Saturday, 9 April 2022

ಕೆರೆಗಳು ರೂಪಿಸಿದ ನಾಗರಿಕತೆ

ಕ್ರಿ.ಶ. 1411 ರ ಹಂಪಿಯ ಶಾಸನವೊಂದರಲ್ಲಿ ವಿಜಯನಗರದ ಮಂತ್ರಿ ಲಕ್ಷ್ಮೀಧರ ಮಗುವಾಗಿದ್ದಾಗ ಅವನ ತಾಯಿ ಹಾಲೂಡುತ್ತ “ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ ಜೆರೆಯೊಳ್ ಸಿಲ್ಕಿದನಾಥರಂ ಬಿಡಿಸು....’’ ಎಂದು ಅವನ ಕಿವಿಯಲ್ಲಿ ಉಸುರಿದಳೆಂಬ ಉಲ್ಲೇಖವಿದೆ. ಆತ ತಾಯಿ ಮಾತನ್ನು ಸಾರ್ಥಕಗೊಳಿಸಿದ. ಇಂಥ ತಾಯಿ, ಮಕ್ಕಳಿಗೆ ಕನ್ನಡದ ಸಂಸ್ಕೃತಿಯಲ್ಲಿ ಕೊರತೆ ಇರಲಿಲ್ಲ. ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿ ಬೆಳೆದುದೇ ಇಂಥ ತಾಯಂದಿರ ಮಡಿಲಲ್ಲಿ. ಮಾನವ ನಾಗರಿಕತೆ ಹುಟ್ಟಿದ್ದೇ ನದಿ-ನೀರಿನ ಪ್ರದೇಶದಲ್ಲಿ. ನದಿ-ನೀರಿನ ನಾಶದಿಂದಲೇ ಅದು ನಾಶವಾಗಬೇಕು. ಜಲಮೂಲ ನಾಶದಿಂದಲೇ ಇಂದಿನ ನಾಗರಿಕತೆ ನಾಶವಾಗಲಿದೆ ಎಂದೂ ವಿಜ್ಞಾನಿಗಳು ಭವಿಷ್ಯ ಹೇಳುತ್ತಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ಮೂರನೇ ಮಹಾನಗರ ಎನಿಸಿದ ಬೆಂಗಳೂರಿನ ನಾಗರಿಕತೆಯನ್ನೇ ಇದಕ್ಕೆ ನಿದರ್ಶನವಾಗಿ ನೋಡಬಹುದು.

ಬೆಂಗಳೂರು ನಗರಕ್ಕೇನೂ ಭಾರೀ ಪ್ರಾಚೀನ ಇತಿಹಾಸವಿಲ್ಲ. 468 ವರ್ಷಗಳ ಹಿಂದೆ ಕೆಂಪೇಗೌಡ ಕಟ್ಟಿಸಿದ ಊರು ಇದು. ನಂತರ ಹೈದರ್, ಟಿಪ್ಪು ಅವರ ವಶಕ್ಕೆ ಬಂದು ತರುವಾಯ ದೇಶದ ಎಲ್ಲ ಊರುಗಳಂತೆಯೇ ಬ್ರಿಟಿಷರ ಕೈ ಸೇರಿತ್ತು. ಆಗ ಬೆಂಗಳೂರು ಒಳ ಹೊರಗೆ ಇದ್ದ ಕೆರೆಗಳು ಸುಮಾರು ನಾಲ್ಕುನೂರಕ್ಕೂ ಹೆಚ್ಚು ಎಂದು ಲಿಖಿತ ದಾಖಲೆಗಳೇ ಹೇಳುತ್ತವೆ. 1960ರವರೆಗೂ ಬೆಂಗಳೂರಿನಲ್ಲೇ ಹುಟ್ಟಿ ಹರಿಯುತ್ತಿದ್ದ ವೃಷಭಾವತಿ ನದಿ ಇತ್ತು. ಈಗ ಇದು ನಾಗರಿಕತೆಯ ಪಾಪಕೂಪವಾಗಿದೆ.

ಸಮುದ್ರ ಮಟ್ಟದಿಂದ 920 ಮೀಟರ್ ಅಥವಾ 3,018 ಅಡಿ ಮೇಲಿರುವ ಈ ಊರಿನ ಹವಾಮಾನ ಹಿತಕರ. ಸಾಲದ್ದಕ್ಕೆ ಬೇಕಾದಷ್ಟು ಗಿಡಮರಗಳು, ಕೆರೆ, ಕಟ್ಟೆಗಳು. ಅವುಗಳಿಂದ ಗಾಳಿಯಲ್ಲಿ ನೀರಿನಂಶ ಸೇರಿ ತಂಪೆನಿಸುವುದು, ನೀರಿನ ಮೂಲದಿಂದ ಜಲಚರ, ಖಗಚರಗಳ ಸಂಖ್ಯೆ ವೃದ್ಧಿಸಿ ಜೀವವೈವಿಧ್ಯ ರಕ್ಷಣೆಯಾಗುವುದು. ಇದೆಲ್ಲರದ ಕಾರಣ ಜನಜೀವನ ಸುಖಮಯ ಎನಿಸುವುದು. ಒಂದು ಊರಿನಲ್ಲಿ ನಾಗರಿಕತೆ ವೃದ್ಧಿಸಲು ಇನ್ನೇನು ಅನುಕೂಲ ಬೇಕು? ಇವೆಲ್ಲ ಭಾಗ್ಯವಿದ್ದ ಬೆಂಗಳೂರು ಅನೂಹ್ಯವಾಗಿ ಬೆಳೆಯಿತು. ಸುಡುಬಿಸಿಲ ಪ್ರದೇಶಗಳಿಂದ ವ್ಯವಹಾರಕ್ಕಾಗಿ ಬಂದವರು ಇದನ್ನೇ ಊರು ಮಾಡಿಕೊಂಡರು, ತಮ್ಮವರನ್ನು ಕರೆಸಿಕೊಂಡರು, ಅವರ ಗೆಳೆಯರು, ಬಂಧು ಬಾಂಧವರೆಲ್ಲ ಬಂದು ಬೀಡು ಬಿಟ್ಟರು. ಇಂದು ಈ ಊರಿನಲ್ಲಿ ಹೊರಗಿನಿಂದ ಬಂದು ನೆಲೆಸಿದವರೇ ಮುಕ್ಕಾಲು ಪಾಲು ಜನಸಂಖ್ಯೆಯನ್ನು ಆವರಿಸಿದ್ದಾರೆ! ಕೆರೆ ಕಟ್ಟೆಗಳು ನಾಪತ್ತೆಯಾಗಿವೆ, ಜಲಚರ, ಖಗಚರಗಳಿಗೆ ನೆಲೆ ಇಲ್ಲ, ಗಿಡ, ಮರಗಳು ನೆಲಕ್ಕುರುಳುತ್ತಿವೆ. ಕೆಲವೇ ವರ್ಷಗಳ ಹಿಂದೆ ಬೇಸಗೆಯಲ್ಲೂ ಗರಿಷ್ಠ 26 ಡಿಗ್ರಿ ಸೆಲ್ಷಿಯಸ್ ಕಾಣುತ್ತಿದ್ದ ನಗರದ ಉಷ್ಣತೆ ಈಗ ಸದಾಕಾಲ 30 ಡಿಗ್ರಿಯ ಆಸುಪಾಸೇ ಇರುತ್ತದೆ. 1971ರಲ್ಲಿ 16,54,000 ಇದ್ದ ಬೆಂಗಳೂರು ಜನಸಂಖ್ಯೆ ಈಗ 75 ಲಕ್ಷ ದಾಟಿದೆ. ದಿನಕ್ಕೆ ಸಾವಿರಾರು ಹೊಸ ವಾಹನಗಳು ರಸ್ತೆಗೆ ಇಳಿಯುತ್ತವೆ. ಝಗಮಗಿಸುವ ಅಂಗಡಿ, ಮುಂಗಟ್ಟು, ವೈಭವೋಪೇತ ವಸತಿ ಸಂಕೀರ್ಣಗಳು ಏನೆಲ್ಲವೂ ಇವೆ. ಆದರೇನು? ಕುಡಿಯುವ ನೀರೇ ಇಲ್ಲ! ಗುಬ್ಬಚ್ಚಿಗಳಿಲ್ಲ, ಕಾಗೆಗಳೂ ಅಪರೂಪ. ಜನಸಂಖ್ಯೆಯ ಜೊತೆಗೆ ಇಲಿ, ಜಿರಲೆ, ಹೆಗ್ಗಣ, ಬೀದಿ ನಾಯಿಗಳ ಸಂಖ್ಯೆ ಮಾತ್ರ ಏರುತ್ತಿದೆ! 

ಕೆಂಪೇಗೌಡರು ಊರು, ಕೆರೆ ಕಟ್ಟೆ ಕಟ್ಟಿದರು, ಹೈದರ್, ಟಿಪ್ಪು ಉದ್ಯಾನವನ ನಿರ್ಮಿಸಿ, ಗಿಡ ಮರ ಬೆಳೆಸಿದರು, ಬ್ರಿಟಿಷರು ಒಳಚರಂಡಿ ರೂಪಿಸಿದರು. ಈಗ ನಾವು ಮಾಡಿದ್ದೆಂದರೆ ಕೆರೆ ಕಟ್ಟೆ ಕದ್ದಿದ್ದೇವೆ, ಮರಗಿಡ ಉರುಳಿಸಿ ಕಟ್ಟಡ ಕಟ್ಟಿದ್ದೇವೆ, ಬ್ರಿಟಿಷರ ಒಳಚರಂಡಿಯನ್ನೇ ಬಳಸುತ್ತಿದ್ದೇವೆ. ಇನ್ನೇನು ವಾಸ್ತವಗಳಿವೆಯೋ ನೋಡೋಣ. 

1800ರ ಆರಂಭದಲ್ಲಿ ಬ್ರಿಟಿಷರ ತೆಕ್ಕೆಗೆ ಬೆಂಗಳೂರು ಬಂದಾಗ ಇಲ್ಲಿ 400ನ್ನೂ ಮೀರಿ ಕೆರೆಕಟ್ಟೆಗಳಿದ್ದವು. 1895ರಲ್ಲಿ ಧರ್ಮಾಂಬುಧಿ ಕೆರೆ ಬೆಂಗಳೂರಿನ ಕುಡಿಯುವ ನೀರಿನ ಮೂಲವಾಗಿತ್ತು. ಇದು ಈಗ ಮೆಜೆಸ್ಟಿಕ್ ಬಸ್ ನಿಲ್ದಾಣವಾಗಿದೆ. ಮಿಲ್ಲರ್ಸ್ ಕೆರೆ (ಕಂಟೋನ್ಮೆಂಟ್ ರೈಲು ನಿಲ್ದಾಣದ ಎದುರಿನ ಜಾಗ) ಸ್ಯಾಂಕಿ, ಅಲ್ಸೂರು ಕೆರೆಗಳೂ ಕುಡಿಯುವ ನೀರು ಕೊಡುತ್ತಿದ್ದವು. 1985ರ ವೇಳೆಗೆ ಕೇವಲ 51 ಉತ್ತಮ ಕೆರೆಗಳು ಉಳಿದವು. ಕುಡಿಯುವ ನೀರು ಕೊಡುತ್ತಿದ್ದ 16 ಕೆರೆಗಳು ಬಸ್ ನಿಲ್ದಾಣ, ಕೆಜಿಎ ಗಾಲ್ಫ್ ಆಟದ ಮೈದಾನ, ವಸತಿ, ವಾಣಿಜ್ಯ ಸಂಕೀರ್ಣ, ಎನ್‍ಜಿವಿ ಕ್ರೀಡಾ ಸಂಕೀರ್ಣ, ಕಂಠೀರವ ಕ್ರೀಡಾಂಗಣಗಳಾಗಿ ಬದಲಾದವು. ಉಳಿದ ಕೆರೆಗಳು “ಮಲೇರಿಯಾ ನಾಶ’’ ಕಾರ್ಯಕ್ರಮದ ಅಡಿಯಲ್ಲಿ ಮಣ್ಣುಪಾಲಾದವು. ಇನ್ನು ದೊಮ್ಮಲೂರು ಮತ್ತು ಭೈರಸಂದ್ರ ವಸತಿ ಪ್ರದೇಶಗಳು ರೂಪುಗೊಂಡಿದ್ದೇ ಕೆರೆ ಜಾಗದಲ್ಲಿ.

ಸುಮಾರು 1960ರ ವರೆಗೂ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಇರಲೇ ಇಲ್ಲ. ಅಲ್ಸೂರು, ಧರ್ಮಾಂಬುಧಿ, ಕೆಂಪಾಂಬುಧಿ ಮತ್ತು ಕಾರಂಜಾ ಕೆರೆಗಳೇ ನೀರು ಪೂರೈಸುತ್ತಿದ್ದವು ಎಂಬ ದಾಖಲೆ ಇದೆ. ಅಲ್ಸೂರು, ಸ್ಯಾಂಕಿ, ಮಡಿವಾಳ, ಲಾಲ್‍ಬಾಗ್ ಮತ್ತು ಪುಟ್ಟೇನಹಳ್ಳಿ ಕೆರೆಗಳು ಇನ್ನೂ ಜೀವಂತ ಇವೆ. ವೆಂಕಯ್ಯಮ ಕೆರೆ, ಕಾಮಾಕ್ಷಿಪಾಳ್ಯ, ಜರಗನಹಳ್ಳಿ, ನಾಗವಾರ, ಅಗರ ಕೆರೆಗಳು ಅರೆಜೀವ ಇಟ್ಟುಕೊಂಡಿವೆ. ಉಳಿದಂತೆ ಅಲ್ಲಸಂದ್ರ, ಅಟ್ಟೂರು, ಬಿಟಿಎಂ ಕೆರೆ, ಚಿನ್ನಪ್ಪನ ಹಳ್ಳಿ, ದೊಡ್ಡನೆಕ್ಕುಂದಿ, ಕಲ್ಕೆರೆ, ಕೌಡೇನಹಳ್ಳಿ, ಕೆರವನಹಳ್ಳಿ, ಕರಿತಿಮ್ಮನಹಳ್ಳಿ, ಕೈಕೊಂಡನಹಳ್ಳಿ, ಕೊಡಿಗೇನಹಳ್ಳಿ, ಮಹದೇವಪುರ, ಉತ್ತರಹಳ್ಳಿ, ದೊರೆಕೆರೆ, ದೀಪಾಂಜಲಿ, ಮಲಗಾನಹಳ್ಳಿ ಮತ್ತು ಯಲಹಂಕದ ಕೆರೆಗಳು ಸತ್ತಂತೆ ಇರುವ ಬೆಂಗಳೂರಿನ ಕೆರೆಗಳು. 

ಇದೀಗ ಬೆಂಗಳೂರು ನೀರು ಸರಬರಾಜು ಮಂಡಳಿ ಮತ್ತು ಸರ್ಕಾರಕ್ಕೆ ಬೆಂಗಳೂರಿನ ಕೆರೆಗಳನ್ನು ಉಳಿಸುವ ಮಹಾನ್ ಪುಣ್ಯದ ಜ್ಞಾನೋದಯವಾಗಿದೆ. ಬೆಂಗಳೂರಿನ ನೀರಿನ ಬೇಡಿಕೆ ಮತ್ತು ಬೇರೆ ಎಲ್ಲಿಂದಲೂ ನೀರು ಪೂರೈಸಲಾಗದ ಅಸಹಾಯಕತೆ, ಇಲ್ಲಿಯೇ ಪರ್ಯಾಯ ಹುಡುಕಿಕೊಳ್ಳಬೇಕಾದ ಅನಿವಾರ್ಯತೆಗಳೇ ಇದಕ್ಕೆ ಕಾರಣವೇ ವಿನಾ ಜಲಮೂಲ ಉಳಿಸಲೇಬೇಕೆಂಬ ಶುದ್ಧ ಕಾಳಜಿ ಅಲ್ಲ. 

ಕಾವೇರಿ ನದಿಯಿಂದ ಬೆಂಗಳೂರಿಗೆ ಕೊಳವೆ ಮೂಲಕ ಸಾಗಿಸುವ ಎರಡು ಟಿಎಂಸಿ ನೀರಿಗೆ ಅನೇಕ ಅಡ್ಡಿ ಆತಂಕಗಳು ಎದುರಾಗುತ್ತಿವೆ. ಮೊದಲನೆಯದಾಗಿ ಇದಕ್ಕಿಂತ ಒಂದು ಹನಿ ಹೆಚ್ಚು ನೀರನ್ನೂ ಕಾವೇರಿಯಿಂದ ಬಳಸಿಕೊಳ್ಳಲು ಅವಕಾಶವಿಲ್ಲ. ನ್ಯಾಯಾಧಿಕರಣದ ಆದೇಶ ಅಡ್ಡಿ ಬರುತ್ತದೆ. ನಿರಂತರವಾಗಿ ನೂರಾರು ಅಡಿಯಷ್ಟು ಎತ್ತರಕ್ಕೆ 150 ಕಿ.ಮೀ ದೂರಕ್ಕೆ ಈ ಪ್ರಮಾಣದ ನೀರು ಪಂಪು ಮಾಡುವುದು ಹುಡುಗಾಟವಲ್ಲ. ಈಗಿರುವ ಈ ವ್ಯವಸ್ಥೆ ಹೆಚ್ಚೆಂದರೆ 15 ವರ್ಷ ಬಾಳಿಕೆ ಬರುವ ಅಂದಾಜಿದೆ. ಕಾವೇರಿ ನದಿಪಾತ್ರವೂ ಕುಗ್ಗುತ್ತಿದ್ದು ಆ ಭಾಗದ ರೈತರು ಬೇರೆಡೆ ನೀರು ಸಾಗಿಸಲು ವಿರೋಧ ತೋರುತ್ತಿದ್ದಾರೆ. 2001ರಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆ ನಿತ್ಯ 750 ದಶಲಕ್ಷ ಲೀಟರ್. ಆದರೆ ವಿತರಣೆ ಮಾಡುತ್ತಿದ್ದುದು ಕೇವಲ 570 ದಶಲಕ್ಷ ಲೀಟರ್. ಈಗ ವಿತರಣೆಯ ಪ್ರಮಾಣ ಇದಕ್ಕಿಂತ ಕಡಿಮೆಯೂ ಬೇಡಿಕೆ ತುಸು ಹೆಚ್ಚೂ ಆಗಿದೆ. 1973ರಲ್ಲಿ ಬೆಂಗಳೂರಿನ ಜಲಮೂಲ ಪ್ರಮಾಣ ಶೇ.3.40 ಇದ್ದುದು 2005ರಲ್ಲಿ ಶೇ.1.47ಕ್ಕೆ ಕುಸಿದಿದೆ.

ಈ ಒತ್ತಡದಿಂದಾಗಿ ಈಗ ಕಳೆದುಹೋಗುತ್ತಿರುವ ಕೆರೆಗಳಿಗೆ ಪುನರುಜ್ಜೀವನ ಕೊಡಲು ಸರ್ಕಾರ ಮುಂದಾಗಿದೆ. ಬಿಬಿಎಂಪಿ 21 ಕೆರೆಗಳನ್ನೂ ಬಿಡಿಎ 12 ಕೆರೆಗಳನ್ನೂ ಅಭಿವೃದ್ಧಿಪಡಿಸಲು ಕೋಟ್ಯಂತರ ರೂಪಾಯಿ ಯೋಜನೆ ತಯಾರಿಸಿವೆ. ಬೆಂಗಳೂರು ಗ್ರಾಮಾಂತರ ವಲಯವನ್ನೂ ಸೇರಿಸಿಕೊಂಡು ಬಿಡಿಎ ಮೊದಲ ಹಂತದಲ್ಲಿ 392 ಕೆರೆಗಳನ್ನೂ ಎರಡನೇ ಹಂತದಲ್ಲಿ 1406 ಕೆರೆಗಳನ್ನೂ ಅಭಿವೃದ್ಧಿಪಡಿಸಲು ಮುಂದಾಗಿದೆ. ಈಗಾಗಲೇ ಉಲ್ಲಾಳ ಕೆರೆ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಹಾಗೆ ನೋಡಿದರೆ 21 ವರ್ಷಗಳ ಕೆಳಗೆ ಲಕ್ಷ್ಮಣರಾವ್ ಸಮಿತಿ ಬೆಂಗಳೂರಿನ 127 ಕೆರೆಗಳ ಅಭಿವೃದ್ಧಿ ಮಾಡುವಂತೆ ನಗರಾಭಿವೃದ್ಧಿ ಸಂಸ್ಥೆಗೆ ಸೂಚನೆ ನೀಡಿತ್ತು. ಅಭಿವೃದ್ಧಿ ಮಾಡುವುದಿರಲಿ, ಈಗ ಈ ಕೆರೆಗಳಲ್ಲಿ ಎಷ್ಟು ಕೆರೆಗಳು ಜೀವಂತ ಉಳಿದಿವೆ ಎಂಬುದನ್ನು ಸಮೀಕ್ಷೆ ಮಾಡಲು ಮತ್ತೊಂದು ಸಮಿತಿ ರಚನೆಯಾಗುತ್ತಿದೆ! 

ಬ್ರಿಟಿಷರ ಅವಧಿ ಮತ್ತು ಮೈಸೂರು ಅರಸರ ಕಾಲದಲ್ಲಿ ಕೆರೆಗೆ ನೀರು ಹರಿದುಬರುವ ಪ್ರದೇಶ ಅಥವಾ ಅಚ್ಚುಕಟ್ಟು ಪ್ರದೇಶದಲ್ಲಿ ಯಾವ ಕಟ್ಟಡಗಳಿಗೂ ಅನುಮತಿ ದೊರೆಯುತ್ತಿರಲಿಲ್ಲ. ಕೆರೆಗೆ ಮಳೆ ನೀರು ಹರಿಯುವಂತೆ ಕಾಲುವೆ ನಿರ್ಮಿಸಿ ಕೆರೆಗೆ ಯಾವ ಹಾನಿಯೂ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ನಮ್ಮ ಮಹಾನ್ ಅಧಿಕಾರಿಗಳು ಲಂಚ-ರುಷುವತ್ತುಗಳಿಗೆ ಬಾಯಿ ಒಡ್ಡಿ ಕೆರೆಯ ದೊಡ್ಡ ವ್ಯಾಪ್ತಿಯ ಮೇಲೇ ಕಣ್ಣು ಹಾಕಿದರು. ಮೊದಲು ಅಚ್ಚುಕಟ್ಟು ಪ್ರದೇಶದಲ್ಲಿ ಕಟ್ಟಡ, ವಸತಿ ಸಂಕೀರ್ಣಗಳಿಗೆ ಅನುಮತಿ ಕೊಡಲಾಯಿತು. ಕೆರೆಗೆ ನೀರು ಹರಿಯದೇ ಕೆರೆ ಸಂಪೂರ್ಣ ಒಣಗಿ ಕೆರೆಯ “ಅಮೂಲ್ಯ’’ ಜಾಗ ವ್ಯರ್ಥವಾಗಿ ಉಳಿಯುವಂತೆ ಮಾಡಲಾಯಿತು. ಈ “ವ್ಯರ್ಥ ಜಾಗ’’ವನ್ನು ಸದುಪಯೋಗ ಮಾಡಿಕೊಳ್ಳಲು ಬಂಡವಾಳಶಾಹಿಗಳು ಇದ್ದೇ ಇದ್ದರಲ್ಲ! ಐವತ್ತು ವರ್ಷಗಳ ಅವಧಿಯಲ್ಲಿ ನಾಪತ್ತೆಯಾದ ಬೆಂಗಳೂರಿನ ನೂರಾರು ಕೆರೆಗಳ ಹಣೆಬರಹ ಇದೇ. ಹೀಗೆ ಅನುಮತಿ ನೀಡಿದ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವ ಶಿಕ್ಷೆಯೂ ಇಲ್ಲ! ಅವರ ದುಷ್ಕಾರ್ಯದ ಫಲ ಅನುಭವಿಸಬೇಕಾದವರು ನಾಗರಿಕರು. ನಿಸರ್ಗದತ್ತವಾಗಿ ಬೆಂಗಳೂರಿಗೆ ಒದಗಿದ್ದ ನೂರಾರು ಕೆರೆಗಳನ್ನು ಹಾಗೆಯೇ ಉಳಿಸಿಕೊಂಡಿದ್ದರೆ ಈ ಊರು “ಕೆರೆಗಳ ನಗರ’’ ಎಂಬ ಪ್ರತಿಷ್ಠೆಯನ್ನೂ ಪಡೆದಿರುತ್ತಿತ್ತು. ನಮ್ಮ ದುರದೃಷ್ಟ. ಹಾಗಾಗಲಿಲ್ಲ.

ಈಗ ಸರ್ಕಾರಕ್ಕೂ, ನೀರು ಸರಬರಾಜು ಮಂಡಳಿಯ ಗಡ್ಡಕ್ಕೂ ಬೆಂಕಿ ಬಿದ್ದಿದೆ. ಅದನ್ನು ಆರಿಸಲು ನೀರಿಲ್ಲ! ಹಾಗಾಗಿ ಇದ್ದ ಬಿದ್ದ ಕೆರೆಗಳ ಹುಡುಕಾಟ ನಡೆದಿದೆ. “ಬಾವಿ ನೀರು ಸಂಪೂರ್ಣ ಬತ್ತಿ ಹೋಗುವವರೆಗೂ ಆವಿಯ ಬೆಲೆ ತಿಳಿಯುವುದಿಲ್ಲ’’ ಎಂಬ ಮಾತಿದೆ. ಈಗ ನಮಗೆ ಆಗಿರುವುದೂ ಇದೇ. ಕೆರೆಕಟ್ಟೆ ಕದ್ದು ಹುಚ್ಚಾಪಟ್ಟೆಯಾಗಿ ನಗರ ಬೆಳೆಯಲು ಅವಕಾಶ ಮಾಡಿದ ಆಧುನಿಕ ಆಡಳಿತಗಾರರು ನಗರ ವ್ಯಾಪ್ತಿ ಹಿಗ್ಗಿಸಿದರೇ ವಿನಾ ನಾಗರಿಕತೆ ಬೆಳೆಸಲಿಲ್ಲ. ಈಗ ಸರ್ಕಾರ ಜೀವ ಉಳಿಸಿಕೊಳ್ಳುವ ಕಡೆಯ ಯತ್ನವನ್ನಷ್ಟೇ ಮಾಡುತ್ತಿದೆ. 






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment