ಮಲೆಯ ಮಹದೇಶ್ವರ ಕಾವ್ಯದ ಎರಡು ಸಮಗ್ರ ಸಂಗ್ರಹಗಳು ಸದ್ಯ ನಮ್ಮ ಮುಂದಿವೆ. ಮೊದಲನೆಯದು ಪಿ ಕೆ ರಾಜಶೇಖರ್ ಅವರು ಸಂಗ್ರಹಿಸಿದ ಎರಡು ಸಂಪುಟಗಳ ಕಾವ್ಯ. ಇದನ್ನು ಕನ್ನಡ ಸಂಸ್ಕøತಿ ಇಲಾಖೆ 2006ರಲ್ಲಿ ಮರುಮುದ್ರಿಸಿದೆ. ಎರಡನೆಯದು ಕನ್ನಡ ವಿಶ್ವವಿದ್ಯಾಲಯ 1997ರಲ್ಲಿ ಪ್ರಕಟಿಸಿದ ಕೆ ಕೇಶವನ್ ಪ್ರಸಾದ್ ಅವರು ಸಂಗ್ರಹಿಸಿದ ಮಲೆ ಮಾದೇಶ್ವರ ಏಕ ಸಂಪುಟ. ಇವೆರಡೂ ಸಂಪುಟಗಳಲ್ಲದೇ ಇಂಥ ಕಾವ್ಯದ ಬಗ್ಗೆ ಮೊದಲ ಬಾರಿ ಗಮನ ಸೆಳೆದ 1979ರಲ್ಲಿ ಮೈಸೂರು ವಿವಿ ಪ್ರಕಟಿಸಿದ ಜೀ ಶಂ ಪರಮಶಿವಯ್ಯನವರ ‘ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು’ ಗ್ರಂಥದಲ್ಲಿಯೂ ಮಲೆಯ ಮಾದೇಶ್ವರ ದೇವರಗುಡ್ಡರ ಸಂಪ್ರದಾಯ ಎಂಬ ಶೀರ್ಷಿಕೆಯಡಿ ಈ ಕಾವ್ಯದ ಅಸಮಗ್ರ ವಿವರಗಳು ಲಭಿಸುತ್ತವೆ. ಈ ಎಲ್ಲ ಸಂಗ್ರಹಗಳಲ್ಲಿ ಕಥಾ ಸೂತ್ರ ಒಂದೇ ರೀತಿಯಲಿದ್ದರೂ ಭಿನ್ನ ವಕ್ತೃಗಳು, ಕಾವ್ಯ ಸಂಗ್ರಹದ ಕಾಲ, ಪ್ರದೇಶಗಳ ಭಿನ್ನತೆಯಿಂದ ವಿವರಣೆ ಮತ್ತು ವಿಸ್ತರಣೆಗಳ ಜೊತೆಗೆ ಭಾಷೆಯೂ ವ್ಯತ್ಯಾಸಪಡೆದಿರುವುದನ್ನು ಗಮನಿಸಬಹುದು. ಪ್ರಸ್ತುತ ಲೇಖನದಲ್ಲಿ ಈ ಮೂರೂ ಸಂಗ್ರಹಗಳ ನೆರವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ.
ಸಂಕಮ್ಮ ಮತ್ತು ನೀಲಯ್ಯ ದಂಪತಿಗೆ ಮಕ್ಕಳಾಗಿರುವುದಿಲ್ಲ. ತಿಂಗಳಾನುಗಟ್ಟಲೆ ಜೇನುಬೇಟೆಗೆ ಕಾಡಿಗೆ ಹೋಗಲು ಸಿದ್ಧನಾಗುವ ನೀಲಯ್ಯನಿಗೆ ಹೆಂಡತಿ ಸಂಕಮ್ಮನ ಮೇಲೆ ಅನುಮಾನ ಶುರುವಾಗುತ್ತದೆ. ಹೆಂಡತಿಯನ್ನು ನಂಬದ ನೀಲಯ್ಯನಿಗೆ ಆಕೆಯ ಮಾತಿನ ಪ್ರಮಾಣದ ಮೇಲೆ ನಂಬಿಕೆ ಇದೆ. ಹೀಗಾಗಿ ಆತ ಅನ್ಯರಿಗೆ ತಾನು ಒಲಿಯುವುದಿಲ್ಲ ಎಂದು ಭಾಷೆ ಕೊಡುವಂತೆ ಕಾಡುತ್ತಾನೆ. ಸ್ವಂತಿಕೆ, ಸ್ವಾಭಿಮಾನದ ಮೇಲೆ ನಂಬಿಕೆ ಇರುವ ಆಕೆ ಭಾಷೆ ಕೊಡಲು ಒಪ್ಪುವುದಿಲ್ಲ. ಇಬ್ಬರೂ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡು ಹೂಡುವ ಹಠ, ಗಂಡನಾಗಿ ನೀಲಯ್ಯ ಚಲಾಯಿಸುವ ಆಕೆಯ ಮೇಲಿನ ಹಕ್ಕಿನ ಅಧಿಕಾರ, ನೀಡುವ ಚಿತ್ರಹಿಂಸೆ, ಸಹನಶೀಲಳಾಗಿ ಅವನ ಕಾಟವನ್ನು ಸಹಿಸಿಕೊಳ್ಳುತ್ತ, ತವರು ಮನೆದೈವ ಮಾದೇಶ್ವರನ ಮೊರೆಹೋಗಿ ಕಷ್ಟದಿಂದ ಆಕೆ ಪಾರಾಗುವುದು, ಕಾಡು ಕಟ್ಟೋನೂ ಮೋಡ ಕಟ್ಟೋನೂ ಆದ ಸ್ವಾಲಿಗರ ನೀಲಯ್ಯಮಹಾ ಮಾಯಕಾರ ಮಾದೇವನಿಗೆ ಅಂತಿಮವಾಗಿ ಶರಣಾಗುವುದು ಸಂಕಮ್ಮನ ಸಾಲಿನ ಸ್ಥೂಲ ಕಥಾಹಂದರ. ಈ ಸಾಲನ್ನು ಪಾಶ್ಚಿಮಾತ್ಯರಿಂದ ಎರವಲಾಗಿ ಬಂದು ಇಲ್ಲಿನ ಪುರಾಣ, ಸಂಕಥನಗಳ ಸನ್ನಿವೇಶಗಳಲ್ಲಿ ಪಡಿಯಚ್ಚು ಪಡೆಯಲು ಹವಣಿಸುತ್ತಿರುವ ಆಧುನಿಕ ಸ್ತ್ರೀವಾದಿ ನೆಲೆಯಿಂದ ನೋಡಲು ಎಳೆಸಿದವರು ಈ ಕಥಾಭಾಗದ ವಿಶ್ಲೇಷಣೆ ಮಾಡುತ್ತ ಇದರಲ್ಲಿ ಪುರುಷಪ್ರಧಾನ ಸಮಾಜದ ಅಧಿಕಾರ ಸ್ಥಾಪನೆಯ ಚಿತ್ರಣ ಇರುವುದನ್ನು ಗುರುತಿಸಿದ್ದಾರೆ.
ಈ ಸಾಲಿನ ಕಥನವನ್ನು ಅನೇಕರು ವಿವರಿಸಿದ್ದಾರೆ. ಹೆಚ್ಚು ವಿಸ್ತೃತವಾದ ವಿವರ ಇದು: “...ಸಂಕಮ್ಮನ ಬಂಜೆತನಕ್ಕೆ ತಾನೇ ಕಾರಣನಿರಬಹುದೆಂಬ ಒಳದನಿ ಅವನನ್ನು ಈ ಅನುಮಾನಕ್ಕೆ ತಳ್ಳಿರಬಹುದು. ಫಲಾಪೇಕ್ಷೆಯ ತೀವ್ರ ಹಂಬಲದಲ್ಲಿರುವ ಸಂಕಮ್ಮ ಸಹಜವಾಗಿ ಯಾರಿಗಾದರೂ ತನ್ನ ಗೈರು ಹಾಜರಿಯಲ್ಲಿ ಒಲಿದುಬಿಡಬಹುದೆಂಬ ಅನುಮಾನ ಅವನಿಗಿದೆ. ಆದರೆ ಹೆಂಡತಿಯಮಾತಿನಲ್ಲಿ ಅವನಿಗೆ ನಂಬಿಕೆ ಇದೆ. ಅದಕ್ಕಾಗಿ ಅವನು ಸಂಕಮ್ಮನನ್ನು ಭಾಷೆ ಕೊಡುವಂತೆ ಕೇಳುತ್ತಾನೆ. ಇಲ್ಲಿಂದ ಕಥೆ ಬೇರೆಯದೇ ತಿರುವನ್ನು ಪಡೆಯುತ್ತದೆ. ಇದು ಪರಸ್ಪರರ ಸ್ವಾಭಿಮಾನವನ್ನು ಕೆರಳಿಸುವ ಪ್ರಶ್ನೆಯಾಗುತ್ತದೆ. ಏನೂ ತಪ್ಪು ಮಾಡದೆ ಭಾಷೆ ಕೊಡುವ ಅಗತ್ಯವೇನು ಎಂಬುದು ಸಂಕಮ್ಮನ ತರ್ಕ. ಹೇರಲಾಗುತ್ತಿರುವ ಪುರುಷ ಪ್ರಧಾನ ಸಮಾಜದ ಕಟ್ಟುಪಾಡಿನ ಮೌಲ್ಯಗಳನ್ನು ಸಂಕಮ್ಮ ಇಲ್ಲಿ ತೀವ್ರವಾಗಿ ಪ್ರತಿಭಟಿಸುತ್ತಿದ್ದಾಳೆ. ನೀಲಯ್ಯನ ಅನುಮಾನಕ್ಕೆ ರೋಸಿಹೋಗುವ ಅವಳು ನೀನು ಕೊಟ್ಟಿರುವ ತೆರ ಹಿಂತೆಗೆದುಕೊಂಡು ತನ್ನನ್ನು ಬಿಟ್ಟುಬಿಡು ಎನ್ನುವ ಹಂತಕ್ಕೂ ಹೋಗುತ್ತಾಳೆ.ಸ್ವಾತಂತ್ರ್ಯವಿಲ್ಲದ ಇಂಥ ಸಂಬಂಧವನ್ನು ಕಡಿದುಕೊಳ್ಳಲು ಸಿದ್ಧಳಿದ್ದಾಳೆ. ಮದುವೆ ಎಂಬ ಒಪ್ಪಿತ ವ್ಯವಸ್ಥೆಯನ್ನು ಸ್ವೀಕರಿಸಿಯೂ ಅದಕ್ಕೆ ಅಷ್ಟೊಂದು ಮಹತ್ವ ಕೊಡದ ಬುಡಕಟ್ಟೊಂದರ ಪ್ರತಿನಿಧಿಯಾಗಿ ಸಂಕಮ್ಮ ಇಲ್ಲಿ ಕಾಣಿಸಿಕೊಳ್ಳುತ್ತಾಳೆ. ಅವರ ದೃಷ್ಟಿಯಲ್ಲಿ ಮದುವೆ ಎಂಬುದು ಕೂಡಿ ಬಾಳುವ ಸಂಕೇತವೇ ಹೊರತೂ ಅಧಿಕಾರ ಸ್ಥಾಪಿಸುವ ಸಾಂಪ್ರದಾಯಿಕ ವಿಧಿ ಅಲ್ಲ. ಆದರೆ ಕ್ರಮೇಣವಾಗಿ ತನ್ನ ಯಜಮಾನ್ಯತೆಯನ್ನು ಭದ್ರಪಡಿಸಿಕೊಳ್ಳುವ ಮೂಲಕ ಏಕಸ್ವಾಮ್ಯತೆಯನ್ನು ಮೆರೆಯಲು ಹೊಂಚು ಹಾಕುವ ಪುರುಷ ಪ್ರಧಾನ ಸಮಾಜದ ಪ್ರತಿನಿಧಿಯಾಗಿ ಇಲ್ಲಿ ನೀಲಯ್ಯನನ್ನು ನಾವು ಗುರುತಿಸಬೇಕಾಗುತ್ತದೆ. ಅವನಿಗೆ ಸಂಕಮ್ಮ ಕೇವಲ ಹೆಣ್ಣಾಗಿ ಅಥವಾ ಹೆಂಡತಿಯಾಗಿ ಮಾತ್ರ ಕಾಣುತ್ತಿಲ್ಲ. ಸಂಕಮ್ಮ ನೀಲಯ್ಯನ ಆಸ್ತಿಯಾಗಿದ್ದಾಳೆ. ಅವಳು ನೀಲಯ್ಯನ ರಕ್ತವನ್ನು ಮಾತ್ರ ಹಂಚಿಕೊಂಡು ಹುಟ್ಟಬೇಕಾದ ಮಕ್ಕಳಿಗೆ ತಾಯಿಯಾಗಬೇಕಾಗಿದೆ. ಇಲ್ಲಿ ಹೆಣ್ಣು ಮುಕ್ತತೆಗೆ ಹಾತೊರೆದರೆ ಗಂಡು ಕಟ್ಟುಪಾಡಿನ ಬೇಲಿಯನ್ನು ಭದ್ರಪಡಿಸತೊಡಗಿದೆ. ಹಾಗಾಗಿ ಇದು ಮುಕ್ತತೆ ಮತ್ತು ಪಾತಿವ್ರತ್ಯವೆಂಬ ಮೌಲ್ಯಗಳ ನಡುವಿನ ಸಂಘರ್ಷವಾಗಿ ಕಾಣಿಸಿಕೊಳ್ಳತೊಡಗುತ್ತದೆ. ಮುಕ್ತತೆಯನ್ನು ಬಯಸುವ ಮಾತೃ ಮೂಲ ಬುಡಕಟ್ಟಿನ ಪಳೆಯುಳಿಕೆಯಾಗಿ ಸಂಕಮ್ಮ ಗೋಚರಿಸುತ್ತಾಳಾದರೆ, ಒಂದು ಬುಡಕಟ್ಟು ಪುರುಷ ಪ್ರಧಾನ ವ್ಯವಸ್ಥೆಗೆ ಅವಸ್ಥಾಂತರಗೊಳ್ಳುತ್ತಿರುವ ಸಂದರ್ಭದ ಪ್ರತೀಕವಾಗಿ ನೀಲಯ್ಯ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ಪರಸ್ಪರ ವಿರುದ್ಧವಾದ ಎರಡು ಮೌಲ್ಯಗಳ ನಡುವಿನ ಈ ಸಂಘರ್ಷ ಇಲ್ಲಿ ಗಮನ ಸೆಳೆಯುತ್ತದೆ” (ಮಲೆ ಮಾದೇಶ್ವರ, ಹಂಪಿ ವಿವಿ, ಪ್ರಸ್ತಾವನೆ, ಪುಟ15).
ಸಂಕಮ್ಮನ ಸಾಲಿನ ಕಥಾ ಹಂದರ ಸ್ಥೂಲವಾಗಿ ಇರುವುದು ಹೀಗೆ: ಕೊಕ್ಕರ ಕೊನಬೋಳಿ ಬೆಟ್ಟದ ಸೋಲಿಗರ ಬೊಪ್ಪೇಗೌಡನ ಆರು ಮಕ್ಕಳಲ್ಲಿ ಕಿರಿಯವನು ನೀಲೇಗೌಡ. ಇವನೇ ನೀಲಯ್ಯ. ಈ ನೀಲೇಗೌಡ ‘ಅಸಮಾನಕಾರ, ದುಸುಮಾನಕಾರ, ಕಾಡು ಕಟ್ಟೋನು, ಮೇಘ ಕಟ್ಟೋನು’. ಇವನು ಕೋಪಿಷ್ಠ ಮನಸ, ಹೆಚ್ಚಾದ ಲಗ್ನ ಮಾಡಬೇಕು ಅಂತ್ಹೇಳಿ ಅವನ ಮನೆಯವರು ಏಳೇಳು ಹದಿನಾಲ್ಕು ದೊಡ್ಡಿ ತಿರುಗಿದರೂ ಅವನಿಗೆ ಒಪ್ಪುವ ಹೆಣ್ಣು ಸಿಗಲಿಲ್ಲವಾದ ಕಾರಣ ಅವನಿಗೇ ಹೆಣ್ಣು ಹುಡುಕಿಕೊಳ್ಳಲು ಹೇಳುತ್ತಾರೆ. ಮೂಡಲದೊಡ್ಡಿ ದುಂಡೇಗೌಡನ ಮಗಳು “ಶಿವಶರಣೆಯಾದ” ಸಂಕಮ್ಮಳನ್ನು ಆತ ಮೆಚ್ಚುತ್ತಾನೆ. ಹಿರಿಯರು ಒಪ್ಪುತ್ತಾರೆ. ಹೊಲೇರ ಹೊನ್ನಯ್ಯ ಬಂದು ಚಪ್ಪರ ಹಾಕುತ್ತಾನೆ, ಮಡಿವಾಳ ಮಾಚಯ್ಯ ಮಡಿ ಬಟ್ಟೆ ತರುತ್ತಾನೆ, ಕೆಲ್ಸಿ ಕುಳ್ಳಯ್ಯ ಬಾಸಿಂಗ ತರುತ್ತಾನೆ, ವಾಜರ ಮಲ್ಲಯ್ಯ ಮಾಂಗಲ್ಯ ತರುತ್ತಾನೆ, ಕಾಸಿ ಪುರೋಯಿತ್ರು ಸಂಬಂಧ ಮಾಲೆ ಹಾಕಿಸುತ್ತಾರೆ. “ಹೆಣ್ಣು ಗಂಡಿಗೆ ಅಂದರೆ ಈವೊತ್ತು ನಿಮಗೆ ಮನಾ ಬೆರ್ತುಕೊಳ್ಳಬೇಕು... ಗಂಡನಿಗೆ ಹೆಂಡ್ತಿ ಸಾಕ್ಷಿ, ಹೆಂಡತಿಗೆ ಗಂಡನೇ ಸಾಕ್ಷಿ, ಹೆಂಡಿರ ಮಾತ ಗಂಡ ಮೀರಬಾರದು, ಗಂಡನ ಮಾತ ಹೆಂಡ್ತಿ ಮೀರಬಾರದು” (ಪುಟ 138) ಎಂದು ಹೇಳಿ ಒಳ್ಳೇ ಗಳಿಗೆ ನೋಡಿ ಎಳ್ಳು ಜೀರಿಗೆ ಬಿಟ್ಟು ಸಂಪ್ರದಾಯದಂತೆ ಮದುವೆ ಮಾಡಿಸಲಾಗುತ್ತದೆ. ಮದುವೆಯಾಗಿ ಒಂಬತ್ತು ತಿಂಗಳಾದರೂ ಇವರಿಗೆ ಮಕ್ಕಳಾಗಲಿಲ್ಲ. ವಾರಗಿತ್ತಿಯರು “ಹುಟ್ಟೂ ಬಂಜೆ ಸಂಕೆಣ್ಣು, ಮಕ್ಕಾಳ ಫಲವೇ ಮೊದಲಿಲ್ಲ, ಎದ್ದು ಮುಖವ ನೋಡಿದರೆ ನಾವು ಬಂಜೇರಾಗುವೆವು” (ಪುಟ 142) ಎಂದು ಹಂಗಿಸುತ್ತಾರೆ. ಇದರಿಂದ ಬೇಸತ್ತ ಸಂಕಮ್ಮ ಗಂಡನ ಮುಂದೆ ಅಳಲು ತೋಡಿಕೊಳ್ಳುತ್ತಾಳೆ. ಆತ “ಗಂಡಾ ಹೆಂಡತಿ ಅಂದ್ರೆ ಹೆಣ್ಣು ದೇವ್ರು, ಗಂಡು ದೇವ್ರು, ಇವತ್ತು ನಿನ್ನನ್ನಾಡಿದ್ದಾರೆ ನಾಳೆ ನನ್ನನ್ನಾಡ್ತಾರೆ” (ಪುಟ 147) ಎಂದು ಅಣ್ಣ ಅತ್ತಿಗೆಯರ ಜೊತೆ ಇರುವುದೇ ಬೇಡವೆಂದು ಕುಲ ಜಾತಿಯವರ ಮುಂದೆ ಪಂಚಾಯ್ತಿ ಮಾಡಿಸಿ ಬೇರೆ ಮನೆ ಮಾಡಿಕೊಂಡು ಊರಲ್ಲೇ ಬೇರೆ ಇರುತ್ತಾನೆ.
ಕುಲಾಚಾರದಂತೆ ವಾರ್ಷಿಕ ಬೇಟೆಗೆ ಮನೆಯಿಂದ ಒಬ್ಬನಾದರೂ ಆಳು ಒಂಬತ್ತು ತಿಂಗಳು ಹೆಜ್ಜೇನು ಮಲೆಗೆ ಹೋಗುವ ಪದ್ಧತಿ. ಪ್ರತ್ಯೇಕ ಮನೆ ಮಾಡಿದ್ದ ನೀಲಯ್ಯ ಬೇಟೆಗೆ ಹೋಗಲೇಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಬೇಟೆಗೆ ಬಾರದಿದ್ದರೆ “ಹಂತಿ ಪಂತಿಗೆ ಸೇರಿಸ್ಬಾರ್ದು, ಕುಲಾ ಕೂಟಕ್ಕೆ ಸೇರಿಸ್ಬಾರ್ದು, ನಮ್ಮ ದೊಡ್ಡೀವೊಳಗೆ ಬೆಂಕಿ ಬಿಸ್ನೀರ ಕೊಡಬಾರ್ದು” (ಪುಟ 150) ಎಂಬ ಬೆದರಿಕೆಯನ್ನು ಕುಲದವರು ಹಾಕುತ್ತಾರೆ. ಒಂಬತ್ತು ತಿಂಗಳು ಬೇಟೆಗೆ ಹೋಗಲೇಬೇಕಾದಾಗ ಸುಂದರವಾದ ಹೆಂಡತಿಯನ್ನು ಬಿಟ್ಟು ಹೋಗುವುದು ಹೇಗೆಂಬ ಚಿಂತೆ ನೀಲಯ್ಯನನ್ನು ಕಾಡುತ್ತದೆ. ಇಲ್ಲಿ ಭಾವ್ದೀರಿದ್ದಾರೆ, ಮೈದ್ದೀರಿದ್ದಾರೆ, ಹಗೇವ್ರಿದ್ದಾರೆ. ಇಂಥಲ್ಲಿ ಒಂಬತ್ತು ತಿಂಗಳ ಹೆಂಡ್ತಿ ಒಬ್ಬಳನ್ನೇ ಬಿಟ್ಟು ಹೋಗಲಾರೆ ಎಂದು ಚಿಂತಿಸಿ ಅವಳಿಂದ ಬೇರೆ ಪುರುಷರನ್ನು ಕಣ್ಣೆತ್ತಿಯೂ ನೋಡಲಾರೆ ಎಂಬ ಭಾಷೆ ಪಡೆಯಲು ಸಂಕಮ್ಮನ ಬಳಿ ಬರುತ್ತಾನೆ. ಅವಳು ಭಾಷೆ ಕೊಡಲು ನಿರಾಕರಿಸಿದಾಗ ಊರು ಬಿಟ್ಟು ಕಾಡಲ್ಲಿ ಒಂಟಿ ಮನೆ ಮಾಡಲು ನಿರ್ಧರಿಸುತ್ತಾನೆ.
