Friday, 18 November 2022

ಸಂತರಿಲ್ಲದ ಗಿರಿಯಲ್ಲಿ ಶಾಂತಿಯೂ ಇಲ್ಲ


ಚಂದ್ರ ದ್ರೋಣ ಪರ್ವತ, ವಾಯು ಪರ್ವತ ಅಥವಾ ಬಾಬಾ ಬುಡನ್‍ಗಿರಿ ಆಗಾಗ ಸುದ್ದಿಯಲ್ಲಿರುತ್ತದೆ. ಹಾಗೆ ನೋಡಿದರೆ ಈ ಪರ್ವತ ಪುರಾಣ ಕಾಲದಿಂದಲೂ ಸದಾ ಚಾಲ್ತಿಯಲ್ಲಿದೆ. ಆದರೆ ಇತ್ತೀಚೆಗೆ ಹಿಂದು ಮತ್ತು ಮುಸ್ಲಿಂ ಪರ ರಾಜಕಾರಣಿಗಳು ಮತ್ತು ಇವರಿಗೆ ಹೆಗಲೆಣೆಯಾಗಿ ನಿಲ್ಲಬಲ್ಲ ಬುದ್ಧಿಜೀವಿಗಳು ಎಂದು ಪರಸ್ಪರ ಕರೆದುಕೊಳ್ಳುವವರು ಪ್ರವೇಶ ಪಡೆದುಕೊಂಡ ಮೇಲಂತೂ ಈ ಗಿರಿಯಲ್ಲಿ ಶಾಂತಿ ಎಂಬುದೇ ನಾಪತ್ತೆಯಾಗಿದೆ. ವ್ಯಾಪಾರೀ ಉದ್ದೇಶ ಮತ್ತು ರಾಜಕೀಯ ಪ್ರವೇಶಿಸಿದ ಯಾವ ಕ್ಷೇತ್ರದಲ್ಲೂ ಶಾಂತಿ, ನೆಮ್ಮದಿ ಇರುವುದಿಲ್ಲ. ಇದಕ್ಕೆ ಚಂದ್ರ ದ್ರೋಣ ಹೊರತಾಗಿರಲು ಸಾಧ್ಯವೇ ಇಲ್ಲ.

ಕುಸಿದ ಗುಹೆಯನ್ನು ಜೀರ್ಣೋದ್ಧಾರ ಮಾಡುವ ನೆಪದಲ್ಲಿ ಕೆಲವರು ಯಥಾಸ್ಥಿತಿಯಲ್ಲಿ ಹಸ್ತಕ್ಷೇಪ ಆಗಾಗ ನಡೆಸುತ್ತಾರೆ. ಇದು ನ್ಯಾಯಾಲಯ ಆದೇಶದ ಉಲ್ಲಂಘನೆ ಹಾಗೂ ನ್ಯಾಯಾಂಗ ನಿಂದನೆ ಎಂದು ವೃತ್ತಿಪರ ರಾಜಕಾರಣಿಗಳು ಒಂದೆಡೆ ಆರೋಪ ಮಾಡುತ್ತಾರೆ. ಮತ್ತೊಂದೆಡೆ ವೃತ್ತಿಪರ ಸಾಧು ಸಂತರೆಲ್ಲ ಸಭೆ ಸೇರಿ ಈ ಬಾರಿ ವೈಭವದ ಶೋಭಾ ಯಾತ್ರೆ ನಡೆಸಿ ಪೂಜೆಯನ್ನು ಗುಹೆಯಲ್ಲೇ ನಡೆಸುವ ನಿರ್ಧಾರಕ್ಕೆ ಬರುತ್ತದೆ. ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಸದ್ಯಕ್ಕೆ ಗುಹೆಯಲ್ಲಿ ಪೂಜೆ ಮಾಡುವ ಅಧಿಕಾರ ಇರುವುದು ಸಾಂಪ್ರದಾಯಿಕ ಹಕ್ಕು ಉಳ್ಳ ಅಧಿಕೃತ ವ್ಯಕ್ತಿಗೆ ಮಾತ್ರ. ಶಾಂತಿ ಮತ್ತು ನೆಮ್ಮದಿ ಉಂಟುಮಾಡಬೇಕಿದ್ದ ಪೂಜೆ, ಯಾತ್ರೆಗಳು ಸಾಮಾಜಿಕ ನೆಮ್ಮದಿ, ಪರಿಸರದ ಶಾಂತಿಗೆ ಭಂಗ ಉಂಟುಮಾಡುವಂತಾಗಿರುವುದು ವಿರೋಧಾಭಾಸವೂ ಹೌದು, ವ್ಯಂಗ್ಯವೂ ಹೌದು. ಇದಕ್ಕೆ ಕಾರಣ ಇಲ್ಲದಿಲ್ಲ.

ನಮ್ಮ ದೇಶದಲ್ಲಿ ನಿರ್ಜನ, ದುರ್ಗಮ ಬೆಟ್ಟ ಗುಡ್ಡಗಳೆಲ್ಲ ಒಂದಲ್ಲ ಒಂದು ಕಥೆ-ಪುರಾಣದೊಂದಿಗೆ ತಳಕು ಹಾಕಿಕೊಂಡಿವೆ. ಸಾಮಾನ್ಯ ಜೀವನದ ಜಂಜಾಟ ಮತ್ತು ಸಾಮಾನ್ಯ ಜನರ ಕಾಟದಿಂದ ದೂರವಾಗಿ ನಿಸರ್ಗದ ಮೌನದಲ್ಲಿ ಒಂದಾಗುವ ಮಾರ್ಗ ಕಂಡುಕೊಳ್ಳುವ ಸಿದ್ಧ-ಸಾಧಕರು ಮತ್ತು ಅವರ ಆಧ್ಯಾತ್ಮಿಕ ಮಹಿಮೆಗಳೇ ಇದಕ್ಕೆ ಕಾರಣ. ಅವರ ಜೀವನ ಮತ್ತು ದರ್ಶನಗಳೂ ಇಷ್ಟೇ ದುರ್ಗಮ. ನಮ್ಮ ಅಳವಿಗೆ ಇವು ಸುಲಭವಾಗಿ ದಕ್ಕಲಾರವು. ಆದರೆ ಇವರ ಹೆಸರಲ್ಲಿ ಮಾಡಬಹುದಾದ ಸುಲಭದ ಎಲ್ಲ ಕೆಲಸವನ್ನೂ ನಾವು ಮಾಡುತ್ತೇವೆ. ಚಂದ್ರ ದ್ರೋಣದ ಕತೆಯೂ ಬೇರೆಯಲ್ಲ.

ದಕ್ಷಿಣ ಭಾರತದ ಪೂರ್ವ-ಪಶ್ಚಿಮ ಘಟ್ಟಗಳ ಸರಿ ಮಧ್ಯದಲ್ಲಿ ಹರಡಿರುವ ಪರ್ವತ ಶ್ರೇಣಿಯೇ ಚಂದ್ರದ್ರೋಣ. ಬಾಲಚಂದ್ರನ ಆಕಾರದಲ್ಲಿರುವ ಕಾರಣ ಈ ಹೆಸರನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಶಾಸನಗಳಲ್ಲಿ ಇದನ್ನು ವಾಯು ಪರ್ವತ ಎಂದು ಕರೆಯಲಾಗಿದೆ. ಈ ಎರಡು ಹೆಸರುಗಳು 10ನೇ ಶತಮಾನಕ್ಕಿಂತ ಹಿಂದೆ ಉಲ್ಲೇಖವಾದವು. ಈಗ ಇವೆರಡೂ ಅಪರಿಚಿತ. ಈಗೇನಿದ್ದರೂ ಇದು ಬಾಬಾ ಬುಡನ್‍ಗಿರಿ. ಕೆಲ ಶತಮಾನಗಳ ಹಿಂದೆ ಬಾಬಾ ಬುಡನ್ ಎಂಬ ಸಂತನೊಬ್ಬ ಇಲ್ಲಿ ನೆಲೆಸಿದ್ದ. ನಂತರ ಈ ಪರ್ವತಕ್ಕೆ ಬಾಬಾಬುಡನ್‍ಗಿರಿ ಎಂದೇ ಹೆಸರಾಯಿತು.

ಕರ್ನಾಟಕದ ಅತ್ಯುನ್ನತ ಪರ್ವತ ಶ್ರೇಣಿ ಇದು. ಇಲ್ಲಿನ ಮುಳ್ಳಯ್ಯನ ಗಿರಿ ರಾಜ್ಯದ ಅತ್ಯುನ್ನತ ಪರ್ವತ ಶಿಖರ (1925ಮೀ.). 1894ಮೀ. ಎತ್ತರದ ಬಾಬಾಬುಡನ್‍ಗಿರಿ ನೈಸರ್ಗಿಕ ಸಂಪತ್ತು, ಗಣಿ, ಕಾಫಿ ತೋಟ ಮೊದಲಾದ ಆರ್ಥಿಕ ಕಾರಣಕ್ಕೆ ಪ್ರಸಿದ್ಧ. ಧಾರ್ಮಿಕವಾಗಿಯೂ ಈ ಸ್ಥಳಕ್ಕೆ ಮಹತ್ವವಿದೆ. ಇಲ್ಲಿನ ಚೆನ್ನವೀರ ಮಠ, ಹನುಮಂತ ಸ್ಥಾಪಿಸಿದ್ದಾನೆ ಎನ್ನಲಾದ ವಿರೂಪಾಕ್ಷ ಲಿಂಗ, ಗುಹೆಯೊಳಗಿನ ದತ್ತಪೀಠಗಳು ಹಿಂದೂಗಳಿಗೆ ಪುರಾಣಕಾಲದಿಂದಲೂ ಪವಿತ್ರ ಎನಿಸಿವೆ. ಕ್ರಿ.ಶ. 1717ರ ಶಾಸನವೊಂದರಲ್ಲಿ ಚೆನ್ನವೀರ ಮಠದ ಸ್ವಾಮೀಜಿಗಳ ಬಗ್ಗೆ ಉಲ್ಲೇಖವಿದೆ.

ಶ್ರೀಗುರು ದತ್ತಾತ್ರಯರು ಗಿರಿಯ ಮೇಲಿನ ಗುಹೆಯಲ್ಲಿ ಅಂತರ್ಧಾನರಾದರು ಎಂದು ಹೇಳಲಾಗಿದೆ. ಅವರು ಮತ್ತೆ ಹೊರಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಹಿಂದೂಗಳಿದ್ದಾರೆ. ಕ್ರಿ.ಶ. 1050ರ ಪಾರ್ಸಿ ಶಾಸನವೊಂದರಲ್ಲಿ ಇದೇ ಗುಹೆಯಲ್ಲಿ ಸೂಫಿ ಸಂತ ಹಜರತ್ ಹಯಾತ್ ಮೀರ್ ಕಲಂದರ್ ಇದ್ದ ಬಗ್ಗೆ ಉಲ್ಲೇಖವಿದೆ. ಗುಹೆಯೊಳಗಿನ ಪೀಠವನ್ನು ಹಿಂದೂಗಳು ದತ್ತಪೀಠ ಎಂದೂ ಮುಸ್ಲಿಮರು ಕಲಂದರ್ ಗದ್ದುಗೆ ಎಂದೂ ಪವಿತ್ರವಾಗಿ ಕಾಣುತ್ತಾರೆ. ಒಂದೇ ಪೀಠದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾವಗಳು ಐಕ್ಯವಾಗಿವೆ. ಗುರುಪೂರ್ಣಮೆಯಂದು ಹಿಂದೂಗಳೂ ಮಾರ್ಚ್‍ನಲ್ಲಿ ನಡೆಯುವ ಬಾಬಾಬುಡನ್ ಉರುಸ್‍ನಲ್ಲಿ ಮುಸ್ಲಿಮರೂ ವಿಶೇಷವಾಗಿ ಈ ತಾಣಕ್ಕೆ ಭೇಟಿ ನೀಡುತ್ತಾರೆ. ಹಿಂದೂಗಳಿಗೆ ಇದು ಮತ್ತೊಂದು ಗಾಣಗಾಪುರವಾದರೆ ಮುಸ್ಲಿಮರಿಗೆ ಮತ್ತೊಂದು ಮೆಕ್ಕಾ ಆಗಿ ಶತಮಾನಗಳಿಂದ ಶಾಂತಿ-ನೆಮ್ಮದಿಗೆ ಕಾರಣವಾಗಿತ್ತು.

ಈ ತಾಣವನ್ನು ಲಾಭಕ್ಕೆ ಬಳಸಿಕೊಳ್ಳುವ ವ್ಯಾಪಾರೀ ಬುದ್ಧಿ, ಪುಢಾರಿಗಳ ಹಸ್ತಕ್ಷೇಪ ಇದರ ಜೊತೆಗೆ ಸೇರಿಕೊಂಡ ಕೆಲಸವಿಲ್ಲದ ವಿಚಾರವಾದಿಗಳೆಂದು ಕರೆದುಕೊಳ್ಳುವವರ ಮಧ್ಯಪ್ರವೇಶದಿಂದ ಶಾಂತವಾಗಿದ್ದ ಗಿರಿ ಮಡಿಲು ದ್ವೇಷದ ಹೊಗೆ ಉಗುಳಲಾರಂಭಿಸಿತು. ಇದು ಬೆಂಕಿಯಾಗಿ ಪರಿವರ್ತನೆಯಾದುದು 1980ರ ದಶಕದಿಂದ ಈಚೆಗೆ. 1838ರ ಸುಮಾರಿನಲ್ಲಿ ರಾಜಾವಳಿ ಕಥೆಯನ್ನು ಬರೆದ ದೇವಚಂದ್ರ ಬಾಬಾಬುಡನ್‍ಗಿರಿಯ ಬಗ್ಗೆ ಸಾಕಷ್ಟು ಉಲ್ಲೇಖ ನೀಡಿದ್ದಾನೆ. ಇದರಲ್ಲಿನ ಮಾಹಿತಿಗಳೆಲ್ಲ ಕೈಫಿಯತ್ತು ಅಥವಾ ಅವರಿವರು ಹೇಳಿದ ಮಾತುಗಳಿಂದ ಪಡೆದಂಥವು. ಬಿಟ್ಟಿದೇವನ ಕಾಲದ ಉಲ್ಲೇಖವನ್ನೂ ಕೊಡುವ ಆತ ಈ ಗಿರಿಯಲ್ಲಿ ಗಲಾಟೆ ನಡೆಯಿತೆಂದೂ ಸಾವು ನೋವುಗಳು ಉಂಟಾದವೆಂದು ಕೇಳಿದ್ದಾಗಿ ದಾಖಲಿಸುತ್ತಾನೆ. ಅದರೆ ಇದಕ್ಕೆ ಪೂರಕ ಮಾಹಿತಿಗಳು ಯಾವ ಶಾಸನ ಅಥವಾ ಐತಿಹಾಸಿಕ ದಾಖಲೆಗಳಲ್ಲಿ ದೊರೆಯುವುದಿಲ್ಲ.

1921-22ರ ವೇಳೆಗೆ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಚಿಕ್ಕಮಗಳೂರಿನ ಸಬ್‍ಡಿವಿಜನ್ ಆಫೀಸರ್ ಆಗಿದ್ದರು. ಆಗ ಮೊದಲ ಬಾರಿ ಅವರು ಈ ಗಿರಿಗೆ ಹೋಗುತ್ತಾರೆ. ನಂತರ ಅನೇಕ ಬಾರಿ ಭೇಟಿ ಕೊಡುತ್ತಾರೆ. ದತ್ತಪೀಠ, ಅದರ ಸೌಂದರ್ಯ, ಹಿಪ್ಪಲ, ಶಿರವಾಸಿ, ಅತ್ತಿಗುಂಡಿ ಮೊದಲಾದ ಗ್ರಾಮಗಳ ವರ್ಣನೆ, ಮಾಣಿಕ್ಯಧಾರಾ ಜಲಪಾತದ ರಮಣೀಯತೆ... ಹೀಗೆ ಗಿರಿಯ ಹತ್ತು ಹಲವು ಸ್ವಾರಸ್ಯವನ್ನು ಅವರು ದಾಖಲಿಸಿದ್ದಾರೆ (ಭಾವ-2, ಪು.111). ಮಾಸ್ತಿಯವರ ಪ್ರಸಿದ್ಧ ಕಾದಂಬರಿ ಚೆನ್ನಬಸವ ನಾಯಕ. ಈ ಕಾದಂಬರಿಗೆ ಇಲ್ಲೇ ಸ್ಫೂರ್ತಿ ದೊರೆಯಿತೆಂದೂ, ಈ ಕಾದಂಬರಿಯ ಆರಂಭದಲ್ಲಿ ಈ ಅನುಭವವಿದೆ ಎಂದೂ ಅವರೇ ದಾಖಲಿಸಿದ್ದಾರೆ. ಇಲ್ಲಿ ಎಲ್ಲೂ ಅವರು ಹಿಂದೂ ಮುಸ್ಲಿಂ ಗಲಾಟೆಯನ್ನು ದಾಖಲಿಸಿಲ್ಲ.

ಶ್ರೀಗುರು ಸಮರ್ಥರ ಅವತಾರ ಎಂದೇ ತಿಳಿಯಲಾದ ಶ್ರೀಧರ ಸ್ವಾಮಿಗಳು 1960ರ ದಶಕದಲ್ಲಿ ಗಿರಿಯಲ್ಲಿ ದತ್ತ ಜಯಂತಿ ಆಚರಿಸಲು ಬರುತ್ತಾರೆ. ದತ್ತಪೀಠದ ಉಸ್ತುವಾರಿ ಅತ್ತಿಗುಂಡಿಯ ಕಲಂದರ್‍ನದು. ಇಲ್ಲಿ ಹಿಂದೂ ಸಾಂಪ್ರದಾಯಿಕ ಧಾರ್ಮಿಕ ಪವಿತ್ರ ಭಾವನೆ ಇಲ್ಲವೆಂದು ಅರಿತ ಶ್ರೀಧರರು ಕಾಫಿ ತೋಟವೊಂದರಲ್ಲಿ ಜಯಂತಿ ಆಚರಿಸಿ ಅಲ್ಲೇ ದತ್ತ ಪ್ರಾರ್ಥನೆ ಕೃತಿಯನ್ನೂ ರಚಿಸುತ್ತಾರೆ. ಆಗಲೂ ಅವರು ವಿವಾದದ ಬಗ್ಗೆ ಉಲ್ಲೇಖಿಸುವುದಿಲ್ಲ.

1980ರ ದಶಕದಲ್ಲಿ ಢೋಂಗಿ ಮುಸ್ಲಿಂ ಸಂತನ ವೇಷದಲ್ಲಿ ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಜನರೇ ಓಡಿಸಿದರು. ಅದುವರೆಗೆ ಕೇವಲ ಕಲಂದರ್ ಗದ್ದುಗೆ ಇದ್ದ ಗಿರಿಯಲ್ಲಿ ಅನೇಕ ಗೋರಿಗಳು ತಲೆ ಎತ್ತತೊಡಗಿವು. ಈ ಆಕ್ರಮಣ ಪ್ರಶ್ನಿಸಿದ್ದು ಇಂದಿನ ವಿವಾದದ ಮೊದಲ ಹೆಜ್ಜೆ.

ಪಕ್ಕಾ ಧಾರ್ಮಿಕ ದೃಷ್ಟಿಯಲ್ಲಿ ನೋಡಿದರೆ ಮುಸ್ಲಿಮರಿದ್ದಾರೆ ಎಂಬ ಕಾರಣಕ್ಕೆ ಹಿಂದೂಗಳಿಗೂ ಕಾಫಿರರಿದ್ದಾರೆ ಎಂಬ ಕಾರಣಕ್ಕೆ ಮುಸ್ಲಿಮರಿಗೂ ಈ ಸ್ಥಳದ ಬಗ್ಗೆ ನಿಜವಾಗಿ ಯಾವ ಪವಿತ್ರ ಭಾವನೆಯೂ ಉಳಿದಿಲ್ಲ. ಈಗಿರುವುದು ಹಿಂದೂ ಮುಸ್ಲಿಂ ಸಮುದಾಯದ ಕೆಲವರ ಒಣ ಪ್ರತಿಷ್ಠೆ ಹಾಗೂ ಇವೆರಡೂ ಸಮುದಾಯದ ಓಲೈಕೆಯ ಭ್ರಾಂತಿಯಲ್ಲಿರುವ ಪುಢಾರಿ ಮತ್ತು ಬುದ್ಧಿಜೀವಿಗಳ ಕಾಕದೃಷ್ಟಿ ಮಾತ್ರ.

ಈಗ ಗಿರಿಯ ಪಾಡಿಗೆ ಗಿರಿ ಇದೆ. ದಟ್ಟ ನಿಸರ್ಗ ತಾಣವಾಗಿದ್ದ ಇದು ಸಾಧು ಸಂತರಿಗೆ ಆಪ್ಯಾಯಮಾನವಾಗಿತ್ತು. ಈಗ ಅಲ್ಲಿ ಸಂತರೂ ಇಲ್ಲ, ಶಾಂತಿಯೂ ಇಲ್ಲ. 180-200 ಮಿಲಿಯನ್ ಟನ್ ಕಬ್ಬಿಣದ ಅದಿರು ದೊರೆಯುವ ಈ ಶ್ರೇಣಿಯ ಗರ್ಭವನ್ನು ನಿತ್ಯವೂ ಬಗೆಯಲಾಗುತ್ತಿದೆ. ಹನ್ನೆರಡು ವರ್ಷಕ್ಕೊಮ್ಮೆ ಅರಳುವ ಕುರುಂಜಿ ಹೂವು ಗಿರಿಯಲ್ಲಿನ ವಿವಾದದ ನಡುವೆಯೂ ಅರಳಿ ನಿಲ್ಲುತ್ತದೆ. ನವೆಂಬರ್-ಡಿಸೆಂಬರ್ ವೇಳೆ ಶೋಭಾಯಾತ್ರೆ ಮಾಡಿ ಹಠ ಸಾಧಿಸುವ ಒಂದು ಗುಂಪು, ಅದನ್ನು ತಡೆಯುತ್ತೇವೆ ಎಂದು ಮತ್ತೊಂದು ಗುಂಪು ವರ್ಷಕ್ಕೊಮ್ಮೆ ವಿವಾದ ಕೆದಕಿ ಗಲಾಟೆಯನ್ನು ಸದಾ ಜಾಗೃತವಾಗಿ ಇಟ್ಟಿರುತ್ತಿವೆ. 1989 ಫೆಬ್ರವರಿ 25 ಮತ್ತು 2006 ಮಾರ್ಚ್ 13 ರಂದು ಆದೇಶ ಹೊರಡಿಸಿದ ಸರ್ಕಾರ ಸ್ಥಳದ ಯಥಾಸ್ಥಿತಿ ಕಾಯ್ದುಕೊಳ್ಳಲು ಹೇಳಿದೆ. ಈ ನಡುವೆ ವಿವಾದ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿ ಕುಳಿತಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವುದು ಎಂದರೆ ದತ್ತ ಜಯಂತಿಗೆ ಅವಕಾಶ, ಶೋಭಾಯಾತ್ರೆಗೆ ನಿಷೇಧ. ಈ ನಡುವೆ ಶೋಭಾಯಾತ್ರೆ ಮಾಡುವುದರಿಂದ ಅಥವಾ ತಡೆಯುವುದರಿಂದ ಯಾರಿಗೆ ಏನು ಶೋಭೆ ಎಂಬುದು ಹಿಂದೂ-ಮುಸ್ಲಿಂ ಹಟವಾದಿ, ರಾಜಕಾರಣಿ ಅಥವಾ ಬುದ್ಧಿಜೀವಿಗಳ ವರ್ಗಕ್ಕೆ ಸೇರದ ಜನ ಸಾಮಾನ್ಯರಿಗೆ ಅರ್ಥವೇ ಆಗುತ್ತಿಲ್ಲ. 2018ರಲ್ಲಿ ಈ ಆದೇಶವನ್ನು ನ್ಯಾಯಾಲಯ ವಜಾಮಾಡಿದೆ. ನಿಸರ್ಗದ ಪ್ರಶಾಂತಿಯ ಕಾರಣಕ್ಕೆ ಧಾರ್ಮಿಕ ಸ್ಥಳವಾಗಿ, ಧಾರ್ಮಿಕ ಕಾರಣದಿಂದ ರಾಜಕೀಯ ನೆಲೆಯಾಗಿ ಮಾರ್ಪಟ್ಟ ಈ ತಾಣವನ್ನು ಮತ್ತೆ ನಿಸರ್ಗಾರಾಧನೆಯ ತಾಣವಾಗಿಸುವುದೇ ಈಗಿನ ವಿವಾದ ಪರಿಹರಿಸುವ ಶಾಶ್ವತ ಸೂತ್ರ.

ಸರ್ಕಾರದ ಸಾರ್ವಭೌಮ ಹಿಡಿತ ಇರುವ ಈ ತಾಣವನ್ನು ಅರಣ್ಯ, ಪ್ರವಾಸೋದ್ಯಮ ಅಥವಾ ತೋಟಗಾರಿಕೆ ಇಲಾಖೆಗೆ ವಹಿಸಿ ಸುಂದರ ಉದ್ಯಾನವನ, ಐತಿಹಾಸಿಕ ಮತ್ತು ಅಪೂರ್ವ ನಿಸರ್ಗಧಾಮವನ್ನು ನಿರ್ಮಿಸಲಿ. ಯಾತ್ರೆ, ಪೂಜೆ, ಬಲಿಗಳೆಲ್ಲ ಇಲ್ಲದಂತಾಗಿ ಮೂಲ ನೈಸರ್ಗಿಕ ಯಥಾಸ್ಥಿತಿ ಬರುವ ವಾತಾವರಣ ರೂಪುಗೊಳ್ಳಲಿ. ಮಬ್ಬು ಕವಿದ ಮುಂಜಾವಿನಲ್ಲಿ ಜನ ಸೂರ್ಯೋದಯಕ್ಕೆ ಕಾಯುವಂತಾಗಲಿ. ಚಿಲ್ಲರೆ ಜಾತಿ, ಮತಗಳನ್ನು ಮೀರಿ ಇಂಥ ಸಂಕಲ್ಪ ಹೊತ್ತು ಸರ್ಕಾರ ಕಾರ್ಯೋನ್ಮುಖವಾದರೆ ಗಲಭೆ ಮಾಡುವ ಧೈರ್ಯ ಮತ್ತು ನೈತಿಕತೆ ಯಾರಿಗೂ ಬಾರದು.

No comments:

Post a Comment