
ವಿಶ್ವ ವಿದ್ಯಾನಿಲಯದ ಆವರಣ ರಾಜಕೀಯ ಕೇಂದ್ರವಾಗಲು ಇದು ಆದ್ಯತೆ ಕೊಡುತ್ತದೆ. ಎಡ ಕಕ್ಶಗಳು ಅಧಿಕಾರದಲ್ಲಿರುವ ಕಡೆ ಇಂಥ ಚಿಂತನೆ ಏಕೆ ಬರುತ್ತಿದೆ? ಏಕೆಂದರೆ, ಸದ್ಯ ಚಾಲ್ತಿಯಲ್ಲಿರುವ ವಿವಿ ಮಾದರಿ ಹಂಬೋಲ್ಟನ ನಿಂದ ಬಂದುದು, ರಾಜಕೀಯ ವ್ಯವಸ್ತೆಯೇ ಅದರ ಆಶಯವಾಗಿತ್ತು. ಬರುಬರುತ್ತ ಕೇವಲ ಶಿಕ್ಷಣಕ್ಕೆ ಆದ್ಯತೆ ಇರುವಂತೆ ಅದು ರೂಪುಗೊಂಡು ಆಡಳಿತ ಪಕ್ಷಗಳಿಂದ ದೂರವಾಗುವಂತೆ ಮಾಡಲಾಯ್ತು, ಈಗ ಮತ್ತೆ ಅದೇ ಸ್ಥಿತಿಗೆ ಮರಳುವಂತೆ ಕಾಣುತ್ತಿದೆ.
ಒಂದು ದೃಷ್ಟಿಯಲ್ಲಿ ಇಂದಿನ ನಮ್ಮ ವಿವಿಗಳು ಪದವೀಧರ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿವೆ, ಇವರಿಗೆ ಪಕ್ಷಗಳು ಆಸರೆ ಕೊಡುತ್ತಿವೆ, ಹೀಗೆ ವಿವಿಗಳಿಗೂ ರಾಜಕೀಯಕ್ಕೂ ನಂಟು ಬಿದ್ದಿದೆ. ನಿರುದ್ಯೋಗಿ ಯುವಕರು ಪಕ್ಷಗಳ ಮೂಲ ಬಂಡವಾಳ. ಅವರನ್ನು ತಮ್ಮತ್ತ ಸೆಳೆದುಕೊಳ್ಳುವ ಜಾಗ ವಿವಿಗಳು. ಅಲ್ಲಿಯೂ ವಿದ್ಯಾರ್ಥಿ ಚುನಾವಣೆ, ಯುವ ನಾಯಕರನ್ನು ಬೆಳೆಸುವ ನೆಪ ಇತ್ಯಾದಿ ಒಳ್ಳೆಯ ಕಾರಣ ಕೊಟ್ಟು ಸಾಕಷ್ಟು ರಾಜಕಾರಣ ಮಾಡಲಾಗುತ್ತದೆ. ಯುವಕರು ಓದುವುದು ಬಿಟ್ಟು ಮರಿ ಪುಡಾರಿಗಳಾಗಿ ಅಲ್ಲಿ ರೂಪುಗೊಳ್ಳುತ್ತಾರೆ. ಅಷ್ಟಕ್ಕೂ ರಾಜಕಾರಣಿಯಾಗಲು ಓದು ಬರೆಹ ಏಕೆ? ಅದಕ್ಕೆ ಹಾಲಿ ಬೇಕಾದ ಯೋಗ್ಯತೆ ಕೊಲೆ ಸುಲಿಗೆ ಅತ್ಯಾಚಾರಗಳ ದಾಖಲೆ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಎಲ್ಲ ಕಡೆಯೂ ರಾಜಕೀಯವಿದೆ ಅನ್ನಲಾಗುತ್ತದೆ. ಆದರೆ ರಾಜಕೀಯವೇ ಎಲ್ಲ ಕಡೆ ಮೂಗು ತೂರಿಸಿಕೊಂಡು ಹೋಗಿ ಎಲ್ಲವನ್ನೂ ಕುಲಗೆಡಿಸುತ್ತದೆ. ವಿವಿಗಳನ್ನೇ ನೋಡಿ - ಸ್ವಾತಂತ್ರ್ಯದ ಕಾಲದಲ್ಲಿದ್ದ ನಮ್ಮ ರಾಜಾಜಿ, ನೆಹರೂ ಬೋಸ್, ಗಾಂಧೀ, ಮಾಳವೀಯ, ಅಂಬೇಡ್ಕರ್ ಮೊದಲಾದವರು ಅಸಾಮಾನ್ಯ ಶಿಕ್ಷಣವೇತ್ತರಾಗಿದ್ದರು. ಅಂತೆಯೇ ಅಸಾಧಾರಣ ರಾಜಕಾರಣಿಗಳೂ ಆಗಿದ್ದರು. ಅನಂತರ ಆದ ಬದಲಾವಣೆಯೇ ಬೇರೆ. ಇದಕ್ಕೆ ಕಾರಣ ಕೇವಲ ಮತಗಳಿಕೆಯೇ ರಾಜಕಾರಣ ಆದುದು!
ಇದಕ್ಕಾಗಿ ಬೇಕಾದ ಜನರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಆಗತೊಡಗಿತು, ರಾಜಕೀಯದಲ್ಲಿ ವ್ಯಕ್ತಿಯ ಯೋಗ್ಯತೆಯ ತೀರ್ಮಾನ ಇದರಿಂದ ಆಗತೊಡಗಿತು. ಪರಿಣಾಮವಾಗಿ ಸೋಕಾಲ್ಡ್ ನೇತಾಗಳ ಗಮನ ಸಮುದಾಯಗಳ ಮತ ಬೇಟೆಗೆ ತಿರುಗಿತು, ಪ್ರಗತಿ ಚಿಂತನೆಗಳ ಮೂಲಕ ಜನಮನ ಗೆಲ್ಲುವ ಬದಲಾಗಿ ಹೇಗಾದರೂ ಒಂದಿಷ್ಟು ಜನರನ್ನು ಸೆಳೆದಿಟ್ಟುಕೊಳ್ಳುವ ಪೈಪೋಟಿ ನಡೆಯತೊಡಗಿತು, ಇದರಿಂದ ಜಾತಿ, ಸವಲತ್ತುಗಳ ಆಮಿಷ ಮೊದಲಾದವು ಮುನ್ನೆಲೆಗೆ ಬಂದವು. ಅಪರಾಧಗಳ ಮೂಲಕ ಭೀತಿ ಹುಟ್ಟಿಸಿ ಕೂಡ ಜನರನ್ನು ಹಿಡಿದಿಡುವ ಯತ್ನಗಳೂ ಮುಂದಾದವು. ಇದು ಸುಲಭವಾದ್ದರಿಂದ ರಾಜಕೀಯ ಪ್ರವೇಶಕ್ಕೆ ಇದೇ ಮೊದಲ ಸೋಪಾನ ಎಂಬ ಕೆಟ್ಟ ಮಾದರಿ ರೂಪುಗೊಂಡಿತು. ಸಿನಿಮಾದಂಥ ಜನಪ್ರಿಯ ಮಾಧ್ಯಮ ಇದನ್ನು ವೈಭವೀಕರಿಸಿದ ಪರಿಣಾಮ ಯುವ ಜನತೆಗೆ ಅದೇ ಆದರ್ಶ ಎಂಬಂತಾಯಿತು. ೭೦ರ ದಶಕದಿಂದ ಈಚೆಗೆ ಇದು ಅತಿರೇಕ ತಲಪಿತು. ತುರ್ತು ಪರಿಸ್ಥಿತಿ ಕೂಡ ಇದಕ್ಕೆ ತುಪ್ಪ ಸುರಿಯಿತು. ಸ್ವಾತಂತ್ರ್ಯ ಹೋರಾಟ ಕಾಲದಲ್ಲೇ ಶಾಲೇ ಕಾಲೇಜುಗಳಿಗೆ ರಾಜಕೀಯ ಪ್ರವೇಶ ಪಡೆದಿತ್ತಾದರೂ ಅಂದು ಅದೊಂದು ಆದರ್ಶವಾಗಿತ್ತು. ಅನಂತರ ಅದು ಬಂಡವಾಳವಾಯ್ತು. ಬೇರೆ ಬೇರೆ ಕಾರಣಕ್ಕೆ ಪಕ್ಷಗಳು ಅದನ್ನು ಪೋಷಿಸುತ್ತ ಬಂದವು. ಶಿಕ್ಷಣದ ಸಂಸ್ಥೆಯಾದ ವಿಶ್ವವಿದ್ಯಾನಿಲಯ ಹಾಗೂ ಅದನ್ನು ನಿಯಂತ್ರಿಸುವ ಕುಲಪತಿಯನ್ನೇ ನಿಯಂತ್ರಣದಲ್ಲಿಟ್ಟುಕೊಂಡರೆ, ಅಲ್ಲಿನ ವಿದ್ಯಾರ್ಥಿಗಳೆಲ್ಲ ತಮ್ಮ ನಿಯಂತ್ರಣಕ್ಕೆ ಬರುತ್ತಾರೆಂಬುದನ್ನು ಕಂಡುಕೊಳ್ಳಲು ಪಕ್ಷಗಳಿಗೆ ಬಹುಕಾಲ ಬೇಕಾಗಲಿಲ್ಲ. ನೇರವಾಗಿ ಅಲ್ಲದಿದ್ದರೂ ವಿವಿಯನ್ನು ನಿಯಂತ್ರಿಸುವ ಜನತಂತ್ರದ ವ್ಯ್ವಸ್ಥೆಯ ಹೆಸರಿನ ಸಿಂಡಿಕೇಟ್ ಮತ್ತು ಕೌನ್ಸಿಲ್ ಗಳ ಹೆಸರಲ್ಲಿ ಕುಲಪತಿಯನ್ನು ಹಿಡಿತದಲ್ಲಿಟ್ಟುಕೊಳ್ಳುವ ಪರೋಕ್ಷ ವ್ಯವಸ್ಥೆ ಜಾರಿಗೆ ಬಂತು. ನೇರವಾಗಿ ಅಲ್ಲಿ ರಾಜಕೀಯ ಬಾರದಂತೆ ರಾಜ್ಯಪಾಲರ ಮೂಲಕ ಕುಲಪತಿಯ ನೇಮಕ ವ್ಯವಸ್ಥೆ ಬಂತು. ಅಲ್ಲಿಯೂ ಕೊರತೆಗಳೆದ್ದು ನೇಮಕಾತಿ ಸಮಿತಿಗಳು ಬಂದವು. ಅಲ್ಲಿಯೂ ರಾಜಕೀಯ ಹೊಕ್ಕು ಇದೀಗ ನೇರ ಪ್ರವೇಶವೇ ಸರಿ ಎಂಬ ಸೂತ್ರಕ್ಕೆ ರಾಜ್ಯಗಳು ಬರತೊಡಗಿವೆ. ಇದು ಸರಿಯಾದ ಬೆಳವಣಿಗೆಯಲ್ಲ. ವಿವಿಗಳು ಕೇವಲ ಶಿಕ್ಷಣ ಕೇಂದ್ರಗಳಾಗಿರಬೇಕು. ವಿದ್ಯೆ ಪಡೆದ ವಿದ್ಯಾರ್ಥಿ ಅನಂತರ ತನ್ನ ಇಷ್ಟದಂತೆ ಸಮಾಜದಲ್ಲಿ ಏನಾದರೂ ಆಗುವ ಸ್ವಾತಂತ್ರ್ಯ ಕೊಡಬೇಕು. ಬದಲಾಗಿ ವಿವಿಗಳ ಆವರಣ ರಾಜಕೀಯ ದೊಂಬರಾಟಕ್ಕೆ ಸ್ಥಳವಾಗುವಂತೆ ಮಾಡಬಾರದು. ಸದ್ಯ ಕುಲಪತಿಯ ನೇಮಕಾತಿ ಅಧಿಕಾರ ಮುಖ್ಯಮಂತ್ರಿಗೆ ಬರುವುದರಿಂದ ಪರಿಣಾಮ ಇದೇ ಆಗುವುದು.
೮೦ರ ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಎಡ ಪಕ್ಷಗಳ ಹಿಡಿತ ಕ್ರಮೇಣ ಕುಸಿಯತೊಡಗಿತು. ಅದುವರೆಗೆ ಆಧುನಿಕ ಶಿಕ್ಷಣ ಅಂದರೆ ತಾವೇ ತಿಳಿದು ಬಡಿಸಿದ್ದು ಎಂಬಂತೆ ಶಿಕ್ಷಣದ ಎಲ್ಲ ನೇಮಕಾತಿಗಳಲ್ಲೂ ತಮ್ಮ ಧೋರಣೆ ಉಳ್ಳವರನ್ನೇ ನೇಮಿಸುತ್ತಿದ್ದ ವ್ಯವಸ್ಥೆ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರಣದಿಂದ ನೇಮಕಾತಿ ಪ್ರಕ್ರಿಯೆ ಬದಲಾಗಿ ರಾಜಕೀಯ ಪ್ರವೇಶ ಹಿನ್ನಡೆಗೆ ಹೋಯಿತು. ಹೀಗಾಗಿ ಯುವ ಜನರ ಗಮನ ತಮ್ಮ ಭವಿಷ್ಯ ರಾಜಕೀಯ ಒಡನಾಟದಲ್ಲಿಲ್ಲ ಎಂಬ ಅರಿವು ಪಡೆದು ಬೇರೆಡೆಗೆ ಹೊರಳಿತು. ಇದರಿಂದ ವಿವಿ ಆವರಣಗಳಲ್ಲಿರಾಜಕೀಯ ಆರ್ಭಟ ಮೂಲೆಗೆ ಸರಿಯಿತು. ಹೀಗಾಗಿ ಕ್ಯಾಂಪಸ್ ಗಳಲ್ಲಿ ಪಕ್ಷಗಳ ಹಿಡಿತ ಸಡಿಲವಾಯಿತು. ನೇಮಕಾತಿ ಮಾತ್ರವಲ್ಲದೇ ಅಲ್ಲಿ ಏನು ಬೋಧಿಸಬೇಕು ಎಂಬುದನ್ನೂ ಪಕ್ಷಗಳು ನಿರ್ಧರಿಸುತ್ತಿದ್ದವು. ಒಂದೊಂದು ಕ್ಯಾಂಪಸ್ ಗಳಿಂದ ಒಂದೊಂದು ಪಕ್ಷಗಳು ಪ್ರಾಬಲ್ಯ ಸಾಧಿಸತೊಡಗಿದವು. ಇದರ ಪರಿಣಾಮ ಜೆ ಎನ್ ಯು ವಿನಿಂದ ಕೊಟ್ಟಾಯಂ ತನಕ ಎಲ್ಲ ಕಡೆ ಸಮವಾಯಿತು. ಶಿಕ್ಷಣದ ಆದ್ಯತೆ ಕುಸಿಯಿತು. ವಿದ್ಯಾರ್ಥಿಗಳು ಯುವ ನಾಯಕ ಪಟ್ಟಕ್ಕೆ ಮುಗಿಬೀಳತೊಡಗಿದರು. ಅಲ್ಲಿಗೆ ವಿವಿಗಳ ಆಶಯ ಸಂಪೂರ್ಣ ಕುಲಗೆಟ್ಟಿತು. ಅನಂತರದ ದಶಕಗಳ ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ಬದಲಾವಣೆ ವಿದ್ಯಾರ್ಥಿಗಳ ಧೋರಣೆಯನ್ನೂ ಬದಲಿಸಿ ಕ್ಯಾಂಪಸ್ ಗಳಲ್ಲಿ ಪಕ್ಷಗಳ ಅಸ್ತಿತ್ವವನ್ನೇ ಇಲ್ಲವಾಗುವಂತೆ ಮಾಡಿತು. ಕಂಗೆಟ್ಟ ಪಕ್ಷಗಳಿಗೆ ಬೇರೆ ದಾರಿ ತಿಳಿದಿರಲಿಲ್ಲ, ಪ್ರಗತಿಯ ಮೂಲಕ ಜನಾಕರ್ಷಿಸುವ ವಿಧಾನ ಮೊದಲೇ ಗೊತ್ತಿರಲಿಲ್ಲ. ಹೀಗಾಗಿ ಪಕ್ಷಗಳು ಮೂಲೆಗೆ ಸರಿದವು. ಅನೇಕ ಕಡೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಡಿತ ಹೊಂದಿದ್ದ ಎಡ ಪಕ್ಷಗಳು ಕಕ್ಕಾಬಿಕ್ಕಿಯಾಗಿ ಈಗ ನೇರವಾಗಿ ಹಿಡಿತ ಸಾಧಿಸಿ ಹಳೆಯ ಪರಿಸ್ಥಿತಿಗೆ ಮರಳುವ ಯತ್ನವನ್ನು ಕಾನೂನು ಬದಲಾವಣೆ ಮೂಲಕ ಸಾಧಿಸಲು ಹೊರಟಿವೆ. ಎಲ್ಲ ಪಕ್ಷಗಳಿಗೂ ರಾಜಕೀಯವಾಗಿ ತಮ್ಮ ಹಿಡಿತ ಇರುತ್ತದೆ ಎಂಬ ಕಾರಣಕ್ಕೆ ಇಂಥ ಮಾರ್ಗ ಸದ್ಯ ಸರಿ ಎನಿಸಿರಬೇಕು. ಹಾಗಾಗಿ ಯಾರೂ ಇದರ ವಿರುದ್ಧ ದನಿ ಎತ್ತುತ್ತಿಲ್ಲ. ಆಗಲಿ, ನಿಜವಾದ ಶಿಕ್ಷಣ ಕಾಳಜಿ ಇರುವ ಜನ ಭವಿಷ್ಯ ಏನಾಗುತ್ತದೆ ಎಂದು ಹೇಳಬೇಡವೇ? ಇಲ್ಲ, ಅವರೂ ಸುಮ್ಮನಿದ್ದಾರೆ. ಶಿಕ್ಷಣದ ಮೂಲ ಆಶಯಕ್ಕೆ ಭಂಗ ತರುವ ಇಂಥ ಕಾನೂನು ಬದಲಾವಣೆ ಸರಿಯಲ್ಲ. ಇದರಿಂದ ವಿವಿಗಳ ಆವರಣ ರಾಜಕೀಯ ಸಮಾವೇಶದ ತಾಣವಾಗುತ್ತದೆ, ಪಕ್ಷಗಳ ಪ್ರಣಾಳಿಕೆ ಪಥ್ಯವಾಗುತ್ತದೆ, ವಿದ್ಯಾರ್ಥಿಗಳು ಯಾವುದೋ ಪಕ್ಷದ ಕಾರ್ಯಕರ್ತರಾಗಿ ತಯಾರಾಗುತ್ತಾರೆ. ಈಗಲೂ ಕಾಲ ಮಿಂಚಿಲ್ಲ ಕುಲಪತಿಗಳ ನೇಮಕಾತಿಯ ಪರಮಾಧಿಕಾರ ಆಡಳಿತ ನಡೆಸುವ ರಾಜಕೀಯ ಮುಖಂಡರಾದ ಮುಖ್ಯಮಂತ್ರಿಗೆ ಹೋಗುತ್ತಿರುವ ಬೆಳವಣಿಗೆಯನ್ನು ತಡೆಯಬೇಕು. ಇಲ್ಲವಾದಲ್ಲಿ ವಿವಿಯೂ ಒಂದು ಪಂಚಾಯ್ತಿಕಟ್ಟೆಯಾಗುತ್ತದೆ.
No comments:
Post a Comment