Monday, 28 March 2022

ಗ್ರಾಹಕರಿಗೆ ಗ್ಯಾಸ್ ಟ್ರಬಲ್


ಇದೀಗ ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಮೇಲೆ 220 ರೂ.ಗಳನ್ನು ದಿಢೀರನೆ ಏರಿಸಿದೆ. ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ಈಗ ರೂ.1268. ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂ ಕೋರ್ಟ್ ಏನೇ ಹೇಳಿರಲಿ. ಸರ್ಕಾರ ಮಾತ್ರ ಗ್ಯಾಸ್ ಸಬ್ಸಿಡಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಿದೆ. ಇದನ್ನು ಗ್ಯಾಸ್ ಬೆಲೆ ಏರಿಕೆಯೊಂದಿಗೆ ಸಮೀಕರಿಸಿ ನೋಡಿದರೆ ಗ್ಯಾಸ್ ಬೆಲೆ ಏರಿಕೆಯ ಹಿಂದೆ ಸರ್ಕಾರದ ಉದ್ದೇಶ ಏನಿದೆ ಎಂಬುದು ಅರ್ಥವಾಗುತ್ತದೆ.

ಸೀಮೆಎಣ್ಣೆ, ಪೆಟ್ರೋಲು ಮುಂತಾದ ವಸ್ತುಗಳಿಗೆ ಸಬ್ಸಿಡಿ ನೀಡುವಂತೆ 1984ರಲ್ಲಿ ಜೆ ಎಸ್ ಐಯ್ಯರ್ ನೇತೃತ್ವದ ತೈಲ ವೆಚ್ಚ ಪರಿಶೀಲನಾ ಸಮಿತಿ ಸಲಹೆ ನೀಡಿತ್ತು. ಮಧ್ಯಮ ವರ್ಗದ ಮತಗಳ ಮೇಲೆ ಕಣ್ಣಿಟ್ಟ ಸರ್ಕಾರಕ್ಕೂ ಇಂಥದ್ದೇ ವರದಿ ಬೇಕಿತ್ತು. ಇದನ್ನು ಯಥಾವತ್ ಅನುಸರಿಸಿದ ಸರ್ಕಾರಕ್ಕೆ ಆರಂಭದಲ್ಲಿ ಉತ್ಸಾಹವೇನೋ ಕಾಣಿಸಿತು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ವಾಸ್ತವ ದರ ಏನು ಎಂಬುದನ್ನು ಜನರಿಂದ ಮರೆಮಾಚಿ ದೇಶೀ ತೈಲ ಬಳಕೆಗೆ ಸಬ್ಸಿಡಿ ಮೂಲಕ ಉತ್ತೇಜನ ನೀಡಿತು. ದುಪ್ಪಟ್ಟು ದರ ತೆತ್ತು ತರುವುದು, ತೈಲ ಎಂದರೆ ನೀರಿನಷ್ಟು ಅಗ್ಗ ಎಂಬಂತೆ ಇಲ್ಲಿ ಬೇಕಾಬಿಟ್ಟಿ ಹಂಚುವುದು ಮಾಡತೊಡಗಿತು. ಜನರೂ ಪೆಟ್ರೋಲ್ ಮಹತ್ವ ತಿಳಿಯದೇ ಮನಬಂದಂತೆ ಬಳಸತೊಡಗಿ ಅದಕ್ಕೇ ಹೊಂದಿಕೊಂಡುಬಿಟ್ಟರು. 1984ರಿಂದ ಕೊಡುತ್ತ ಬಂದ ಸಬ್ಸಿಡಿಯ ಹೊರೆಯನ್ನು ಸರ್ಕಾರ ಹೊರಲಾಗದೇ ಈಗ ಒದ್ದಾಡುವ ಸ್ಥಿತಿ ಬಂದಿದೆ. ಜನರಿಗೆ ದಿಢೀರನೆ ಸತ್ಯ ಹೇಳುವಂತಿಲ್ಲ, ಹೇಳಿದರೆ ಇಷ್ಟು ದಿನ ಯಾಕೆ ಸತ್ಯ ಮುಚ್ಚಿಟ್ಟಿರಿ ಎನ್ನುತ್ತಾರೆ. ಲೋಕಸಭಾ ಚುನಾವಣೆ ಬೇರೆ ಹತ್ತಿರವಿದೆ. ಒಂದು ಸಮಿತಿಯ ಶಿಫಾರಸಿನಂತೆ ಜಾರಿಗೆ ಬಂದ ಯೋಜನೆಯನ್ನು ಮತ್ತೊಂದು ಸಮಿತಿಯ ಶಿಫಾರಸಿನಂತೆ ಇಲ್ಲವಾಗಿಸಬೇಕು! ಅದಕ್ಕೆ ಕೇಂದ್ರ ಸರ್ಕಾರ 2005ರಲ್ಲಿ ಸಿ ರಂಗರಾಜನ್ ಸಮಿತಿ ನೇಮಿಸಿತು. 2006 ಫೆಬ್ರವರಿಯಲ್ಲಿ ಅದರ ಅಂತಿಮ ವರದಿ ಸಲ್ಲಿಕೆಯಾಗಿದೆ. ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಅದು ಖಡಾ ಖಂಡಿತವಾಗಿ ಹೇಳಿದೆ. 2012ರಲ್ಲಿ ಸಬ್ಸಿಡಿ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಉಂಟಾದ ನಷ್ಟ 43,580 ಕೋಟಿ ರೂ! ಸಬ್ಸಿಡಿಯಿಂದಾಗಿ 2011ರಲ್ಲಿ ಕೇವಲ ಇಂಡಿಯನ್ ಆಯಿಲ್ ಕಂಪನಿಗೆ ಆದ ನಷ್ಟ 300 ಕೋಟಿ ರೂ! ಹೀಗಾಗಿ ಹಂತ ಹಂತವಾಗಿ ಆಧಾರದಂಥ ಸಬೂಬುಗಳ ಮೂಲಕ ಸಬ್ಸಿಡಿ ಇಲ್ಲವಾಗಿಸುವ ಉದ್ದೇಶ ಇಂಥ ಬೆಲೆ ಏರಿಕೆಯ ಹಿಂದಿದೆ. ಸಬ್ಸಿಡಿ ಪಡೆದು ಅದಕ್ಕೆ ಹೊಂದಿಕೊಂಡ ಜನ ಬೆಲೆ ಏರಿಕೆ ಮೂಲಕ ವಾಸ್ತವ ಬೆಲೆಗೆ ಹೊಂದಿಕೊಳ್ಳುವಂತೆ ಮಾಡಲಾಗುತ್ತಿದೆ. ಹೀಗಾಗಿ ಈಗ ಅಡುಗೆ ಸಿಲಿಂಡರ್‍ಗೆ ಸಬ್ಸಿಡಿ ರಹಿತ ಮೂಲ ಬೆಲೆ 1268ರೂ.ಗಳನ್ನು ಗ್ಯಾಸ್ ವಿತರಕರಿಗೆ ಗ್ರಾಹಕರು ಕಟ್ಟಬೇಕು. ಗ್ರಾಹಕರ ಆಧಾರ್ ಇರುವ ಬ್ಯಾಂಕ್ ಖಾತೆಗೆ ಸರ್ಕಾರ ನೇರ ಸಬ್ಸಿಡಿ ಹಣ (ಸುಮಾರು 800 ರೂ.) ವರ್ಗಾವಣೆ ಮಾಡುತ್ತದೆ. ಈ ವ್ಯವಸ್ಥೆ ಈಗಲೇ ಕೆಟ್ಟಿದೆ. ಬಹಳಷ್ಟು ಜನರಿಗೆ ಬ್ಯಾಂಕ್ ಖಾತೆಗೆ ಹಣವೇ ಬಂದಿಲ್ಲ, ಬಹುಶಃ ಬರುವುದೂ ಇಲ್ಲ! ಸುಪ್ರೀಂ ಕೋರ್ಟ್ ಬೇಡ ಎಂದರೂ ಸರ್ಕಾರ ಆಧಾರ್ ಎನ್ನುತ್ತಿರುವುದು ಸಬ್ಸಿಡಿ ಕೈಬಿಡಲಿರುವ ದೂರಾಲೋಚನೆಯ ಕಾರಣದಿಂದ. ಸದ್ಯ ವರ್ಷಕ್ಕೆ ಒಂಬತ್ತೇ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಎಂದಿರುವ ಸರ್ಕಾರ ನಿಧಾನವಾಗಿ ವರ್ಷಕ್ಕೆ ಒಂದೂ ಸಬ್ಸಿಡಿ ಗ್ಯಾಸ್ ಇಲ್ಲವೆನ್ನಲಿದೆ.   

ಗ್ಯಾಸ್ ಟ್ರಬಲ್ ನಮಗೆ ಇನ್ನೂ ಹೆಚ್ಚಾಗಲಿದೆ. ಇದೇ ಜನವರಿ 15ರಿಂದ ದೇಶಾದ್ಯಂತ ಗ್ಯಾಸ್ ವಿತರಕರು ತೈಲ ಕಂಪನಿಗಳೊಂದಿಗೆ ಅಸಹಕಾರ ಚಳವಳಿಯನ್ನೂ 19ರಿಂದ ಅನಿರ್ದಿಷ್ಟಾವಧಿ ಗ್ಯಾಸ್ ವಿತರಣೆ ಸ್ಥಗಿತವನ್ನೂ ಮಾಡಲಿದ್ದಾರೆ! ಅವರ ಜಗಳ ನೇರ ಗ್ರಾಹಕರಿಗೆ ತಗುಲಲಿದೆ. ಅವಧಿ ಮುಗಿದ ಸಿಲಿಂಡರ್ ವಿತರಣೆ, ಕಡಿಮೆ ತೂಕದ ಗ್ಯಾಸ್ ವಿತರಣೆಗಳ ತಪ್ಪನ್ನು ತಮ್ಮ ಮೇಲೆ ಕಂಪನಿಗಳು ಹಾಕುತ್ತಿವೆ, ಸಬ್ಸಿಡಿ ಗ್ಯಾಸ್‍ಗಳ ಕಾಳಸಂತೆ ಮಾರಾಟ ತಡೆ ಮೊದಲಾದವಕ್ಕೆ ಸರಿಯಾದ ಮಾರ್ಗಸೂಚಿ ಸಿದ್ಧಪಡಿಸಿ ಎಂಬುದು ವಿತರಕರ ಬೇಡಿಕೆ. 2011ರ ಗಣತಿಯಂತೆ ದೇಶದ ಜನಸಂಖ್ಯೆಯಲ್ಲಿ ಶೇ.28.5 ಅಡುಗೆ ಅನಿಲ ಗ್ರಾಹಕರಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನೇತಾಗಳಿಗೂ ಇದು ಟ್ರಬಲ್ಲೇ! ಆದರೇನು ಒದ್ದಾಡುವವರು ಮಾತ್ರ ಜನಸಾಮಾನ್ಯರು.

ಅವಾಸ್ತವ ದರವನ್ನು ಬಿಂಬಿಸಿ ಜನರನ್ನು ಮರುಳುಗೊಳಿಸಿದ ಸರ್ಕಾರ ಹೀಗೆ ದಿಢೀರನೆ ಬೆಲೆ ಏರಿಸುತ್ತ ಹೋದರೆ ಜನಸಾಮಾನ್ಯರ ಕತೆ ಏನಾಗಬೇಡ? ಸರ್ಕಾರಕ್ಕೆ ಇರುವಂತೆ ಜನರಿಗೂ ಬಜೆಟ್ಟು ಇರುತ್ತದೆ. ಕೆಲವರದು ಮಾಸಿಕ ಬಜೆಟ್ಟಾದರೆ ಬಹುಪಾಲು ಜನರದು ನಿತ್ಯ ಬಜೆಟ್ಟು! ಅಂದಂದಿನ ವೆಚ್ಚ ಸರಿದೂಗಿಸುವ ಜನರೇ ನಮ್ಮಲ್ಲಿ ಹೆಚ್ಚು. ಹೀಗಿದ್ದಾಗ ಅವರ ಲೆಕ್ಕಾಚಾರಗಳೆಲ್ಲ ಬುಡಮೇಲಾಗಿ ಜೀವನ ಅಯೋಮಯವಾಗುತ್ತದೆ. ಗ್ಯಾಸ್-ಪೆಟ್ರೋಲ್ ಬೆಲೆಯಲ್ಲಿ ರೂಪಾಯಿ ಹೆಚ್ಚಾದರೂ ಎಲ್ಲ ಸಾಮಗ್ರಿಗಳ ಬೆಲೆಯೂ ಹೆಚ್ಚುತ್ತದೆ.

