Tuesday, 8 March 2022

ಮಹಿಳಾ ಮೀಸಲಾತಿಯ ಸುತ್ತಮುತ್ತ



ಹದಿನೈದನೆಯ ಲೋಕಸಭೆಗೆ ಸದಸ್ಯರ ಆಯ್ಕೆಯಾಗಿ ೨೦೧೪ರಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಆಗ ದಾಖಲೆಯ ಪ್ರಮಾಣದಲ್ಲಿ ಮಹಿಳಾ ಸದಸ್ಯರು ಚುನಾಯಿತರಾಗಿದ್ದು ಒಂದು ವಿಶೇಷ. ಈ ಕಾರಣಕ್ಕಾಗಿ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆ  ಆಗಮತ್ತೆ ಬಿಸಿ ಚರ್ಚೆಗೆ ಬಂತ್ತು. 1996 ಸೆಪ್ಟೆಂಬರ್ 12ರಂದು ದೇವೇಗೌಡರು ಪ್ರಧಾನಿಯಾಗಿದ್ದ ಯುನೈಟೆಡ್ ಫ್ರಂಟ್ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮೊದಲ ಬಾರಿ ಸಂಸತ್ತಿನಲ್ಲಿ ಮಂಡಿಸಿತು. ಅಂದಿನಿಂದ ನಿರಂತರವಾಗಿ ಇದು ಆಗಾಗ ಚರ್ಚೆಯಾಗುತ್ತಲೇ ಬಂದಿದೆ. ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಮತ್ತೆ ಇದನ್ನು ಅವಲೋಕಿಸಬಹುದು. ಈ ಮಸೂದೆ ಸಂಸತ್ತು, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಒಟ್ಟೂ ಲಭ್ಯ ಸ್ಥಾನಗಳಲ್ಲಿ ಶೇ.33.3 ಸ್ಥಾನಗಳನ್ನು ಮಹಿಳೆಗೆ ಮೀಸಲಿಡುವ ಪ್ರಸ್ತಾಪ ಮಾಡಿದೆ. ಅಂದರೆ ಇದು ಲಭ್ಯ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಗೆ ಕೊಡಬೇಕು ಎನ್ನುತ್ತದೆ. ಈಗಾಗಲೇ ಎಸ್‍ಟಿ ಎಸ್‍ಟಿ ಮೀಸಲಲ್ಲಿ ಮಹಿಳೆಗೆ ಸಂವಿಧಾನ ನೀಡಿದ ಮೂರನೇ ಒಂದು ಭಾಗವನ್ನು ಈ ಮೀಸಲಿನ ಪ್ರಮಾಣಕ್ಕೂ ಆಧಾರವಾಗಿ ಇಟ್ಟುಕೊಂಡಿದೆ. ಅಂದರೆ ಮೂರನೇ ಒಂದು ಭಾಗ ಈಗಾಗಲೇ ಸಂವಿಧಾನದತ್ತವಾದ ಮಹಿಳಾ ಹಕ್ಕು ಎಂದು ವ್ಯಾಪಕಾರ್ಥದಲ್ಲಿ ಭಾವಿಸಲಾಗಿದೆ. ರಾಜಕೀಯ ಶಕ್ತಿ ಅಂದರೆ ಶಾಸನ ರೂಪಿಸುವ ಅಧಿಕಾರ ದೊರೆತಾಗ ಮಾತ್ರ ಯಾವುದೇ ಬಗೆಯ ಶೋಷಣೆಯಿಂದ ಹೊರಬರಲು ಸಾಧ್ಯ ಎಂಬುದು ಒಂದು ಸ್ಥಾಪಿತ ಗ್ರಹಿಕೆ. ಮಹಿಳೆಗೆ ಅಧಿಕಾರ ಕೊಡುವ ಮೂಲಕ ಮಹಿಳಾ ಸಮಸ್ಯೆಯನ್ನು ನಿವಾರಿಸಬಹುದು ಎಂಬುದು ಇದೇ ಗ್ರಹಿಕೆಯ ಉತ್ಪನ್ನ. 

