನಡ ಭಾಷೆಗೆ ಇರುವ ವರ್ತಮಾನದ ಸವಾಲುಗಳನ್ನು, ಸಾಧನೆಯನ್ನು ಏನಾದರೂ ಅಕ್ಷರಶಃ ಪ್ರತಿನಿಧಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಇದಕ್ಕೆ ಕಾರಣವೂ ಇದೆ. ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡ ಮೇಲೆ ಅದನ್ನು ಸರ್ಕಾರಕ್ಕೆ ಎತ್ತಿಹಾಕಿ ತಮ್ಮ ಕೆಲಸ ಮುಗಿಯಿತೆಂದು ಪರಿಷತ್ತು ಮತ್ತು ವೇದಿಕೆ ಮೇಲಿರುವವರು ಕೆಳಗೆ ಇಳಿಯುತ್ತಾರೆ. ಸರ್ಕಾರ ಆಶ್ವಾಸನೆ ಕೊಟ್ಟು ಸುಮ್ಮನಾಗುತ್ತದೆ. ಮುಂದಿನ ಸಮ್ಮೇಳನದ ಒಳ ವ್ಯವಸ್ಥೆಗಳು ಆರಂಭವಾಗುತ್ತವೆ. ಮತ್ತೆ ಮುಂದಿನ ವರ್ಷ ಇದೇ ರಾಗ, ಇದೇ ಹಾಡು. 1949ರಲ್ಲಿ ರಾಜಕಾರಣಿಗಳ ಪ್ರವೇಶ ಆರಂಭವಾದಾಗಿನಿಂದ ಸಮ್ಮೇಳನಗಳು ನಡೆಯುತ್ತಿರುವುದು, ಅಲ್ಲಿ ಕೈಗೊಂಡ ನಿರ್ಣಯಗಳ ಕತೆ ಇದೇ.

ಸಮ್ಮೇಳನಗಳ ಕತೆ ಹಾಗಿರಲಿ. ಸದ್ಯದ ಕನ್ನಡದ ನೈಜತೆಯನ್ನು ಗಮನಿಸೋಣ. ಕನ್ನಡ ಉಳಿಸಿ ಬೆಳೆಸಬೇಕಾದವರು ನಾವು. ಇಂಗ್ಲೆಂಡಿನಿಂದಲೋ ಅಮೆರಿಕ, ಜರ್ಮನಿಯಿಂದಲೋ ಅಥವಾ ಯಾರೋ ಎಲ್ಲಿಂದಲೋ ಬಂದು ಕನ್ನಡ ಉದ್ಧಾರ ಮಾಡುವುದಿಲ್ಲ. ಸಮ್ಮೇಳನದ ಸಂಭ್ರಮದ ಈ ಹೊತ್ತಿನಲ್ಲಿ ನಮ್ಮ ಕನ್ನಡ ಹೀಗಿದೆ:

ಸ್ಯಾಂಪಲ್ ಒಂದು: “ಭಾರತೀಯ ಸಂಸ್ಕøತಿ ಕನ್ನಡ ವ್ಯಾಕರಣ ಅಗ್ರಗಣ್ಯ ಸ್ಥಾನವನ್ನು ಒಳಗೊಂಡಿ ಸಾಹಿತ್ಯ ವಿಷಯವನ್ನು ಅರ್ಥವತ್ತವಾಗಿ ರಚಿಸಬೇಕದರೆ ಸಂಸ್ಕøತ ಹಲವ ಪದಗಳು ಕನ್ನಡಕ್ಕೆ ಸೇರಿಹೋಗಿವೆ. ಕನ್ನಡ ವ್ಯಾಕರಣಕೆ ದ್ವನಿ ಲಿಪಿಗಳ ಮಾರ್ಗ ನಿರ್ಣಗಳನ್ನು ತೆಗೆದುಕೊಂಡು ಹೆಳಬಹುದು. ವರ್ಗ ನಿರ್ಣಯ ತೋರಿಸಿಕೊಟ್ಟಿದ್ದಾರೆ”. ಇದು ಕನ್ನಡ ಎಂ.ಎ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಬರೆದ ಉತ್ತರದ ಸಾಲು. 

ಸ್ಯಾಂಪಲ್ ಎರಡು: “ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಶತಕಗಳಲ್ಲಿ ವಿವರಣೆ ಮತ್ತು ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದ್ದ ಜಾತ್ರೆಗಳನ್ನು ಕುರಿತ ಬರವಣಿಗೆಗಳು ಇತ್ತೀಚಿನ ದಿನಗಳಲ್ಲಿ ತೀವ್ರ ಚಿಂತನೆಗೆ ಒಳಗಾಗಿರುವುದು ಪ್ರಮುಖ ಅಂಶವಾಗಿದೆ... ಇಂತಹ ಆಚರಣೆಗಳಿಗೆ ಮೂಢನಂಬಿಕೆ ಹಾಗೂ ಕಂದಾಚಾರಗಳು ಕಾರಣವಾಗಿರುತ್ತವೆ. ಇವುಗಳ ಜನಪದರ ಅಭಿವೃದ್ಧಿಗೆ ಮಾರಕವಾಗಿರುತ್ತವೆ”. ಇದು ಪಿಎಚ್.ಡಿ ಪಡೆದು ಬಹು ವರ್ಷವಾದ ಕನ್ನಡ ಸಹಪ್ರಾಧ್ಯಾಪಕರೊಬ್ಬರ ಸಂಶೋಧನ ಬರಹದ ಸಾಲು.

ಸ್ಯಾಂಪಲ್ ಮೂರು: “ಒಟ್ಟಾರೆ ಸಾವಯವ ಸಮಗ್ರೀಕರಣ ಇರುವ ಶ್ರೇಷ್ಠ ಕೃತಿಯೊಂದರಲ್ಲಿ ಭಿನ್ನತೆಗಳು ಅನೇಕವಿದ್ದರೂ ಅದರ ಕೇಂದ್ರ ಬಿಕ್ಕಟ್ಟು ಒಂದೇ ಆಗಿರುತ್ತದೆ”. ಇದು ಕನ್ನಡದ ಖ್ಯಾತ ವಿಮರ್ಶಕರೊಬ್ಬರ ಬರಹ. ಕನ್ನಡ ದಿನಪತ್ರಿಕೆಗಳಲ್ಲಿ ಭಾನುವಾರ ಪ್ರಕಟವಾಗುವ ಈಚಿನ ಸಾಹಿತ್ಯ ವಿಮರ್ಶಾ ಲೇಖನಗಳೆಲ್ಲ ಹೆಚ್ಚೂ ಕಡಿಮೆ ಇದೇ ಸ್ವರೂಪದಲ್ಲಿರುತ್ತವೆ. ಬೇಕಿದ್ದರೆ ಇವುಗಳೊಂದಿಗೆ ತವಕ, ತಲ್ಲಣ, ಅನುಸಂಧಾನ, ತುಡಿತ, ಸಂಕ್ರಮಣ, ನೆಲಮೂಲಸಂಸ್ಕೃತಿ, ಐತಿಹಾಸಿಕ ತುರ್ತು, ಸ್ತ್ರೀ ಸಂವೇದನೆ ಇತ್ಯಾದಿ ಇತ್ಯಾದಿ ಇನ್ನೂ ಭಾರವಾದ ಪದಗಳನ್ನು ಸೇರಿಸಿ ಒಟ್ಟು ಒಂದಿಷ್ಟು ವಾಕ್ಯ ಮಾಡಿಕೊಳ್ಳಬಹುದು.   

ಈ ಮೂರೂ ಮಾದರಿಗಳು ಕಪೋಲಕಲ್ಪಿತವಲ್ಲ. ಮೂಲದಿಂದ ನೇರವಾಗಿ ದಾಖಲಿಸಿದ್ದೇನೆ. ಈ ಮೂರೂ ಮಾದರಿಗಳನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ? ಕನ್ನಡದಲ್ಲೇ ಇವೆಯಾದರೂ ಇವುಗಳಿಗೆ ಅನುವಾದ ಅನಿವಾರ್ಯ! ಎಂ.ಎ, ಪಿಎಚ್.ಡಿ ಅನಂತರದ ವಿದ್ವತ್ ಬರವಣಿಗೆ-ಹೀಗೆ ಎಲ್ಲ ಹಂತದ ಕನ್ನಡವೂ ಗೊಂದಲಮಯ. ಇವು ಬೇಕೆಂತಲೇ ಆಯ್ದವಲ್ಲ. ಕೈಗೆ ತಟ್ಟನೆ ಸಿಗುವ ಬರಹಗಳ ಸಂಖ್ಯೆಯೇ ಈ ಮಟ್ಟದಲ್ಲಿದೆ.    

ಸಾವಿರದೊಂಬೈನೂರರ ಎಪ್ಪತ್ತು ಎಂಬತ್ತರ ದಶಕದವರೆಗೂ ಹೊರಬಂದ ಕನ್ನಡ ಕೃತಿಗಳು, ವಿಮರ್ಶೆಗಳಲ್ಲಿ ಇಂಥ ಅಸಂಬದ್ಧಗಳನ್ನಾಗಲೀ ಭಾರವಾದ ಅನಗತ್ಯ ಪದಗಳನ್ನಾಗಲೀ ಕಾಣುವುದು ಕಷ್ಟ. ಕುವೆಂಪು ಅವರ ದ್ರೌಪದಿಯ ಶ್ರೀಮುಡಿ, ಸರೋವರದ ಸಿರಿಗನ್ನಡಿಯಲ್ಲಿ ಮೊದಲಾದ ಅದ್ಭುತ ವಿಮರ್ಶಾ ಬರಹಗಳು ಕಾಲಾತೀತವಾಗಿ ಸೆಳೆಯುತ್ತವೆ. ಅವರ ಬರಹದಲ್ಲಿ ಕೆಲಸಕ್ಕೆ ಬಾರದ ಭಾರದ ಪದಗಳಿರುವುದೇ ಇಲ್ಲ. ಗೊರೂರರ ಕನ್ನಡದ ಲಾಲಿತ್ಯ, ಬಿಜಿಎಲ್ ಸ್ವಾಮಿಯವರ ಕನ್ನಡದ ನವಿರು, ದೇವನೂರು, ತೇಜಸ್ವಿ, ಲಂಕೇಶರು ಕನ್ನಡವನ್ನು ಒಗ್ಗಿಸಿಕೊಂಡ ರೀತಿ... ಸಾವಿರ ಸಾವಿರ ಅತ್ಯುತ್ತಮ ಭಿನ್ನ ಭಿನ್ನ ಮಾದರಿಗಳು ನಮ್ಮ ಮುಂದಿವೆ. ಅಂಥ ಮಾದರಿಗಳು ದಿಢೀರನೆ ಇಲ್ಲವಾಗುತ್ತಿರುವುದು ಹೇಗೆ?

ಇದಕ್ಕೆ ಯಾರನ್ನು ದೂರುವುದು? ಎಂಟನೆಯ ತರಗತಿವರೆಗೆ ನಪಾಸು ಮಾಡಬಾರದ ಕಾರಣ ಶಿಕ್ಷಕರು ಮಕ್ಕಳನ್ನು ಹಾಗೇ ಪಾಸು ಮಾಡಿ ಮುಂದೆ ಕಳಿಸುತ್ತಿರುತ್ತಾರೆ. ಅದ್ಹೇಗೋ ಹತ್ತನೇ ತರಗತಿಯೂ ಪಾಸಾಗುತ್ತದೆ. ಹಾಗೆಯೇ ಪಿಯುಸಿ, ಪದವಿ ಎಲ್ಲವೂ! ಈ ಯಾವ ಹಂತದಲ್ಲೂ ವಿದ್ಯಾರ್ಥಿಯೇ ಆಸಕ್ತಿಯಿಂದ ಕಲಿತರೆ ಅಥವಾ ಶ್ರದ್ಧಾವಂತ ಶಿಕ್ಷಕ ಕಲಿಸಿದರೆ ಪರವಾಗಿಲ್ಲ. ಇಲ್ಲವಾದಲ್ಲಿ ಈಗಿನಂತೆ ವಿದ್ಯಾರ್ಥಿಗಳ ಕನ್ನಡ ನೋಡಿದ ವಿವಿ ಪ್ರಾಧ್ಯಾಪಕರು ಡಿಗ್ರಿ ಅಧ್ಯಾಪಕರನ್ನೂ ಡಿಗ್ರಿ ಅಧ್ಯಾಪಕರು ಪಿಯುಸಿ ಉಪನ್ಯಾಸಕರನ್ನೂ ಪಿಯುಸಿ ಉಪನ್ಯಾಸಕರು ಪ್ರೌಢಶಾಲಾ ಶಿಕ್ಷಕರನ್ನೂ ಪ್ರೌಢಶಾಲಾ ಶಿಕ್ಷಕರು ಪ್ರಾಥಮಿಕ ಶಾಲಾ ಮೇಷ್ಟ್ರುಗಳನ್ನೂ ಪರಸ್ಪರ ದೂಷಿಸಿಕೊಳ್ಳುತ್ತ, ಕೊನೆಗೆ ಎಲ್ಲರೂ ಸೇರಿ ನಾವು ಹೇಳಿಕೊಟ್ಟರಷ್ಟೇ ಸಾಲದು ಮನೆಯಲ್ಲೂ ಪಾಲಕರು ಕಲಿಸಬೇಕು ಎನ್ನುತ್ತೇವೆ; ಪಾಲಕರು ಮಕ್ಕಳನ್ನು ನಾವು ಶಾಲೆ-ಕಾಲೇಜಿಗೆ ಕಳುಹಿಸುವುದೇಕೆ, ಮೇಷ್ಟ್ರುಗಳು ಕಲಿಸಬೇಕಪ್ಪಾ ಎನ್ನುತ್ತಾರೆ. ಹೀಗೆ ಒಟ್ಟಾರೆ ಇಡೀ ಸಮಾಜದ ವ್ಯವಸ್ಥೆಯೇ ಇದಕ್ಕೆ ಹೊಣೆಯಾಗುವಂತೆ ಮಾಡಿಬಿಟ್ಟಿದ್ದೇವೆ.

ಸಾರ್ವತ್ರಿಕವಾಗಿ ಒಪ್ಪಲಾದ ಶೈಕ್ಷಣಿಕ ಮನೋವಿಜ್ಞಾನದ ಒಂದು ಮಾತಿನಂತೆ ವ್ಯಕ್ತಿಯ ಕಲಿಕೆ ಮೊದಲ 11 ವರ್ಷಗಳಲ್ಲಿಯೇ ನಡೆಯುತ್ತದೆ. ಅನಂತರದ್ದು ಏನಿದ್ದರೂ ಅದರ ವಿಸ್ತರಣೆ ಮಾತ್ರ. ಕನ್ನಡದ ಸೌಧ ಸಮರ್ಪಕವಾಗಿಯೂ ಸುಂದರವಾಗಿಯೂ ಇರಬೇಕಾದರೆ ಭದ್ರ ಬುನಾದಿ ಅಗತ್ಯ. ನಮ್ಮ ಶೈಕ್ಷಣಿಕ ವ್ಯವಸ್ಥೆಯ ಬುನಾದಿಯೇ ಅಳ್ಳಕ ಎಂಬುದನ್ನು ಇಂದಿನ ಕನ್ನಡದ ಮಾದರಿಗಳು ಮತ್ತೆ ಮತ್ತೆ ಎತ್ತಿ ತೋರಿಸುತ್ತಿವೆ. ಸದ್ಯ ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಜನರನ್ನೂ ಅಂಥ ಪರಿಸ್ಥಿತಿಯನ್ನೂ ಉಳಿಸಿಕೊಂಡರೆ ಸಾಕು ಎಂಬ ಸ್ಥಿತಿಗೆ ಕನ್ನಡದ ಖ್ಯಾತ ಚಿಂತಕರೇ ಬಂದುಬಿಟ್ಟಿದ್ದಾರೆ. ಇಂಥ ಸಮಯದಲ್ಲಿ ಸಮ್ಮೇಳನಗಳು ಇದನ್ನು ರಿಪೇರಿ ಮಾಡಬಲ್ಲವೇ? ಗೊತ್ತಿಲ್ಲ. 






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment