ಕನ್ನಡದಲ್ಲಿ ಸಾಹಿತ್ಯ ರಚನಕಾರರನ್ನು ಅವರ ಮತಧರ್ಮಗಳ ಮೂಲಕ ವಿಗಂಡಿಸುವ ಕೆಲಸವನ್ನು ಪಾಶ್ಚಾತ್ಯ ವಿದ್ವಾಂಸರಾದ ಫ್ಲೀಟ್, ಕಿಟ್ಟೆಲ್, ಮುಂತಾದವರು ಆರಂಭಿಸಿದರು. ಇದನ್ನು ನಮ್ಮ ವಿದ್ವಾಂಸರು ಅನುಕರಿಸುತ್ತಾ ಇಂದಿಗೂ ಬಂದಿದ್ದಾರೆ. ಹೀಗೆ ಜಾತಿ-ಮತಗಳ ಆಧಾರದಲ್ಲಿ ಕೃತಿಕಾರರನ್ನು ವಿಗಂಡಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ನಿಜವಾಗಿ ಸಾಹಿತ್ಯವೇ ಒಂದು ಧರ್ಮ ಕೃತಿಕಾರರೇ ಒಂದು ಜಾತಿ. ಹೀಗಿರುವಾಗ 20-21ನೆಯ ಶತಮಾನದಲ್ಲಿ ಕೂಡ ಕೃತಿ ರಚನಕಾರರನ್ನು ಜಾತಿವಾರು ವಿಗಂಡಿಸಿ ನೋಡುವ ಕ್ರಮ ಉಳಿದಿರುವುದು ನಮ್ಮ ದೃಷ್ಟಿಯನ್ನು ತೋರಿಸುತ್ತದೆ. ಇದರಿಂದ ಒಳ್ಳೆಯದೂ ಇರಬಹುದು. ಆದರೆ ಸಾಮಾಜಿಕ ವಲಯದಲ್ಲಿ ಜಾತಿಪ್ರೇಮ ಮತ್ತು ಅದರ ಮಿತಿಗಳನ್ನು ಮತ್ತೆ ಸ್ಥಾಪಿಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತದೆ. 20ನೆಯ ಶತಮಾನದ ಅಂತ್ಯದಲ್ಲಿ ಕೆ.ವಿದ್ಯಾಶಂಕರ್ ಅವರು ವೀರಶೈವ ಸಾಹಿತ್ಯ ಚರಿತ್ರೆಯನ್ನು ಹೊರತಂದರು. ಇದರ ಪ್ರೇರಣೆಯಿಂದ ಇದೀಗ ಎಸ್.ಪಿ. ಪದ್ಮಪ್ರಸಾದ್ ಅವರು ಜೈನಸಾಹಿತ್ಯ ಚರಿತ್ರೆಯನ್ನು ಹೊರತರುತ್ತಿದ್ದಾರೆ. ಇದರ ಭಾಗವಾಗಿ ಸದ್ಯ ಎರಡು ಸಂಪುಟಗಳು ಹೊರಬಂದಿವೆ. ಒಂದು ಅರ್ಥದಲ್ಲಿ ಕನ್ನಡ ಸಾಹಿತ್ಯದ ಬೀಜ ನೆಟ್ಟು ಅದನ್ನು ಪೋಷಿಸಿದವರು ಜೈನ ಮತಾವಲಂಬಿಗಳೇ ಆಗಿದ್ದಾರೆ. ಇದನ್ನು ಪಟ್ಟಿಮಾಡುತ್ತಾ ಹೋದರೆ ಅದಕ್ಕೆ ಅಂತ್ಯ ಕಾಣಿಸುವುದು ಸುಲಭವಲ್ಲ. ಆದರೆ ಪ್ರಾತಿನಿಧಿಕ, ಮಹತ್ವದ ಕವಿಕೃತಿಗಳನ್ನು ಗುರುತಿಸಿ ಅವುಗಳ ವಿಸ್ತಂತ ಸಮೀಕ್ಷೆ ಮತ್ತು ವಿಮರ್ಶೆಮಾಡುವುದು ಕಷ್ಟಸಾಧ್ಯ ಇಂಥ ಕೆಲಸವನ್ನು ಪದ್ಮಪ್ರಸಾದರು ಮಾಡಿದ್ದಾರೆ. ಇವರ ಸಾಹಿತ್ಯ ಕೃತಿಯಲ್ಲಿ ಪ್ರಧಾನವಾಗಿ ಜೈನ ಕೃತಿಕಾರರ ಶಾಸನ ಸಾಹಿತ್ಯ, ಸೃಜನಶೀಲ ಕೃತಿ ಮತ್ತು ಶಾಸ್ತ್ರಗ್ರಂಥಗಳ ವಿಸ್ತøತ ಪರಿಚಯವಿದೆ. ಕೃತಿಕಾರನ ಕಾಲದ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯವೆಂಬುದನ್ನು ಗುರುತಿಸಿಕೊಳ್ಳಲಾಗಿದೆ. ಬದಲಾಗಿ ಆತನ ಕೃತಿ ಪರಿಚಯ ಭಾಷೆ, ಶೈಲಿ, ವಿಶಿಷ್ಟತೆ ಮೊದಲಾದವುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜೊತೆಗೆ ಹೆಚ್ಚಿನ ಪೂರಕ ಮಾಹಿತಿಗಳನ್ನು ಕೊಡುವ ಪ್ರಯತ್ನ ಮಾಡಲಾಗಿದೆ.
ಸದ್ಯ ಈ ಸರಣಿಯಲ್ಲಿ ಮೊದಲ ಎರಡು ಸಂಪುಟಗಳು ಹೊರಬಂದಿದ್ದು, ಮೊದಲ ಸಂಪುಟದಲ್ಲಿ ಆರಂಭ ಕಾಲದಿಂದ 1150ವರೆಗಿನ ಕವಿಕೃತಿಗಳನ್ನು ಪರಿಚಯಿಸಿಲಾಗಿದೆ. ಜೊತೆಗೆ ಸಂಮೃದ್ಧ ಪರಾಮರ್ಶನ ಪಟ್ಟಿಗಳು, ಪೂರಕ ವಿಷಯಗಳನ್ನು ಕೊಡಲಾಗಿದೆ. ಆದರೆ ಮೊದಲ ಸಂಪುಟದಲ್ಲಿ ಆರಂಭದ ಕೆಲವು ಪುಟಗಳಲ್ಲಿ ತಾಂತ್ರಿಕ ದೋಷವಿದೆ. ಮೊದಲ 13-20ವರೆಗಿನ ಪುಟಗಳು ಪುನರಾವರ್ತನೆಯಾಗಿವೆ. ಉಳಿದಂತೆ ಕೃತಿಯನ್ನು ಅಚ್ಚುಕಟ್ಟಾಗಿ ಹೊರತರಲು ಸಂಪಾದಕರು ತುಂಬ ಶ್ರಮವಹಿಸಿದ್ದಾರೆ. ಸಾಮಾನ್ಯ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲಿ ಕೆಲವೇ ಕೆಲವು ಪುಟಗಳಲ್ಲಿ ಕೊಡಲಾಗಿದ್ದ ಮಾಹಿತಿಗಳನ್ನು ಪ್ರಸ್ತುತ ಸಂಪುಟಗಳಲ್ಲಿ ವಿಸ್ತಾರವಾಗಿ ನೀಡಲಾಗಿದೆ. ಸಾಮಾನ್ಯ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲಿ ಹೆಚ್ಚು ಮಹತ್ವ ಪಡೆಯದ ಮೂಕರಾಜ, ಲಕ್ಷ್ಮಣ ಮೊದಲಾದ ಕವಿಕೃತಿಗಳ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿಗಳು ದೊರೆಯುತ್ತವೆ. ಜಾತಿಯನ್ನು ಪ್ರದಾನವಾಗಿಟ್ಟುಕೊಂಡು ಸಾಹಿತ್ಯ ಚರಿತ್ರೆಯ ರಚನೆಗೆ ಕೈಹಾಕಿದರೆ ಇಂಥ ಅವಕಾಶಗಳು ಹೆಚ್ಚು ಇರುತ್ತವೆ ಎಂಬುದು ಗಮನಾರ್ಹ ಹಾಗೆ ನೋಡಿದರೆ ಕನ್ನಡದಲ್ಲಿ ಆರ್. ನರಸಿಂಹಾಚಾರ್ಯರ ಕವಿಚರಿತೆಯಿಂದ ಹಿಡಿದು ಇಂದಿನವರೆಗೆ ಅನೇಕ ಸಾಹಿತ್ಯ ಚರಿತ್ರೆಗಳು ಹೊರಬಂದಿವೆ. ಇವುಗಳಲ್ಲಿ ಮೈಸೂರು ಮತ್ತು ಬೆಂಗಳೂರು ವಿ.ವಿಗಳು ಜೊತೆಗೆ ಅನೇಕ ಸಂಘಸಂಸ್ಥೆಗಳು ಹಾಗೂ ರಂ.ಶ್ರೀ. ಮುಗಳಿ, ತ.ಸು.ಶಾಮರಾಯ, ಐ.ಮಾ ಮುತ್ತಣ್ಣ, ಸಿ. ವೀರಣ್ಣ ಮೊದಲಾದ ಏಕವ್ಯಕ್ತಿಗಳ ಸಾಹಿತ್ಯ ಚರಿತ್ರೆಗಳು ಗಮನಾರ್ಹ ಎನಿಸಿವೆ. ಇವೆಲ್ಲಾ ಕನ್ನಡ ಸಾಹಿತ್ಯವನ್ನು ಇಡಿಯಾಗಿ ನೋಡಿವೆ. ಜಾತಿ-ಮತಗಳ ವಿಂಗಡಣೆ ಅಥವಾ ಪ್ರಾಧಾನ್ಯ ಇವುಗಳಲ್ಲಿ ಇಲ್ಲ. ಆದರೆ ಪ್ರಸ್ತುತ ಸಂಪುಟ ಜೈನ ಕೃತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡಿದೆ. ಇದರ ಮೂಲ ಉದ್ದೇಶವೇ ಇದಾಗಿದೆ.
ಯಾವುದೇ ಸಾಹಿತ್ಯ ಚರಿತ್ರೆಯನ್ನು ಜಾತಿ-ಮತಗಳ ಹಿನ್ನೆಲೆಯಲ್ಲಿ ವಿಗಂಡಿಸಿ ನೋಡುವ ವಸಹಾತುಶಾಹಿ ದೃಷ್ಟಿ ಎಷ್ಟು ಸಮಂಜಸ ಎಂಬುದು ಚರ್ಚಾರ್ಹ ವಿಷಯ. ಆದರೆ ಸದರಿ ಸಂಪುಟಗಳು ಸಾಹಿತ್ಯಾಸಕ್ತರಿಗೆ ಅತ್ಯಂತ ಉಪಯುಕ್ತವಾಗುವಂತೆ ಹೊರಬಂದಿವೆ ಎಂಬುದು ಮೆಚ್ಚಬೇಕಾದ ವಿಷಯವಾಗಿದೆ. ಈ ಸಂಪುಟಗಳಲ್ಲಿನ ಲೇಖನಗಳನ್ನು ಬೇರೆಬೇರೆ ವಿದ್ವಾಂಸರಿಂದ ಬರೆಸಿ ಬಳಸಿಕೊಳ್ಳಲಾಗಿದೆ ಅಥವಾ ಅಂಥ ಬರಹಗಳನ್ನು ಬಳಸಿಕೊಳ್ಳಲಾಗಿದೆ. ಅನಗತ್ಯವೆನಿಸುವಂಥ ಯಾವುದೇ ವಿಷಯಗಳು ಇದರಲ್ಲಿ ಸೇರಿಲ್ಲ. ಅಗತ್ಯ ಎನಿಸುವಂಥ ಎಲ್ಲ ಪೂರಕ ಮಾಹಿತಿಗಳನ್ನು ಕೊಡುವ ಸಾರ್ಥಕ ಪ್ರಯತ್ನವನ್ನು ಸಂಪಾದಕರು ಮಾಡಿದ್ದಾರೆ. ಒಂದು ರೀತಿಯಲ್ಲಿ ಈ ಸಂಪುಟಗಳು ಕನ್ನಡ ಸಾಹಿತ್ಯಕ್ಕೆ ಜೈನ ಕೃತಿಕಾರರ ವಿಶ್ವಕೋಶದಂತೆ ಹೊರಬಂದಿವೆ. ಒಂದು ಸಂಸ್ಥೆ ಮಾಡುವಂತ ಕೆಲಸವನ್ನು ಪದ್ಮಪ್ರಸಾದರು ಮಾಡಿದ್ದಾರೆ. ಇದಕ್ಕಾಗಿ ಅವರು ಅಭಿನಂದನಾರ್ಹರು. ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಉಳ್ಳವರು ಉಳಿದ ಸಾಹಿತ್ಯ ಚರಿತ್ರೆ ಸಂಪುಟಗಳ ಜೊತೆಗೆ ಈ ಸಂಪುಟಗಳನ್ನು ಅಗತ್ಯವಾಗಿ ಗಮನಿಸಬೇಕಿದೆ. ಇಲ್ಲವಾದಲ್ಲಿ ಕನ್ನಡ ಸಾಹಿತ್ಯದ ಅಧ್ಯಯನ ಅಪೂರ್ಣವಾಗುತ್ತದೆ ಎಂದು ಧಾರಾಳವಾಗಿ ಹೇಳಬಹುದು. ಈ ಸರಣಿಯಲ್ಲಿ ಇನ್ನೂ ಎರಡು ಸಂಪುಟಗಳು ಹೊರಬರಲಿವೆ ಅವು ಕೂಡ ಇಷ್ಟೇ ಉಪಯುಕ್ತವಾಗಿ ಹೊರಬರಲಿವೆ ಎಂದು ಆಶಿಸಬಹುದು. ಆದರೆ ಹೀಗೆ ಜಾತಿವಾರು ಸಾಹಿತ್ಯ ಚರಿತ್ರೆಗಳನ್ನು ಹೊರತರುತ್ತಾ ಹೋದರೆ ಅದು ಅಂತ್ಯಕಾಣುವುದು ಯಾವಾಗ ಹಾಗೂ ಈ ಬೆಳವಣಿಗೆ ಸರಿಯೇ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿಯುತ್ತದೆ. ಇದು ಮುಂದುವರೆದರೆ ಉಪಪಂಗಡಗಳ ಸಾಹಿತ್ಯಚರಿತ್ರೆಯನ್ನು ರಚಿಸಬೇಕಾಗಬಹುದು. ಇದು ಸಾಹಿತ್ಯದ ವಿಶಾಲ ದೃಷ್ಟಿಯಿಂದ ಮೆಚ್ಚುವ ಬೆಳವಣಿಗೆ ಅನಿಸುವುದಿಲ್ಲ.
ಕನ್ನಡ ಜೈನಸಾಹಿತ್ಯ ಚರಿತ್ರೆ ಸಂಪುಟಗಳು,
ಎಸ್.ಪಿ. ಪದ್ಮಪ್ರಸಾದ್ (ಸಂ), ಪ್ರಕಾಶಕರು, ತೃಪ್ತಿ- ಎರಡನೇ ಕ್ರಾಸ್, 9ನೇ ಮುಖ್ಯರಸ್ತೆ, ಗೋಕುಲ ಬಡಾವಣೆ, ತುಮಕೂರು. ಮೊದಲ ಮುದ್ರಣ-2021. ಮೊಬೈಲ್ ಸಂಖ್ಯೆ:- 9448768567.

No comments:
Post a Comment