ನಿಜವಾಗಿ ಪರಿಶಿಷ್ಟ ಜಾತಿ, ಪಂಗಡ, ಅಥವಾ ಬೇರೆ ಯಾವುದೇ ಅವಕಾಶ ವಂಚಿತ ಜಾತಿಗಳಿಗೆ ಮೀಸಲು ಕೊಡುವ ಮೂಲಕ ಅವರ ಸ್ಥಾನಮಾನ ಹೆಚ್ಚಿಸಿ, ಮೇಲ್ಜಾತಿಗಳೊಂದಿಗೆ ಬರುವಂತೆ ಮಾಡಿ ಸಾಮಾಜಿಕ ಸಮಾನತೆ ಸಾಧಿಸುವುದು ಮೀಸಲಾತಿಯ ಮೂಲ ಉದ್ದೇಶ. ಸಮಾನತೆಯ ಸಾಧನೆಗೆ ಮೀಸಲಾತಿ ಒಂದು ಉಪಕರಣವೇ ವಿನಾ ಅದೇ ಸರ್ವಸ್ವವಲ್ಲ. ಮೀಸಲಾತಿ ಮೂಲಕ ಸಮಾನತೆ ಸಾಧನೆ ಒಂದು ಸಿದ್ಧಾಂತವೂ ಹೌದು. ಅದಕ್ಕೆ ಭಿನ್ನ ರಾಗಗಳೂ ಇವೆ. ಕೆಲವರು ರಾಜಕೀಯ ಅಧಿಕಾರದಿಂದ ಇದು ಸಾಧ್ಯ ಎಂದರೆ ಇನ್ನು ಕೆಲವರು ಶಿಕ್ಷಣದ ಮೂಲಕ ಸಾಧ್ಯ ಎನ್ನುತ್ತಾರೆ, ಮತ್ತೆ ಕೆಲವರು ಆರ್ಥಿಕ ಪರಿಸ್ಥಿತಿ ಸುಧಾರಣೆಯಿಂದ ಸಾಧ್ಯ ಎಂದು ವಾದಿಸುತ್ತಾರೆ. ಇವೆಲ್ಲ ವಾದಗಳಲ್ಲೂ ಅಷ್ಟು ಇಷ್ಟು ಹುರುಳಿದೆ. ಆದರೆ ಸಾಮಾಜಿಕ ಸಮಸ್ಯೆಯೊಂದಕ್ಕೆ ರಾಜಕೀಯ ಅಥವಾ ಆರ್ಥಿಕತೆಯಲ್ಲಿ ಪರಿಹಾರ ಹುಡುಕುವುದು ವ್ಯರ್ಥ. ಜಾತಿ ಮೀಸಲು ಅಥವಾ ಮಹಿಳಾ ಮೀಸಲು ಮೊದಲಾದವುಗಳಿಗೆ ಆಧಾರಭೂತ ಸಮಸ್ಯೆಗಳು ಸಾಮಾಜಿಕವೇ ವಿನಾ ರಾಜಕೀಯ ಅಥವಾ ಆರ್ಥಿಕವಲ್ಲ. ಅಂದ ಮೇಲೆ ಈ ಸಮಸ್ಯೆಗಳಿಗೆ ಸಾಮಾಜಿಕ ಉತ್ತರವೇ ಬೇಕು. ಇದುವರೆಗೆ ನೀಡಿದ ಯಾವುದೇ ಮೀಸಲಾತಿ ಸಮಸ್ಯೆಗೆ ಸಾಮಾಜಿಕ ಪರಿಹಾರವನ್ನು ಕೊಡುವಲ್ಲಿ ವಿಫಲವಾಗಿದೆ. ಕೇವಲ ರಾಜಕೀಯ ಮತ್ತು ಆರ್ಥಿಕ ಆಮಿಷ ಮತ್ತು ಪರಿಹಾರಗಳಷ್ಟೇ ಇವುಗಳಲ್ಲಿ ಕಾಣಿಸುತ್ತದೆ. ಹಾಗಾಗಿಯೇ 1950ರ ದಶಕದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ಕೇವಲ 10 ವರ್ಷಗಳಿಗೆ ಎಂದೂ ಅಗತ್ಯ ಬಿದ್ದರಷ್ಟೇ ಮುಂದುವರೆಸಬೇಕೆಂದೂ ಸಂವಿಧಾನ ಸ್ಪಷ್ಟಪಡಿಸಿತ್ತು. ಈ “ಅಗತ್ಯ’’ವನ್ನು ರಾಜಕೀಯವಾಗಿ ಮನಗಂಡ ರಾಜಕಾರಣಿಗಳು ಮತ್ತೆ ಮತ್ತೆ ಮೀಸಲಾತಿಯನ್ನು ಮುಂದುವರೆಸುತ್ತಲೇ ಬಂದರು. ಆದರೆ ಶೋಷಿತ ಸಮುದಾಯಗಳು ನಿರೀಕ್ಷಿತ ಮಟ್ಟವನ್ನು ತಲುಪಿಯೇ ಇಲ್ಲ. "ಅಗತ್ಯ" ಮೀಸಲಾತಿ ಈಗ ರಾಜಕೀಯವಾಗಿ ಅನಿವಾರ್ಯ ಎನಿಸುವ ಸ್ಥಿತಿ ತಲುಪಿದೆ. ಅಕಸ್ಮಾತ್ ಉದ್ದೇಶಿತ ಸಮುದಾಯಗಳು ಉದ್ಧಾರವಾದರೂ ಮೀಸಲಾತಿಯನ್ನು ಮಾತ್ರ ನಿಲ್ಲಿಸಲಾಗದು ಎಂಬ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ನಿಲ್ಲಿಸುವ ಮಾತಿರಲಿ, ಇನ್ನು ಎಲ್ಲೆಲ್ಲಿ ಯಾವ ಯಾವ ಬಗೆಯ ಮೀಸಲಾತಿ ಗುರುತಿಸಲು ಅವಕಾಶವಿದೆ ಎಂಬ ನಿರಂತರ ಹುಡುಕಾಟ ರಾಜಕೀಯ ದಂಧೆಯಾಗಿಹೋಗಿದೆ. ಈಗ ಈ ಪಟ್ಟಿಗೆ ಹೊಸ ಸೇರ್ಪಡೆ ಮಹಿಳಾ ಮೀಸಲಾತಿ! 

ದೇಶದ ಯಾವುದೇ ಜಾತಿ ಸಮುದಾಯದಲ್ಲೂ ಅತ್ಯಂತ ಹೆಚ್ಚು ಶೋಷಣೆಗೆ ಒಳಗಾದ ಜಾತಿ ಎಂದರೆ ಹೆಣ್ಣಿನದು ಎಂಬ ಮಾತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆಯ ಆದರ್ಶದಲ್ಲಿ ನೋಡಿದಾಗ ಈ ಮಾತು ಅಕ್ಷರಶಃ ಸತ್ಯ. ಸಮಾನತೆ ನಾಗರಿಕ ಸಮಾಜದ ಮೂಲಭೂತ ಲಕ್ಷಣ. ಸಮಾನತೆ ಇಲ್ಲದಿದ್ದರೆ ಜನತಂತ್ರಕ್ಕೆ ಅರ್ಥವೇ ಇಲ್ಲ. ನಮ್ಮ ಇಂದಿನ ಸಮಾಜ ಆಧುನಿಕ ನಾಗರಿಕತೆ ಮತ್ತು ಜನತಂತ್ರ ವ್ಯವಸ್ಥೆಗಳೆರಡನ್ನೂ ಸ್ವೀಕರಿಸಿದೆ. ಅಂದ ಮೇಲೆ ಯಾವುದೇ ಬಗೆಯ ಅಸಮಾನತೆಗೆ ಇಲ್ಲಿ ಅವಕಾಶವಿಲ್ಲ, ಇರಬಾರದು. ಎಲ್ಲ ಮೀಸಲಾತಿಗಳಂತೆಯೇ ಈ ಮೀಸಲಾತಿಯೂ ಒಂದು ರಾಕೀಯ ಹುನ್ನಾರವಾಗಿಯೇ ಕಾಣುತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ.

ದೇಶದ ಮೊದಲ ಲೋಕಸಭೆಗೆ (1952-57) ಶೇ.4.4 ಮಹಿಳಾ ಸದಸ್ಯರಿದ್ದರು. ನಂತರ ಈ ಪ್ರಮಾಣ ಏರುತ್ತ ಬಂತು. 13ನೇ ಲೋಕಸಭೆಯಲ್ಲಿ(1999-2004) ಶೇ. 9.2ರಷ್ಟಾಯಿತು. 14ನೇ ಲೋಕಸಭೆಯಲ್ಲಿ(2004-2009) ಶೇ. 6.3ರಷ್ಟಾಯಿತು. ಇದುವರೆಗಿನ ಲೋಕಸಭೆಗಳಲ್ಲಿ ಅತ್ಯಂತ ಕಡಿಮೆ ಮಹಿಳಾ ಸದಸ್ಯರ ಸಂಖ್ಯೆ ಕಾಣಿಸಿದ್ದು 1977-80ರ ಅವಧಿಯಲ್ಲಿ. ಆಗ ಇದ್ದುದು ಕೇವಲ ಶೇ.3.8 ಮಹಿಳಾ ಸದಸ್ಯರು. ಈ ಬಾರಿ ಲೋಕಸಭೆಗೆ ಶೇ.15 ಮಹಿಳಾ ಸದಸ್ಯರು ಆಯ್ಕೆಯಾಗಿದ್ದಾರೆ. 2009ರ ಚುನಾವಣೆಯಲ್ಲಿ ದೇಶಾದ್ಯಂತ ಸ್ಪರ್ಧಿಸಿದ್ದ ಮಹಿಳೆಯರ ಸಂಖ್ಯೆ 556. ಇವರಲ್ಲಿ 59 ಜನ ಆಯ್ಕೆಯಾಗಿದ್ದಾರೆ. ಇವರಲ್ಲಿ ಯಾರೊಬ್ಬರೂ ಅಪರಾಧ ಹಿನ್ನೆಲೆಯವರಲ್ಲ. ಇವೆರಡೂ ಸಂಗತಿಗಳು ಸಂತೋಷ ಹುಟ್ಟಿಸುತ್ತವೆ. ಪುರುಷ ಸದಸ್ಯರಲ್ಲಿ ಈ ಬಾರಿ ಬರೋಬ್ಬರಿ 50 ಜನ ಮಹಾ ಅಪರಾಧ ಹಿನ್ನೆಲೆಯವರು. ಇದು ನಾಚಿಕೆಯ ಸಂಗತಿ. ಇದೇನೇ ಇರಲಿ. 

ಮಹಿಳಾ ಸದಸ್ಯರಲ್ಲಿ 17 ಜನ 40 ವರ್ಷಕ್ಕೂ ಕಡಿಮೆಯವರು ಎಂಬುದು ಇನ್ನೂ ಒಂದು ಗುಣಾತ್ಮಕ ಅಂಶ. ಈ ಬಾರಿ ಹೆಚ್ಚಿದ ಮಹಿಳಾ ಸದಸ್ಯರ ಸಂಖ್ಯೆಯಿಂದ ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗುತ್ತದೆ ಎಂಬುದು ಹೆಚ್ಚಿನವರ ಆಶಾವಾದ. ಮೀಸಲಾತಿಯಿಂದ ಮಹಿಳೆಗೆ ರಾಜಕೀಯ ಸಬಲತೆ ಬರುತ್ತದೆ, ಮಹಿಳೆ ರಾಜಕೀಯವಾಗಿ ಸಕ್ರಿಯವಾಗಲು ಈ ಮೀಸಲಾತಿ ಅನಿವಾರ್ಯ ಎಂಬುದು ಮೀಸಲಾತಿ ಪರ ಇರುವವರ ಅಭಿಮತ.  

ಮಹಿಳಾ ಮೀಸಲಾತಿ ಮಸೂದೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಲಾಲೂ ಯಾದವ್, ಮುಲಾಯಂ ಸಿಂಗ್ ಪ್ರಮುಖರು. ಈ ಮೀಸಲಾತಿ ಕೇವಲ ಮೇಲ್ವರ್ಗದ ಮಹಿಳೆಗೆ ಮಾತ್ರ ಅವಕಾಶ ಮಾಡಿಕೊಡುತ್ತದೆ, ಹಿಂದುಳಿದ, ಅಲ್ಪಸಂಖ್ಯಾತ, ಬಡ, ಶೋಷಿತ ಮಹಿಳೆಗೆ ಈಗ ಪ್ರಸ್ತಾಪಿಸಿದ ಮಸೂದೆಯಿಂದ ಉಪಯೋಗವಿಲ್ಲ, ಹಾಗಾಗಿ ಮುಸ್ಲಿಂ ಮಹಿಳೆಗೆ ಪ್ರತ್ಯೇಕ ಮೀಸಲು ಮತ್ತು ಒಳ ಮೀಸಲಾತಿಯ ಅವಕಾಶದೊಂದಿಗೆ ಮಸೂದೆ ಜಾರಿಯಾಗಬೇಕು ಎಂಬುದು ಇವರ ತರ್ಕ.

ಮಹಿಳಾ ಪರ ಇಷ್ಟು ಕಕ್ಕುಲಾತಿ ಇರುವ ಲಾಲೂ ತನ್ನ ಹೆಂಡತಿ ರಾಬ್ರಿ ದೇವಿಗೇ ಏಕೆ ಬಿಹಾರ ಮುಖ್ಯಮಂತ್ರಿಯಂಥ ಜಾಗವನ್ನು ಹಠದಿಂದ ಒದಗಿಸಿದರೋ? ಯಾರಾದರೂ ಅಲ್ಪಸಂಖ್ಯಾತ ಮಹಿಳೆ ಆಗ ಸಿಗಲಿಲ್ಲವೇ? ಅಧಿಕಾರ ಮತ್ತು ಅವಕಾಶಗಳನ್ನು ಹಂಚುವ ತತ್ವದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ನಿಜವಾಗಿ ಅವುಗಳನ್ನು ಹಂಚುವ ಅವಕಾಶ ದೊರೆತಾಗ ಮಾತ್ರ ತಾವೇ ಇಟ್ಟುಕೊಳ್ಳುತ್ತಾರೆ. ಜಾತಿ ಆಧಾರಿತ ಮೀಸಲು ವಿಫಲವಾಗಿರುವುದೂ ಇದೇ ಕಾರಣದಿಂದ. ಮೀಸಲು ವ್ಯವಸ್ಥೆಯಲ್ಲಿ ಒಮ್ಮೆ ಲಾಭ ಪಡೆದವರು ಆರ್ಥಿಕ, ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ಸ್ಥಾನಮಾನದಲ್ಲಿ ಮೇಲೇರುತ್ತಾರೆ. ಮೀಸಲು ಅವಕಾಶವನ್ನೆಲ್ಲ ತನ್ನ ಬಂಧು, ಬಳಗಗಳಿಗೆ ದೊರಕಿಸಲು ಆತ ಯತ್ನಿಸಿ, ಯಶಸ್ವಿಯಾಗುತ್ತಾನೆ. ಅದೇ ಜಾತಿಯಲ್ಲಿ ಒಮ್ಮೆಯೂ ಇಂಥ ಅವಕಾಶ ದೊರೆಯದವರು ಇವರೊಂದಿಗೆ ಸ್ಪರ್ಧಿಸಲಾಗದು. ಅವರು ಮತ್ತೆ ಇದ್ದಲ್ಲೇ ಇರುತ್ತಾರೆ. ಮೀಸಲಿನಲ್ಲಿ ಒಮ್ಮೆ ಅವಕಾಶ ಪಡೆದ ಕುಟುಂಬ ಮತ್ತೆ ಜಾತಿ ಆಧಾರದಲ್ಲಿ ಮೀಸಲು ಸೌಲಭ್ಯ ಪಡೆಯದಂತೆ, ಅವರ ಸ್ಥಿತಿಗತಿಗೆ ಆರ್ಥಿಕ ಹಿನ್ನೆಲೆಯನ್ನೇ ಮಾದಂಡವಾಗಿ ರೂಪಿಸಿದ್ದರೆ ಈ ಐವತ್ತು ವರ್ಷಗಳಲ್ಲಿ ಮೀಸಲು ಉದ್ದೇಶ ಎಷ್ಟೋ ಪಟ್ಟು ಈಡೇರಿರುತ್ತಿತ್ತು. ಇಂಥ ಸಾಮಾಜಿಕ ಹೊಣೆಗಾರಿಕೆ ಮೀಸಲಾತಿಯಲ್ಲಿ ಇಲ್ಲ. 

ಜಾತಿ, ವರ್ಗ, ಲಿಂಗ ಪಕ್ಷಪಾತ ಮೀರಬೇಕಾದ ಆದರ್ಶದ ಜನತಂತ್ರ ವ್ಯವಸ್ಥೆ ಮೀಸಲಾತಿ ನೆಪದಲ್ಲಿ ಇವೆಲ್ಲವನ್ನೂ ಮತ್ತೆ ಮತ್ತೆ ಪೋಷಿಸುವುದು ವ್ಯಂಗ್ಯವೇ ಸರಿ. ಜಾತಿ ಆಧಾರಿತ ಮೀಸಲಿರಲಿ, ಲಿಂಗ ಆಧಾರಿತ ಮೀಸಲು ಇರಲಿ, ಜನತಂತ್ರದಲ್ಲಿ ನಿಜವಾಗಿ ಇಂಥ ಪಕ್ಷಪಾತಕ್ಕೆ ಅವಕಾಶ ಕೂಡದು. ಅತ್ಯುತ್ತಮ ಶಿಕ್ಷಣ, ಜಾತಿ ಮತ್ತು ಲಿಂಗ ಕುರಿತ ಸಾಮಾಜಿಕ ಅಪಕಲ್ಪನೆಗಳನ್ನು ದೂರ ಮಾಡುವ ಕಠಿಣ ಕಾನೂನು ಜಾರಿಯಾಗಿ, ಎಲ್ಲ ಜಾತಿ, ಲಿಂಗದವರೂ ಆತ್ಮವಿಶ್ವಾಸದಿಂದ ಬದುಕುವಂತೆ ಮಾಡಿದರೆ ಯಾವ ಮೀಸಲಾತಿಯ ಅಗತ್ಯವೂ ಬರುವುದಿಲ್ಲ. ಯಾವುದೇ ಜಾತಿ ಅಥವಾ ಲಿಂಗದವರು ಏನು ಬೇಕಾದರೂ ಸಾಧಿಸುವ ಮುಕ್ತ ವಾತಾವರಣ ಇಂಥ ರಾಜಕೀಯ ಮೀಸಲಾತಿಯಿಂದ ಬರುವುದಿಲ್ಲ. ಕರ್ಮಠ ಸಾಮಾಜಿಕ ಗ್ರಹಿಕೆಯಾಗಲೀ ತಾರತಮ್ಯವಾಗಲೀ ಇದರಿಂದ ಬದಲಾಗದು. ಬದಲಿಗೆ ಮತ್ತಷ್ಟು ಉಲ್ಬಣವಾಗುತ್ತದೆ. ಜಾತಿ ಮೀಸಲಿನ ಆವಾಂತರಗಳೇ ಇದಕ್ಕೆ ಸಾಕ್ಷಿ. ಇಂಥ ರಾಜಕೀಯ ಕ್ರಮಗಳಿಂದ ಈಗಾಗಲೇ ಇರುವ ಸಾಮಾಜಿಕ ಸಂಕೀರ್ಣ ವ್ಯವಸ್ಥೆ ಮತ್ತಷ್ಟು ಕಗ್ಗಂಟಾಗುತ್ತದೆ. ಮೀಸಲಾತಿಯ ಮೂಲಕ ಜಾತಿ ವಿನಾಶ ಮಾಡುತ್ತೇವೆ ಎನ್ನುತ್ತ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದ ರಾಜಕೀಯ ವ್ಯವಸ್ಥೆ ಈಗ ಲಿಂಗ ಸಮಸ್ಯೆಯನ್ನೂ ಜನತಂತ್ರದಲ್ಲಿ ಸೇರಿಸಿ ಸಮಾಜ ವ್ಯವಸ್ಥೆಯನ್ನು ಇನ್ನಷ್ಟು ಗೋಜಲಿಗೆ ದೂಡುತ್ತದೆ. ಸಾಮಾಜಿಕ ಸಮಸ್ಯೆಗಳಿಗೆ ಸಾಮಾಜಿಕ ಪರಿಹಾರವೇ ಬೇಕೇ ವಿನಾ ಅನ್ಯ ಪರಿಹಾರವಲ್ಲ. ಇದು ರಾಜಕಾರಣಿಗಳಿಗೆ ಅರ್ಥವಾಗುವುದು ಯಾವಾಗ?

No comments:

Post a Comment