Monday, 28 February 2022

ಇಷ್ಟ ಬಂದಾಗ ಶಿವರಾತ್ರಿ

 


ಇದೀಗ ರಾಜ್ಯಾದ್ಯಂತ ಮೂಢ ನಂಬಿಕೆ ನಿಗ್ರಹ ಮಸೂದೆ ಕುರಿತ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ (2013). ಒಬ್ಬ ಸಾಮಾನ್ಯ ನಾಗರಿಕನಾಗಿ, ಜಾನಪದ ಕ್ಷೇತ್ರಕಾರ್ಯಕರ್ತನಾಗಿ ಈ ಕುರಿತು ಕೆಲವು ಸಂಗತಿಗಳನ್ನು ಹಂಚಿಕೊಳ್ಳಬೇಕೆನಿಸುತ್ತಿದೆ.

ಪ್ರಸ್ತುತ ಮಸೂದೆಯಲ್ಲಿ ಮೂಢ ನಂಬಿಕೆ ಎಂದರೇನು? ಹೋಗಲಿ, ನಂಬಿಕೆ ಎಂದರೇನು ಎಂಬುದನ್ನು ಸ್ಪಷ್ಟಪಡಿಸಿಲ್ಲದಿರುವುದು ಸ್ಪಷ್ಟ. ಇದೊಂದು ಅಮೂರ್ತ ಸಂಗತಿ. ಮೂಢ ನಂಬಿಕೆ ಎಂಬುದೊಂದು ಇದ್ದರೆ ಅದಕ್ಕೆ ವಿರುದ್ಧ ಪದವೂ ಇರಬೇಕು. ಅದೇನು? ತಿಳಿದಿಲ್ಲ. ಹಾಗಾದರೆ ಈ ಪದ ಬಂದಿದ್ದು ಎಲ್ಲಿಂದ? ಯೂರೋಪ್ ಶಿಕ್ಷಣದ ಜೊತೆ, “ಬ್ಲೈಂಡ್ ಬಿಲೀಫ್” ಎಂಬುದರ ಅನುವಾದದಿಂದ. ಕೆಲವರು ಇದನ್ನು ಅಂಧಶ್ರದ್ಧೆ ಎಂದರೆ, ಇನ್ನು ಕೆಲವರು ಮೂಢ ನಂಬಿಕೆ ಎನ್ನುತ್ತಾರೆ. ಯಾವುದು “ಅಂಧ” ಅಥವಾ “ಮೂಢ” ಎಂಬುದಕ್ಕೆ ಯೂರೋಪಿನಲ್ಲಿ ಸ್ಪಷ್ಟ ಗೆರೆ ಇದೆ. ಬೈಬಲ್‍ನಲ್ಲಿ ಉಲ್ಲೇಖವಾಗಿರದ ಎಲ್ಲ ನಂಬಿಕೆ, ಆಚರಣೆಗಳೂ ಅಲ್ಲಿ ಅಂಧ, ಮೂಢ. ಆದರೆ ಭಾರತದಂಥ ವೈವಿಧ್ಯಮಯ ಸಾಂಸ್ಕøತಿಕ ಪರಿಸರದಲ್ಲಿ ಬೈಬಲ್ ಸೇರಿದ್ದು ಪಾಶ್ಚಾತ್ಯರ ಆಗಮನದ ಜೊತೆ. ಕೆಲವೇ ಶತಮಾನಗಳ ಈಚೆಗೆ. ಅಂದರೆ, ನಮ್ಮೊಳಗಿನ ಅಂಧತ್ವ ಅಥವಾ ಮೌಢ್ಯಗಳು ಕಾಣಿಸತೊಡಗಿದ್ದೂ ಈಚೆಗೇ. ನಂಬಿಕೆ ಪ್ರಶ್ನಿಸುವ ನಮ್ಮ ವೈಚಾರಿಕರು ಇದನ್ನು ಸ್ವಲ್ಪ ವಿಸ್ತರಿಸಿ ಯಾವುದು ವೈಜ್ಞಾನಿಕವಲ್ಲವೋ ಅದೆಲ್ಲ ಮೌಢ್ಯ ಎಂದು ಹೇಳುತ್ತಾರೆ! ಇದು ವೈಜ್ಞಾನಿಕ, ಇದು ಅವೈಜ್ಞಾನಿಕ ಎಂದು ಹೇಳಲು ಯಾವುದೇ ನಿರ್ದಿಷ್ಟ ಮಾನದಂಡವಿಲ್ಲ.

ಸರಳವಾಗಿ ಹೇಳುವುದಾದರೆ, ಯಾವುದೇ ನಂಬಿಕೆಯಿಂದ ಮತ್ತೊಂದು ಜೀವಕ್ಕೆ ಭಾಷಿಕ, ಮಾನಸಿಕ ಅಥವಾ ದೈಹಿಕ ತೊಂದರೆ ಆಗುತ್ತಿಲ್ಲ ಎನ್ನುವುದಾದರೆ ಅಂಥ ನಂಬಿಕೆಯನ್ನು ಹೇಗೆ ಮೌಢ್ಯ ಎನ್ನುವುದು? ಜಗತ್ತಿನ ಅಸಂಖ್ಯ ಸಮುದಾಯಗಳಲ್ಲಿ ಅನ್ಯ ಸಮುದಾಯಗಳಿಗೆ ಸರಿ ಕಾಣದ ಅಸಂಖ್ಯ ನಂಬಿಕೆಗಳಿವೆ, ಜೀವನ ವಿಧಾನಗಳಿವೆ. ಕೆಲವು ಕಾಲಾಂತರ ಬದಲಾಗುತ್ತವೆ. ಕೆಲವನ್ನು ಸಮಾಜವೇ ಬದಲಾಯಿಸಿಕೊಳ್ಳುತ್ತದೆ, ಕೆಲವನ್ನು ಕೈಬಿಡುತ್ತದೆ. ಶಾಸ್ತ್ರ ಕೇಳುವುದರಿಂದ ಒಬ್ಬ ವ್ಯಕ್ತಿಗೆ ಮಾನಸಿಕ ಶಾಂತಿ ದೊರೆಯುವುದಾದರೆ ಅದನ್ನು ಬೇರೆಯವರು ಮೌಢ್ಯ ಎಂದೇಕೆ ಕರೆಯಬೇಕು? ಇಂಥ ಪ್ರಶ್ನೆಗಳಿಗೆ ಉತ್ತರ ದೊರೆಯುವುದಿಲ್ಲ.

ನಂಬಿಕೆಯ ಪ್ರಶ್ನೆಯೇ ಹಾಗೆ. ಬೇರೆಯವರಿಗೆ ತೃಪ್ತಿಯಾಗುವ ಉತ್ತರ ಅದರಲ್ಲಿ ಇಲ್ಲ. ಏಕೆಂದರೆ ಅದರ ಸ್ವರೂಪವೇ ಅಂಥದ್ದು. ಜೀವನವೇ ಒಂದು ನಂಬಿಕೆ. ಇಂದು ನಾವು ಮಾಡುವ ಕೆಲಸಗಳೆಲ್ಲ ನಾಳೆ ಒಳ್ಳೆಯದಾಗಲಿ ಎಂದಲ್ಲವೇ? ಇದನ್ನು ವೈಜ್ಞಾನಿಕಗೊಳಿಸುವುದು ಹೇಗೆ? ನಂಬಿಕೆಯ ನಾಳೆಗಳೆಲ್ಲ ಒಂದರ್ಥದಲ್ಲಿ ಮೌಢ್ಯವೇ! 

ಅಷ್ಟಕ್ಕೂ ನಂಬಿಕೆ, ಆಚರಣೆ ಮೊದಲಾದವೆಲ್ಲ ವೈಜ್ಞಾನಿಕವೇ ಏಕಾಗಬೇಕು? ಸಾಹಿತ್ಯ ವಿಜ್ಞಾನವೇ? ಇತಿಹಾಸ ವಿಜ್ಞಾನವೇ? ಇಂಥ ಪ್ರಶ್ನೆಗಳಿಗೆ ಅರ್ಥವಿಲ್ಲ. ವಿಜ್ಞಾನದಂತೆ ಇವೂ ಸಮಾಜದ ಒಂದು ಸೃಷ್ಟಿಗಳು. ಬರೀ ವಿಜ್ಞಾನವೇ ಜೀವನವಲ್ಲ. ಕಲೆ, ಸಾಹಿತ್ಯ ಇತ್ಯಾದಿ ಮಾನವಿಕ, ಸಾಮಾಜಿಕ ಅಧ್ಯಯನದ ಅನೇಕಾನೇಕ ವಿಷಯಗಳು ವಿಜ್ಞಾನೇತರವಾದವು. ನಿಜವಾಗಿ ವಿಜ್ಞಾನ ವಿಷಯಗಳಲ್ಲೇ ಶುದ್ಧ ವಿಜ್ಞಾನ, ಆನ್ವಯಿಕ ವಿಜ್ಞಾನ ಇತ್ಯಾದಿ ವಿಂಗಡಣೆಗಳಿವೆ. ಆಧುನಿಕ ಅಧ್ಯಯನ ಶಿಸ್ತುಗಳಲ್ಲೇ ವಿಜ್ಞಾನೇತರ ಸಂಗತಿಗಳಿಗೆ ಜಾಗವಿದೆ. ಬದುಕಿನಲ್ಲಿ ಏಕಿರಬಾರದು?

ನಾವು ಈಗ ಅಂದುಕೊಳ್ಳುವ ನಂಬಿಕೆಗಳಲ್ಲಿನ ವೈಜ್ಞಾನಿಕತೆಯ ಹಿಂದೆ ಒಂದು ನಂಬಿಕೆಯಲ್ಲಿ ಕಾರ್ಯ ಕಾರಣ ಸಂಬಂಧ ಕಾಣಿಸಬೇಕು, ಅದು ಸಾರ್ವತ್ರಿಕ ಸತ್ಯವಾಗಬೇಕು ಎಂಬ ವಿಜ್ಞಾನದ ಪ್ರಾಥಮಿಕ ನಿಯಮಗಳೇ ಕಾಣಿಸುತ್ತವೆ. ನಂಬಿಕೆಗಳು ಹೀಗೆ ಇರಬೇಕಿಲ್ಲ. ಇದ್ದರೆ ನಮ್ಮ ಸಾಂಸ್ಕøತಿಕ ಬದುಕಿನ ವೈವಿಧ್ಯ ಇರುವುದಿಲ್ಲ. ಪ್ರಸ್ತುತ ಮಂಡಿತವಾದ ಮಸೂದೆ ಜೀವನ ಕ್ರಮದಲ್ಲಿ ಏಕರೂಪತೆಯನ್ನು ಕಾನೂನಿನ ಮೂಲಕ ಹೇರುವ ಯತ್ನ ಮಾಡುತ್ತಿದೆ ಎನಿಸುತ್ತಿದೆ. ಮೂಲತಃ ಇದು ಮುಹೂರ್ತದಂಥ ಎಲ್ಲ ಜನರ ಆಚರಣೆಗೂ ಒಂದಲ್ಲ ಒಂದು ರೀತಿ ಪ್ರಮುಖ ಎನಿಸಿದ ಸಂಗತಿಯನ್ನು ಅರ್ಥಹೀನ ಎಂಬ ಕಾರಣಕ್ಕೆ ನಿಷೇಧಿಸುತ್ತಿದೆ. ಇದೇ ನಿಜವಾಗಿ ಮೌಢ್ಯ. ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿವಿಧ ಜಾತಿ ಸಮುದಾಯಗಳ ಕ್ಷೇತ್ರಕಾರ್ಯ ಒಡನಾಟದಲ್ಲಿ ಆಯಾ ಸಮುದಾಯಗಳ ಆಚರಣೆಯಲ್ಲಿ ಮುಹೂರ್ತ ಇರುವುದನ್ನು ಕಂಡಿದ್ದೇನೆ. ಈ ಮುಹೂರ್ತ ನಿಗದಿಗೆ ಪಂಚಾಂಗವೇ ಬೇಕಿಲ್ಲ. ನೈಸರ್ಗಿಕ ಬದಲಾವಣೆ ಗಮನಿಸಿ ಮುಹೂರ್ತ ನೋಡುವ ಅವರವರದೇ ವಿಧಾನಗಳಿವೆ. ಕರಾವಳಿಯ ಜನ ಮುಂಗಾರು ತಿಳಿಯಲು ಸಮುದ್ರದ ಬದಲಾವಣೆಯನ್ನು ಗಮನಿಸಿ ಸಮುದ್ರದಲ್ಲಿ “ಕರಿನೀರು” ಬಂದಕೂಡಲೇ ಒಕ್ಕಲು ಕೆಲಸದ ಮುಹೂರ್ತ ಇಟ್ಟುಕೊಳ್ಳುತ್ತಾರೆ. ಸುಗ್ಗಿ ಕುಣಿತಕ್ಕೂ ಇಂಥ ಮತ್ತೊಂದು ನೈಸರ್ಗಿಕ ಮುಹೂರ್ತ ನೋಡುತ್ತಾರೆ. ಇದಕ್ಕೇನು ಮಾಡುವುದು? ಇದೇ ರೀತಿ ನಂದಿಕೋಲು, ಪೂಜಾ ಕುಣಿತ, ದೊಡ್ಡಾಟ, ಸಣ್ಣಾಟ, ಚೌಡಿಕೆ ಮೇಳ, ಕಂಸಾಳೆ, ಒಂದೇ ಎರಡೇ ಈ ಎಲ್ಲ ಕಲೆಗಳೂ ಒಂದಲ್ಲ ಒಂದು ಧಾರ್ಮಿಕ ಆಚರಣೆಯ, ನಂಬಿಕೆಯ ಮೇಲೆ ನಿಂತಿವೆ. ಇವು ನಿರ್ದಿಷ್ಟ ಮುಹೂರ್ತವನ್ನು ಅವಲಂಬಿಸಿವೆ. ಮಸೂದೆ ಪ್ರಕಾರ ಇವೂ ನಿಷಿದ್ಧವಾಗುತ್ತವೆ. ಅಂದರೆ ಜನಪದರ ಒಂದು ಜ್ಞಾನ, ಒಂದು ಕಲೆಗೆ ಮೂಲ ಆಧಾರವಾದ ಸಂಗತಿಯನ್ನೇ ವೈಜ್ಞಾನಿಕತೆಯ ಹೆಸರಲ್ಲಿ ಇಲ್ಲವಾಗಿಸುವ ಯತ್ನ ಇದು. 

ಮಸೂದೆ ಮಂಡಿಸಿದ ಸಮಿತಿಯಲ್ಲಿ ಇರುವವರ ಮಾನವೀಯ ಕಾಳಜಿಯನ್ನು ಯಾರೂ ಪ್ರಶ್ನಿಸುತ್ತಿಲ್ಲ. ಆದರೆ ಸಮಿತಿಯಲ್ಲಿರುವವರು ತಾವು ನಿಷೇಧಿಸಲು ಹೇಳುತ್ತಿರುವ ಸಂಗತಿಗಳ ಬಹು ಆಯಾಮವನ್ನು ಪರಿಶೀಲಿಸಿಲ್ಲ ಎಂಬುದು ಸ್ಪಷ್ಟ. ಬಗೆ ಬಗೆಯ ಮುಹೂರ್ತ, ಜಾತಕಗಳ ಮೂಲಕ ಒಳಿತು ಕೆಡುಕಾಗುತ್ತದೆಯೇ ಎಂಬುದನ್ನು ತಿಳಿದೇ ಬಹುಪಾಲು ಆಚರಣೆ, ನಂಬಿಕೆ, ಕಲೆಗಳು ಉಳಿದುಬಂದಿವೆ. ಆಚರಣೆ ಮಾಡುವ ವ್ಯಕ್ತಿಗೆ ನಿರ್ದಿಷ್ಟ ದಿನ ತಿಳಿಯುವ ವಿಧಾನಗಳಾಗಿ ಜಾತಕ ಮತ್ತು ಮುಹೂರ್ತಗಳಿವೆ. ಇವುಗಳನ್ನು ನಿಷೇಧಿಸಿದ ರಾಜ್ಯದಲ್ಲಿ ಶಿವರಾತ್ರಿಯಂದು ಹರಿಕಥೆ ಮಾಡಿಸಿ ಒಳಿತಾಗುತ್ತದೆ ಎಂದು ಒಬ್ಬರು ಶಾಸ್ತ್ರ ಹೇಳಿದರೆ ಆತ ಇಷ್ಟ ಬಂದಾಗ ಶಿವರಾತ್ರಿ ಮಾಡಬಹುದೇ? ಕಷ್ಟ ಪರಿಹಾರಕ್ಕೆ ನವರಾತ್ರಿಯಂದು ನಂದಿಕೋಲು ಹೊತ್ತುಕೊಳ್ಳಿ ಎಂದರೆ ಆತ ಏನು ಮಾಡಬೇಕು? ಹೋಗಲಿ. ಯಾರೋ ಇಂಥ ಶಾಸ್ತ್ರ ಹೇಳಿದರು, ಕಷ್ಟದಲ್ಲಿರುವಾತ ಮಾಡಿ, ನೆಮ್ಮದಿ ಕಂಡುಕೊಂಡರೆ ಯಾರಿಗೆ ಏನು ಹಾನಿ? ಪರಮಾನಸಶಾಸ್ತ್ರ (ಪ್ಯಾರಾ ಸೈಕಾಲಜಿ)ದ ಯಾವುದೇ ಚಿಕಿತ್ಸಕನನ್ನು ಕೇಳಿ, ಆತ ಇಂಥ ನೆವಗಳಿಂದ ಯಾವ ಹೈಟೆಕ್ ಆಸ್ಪತ್ರೆಯಲ್ಲೂ ವಾಸಿಯಾಗದ ಸಾವಿರ ಸಾವಿರ ಕಾಹಿಲೆ ಗುಣಪಡಿಸಿರುತ್ತಾನೆ. 

ಇಲ್ಲಿರುವುದು ಆಸ್ತಿಕತೆ, ನಾಸ್ತಿಕತೆಯ ಪ್ರಶ್ನೆಯಲ್ಲ. ಸಾಂಸ್ಕøತಿಕ ಬಹುಳತೆಯ ನಾಶದ ಪ್ರಶ್ನೆ. ಸಾಮಾನ್ಯವಾಗಿ ಪ್ರಶ್ನಿಸುವವರು ಬರೇ ಪ್ರಶ್ನಿಸುತ್ತಾರಷ್ಟೆ. ಉತ್ತರ ದೊರೆತರೆ ಸುಮ್ಮನಾಗುತ್ತಾರೆ. ಆದರೆ ಅವರಲ್ಲಿ ಯಾವುದೇ ಪರ್ಯಾಯಗಳಿರುವುದಿಲ್ಲ. ಕಲೆ ವೈವಿಧ್ಯಕ್ಕೆ ಆಚರಣೆ ಮೂಲ, ಆಚರಣೆಗೆ ಮುಹೂರ್ತದ ಬಲ. ಮುಹೂರ್ತವನ್ನೇ ನಿಷೇಧಿಸಿದರೆ ಉಳಿಯುವುದೇನು? ಏಕರೂಪ ಜೀವನ.

ನಂಬಿಕೆಗಳ ಪ್ರಶ್ನೆ ಬಂದಾಗ ನೆನಪಾಗುವುದು ಪ್ರಭುಶಂಕರರು ಕುವೆಂಪು ಕುರಿತ ಸಮಾರಂಭದಲ್ಲಿ ಹೇಳಿದ ಸಂದರ್ಭ. ಹೀಗಿದ್ದರು ಕುವೆಂಪು ಎಂಬ ಕೃತಿಯಲ್ಲೂ ಆಮೇಲೆ ಇದು ದಾಖಲಾಗಿದೆ. ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಕುವೆಂಪು ಮತ್ತು ಪ್ರಭುಶಂಕರರು ವಾಯುವಿಹಾರ ಮಾಡುವಾಗ ತಲೆ ಬೋಳಿಸಿಕೊಂಡ ಮಹಿಳೆ, ಮಕ್ಕಳು-ಮರಿ, ಮುದುಕರು, ಯುವಕರು ಎಲ್ಲ ಬರುತ್ತಿದ್ದರಂತೆ. ಅವರೆಲ್ಲ ಯಾರು ಅಂದಾಗ, ಸಾರ್ ಅವರೆಲ್ಲ ಮಾದೇಶ್ವರ  ಜಾತ್ರೆಯಿಂದ ಬರುತ್ತಿರುವವರು ಎಂದ ಕೂಡಲೇ ಕುವೆಂಪು ಅವರು ಈ ದೇಶ ಉದ್ಧಾರವಾಗಲ್ಲ, ಎಂಥ ಮೌಢ್ಯ ಅಂದರಂತೆ. ಆಗ ಹೌದಾ ಸಾರ್ ಹಾಗಾದ್ರೆ ನಾನೂ ನೀವು ಮೂರೂ ಹೊತ್ತು ರಾಮಕೃಷ್ಣಾಶ್ರಮಕ್ಕೆ ಹೋಗಿ ಕೂರ್ತೀವಲ್ಲ, ಅದೇನು? ಅಂದಾಗ ಕುವೆಂಪು ಸುಮ್ಮನಾದರಂತೆ. 

ಎಲ್ಲರಿಗೂ ಅವರವರ ನಂಬಿಕೆ ಮಾತ್ರ ಶ್ರೇಷ್ಠ. ಉಳಿದವರ ನಂಬಿಕೆ, ಆಚರಣೆ ಅರ್ಥಹೀನವೂ ಮೌಢ್ಯವೂ ಆಗಿ ಕಾಣುತ್ತದೆ. ಈ ಮಸೂದೆ ಈಗ ಇದ್ದಂತೆ ಜಾರಿಯಾದರೆ ಕಾವೇರಿ, ಹೇಮಾವತಿಗಳಿಗೆ ಬಾಗಿನವೂ ಇಲ್ಲ, ನಾಡಹಬ್ಬ ದಸರಾವೂ ಇಲ್ಲ. ಶಿವರಾತ್ರಿಯೂ ಇಲ್ಲ ಇದ್ದರೂ ಇವನ್ನು ಇಷ್ಟಬಂದಾಗ ಮಾಡಿಕೊಳ್ಳಬೇಕು. ದಿನವಿಲ್ಲ, ಮುಹೂರ್ತವಿಲ್ಲ!

ತಮಾಷೆ ಎಂದರೆ, ಈ ಮಸೂದೆ ತಯಾರಿಸಿದ ಸಮಿತಿ ಕರಡು ಸಿದ್ಧಮಾಡಿ, ಮುಖ್ಯಮಂತ್ರಿಗಳಿಗೆ ನೀಡಿದೆ. ಮುಖ್ಯಮಂತ್ರಿಗಳು ಇದನ್ನು ಒಪ್ಪುತ್ತಾರೆ, ಕಾಯ್ದೆ ಜಾರಿಯಾಗುತ್ತದೆ ಎಂದೆಲ್ಲ ಸಮಿತಿ ನಂಬಿದೆ. ಅದೇನಾಗುತ್ತದೋ ಗೊತ್ತಿಲ್ಲ. ಬೇರೆಲ್ಲ ನಂಬಿಕೆಗಳು ಮೌಢ್ಯವಾದರೆ, ಸಮಿತಿಯ ಈ ನಂಬಿಕೆಯೂ ಮೌಢ್ಯವಲ್ಲವೇ?






ಪುಸ್ತಕ:
ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment