Friday, 15 April 2022

ಬೀದಿ ನಾಯಿ ಸಂತಾನ ನಿಯಂತ್ರಣವೂ ಬಿಬಿಎಂಪಿಯೂ


ಬೆಂಗಳೂರಿನಲ್ಲಿ ಕೆಲವು ಜನರಿದ್ದಾರೆ, ಕೆಲವು ಸಂಘಟನೆಗಳಿವೆ. ರಸ್ತೆ ವಿಸ್ತರಣೆ, ಮೆಟ್ರೋ ರೈಲು ಕಾಮಗಾರಿ, ವಿಮಾನ ನಿಲ್ದಾಣ ಮೊದಲಾದ ಮೂಲಸೌಕರ್ಯ ಅಭಿವೃದ್ಧಿ ಕೆಲಸ ಕೈಗೊಂಡಾಗ ಕೆಲವು ಮರಗಳನ್ನು ಕಡಿಯಬೇಕಾಗಿ ಬಂದಾಗ ಒಂದೆರಡು ಘೋಷಣಾ ಪತ್ರ ಹಿಡಿದು ಮಾಧ್ಯಮಗಳಿಗೆ ಪೋಸು ನೀಡುವುದು ಇವರ ನಿತ್ಯ ಕೆಲಸ. ಬಾರ್ ನರ್ತನ ನಿಷೇಧಿಸಿದಾಗ ನರ್ತಕಿಯರ ಪರ ಹೋರಾಡುವ ಇವರು ಬೀದಿ ನಾಯಿ ಕಾಟ ತಾಳಲಾರದ ಸಾರ್ವಜನಿಕರು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಒತ್ತಡ ಹೇರಿದಾಗ ನಾಯಿ ಪರ ನಿಲ್ಲುತ್ತಾರೆ. ಚುನಾವಣೆಗಳು ನಡೆದಾಗ ಮಾತ್ರ ಮತಗಟ್ಟೆಯ ಬಳಿ ಸುಳಿಯುವ ಕನಿಷ್ಠ ಕೆಲಸವನ್ನೂ ಇವರು ಮಾಡುವಂತೆ ಕಾಣುವುದಿಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮಗೆ ಎಲ್ಲಿ ಯಾವಾಗ ಬೇಕೋ ಆಗ ಮಾತ್ರ ಪ್ರದರ್ಶಿಸುವ ಕೌಶಲ ಇವರಿಗಿದೆ. ಇವರ ಸಂಖ್ಯೆ ಬೆರಳೆಣಿಕೆಯನ್ನೇನೂ ಮೀರದು. ಆದರೆ ಇವರ ಕಾಟ ಮಾತ್ರ ಸಮಸ್ತ ನಾಗರಿಕರಿಗೆ ತಪ್ಪದು. ಬೀದಿ ನಾಯಿ ಕಾಟವೇ ಇದಕ್ಕೆ ನಿದರ್ಶನ.

ಕರ್ನಾಟಕದಲ್ಲಿ ಆನಿಮಲ್ ಬರ್ತ್ ಕಂಟ್ರೋಲ್ ಆಕ್ಟ್ 2001ರಲ್ಲಿ ಜಾರಿಗೆ ಬಂದಿದೆ. 1969ರ ಪ್ರಾಣಿ ರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು ಜಾರಿಯಾದ ಕಾನೂನು ಇದು. ಇದರ ಪ್ರಕಾರ ಬೀದಿ ನಾಯಿಗಳು ತೀವ್ರ ಅನಾರೋಗ್ಯದಿಂದ ಬಳಲುವಾಗ, ವಾಸಿಯಾಗದ ತೀವ್ರ ಗಾಯವಾದಾಗ ಮಾತ್ರ ಅವುಗಳ ಹತ್ಯೆಗೆ ಅವಕಾಶ ಕೊಡುತ್ತದೆ. ಉಳಿದಂತೆ ಅವುಗಳ ಪೀಡೆಯಿಂದ ತಪ್ಪಿಸಿಕೊಳ್ಳಲು ಸಂತಾನ ನಿಯಂತ್ರಣ ಮಾಡಬೇಕು ಎಂದು ಹೇಳುತ್ತದೆ. ಈ ಕಾನೂನು ಜನರ ಪ್ರಾಣ ರಕ್ಷಣೆಗಿಂತ ಕೆಲವು ಹಿತಾಸಕ್ತಿಗಳ ಹೊಟ್ಟೆಪಾಡಿಗೆ ಅದ್ಭುತ ಮಾರ್ಗ ಕಲ್ಪಿಸಿದೆ. 

ಕೆಂಪೇಗೌಡ ವೈದ್ಯಕೀಯ ಸಂಸ್ಥೆಯ (ಕಿಮ್ಸ್) ಪ್ರಕಾರ ಬೆಂಗಳೂರಿನಲ್ಲಿ ನಾಯಿ ಕಡಿತದ ಪ್ರಕರಣ ನಿತ್ಯವೂ ಸರಾಸರಿ 100 ರಷ್ಟು ದಾಖಲಾಗುತ್ತದೆ. 2006-07ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆಗೊಳಿಸಿದ ಅಂಕಿಅಂಶಗಳು ಹೇಳುವಂತೆ 2000-2006ರ ಅವಧಿಯಲ್ಲಿ ದಾಖಲಾದ ನಾಯಿ ಕಡಿತದ ಪ್ರಕರಣ 28,000ಕ್ಕೂ ಹೆಚ್ಚು! ನಾಯಿ ಕಡಿತದಿಂದ ಸತ್ತವರೂ ಕಡಿಮೆಯಲ್ಲ.

ಬೆಂಗಳೂರಿನಲ್ಲಿ ಜನರ ಸಂಖ್ಯೆ ಏರುತ್ತಿರುವಂತೆಯೇ ಬೀದಿ ನಾಯಿ ಸಂಖ್ಯೆಯೂ ಏರುತ್ತಿದೆ. ಹಸಿದ ಜನರಿಗೆ ಆಹಾರ ಒದಗಿಸಲು ಹಾದಿ ಬೀದಿಯಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿದ ಗಾಡಿ ಅಂಗಡಿ, ಗೂಡಂಗಡಿಗಳ ವ್ಯರ್ಥ ಆಹಾರ, ತ್ಯಾಜ್ಯಗಳೇ ಬೀದಿ ನಾಯಿಗಳ ಸಮೃದ್ಧ ಆಹಾರ ಮೂಲ. ಈ ಅಂಗಡಿಗಳು ವಿಶೇಷವಾಗಿ ಸಂಜೆ ವೇಳೆ ಆಹಾರ ಮಾರಾಟ ಕೆಲಸ ಮಾಡುತ್ತವೆ. ಹೊಟೇಲ್ ಬಾಗಿಲು ಹಾಕುವ ಸಮಯದಲ್ಲಿ ಊರಿಗೆ ಬರುವ ಪ್ರಯಾಣಿಕರು, ರಾತ್ರಿ ಪಾಳಿ ನೌಕರರು ಈ ಅಂಗಡಿಗಳ ಪ್ರಮುಖ ಗಿರಾಕಿಗಳು. ಬೆಂಗಳೂರಿನಲ್ಲಿ ರಾತ್ರಿ ಪಾಳಿ ಕೆಲಸ ಮಾಡುವ ಸುಮಾರು ಮೂರು ಲಕ್ಷ ಜನರಿದ್ದಾರೆ. ಇವರಲ್ಲಿ ಪತ್ರಕರ್ತರು, ಸಾಫ್ಟ್‍ವೇರ್ ನೌಕರರು, ಬಿಪಿಒ ನೌಕರರು, ವಿವಿಧ ಉತ್ಪಾದಕ ಕಂಪನಿ ಕೆಲಸಗಾರರು, ಸೆಕ್ಯೂರಿಟಿ ಗಾರ್ಡ್‍ಗಳು, ಕ್ಯಾಬ್ ನೌಕರರು, ಆಟೋ ಮತ್ತಿತರ ವಾಹನ ಚಾಲಕರು ಸೇರಿದ್ದಾರೆ. ಈ ಜನರಲ್ಲಿ ಅರ್ಧಕ್ಕರ್ಧ ಜನ ಸ್ವಂತ ವಾಹನದಲ್ಲಿ ಓಡಾಡುತ್ತಾರೆ. ಇವರಲ್ಲಿ ದ್ವಿಚಕ್ರ ವಾಹನ ಬಳಸುವವರು ಅಧಿಕ. ರಾತ್ರಿ ಹನ್ನೊಂದುವರೆ ಗಂಟೆಯ ನಂತರ ಬೆಂಗಳೂರಿನ ಯಾವುದೇ ಬೀದಿಯಲ್ಲಿ ಓಡಾಡುವುದು ಅಪಾಕಾರಿಯೇ ಹೌದು. ಇದಕ್ಕೆ ಕಳ್ಳಕಾಕರ ಭಯ ಕಾರಣವಲ್ಲ, ಕಳ್ಳರಿಗೂ ಭಯ ಹುಟ್ಟಿಸಿದ ಬೀದಿ ನಾಯಿ ಕಾಟ ಕಾರಣ! ಪ್ರಮುಖ ರಾಜ ಮಾರ್ಗಗಳನ್ನು ಬಿಟ್ಟರೆ ಬೇರೆ ಉಪ ರಸ್ತೆಗಳಲ್ಲಿ ರಾತ್ರಿ ಹನ್ನೆರಡ ನಂತರ ಚಲಿಸುವ ಯಾವುದೇ ವಾಹನವನ್ನೂ ಈ ನಾಯಿಗಳು ಬೆನ್ನಟ್ಟದೇ ಬಿಡುವುದಿಲ್ಲ. ಇನ್ನು ದ್ವಿಚಕ್ರ ವಾಹನದಲ್ಲಿ ಓಡಾಡಲು ಎಂಟೆದೆಯೇ ಬೇಕು. ಒಂದೊಂದು ಬೀದಿಯಲ್ಲಿ ಐದರಿಂದ ಆರು ಅಥವಾ ಕೆಲವೊಮ್ಮೆ ಐವತ್ತರವರೆಗೂ ಗುಂಪಾಗಿ ಇವು ಇರುತ್ತವೆ. ವಾಹನ ಹತ್ತಿರ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಮೇಲೆರಗುತ್ತವೆ, ಕೆಲವು ವಾಹನದ ಮುಂದೆ ಹೋದರೆ ಉಳಿದವು ಚಾಲಕರ ಬಳಿ ಧಾವಿಸುತ್ತವೆ. ಚಾಲಕ ಕಕ್ಕಾಬಿಕ್ಕಿಯಾಗಿ ಸಮತೋಲ ತಪ್ಪಿದರೆ ಅಪಘಾತ ತಪ್ಪಿದ್ದಲ್ಲ. ನಿತ್ಯ ಓಡಾಡುವ ಪರಿಚಿತ ವಾಹನವಾದರೆ ಅವು ಸ್ವಲ್ಪ ವಿನಾಯ್ತಿ ತೋರಿಸುವುದುಂಟು. ಈ ಕಾಟವನ್ನು ಅನುಭವಿಸಿಯೇ ನೋಡಬೇಕು. ನಾಲ್ಕು ಗೋಡೆ ಮಧ್ಯೆ ನಾಯಿ ವರ್ತನೆ ಅಧ್ಯಯನ ಮಾಡಿ ರಕ್ಷಣಾ ತಂತ್ರಗಳನ್ನು ಹೇಳುವವರು ಹಾಗೂ ಬೀದಿ ನಾಯಿ ಪರ ಘೋಷಣಾ ಪತ್ರ ಹಿಡಿದು ಮುಖದ ಮೇಲಿನ ಕೂದಲು ಹಿಂದೆ ತಳ್ಳುತ್ತ, ಮುಖಕ್ಕೆ ಮೆತ್ತಿಕೊಂಡ ಬಣ್ಣ ಮಾಸದಂತೆ ಎಚ್ಚರಿಕೆ ವಹಿಸುತ್ತ ಪ್ರತಿಭಟಿಸಿ ನಂತರ ಮೆಲ್ಲಗೆ ಕಾರು ಹತ್ತಿ ಸಂಜೆ ಎಂಟರೊಳಗೆ ಮನೆಯೋ ಕ್ಲಬ್ಬೋ ಸೇರುವ ಜನ “ಪ್ರಚೋದನೆ ಇಲ್ಲದೇ ನಾಯಿ ದಾಳಿ ಮಾಡುವುದಿಲ್ಲ’’ ಎಂಬ ಮಹಾನ್ ಸಂಶೋಧನಾ ಮಾತನ್ನು ತಪ್ಪದೇ ಉಲ್ಲೇಖಿಸುತ್ತಾರೆ. ರಾತ್ರಿ ಪಾಳಿಯ ಜನ ಒಂದೋ ಕೆಲಸದ ಸ್ಥಳಕ್ಕೆ ಅಥವಾ ಮನೆಗೆ ಕ್ಷೇಮವಾಗಿ ಸೇರಿದರೆ ಸಾಕಪ್ಪಾ ಎಂಬ ಧಾವಂತದಲ್ಲೇ ಇರುತ್ತಾರೆ. ಇದಕ್ಕೆ ಕಾರಣಗಳು ಹಲವು. ಇದರ ಜೊತೆ ಬೀದಿ ನಾಯಿಗಳನ್ನು ಪ್ರಚೋದಿಸುತ್ತ, ಅವುಗಳನ್ನು ಮೈಮೇಲೆ ಆಹ್ವಾನಿಸಿಕೊಳ್ಳುವವರು ಯಾರಿದ್ದಾರೋ ಅರ್ಥವಾಗದು. ಬೀದಿ ನಾಯಿ ದಾಳಿ ವಿರುದ್ಧ ರಕ್ಷಣೆಗೆ ಇವರು “ನಾಯಿಗಳು ಬೆನ್ನಟ್ಟಿದರೆ ಕಲ್ಲಿನಂತೆ ನಿಂತು ಬಿಡಿ, ಓಡಬೇಡಿ, ನಿಮ್ಮನ್ನು ಮೂಸಲು ಬಿಡಿ, ಅದನ್ನೇ ದಿಟ್ಟಿಸಿ ನೋಡಬೇಡಿ, ಅಷ್ಟಾಗಿಯೂ ಮೇಲೆ ಬಿದ್ದರೆ ಮಲಗಿ ಮುಖ ಮುಚ್ಚಿಕೊಂಡು ಹೊರಳಾಡಿ’’ ಎಂದೆಲ್ಲ ಹಿತೋಪದೇಶವನ್ನೂ ಜನರಿಗೆ ನೀಡಿದ್ದಾರೆ. 

ಸಾಮಾನ್ಯವಾಗಿ ಆರು ತಿಂಗಳಿಗೊಮ್ಮೆ ಬೆದೆಗೆ ಬರುವ ನಾಯಿಗಳು ಆ ಸಂದರ್ಭದಲ್ಲಿ ಹೆಚ್ಚು ಕಿರಿಕಿರಿ ಅನುಭವಿಸುತ್ತವೆ, ಆಕ್ರಮಣಕಾರಿಯಾಗಿ ವರ್ತಿಸುತ್ತವೆ. ಇಂಥ ಸಂದರ್ಭದಲ್ಲಿ ಅವು ದಾಳಿ ನಡೆಸುವ ಸಂಭವ ಹೆಚ್ಚು. ಈ ಸಂದರ್ಭ ಅಲ್ಲದೆಯೂ ಅವುಗಳ ದಾಳಿ ಪ್ರಮಾಣವೇನೂ ಕಡಿಮೆಯಲ್ಲ. ಪ್ರತಿ ಬೀದಿಯಲ್ಲಿ ಹೆಚ್ಚಿದ ನಾಯಿಗಳು ತಮ್ಮ ಗಡಿ ಪ್ರಭುತ್ವ ಉಳಿಸಿಕೊಳ್ಳಲು ದಿನವಿಡೀ ಆಕ್ರಮಣಕಾರಿಯಾಗಿಯೇ ಇರಬೇಕಾಗಿದೆ. ಇದರ ನೇರ ಪರಿಣಾಮ ಎದುರಿಸಬೇಕಿರುವುದು ಸಾರ್ವಜನಿಕರು. 

2001ರಲ್ಲಿ ನಾಯಿ ಸಂತಾನ ನಿಯಂತ್ರಣ (ಆನಿಮಲ್ ಬರ್ತ್ ಕಂಟ್ರೋಲ್-ಎಬಿಸಿ) ಕಾಯ್ದೆ ಜಾರಿಗೆ ಬಂದ ಮೇಲೆ ಬಿಬಿಎಂಪಿ ಹೆಚ್ಚಿದ ಬೀದಿ ನಾಯಿಗಳನ್ನು ಹಿಡಿದು ಅವುಗಳ ಸಂಖ್ಯೆಯನ್ನು ನಿಯಂತ್ರಿಸುವ ಕೆಲಸ ಕೈಬಿಟ್ಟಿದೆ. ಈಗ ನಾಯಿ ನಿಯಂತ್ರಣ ಎಬಿಸಿಯಿಂದಲೇ ಆಗಬೇಕು. ಈ ಉಸ್ತುವಾರಿಯನ್ನು ಬೆಂಗಳೂರಿನ ಸಿಯುಪಿಎ (ಕ್ಯುಪಾ), ಎಸ್‍ಪಿಸಿಎ, ಎಆರ್‍ಎಫ್, ಕರುಣಾ ಮತ್ತಿತರ ಸರ್ಕಾರೇತರ ಸಂಸ್ಥೆಗಳು ವಹಿಸಿಕೊಂಡಿವೆ. ಹಳ್ಳಿಗಳಲ್ಲಿ ಹೋರಿ, ಗಂಡು ನಾಯಿಯ ಬೀಜ ತೆಗೆಯುವ ಕೆಲಸವನ್ನೇ ಹೆಚ್ಚು ವೈಜ್ಞಾನಿಕವಾಗಿ, ನಾಜೂಕಾಗಿ ಇವು ಬೆಂಗಳೂರಿನ ಬೀದಿ ನಾಯಿಗಳಿಗೆ ಮಾಡುತ್ತಿವೆ ಅಷ್ಟೆ. ಹೆಣ್ಣು ನಾಯಿ ಗರ್ಭಧರಿಸದಂತೆಯೂ ಸಂತಾನ ಹರಣ ಚಿಕಿತ್ಸೆ ಮಾಡಿ ಅದರ ಕಿವಿಯ ಮೇಲೆ ಗುರುತನ್ನೂ ಮಾಡುತ್ತವೆ. ಹೀಗೆ ಗುರುತಾದ ನಾಯಿಗಳೂ ಸಾಕಷ್ಟು ಮರಿ ಹಾಕಿದ ದಾಖಲೆಯೂ ಇದೆ ಎಂಬುದು ಬೇರೆ ಮಾತು. ಈ ಸಂತಾನ ನಿಯಂತ್ರಣ ಎಂಬುದು ಎನ್‍ಜಿಒಗಳ ಪಾಲಿಗೆ ಪೊಗದಸ್ತಾದ ಕ್ಷೇತ್ರ. ಕೈತುಂಬ ಕೆಲಸ, ಹಣ “ನ್ಯಾಯಬದ್ಧವಾಗಿ’’ ಇದರಿಂದ ಬರುತ್ತದೆ. ಈ ದಂಧೆಯ ಬಗ್ಗೆ ಬಿಬಿಎಂಪಿ ಕಿಮ್ಸ್ ನೇತೃತ್ವದಲ್ಲಿ ಡಾ. ಸುದರ್ಶನ್ ಉಸ್ತುವಾರಿಯಲ್ಲಿ ಲೆಕ್ಕಪತ್ರ ಶೋಧ ನಡೆಸಿದೆ. ಇದರಲ್ಲಿ ಈ ವ್ಯವಹಾರದ ಒಳಹೊರಗುಗಳೆಲ್ಲ ದಾಖಲಾಗಿವೆ.

ಪದೇ ಪದೇ ಬೀದಿ ನಾಯಿ ದಾಳಿ ನಡೆದಾಗ ಜನ ಆಕ್ರೋಶ ವ್ಯಕ್ತಪಡಿಸುವುದು ಬಿಬಿಎಂಪಿ ವಿರುದ್ಧ. ಆದರೆ ಬಿಬಿಎಂಪಿ ಕ್ರಮ ಕೈಗೊಳ್ಳಲು ಆಗದಂತೆ ಅಡ್ಡ ಹಾಕುವವರು ಇಂಥ ಎನ್‍ಜಿಒಗಳು. ಎನ್‍ಜಿಒಗಳು ಹೇಳುವ ಮಾತಿನಲ್ಲಿ ಸತ್ಯವೇ ಇದ್ದರೆ ಅದನ್ನು ಒಪ್ಪಲು ಅಡ್ಡಿ ಇಲ್ಲ. ಆದರೆ ಕಾಗದ ಪತ್ರಗಳ ದಾಖಲೆ ಹೇಳುವುದು ಒಂದಾದರೆ ವಾಸ್ತವ ಸತ್ಯವೇ ಬೇರೆ ಇದೆ. ಅಷ್ಟಕ್ಕೂ ಕಾಗದ ಪತ್ರಗಳೇ ಸುಳ್ಳು ಹೇಳುವುದೂ ಉಂಟು. ಇದಕ್ಕೆ ಇಲ್ಲಿದೆ ಸಣ್ಣ ಉದಾಹರಣೆ. 

2000ದಲ್ಲಿ ಕ್ಯುಪಾ ಸಂಘ ಬೆಂಗಳೂರಿನ ಬೀದಿ ನಾಯಿ ಗಣತಿ ಮಾಡಿದೆ. ಅದರ ಪ್ರಕಾರ ಆಗ ಇದ್ದ ನಾಯಿ ಸಂಖ್ಯೆ ಕೇವಲ 70,000. ಅಲ್ಲದೇ ಬೆಂಗಳೂರಿನಲ್ಲಿ ಎಬಿಸಿ ಕಾರ್ಯಕ್ರಮದ ಯಶಸ್ವೀ ಜಾರಿಯಿಂದ ಬೀದಿ ನಾಯಿ ಸಂಖ್ಯೆಯೂ ಇಳಿಮುಖವಾಗುತ್ತಿದೆ, ದಾಳಿ ಪ್ರಕರಣವೂ ಕಡಿಮೆಯಾಗುತ್ತಿದೆ. ಹೀಗಾಗಿದ್ದರೆ ಎಲ್ಲರಿಗೂ ಸಂತೋಷವಾಗುತ್ತಿತ್ತು. ಆದರೆ ನಾಯಿ ದಾಳಿ ಮತ್ತೆ ಮತ್ತೆ ಹೆಚ್ಚಿದಾಗ, ಪ್ರತಿ ತಿಂಗಳ ಐದಾರು ಲಕ್ಷ ರೂ.ಗಳನ್ನು ಎಬಿಸಿ ಕಾರ್ಯಕ್ರಮಕ್ಕೆ ಈ ಸಂಘಗಳಿಗೆ ಕೊಡುವ ಬಿಬಿಎಂಪಿ 2007 ಜೂನ್ 11ರಿಂದ 2007ಜುಲೈ 6ರ ಅವಧಿಯಲ್ಲಿ ಮತ್ತೆ ನಾಯಿ ಗಣತಿ ನಡೆಸಿ ಅಂಕಿಅಂಶ ಕೊಟ್ಟಿದೆ. ಇದನ್ನು ನೋಡಿಬಿಟ್ಟರೆ ಎನ್‍ಜಿಒಗಳ ಕಾರ್ಯವೈಖರಿ ಅರ್ಥವಾಗುತ್ತದೆ. ಬಿಬಿಎಂಪಿ ಹೇಳುವಂತೆ ನಗರದ ಬೀದಿ ನಾಯಿ ಸಂಖ್ಯೆ 1,83,758. ಇವುಗಳಲ್ಲಿ 1,05,466 ಗಂಡು ನಾಯಿಗಳೂ 78,292 ಹೆಣ್ಣು ನಾಯಿಗಳೂ ಇವೆ. ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ನಾಯಿಗಳಿವೆ. (ಆಹಾರ ಮಾರುವ ಗಾಡಿ ಅಂಗಡಿ, ಗೂಡಂಗಡಿಗಳೂ ಇಲ್ಲೇ ಹೆಚ್ಚು) ಬೆಂಗಳೂರು ಪೂರ್ವದಲ್ಲಿ 38,066 ನಾಯಿಗಳೂ ದಾಸರಹಳ್ಳಿ ವಲಯದಲ್ಲಿ 8,750 ನಾಯಿಗಳೂ ಇವೆ. 

ಇದು 2007ರ ಆರಂಭದ ನಾಯಿ ಲೆಕ್ಕ. ಈ ಎರಡು ವರ್ಷದಲ್ಲಿ ಎಬಿಸಿ ಕಾರ್ಯಕ್ರಮದ ಯಶಸ್ವೀ ಪ್ರಯೋಗದಿಂದ 2013ರ ವೇಳೆಗೆ ಬೆಂಗಳೂರಿನ ಬೀದಿ ನಾಯಿಗಳ ಸಂಖ್ಯೆ 2.5 ಲಕ್ಷಕ್ಕೇರಿದೆ! ಒಂದು ನಾಯಿಯ ಸಂತಾನ ಹರಣ ಚಿಕಿತ್ಸೆಗೆ ಬಿಬಿಎಂಪಿ ಸುಮಾರು 300 ರೂ. ಪಾವತಿಸುವುದರಿಂದ ಈ ಯೋಜನೆ ಎನ್‍ಜಿಒಗಳಿಗೆ ವರದಾನವೇ ಆಗಿಬಿಟ್ಟಿದೆ. ನಿಜಕ್ಕೂ ಎನ್‍ಜಿಒಗಳು ನಾಯಿ ಸಂತಾನ ನಿಯಂತ್ರಣ ಮಾಡುತ್ತಿವೆಯೋ ಅಥವಾ ಸಂತಾನ ಅಭಿವೃದ್ಧಿ ಮಾಡುತ್ತಿವೆಯೋ ಎಂಬ ಅನುಮಾನವೂ ಇದರಿಂದ ಉಂಟಾಗುತ್ತದೆ.

2007-08 ರಲ್ಲಿ ಮಕ್ಕಳ ಮೇಲೆ ಬೀದಿ ನಾಯಿ ದಾಳಿ ನಿತ್ಯ ಸುದ್ದಿಯೇ ಆಗಿಬಿಟ್ಟಿತ್ತು. ಬಿಬಿಎಂಪಿ, ಸರ್ಕಾರಕ್ಕೆ ತಲೆನೋವಾದ ಬೀದಿ ನಾಯಿ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಬೇಕಾಯಿತು. ಸಾರ್ವಜನಿಕ ಸಂಕಟಕ್ಕೆ ಮರುಗಿದ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರೂ ಸ್ವಯಂ ಪ್ರೇರಿತರಾಗಿ ಬೀದಿ ನಾಯಿ ಸಮಸ್ಯೆ ಬಗ್ಗೆ ಕಟುವಾಗಿ ಟೀಕಿಸಬೇಕಾಯಿತು. ಇಷ್ಟೆಲ್ಲ ಆದರೂ ಬೆಂಗಳೂರಿನ ನಾಗರಿಕರಿಗೆ ಬೀದಿ ನಾಯಿ ಉಪಟಳವಂತೂ ತಪ್ಪಲಿಲ್ಲ. 

ನಾಯಿ ನಿಯಂತ್ರಣಕ್ಕೆ ಬೆಂಗಳೂರಿನ ಒಂದೊಂದು ವಿಭಾಗವನ್ನು ಒಂದೊಂದು ಸಂಸ್ಥೆಗಳು ಹಂಚಿಕೊಂಡಿವೆ. ಉದಾಹರಣೆಗೆ ಜಯನಗರ, ಭೈರಸಂದ್ರದ ನಾಯಿ ನಿಯಂತ್ರಣ ಹೆಬ್ಬಾಳದಲ್ಲಿರುವ ಸಂಸ್ಥೆಯೊಂದರ ವ್ಯಾಪ್ತಿಗೆ ಬರುತ್ತದೆ! ನಾಯಿ ಕಾಟದಿಂದ ಬೇಸತ್ತು ನಿತ್ಯ ಕರೆ ಮಾಡಿದರೆ ವಾರದೊಪ್ಪತ್ತಿಲ್ಲಿ ಹಗಲು ವೇಳೆ ನಾಲ್ಕಾರು ಜನ ನಾಯಿ ಹಿಡಿದು ಚಿಕಿತ್ಸೆ ನೀಡಲು ಬರುತ್ತಾರೆ. ದುರದೃಷ್ಟವಶಾತ್ ಇವರ ಆಗಮನದ ಸುಳಿವು ದೊರೆತ ನಾಯಿಗಳು ಪಲಾಯನಗೈಯುತ್ತವೆ. ಇಲ್ಲಿ ನಾಯಿಗಳೇ ಇಲ್ಲ ಎಂದು ಸಂಸ್ಥೆಗೆ ವರದಿ ಒಪ್ಪಿಸುತ್ತಾರೆ. ಇದೊಂದು ಅವ್ಯವಸ್ಥಿತ ವ್ಯವಸ್ಥೆ. ಸಮಸ್ಯೆ ಇರುವುದು ರಾತ್ರಿ ವೇಳೆ, ಪರಿಹಾರ ಹುಡುಕುವುದು ಮಧ್ಯಾಹ್ನದಲ್ಲಿ! ಪ್ರಾಣಿ ದಯೆಯ ಕಾರಣದಿಂದ ನಿಜಕ್ಕೂ ಈ ಸಂಸ್ಥೆಗಳಿಗೆ ನಾಯಿ ನಿಯಂತ್ರಣದ ಮೂಲಕವೇ ನಾಯಿ ಕಾಟಕ್ಕೆ ಪರಿಹಾರ ಕಾಣಿಸಬೇಕೆಂದಿದ್ದರೆ ಅವು ರಾತ್ರಿ ವೇಳೆ ಕಾರ್ಯನಿರ್ವಹಿಸಲಿ. ಇಲ್ಲದಿದ್ದರೆ ನಾಯಿ ಕಾಟ ಎಂದಿನಂತೆ ಕತ್ತಲಲ್ಲೇ ಇರುತ್ತದೆ. ಎಬಿಸಿ ಹೆಸರಿನ ದಂಧೆ ರಾಜಾರೋಷವಾಗಿ ಹಗಲಲ್ಲೇ ಮುಂದುವರೆಯುತ್ತದೆ. 





ಪುಸ್ತಕ:
ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment