Sunday, 15 January 2023

ಬಡವರಿರಬೇಕು, ಮಾತ್ರವಲ್ಲ, ಅವರು ಹೆಚ್ಚಬೇಕು!

ಮೊದಲು ಒಂದು ಸಂಗತಿಯನ್ನು ಸ್ಪಷ್ಟಮಾಡಿಕೊಳ್ಳಬೇಕು: ಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರ ಕಲ್ಯಾಣಕ್ಕಾಗಿವೆಯೇ ವಿನಾ ಲಾಭ ಮಾಡುವುದಕ್ಕಲ್ಲ. ಆದರೆ ಸಮಾಜಕ್ಕೆ ಲಾಭವಾಗುವಂತೆ ಮಾಡುವುದು ಅವುಗಳ ಕರ್ತವ್ಯ. ಅಂಥ ಲಾಭ ದೀರ್ಘಕಾಲಿಕವಾಗುವಂತೆ ಅದು ನೋಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದಷ್ಟು ವರ್ಷ ಅಧಿಕಾರದಲ್ಲಿ ಇರುವ ಆಸೆಯಿಂದ ಚುನಾಯಿತ ಸರ್ಕಾರಗಳು ಜನರನ್ನು ಓಲೈಸುವ ಅಗ್ಗದ ಜನಪ್ರಿಯ ಯೋಜನೆಗಳನ್ನು ಕೈಗೊಳ್ಳುವುದರಲ್ಲೇ ಆಸಕ್ತಿ ತೋರಿಸುತ್ತವೆ. ಇಂಥ ಯೋಜನೆಗಳ ಉದ್ದೇಶವನ್ನು ಯಾರೂ ಪ್ರಶ್ನಿಸುವಂತಿರುವುದಿಲ್ಲ, ಆದರೆ ಅವುಗಳ ಜಾರಿ, ಅವು ಉಂಟುಮಾಡುವ ದೀರ್ಘಕಾಲಿಕ ಪರಿಣಾಮ ಮೊದಲಾದ ಸಂಗತಿಗಳು ಚಿಂತನಾರ್ಹ.

ಹಿಂದೆ ವಯಸ್ಕ ಶಿಕ್ಷಣ ಎಂಬ ಸಾಕ್ಷರ ಯೋಜನೆಯೊಂದಿತ್ತು. ಎಲ್ಲರನ್ನೂ ಸಾಕ್ಷರರನ್ನಾಗಿಸಲು ಸಾವಿರಾರು ಕೋಟಿ ರೂ.ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುರಿದವು. 10ನೇ ಯೋಜನೆ ಮುಕ್ತಾಯದ ವೇಳೆಗೆ ನಿಗದಿತ ಗುರಿ ತಲಪುವಂತೆ ಕಾಲಮಿತಿ ಹಾಕಿಕೊಂಡ ಈ ಯೋಜನೆ ಈಗ ತನ್ನ ಸ್ವರೂಪ ಬದಲಿಸಿಕೊಂಡು ಔಪಚಾರಿಕ ಶಿಕ್ಷಣ ದೊರಕದವರಿಗೆ ಕೌಶಲ್ಯ ಕಲಿಸತೊಡಗಿ, ಸಾಕ್ಷರರಿಗೆ ಸ್ವಾವಲಂಬನೆ ಮಾರ್ಗ ತೋರಿಸುತ್ತಿದೆ. ಇದು ನಿಜಕ್ಕೂ ಸ್ತುತ್ಯರ್ಹವಾದುದು. ಹೀಗೆ ಸದುದ್ದೇಶದ ಯೋಜನೆಯೊಂದು ಬೆಳವಣಿಗೆ ಕಾಣಬೇಕು; ಸಮಾಜವನ್ನು ಸ್ವಾಸ್ಥ್ಯದತ್ತ ಕೊಂಡೊಯ್ಯಬೇಕು. ಸರ್ಕಾರಗಳ ಬಹಳಷ್ಟು ಯೋಜನೆಗಳಲ್ಲಿ ಇಂಥ ಬೆಳವಣಿಗೆಯೇ ಇರುವುದಿಲ್ಲ.

ಎಲ್ಲರಿಗೂ ಪುಷ್ಟಿಕರ ಆಹಾರ ದೊರಕುವಂತೆ ಮಾಡುವುದು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಇರುವಂತೆ ಮಾಡುವುದು ದೇಶದ ಬಹುದೊಡ್ಡ ಸಮಸ್ಯೆಗಳಲ್ಲೊಂದು. ಆಹಾರ ಮತ್ತು ಆರೋಗ್ಯ ನೀಡುವುದು 1960ರ ದಶಕದ ವೇಳೆಗೆ ದೇಶಾದ್ಯಂತ ಜಾರಿಗೆ ಬಂದ ಪಡಿತರ ವ್ಯವಸ್ಥೆಯ ನಿಜವಾದ ಉದ್ದೇಶವಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಸರ್ಕಾರಗಳು ಬೇಕಾಬಿಟ್ಟಿ ಬಳಸುತ್ತ, ಬದಲಿಸುತ್ತ ಬಂದಿವೆಯೇ ವಿನಾ ನಿಜವಾದ ಲಾಭ ಏನಾಗಿದೆ ಎಂದು ಅರಿಯುವ ಗೋಜಿಗೇ ಹೋಗಿಲ್ಲ.

ಕರ್ನಾಟಕದಲ್ಲೇ ಪರಿಸ್ಥಿತಿಯನ್ನು ಗಮನಿಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ. ಹಿಂದಿನ ಸರ್ಕಾರ ಅಂತ್ಯೋದಯ ಯೋಜನೆಯಡಿ 3 ರೂ.ಗಳಿಗೆ ಒಂದು ಕೆಜಿ ಅಕ್ಕಿ ನೀಡುತ್ತಿದ್ದುದನ್ನು ಈ ಸರ್ಕಾರ 1.ರೂಗೆ ಒಂದು ಕೆಜಿ ಅಕ್ಕಿ ಎಂದು ಭಾಗ್ಯದ ಯೋಜನೆಯಾಗಿ ಬದಲಿಸಿಕೊಂಡಿದೆ. ಸಂಪೂರ್ಣ ಉಚಿತವಾಗಿ ಏನನ್ನೂ ನೀಡಲಾಗದ ತಾಂತ್ರಿಕ ಕಾರಣಕ್ಕೆ ಒಂದು ರೂ. ನಿಗದಿ ಮಾಡಲಾಗಿದೆ. ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್) ಇರುವವರಿಗೆ ಆಹಾರ ನೀಡುವುದು ಈ ಯೋಜನೆಯ ಉದ್ದೇಶ. ಹೀಗೆ ಬಡತನ ರೇಖೆ ಕೆಳಗೆ ಎಷ್ಟು ಜನರಿದ್ದಾರೆ, ಈ ಸಂಖ್ಯೆ ಎಷ್ಟು ಕಾಲ ಹೀಗೆಯೇ ಇರುತ್ತದೆ, ಅಥವಾ ಇವರ ಸಂಖ್ಯೆ ಯೋಜನೆಗಳಿಂದ ಇಳಿಯುತ್ತಿದೆಯೇ, ಇವರ ಸಂಖ್ಯೆ ಇಲ್ಲವಾಗುವುದು ಯಾವಾಗ ಎಂಬ ಯಾವುದೇ ನಕಾಶೆ ಸರ್ಕಾರದ ಬಳಿ ಇಲ್ಲ!

ಪಡಿತರ ಅವ್ಯವಸ್ಥೆ ಕುರಿತು 2001ರಲ್ಲಿ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಯಿತು. ಈ ಸಂಬಂಧ 2006ರಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ವಾಧ್ವಾ ಸಮಿತಿ ರಚನೆಯಾಗಿ ಅದು ಲೋಪದೋಷ ಸರಿಪಡಿಸುವ ಕೂಲಂಕಷ ವರದಿ ನೀಡಿತು. 2008ರಲ್ಲಿ ಪ್ರಕರಣ ಇತ್ಯರ್ಥಪಡಿಸುವಾಗ ಈ ವರದಿಯನ್ನು ದೇಶಾದ್ಯಂತ ಅನುಸರಿಸಲು ಕ್ರಮಕೈಗೊಳ್ಳುವಂತೆ ಘನ ನ್ಯಾಯಾಲಯ ಆದೇಶ ನೀಡಿತು. ವರದಿಯಲ್ಲಿ ಬಿಪಿಎಲ್ ಕಾರ್ಡುದಾರರನ್ನು ಸರಿಯಾಗಿ ಗುರುತಿಸುವ ಕೆಲಸ ಎಲ್ಲೂ ಆಗಿಲ್ಲ, ರಾಜಕೀಯ ಪ್ರೇರಿತ ಇಂಥ ಯೋಜನೆಯಿಂದ ಸಮಾಜದಲ್ಲಿ ಶ್ರಮ ಸಂಸ್ಕøತಿಗೆ ಉತ್ತೇಜನ ದೊರಕುವುದಿಲ್ಲ ಎಂದು ವಾಧ್ವಾ ಸಮಿತಿ ಸ್ಪಷ್ಟವಾಗಿ ಹೇಳಿದೆ. ಏನು ಮಾಡಬೇಕು ಎಂದೂ ಹೇಳಿದೆ.  

ವಾಧ್ವಾ ಸಮಿತಿ ಗುರುತಿಸಿದಂತೆ ಕರ್ನಾಟಕದಲ್ಲಿ ನ್ಯಾಯವಾಗಿ 31.29 ಲಕ್ಷ ಕಾರ್ಡುದಾರರಿರಬೇಕು. ಆದರೆ ಈ ಸಮಿತಿಗೆ ಸಿಕ್ಕ ಲೆಕ್ಕದಂತೆ 47.08 ಲಕ್ಷ ಹೆಚ್ಚುವರಿ ಕಾರ್ಡುದಾರರಿದ್ದಾರೆ. ಈ ಸಮಿತಿ ಹೇಳುವಂತೆ ಕರ್ನಾಟಕದಲ್ಲಿ ಇರುವ ಬಿಪಿಎಲ್ ಕಾರ್ಡುದಾರರ ಸಂಖ್ಯೆ 78.37 ಲಕ್ಷ. ಇದು 2006-07ರ ಲೆಕ್ಕ. 2013 ಜುಲೈ ವೇಳೆಗೆ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡುವಾಗ 87 ಲಕ್ಷ ಬಿಪಿಎಲ್ ಕಾರ್ಡುದಾರರೂ 11 ಲಕ್ಷ ಅಂತ್ಯೋದಯ ಜನರಿಗೂ ಇದರ ಉಪಯೋಗವಾಗುತ್ತದೆ ಎಂದು ಲೆಕ್ಕ ಕೊಟ್ಟಿದೆ. ಅಂದರೆ ಪ್ರತಿ ವರ್ಷ ಬಡವರ ಸಂಖ್ಯೆ ಲಕ್ಷ ಲಕ್ಷದಷ್ಟು ಹೆಚ್ಚುತ್ತಿದೆ ಎಂದರ್ಥ. ಹಾಗಾದರೆ ಬಡತನ ನಿರ್ಮೂಲನೆಗೆ ಸರ್ಕಾರಗಳು ಮಾಡುತ್ತಿರುವುದೇನು? ಯೋಜನೆಗಳಿವೆ, ಪರಿಣಾಮ ಮಾತ್ರ ಏನೂ ಇಲ್ಲ! ಯಾಕೆಂದರೆ ರಾಜಕೀಯ ಪಕ್ಷಗಳಿಗೆ ಬಡವರಿರಬೇಕು!

ನಗರ ಪ್ರದೇಶದಲ್ಲಿ ವಾರ್ಷಿಕ 17,000 ರೂ ಹಾಗೂ ಗ್ರಾಮೀಣ ಭಾಗದಲ್ಲಿ ವಾರ್ಷಿಕ 12,000 ರೂ.ಗಿಂತ ಕಡಿಮೆ ಆದಾಯ ಇರುವವರನ್ನು ಬಿಪಿಎಲ್ ಕಾರ್ಡುಪಡೆಯಲು ಅರ್ಹರೆಂದು ಗುರುತಿಸಲಾಗಿದೆ. ತಿಂಗಳಿಗೆ ಒಂದು ಅಥವಾ ಒಂದೂವರೆ ಸಾವಿರ ರೂ.ಗಳಲ್ಲಿ ಜೀವನ ಸಾಗಿಸುವ ಜನ ನಿಜಕ್ಕೂ ಎಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಲೆಕ್ಕ ಎಲ್ಲೂ ಸರಿಯಾಗಿಲ್ಲ. ಕೃಷಿ ಕೂಲಿಗಳು, ಅಸಂಘಟಿತ ವಲಯದ ಕಾರ್ಮಿಕರು, ಮೊದಲಾದವರಿಗೆ ಕನಿಷ್ಠ ನಿತ್ಯ 100 ರೂ. ಆದಾಯವನ್ನು ರಾಷ್ಟ್ರೀಯ ಸಮೀಕ್ಷಾ ಸಂಘಟನೆ (ಎನ್‍ಎಸ್‍ಎಸ್‍ಒ) ನಿಗದಿ ಮಾಡಿದೆ. ತಿಂಗಳು ಪೂರ್ತಿ, ವರ್ಷಪೂರ್ತಿ ಇವರಿಗೆ ಕೆಲಸವಿರುವುದಿಲ್ಲ ಎಂಬ ದೃಷ್ಟಿಯಿಂದ ಇವರ ಆದಾಯ ಮೇಲ್ಕಂಡ ಮಿತಿಯಲ್ಲೇ ಬರುತ್ತದೆ. ಈ ದೃಷ್ಟಿಯಿಂದ ಇವರೆಲ್ಲ ಬಿಪಿಎಲ್ ಕಾರ್ಡು ಹೊಂದಲು ಅರ್ಹರಾಗುತ್ತಾರೆ. ಇದೇನೋ ಸರಿ. ಆದರೆ ಈ ಪಟ್ಟಿಯಲ್ಲಿ ಇನ್ನು ಯಾರೆಲ್ಲ ಸೇರಿದ್ದಾರೆ, ಸೇರುತ್ತಿದ್ದಾರೆ ಎಂಬುದನ್ನೇ ಸರ್ಕಾರಗಳು ಗಮನಿಸುತ್ತಿಲ್ಲ. ಇಂಥವರ ಸಂಖ್ಯೆ ಇಷ್ಟೇ ಎಂದು ಖಚಿತವಾಗಿಬಿಟ್ಟರೆ, ಬಡತನದ ಮೂಲ ಸಮಸ್ಯೆ ನಿವಾರಣೆ ಅನಿವಾರ್ಯವಾಗುತ್ತದೆ, ಅದಕ್ಕೊಂದು ಕಾಲಮಿತಿ ಹಾಕಿಕೊಳ್ಳಬೇಕಾಗುತ್ತದೆ! ಹಾಗಾದಾಗ ಚುನಾವಣಾ ಪ್ರಣಾಳಿಕೆಯಲ್ಲಿ ಅಗ್ಗದ ಆಶ್ವಾಸನೆ ಕೊಡುವ ಅವಕಾಶಗಳು ಇಲ್ಲವಾಗುತ್ತವೆ!

ನಮ್ಮ ಅನ್ನಭಾಗ್ಯ ಯೋಜನೆಯನ್ನೇ ನೋಡಿ. ಚೆನ್ನಾಗಿದೆ. ಒಂದು ಕೆಜಿ ಅಕ್ಕಿ ಸಿದ್ಧವಾಗಲು (ಬಿತ್ತನೆಯಿಂದ-ಮಿಲ್‍ನಿಂದ ಹೊರಬರುವತನಕ) ಒಂದು ಅಂದಾಜಿನಂತೆ ಕನಿಷ್ಠ 20.ರೂ ತಗಲುತ್ತದೆ. ಚತ್ತೀಸ್‍ಗಡದಿಂದ 23.30 ರೂ.ಗೆ ಪ್ರತಿ ಕೆಜಿ ಖರೀದಿಸಿ 1 ರೂಗೆ ಕೆಜಿ ಅಕ್ಕಿ ನೀಡುತ್ತಿದ್ದೇವೆ. ಇದರಿಂದ ವಾರ್ಷಿಕ ಸರ್ಕಾರದ ಬೊಕ್ಕಸಕ್ಕೆ 4,200 ಕೋಟಿ ರೂ. ಹೊರೆ ಬೀಳುತ್ತಿದೆ. ರಾಜ್ಯದಲ್ಲಿರುವ 1818 ರೈಸ್‍ಮಿಲ್‍ಗಳಿಂದ ಪಡೆಯುವ ಲೆವಿ ಅಕ್ಕಿ ಪ್ರಮಾಣ ಹೆಚ್ಚಿಸಿ ಯೋಜನೆ ಮುಂದುವರೆಸುವ ಉದ್ದೇಶ ಸರ್ಕಾರದ್ದು. ಆದರೆ ಮಿಲ್ ಮಾಲೀಕರು ವಾಸ್ತವದಲ್ಲಿ ಇದು ಅಸಾಧ್ಯ ಎಂದು ಪಟ್ಟು ಹಿಡಿದಿದ್ದಾರೆ. ಜನಪ್ರಿಯ ಯೋಜನೆ ಧಿಡೀರನೆ ಜಾರಿಯಾಗಿದೆ, ವರ್ಷದ ಮಟ್ಟಿಗಾದರೂ ಅಥವಾ ಲೋಕಸಭಾ ಚುನಾವಣೆ ನಡೆಯುವವರೆಗಾದರೂ ನಡೆಸಬೇಕಲ್ಲ ಎಂಬ ಚಿಂತೆ ಸರ್ಕಾರದ್ದು. 

ಹೋಗಲಿ, ಸರ್ಕಾರದ ಉದ್ದೇಶ ಈಡೇರಿತೆ? ಇಲ್ಲ. ಅನ್ನಭಾಗ್ಯ ಸಹಾಯವಾಣಿ (1967)ಗೆ ಬರುವ ದೂರುಗಳನ್ನು ಕೇಳಿನೋಡಿ. ರಾಜ್ಯದ 20372 ನ್ಯಾಯಬೆಲೆ ಅಂಗಡಿಗಳಲ್ಲಿ ದೂರಿಲ್ಲದ ಅಂಗಡಿಯೇ ಬಹುಶಃ ಇರಲಾರದು. ಒಂದು ರೂ.ಗೆ ಅಕ್ಕಿ ಪಡೆಯುವ ಕುಟುಂಬಗಳನ್ನು ವಿಶ್ವಾಸದಿಂದ ಮಾತನಾಡಿಸಿ ನೋಡಿ. ಆಘಾತವೇ ಆಗುತ್ತದೆ. ಒಂದೇ ಮನೆಯಲ್ಲಿ ಮೂರ್ನಾಲ್ಕು ಕಾರ್ಡು ಇಟ್ಟುಕೊಂಡವರಿದ್ದಾರೆ. ಇವರಲ್ಲಿ ಒಂದು ರೂ.ಗೆ ಅಕ್ಕಿ ಪಡೆದು 45ರೂ.ಗೆ ಮಾರುವವರೇ ಹೆಚ್ಚು. ಯೋಜನೆಯಿಂದ ಉಳಿತಾಯವಾದ “ಬಡವರ” ಹಣ ಎಲ್ಲಿ ಹೋಗುತ್ತಿದೆ ಎಂಬ ಸಮೀಕ್ಷೆಯನ್ನೂ ಸರ್ಕಾರ ಮಾಡುತ್ತಿಲ್ಲ. ಒರಿಸ್ಸ, ಆಂಧ್ರ ಮತ್ತು ತಮಿಳುನಾಡುಗಳಲ್ಲೂ ಇಂಥ ಜನಪ್ರಿಯ ಯೋಜನೆಗಳಿವೆ. ಇವೆಲ್ಲವೂ ರಾಜಕೀಯ ಲಾಭದವೇ ವಿನಾ ಸಮಾಜೋಪಕಾರಿಯಲ್ಲ. ತಮಿಳುನಾಡಿನಲ್ಲಿ ಅಮ್ಮಾಕ್ಯಾಂಟೀನು, ಅಮ್ಮಾ ನೀರು, ಹೀಗೆ ಎಲ್ಲವೂ ಅಮ್ಮಮಯ. ಅಲ್ಲಿಯೂ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಬರೀ ಕ್ಯಾಂಟೀನಿನಿಂದ ನೂರಾರು ಕೋಟಿ ಹೊರೆಯಾಗುತ್ತಿದೆ.

ಇಂಥ ಜನಪ್ರಿಯ ಯೋಜನೆಗಳು ಬಡತನವನ್ನು ಎಂದು ನಿವಾರಿಸುತ್ತವೆ? ಎಂದೂ ಇಲ್ಲ. ಅನ್ನ ಕೊಟ್ಟರೆ ಹಸಿವು ಇಂಗುವುದಿಲ್ಲ, ಮತ್ತೆ ಹಸಿವಾಗುತ್ತದೆ. ಸರ್ಕಾರಗಳು ಜನರಿಗೆ ಅನ್ನ ಹುಟ್ಟಿಸಿಕೊಳ್ಳುವ ಮಾರ್ಗ ಕಾಣಿಸಬೇಕೇ ಹೊರತು ಅನ್ನವನ್ನೇ ಕೊಟ್ಟು ಸುಮ್ಮನಿರಿಸುವುದಲ್ಲ. ಒಂದು ಪಕ್ಷ ಪುಕ್ಕಟೆ ಅನ್ನ ಕೊಟ್ಟರೆ ಮತ್ತೊಂದು ಪಕ್ಷ ಮನೆ, ಹಾಸಿಗೆ, ಕಲರ್ ಟೀವಿ, ವಿದ್ಯುತ್ ಹೀಗೆ ಎಲ್ಲವನ್ನೂ ಕೊಡುತ್ತದೆ. ಹೀಗಾದರೆ ಸಮಾಜ ಶ್ರಮ ಸಂಸ್ಕøತಿಯನ್ನು ಉಳಿಸಿಕೊಳ್ಳುತ್ತದೆಯೇ? ಅನಾರೋಗ್ಯವಿದ್ದಾಗ ಮಾತ್ರ ಗ್ಲುಕೋಸು, ವಿಟಮಿನ್ ಮಾತ್ರೆ ತೆಗೆದುಕೊಳ್ಳಬೇಕೇ ಹೊರತು, ಆಹಾರ ಸ್ವೀಕರಿಸುವ ಬದಲು ಇವನ್ನೇ ಸ್ವೀಕರಿಸುತ್ತ ಇರಲಾಗುತ್ತದೆಯೇ? ಇವೆಲ್ಲ ತಾತ್ಕಾಲಿಕ ಶಮನಗಳು. ಆದರೆ ರಾಜಕೀಯ ಪಕ್ಷಗಳು ಇದನ್ನೇ ಕಾಯಂ ಮಾಡಿ ಸಮಾಜವನ್ನು ಕೆಡಿಸುತ್ತಿವೆ. ನಿರುದ್ಯೋಗ ನಿವಾರಿಸುವ, ಆಹಾರ ಬೆಲೆಯನ್ನು ನಿಯಂತ್ರಣದಲ್ಲಿರಿಸಿ, ಸ್ವಾವಲಂಬನೆ ಬೆಳೆಯುವಂತೆ ಮೂಲಸೌಕರ್ಯ ಒದಗಿಸಿ ಸಮಾಜವನ್ನು ಸಕ್ರಿಯಗೊಳಿಸುವ ಯೋಜನೆ ನೀಡುವ ಬದಲು ಸ್ಪರ್ಧಾತ್ಮಕ ರೀತಿಯಲ್ಲಿ ಅಗ್ಗದ ಯೋಜನೆ ನೀಡುತ್ತ ಸಮಾಜ ನಿಷ್ಕ್ರಿಯವಾಗುವಂತೆ ಇವು ಮಾಡುತ್ತಿರುವುದು ಮಾತ್ರ ಶೋಚನೀಯ.




ಪುಸ್ತಕ:
ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment