Friday, 17 June 2022

ಬೆಂಗಳೂರು: ಶಿಥಿಲಾವಸ್ಥೆಗೆ ಜಾರುತ್ತಿದೆಯೇ?

ಪ್ರಪಂಚದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಸುಸ್ಥಿರ ಆರ್ಥಿಕ ವ್ಯವಸ್ಥೆ, ಸಾಕಷ್ಟು ಮೂಲಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ ಅಭಿವೃದ್ಧಿಯ ಮಾನದಂಡಗಳು. ಆಡಳಿತ ವ್ಯವಸ್ಥೆಗೆ ಲಭ್ಯ ಸಂಪನ್ಮೂಲ ಮತ್ತು ಸಾಮಾಜಿಕ ಪರಿಸ್ಥಿತಿಯ ದೂರದೃಷ್ಟಿ ಇಲ್ಲದೇ ಅಭಿವೃದ್ಧಿಯ ಯೋಜನೆ ಹಮ್ಮಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿಯೇ ಇನ್ನು ದಶಕದ ಒಪ್ಪತ್ತಿನಲ್ಲಿ ನಮ್ಮ ಊರು ಅಥವಾ ರಾಜ್ಯ ಅಥವಾ ದೇಶ ಹೇಗಿರಬಹುದು ಎಂಬ ಕಲ್ಪನೆ ಆಡಳಿತ ವ್ಯವಸ್ಥೆಗೆ ಇರಬೇಕಾದುದು ಅಗತ್ಯ. ಪ್ರಸ್ತುತ ಕೃಷಿ, ಕೈಗಾರಿಕೆ, ಸಂವಹನ, ಸಂಪರ್ಕ ಉದ್ಯೋಗ, ಶಿಕ್ಷಣ ಆರೋಗ್ಯ ಮೊದಲಾದ ವಿಷಯಗಳಲ್ಲಿ ಖಾಸಗಿ ಪಾಲುದಾರಿಕೆಯಿಂದ ಜನ ಸಾಮಾನ್ಯರು ತಮಗೆ ಏನು ಬೇಕೋ ಅದನ್ನು ತಮ್ಮ ಪಾಡಿಗೆ ತಾವು ವ್ಯವಸ್ಥೆ ಮಾಡಿಕೊಳ್ಳುತ್ತ ಹೋಗುತ್ತಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಅಥವಾ ಆಡಳಿತ ವ್ಯವಸ್ಥೆ ಖಾಸಗಿ ಪಾಲುದಾರರಿಗೆ ಅಥವಾ ಜನಸಾಮಾನ್ಯರಿಗೆ ಅಗತ್ಯ ಅನುಮತಿ ಕೊಡುವ ಕೆಲಸವನ್ನಷ್ಟೇ ಮಾಡುತ್ತಿದೆ. ತನ್ನ ನೌಕರ ವರ್ಗಕ್ಕೆ ಸಂಬಳ ಕೊಡುವುದು, ತೆರಿಗೆ ಸಂಗ್ರಹ, ಪೊಲೀಸ್ ವ್ಯವಸ್ಥೆ, ತಕ್ಕ ಮಟ್ಟಿಗೆ ನೀರು ಮತ್ತು ವಿದ್ಯುತ್ ಸರಬರಾಜು ಹಾಗೂ ಸಾರಿಗೆ ಸಂಪರ್ಕ ಇಷ್ಟು ಬಿಟ್ಟರೆ ಯಾವುದೇ ಸರ್ಕಾರ ಜನರ ಜೀವನ ಮಟ್ಟ ಸುಧಾರಣೆಗೆ ಕೊಡುತ್ತಿರುವ ಸೇವೆ ಅಷ್ಟರದ್ದೇ. ಒಂದು ಕ್ಷಣ ಶಿಕ್ಷಣ, ಆರೋಗ್ಯ, ದೂರವಾಣಿ ಮೊದಲಾದ ಕ್ಷೇತ್ರಗಳಲ್ಲಿ ಖಾಸಗಿ ಸೇವೆ ಸಂಪೂರ್ಣ ನಿಂತರೆ ಅರಾಜಕತೆ ಉಂಟಾಗಲು ಇನ್ನೇನೂ ಬೇಕಿಲ್ಲ. ಇಷ್ಟು ಅಧ್ವಾನವಾಗಿದೆ ನಮ್ಮ ಸರ್ಕಾರಿ ವ್ಯವಸ್ಥೆ. ವಸತಿ ಸೌಕರ್ಯದ ವಿಷಯದಲ್ಲಿಯೂ ಈ ಮಾತು ಅಕ್ಷರಶಃ ಸತ್ಯ. 

ಮಾನವ ನಾಗರಿಕತೆಗೆ ವಿನಾಶವಿದೆ. ಇದನ್ನು ನಾಶವಾಗಿಹೋದ ಅನೇಕ ನಾಗರಿಕತೆಗಳೇ ಹೇಳುತ್ತವೆ. ನಾಗರಿಕತೆಯೇ ನಾಶವಾದ ಮೇಲೆ ನಗರಗಳ ಮಾತೇನು? ಅವೂ ನಾಶವಾಗುತ್ತವೆ. ಹೌದು. ಉತ್ತರ ಅಮೆರಿಕ ಮತ್ತು ಯೂರೋಪಿನ ಬಹಳಷ್ಟು ದೇಶಗಳಲ್ಲಿ “ಅರ್ಬನ್ ಡಿಕೇ’’ ಎಂಬ ಪರಿಕಲ್ಪನೆ ಇದೆ. ಜನವಸತಿ ಹೀನತೆ, ಅರ್ಥವ್ಯವಸ್ಥೆಯ ಬದಲಾವಣೆ, ನಿರ್ಗತಿಕ ಆಸ್ತಿ, ನಿರುದ್ಯೋಗ ಹೆಚ್ಚಳ, ಒಡೆದ ಕುಟುಂಬ, ರಾಜಕೀಯ ಅಭದ್ರತೆ, ಅಪರಾಧ ಹೆಚ್ಚಳ, ಅನನುಕೂಲಕರ ನಗರ ವಿನ್ಯಾಸಗಳಿಂದ ನಗರವೊಂದು ಶಿಥಿಲಾವಸ್ಥೆ ತಲುಪುತ್ತದೆ ಎಂದು ಈ ಪರಿಕಲ್ಪನೆ ಹೇಳುತ್ತದೆ. 19ನೇ ಶತಮಾನದ ಅಂತ್ಯದಲ್ಲಿ ಹಾಗೂ 1970 ಮತ್ತು 1980ರ ದಶಕಗಳಲ್ಲಿ ಉತ್ತರ ಅಮೆರಿಕ ಮತ್ತು ಯರೋಪಿನ ಬಹಳಷ್ಟು ಕಡೆಗಳಲ್ಲಿ ಈ ವಿದ್ಯಮಾನ ಹೆಚ್ಚಾಗಿ ಕಂಡುಬಂದಿತ್ತು. ಗ್ಲಾಸ್ಗೋ, ಸೌತ್ ವೇಲ್ಸ್, ಬರ್ಮಿಂಗ್‍ಹ್ಯಾಂ, ಮಾಂಚೆಸ್ಟರ್, ಲಿವರ್‍ಪೂಲ್ ಮೊದಲಾದ ನಗರಗಳು ಈ ಅನುಭವವನ್ನು ಕಂಡಿವೆ. ಶಿಥಿಲಾವಸ್ಥೆ ಕಂಡ ನ್ಯೂಯಾರ್ಕಿನ ಬ್ರಾಂಕ್ಸ್ ನಗರದ ದಕ್ಷಿಣ ಭಾಗವನ್ನು ಮತ್ತೆ ಕಟ್ಟುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷರಾದ ಜಿಮ್ಮಿ ಕಾರ್ಟರ್ ಮತ್ತು ರೊನಾಲ್ಡ್ ರೀಗನ್ ಭೇಟಿ ನೀಡಿದ್ದರು. 1990ರ ನಂತರ ಈ ನಗರ ಮತ್ತೆ ಸುಸ್ಥಿತಿಯತ್ತ ಬಂದಿತು. 1960 ಮತ್ತು 70ರ ದಶಕದಲ್ಲಿ ಈ ನಗರದ ಜೀವನ ಮಟ್ಟ ಕುಸಿದು ಹೇಗೆ ಶಿಥಿಲತೆಯತ್ತ ಜಾರಿತು ಎಂಬ ವಿಸ್ತøತ ವಿವರಣೆಯನ್ನು ರಾಬರ್ಟ್ ಕಾರೋನ ಜೀವನ ಚರಿತ್ರೆ “ದಿ ಪವರ್ ಬ್ರೋಕರ್’’ನಲ್ಲಿ ಕಾಣಬಹುದು.

ಅದೇನೇ ಇರಲಿ, ನಗರವೊಂದು ತಾಳಿಕೊಳ್ಳಲಾರದಷ್ಟು ಜನಂಸಂಖ್ಯೆ ಹೊಂದಿದ್ದು, ಮೂಲಸೌಕರ್ಯ ಕೊರತೆ, ಸಾಮಾಜಿಕ ಮತ್ತು ಸಾಂಸ್ಕøತಿಕ ಪರಕೀಯತೆ, ಸಾರ್ವಜನಿಕ ಕುಂದು ಕೊರತೆ ನಿರ್ವಹಣೆಯ ಕೊರತೆ, ಕಾನೂನು ಮತ್ತು ಸುವ್ಯವಸ್ಥೆಯ ಕೊರತೆ ಮೊದಲಾದ ಸಮಸ್ಯೆಗಳು ಹುಟ್ಟಿದಾಗ ಆ ನಗರದಲ್ಲಿ ಅಪರಾಧ ಹೆಚ್ಚಳವೂ ಆಗುತ್ತದೆ. ಮಾನವಂತರು, ಸಭ್ಯರು ಊರು ತೊರೆಯಲಾರಂಭಿಸುತ್ತಾರೆ. ನಗರ ಶಿಥಿಲಾವಸ್ಥೆಯತ್ತ ಜಾರತೊಡಗುತ್ತದೆ. ಬೆಂಗಳೂರು ಇದೇ ದಾರಿಯಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಮೊದಲನೆಯದಾಗಿ ನಗರ ಶೈಥಿಲ್ಯಕ್ಕೆ ಇರಬೇಕಾದ ಎಲ್ಲ ಕಾರಣಗಳನ್ನೂ ಬೆಂಗಳೂರು ಹೆಚ್ಚೂ ಕಡಿಮೆ ಈಗಾಗಲೇ ಪೂರೈಸಿದೆ. ಸಾಕಷ್ಟು ನೀರು, ವಿದ್ಯುತ್ ಇಲ್ಲ, ನಿವೇಶನದ ಬೆಲೆ ಅಪಾರ ಏರಿ ಅವುಗಳನ್ನು ಕೊಳ್ಳುವವರಿಲ್ಲ, ನಗರ ಸಾಮಥ್ರ್ಯವನ್ನೂ ಮೀರಿ ಜನ, ಜನರನ್ನೂ ಮೀರಿ ವಾಹನಗಳಿವೆ. ಶುದ್ಧ ಹವೆ ಇಲ್ಲ, ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ. ಅಪರಾಧದ ಬಗ್ಗೆ ಹೇಳದಿರುವುದು ವಾಸಿ, ಹೆಚ್ಚೂ ಕಡಿಮೆ ನಿತ್ಯಕ್ಕೊಂದು ಕೊಲೆ ಸಾಮಾನ್ಯ. ಸಾರ್ವಜನಿಕ ಕುಂದು ಕೊರತೆಗೆ ಸ್ಪಂದಿಸುವವರಿಲ್ಲ. ಇಷ್ಟಾದ ಮೇಲೆ ಜನ ಗುಳೆ ಹೋಗುವುದೊಂದೇ ಬಾಕಿ ಇದೆ. 

ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯೆಯ ಸ್ಥಿತಿಗತಿ ಕುರಿತ 2007ರ ವರದಿಯನ್ನು ನೋಡಿದರೆ ಬೆಂಗಳೂರು ಪಾಲಿಗೆ ಶಿಥಿಲಾವಸ್ಥೆ ಬಹಳ ದೂರವೇನೂ ಇಲ್ಲ ಎನಿಸುತ್ತದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ, ಹೆಚ್ಚು ಜನಸಂಖ್ಯೆಯುಳ್ಳ ಮೂರನೇ ಅತಿ ದೊಡ್ಡ ನಗರ ಬೆಂಗಳೂರು. 2020-30ರ ವೇಳೆಗೆ ಗ್ರಾಮಗಳಿಗಿಂತ ನಗರಗಳಲ್ಲಿ ವಾಸ ಮಾಡುವ ಜನಸಂಖ್ಯೆಯೇ ಅಧಿಕವಾಗಿರುತ್ತದೆ ಎಂದು ವರದಿ ಹೇಳುತ್ತದೆ. ಇದಕ್ಕೆ ಬೆಂಗಳೂರು ಕೂಡ ಹೊರತಲ್ಲ. ಪ್ರಸ್ತುತ ಪ್ರಪಂಚದಲ್ಲಿ 6.6 ಶತಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ನಗರಗಳಲ್ಲಿದ್ದಾರೆ. ಇದರಲ್ಲಿ ಬಹುಪಾಲು ಜನ ಅಭಿವೃದ್ಧಿಶೀಲ ದೇಶಗಳಲ್ಲಿದ್ದಾರೆ. ಈ ಪ್ರಮಾಣ 2050ರ ವೇಳೆಗೆ ಶೇ.37ರಷ್ಟು ಹೆಚ್ಚುತ್ತದೆ. ಅಂದರೆ 6.616 ಶತಕೋಟಿ ಜನಸಂಖ್ಯೆ 9.076 ಶತಕೋಟಿಗೇರುತ್ತದೆ. ಇದರಲ್ಲಿ ಬಹುಪಾಲು ಏಷ್ಯಾ ಮತ್ತು ಆಫ್ರಿಕಾಗಳಲ್ಲಿರುತ್ತದೆ. ದಕ್ಷಿಣ ಏಷ್ಯಾದ ಮುಂಬೈ, ಕೊಲ್ಕೊತಾ, ದೆಹಲಿ ಮತ್ತು ಢಾಕಾ ಜನರಿಂದ ಕಿಕ್ಕಿರಿಯುತ್ತವೆ. ಪ್ರಪಂಚದ ಶೇ.37ರಷ್ಟು ಕೊಳೆಗೇರಿ ಭಾರತ ಮತ್ತು ಚೀನಾದಲ್ಲಿರುತ್ತದೆ. ಅಲ್ಲದೇ ಈ ಎರಡು ದೇಶಗಳ ಶೇ.56ರಷ್ಟು ಜನಸಂಖ್ಯೆ ಕೊಳಗೇರಿಯಲ್ಲಿ ವಾಸಮಾಡುತ್ತದೆ. 

ಭಾರತದ ನಗರ ಪ್ರದೇಶದಲ್ಲಿರುವ ಜನಸಂಖ್ಯೆ ಶೇ.30ರಷ್ಟು. ಈ ಪ್ರಮಾಣ 2030ರ ವೇಳೆಗೆ ಶೇ.40.7ರಷ್ಟು ಹೆಚ್ಚುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಜೊತೆಗೆ ಇನ್ನೂ ಭಯಾನಕ ಸಂಗತಿಯನ್ನೂ ಅದು ಹೇಳಿದೆ. ಚೆನ್ನೈಯಲ್ಲಿ ಸುಧಾರಿಸಲು ಸಾಧ್ಯವೇ ಇಲ್ಲದ ರೀತಿಯಲ್ಲಿ ಸಂತಾನೋತ್ಪತ್ತಿ ಪ್ರಮಾಣ ಕುಸಿದಿದ್ದು, ಹತ್ತಕ್ಕೂ ಹೆಚ್ಚು ಪ್ರಸೂತಿ ಚಿಕಿತ್ಸಾಲಯಗಳನ್ನು ವೃದ್ಧಾಪ್ಯ ಚಿಕಿತ್ಸಾ ಘಟಕಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದೆ. ಇದೇ ಬೆಳವಣಿಗೆ ಬೆಂಗಳೂರಿನಲ್ಲೂ ಕಾಣತೊಡಗಿದೆ. 

ಹೀಗಾದಾಗ ವಲಸೆ ಬಂದ ಜನರೇ ನಗರದ ಜನರಾಗುತ್ತಾರೆ. ಅಲ್ಲೇ ಹುಟ್ಟಿ ಬೆಳೆಯುವ ಜನರ ಪ್ರಮಾಣ ಕುಸಿಯುತ್ತದೆ. ಸಾಮಾಜಿಕ ಮತ್ತು ಸಾಂಸ್ಕøತಿಕ ಪರಕೀಯತೆ ಜನ ಸಮುದಾಯದಲ್ಲಿ ಕಾಣಿಸುತ್ತದೆ. ಇಷ್ಟಾದರೂ ನಗರಕ್ಕೆ ಬರುವ ಜನರನ್ನು ತಡೆಯುವ ಯತ್ನ ಮಾಡಬೇಡಿ. ಅಗತ್ಯ ಸೌಲಭ್ಯವನ್ನು ಒದಗಿಸಿ. ಇದರಿಂದ ಉದ್ಯೋಗ ಮತ್ತು ಸಾಂಸ್ಕøತಿಕ-ಸಾಮಾಜಿಕ ಲಾಭವಿದೆ ಎಂದು ವಿಶ್ವಸಂಸ್ಥೆ ಹೇಳಿದೆಯಲ್ಲದೇ ಚೀನಾದಲ್ಲಿ ನಗರಕ್ಕೆ ವಲಸೆ ಬರುವುದನ್ನು ತಡೆಯುತ್ತಿರುವುದು ಸರಿಯಲ್ಲ ಎಂದು ಹೇಳಿದೆ. ಇದು ಭಾರತಕ್ಕೂ ಅನ್ವಯಿಸುವ ಮಾತು. ಹಳೇ ಬೆಂಗಳೂರಿನ ಸುತ್ತ ಒಂದೆರಡು ದಶಕಗಳಿಂದ ಈಚೆಗೆ ನಿರ್ಮಾಣವಾದ ಬಡಾವಣೆಗಳು ಉದ್ಯಾನ, ಗಿಡಮರಗಳು ಮತ್ತು ಸಾಕಷ್ಟು ಅಗಲ ರಸ್ತೆಗಳಿಂದ ತಕ್ಕಮಟ್ಟಿಗೆ ವಾಸಯೋಗ್ಯವಾಗಿವೆ. ನಗರ ಸುಭಾಷ್‍ನಗರ, ಚಿಕ್ಕಪೇಟೆ, ಬಳೇಪೇಟೆ ಮುಂತಾದ ಬೆಂಗಳೂರು ಸೆಂಟ್ರಲ್ ಪ್ರದೇಶ, ಶಿವಾಜಿನಗರ, ವಸಂತನಗರ, ಕಂಟೋನ್ಮೆಂಟ್ ಮೊದಲಾದ ದಟ್ಟ ವಾಣಿಜ್ಯ ವಹಿವಾಟಿನ ಪ್ರದೇಶಗಳಲ್ಲಿ ವಾಸ ಇರುವ ಜನರಿಗೆ ಈ ನಗರ ಜೀವನ ವೈರಾಗ್ಯವನ್ನೇ ಹುಟ್ಟಿಸಿದ್ದರೆ ಅಚ್ಚರಿ ಇಲ್ಲ. 

ಉತ್ತಮ ಜನವಸತಿ ಸೌಕರ್ಯ ಕೊರತೆ ನಗರ ಶಿಥಿಲಾವಸ್ಥೆಗೆ ಮೊದಲ ಕಾರಣ. ಆರ್ಥಿಕ ಹಿಂಜರಿತದ ಹೊಡೆತದಿಂದ ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರ ಶೇ.40ರಷ್ಟು ಕುಸಿದಿದೆ ಎನ್ನುತ್ತಾರೆ ವಹಿವಾಟುದಾರರು. ಸಾಫ್ಟ್‍ವೇರ್ ತಂತ್ರಜ್ಞರು ನೆಲಕ್ಕೆ ಇಡುತ್ತಿದ್ದ ಬೇಡಿಕೆ ಕುಸಿದ ಪರಿಣಾಮ ಇದು. ಸಾಫ್ಟ್‍ವೇರ್ ತಂತ್ರಜ್ಞಾನ ಕೇಂದ್ರವಾಗುವ ಮೊದಲು ಅಂದರೆ 1990 ದಶಕಕ್ಕಿಂತ ಮುಂಚೆ ಬೆಂಗಳೂರು ನಗರ ವ್ಯಾಪ್ತಿಯ ನೆಲದ ಬೇಡಿಕೆ ಅಸಹಜವಾಗಿರಲಿಲ್ಲ. ಬೇಡಿಕೆ ಹೆಚ್ಚಳ ಬೆಲೆ ಇಳಿಸುತ್ತದೆ ಎಂಬ ಕೇನ್ಸ್ ಸಿದ್ಧಾಂತ ಇಲ್ಲಿ ತಲೆಕೆಳಗಾಗಿದೆ. ಈಗಲೂ ಬೆಂಗಳೂರು ವ್ಯಾಪ್ತಿಯ ನೆಲದ ಬೆಲೆ ಕಡಿಮೆ ಏನಲ್ಲ. ವರ್ತುಲ ರಸ್ತೆಯ ಆಸುಪಾಸಿನಲ್ಲಿ ಕೆರೆ ಕೊಳ್ಳಗಳಿದ್ದ ಜಾಗದ ಸಾವಿರಾರು ವಸತಿ ಸಂಕೀರ್ಣಗಳು ನಾಲ್ಕಾರು ವರ್ಷಗಳಿಂದ ಖಾಲಿ ಹೊಡೆಯುತ್ತಿವೆ. ರಿಯಲ್ ಎಸ್ಟೇಟುದಾರರ ದುರಾಸೆ ಮತ್ತು ಸರ್ಕಾರದ ಸ್ಟಾಂಪ್ ಡ್ಯೂಟಿ ನೆಲದ ಬೆಲೆಯನ್ನು ಗಗನಕ್ಕೇರಿಸಿದೆ. ನಿಜವಾದ ನೆಲದ ಬೆಲೆಗಿಂತ ನಾಲ್ಕಾರು ಪಟ್ಟು ಏರಿದ್ದ ಬೆಲೆ ಈಗ ಶೇ.40ರಷ್ಟು ಇಳಿದಿದ್ದರೂ ಅದು ದುಬಾರಿಯೇ. ಬೆಂಗಳೂರಿನಲ್ಲಿ ಸದ್ಯ ಇದ್ದುದರಲ್ಲಿಯೇ ಕಡಿಮೆ ನೆಲದ ಬೆಲೆ ಇರುವುದು ಬನ್ನೇರುಘಟ್ಟ ರಸ್ತೆ ಆಸುಪಾಸಿನಲ್ಲಿ. ಇಲ್ಲಿ ವಸತಿ ಉದ್ದೇಶದ ಪ್ರತಿ ಚದರ ಅಡಿಗೆ 1100-1600ರೂ. ಬೆಲೆ ಇದ್ದರೆ, ವಾಣಿಜ್ಯೋದ್ಯೇಶದ ಜಾಗಕ್ಕೆ ಪ್ರತಿ ಚದರ ಅಡಿಗೆ 2000-3000ರೂ. ಇದೆ. ಅತ್ಯಂತ ದುಬಾರಿ ಜಾಗ ಎಂ.ಜಿ. ರಸ್ತೆ. ಇಲ್ಲ ಪ್ರತಿ ಚದರ ಅಡಿ ವಸತಿ ಜಾಗದ ಬೆಲೆ 2800-4000 ರೂ. ವಾಣಿಜ್ಯ ಜಾಗದ ಬೆಲೆ 4000-9000 ರೂ. ಇಷ್ಟಾದರೂ ಇಲ್ಲಿ ಜಾಗ ಕೊಳ್ಳುವರಿಲ್ಲ, ಕೊಂಬುವರಿಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ. ಬೆಲೆ ಇನ್ನೂ ಏರುತ್ತದೆ ಎಂಬ ದುರಾಶಾವಾದ ಇದಕ್ಕೆ ಕಾರಣ. 

ಇದೇ ದುರಾಸೆಯಿಂದ ಬೆಂಗಳೂರಿಲ್ಲಿ ಒಂದೆಡೆ ಬಾಡಿಗೆಗಾಗಿ ಕಾದಿರುವ ಮನೆಗಳು ಖಾಲಿ ಹೊಡೆಯುತ್ತಿವೆ. ಮತ್ತೊಂದೆಡೆ ಸ್ವಂತ ಸೂರೇ ಇಲ್ಲದೆ ಪರದಾಡುತ್ತಿರುವ ಜನರೂ ಹೆಚ್ಚುತ್ತಿದ್ದಾರೆ. ನಗರದ ವಿವಿಧೆಡೆಯಲ್ಲಿ ನೂರಾರು ಸೈಟು ಇರುವ ಜನರೂ ಇದ್ದಾರೆ. ಒಂದಕ್ಕಿಂತ ಹೆಚ್ಚು ಸೈಟು ಹೊಂದಿರುವ, ದಶಕಗಳಿಂದ ಅದನ್ನು ಖಾಲಿ ಬಿಟ್ಟಿರುವ ಜನರಿಗೆ ಲೆಕ್ಕವಿಲ್ಲ. ಇಂಥ ಖಾಲಿ ನಿವೇಶನಗಳ ಖಚಿತ ಸಂಖ್ಯೆಯನ್ನು ಅನ್ಯ ಕಾರಣಕ್ಕೆ ಬಿಬಿಎಂಪಿ ಈಗ ಲೆಕ್ಕಹಾಕತೊಡಗಿದೆ!

ನಮ್ಮಲ್ಲಿ ಖಚಿತ ನಗರ ವಿನ್ಯಾಸ ಮತ್ತು ಅಭಿವೃದ್ಧಿ ಯೋಜನೆಯೂ ಇಲ್ಲ, ಅದರ ಉಸ್ತುವಾರಿ ಹೊತ್ತ ನಿರ್ದಿಷ್ಟ ಅಧಿಕಾರಿಯೂ ಇಲ್ಲ. ಹೀಗಾಗಿ ಇಂಥ ಅವ್ಯವಸ್ಥೆ ತಲೆದೋರಿದೆ. ನಗರದ ಅಮೂಲ್ಯ ಜಾಗದ ಇಂಥ ಅವ್ಯವಸ್ಥೆಯನ್ನು ತಡೆಯಲು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ನಗರ ಶಿಥಿಲಾವಸ್ಥೆ ತಲುಪಲು ಹೆಚ್ಚು ಕಾಲ ಬೇಕಿಲ್ಲ. “ಇನ್ನು ಮುಂದೆ ತನ್ನ ಯೋಜನೆ ಜಾರಿಗೆ ಸರ್ಕಾರಕ್ಕೇ ನೆಲದ ಕೊರತೆ ಕಾಣಿಸುತ್ತದೆ” ಎಂದು ರಾಜ್ಯದ ಮುಖ್ಯಮಂತ್ರಿಯವರೇ ಈಚೆಗೆ ಹೇಳಿದ ಮಾತಿನಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಇಂಥ ಪರಿಸ್ಥಿತಿ ತಡೆಯಲು ಅಡುಗೆ ಅನಿಲ ವಿತರಣೆಗೆ ಮಾಡಿದಂತೆ “ಒಬ್ಬರಿಗೆ ಒಂದು” ಎನ್ನುವ ನಿವೇಶನ ಪಡಿತರ ವ್ಯವಸ್ಥೆಯನ್ನೇಕೆ ಜಾರಿ ಮಾಡಲು ಸರ್ಕಾರ ಮುಂದಾಗಬಾರದು? ಹಣವಂತರ ಏಕಸ್ವಾಮ್ಯವೂ ಕೊನೆಯಾಗಿ ಉತ್ತಮ ಸೌಕರ್ಯ ಒದಗಿಸಲೂ ಇದರಿಂದ ಮಾರ್ಗವಾಗಬಹುದು. ಮುಂದಿನ ದಿನಗಳಲ್ಲಿ ನಗರದ ಮೇಲೆ ಉಂಟಾಗುವ ಒತ್ತಡ ತಡೆಯಲು ಈ ಬಗೆಯ ಕ್ರಮ ಕೈಗೊಳ್ಳಲು ಮುಂದಾಗದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಖಂಡಿತ ಕ್ಷಮಿಸದು. 




ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment