Wednesday, 25 May 2022

ಜೈನ ಸಾಹಿತ್ಯ ಚರಿತ್ರೆಯ ಅವಲೋಕನ


ಕನ್ನಡ ಸಾಹಿತ್ಯಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಕ್ರಿ.ಶ. 450 ರಿಂದ 20ನೆಯ ಶತಮಾನದವರೆಗೆ ಸಾವಿರಾರು ಕೃತಿಕಾರರು ಕಾಣಿಸುತ್ತಾರೆ. ಕೆಲವೊಮ್ಮೆ ಒಬ್ಬನೆ ಕೃತಿಕಾರನ ಒಂದಕ್ಕಿಂತ ಹೆಚ್ಚು ಕೃತಿಗಳು ಕಾಣಿಸುವುದುಂಟು ಇದರಲ್ಲಿ ಅಂಥ ವಿಶೇಷವೇನೂ ಇಲ್ಲ. ಆದರೆ ತಾಳೆಗರಿಯಲ್ಲಿ ಅಕ್ಷರಗಳನ್ನು ಕೆತ್ತಿ ಅದಕ್ಕೆ ಮಸಿಹತ್ತಿಸಿ ಕೃತಿ ರಚಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ಪಂಪನಂಥ ಮಹಾಕವಿ ತನ್ನ ಜೀವನದಲ್ಲಿ ಎರಡೇ ಕೃತಿಗಳನ್ನು ರಚಿಸಲು ಸಾಧ್ಯವಾಯಿತು. ಆದರೆ ಇಂದು ಕೃತಿ ರಚನೆ ಅತ್ಯಂತ ಸುಲಭದ ಮಾತಾಗಿದೆ. ವ್ಯಕ್ತಿ ಸಾಹಿತ್ಯ ರಚನೆಯಲ್ಲಿ ಆಸಕ್ತಿ ಹೊಂದಿದ್ದರೆ, ಆತ ಅರ್ಧ ವಯಸ್ಸು ದಾಟುವಷ್ಟರಲ್ಲಿ ಹತ್ತಕ್ಕಿಂತ ಹೆಚ್ಚು ಕೃತಿಗಳನ್ನು ತನ್ನ ಹೆಸರಿನಲ್ಲಿ ಪ್ರಕಟಿಸಬಹುದು. ಹಿಂದಿನ ಕಾಲದಲ್ಲಿ ಇಂದಿನಂತೆ ಬರೆಯುವ ಮತ್ತು ಮುದ್ರಿಸುವ ಸೌಕರ್ಯ ಇರದಿದ್ದದು ಇದಕ್ಕೆ ಒಂದು ಕಾರಣ. ರನ್ನನಂಥ ಕವಿ ಮಹಾಕಾವ್ಯವನ್ನು ರಚಿಸಿದ್ದರೂ ಅದನ್ನು ಪ್ರತಿಮಾಡಿಸಲು ಮತ್ತು ಹಂಚಲು ಅತ್ತಿಮಬ್ಬೆಯಂಥವರ ನೆರವು ಬೇಕಾಯಿತು. ಪಂಪ. ರನ್ನನಂಥವರಿಗೆ ಇಂದಿನಂತೆ ಕೃತಿ ರಚನೆಯ ಸೌಕರ್ಯವೇನಾದರೂ ಲಭಿಸಿದ್ದರೆ ಅದು ಎಂತಹ ಸೌಭಾಗ್ಯವನ್ನು ಕನ್ನಡಕ್ಕೆ ಒದಗಿಸುತ್ತಿತ್ತು ಎಂಬುದನ್ನು ಊಹಿಸಿಕೊಂಡರೆ ರೋಮಾಂಚನವಾಗುತ್ತದೆ.

ಕನ್ನಡದಲ್ಲಿ ಸಾಹಿತ್ಯ ರಚನಕಾರರನ್ನು ಅವರ ಮತಧರ್ಮಗಳ ಮೂಲಕ ವಿಗಂಡಿಸುವ ಕೆಲಸವನ್ನು ಪಾಶ್ಚಾತ್ಯ ವಿದ್ವಾಂಸರಾದ ಫ್ಲೀಟ್, ಕಿಟ್ಟೆಲ್, ಮುಂತಾದವರು ಆರಂಭಿಸಿದರು. ಇದನ್ನು ನಮ್ಮ ವಿದ್ವಾಂಸರು ಅನುಕರಿಸುತ್ತಾ ಇಂದಿಗೂ ಬಂದಿದ್ದಾರೆ. ಹೀಗೆ ಜಾತಿ-ಮತಗಳ ಆಧಾರದಲ್ಲಿ ಕೃತಿಕಾರರನ್ನು ವಿಗಂಡಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ನಿಜವಾಗಿ ಸಾಹಿತ್ಯವೇ ಒಂದು ಧರ್ಮ ಕೃತಿಕಾರರೇ ಒಂದು ಜಾತಿ. ಹೀಗಿರುವಾಗ 20-21ನೆಯ ಶತಮಾನದಲ್ಲಿ ಕೂಡ ಕೃತಿ ರಚನಕಾರರನ್ನು ಜಾತಿವಾರು ವಿಗಂಡಿಸಿ ನೋಡುವ ಕ್ರಮ ಉಳಿದಿರುವುದು ನಮ್ಮ ದೃಷ್ಟಿಯನ್ನು ತೋರಿಸುತ್ತದೆ. ಇದರಿಂದ ಒಳ್ಳೆಯದೂ ಇರಬಹುದು. ಆದರೆ ಸಾಮಾಜಿಕ ವಲಯದಲ್ಲಿ ಜಾತಿಪ್ರೇಮ ಮತ್ತು ಅದರ ಮಿತಿಗಳನ್ನು ಮತ್ತೆ ಸ್ಥಾಪಿಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತದೆ. 20ನೆಯ ಶತಮಾನದ ಅಂತ್ಯದಲ್ಲಿ ಕೆ.ವಿದ್ಯಾಶಂಕರ್ ಅವರು ವೀರಶೈವ ಸಾಹಿತ್ಯ ಚರಿತ್ರೆಯನ್ನು ಹೊರತಂದರು. ಇದರ ಪ್ರೇರಣೆಯಿಂದ ಇದೀಗ ಎಸ್.ಪಿ. ಪದ್ಮಪ್ರಸಾದ್ ಅವರು ಜೈನಸಾಹಿತ್ಯ ಚರಿತ್ರೆಯನ್ನು ಹೊರತರುತ್ತಿದ್ದಾರೆ. ಇದರ ಭಾಗವಾಗಿ ಸದ್ಯ ಎರಡು ಸಂಪುಟಗಳು ಹೊರಬಂದಿವೆ. ಒಂದು ಅರ್ಥದಲ್ಲಿ ಕನ್ನಡ ಸಾಹಿತ್ಯದ ಬೀಜ ನೆಟ್ಟು ಅದನ್ನು ಪೋಷಿಸಿದವರು ಜೈನ ಮತಾವಲಂಬಿಗಳೇ ಆಗಿದ್ದಾರೆ. ಇದನ್ನು ಪಟ್ಟಿಮಾಡುತ್ತಾ ಹೋದರೆ ಅದಕ್ಕೆ ಅಂತ್ಯ ಕಾಣಿಸುವುದು ಸುಲಭವಲ್ಲ. ಆದರೆ ಪ್ರಾತಿನಿಧಿಕ, ಮಹತ್ವದ ಕವಿಕೃತಿಗಳನ್ನು ಗುರುತಿಸಿ ಅವುಗಳ ವಿಸ್ತಂತ ಸಮೀಕ್ಷೆ ಮತ್ತು ವಿಮರ್ಶೆಮಾಡುವುದು ಕಷ್ಟಸಾಧ್ಯ ಇಂಥ ಕೆಲಸವನ್ನು ಪದ್ಮಪ್ರಸಾದರು ಮಾಡಿದ್ದಾರೆ. ಇವರ ಸಾಹಿತ್ಯ ಕೃತಿಯಲ್ಲಿ ಪ್ರಧಾನವಾಗಿ ಜೈನ ಕೃತಿಕಾರರ ಶಾಸನ ಸಾಹಿತ್ಯ, ಸೃಜನಶೀಲ ಕೃತಿ ಮತ್ತು ಶಾಸ್ತ್ರಗ್ರಂಥಗಳ ವಿಸ್ತøತ ಪರಿಚಯವಿದೆ. ಕೃತಿಕಾರನ ಕಾಲದ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯವೆಂಬುದನ್ನು ಗುರುತಿಸಿಕೊಳ್ಳಲಾಗಿದೆ. ಬದಲಾಗಿ ಆತನ ಕೃತಿ ಪರಿಚಯ ಭಾಷೆ, ಶೈಲಿ, ವಿಶಿಷ್ಟತೆ ಮೊದಲಾದವುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜೊತೆಗೆ ಹೆಚ್ಚಿನ ಪೂರಕ ಮಾಹಿತಿಗಳನ್ನು ಕೊಡುವ ಪ್ರಯತ್ನ ಮಾಡಲಾಗಿದೆ.

ಸದ್ಯ ಈ ಸರಣಿಯಲ್ಲಿ ಮೊದಲ ಎರಡು ಸಂಪುಟಗಳು ಹೊರಬಂದಿದ್ದು, ಮೊದಲ ಸಂಪುಟದಲ್ಲಿ ಆರಂಭ ಕಾಲದಿಂದ 1150ವರೆಗಿನ ಕವಿಕೃತಿಗಳನ್ನು ಪರಿಚಯಿಸಿಲಾಗಿದೆ. ಜೊತೆಗೆ ಸಂಮೃದ್ಧ ಪರಾಮರ್ಶನ ಪಟ್ಟಿಗಳು, ಪೂರಕ ವಿಷಯಗಳನ್ನು ಕೊಡಲಾಗಿದೆ. ಆದರೆ ಮೊದಲ ಸಂಪುಟದಲ್ಲಿ ಆರಂಭದ ಕೆಲವು ಪುಟಗಳಲ್ಲಿ ತಾಂತ್ರಿಕ ದೋಷವಿದೆ. ಮೊದಲ 13-20ವರೆಗಿನ ಪುಟಗಳು ಪುನರಾವರ್ತನೆಯಾಗಿವೆ. ಉಳಿದಂತೆ ಕೃತಿಯನ್ನು ಅಚ್ಚುಕಟ್ಟಾಗಿ ಹೊರತರಲು ಸಂಪಾದಕರು ತುಂಬ ಶ್ರಮವಹಿಸಿದ್ದಾರೆ. ಸಾಮಾನ್ಯ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲಿ ಕೆಲವೇ ಕೆಲವು ಪುಟಗಳಲ್ಲಿ ಕೊಡಲಾಗಿದ್ದ ಮಾಹಿತಿಗಳನ್ನು ಪ್ರಸ್ತುತ ಸಂಪುಟಗಳಲ್ಲಿ ವಿಸ್ತಾರವಾಗಿ ನೀಡಲಾಗಿದೆ. ಸಾಮಾನ್ಯ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲಿ ಹೆಚ್ಚು ಮಹತ್ವ ಪಡೆಯದ ಮೂಕರಾಜ, ಲಕ್ಷ್ಮಣ ಮೊದಲಾದ ಕವಿಕೃತಿಗಳ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ. ಜಾತಿಯನ್ನು ಪ್ರದಾನವಾಗಿಟ್ಟುಕೊಂಡು ಸಾಹಿತ್ಯ ಚರಿತ್ರೆಯ ರಚನೆಗೆ ಕೈಹಾಕಿದರೆ ಇಂಥ ಅವಕಾಶಗಳು ಹೆಚ್ಚು ಇರುತ್ತವೆ ಎಂಬುದು ಗಮನಾರ್ಹ ಹಾಗೆ ನೋಡಿದರೆ ಕನ್ನಡದಲ್ಲಿ ಆರ್. ನರಸಿಂಹಾಚಾರ್ಯರ ಕವಿಚರಿತೆಯಿಂದ ಹಿಡಿದು ಇಂದಿನವರೆಗೆ ಅನೇಕ ಸಾಹಿತ್ಯ ಚರಿತ್ರೆಗಳು ಹೊರಬಂದಿವೆ. ಇವುಗಳಲ್ಲಿ ಮೈಸೂರು ಮತ್ತು ಬೆಂಗಳೂರು ವಿ.ವಿಗಳು ಜೊತೆಗೆ ಅನೇಕ ಸಂಘಸಂಸ್ಥೆಗಳು ಹಾಗೂ ರಂ.ಶ್ರೀ. ಮುಗಳಿ, ತ.ಸು.ಶಾಮರಾಯ, ಐ.ಮಾ ಮುತ್ತಣ್ಣ, ಸಿ. ವೀರಣ್ಣ ಮೊದಲಾದ ಏಕವ್ಯಕ್ತಿಗಳ ಸಾಹಿತ್ಯ ಚರಿತ್ರೆಗಳು ಗಮನಾರ್ಹ ಎನಿಸಿವೆ. ಇವೆಲ್ಲಾ ಕನ್ನಡ ಸಾಹಿತ್ಯವನ್ನು ಇಡಿಯಾಗಿ ನೋಡಿವೆ. ಜಾತಿ-ಮತಗಳ ವಿಂಗಡಣೆ ಅಥವಾ ಪ್ರಾಧಾನ್ಯ ಇವುಗಳಲ್ಲಿ ಇಲ್ಲ. ಆದರೆ ಪ್ರಸ್ತುತ ಸಂಪುಟ ಜೈನ ಕೃತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡಿದೆ. ಇದರ ಮೂಲ ಉದ್ದೇಶವೇ ಇದಾಗಿದೆ.

ಯಾವುದೇ ಸಾಹಿತ್ಯ ಚರಿತ್ರೆಯನ್ನು ಜಾತಿ-ಮತಗಳ ಹಿನ್ನೆಲೆಯಲ್ಲಿ ವಿಗಂಡಿಸಿ ನೋಡುವ ವಸಹಾತುಶಾಹಿ ದೃಷ್ಟಿ ಎಷ್ಟು ಸಮಂಜಸ ಎಂಬುದು ಚರ್ಚಾರ್ಹ ವಿಷಯ. ಆದರೆ ಸದರಿ ಸಂಪುಟಗಳು ಸಾಹಿತ್ಯಾಸಕ್ತರಿಗೆ ಅತ್ಯಂತ ಉಪಯುಕ್ತವಾಗುವಂತೆ ಹೊರಬಂದಿವೆ ಎಂಬುದು ಮೆಚ್ಚಬೇಕಾದ ವಿಷಯವಾಗಿದೆ. ಈ ಸಂಪುಟಗಳಲ್ಲಿನ ಲೇಖನಗಳನ್ನು ಬೇರೆಬೇರೆ ವಿದ್ವಾಂಸರಿಂದ ಬರೆಸಿ ಬಳಸಿಕೊಳ್ಳಲಾಗಿದೆ ಅಥವಾ ಅಂಥ ಬರಹಗಳನ್ನು ಬಳಸಿಕೊಳ್ಳಲಾಗಿದೆ. ಅನಗತ್ಯವೆನಿಸುವಂಥ ಯಾವುದೇ ವಿಷಯಗಳು ಇದರಲ್ಲಿ ಸೇರಿಲ್ಲ. ಅಗತ್ಯ ಎನಿಸುವಂಥ ಎಲ್ಲ ಪೂರಕ ಮಾಹಿತಿಗಳನ್ನು ಕೊಡುವ ಸಾರ್ಥಕ ಪ್ರಯತ್ನವನ್ನು ಸಂಪಾದಕರು ಮಾಡಿದ್ದಾರೆ. ಒಂದು ರೀತಿಯಲ್ಲಿ ಈ ಸಂಪುಟಗಳು ಕನ್ನಡ ಸಾಹಿತ್ಯಕ್ಕೆ ಜೈನ ಕೃತಿಕಾರರ ವಿಶ್ವಕೋಶದಂತೆ ಹೊರಬಂದಿವೆ. ಒಂದು ಸಂಸ್ಥೆ ಮಾಡುವಂತ ಕೆಲಸವನ್ನು ಪದ್ಮಪ್ರಸಾದರು ಮಾಡಿದ್ದಾರೆ. ಇದಕ್ಕಾಗಿ ಅವರು ಅಭಿನಂದನಾರ್ಹರು. ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಉಳ್ಳವರು ಉಳಿದ ಸಾಹಿತ್ಯ ಚರಿತ್ರೆ ಸಂಪುಟಗಳ ಜೊತೆಗೆ ಈ ಸಂಪುಟಗಳನ್ನು ಅಗತ್ಯವಾಗಿ ಗಮನಿಸಬೇಕಿದೆ. ಇಲ್ಲವಾದಲ್ಲಿ ಕನ್ನಡ ಸಾಹಿತ್ಯದ ಅಧ್ಯಯನ ಅಪೂರ್ಣವಾಗುತ್ತದೆ ಎಂದು ಧಾರಾಳವಾಗಿ ಹೇಳಬಹುದು. ಈ ಸರಣಿಯಲ್ಲಿ ಇನ್ನೂ ಎರಡು ಸಂಪುಟಗಳು ಹೊರಬರಲಿವೆ ಅವು ಕೂಡ ಇಷ್ಟೇ ಉಪಯುಕ್ತವಾಗಿ ಹೊರಬರಲಿವೆ ಎಂದು ಆಶಿಸಬಹುದು. ಆದರೆ ಹೀಗೆ ಜಾತಿವಾರು ಸಾಹಿತ್ಯ ಚರಿತ್ರೆಗಳನ್ನು ಹೊರತರುತ್ತಾ ಹೋದರೆ ಅದು ಅಂತ್ಯಕಾಣುವುದು ಯಾವಾಗ ಹಾಗೂ ಈ ಬೆಳವಣಿಗೆ ಸರಿಯೇ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿಯುತ್ತದೆ. ಇದು ಮುಂದುವರೆದರೆ ಉಪಪಂಗಡಗಳ ಸಾಹಿತ್ಯಚರಿತ್ರೆಯನ್ನು ರಚಿಸಬೇಕಾಗಬಹುದು. ಇದು ಸಾಹಿತ್ಯದ ವಿಶಾಲ ದೃಷ್ಟಿಯಿಂದ ಮೆಚ್ಚುವ ಬೆಳವಣಿಗೆ ಅನಿಸುವುದಿಲ್ಲ.


ಕನ್ನಡ ಜೈನಸಾಹಿತ್ಯ ಚರಿತ್ರೆ ಸಂಪುಟಗಳು, 

ಎಸ್.ಪಿ. ಪದ್ಮಪ್ರಸಾದ್ (ಸಂ), ಪ್ರಕಾಶಕರು, ತೃಪ್ತಿ- ಎರಡನೇ ಕ್ರಾಸ್, 9ನೇ ಮುಖ್ಯರಸ್ತೆ, ಗೋಕುಲ ಬಡಾವಣೆ, ತುಮಕೂರು. ಮೊದಲ ಮುದ್ರಣ-2021. ಮೊಬೈಲ್ ಸಂಖ್ಯೆ:- 9448768567.


Thursday, 5 May 2022

ಕೊರೊನಾ ವಿರುದ್ಧ ಭಾರತೀಯ ಜನಪದರ ಹೋರಾಟ : ನಾಗರಿಕರಿಗೆ ಒಂದು ಪಾಠ


2019-20ರಲ್ಲಿ ಪ್ರಪಂಚದಾದ್ಯಂತ ಕೊರೊನಾ ವೈರಾಣು ದಾಳಿ ಇಟ್ಟು ಇಡೀ ಜಗತ್ತನ್ನು ಅಲ್ಲಾಡಿಸಿ ಲಕ್ಷಾಂತರ ಜನರನ್ನು ಬಲಿಪಡಿಯಿತು. ಇಡೀ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿತು. ಅಷ್ಟೇ ಅಲ್ಲ ಜನರ ಜೀವನ ಶೈಲಿ, ಆಹಾರ-ವಿಹಾರ ಪದ್ಧತಿಗಳನ್ನು ಪಲ್ಲಟಗೊಳಿಸಿತು. ಇದು ಆರೇಳು ತಿಂಗಳಿಗೊಮ್ಮೆ ಮೇಲೇಳುತ್ತಾ ಕೊರೊನಾ ಅಲೆಯೆಂದು ಹೆಸರು ಪಡೆಯಿತು. ಭಾರತದಲ್ಲಿ ಈಗ ನಾಲ್ಕನೆಯ ಅಲೆ ಬರಲಿದೆ ಎಂದು ತಜ್ಞರು ಅಂದಾಜು ಮಾಡುತ್ತಿದ್ದಾರೆ. ಆದರೆ ಜನಸಾಮಾನ್ಯರು ಈ ವೈರಸ್ಸಿನ ಕಾಟಕ್ಕೆ ಹೊಂದಿಕೊಂಡಂತೆ ಕಾಣುತ್ತಿದ್ದಾರೆ. ಮೊದಲನೆಯ ಅಲೆಯ ಸಂದರ್ಭದಿಂದ ಸರ್ಕಾರ ಅನೇಕ ರೀತಿಯ ಎಚ್ಚರಿಕೆ ಕ್ರಮಗಳನ್ನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು. ಮೊದಲನೆಯ ಅಲೆಯ ವೇಳೆಗೆ ಆತಂಕ ತುಂಬಾ ಹೆಚ್ಚಾಗಿತ್ತು ಜನರಲ್ಲಿ ಈ ಬಗ್ಗೆ ಅರಿವನ್ನು ಹುಟ್ಟಿಸಲು ವಿಶ್ವ ಸಂಸ್ಥೆ ಸೇರಿದಂತೆ ಪ್ರಪಂಚದ ಎಲ್ಲ ದೇಶಗಳು ಅಸಂಖ್ಯಾತ ಸಂಘಸಂಸ್ಥೆಗಳು ವೈದ್ಯರು ಸಮಾಜ ಸೇವಕರು ಜನರಲ್ಲಿ ಪ್ರಜ್ಞೆ ಮೂಡಿಸಲು ಹೆಣಗಾಡಿದರು. ಇವರೆಲ್ಲರಿಗೆ ನಗರ ಪ್ರದೇಶದ ಮೇಲೆ ಬರವಸೆ ಇತ್ತು. ನಗರದ ಜನತೆ ಈ ಕಾಟದಿಂದ ಬಚಾವಾಗುತ್ತಾರೆ. ಆದರೆ ಗ್ರಾಮೀಣ ಮತ್ತು ಕಾಡುಮೇಡಿನ ಪ್ರದೇಶದಲ್ಲಿರುವ ಜನತೆಗೆ ಈ ಬಗ್ಗೆ ಅರಿವು ಮೂಡಿಸುವುದು ಹೇಗೆ ಎಂಬ ಆತಂಕ ಇತ್ತು.

ಭಾರತದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿ ಇರಲಿಲ್ಲ ಗ್ರಾಮೀಣ ಮತ್ತು ಕಾಡುಮೇಡಿನ ಜನರನ್ನು ಸಾಮಾನ್ಯವಾಗಿ ಜನಪದ ಗುಂಪುಗಳೆಂದು ಗುರುತಿಸಲಾಗುತ್ತದೆ. ಇವರಲ್ಲಿ ಆಧುನಿಕ ಶಿಕ್ಷಣ, ಸ್ವಚ್ಛತೆಯ ತಿಳಿವಳಿಕೆ ಕಡಿಮೆ, ಸ್ವಾತ್ಯದ ಜಾಗೃತಿ ಕೂಡ ಅಷ್ಟಾಗಿ ಇರುವುದಿಲ್ಲ ಎಂದು ತಿಳಿಯಲಾಗುತ್ತದೆ. ಭಾರತದಲ್ಲಿ ಶೇ. 75ಕ್ಕೂ ಹೆಚ್ಚು ಜನಸಂಖ್ಯೆ ಇಂಥ ಪರಿಸರದಲ್ಲಿ ಇದೇ ಎಂದು ಹೇಳಲಾಗಿದೆ. ಮೊದಲ ಮತ್ತು ಎರಡನೆ ಅಲೆಯ ಸಂದರ್ಭದಲ್ಲಿ ನಿತ್ಯ 50,0000ಕ್ಕೂ ಹೆಚ್ಚು ಪ್ರಕರಣಗಳು ನಿತ್ಯ ದಾಖಲಾಗುತ್ತಿದ್ದವು ಆದರೆ ಜನಪದರ ಪ್ರದೇಶದಲ್ಲಿ ಇಂಥ ಪ್ರಕರಣ 1,000 ಪ್ರಕರಣವನ್ನು ದಾಟುತಿರಲಿಲ್ಲ. ಹೆಚ್ಚು ಪ್ರಕರಣಗಳು ನಗರದಲ್ಲಿ ಮಾತ್ರ ದಾಖಲಾಗುತ್ತಿದ್ದವು. ನಗರ ಪ್ರದೇಶದ ಜನರ ಆತಂಕವನ್ನು ಸುಳ್ಳು ಮಾಡಿದ್ದು ಈ ಜನಪದರು. ಇದು ಹೇಗೆ? ಇದು ವ್ಯಂಗ್ಯ ಎನಿಸಿದರೂ ಸತ್ಯ. ಆನಪದರು ಆಧುನಿಕ ಶಿಕ್ಷಣವನ್ನು ಪಡೆಯದೇ ಇರಬಹುದು. ವಿಶ್ವಸಂಸ್ಥೆ ಹೇಳಿದ ಆರೋಗ್ಯ ಸೂತ್ರವನ್ನು ತಿಳಿಯದೆ ಇರಬಹುದು. ಆದರೆ ಇವರು ಈ ವೈರಸ್ಸಿನ ಕಾಟದಿಂದ ಬಚಾವಾದರು. ಇದಕ್ಕೆ ಕಾರಣ ಜನಪದರ ಸಂಪ್ರದಾಯದ ಆಚಾರ-ವಿಚಾರದ ನಿಷ್ಠೆ. ಕಾರಣವೆಂದರೆ ಅತೀಶಯೋಕ್ತಿ ಅಲ್ಲ. ಕೊರೊನಾ ಪ್ರಕರಣದಲ್ಲಿ ಹೆಚ್ಚು ಸಾವು-ನೋವು ಉಂಟಾದುದು ಆಧುನಿಕ ಶಿಕ್ಷಣವನ್ನು ಹೆಚ್ಚಾಗಿ ಪಡೆದ ಎಲ್ಲ ಬಗೆಯ ಸಂವಹನ ಚಿಕಿತ್ಸೆ ಸವಲತ್ತುಗಳು ಲಭ್ಯವಿರುವ ಮಹಾನಗರಗಳ ಜನತೆ ಎಂಬುದು ಮತ್ತೊಂದು ವ್ಯಂಗ್ಯವಾಗಿದೆ.

ಮಹಾನಗರಗಳಲ್ಲಿ ಕೊರೊನಾ ಪ್ರಕರಣ ನಿತ್ಯ ಐವತ್ತು ಸಾವಿರವನ್ನು ದಾಟುತ್ತಿದ್ದಂತೆ ಅಕ್ಷರಸ್ಥರು, ವೈದ್ಯರು, ಸರ್ಕಾರಗಳು ನಡುಗಲು ಆರಂಭಿಸಿದವು. ಮಹಾನಗರಗಳಲ್ಲಿ ಎಲ್ಲ ಕಡೆ ಸ್ಯಾನಿಟೈಸೇಶನ್ ಎಂಬ ಹೊಸ ಪರಿಕಲ್ಪನೆಯನ್ನು ಈ ಸಾಂಕ್ರಾಮಿಕ ರೋಗ ತಡೆಯಲು ಕಂಡುಕೊಳ್ಳಲಾಗಿತ್ತು ಜೊತೆಗೆ ಜೊತೆಗೆ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿತ್ತು. ಈ ತಿಳಿವಳಿಕೆ ಜನಪದರಿಗೆ ಇಲ್ಲ ಇದನ್ನು ಅವರಿಗೆ ತಲುಪಿಸುವುದು ಕೂಡ ಕಷ್ಟ ಎಂಬುದು ಮೊದಲನೆಯ ಆತಂಕವಾದರೆ ಇಂಥ ಪ್ರದೇಶಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿರಲಿ, ಉತ್ತಮ ಔಷಧಿ ಅಂಗಡಿ ಕೂಡ ಇರುವುದಿಲ್ಲ. ಈಗಲೂ ಭಾರತದ ಬಹುತೇಕ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ಈ ಬಗೆಯ ವ್ಯವಸ್ಥೆ ಇರುವುದು ಅಪರೂಪವಾಗಿದೆ. ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಮತ್ತು ಕಾಡು-ಮೇಡಿನ ಪರಿಸ್ಥಿತಿಯ ಬಗ್ಗೆ ಕೇಳುವಂತಿಲ್ಲ ಹಾಗೂ ಇಂಥ ಪ್ರದೇಶದಲ್ಲೇ ಜನಸಂಖ್ಯೆ ಹೆಚ್ಚಾಗಿರುವುದು ಇಂಥ ಕಡೆ ಏನಾದರೂ ಸಾಂಕ್ರಾಮಿಕ ಹರಡಿದರೆ ಗತಿ ಏನು ಎಂಬುದು ಆತಂಕದ ನಿಜವಾದ ಕಾರಣವಾಗಿತ್ತು. ಆದರೆ ನಮ್ಮ ಜನಪದರು ಆತಂಕವನ್ನು ಸುಳ್ಳಾಗಿಸಿದರು. ನಗರದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೆ ಗ್ರಾಮೀಣ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿತ್ತು ಇದನ್ನು ಗಮನಿಸಿದ ಮಾಧ್ಯಮಗಳು ಮತ್ತು ಸಿನಿಕರು ಸರ್ಕಾರ ಗ್ರಾಮೀಣ ಭಾಗದಲ್ಲಿ ಸರಿಯಾಗಿ ಪರೀಕ್ಷೆ ನಡೆಸುತ್ತಿಲ್ಲ ಮತ್ತು ಅಧಿಕಾರಿಗಳು ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂದು ಹೇಳಲು ಆರಂಭಿಸಿದರು. ಕೊರೊನಾ ಕಾಟ ಅತಿಯಾಗಿದ್ದ 2020ರ ಮೇ ಮೊದಲ ವಾರದಲ್ಲಿ ಈ ಬಗ್ಗೆ ವಿಶೇಷವಾಗಿ 61 ಅಧ್ಯಯನಗಳನ್ನು ನಡೆಸಲಾಗಿದೆ. ಇವುಗಳ ಪ್ರಕಾರ ಶಂಕಿತ ಕೋವಿಡ್ -19 ಸಾವಿನ ಪ್ರಕರಣಗಳಲ್ಲಿ 1 ಅಥವಾ ಹೆಚ್ಚು ಪ್ರಕರಣಗಳು ಹಳ್ಳಿಗಳಿಂದ ಅದರಲ್ಲೂ ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಜಾರ್ಕಂಡ್, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಿಂದ ಬಂದಿದ್ದವು. ಇವುಗಳಲ್ಲಿ ಬಹುತೇಕ ಸಾವು ಅನೇಕ ಇತರ ಕಾರಣಗಳಿಂದ ಉಂಟಾಗಿದ್ದವು. ಹಾಗೇ ನೋಡಿದರೆ ನಿಜವಾದ ಕೊರೊನಾ ಪ್ರಕರಣಗಳಿಂದ ಈ ಪ್ರದೇಶಗಳಲ್ಲಿ ಸತ್ತವರ ಸಂಖ್ಯೆ ಶೇ. 0.5 ರಿಂದ ಶೇ. 0.27ರಷ್ಟಿತ್ತು. ನಿತ್ಯ ನಡೆಯುತ್ತಿದ್ದ 15 ಸಾವುಗಳಲ್ಲಿ ಒಂದು ಸಾವು ಇದರಿಂದ ನಡೆಯುತ್ತಿತ್ತು ಎಂದು ವರದಿಗಳು ಹೇಳಿದ್ದವು. ಅಚ್ಚರಿ ಎಂಬಂತೆ ಭಾತರದಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಜನವಸತಿ ಇರುವ ಹಳ್ಳಿಗಳೇ ಇಲ್ಲ ಎಂದು ಹೇಳಲಾಗಿದೆ. ಇಂಥ ಹಳ್ಳಿಗಳಲ್ಲಿ ಕೋವಿಡ್‍ನ ಎರಡನೆ ಅಲೆ ಬಂದಾಗ ಒಂದೇ ಒಂದು ಪ್ರಕರಣ ಕೂಡ ದಾಖಲಾಗಿರಲಿಲ್ಲ. ಇಂಥ ಅನೇಕ ಹಳ್ಳಿಗಳು ಕರ್ನಾಟದಲ್ಲಿ ಕೂಡ ಕಾಣಿಸಿಕೊಂಡಿವೆ.

ಈ ಅಚ್ಚರಿಗೆ ನಿಜವಾದ ಕಾರಣವೆಂದರೆ ಗ್ರಾಮೀಣ ಜನತೆ ಹೆಚ್ಚಾಗಿ ಸಂಪ್ರದಾಯಕ್ಕೆ ಅಂಟಿಕೊಂಡಿರುವುದು. ಇಂದಿಗೂ ಒಬ್ಬ ವ್ಯಕ್ತಿ ಪೇಟೆಗೆ ಹೋಗಿ ಬಂದಾಗ ಮನೆಯೊಳಗೆ ಬರುವ ಮುಂಚೆ ಕೈಕಾಲು ಮುಖಗಳನ್ನು ಸ್ವಚ್ಚವಾಗಿ ತೊಳೆದುಕೊಂಡು, ಬಟ್ಟೆ ಬದಲಿಸಿಕೊಂಡು ಒಳಬರಬೇಕಾದುದು ಸಂಪ್ರದಾಯ. ಗ್ರಾಮೀಣ ಜನತೆ ಇದನ್ನು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ನಗರದ ಜನತೆ ಈ ಪದ್ಧತಿಯಲ್ಲಿ ಅರ್ಥವಿಲ್ಲವೆಂದು ಅನೇಕ ವರ್ಷಗಳ ಹಿಂದೆಯೇ ಕೈಬಿಟ್ಟಿದೆ. ಸಾಲದಕ್ಕೆ ಹೊರಗೆ ಓಡಾಡಿಕೊಂಡು ಬಂದ ಚಪ್ಪಲಿ, ಶೂ ಮತ್ತು ಬಟ್ಟೆಗಳನ್ನು ಧರಿಸಿಯೇ ಊಟ, ತಿಂಡಿಗಳನ್ನು ಬಿಡುಬೀಸಾಗಿ ಮಾಡುತ್ತಾರೆ. ಅಲ್ಲದೆ ಸಾಂಪ್ರದಾಯಿಕ ಆಹಾರ ಕ್ರಮವನ್ನು ಕೂಡ ನಗರ ಜನತೆ ಕೈಬಿಟ್ಟಿದೆ ಆದರೆ ಗ್ರಾಮೀಣ ಭಾಗದಲ್ಲಿ ಇವು ಇನ್ನೂ ಜೀವಂತವಾಗಿವೆ. ಸಾಂಪ್ರದಾಯಿಕ ರೀತಿಯಲ್ಲಿ ಆರೋಗ್ಯ ಕಾಪಾಡುವ 5000ಕ್ಕಿಂತ ಹೆಚ್ಚಿನ ಕಷಾಯಗಳು ಈ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಕಾಣಿಸಿಕೊಂಡವು ಹಾಗೂ ಅನೇಕಾನೇಕ ಪಾರಂಪರಿಕ ಚಿಕಿತ್ಸಾ ಕ್ರಮಗಳು ಕೂಡ ಹೊರಬಂದವು. ಕೆಲವರು ಇವುಗಳನ್ನು ಬೆಂಬಲಿಸಿದರೆ ಕೆಲವರು ಇವು ಅರ್ಥಹೀನ ಎಂದು ತೆಗಳಿದರು ಆದರೆ ಇವು ಪರಿಣಾಮ ಬೀರಿದಂತೂ ಸುಳ್ಳಲ್ಲ. ಹೆಚ್ಚು ಅಕ್ಷರಸ್ಥರು, ಆಧುನಿಕರು ಎಂದು ಕರೆದುಕೊಂಡ ಯೋರೋಪ್ ಮತ್ತು ಅಮೇರಿಕಾಗಳಲ್ಲಿ ಜನತೆ ಕೊರೊನಾ ಮಾರ್ಗ ಸೂಚಿಗಳ ವಿರುದ್ಧ ಪ್ರತಿಭಟನೆಯ ನಡೆಸಿದ್ದರು. ಭಾರತದಲ್ಲಿ ಹೀಗೆ ಆಗಲಿಲ್ಲ. ನಮ್ಮ ದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತೆಗೆದುಕೊಳ್ಳಬೇಕಾದ ಚುಚ್ಚುಮದ್ದು ಪಡೆದವರಲ್ಲಿ ಜನಪದರ ಸಂಖೆಯೇ ಹೆಚ್ಚಾಗಿತ್ತು. ಅಂದರೆ ನಮ್ಮ ಸಂಪ್ರದಾಯದಲ್ಲಿ ಹಳೆಯದು ಮತ್ತು ಹೊಸದರ ಸಂಯೋಜನೆ ಕಾಲದ ಅಗತ್ಯಕ್ಕೆ ತಕ್ಕಂತೆ ಹೋಗಬೇಕೆಂಬ ತಿಳಿವಳಿಕೆ ಇದೆ. ಇದನ್ನು ಅಳವಡಿಸಿಕೊಂಡ ನಮ್ಮ ಜನಪದರು ಕೊರೊನಾ ವಿರುದ್ಧ ಜಯಗಳಿಸಿದ್ದಾರೆ. ಅಲ್ಲದೆ ನಮ್ಮ ಜನರಿಗೆ ಈ ಹಿಂದೆ ಬಂದು ಹೋಗಿದ್ದ ಕಾಲರಾ, ಸಿಡುಬು ಮತ್ತು ಮಲೇರಿಯಾದಂತ ಕಾಯಿಲೆಗಳು ಅನುಭವನ್ನು ಗಳಿಸಿಕೊಟ್ಟಿದ್ದವು ಇದರ ಜ್ಞಾನ ಕೊರೊನಾ ವಿರುದ್ಧ ಹೋರಾಡುವಲ್ಲಿ ನೆರವಾಗಿದೆ ಎಂಬುದು ಕೂಡ ಸುಳ್ಳಲ್ಲ. ಈ ದೃಷ್ಟಿಯಿಂದ ನಗರದಲ್ಲಿ ವಾಸಿಸುವ ಜನತೆ ತಾವು ಎಡವಿದ್ದು ಎಲ್ಲಿ ಎಂಬುದನ್ನು ಜನಪದರಿಂದ ಕಲಿಯಬೇಕಿದೆ.


Monday, 2 May 2022

ಕೊಟ್ಟ ಕುದುರೆಯನೇರಲರಿಯದೆ : ಓದುಗರ ಕಣ್ಕಾಪು ತೆರೆಯಿಸುವ ಕೃತಿ


ಇಂದಿನ ಕನ್ನಡ ಸಾಹಿತ್ಯ ಚರ್ಚೆ ಮತ್ತು ವಿಮರ್ಶೆಗಳು ಯಾವುದೇ ಕೃತಿ ಅಥವಾ ಅದಕ್ಕಿಂತ ಹೆಚ್ಚಾಗಿ ಅದರ ಕೃತಿಕಾರನನ್ನು ಹೇಗೆ ನೋಡಬೇಕು ಎಂದು ಮೊದಲೇ ನಿರ್ಧರಿಸಿ ಓದುಗರೂ ಹಾಗೆಯೇ ತಿಳಿಯತಕ್ಕದ್ದು ಎಂದು ಆಗ್ರಹಿಸುತ್ತವೆ. ಇಂಥ ಆಗ್ರಹಕ್ಕೆ ಕೆಲವೇ ಕೆಲವು ವರ್ಷಗಳ ಪರಂಪರೆ ಹಾಗೂ ಅಳ್ಳಕವಾದ ಬೇರು ಇದ್ದರೂ ಇದು ಬೀಸಿದ ಪ್ರಭಾವ ಮಾತ್ರ ತುಸು ಹೆಚ್ಚಿನದು. ಕುವೆಂಪು, ಭೈರಪ್ಪ, ಅನಂತಮೂರ್ತಿ ಮೊದಲಾಗಿ ಯಾರ್ಯಾರ ಕೃತಿಯನ್ನು ಹಾಗೂ ಆಯಾ ಕೃತಿಕಾರರನ್ನು ಹೇಗೆ ನೋಡಬೇಕು, ತಿಳಿಯಬೇಕು ಹಾಗೂ ಅವರನ್ನು ಎಲ್ಲಿ ಇಡಬೇಕು ಎಂದುನಿರ್ದೇಶಿಸುವಪ್ರವೃತ್ತಿ ಸಾಹಿತ್ಯಕ ವಲಯದಲ್ಲಿ ಕಾಣಿಸಿಕೊಂಡಿದೆ. ಇದು ತನ್ನ ಹಾಸುಬೀಸನ್ನು ಹೊಸಗನ್ನಡಕ್ಕೆ ಮಾತ್ರ ಸೀಮಿತಗೊಳಿಸಿಲ್ಲ. ಅದರ ತೆಕ್ಕೆಗೆ ಹನ್ಮಿಡಿ ಶಾಸನಾದಿಯಾಗಿ ಎಲ್ಲವೂ ಸೇರಿವೆ! ಹೀಗಾಗಿ ಸಹಜವಾಗಿಯೇ ಹನ್ನೆರಡನೆಯ ಶತಮಾನದ ವಚನ ಸಾಹಿತ್ಯವೂ ಇಂಥ ನಿರ್ದೇಶನದ ವ್ಯಾಪ್ತಿಯಲ್ಲಿ ಬಂದುಬಿಟ್ಟಿದೆ. ಓದುಗನ ಮೇಲೆ ಹೇರಲಾಗುವ ಬಗೆಯ ನಿರ್ದೇಶನದಿಂದ ಸಾಹಿತ್ಯಕ್ಕಾಗಲೀ ಓದುಗನಾಗಲೀ ಲಾಭಕ್ಕಿಂತ ನಷ್ಟವೇ ಹೆಚ್ಚು. ವಚನ ಸಾಹಿತ್ಯ ಕುರಿತು ಹೀಗೆ ಹೇರಲಾಗಿರುವಓದುವ-ತಿಳಿಯುವ ಕ್ರಮದ ನಿರ್ದೇಶನದಿಂದಾಗಿ ಸಾಹಿತ್ಯವನ್ನು ಸಹಜವಾಗಿ ಓದುವವರಿಗೆ ಹುಟ್ಟುವ ಪ್ರಶ್ನೆಗಳಿಗೆ ಸಮಂಜಸ ಉತ್ತರ ದೊರಕದಿದ್ದರೂ ಉತ್ತರ ದೊರಕಿದಂತೆ ನಟಿಸಬೇಕಾಗುತ್ತದೆ. ಆದರೆ ಅನುಮಾನ ಪರಿಹಾರವಾಗದು. ಅಂಥ ಸಂದರ್ಭದಲ್ಲಿ ಓದುಗರು ತಮ್ಮ ಓದಿನ ದೋಷವನ್ನು ಅರ್ಥಮಾಡಿಕೊಂಡು ಬೇರೆ ರೀತಿಯಲ್ಲಿ ಓದಿಕೊಳ್ಳುವ ಮಾರ್ಗ ಹುಡುಕಬೇಕಾಗುತ್ತದೆ. ಸ್ಥಾಪಿತ ನಿರ್ದೇಶನಗಳ ಹಿನ್ನೆಲೆಯಲ್ಲಿ ವಚನಗಳನ್ನು ಓದಿದಾಗ ಉಂಟಾಗುವ ಸಮಸ್ಯೆ ಇಂಥ ಹೊಸ ಮಾರ್ಗವನ್ನುಕೊಟ್ಟಕುದುರೆಯನೇರಲರಿಯದೆ…” ಕೃತಿಯ ಮೂಲಕ ಈಗ ತೆರೆದಿದೆ.

ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿಕೊಂಡ ವಚನಗಳ ಹಿನ್ನೆಲೆ, ಅವುಗಳ ಸ್ವರೂಪ, ಭಾಷೆ, ವಿಷಯ ವೈವಿಧ್ಯಗಳನ್ನು ಗಮನಿಸಿದಾಗ ಓದುಗನಲ್ಲಿ ಸಹಜವಾಗಿಯೇ ಅನೇಕಾನೇಕ ಪ್ರಶ್ನೆಗಳು ಹುಟ್ಟುತ್ತವೆ: ‘ವಚನಗಳ ನಿರ್ದಿಷ್ಟ ಸಂಖ್ಯೆ ಯಾಕೆ ಲಭ್ಯವಿಲ್ಲ? ‘ಕಲ್ಯಾಣ ಕ್ರಾಂತಿಯಾದಾಗ ವಚನಗಳ ಕಟ್ಟುಗಳನ್ನು ತಲೆ ಮೇಲೆ ಹೊತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೂ ಉಳವಿಗೂ ಸಾಗಿಸಲಾಯಿತುಎಂಬ ಹೇಳಿಕೆ ಸರಿಯಾಗಿದ್ದರೆ ಕಟ್ಟುಗಳು ಏನಾದವು?

ಲಭ್ಯ ವಚನಗಳಲ್ಲೂ ಒಬ್ಬ ಸಂಪಾದಕರ ಸಂಗ್ರಹದಲ್ಲಿರುವ ವಚನಗಳು ಮತ್ತೊಬ್ಬರ ಸಂಪಾದನೆಯಲ್ಲಿ ಇಲ್ಲದೇ ಹೋಗುವುದೇಕೆ? ಅಂಕಿತಗಳನ್ನು ಕಿತ್ತು ಓದಿದರೆ ಯಾವ ವಚನ ಯಾರದು ಎಂದು ಹೇಳಲು ಸಾಧ್ಯವೇ? ಯಾವ ವಚನಕಾರನ ಅಂಕಿತ ಯಾವುದು ಎಂದು ಎಲ್ಲ ವಚನಗಳಿಗೂ ಹೇಳಲು ಸಾಧ್ಯವಾಗದಿರುವುದು ಏಕೆ? ವಚನಗಳ ಪ್ರಧಾನ ಭಾಷೆ ಜನಪದವೇ ಆಗಿದ್ದರೂ ಅನೇಕ ವಚನಗಳಲ್ಲಿ ಸಂಸ್ಕೃತಭೂಯಿಷ್ಠ ಕ್ಲಿಷ್ಟವಾಕ್ಯಗಳು ಯಾಕಿವೆ? ಇಷ್ಟಾಗಿಯೂ ಇದು ಜನರ ಆಡುಮಾತಿನಲ್ಲೇ ಇದೆ ಎಂದು ಪ್ರತಿಪಾದಿಸುವುದು ಹೇಗೆ? ಏಕೆ? ವಚನಗಳು ವರ್ಣ, ವರ್ಗ, ಜಾತಿ, ಲಿಂಗ ಮೊದಲಾದ ಜಡ ಪರಿಕಲ್ಪನೆಗಳನ್ನು ಮುರಿದು ಇವೆಲ್ಲ ಇಲ್ಲದ ಸಮಾನ ಸಮಾಜಕಟ್ಟುವ ಉದ್ದೇಶ ಹೊಂದಿದ್ದರೆ ಬಸವಣ್ಣನೂ ಸೇರಿದಂತೆ ಅನೇಕಾನೇಕ ವಚನಕಾರರು ಮತ್ತೆ ಮತ್ತೆ ಹಲವು ಹದಿನೆಂಟುಜಾತಿಗಳ ಪ್ರಸ್ತಾಪ ಏಕೆ ಮಾಡುತ್ತಾರೆ? ಜಂಗಮರೆಲ್ಲ ಒಂದೇ ಆಗುತ್ತಾರಾದರೂ ಬ್ರಾಹ್ಮಣನಿಗೆ ಮೂರು ವರ್ಷ, ವೈಶ್ಯನಿಗೆ ಎಂಟು ವರ್ಷ, ಶೂದ್ರನಿಗೆ ಹನ್ನೆರಡು ವರ್ಷ ಕಾಯಿಸಿ ದೀಕ್ಷೆಕೊಡಬೇಕೆಂದು ವಚನಗಳು ಹೇಳುವುದೇಕೆ? ವಚನಗಳು ಬ್ರಾಹ್ಮಣ, ವೈದಿಕ ವಿರುದ್ಧವಾಗಿದ್ದರೆ ನಿಜವಾದ ಜಂಗಮನೇ ಬ್ರಾಹ್ಮಣ ಎಂದು ವಚನಗಳು ಏಕೆ ಹೇಳಬೇಕು? ವೈದಿಕ ವಚನಕಾರರು ತಮ್ಮ ವಿರುದ್ಧವೇ ವಚನ ಬರೆದುಕೊಂಡರೇ? ವಚನಗಳು ಸ್ತ್ರೀ ಸಮಾನತೆ ಸ್ಥಾಪಿಸುವುದಾದರೆ ಚೆನ್ನಬಸವಣ್ಣನಂಥ ವಚನಕಾರರು ಆರು ವರ್ಗದ ಸ್ತ್ರೀಯರನ್ನು ಬೇರ್ಪಡಿಸಿ ನೋಡುವುದೇಕೆ? ಸಮಾನತೆ ಇದ್ದ ಸಮಾಜದಲ್ಲಿ ಅಕ್ಕನ ವಚನಗಳು ಯಾಕೆ ಶೋಷಣೆ ಅನುಭವಿಸಿದ ದನಿಯನ್ನು ತೀವ್ರವಾಗಿ ತೋರಿಸುತ್ತವೆ? ಇಷ್ಟೆಲ್ಲ ಆಗಿಯೂ ಅಷ್ಟೊಂದು ಜಾತಿಗಳ ಸಂಗಮವಾಗಿ ರೂಪುಗೊಂಡಿದ್ದ ಆಂದೋಲನವೊಂದು ದಿಢೀರನೆ ಜರುಗಿದ ಕ್ರಾಂತಿಯೊಂದರಿಂದ ನಿರೀಕ್ಷಿತ ಯಶಸ್ಸು ಕಾಣದೇ ಅಷ್ಟು ಬೇಗನೆ ತಣ್ಣಗಾದುದಕ್ಕೆ ಬ್ರಾಹ್ಮಣ ಪಿತೂರಿಕಾರಣವೇ? ಹಾಗಾದರೆ ಬ್ರಾಹ್ಮಣರ ವಿರುದ್ಧವೇ ರೂಪುಗೊಂಡಿದ್ದ, ಹತ್ತು ಹಲವು ಜಾತಿಗಳು ಒಗ್ಗೂಡಿ ಮೂಡಿದ್ದ ಮಹಾನ್ಚಳವಳಿಯು ಕೇವಲ ಬ್ರಾಹ್ಮಣರ ಪಿತೂರಿಗೆ ಬಲಿಯಾಗುವಷ್ಟು ದುರ್ಬಲವಾಗಿತ್ತೇ? ಬಸವಣ್ಣನವರ ಅಂತ್ಯ ನಿಜಕ್ಕೂ ಒಳಗಿನವರಿಂದಾಯಿತೇ ಹೊರಗಿನವರಿಂದಲೇ? ಹೊರಗಿನವರಿಂದಾದರೆಲೋಕವಿರೋಧಿ, ಶರಣನಾರಿಗಂಜುವನಲ್ಲಎನ್ನುವ ಬಸವಣ್ಣನ ಭಕ್ತಾದಿಗಳು ಸತ್ಯವನ್ನು ಯಾವ ಪುರಾಣ ಸಾಹಿತ್ಯದಲ್ಲೂ ದಾಖಲಿಸದೇ ಹೋದುದೇಕೆ?’-ಹೀಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಹುಟ್ಟುತ್ತವೆ. ಓದುಗನನ್ನು ಸದ್ಯನಿರ್ದೇಶಿಸುವದೃಷ್ಟಿ ಯಾವೊಂದು ಪ್ರಶ್ನೆಗೂ ಸಮರ್ಪಕ ಉತ್ತರ ನೀಡುವುದಿಲ್ಲ.

ಯಾವಕಟ್ಟಿಗೂ ಒಳಗಾಗದ ಜಂಗಮ ಸ್ವರೂಪದ ವಚನಗಳನ್ನು ಆಧುನಿಕ ಸೀಮಿತ ಸೈದ್ಧಾಂತಿಕ ಚೌಕಟ್ಟಿನಲ್ಲಿ ಸ್ಥಾವರಗೊಳಿಸಿ ನೋಡುವುದರಿಂದಲೇ ಅವು ಉತ್ತರ ನೀಡಲು ವಿಫಲವಾಗುತ್ತವೆ. ಸೈದ್ಧಾಂತಿಕ ಚೌಕಟ್ಟು ಮೀರಿದ ಅಧ್ಯಾತ್ಮದ ನೆಲೆಯಲ್ಲಿ ನೋಡುತ್ತ ಹೋದರೆ ಎಲ್ಲ ವಚನಗಳೂ ಅರ್ಥವಾಗುತ್ತ ಹೋಗುತ್ತವೆ. ಅಧ್ಯಾತ್ಮದ ನೆಲೆಯಲ್ಲಿ ಕುಲ, ಜಾತಿ, ಮತ, ಪಂಗಡ ಮೊದಲಾದ ಸಂಗತಿಗಳಿಗೆ ಜಾಗವಿಲ್ಲ. ಮನುಷ್ಯ ಸಹಜವಾಗಿ ಹುಡುಕುವ ನೆಮ್ಮದಿ ಮತ್ತು ಆನಂದಗಳನ್ನು ಪಡೆಯುವ ಭಾರತೀಯ ಪರಂಪರೆಯಲ್ಲಿನ ಅನೇಕಾನೇಕ ಮಾರ್ಗಗಳಲ್ಲಿ ಒಂದಾದ ಶೈವ ಪಂಥದ ಶಿವಾಚಾರವನ್ನು ಸಮಾಜಕ್ಕೆ ನೀಡಿ ಮೂಲಕ ಆದರ್ಶ ಸಮಾಜ ಸ್ಥಾಪಿಸುವುದು ವಚನಕಾರರ ಉದ್ದೇಶವಾಗಿತ್ತೆಂದು ಭಾವಿಸಿ ವಚನಗಳನ್ನು ನೋಡುತ್ತ ಹೋದರೆ ಅದು ಉನ್ನತ ಸ್ತರಕ್ಕೆ ಒಯ್ಯುತ್ತದೆ ಮಾತ್ರವಲ್ಲ, ಅನುಮಾನಗಳನ್ನು ಪರಿಹರಿಸುತ್ತದೆ. ಇಂಥ ಸಂದರ್ಭದಲ್ಲೆಲ್ಲ ವಚನಕಾರರು ಕೇವಲ ಜಾತಿ, ಮತ, ಲಿಂಗ, ಕುಲದ ಶ್ರೇಷ್ಠತೆಯನ್ನೇ ನೆಚ್ಚುವ ಜನರನ್ನು ಪ್ರಶ್ನಿಸುತ್ತಾರೆ. ನಿಜವಾದ ಮಾರ್ಗ ಅದಲ್ಲ, ಇದು ಎಂದು ತೋರಿಸುತ್ತಾರೆ. ಸಂಬಂಧವಾಗಿ ಬಾಲಗಂಗಾಧರ ಅವರು ಕೃತಿಯಲ್ಲಿನಚಿದ್ಬೆಳಗಿನ ಬಯಲುಎಂಬ ಪ್ರಾಸ್ತಾವಿಕ ಸ್ವರೂಪದ ದಿಕ್ಸೂಚೀ ಲೇಖನದಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ. ವಚನಗಳನ್ನು ಅರ್ಥ ಮಾಡಿಕೊಳ್ಳಲಷ್ಟೇ ಅಲ್ಲ, ಭಾರತೀಯ ಅಧ್ಯಾತ್ಮದ ಜಾಡು ಗುರುತಿಸುವಲ್ಲಿಯೂ ಇದೊಂದು ಕೈದೀವಿಗೆಯಾಗಿದೆ.

ವಚನಗಳನ್ನು ಕುರಿತು ಓದುವಾಗ ಹುಟ್ಟುವ ಸಾಮಾನ್ಯ ಪ್ರಶ್ನೆಗಳ ಜೊತೆಗೆ ಬೆರಳೆಣಿಕೆಯ ವಚನಗಳನ್ನು ಇಟ್ಟುಕೊಂಡು ಜಾತಿ, ವರ್ಗಗಳಂಥ ಸಾಮಾಜಿಕ ಸಮಸ್ಯೆಗೆ ಉತ್ತರವಾಗಿ ಹುಟ್ಟಿಕೊಂಡವು ವಚನಗಳು ಎನ್ನುವ ತಥಾಕಥಿತ ವಾದಗಳ ಆಮೂಲಾಗ್ರ ಪರಿಶೋಧನೆ ಪ್ರಸ್ತುತ ಕೃತಿಯಲ್ಲಿದೆ. ಸುಮಾರು 450 ಪುಟಗಳ ವ್ಯಾಪ್ತಿಯಲ್ಲಿ ಹರಡಿಕೊಂಡ ಇಲ್ಲಿನ ಚರ್ಚೆಗಳು ಬಿಡಿ ಲೇಖನಗಳ ಸ್ವರೂಪದಲ್ಲಿವೆಯಾದರೂ ಇವುಗಳಲ್ಲಿ ಏಕಸೂತ್ರತೆ ಇರುವಂತೆ ನೋಡಿಕೊಳ್ಳಲಾಗಿದೆ. ಬಹುಮುಖ್ಯವಾದ ಸಂಗತಿ ಎಂದರೆ ಇಲ್ಲಿ ಸಂಗ್ರಹಿತವಾದ ವಿದ್ವತ್ ಲೇಖನಗಳನ್ನು ಬರೆದವರು ಹೆಸರಾಂತ ಲೇಖಕರಲ್ಲ, ವಚನಗಳನ್ನು ಕುರಿತು ಮತ್ತೆ ಮತ್ತೆ ಕೇಳಿಬರುವ ಹೆಸರುಗಳಲ್ಲ. ಆದರೆ ಇಲ್ಲಿ ಎತ್ತಲಾದ ಪ್ರಶ್ನೆಗಳು, ಮಂಡಿಸಲಾದ ವಾಗ್ವಾದದ ವಿಧಾನಗಳು ಯಾವ ಸಂಶೋಧನಾ ಲೇಖನಗಳಿಗೂ ಕಡಿಮೆಯವಲ್ಲ. ಹಿರಿಯ ಲೇಖಕರಿಗಿಂತ ಕಿರಿಯ, ಆಸಕ್ತ ವಿದ್ಯಾರ್ಥಿಗಳ ಬರಹವೇ ಇಲ್ಲಿ ಹೆಚ್ಚಾಗಿದೆ. ಕೇವಲ ಸಾಹಿತ್ಯದ ಆಸಕ್ತರಾಗಿ, ವಿದ್ಯಾರ್ಥಿಗಳಾಗಿ ಓದಿದಾಗ ಅನಿಸುವ ಅನುಭವವೇದ್ಯ ಸಂಗತಿಗಳು ದಾಖಲಾಗಿರುವುದರಿಂದ ಇದು ಅತ್ಯಂತ ಮುಖ್ಯ. ಹೆಸರು, ಕುಲ ಗೋತ್ರ ನೋಡದೇ ವಿಷಯ ಮತ್ತು ಚರ್ಚೆ ಮುಖ್ಯ ಎಂದು ಭಾವಿಸುವವರು ಓದುತ್ತ ಓದುತ್ತ ಬರೆದವರು ಯಾರು ಎಂಬುದನ್ನು ಎಣಿಸದೇ ಚರ್ಚೆಯ ವಿಷಯದೊಳಗೇ ಮುಳುಗಿಹೋಗುವುದು ಇಲ್ಲಿನ ವಿಶೇಷ. ಸಂಶೋಧನೆ ಮತ್ತು ಐಡಿಯಾಲಜಿ, ಪ್ರತಿಕ್ರಿಯೆ ಇತ್ಯಾದಿ ನಾಲ್ಕು ಭಾಗಗಳಲ್ಲಿ ವಚನ ಚರ್ಚೆಯ ವಿವಿಧ ಆಯಾಮಗಳನ್ನು ಒಳಗೊಂಡ 15 ಪ್ರಮುಖ ಲೇಖನಗಳು, ನಾಡಿನ ಹಿರಿಯ ಲೇಖಕರ 10 ಪ್ರಮುಖ ಪ್ರತಿಕ್ರಿಯೆಗಳು ಇಲ್ಲಿ ದಾಖಲಾಗಿವೆ. ಅನುಬಂಧದಲ್ಲಿ ನೀಡಲಾದ ಲೇಖನದಲ್ಲಿ ವಚನ ಕುರಿತ ಆಧುನಿಕ ದೃಷ್ಟಿಯ ಚರ್ಚೆಗಳೂ ಅವುಗಳ ಮಿತಿಯೂ ಕಾಣಿಸುತ್ತದೆ. ಇಲ್ಲಿನ ಲೇಖನಗಳಲ್ಲಿ ಪ್ರಚಲಿತ ವಾದಗಳು ಮಂಡಿಸುವವಚನಗಳು ಹೇಳುವುದಿಷ್ಟೇಎನ್ನುವಂಥ ಮಾತುಗಳಿಗೆ ಆಧಾರವಾಗಿರುವವು ಎಷ್ಟು ವಚನಗಳು ಹಾಗೂ ಉಳಿದ ಸಾವಿರಾರು ವಚನಗಳು ಅವೇ ಮಾತಿಗೆ ಹೇಗೆ ವಿರುದ್ಧವಾಗಿವೆ ಎಂಬುದನ್ನು ಎತ್ತಿತೋರಿಸಲಾಗಿದೆ. ಇಷ್ಟಾಗಿಯೂ ಇದು ಕೇವಲ ಅಂಕಿ ಸಂಖ್ಯೆಗಳ ಸರ್ಕಸ್ ಅಲ್ಲ. ಬದಲಾಗಿ ವಚನಗಳ ಸಾಲುಗಳನ್ನು ಮೂಲ ಸಂದರ್ಭದಿಂದ ತಪ್ಪಿಸಿ ಯಾವ್ಯಾವುದೋ ಅನ್ಯ ಚೌಕಟ್ಟುಗಳಿಗೆ ಹೇಗೆ ಹೊಂದಿಸಲಾಗಿದೆ ಎಂಬುದನ್ನು ಸಾಧಾರವಾಗಿ ಇಲ್ಲಿನ ಲೇಖನಗಳು ಪ್ರತಿಪಾದಿಸಲು ಅಂಕಿ ಅಂಶಗಳನ್ನು ಸಾಧಾರವಾಗಿ ಬಳಸಿಕೊಳ್ಳಲಾಗಿದೆ. ಇದು ಸಂಶೋಧನೆಯ ಒಂದು ಒಪ್ಪಿತ ವ್ಯವಸ್ಥಿತ ಕ್ರಮ.

ಆಧುನಿಕ ಸ್ತ್ರೀವಾದಿ ಹಿನ್ನೆಲೆಯಿಂದ ವಚನಗಳನ್ನು ನೋಡಿ ಒಂದು ಬಗೆಯ ಇತ್ಯರ್ಥಕ್ಕೆ ಆಧುನಿಕ ಚಿಂತಕರು, ವಿಮರ್ಶಕರು ಬಂದಿರುವುದುಂಟು. ಆದರೆ ಅದೇ ವಿಮರ್ಶಕರು ವಚನಗಳನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಮಾತಿಗೇ ವಿರುದ್ಧವಾಗಿ ಮಾತನಾಡುವುದೂ ಇದೆ.ಒಬ್ಬರುಭಾರತೀಯ ಸಮಾಜದಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಪ್ರಥಮ ಬಾರಿಗೆ ಪ್ರತಿಪಾದಿಸಿದ,ದೊರಕಿಸಿಕೊಟ್ಟ ಕೀರ್ತಿ ವಚನ ಸಂಸ್ಕೃತಿಗೆ ಸಲ್ಲುತ್ತದೆಎಂದರೆ ಅದೇ ಸ್ತ್ರೀವಾದದ ಹಿನ್ನೆಲೆಯಲ್ಲಿ ಮಾತನಾಡುವ ಮತ್ತೊಬ್ಬರುವಚನಕಾರರು ಹೆಣ್ಣನ್ನು ಹೇಗೆ ಕೀಳಾಗಿ ಕಂಡಿದ್ದಾರೆ, ಸ್ತ್ರೀ ಪುರುಷ ಪಕ್ಷಪಾತವನ್ನು ಯಾವ ರೀತಿ ಮಾಡಿದ್ದಾರೆ ಎಂದರೆ…” ಎನ್ನುತ್ತ ವಚನಗಳನ್ನು ಉಲ್ಲೇಖಿಸುತ್ತಾರೆ. ಇಂಥ ಗೊಂದಲಗಳು ಆಧುನಿಕ ವಿಮರ್ಶಕರಲ್ಲಿ ಹೇರಳವಾಗಿವೆ ಎಂಬುದನ್ನು ಕೃತಿ ಸಾಧಾರ ಪ್ರತಿಪಾದಿಸಿದೆ.

ವಸಾಹತುಕಾಲದ ಚಿಂತನೆ ರೂಪಿಸಿದ ನಮ್ಮ ಆಧುನಿಕ ವಿಮರ್ಶೆ ವಚನಗಳ ಅರ್ಥವನ್ನು ಹೇಗೆ ಸಂಕುಚಿತಗೊಳಿಸಿದೆ ಎಂಬುದಕ್ಕೆ ಇಲ್ಲಿ ಹೆಜ್ಜೆ ಹೆಜ್ಜೆಗೂ ನಿದರ್ಶನಗಳು ದೊರೆಯುತ್ತವೆ. ಒಟ್ಟಾರೆ ಆಧುನಿಕ ಚಿಂತಕರು ವಚನಗಳಲ್ಲಿ ಇರುವುದುವರ್ಗ, ವರ್ಣ, ಜಾತಿ ನಿರ್ನಾಮದ ಆಶಯ; ಲಿಂಗ ಸಮಾನತೆಯ ಪ್ರತಿಪಾದನೆ; ಬ್ರಾಹ್ಮಣ/ವೈದಿಕ ವಿರೋಧ ಹಾಗೂ ಪ್ರಖರ ವೈಚಾರಿಕತೆಎಂದು ಜಾತಿ, ವರ್ಣಗಳ ಪ್ರಸ್ತಾಪ ಬರುವ ಕೆಲವೇ ಕೆಲವು ವಚನಗಳ ಆಧಾರವಿಟ್ಟು ಹೇಳುತ್ತಾರೆ. ಆದರೆ ಅವರು ತಮ್ಮ ವಾದಕ್ಕೆ ವಿರುದ್ಧವಾದ ಅಥವಾ ಇದಕ್ಕೆ ಸಂಬಂಧವೇ ಇಲ್ಲದ, ಮತ್ತೇನೋ ಹೇಳುವ ಅಸಂಖ್ಯ ವಚನಗಳನ್ನು ಕುರಿತು ಏನೂ ಹೇಳಲಾರರು. ಉದಾಹರಣೆಗೆ ಬಸವಣ್ಣನವರು ಒಂದು ವಚನದಲ್ಲಿವರ್ಣಾನಾಂ ಬ್ರಾಹ್ಮಣೋ ಗುರುಃ ಎಂಬುದು ಹುಸಿ; ವರ್ಣಾನಾಂ ಗುರುಃ ನಮ್ಮ ಕೂಡಲಸಂಗನ ಶರಣರುಎಂದರೆ ಇನ್ನೊಂದು ವಚನದಲ್ಲಿಎನಿಸನೋದಿದಡೇನು! ಎನಿಸ ಕೇಳಿದಡೇನು! ಚತುರ್ವೇದ ಪಠತೀವ್ರವಾದಡೇನು ಲಿಂಗಾರ್ಚನೆ ಹೀನವಾದಡೆ, ಶಿವಶಿವಾ! ಬ್ರಾಹ್ಮಣನೆಂಬೆನೆ ಎನಲಾಗದುಎನ್ನುತ್ತಾರೆ. ಜಾತಿಯನ್ನು ಸಂಪೂರ್ಣವಾಗಿ ನಿರಾಕರಿಸಿಕೊಂಡ ಹಿನ್ನೆಲೆಯಲ್ಲಿ ಇವೆರಡನ್ನೂ ಅರ್ಥಮಾಡಿಕೊಳ್ಳುವುದು ಹೇಗೆ? ಪ್ರಖರ ವೈಚಾರಿಕತೆಯನ್ನು ಬಸವಣ್ಣನವರು ಪ್ರತಿಪಾದಿಸಿದ್ದಾರೆಂದ ಮೇಲೆ ಅಂತಿಮವಾಗಿ ಅವರುಕೂಡಲ ಸಂಗಮದೇವಎಂದೇ ವಚನಗಳನ್ನು ಮುಕ್ತಾಯಗೊಳಿಸುವುದೇಕೆ?

ಹಾಗಾದರೆ ವಚನಗಳಲ್ಲಿ ವಿರೋಧಾಭಾಸ ತುಂಬಿದೆ ಎಂಬ ನಿರ್ಣಯಕ್ಕೆ ಬರಬಹುದೇ? ಇಲ್ಲ. ಈಗಾಗಲೇ ಹೇಳಿದಂತೆ ವಸಾಹತುಕಾಲದ ಚಿಂತನೆಯಿಂದ ಹುಟ್ಟಿದ ಸೀಮಿತ ಚೌಕಟ್ಟಿನಲ್ಲೇ ವಚನಗಳನ್ನು ಅಧ್ಯಯನ ಮಾಡಿದರೆ ಕಾಣುವ ಆಭಾಸಗಳು ಇವು. ಕುದುರೆ ಕಣ್ಣಿಗೆ ಅತ್ತಿತ್ತ ನೋಡದಂತೆ ಕಾಪು ಕಟ್ಟಿದಂತೆ ಓದುಗರ ಕಣ್ಣಿಗೂ ಕಾಪು ಕಟ್ಟಿದ್ದರಿಂದ ಹೀಗೆ ಮತ್ತು ಇಷ್ಟೇ ಕಾಣಿಸುತ್ತದೆ.

ವಚನಗಳನ್ನು ಜಾತಿ, ವರ್ಣ ವಿರೋಧಿ ನೆಲೆಯಿಂದ ಮಾತ್ರ ನೋಡಬೇಕೆಂದು ಬಸವಣ್ಣನೂ ಹೇಳಿಲ್ಲ, ಚೆನ್ನಬಸವಣ್ಣನೂ ಹೇಳಿಲ್ಲ. ಅದು ಪ್ರಪಂಚದಲ್ಲೇ ಇಲ್ಲದ ಕನ್ನಡ ಸಾಹಿತ್ಯದ ವಿಶಿಷ್ಟ ಸಾಹಿತ್ಯ ಪ್ರಕಾರ. ಅದರ ಅರ್ಥವ್ಯಾಪ್ತಿ ಕೂಡ ವಸಾಹತುಶಾಹಿ ಕಾಲದ ಚಿಂತನೆಗೆ ಮಾತ್ರ ಸೀಮಿತವಾಗಬೇಕಿಲ್ಲ, ಆಗುವುದೂ ಇಲ್ಲ.

ಅಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಅಡ್ಡಿಯಾಗುವ ಎಲ್ಲ ಸಂಗತಿಗಳ ಬಗ್ಗೆಯೂ ವಚನಗಳು ಮಾತಾಡಿವೆ. ಅವುಗಳಲ್ಲಿ ವಿಡಂಬನೆಯಿದೆ, ಹಸಿವು, ಸಾವು, ಹುಟ್ಟು, ಭಕ್ತಿ ಇತ್ಯಾದಿ ಏನೆಲ್ಲ ಇದೆ. ವಚನಗಳನ್ನು ಓದುತ್ತ, ಮಹದೇಶ್ವರ, ಜುಂಜಪ್ಪ, ಮಂಟೇಸ್ವಾಮಿ ಕತೆಯನ್ನು ಓದುತ್ತ ಹೋದಂತೆಲ್ಲ ನನಗೆ ವಸಾಹತು ಚಿಂತನೆಗಳು ಹಾಕಿಕೊಟ್ಟ ಮಾರ್ಗದಲ್ಲಿ ಇರುವ ಮಿತಿಗಳು ಅರಿವಿಗೆ ಬಂದಿವೆ. ರೀತಿಯ ಓದಿನಿಂದ ವಚನಗಳು ಹುಟ್ಟಿಸಿದ ಪ್ರಶ್ನೆಗಳಿಗೆಕೊಟ್ಟಕುದುರೆಯನೇರಲರಿಯದೆ…” ಕೃತಿ ಹೊಸ ದಿಕ್ಕು ತೋರಿಸಿದೆ.

ಸಾಮಾನ್ಯವಾಗಿ ಆಧುನಿಕ ಶಿಕ್ಷಣ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಒಂದು ನಿರ್ಧಾರಕ್ಕೆ ಬರುವಂತೆ ಮಾಡಿ ಅದನ್ನೇ ತಿಳಿವಳಿಕೆ ಎಂದು ಭಾವಿಸುವಂತೆ ಮಾಡುತ್ತದೆ. ಅದಕ್ಕೆ ಪರ್ಯಾಯವಾದ ನೋಟ ನಮ್ಮ ಅನುಭವಕ್ಕೆ ಬಂದರೂ ನಮ್ಮತಿಳಿವಳಿಕೆ ಅಹಮಿಕೆ ಅದನ್ನು ಸುಲಭವಾಗಿ ಒಪ್ಪಲು ಬಿಡುವುದಿಲ್ಲ. ಇದು ವಸಾಹತುಶಾಹಿ ಶಿಕ್ಷಣದ ಫಲವೇ ಇರಬೇಕು.

ಅನುಭವ ಮಂಟಪದ ಮೂಲಕ ಸಮಾಜಕ್ಕೆ ಆವರಿಸಿದ ಮಂಕನ್ನು ತೆಗೆಯಲು ಅಧ್ಯಾತ್ಮದ ಮಾರ್ಗ ತೋರಿಸಲು ಹೆಣಗಿದ ವಚನಕಾರರ ವಚನಗಳನ್ನು ಮುಕ್ತವಾಗಿ ಅರ್ಥೈಸಿಕೊಳ್ಳಲು ಪ್ರಸ್ತುತ ಮತ್ತೆ ಹೋರಾಡಬೇಕಿದೆ ಎಂಬುದೇ ಇಂದಿನ ದುರಂತ. ಅಂಥ ಹೋರಾಟದ ಫಲ ಕೃತಿ. ಸಾಹಿತ್ಯವನ್ನು ಸಾಹಿತ್ಯದ ದೃಷ್ಟಿಯಿಂದ ನೋಡದೇ ಮಾನವಶಾಸ್ತ್ರ, ಸಮಾಜವಿಜ್ಞಾನಗಳಿಂದ ಎರವಲು ತಂದ ಸಿದ್ಧಾಂತಗಳ ಚೌಕಟ್ಟಿನಲ್ಲಿ ನೋಡುವುದರಿಂದ ಹೊಸ ಸಾಹಿತ್ಯಕ ಸಮಸ್ಯೆಗಳು ಹುಟ್ಟುತ್ತಿವೆ. ವಚನ ಸೃಷ್ಟಿ ಕಾಲದಲ್ಲಿಅನುಭವ ಮಂಟಪವನ್ನು ಕಟ್ಟಿದ್ದು ಯಾವ ಅನುಭವವನ್ನು ಹಂಚಿಕೊಳ್ಳಲು, ಅದು ಎಂಥ ಅನುಭವವಾಗಿತ್ತು, ಜಾತಿ, ವರ್ಣದಿಂದಾದ ಅವಮಾನದ ಅನುಭವ ಮಾತ್ರವಾಗಿತ್ತೇ? ಎಂಬುದನ್ನು ವಿವರಿಸಲು ಇದುವರೆಗಿನ ಸಾಹಿತ್ಯಚರ್ಚೆ ವಿಫಲವಾಗಿದೆ. ವಚನಗಳ ಅಧ್ಯಯನ ಮಾಡುವಾಗ ಅನುಭವ ಮಂಟಪ ಯಾಕೆ ಮತ್ತು ಹೇಗೆ ಮುಖ್ಯ ಎಂಬುದನ್ನು ಅರಿಯುವ ಅಗತ್ಯವಿದೆ.

ಕೃತಿಯನ್ನುಓದಿದ ಮೇಲೆ ವಚನಗಳ ಅರ್ಥವ್ಯಾಪ್ತಿ ಹಿಗ್ಗಿಸಿ ನೋಡಬಹುದಷ್ಟೇ ಅಲ್ಲ, ವಚನಗಳ ಮೇಲಿನ ಗೌರವ ಇಮ್ಮಡಿ, ಮುಮ್ಮಡಿ,ನೂರ್ಮಡಿಯಾಗುತ್ತದೆನ್ನಬಹುದು.



ಪುಸ್ತಕಕೊಟ್ಟಕುದುರೆಯನೇರಲರಿಯದೆ
ಸಂಪಾದನೆರಾಜಾರಾಮ ಹೆಗಡೆ ಮತ್ತು ಷಣ್ಮುಖ
ಪ್ರಕಾಶಕರು:ನಿಲುಮೆ ಪ್ರಕಾಶನ, ಐನಕೈ, (ಶಿರಸಿ .)