ಬಂಧು ಬಳಗ ಬಿಟ್ಟು ದೂರವಿರಲು ಮನಸಾಗದ ಸಂಕಮ್ಮ ದೂರ ಹೋಗಲು ಮೊದಲು ಒಪ್ಪುವುದಿಲ್ಲ. ಪತಿಗೆ ಪ್ರತಿ ಉತ್ತರ ಕೊಡ್ತೀಯಾ, ಗಂಡನಿಗೆ ದುಂಡಾರೀತಿ ಮಾಡ್ತೀಯಾ ಎಂದು ಆಕೆಯನ್ನು ಬಯ್ಯುತ್ತ “ಎಲ್ಲರ ಮುಂದೆ ಮದ್ವೆ ಆಗಿದ್ದೀನಿ, ನಮ್ಮ ಕುಲದೋರು, ಜಾತಿಯವರು ಸೇರಿಕೊಂಡು ಏಳೂರು ಗಡಿಕಾರ್ರೂವೆ ಹನ್ನೆರಡು ಕಂಬದ ಸಾಕ್ಷಿಯಾಗಿ ಲಗ್ನವಾಗಿದ್ದೀನಿ ಮಡದಿ, ಯಾರೂ ಕೂಡ ಅಡ್ಡಿ ಮಾಡುವ ಹಾಗಿಲ್ಲ” (ಪುಟ-157) ಎಂದು ಕೊನಬೋಳಿ ಬೆಟ್ಟದ ಮೇಲಕ್ಕೆ ಅವಳನ್ನು ಎಳೆದೊಯ್ಯುತ್ತಾನೆ. ಅಲ್ಲಿ ಮತ್ತೆ ಭಾಷೆ ಕೇಳುತ್ತಾನೆ. ಅವಳ ಉತ್ತರ ಒಂದೇ-ಭಾಷೆ ಕೊಡುವುದಿಲ್ಲ. “ಪತಿಗೆ ಪ್ರತಿ ಉತ್ತರ ಕೊಡ್ತಾ ಇದ್ದೀಯೆ, ಇಂಥಾ ಹೆಣ್ಣು ಪ್ರಾಣಿಗೇ ಕೊಡುಬಾರ್ದ ಕೊಲೆ ಕೊಟ್ರೂ ನನಗೆ ದೋಸುವಿಲ್ಲ” ಅನ್ನುತ್ತಾನೆ ನೀಲಯ್ಯ. (ಪುಟ-167) “ಯಜಮಾನ ನಿನ್ನ ಪಾದ ಹೊತ್ತೇನು ದಮ್ಮಯ್ಯ ಈ ಅಡವಿಯಾರಣ್ಯದಲ್ಲಿ ನನಗೆ ಹಿಂದೂಮುಂದೂ ಯಾರೂ ಇಲ್ಲ. ನನ್ನ ಶಿರಸವನ್ನು ತರಿದು ದೊಡ್ಡಿ ಬಾಗ್ಲಿಗೆ ಕಟ್ಟಿದ್ರೂವೆ ಪತಿಗೆ ಭಾಷೆ ಕೊಡೂದಿಲ್ಲ” (ಪುಟ-167) ಅನ್ನುತ್ತಾಳೆ. “ಇಂಥ ಕಾಡು ಸ್ವಾಲುಗನ ಕೈಯಾ ಹಿಡಿದು ಕೆಟ್ಟೇನಲ್ಲ ಧರೆಯಲ್ಲಿ” ಅಂದುಕೊಳ್ಳುತ್ತಾಳೆ ಸಂಕಮ್ಮ.
ತನ್ನ ಮಾತು ಕೇಳದ ಹೆಂಡತಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಬಯಸಿ ಅವಳ ಬಟ್ಟೆ ಬರೆ ಬಿಚ್ಚಿಸಿ ಸೊಪ್ಪಿನ ಉಡುಗೆ ತೊಡಿಸಿದ. ಬಾಯಿಗೆ ಸೂಜಿ ಚುಚ್ಚಿ, ಕಿವಿಗೆ ದಬ್ಬಳ ಚುಚ್ಚಿ, ಕಣ್ಣಿಗೆ ಕಾವಾಡ ಕಟ್ಟಿ ಹಿಂಗೈ ಮುಂಗೈ ಕಟ್ಟಿ ಅವಳನ್ನು ಬೋರಲಾಗಿ ಮಲಗಿಸಿದ. ಅವಳ ಬೆನ್ನ ಮೇಲೆ ಕಲ್ಲು ಗುಂಡು ಇಡಿಸಿದ. ಅಕ್ಕಪಕ್ಕ ಅಲ್ಲಾಡಬಾರದೆಂದು ಸುತ್ತ ನೆಗ್ಗಿಲು ಮುಳ್ಳು ಹಾಸಿದ. ಅವಳ ಮೈಗೆ ಬೆಲ್ಲ ಸವರಿದ. ಮನೆಯ ಕಾವಲಿಗೆ ರಾಕ್ಷಸಿ ಬೊಂಬೆಗಳನ್ನು ಮಾಡಿಟ್ಟ. ಮನೆ ಮುಂದೆ ಎಪ್ಪತ್ತೇಳು ಮಂಡಲ ಬರೆದು ಹೆಜ್ಜೇನು ಮಲೆಗೆ ಹೋದ. ತಾಳಲಾರದ ಹಿಂಸೆಯಿಂದ ಸಂಕಮ್ಮ ನರಳತೊಡಗಿದಳು. ಇರುವೆಗಳು ಅವಳನ್ನು ಮುತ್ತಿದ್ದವು. ತಿರುಪತಿ ವೆಂಕಟರಮಣ, ಕನ್ನಂಬಾಡಿಯ ಗೋಪಾಲ, ಮೇಲ್ಕೋಟೆ ಚೆಲುವರಾಯ, ಮೂಗೂರು ತಿಬ್ಬಾದೇವಿ ಹೀಗೆ ಗಂಡನ ಮನೆಯ ದೇವರುಗಳನ್ನು ನೆನೆದಳು. ಆದರೆ “ಗಂಡನ ಮನೆದೇವ್ರು ಬೆರಳ ತೋರಿದ್ರ ಅಸ್ತ ನುಂಗ್ವಂತ ದೇವ್ರು, ಕಟ್ಟ ಕಡೆಯಲ್ಲಿ ಅವಳು ಅಪ್ಪನ ಮನೆ ದೇವ್ರು ಮಾದಪ್ಪನ ಸ್ಮರಣೆ ಮಾಡಿದಳು” (ಪುಟ-179-80) ಇವಳ ಅಳುವನ್ನು ಕೇಳಿದ ಮಾಯಕಾರ ಮಾದಪ್ಪ ರಕ್ಷಣೆಗೆ ಬಂದ. ನೀಲಯ್ಯನ ಮಾಟವನ್ನು ಕಿತ್ತೆಸೆದ. ಸಂಕಮ್ಮಳಿಗೆ ಸಕಲೈಶ್ವರ್ಯ ದಯಪಾಲಿಸಿದ. ಪಟ್ಟೆ ಸೀರೆ ಒದಗಿತು. ಆಕೆ ಅವನಿಗೆ ಭಿಕ್ಷೆ ನೀಡಲು ಬಂದಾಗ ಬಂಜೆ ಕೈಯ ಭಿಕ್ಷೆ ಬೇಡ ಅಂದ. ಭಾಗ್ಯ ಕೊಟ್ಟ ಭಗವಂತ ಮಕ್ಕಳ ಭಾಗ್ಯ ಕೊಡು ಅಂದಳು. ನನಗೇನು ಕೊಡ್ತೀಯಾ ಅಂದ ಮಾದಪ್ಪ. ಮಕ್ಕಳನ್ನೇ ಭಿಕ್ಷೆ ನೀಡುವುದಾಗಿ ಹೇಳಿದಳು. ಆತ ಕಾಡುಬಾಳೆ ಹಣ್ಣಿನಲ್ಲಿ ಪಿಂಡ ಪರಸಾದ ನೀಡಿದರು (ಪುಟ-259). ಆಕೆ ಗರ್ಭಿಣಿಯಾದಳು. ನೀಲಯ್ಯ ಬೇಟೆಯಿಂದ ಬರುತ್ತಿದ್ದಂತೆ ಏಳುಪ್ಪರಿಗೆ ಮನೆ ನೋಡಿದ. ಹೆಂಡತಿ ದಾರಿ ತಪ್ಪಿದ್ದಾಳೆಂದು ಭಾವಿಸಿದ. ಆಕೆ ಮಾದಪ್ಪ ಕರುಣಿಸಿದ ಭಾಗ್ಯವನ್ನು ವಿವರಿಸಿದಳು. ಆತ ಅದನ್ನು ಪರೀಕ್ಷಿಸಲು ಅವಳನ್ನು ದಿವ್ಯಗಳಿಗೆ ಒಡ್ಡಿದ. ಮಾದೇಶ್ವರನ ಕರುಣೆಯಿಂದ ಅವಳು ಅದನ್ನೆಲ್ಲ ಗೆದ್ದಳು. ನೀಲಯ್ಯ ಮಾದೇಶ್ವರನ ಹಿರಿಮೆಯನ್ನು ಒಪ್ಪಿದ. ಅಷ್ಟರಲ್ಲಿ ಅವಳಿಗೆ ತಿಂಗಳು ತುಂಬಿತ್ತು. ಇಬ್ಬರು ಮಕ್ಕಳನ್ನು ಹಡೆದಳು. ಕಾರಯ್ಯ, ಬಿಲ್ಲಯ್ಯ ಎಂದು ಹೆಸರಿಟ್ಟರು. ಮಾದೇವನಿಗೆ ಸಂಕಮ್ಮ ಕೊಟ್ಟ ಮಾತಿನಂತೆ ಮಕ್ಕಳನ್ನು ಭಿಕ್ಷಕ್ಕೆ ಕೊಡಲು ಮೊದಲು ನೀಲಯ್ಯ ಒಪ್ಪಲಿಲ್ಲ. ಮಾದೇಶ್ವರನ ಪವಾಡಕ್ಕೆ ಮಣಿದು ಅನಂತರ ಇಬ್ಬರೂ ಮಕ್ಕಳನ್ನು ಒಪ್ಪಿಸಿದ. ಅನಂತರ ಇವರಿಗೆ ಮತ್ತೊಂದು ಮಗುವಾಯಿತು. ಅದಕ್ಕೆ ಹಲ್ಲಯ್ಯ ಎಂದು ಹೆಸರಿಟ್ಟರು. ನೀಲಯ್ಯ ಮತ್ತು ಸಂಕಮ್ಮ ಮಗುವಿನೊಂದಿಗೆ ತಮ್ಮ ದೊಡ್ಡಿಗೆ ಹಿಂದಿರುಗಿದರು.
ಪುರುಷ ಪ್ರಧಾನ ಸಮಾಜದ ಮೌಲ್ಯಗಳನ್ನು ಹೇರುವುದು ಕಾವ್ಯದ ಪಠ್ಯದಲ್ಲಿ ಕಾಣಿಸುವುದಿಲ್ಲ. ಇಲ್ಲಿ ಕಾಣಿಸುವುದು ತನ್ನ ಹೆಂಡತಿಯ ಮೇಲೆ ನೀಲಯ್ಯ ತನ್ನ ಹಠವನ್ನು ಹೇರುವ ಯತ್ನ. ಪುರುಷ ಸಮಾಜದ ಹೇರಿಕೆಯನ್ನು ಕಾವ್ಯ ಪ್ರತಿಪಾದಿಸುವುದಾದರೆ ಸಂಕಮ್ಮನ ಪರ ಕಾವ್ಯ ಇರುತ್ತಿರಲಿಲ್ಲ. ಇದರಲ್ಲಿ ಇರುವುದು ಸಂಕಮ್ಮನ ಏಳು ಮತ್ತು ನೀಲಯ್ಯನ ಬೀಳು.ಕಾವ್ಯದಲ್ಲಿ ನೀಲಯ್ಯ ಇಡೀ ಪುರುಷ ಸಮಾಜದ ಪ್ರತಿನಿಧಿಯಾಗಿಯೇನೂ ಕಾಣಿಸಿಕೊಂಡಿಲ್ಲ. ಅವನು ಬೊಪ್ಪೇಗೌಡನ ಕಿರೀಮಗ.ಮಹಾ ಕೋಪಿಷ್ಠ ಮನುಷ್ಯ. ಕುರಿ ಕಾಯುವ ಕೆಲಸ.ಸೋಲಿಗ ಕುಲದಲ್ಲಿರಲಿ, ಕುಟುಂಬದಲ್ಲೂ ಅವನಿಗೆ ಹೇಳಿಕೊಳ್ಳುವ ಮಹತ್ವವಿಲ್ಲ.ಊರ ಹಬ್ಬ ಮಾಡುವ ಸಂದರ್ಭದಲ್ಲಿ ಮನೆಗೊಬ್ಬರಂತೆ ಹೆಜ್ಜೇನುಮಲೆಗೆ ಹೋಗಲೇಬೇಕೆಂಬ ಕಟ್ಟುಪಾಡು ಅವರ ಕುಲ ಬಾಂಧವರದ್ದು. ಸಂಕಮ್ಮನೊಂದಿಗೆ ಬೇರೆ ಮನೆ ಮಾಡಿಕೊಂಡಿದ್ದ ನೀಲಯ್ಯ ಬೇಟೆಗೆ ಬಾರದಿದ್ದರೆ ಬಹಿಷ್ಕಾರ ಹಾಕುವುದಾಗಿ ಪಂಚಾಯ್ತಿ ತೀರ್ಮಾನಿಸುತ್ತದೆ. ಅದನ್ನು ಮೀರಲಾದರ ಸ್ಥಿತಿಯಲ್ಲಿರುವ ಸಾಮಾನ್ಯ ಗಂಡಾಗಿಯೇ ಆತ ಕಾವ್ಯದಲ್ಲಿ ಚಿತ್ರಿತನಾಗಿದ್ದಾನೆ. ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು ಎಂಬುದು ಇವರ ಮದುವೆ ಸಮಯದ ಕಾವ್ಯ ಭಾಗದಲ್ಲೇ ಬರುವ ಮಾತು. “ಗಂಡನಿಗೆ ಹೆಂಡ್ತಿ ಸಾಕ್ಷಿ, ಹೆಂಡತಿಗೆ ಗಂಡನೇ ಸಾಕ್ಷಿ, ಹೆಂಡಿರ ಮಾತ ಗಂಡ ಮೀರಬಾರದು, ಗಂಡನ ಮಾತ ಹೆಂಡ್ತಿ ಮೀರಬಾರದು” ಎನ್ನುತ್ತದೆ ಕಾವ್ಯ (ಪು 138).
ಸಂಕಮ್ಮಳ ಮೇಲೆ ನೀಲಯ್ಯ ಎಸಗುವ ಕ್ರೌರ್ಯ ಆಕೆಯ ಗಂಡನಾಗಿ ತನಗೆ ದತ್ತವಾದ ಅಧಿಕಾರದಿಂದ. ನೀಲಯ್ಯ ಸಹಜ ಕೋಪಿಷ್ಠ ನಿಜ. ಆದರೆ ಆತ ಪೀಡಕನಲ್ಲ. ತನ್ನ ಮಾತನ್ನು ತನ್ನ ಹೆಂಡತಿಯೇ ಕೇಳುತ್ತಿಲ್ಲ, ಹಠ ಮಾಡುತ್ತಿದ್ದಾಳೆ ಎಂಬುದು ಅವನ ಸಿಟ್ಟಿಗೆ ಕಾರಣ. ಆತ ಸಂಕಮ್ಮಳನ್ನು ಬಿಟ್ಟು ಅತ್ತಿಗೆ, ನಾದಿನಿಯರನ್ನು ಬೈದಿದ್ದಾಗಲೀ, ಹಿಂಸಿಸಿದ್ದಾಗಲೀ ಕಾವ್ಯದಲ್ಲಿ ಇಲ್ಲ. ಅಷ್ಟಕ್ಕೂ ನೀಲಯ್ಯನ ಬೇಡಿಕೆ ಬಹಳ ಸಣ್ಣದು. ಭಾಷೆ ಕೊಡು ಎಂದಷ್ಟೇ. ಅಕಸ್ಮಾತ್ ಸಂಕಮ್ಮ ಹೋಗಲಿ ಬಿಡು ಎಂದು ಭಾಷೆ ಕೊಟ್ಟಿದ್ದರೆ? ನೀಲಯ್ಯ ಊರು ಬಿಟ್ಟು ಕಾಡಿನಲ್ಲಿ ಒಂಟಿ ಮನೆ ಮಾಡುತ್ತಲೂ ಇರಲಿಲ್ಲ, ಸಂಕಮ್ಮಳನ್ನು ಸಂಕಷ್ಟಕ್ಕೆ ದೂಡುತ್ತಲೂ ಇರಲಿಲ್ಲ-ಆ ಸಾಧ್ಯತೆಯೇ ಇರುತ್ತಿರಲಿಲ್ಲ. ಮಾದೇಶ್ವರನ ಪವಾಡ ತೋರಿಸುವ ಸನ್ನಿವೇಶವೇ ಸೃಷ್ಟಿಯಾಗುತ್ತಿರಲಿಲ್ಲ.
ನೀಲಯ್ಯ ಒಬ್ಬ ಪುಕ್ಕಲ. ಸಂಕಮ್ಮಳಿಗೆ ಮಕ್ಕಳಾಗದಿರುವುದಕ್ಕೆ ತಾನೇ ಕಾರಣ ಎಂಬುದು ಅವನಿಗೆ ತಿಳಿದಿದೆ. ಹಾಗಾಗಿಯೇ ಆತ ಮನೆ ಜನ, ಊರ ಜನರೆಲ್ಲರನ್ನೂ ಶಂಕಿಸುತ್ತಾನೆ. ಇವೊತ್ತು ನಿನ್ನ ಬಂಜೆ ಅಂದವರು ನಾಳೆ ನನ್ನ ಆಡಿಕೊಳ್ತಾರೆ ಅನ್ನುತ್ತಾನೆ ನೀಲಯ್ಯ. ಸಮಾಜವನ್ನು ಎದುರಿಸುವ ಧೈರ್ಯ ಅವನಿಗಿಲ್ಲ. ಜೇನುಮಲೆಗೆ ಬೇಟೆಗೆ ಬಾರದಿದ್ದರೆ ಬಹಿಷ್ಕಾರ ಹಾಕುತ್ತೇವೆಂದು ಕುಲದವರು ಹೇಳಿದರೆ ಆತ ಅದಕ್ಕೂ ಹೆದರುತ್ತಾನೆ. ಇಂಥ ನೀಲಯ್ಯ ಪುರುಷ ಪ್ರಧಾನ ಸಮಾಜವನ್ನು ಪ್ರತಿನಿಧಿಸುತ್ತಾನೆಂದರೆ ಅದೊಂದು ವ್ಯಂಗ್ಯವೇ ಆಗುತ್ತದೆ.
ನೀಲಯ್ಯ ಸೋಲಿಗರವನು. ಸಂಕಮ್ಮ ಶಿವಶರಣೆ. ಈಗಾಗಲೇ ಆಕೆಯ ತಂದೆ ಮನೆಯವರು ಮಾದಪ್ಪನ ಒಕ್ಕಲಾಗಿದ್ದಾರೆ. ತನ್ನ ಕಷ್ಟ ಪರಿಹರಿಸುವಂತೆ ಸಂಕಮ್ಮ ದೇವರುಗಳಿಗೆ ಮೊರೆ ಇಡುವಾಗ ನೀಲಯ್ಯನ ಮನೆ ದೇವರುಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ಮಾದಪ್ಪನಿಲ್ಲ. ಆತ ಬರುವುದು ಸಂಕಮ್ಮ ತನ್ನ ತವರು ಮನೆ ದೇವರನ್ನು ನೆನೆದಾಗಲೇ. “ಗಂಡನ ಮನೆ ದೇವರುಗಳು ಬೆರಳು ತೋರಿದ್ರೆ ಹಸ್ತ ನುಂಗುವಂಥವು” ಅವರೆಲ್ಲಿ ನೆರವಾಗ್ತಾರೆ? ಏನಿದ್ರೂ ಮಾದಯ್ಯನೇ ಬರಬೇಕು. ಇದು ಅವನ ಮಹಿಮೆಯನ್ನು ಜನರಿಗೆ ತಿಳಿಸುವ ಒಂದು ಪ್ರಸಂಗ. ಏಳು ಮಲೆ ಕೈಲಾಸಕ್ಕೆ ಸೋಪಾನ ಕಟ್ಟಿಸ್ತೀನಿ, ನಿನಗೆ ದೇವಸ್ಥಾನ, ತೇರು ಮಾಡಿಸ್ತೀನಿ, ಮಕ್ಕಳ ಭಾಗ್ಯ ಕರುಣಿಸು ಎಂದರೆ ಅವೆಲ್ಲ ಬೇಡ ಅನ್ನುವ ಮಾದೇಶ್ವರ ಮಕ್ಕಳ ಭಿಕ್ಷೆ ನೀಡ್ತೀನಿ ಅಂದಾಗ ಮಾತ್ರ ಒಪ್ಪಿಕೊಳ್ಳುತ್ತಾನೆ. ತನ್ನ ಒಕ್ಕಲಿಗೇ ಸೇರಿದ್ದ ಸಂಕಮ್ಮ ಸೋಲಿಗ ನೀಲಯ್ಯನನ್ನು ಮದುವೆಯಾದ ಮೇಲೆ ತನ್ನ ಒಕ್ಕಲಿನ ಹೆಣ್ಣುಮಗಳೊಬ್ಬಳ ಸಂಖ್ಯೆ ಕಡಿಮೆಯಾದುದಕ್ಕೆ ಪ್ರತಿಯಾಗಿ ಅವಳನ್ನು ಮರಳಿ ತನ್ನ ಒಕ್ಕಲು ಮಾಡಿಕೊಳ್ಳುವುದರ ಜೊತೆಗೆ ನೀಲಯ್ಯನನ್ನೂ ಇಬ್ಬರು ಮಕ್ಕಳನ್ನೂ ಸೇರಿಸಿಕೊಂಡು ಒಂದಕ್ಕೆ ಮೂರು ಒಕ್ಕಲು ಮಾಡಿಕೊಳ್ಳುತ್ತಾನೆ ಮಾದೇಶ್ವರ!
ಮಲೆ ಮಹದೇಶ್ವರ ಕಾವ್ಯದ ಮುಖ್ಯ ಉದ್ದೇಶ ಜನರನ್ನು ತನ್ನತ್ತ ಸೆಳೆಯುವುದಾಗಿದೆ. ಈ ಕಾವ್ಯದಲ್ಲಿ ಯಾರು ತನ್ನ ಹಿರಿಮೆ ಮೆಚ್ಚಿ ಒಕ್ಕಲಾಗುವುದಿಲ್ಲವೋ ಅಂಥವರಿಗೆ ಕೊಡಬಾರದ ಕಷ್ಟವನ್ನು ಮಾದೇಶ್ವರ ಕೊಡುತ್ತಾನೆ, ನಂಬಿ ಬಂದವರಿಗೆ ಅನುಗ್ರಹಿಸುತ್ತಾನೆ. ಸಂಕಮ್ಮಳನ್ನು ಅಷ್ಟೈಶ್ವರ್ಯದಲ್ಲಿ ತೇಲಿಸುವ ಆತ ಇಕ್ಕೇರಿ ದೇವಮ್ಮ, ಬೇವಿನ ಹಟ್ಟಿ ಕಾಳಮ್ಮರನ್ನು ತನ್ನ ಒಕ್ಕಲಾಗಿ ಮಾಡಿಕೊಳ್ಳಲು ಅವರಿಗೆ ಇನ್ನಿಲ್ಲದ ಕಷ್ಟ ನೀಡುತ್ತಾನೆ. ಸತ್ತು ಸುಣ್ಣವಾದರೂ ಅವರು ಅವನ ಒಕ್ಕಲಾಗುವುದಿಲ್ಲ. ಮುಡುಕುತೊರೆ ಮಲ್ಲಿಕಾರ್ಜುನ, ಬಿಳಿಗಿರಿ ರಂಗರನ್ನು ಮನೆದೇವರು, ಕುಲದೇವರಾಗಿ ಕಂಡ ಅವರಿಗೆ ಮಾದೇಶ್ವರನ ಹೊಸ ಒಕ್ಕಲು ಒಪ್ಪಿತವಾಗುವುದಿಲ್ಲ. ಅವರಿಗೆ ಒದಗಿದ ಕಷ್ಟಗಳನ್ನು ವರ್ಣಿಸುವ ಈ ಕಾವ್ಯ ಮಾದೇಶ್ವರನ ಹಿರಿಮೆಯನ್ನು ಕೊಂಡಾಡುತ್ತದೆ. ಆತನನ್ನು ನಂಬದವರಿಗೆ ಏನೆಲ್ಲ ಕಷ್ಟ ಒದಗುತ್ತದೆ ಎಂದು ಚಿತ್ರಿಸುತ್ತದೆ.
ಸಂಕಮ್ಮನ ಸಾಲಿನಲ್ಲಿ ಕಂಡುಬರುವ ಹಿಂಸೆ ಮತ್ತು ಅಧಿಕಾರದ ಸಂಗತಿ ಗಂಡ ಮತ್ತು ಹೆಂಡತಿಯ ನಡುವಿನದು. ಇದರಲ್ಲಿನ ವಿವರಗಳನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಇಡೀ ಸಮಾಜ ಮಹಿಳೆಯರ ಮೇಲೆ ಪುರುಷ ಪ್ರಧಾನ ಅಧಿಕಾರ ಮತ್ತು ಹಿಂಸೆಯನ್ನು ಸ್ಥಾಪಿಸಲು ಯತ್ನಿಸಿದೆ ಎಂದು ಹೇಳುವುದು ಸಮಂಜಸವಲ್ಲ. ಏಕೆಂದರೆ ಮಾದೇಶ್ವರ ಕಾವ್ಯದಲ್ಲೇ ನೀಲಯ್ಯನ ಸ್ವಭಾವ ಟೀಕೆಗೆ ಒಳಗಾಗಿದೆ. ಅವನ ಯತ್ನ ಮಾದೇಶ್ವರನ ಮೂಲಕ ಸೋತಿದೆ, ಆತ ಶರಣಾಗುತ್ತಾನೆ, ಸಂಕಮ್ಮ ತನ್ನ ತಾಳ್ಮೆಯಿಂದ ಗೆಲ್ಲುತ್ತಾಳೆ. ಹೀಗಾಗಿ ಮಾದೇಶ್ವರ ಕಾವ್ಯ ಸಂಕಮ್ಮನ ಪರವಾಗಿದೆ. ಜನಪದರಿಗೆ ಸಂಕಮ್ಮನ ಸಾಲು ಹಿಡಿಸಲು ಬಹುಶಃ ಆಕೆಯ ವ್ಯಕ್ತಿತ್ವ ಚಿತ್ರಣ ಕಾರಣ.
ಇಡೀ ಕಾವ್ಯದಲ್ಲಿ ಗಂಡು ಮತ್ತು ಹೆಣ್ಣು ಎಂಬ ಪಕ್ಷಪಾತ ಕಾಣಿಸುವುದಿಲ್ಲ. ಮಾದೇಶ್ವರನಿಂದ ಕಷ್ಟ ಅನುಭವಿಸುವವರಲ್ಲಿ ಜುಂಜೇಗೌಡ, ಶ್ರವಣದೊರೆ, ನೀಲಯ್ಯ, ಸರಗೂರಯ್ಯ, ಮೂಗಪ್ಪ ಮೊದಲಾದ ಪುರುಷ ಪಾತ್ರಗಳು ಇರುವಂತೆ ಇಕ್ಕೇರಿ ದೇವಮ್ಮ, ಬೇವಿನಹಟ್ಟಿ ಕಾಳಮ್ಮರಂಥ ಸ್ತ್ರೀ ಪಾತ್ರಗಳೂ ಇವೆ.
ಮಾದೇಶ್ವರ ಕಾವ್ಯದಲ್ಲಿ ಕಾಣಿಸುವ ಇಕ್ಕೇರಿ ದೇವಮ್ಮನ ಸಾಲಿನಲ್ಲಿ ದುಷ್ಟ ಕೆಲಸಕ್ಕೆ ತಕ್ಕ ಪಾಠ ಕಲಿಸುವ ಸಂದೇಶವಿದೆ. ಬಂದವರಿಗೆಲ್ಲ ವಿಷವಿಕ್ಕುತ್ತಿದ್ದ ದೇವಮ್ಮಳ ಬಳಿ ಭಿಕ್ಷಕ್ಕೆ ಬಂದ ಮಾದೇಶ್ವರನಿಗೆ ಆಕೆ ವಿಷದ ಕಜ್ಜಾಯ ನೀಡುತ್ತಾಳೆ. ದೇವಮ್ಮಳ ತಂಗಿ ಚೆನ್ನಾಜಮ್ಮ ತನಗೆ ಕಜ್ಜಾಯ ಸಿಕ್ಕಿಲ್ಲವೆಂದು ರೋದಿಸುವಾಗ ಅವಳಿಗೆ ಮಾದೇಶ್ವರ ತನ್ನ ಬಳಿ ಇದ್ದ ಕಜ್ಜಾಯ ನೀಡುತ್ತಾನೆ. ಆಕೆ ಅಲ್ಲೇ ಆಟವಾಡುತ್ತಿದ್ದ ತನ್ನ ಅಕ್ಕನ ಮಕ್ಕಳಿಗೆ ಅದನ್ನು ನೀಡುತ್ತಾಳೆ. ಮಕ್ಕಳು ಸಾಯುತ್ತಾರೆ. ತನ್ನ ಮಕ್ಕಳನ್ನು ಚೆನ್ನಾಜಮ್ಮ ವಿಷವಿಕ್ಕಿ ಕೊಂದಳೆಂದು ದೇವಮ್ಮ ಜಗಳ ತೆಗೆಯುತ್ತಾಳೆ. ಪಂಚಾಯ್ತಿ ನಡೆಸಿದ ಮಾದೇಶ್ವರ ದೇವಮ್ಮಳ ತಪ್ಪು ತೋರಿಸಿ ಅವಳ ಹಟ್ಟಿ ಹಾಳು ಮಾಡಿ, ಕೊಟ್ಟಿಗೆ ಬರಿದುಮಾಡುತ್ತಾನೆ. ಚೆನ್ನಾಜಮ್ಮ ಮಾದೇಶ್ವರನ ಒಕ್ಕಲಾಗುತ್ತಾಳೆ.
ಕಡು ಬಡವೆಯಾಗಿದ್ದ ಬೇವಿನಹಟ್ಟಿ ಕಾಳಮ್ಮ ಮಾದೇಶ್ವರನ ಕೃಪೆಯಿಂದ ಸಿರಿವಂತಳಾಗುತ್ತಾಳೆ. ಆದರೆ ಐಶ್ವರ್ಯ ಬಂದಾಗ ಅದರಲ್ಲಿ ಸಮ ಅರ್ಧಪಾಲು ಮಾದೇಶ್ವರನಿಗೆ ಕೊಡಬೇಕಿದ್ದ ತನ್ನ ವಚನವನ್ನು ಕಾಳಮ್ಮ ತಿರಸ್ಕರಿಸುತ್ತಾಳೆ. ಸಮೃದ್ಧ ಎಳ್ಳು ಬೆಳೆಯುತ್ತಿದ್ದ ಕಾಳಮ್ಮ ಒಂದು ಹಿಡಿ ಇರಲಿ, ಒಂದು ಕಾಳು ಎಳ್ಳನ್ನೂ ಮಾದೇಶ್ವರನಿಗೆ ದಾನ ನೀಡಲು ನಿರಾಕರಿಸುತ್ತಾಳೆ. “ನನ್ನ ಏಳು ಜನಮೊಮ್ಮಕ್ಕಳ ತಂದು ಬಾಣಗಾರ ಕಬ್ಬೆ ಹೊಲದಲ್ಲಿ ಸಾಲ ಸಮಾಧಿ ಮಾಡಬುಟ್ಟು ಪೂಜೆ ಮಾಡಬುಟ್ಟು ಹೋದ್ರೂ ಸರಿಯೇ ನಾನು ದಾನ ಕೊಡುವಂತ ಮಗಳಲ್ಲ” (ಪುಟ-349) ಎನ್ನುತ್ತಾಳೆ. ಅವಳಿಗೆ ಇನ್ನಿಲ್ಲದ ಕಷ್ಟ ಕೊಡುತ್ತಾನೆ ಮಾದೇಶ್ವರ. ಸಿರಿ ಸಂಪತ್ತು ನಾಶವಾಗುತ್ತದೆ. ಬಂಧು-ಬಳಗ ನಾಶವಾಗುತ್ತದೆ. ಇಷ್ಟಾದರೂ ಆಕೆ ಮಾದೇಶ್ವರನ ಒಕ್ಕಲಾಗಲು ಒಪ್ಪುವುದಿಲ್ಲ. “ಇನ್ನಾವ ದೇವ್ರಿಗಾದ್ರೂ ಒಕ್ಕಲಾಗ್ತೀನಿ, ನಾಚಿಗಿಲ್ದೆ ನಾನವುನ್ನ ಕೇಳೂದಿಲ್ಲ” (ಪುಟ-367) ಎಂದು ಕೊರವಂಜಿಗೆ ಹೇಳುತ್ತಾಳೆ ಕಾಳಮ್ಮ. ಕಾವ್ಯದಲ್ಲಿ ಅವಳ ಜಿಪುಣತನದ ವರ್ಣನೆ ತೀವ್ರವಾಗಿದೆ. ಸರ್ವಸ್ವವನ್ನೂ ಕಳೆದುಕೊಂಡು ಕಷ್ಟದಲ್ಲಿ ಮಾಡಿಕೊಂಡಿದ್ದ ಅಂಬಲಿ ಕುಡಿಯುವಾಗ ಅದರಲ್ಲಿ ಬಿದ್ದ ನೊಣವನ್ನು ನನ್ನ ಅಂಬಲಿ ಕುಡಿಯೋಕೆ ಬಂದಿದ್ದೀಯಾ ಅನ್ನುತ್ತ ಅದನ್ನೂ ಹಿಂಡುತ್ತಾಳೆ ಕಾಳಮ್ಮ. ಇಂಥ ಪಾತ್ರ ಗಂಡಾಗಲಿ, ಹೆಣ್ಣಾಗಲಿ ಜನಪದರು ಒಪ್ಪುವಂಥದ್ದಲ್ಲ. ದುಷ್ಟತನ ಮೆರೆಯುವ ದೇವಮ್ಮಳಾಗಲಿ, ಕೊಂಚವೂ ಔದಾರ್ಯ, ಕೃತಜ್ಞತೆಗಳಿಲ್ಲದ ಕಾಳಮ್ಮಳಾಗಲಿ ಜನಪದರಿಗೆ ಒಪ್ಪಿತವಲ್ಲ. ಇವರಲ್ಲಿ ಜನಪದರ ಯಾವ ಆದರ್ಶವೂ ಇಲ್ಲ. ಆದರೆ ಸಂಕಮ್ಮಳ ಪಾತ್ರದಲ್ಲಿ ತಾಳ್ಮೆ, ಕಷ್ಟ ಸಹಿಷ್ಣುತೆ, ದೈವ ಶರಣಾಗತಿ, ಕ್ಷಮೆಯಂಥ ಮೌಲ್ಯಗಳನ್ನು ಜನಪದರು ಕಂಡಿದ್ದಾರೆ. ಈ ಕಾರಣಕ್ಕೆ ಕಾವ್ಯದಲ್ಲಿ ಆಕೆಯ ಪಾತ್ರ ಶ್ರೇಷ್ಠವಾಗುತ್ತದೆಯೇ ವಿನಾ ಸ್ತ್ರೀ ಸ್ವಾತಂತ್ರ್ಯದ ಹೋರಾಟವಾಗಲೀ ಪುರುಷರ ವಿರುದ್ಧ ಸೆಟೆದುದಾಗಲೀ ಕಾವ್ಯದಲ್ಲಿ ಇಲ್ಲದ ಸಂಗತಿಗಳು. ಮುಂಗೋಪಿ ನೀಲಯ್ಯನ ಹೆಂಡತಿಯಾದ ಸಂಕಮ್ಮ ಅವನೊಂದಿಗೇ ಸಂಸಾರ ನಡೆಸಿ, ಕಷ್ಟ ತಿಂದು ಮಾದೇಶ್ವರನ ಕೃಪೆಯಿಂದ ಸಭ್ಯ ನೀಲಯ್ಯನೊಂದಿಗೆ ಮತ್ತೆ ಕುಟುಂಬ ಕಟ್ಟಿಕೊಳ್ಳುತ್ತಾಳೆ. ಕೌಟುಂಬಿಕ ಮೌಲ್ಯವನ್ನು ಸಾರುವ ಕಾರಣಕ್ಕೂ ಜನಪದರು ಈ ಭಾಗವನ್ನು ಮೆಚ್ಚಬಹುದು.
ಸಂಕಮ್ಮನ ಸಾಲಿನಲ್ಲಿರುವ ಕೌಟುಂಬಿಕ ಹಿಂಸೆಗಿಂತಲೂ ಜುಂಜೇಗೌಡನ ಸಾಲು, ಶ್ರವಣದೊರೆ ಸಾಲು, ಕಾಳಮ್ಮನ ಸಾಲು ಮತ್ತು ಸರಗೂರಯ್ಯನ ಸಾಲುಗಳಲ್ಲಿ ಕಾಣಿಸುವ ಒಕ್ಕಲು ಮಾಡಿಕೊಳ್ಳುವುದಕ್ಕಾಗಿ ಮಾದೇಶ್ವರ ನೀಡುವ ಹಿಂಸೆ ಹೆಚ್ಚು ತೀವ್ರವಾದುದು ಎನಿಸುತ್ತದೆ. ದೇವಮ್ಮ ಮತ್ತು ಕಾಳಮ್ಮರು ಅನುಭವಿಸುವ ಹಿಂಸೆಗೆ ಕಾವ್ಯದಲ್ಲಿ ಅಂತ್ಯವೇ ದೊರೆತಿಲ್ಲ. ಮುಂಗೋಪಿ ನೀಲಯ್ಯ ತನ್ನ ಹಠ ಬಿಟ್ಟು ಮೆತ್ತಗಾಗಿ ಉತ್ತಮ ವ್ಯಕ್ತಿಯಾಗುವುದು, ಸಂಕಮ್ಮಳ ನಿಷ್ಠೆಗೆ ಬಯಸಿದ ಭಾಗ್ಯ ದೊರೆಯುವುದು ಸಂಕಮ್ಮನ ಸಾಲಿನಲ್ಲಿನ ಹಿಂಸೆಯ ಪರಿಣಾಮವನ್ನು ಕುಗ್ಗಿಸುತ್ತವೆ. ಉದಾರ ಆಶಯದ ಮುಂದೆ ಸಂಕಮ್ಮ ಅನುಭವಿಸಿದ ಹಿಂಸೆ ದೊಡ್ಡದು ಎನಿಸದಿರುವಂತೆ ಕಾವ್ಯ ಕಟ್ಟಿರುವುದೂ ಇದಕ್ಕೆ ಕಾರಣ ಎನಿಸುತ್ತದೆ.
ಪರಾಮರ್ಶನಗಳು:
ಪರಮಶಿವಯ್ಯ ಜೀ ಶಂ, ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, 1979
ರಾಜಶೇಖರ ಪಿ ಕೆ, ಮಲೆಯ ಮಾದೇಶ್ವರ, (ಎರಡು ಸಂಪುಟಗಳು) ಕನ್ನಡ ಮತ್ತು ಸಂಸ್ಕøತಿ ಇಲಾಖೆ, 2006
ಕೇಶವನ್ ಪ್ರಸಾದ್ ಕೆ, ಮಲೆ ಮಾದೇಶ್ವರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1997
ವೆಂಕಟೇಶ ಇಂದ್ವಾಡಿ (ಸಂ), ಮಲೆಯ ಮಾದಪ್ಪನ ಮಹಾಕಾವ್ಯ, ಸಾಂಸ್ಕøತಿಕ ಮುಖಾಮುಖಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2008
ಕನ್ನಡ ವಿಶ್ವಕೋಶ ಸಂಪುಟಗಳು, ಮೈಸೂರು ವಿಶ್ವವಿದ್ಯಾನಿಲಯ

No comments:
Post a Comment