ಅಡುಗೆ ಅನಿಲ ಸಿಲಿಂಡರ್ ಬಳಸುವವರಿಗೆ ಬೆಲೆಯ ಸತ್ಯವನ್ನು ಮಾತ್ರವಲ್ಲ, ಬಳಕೆಯ ಸತ್ಯವನ್ನೂ ಸರ್ಕಾರ ಇದುವರೆಗೂ ತಿಳಿಸಿಲ್ಲ. ಔಷಧಕ್ಕೆ ಇರುವಂತೆ ಸಿಲಿಂಡರ್‍ಗೂ ಮುಕ್ತಾಯ ದಿನಾಂಕ ಇರುತ್ತದೆ. ಸಿಲಿಂಡರ್ ಮೇಲ್ಭಾಗದ ಗೋಲಾಕಾರದ ಹಿಡಿಕೆಯನ್ನು ಮೂರು ಕಂಬಿಗಳ ಮೇಲೆ ನಿಲ್ಲಿಸಿರುತ್ತಾರೆ. ಆ ಕಂಬಿಗಳಲ್ಲೊಂದರ ಒಳಭಾಗದಲ್ಲಿ ಕಪ್ಪು ಬಣ್ಣದಲ್ಲಿ ಎ, ಬಿ ಸಿ, ಡಿ ಅಕ್ಷರಗಳ ಮುಂದೆ ವರ್ಷದ ಎರಡು ಸಂಖ್ಯಾ ಸೂಚಕವಿರುತ್ತದೆ. ಎ ಎಂದರೆ ವರ್ಷದ ಮೊದಲ ತ್ರೈಮಾಸಿಕ (ಜನವರಿ-ಮಾರ್ಚ್), ಬಿ ಎರಡನೆಯ, ಸಿ ಮೂರನೆಯ ಹಾಗೂ ಡಿ ನಾಲ್ಕನೆಯ ತ್ರೈಮಾಸಿಕ. ಉದಾಹರಣೆಗೆ ಇಂದು ವಿತರಕರು ನಿಮಗೆ ನೀಡಿದ ಸಿಲಿಂಡರ್ ಮೇಲೆ ಡಿ-13 ಎಂದಿದ್ದರೆ ಅದು 2013ರ ಡಿಸೆಂಬರ್‍ಗೆ ಅವಧಿ ಮುಗಿಸಿದೆ ಎಂದರ್ಥ. ಅದು ಅಪಾಯಕಾರಿ ಸಿಲಿಂಡರ್! ಈ ಮಾಹಿತಿ ಸಿಲಿಂಡರ್ ಬಳಸುವ ಶೇ99 ಜನರಿಗೆ ಇದುವರೆಗೂ ತಿಳಿದೇ ಇಲ್ಲ!    

ಅಡುಗೆ ಅನಿಲ ಇಂದಲ್ಲ ನಾಳೆ ಮುಗಿದು ಹೋಗುವಂಥದ್ದು. 1912ರಲ್ಲಿ ಮೊದಲು ವಾಣಿಜ್ಯ ಬಳಕೆಯಾದ ಇದು ಜಗತ್ತಿನ ಲಭ್ಯ ಇಂಧನ ಮೂಲಗಳಲ್ಲಿ ಶೇ.3 ರಷ್ಟನ್ನು ಮಾತ್ರ ಪೂರೈಸುತ್ತದೆ. ನಮ್ಮ ದೇಶದಲ್ಲಿ ಶೇ.60 ಅಗತ್ಯ ತೈಲ ಆಮದಾಗಿಯೇ ಬರಬೇಕು. ನೈಸರ್ಗಿಕ ಪಳೆಯುಳಿಕೆ ಮೂಲದ ಇಂಧನದ ಬಗ್ಗೆ ಪರಿಸರವಾದಿಗಳ ಕೆಂಗಣ್ಣೂ ಇದೆ. ಹೆಚ್ಚಿನ ಪ್ರಮಾಣದ ಹಸಿರುಮನೆ ಅನಿಲ ಉಗುಳುವ ಪಳೆಯುಳಿಕೆ ಮೂಲದ ಇಂಥ ಇಂಧನಗಳಿಗೆ ಪರ್ಯಾಯವಾಗಿ ಸೋಲಾರ್, ನ್ಯೂಕ್ಲಿಯರ್, ಪವನ, ಜಿಯೋಥರ್ಮಲ್ ಮೊದಲಾದ ಮೂಲಗಳನ್ನು ಜಗತ್ತು ಅನುಸರಿಸತೊಡಗಿದೆ. ಕ್ಯೋಟೋ ಒಪ್ಪಂದದ ತರುವಾಯ ಇಂಥ ಇಂಧನಗಳ ಬಳಕೆಗೆ ಉತ್ತೇಜನ ನೀಡುವಂತೆ ಸಬ್ಸಿಡಿ ಬೇರೆ ಕೊಡುತ್ತೀರಾ ಎಂದು ಪ್ರಪಂಚದ ಇತರೆ ದೇಶಗಳು ಭಾರತವನ್ನು ದೂಷಿಸುತ್ತಿವೆ. ಇಂಥ ದೂಷಣೆ, ಹಣದ ಹೊರೆಗಳಿಂದ ಜರ್ಜರಿತವಾದ ಕೇಂದ್ರ ಸರ್ಕಾರ ಈಗ ಕಣ್ಣು ಬಿಟ್ಟಿದೆ. ದೂರದೃಷ್ಟಿ ಇಟ್ಟುಕೊಂಡು ವ್ಯಾವಹಾರಿಕವಾಗಿ ನೋಡದೇ ರಾಜಕೀಯವಾಗಿ ನೋಡಿದ ಪರಿಣಾಮವನ್ನು ನಾವು ಇಂದು ಅನುಭವಿಸಬೇಕಾಗಿದೆ. ಅವಸರದ, ಅಪ್ರಾಯೋಗಿಕ, ಜನಪ್ರಿಯ ಯೋಜನೆಗಳ ಹಣೆಬರಹವೇ ಇಷ್ಟು. ನಮ್ಮ ಇಂದಿನ ಸರ್ಕಾರದ ಅನ್ನಭಾಗ್ಯ, ಶಾದಿ ಭಾಗ್ಯ ಮೊದಲಾದ ಭಾಗ್ಯಗಳೆಲ್ಲ ಸದ್ಯದ ಭವಿಷ್ಯದಲ್ಲಿ ತಿರುಕನ ಭಾಗ್ಯದ ಕನಸೇ ಆಗುತ್ತವೆ. ಇವೆಂದೂ ಶಾಶ್ವತವಲ್ಲ. ತಾತ್ಕಾಲಿಕ ರಾಜಕೀಯ ಲಾಭದವು, ಆದರೆ ಜನರ ಪಾಲಿಗೆ ದೀರ್ಘಕಾಲಿಕ ಶಾಪವಾಗುವಂಥವು. ನಾವು ಈಗ ಅನುಭವಿಸುತ್ತಿರುವ ಗ್ಯಾಸ್ ಟ್ರಬಲ್ ಕಥೆಯ ಪಾಠ ಇದು.





ಪುಸ್ತಕ:
ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment