ಇಂದು ಸದ್ಯಕ್ಕೆ ತಿಳಿದಿರುವಂತೆ 1973 ಏಪ್ರಿಲ್ 3 ರಂದು ಮೋಟರೋಲಾ ಕಂಪನಿ ಮೊದಲಬಾರಿಗೆ ಸಲ್ಯುಲರ್ ಫೋನನ್ನು ಶೋಧಿಸಿತು. ಅಂದಿನಿಂದ ಇಂದಿನವರೆಗೆ ಸುಮಾರು 40ಕ್ಕೂ ಹೆಚ್ಚು ಮೊಬೈಲ್ ಕಂಪನಿಗಳು ಕಾರ್ಯಪ್ರವೃತ್ತವಾಗಿವೆ. ಒಂದು ಅಂದಾಜಿನಂತೆ ಕಳೆದ ವರ್ಷ ಜಾಗತಿಕವಾಗಿ 328 ದಶಲಕ್ಷ ಮೊಬೈಲ್ ಫೋನ್‍ಗಳ ವಹಿವಾಟು ನಡೆದಿದೆ. ಕೋವಿಡ್ ಮತ್ತು ರಷ್ಯ-ಉಕ್ರೇನ್ ಯುದ್ಧದಿಂದಾಗಿ ಕಳೆದ ಸಾಲಿನಲ್ಲಿ ಶೇ. 12ರಷ್ಟು ವಹಿವಾಟು ಕುಸಿದಿದೆ ಎಂದು ಮಾರುಕಟ್ಟೆ ಹೇಳಿದೆ. ಇದು ಏನೇ ಇದ್ದರೂ ಮೊಬೈಲ್ ಉಂಟುಮಾಡುವ ಸಾಮಾಜಿಕ ಪರಿಣಾಮ ಮಾತ್ರ ಕುಸಿದಿಲ್ಲ.
ಇದೊಂದು ಸಣ್ಣ ಉಪಕರಣ ಅನೇಕ ದೊಡ್ಡ ಉಪಕರಣಗಳಾದ ಟಿ.ವಿ., ಕ್ಯಾಮೆರಾ, ರೇಡಿಯೋ, ಟಾರ್ಚ್, ಟೇಪ್‍ರೆಕಾರ್ಡ್‍ರ್ ಮೊದಲಾದವುಗಳ ಉತ್ಪಾದನೆಯೇ ನಿಲ್ಲುವಂತೆ ಮತ್ತು ಈ ಕೈಗಾರಿಕೆಗಳು ಹಾಗೂ ಅವುಗಳ ಸೇವಾ ವಲಯ ಬಾಗಿಲು ಮುಂಚ್ಚುವಂತೆ ಮಾಡಿದೆ. ಇವೆಲ್ಲದರಿಂದ ಪ್ರಪಂಚಾದ್ಯಂತ ಸಾವಿರಾರು ಕುಟುಂಬಗಳು ಬೀದಿಪಾಲಾಗುವಂತೆ ಆಗಿದೆ. ಆದರೆ ಮೊಬೈಲ್ ಸೃಷ್ಟಿಸಿದ ಪೂರಕ ಉದ್ಯೋಗ ಬೆರಳಣಿಕೆಯಷ್ಟು ಮಾತ್ರ. ಇದು ಆರ್ಥಿಕ ವಲಯದ ಮೇಲೆ ಭಾರಿ ಹೊಡೆತ ನೀಡಿದೆ. ಮೊಬೈಲ್‍ನಲ್ಲಿ ಮತ್ತಿನ್ನೇನು ಸವಲತ್ತುಗಳನ್ನು ಕೊಡಬಹುದೆಂಬ ಶೋಧನೆ ನಿತ್ಯವೂ ನಡೆದಿದೆ. ತಮಾಷೆಗೆ ಹೇಳುವುದಾದರೆ ಸದ್ಯ ಮೊಬೈಲ್‍ನಲ್ಲಿ ಫ್ರಿಜ್, ಎಸಿ ಮತ್ತು ವಾಷಿಂಗ್ ಮಷಿನ್‍ಗಳು ಬರಬೇಕಿದೆ ಅಷ್ಟೇ. ಒಟ್ಟಿನಲ್ಲಿ ಇದೊಂದು ಸಣ್ಣ ಉಪಕರಣ ಸಮಾಜದ ಮೇಲೆ ತೀರಾ ಪರಿಣಾಮವನ್ನು ಉಂಟುಮಾಡಿದೆ ಎಂದರೆ ಅತಿಶಯೋಕ್ತಿ ಅಲ್ಲ. ಮನುಷ್ಯರ ನಡುವೆ ಸಂಬಂಧಗಳನ್ನು ಅನುಮಾನಿಸುವಂತೆ, ಜೋಡಿಸುವಂತೆ, ಕೆಡಿಸುವಂತೆ ಕೂಡ ಇದು ಸುಲಭವಾಗಿ ಮಾಡುತ್ತದೆ. ಪಕ್ಕದ ಗಲ್ಲಿಯಲ್ಲಿರುವ ಒಬ್ಬ ವ್ಯಕ್ತಿ ತಾನು ಪ್ರಪಂಚದ ಯಾವುದೋ ಮೂಲೆಯಲ್ಲಿದ್ದೇನೆಂದು ಇನ್ನೂಬ್ಬನನ್ನು ಸುಲಭವಾಗಿ ಮೊಬೈಲ್‍ನಲ್ಲಿ ಮೂರ್ಖನಾಗಿಸಬಹುದು. ಅಂತೆಯೇ ಗಂಡ-ಹೆಂಡತಿಯರ ಪವಿತ್ರ ಸಂಬಂಧವನ್ನು ಕೂಡ ಈ ಮೊಬೈಲ್ ಅನೇಕ ರೀತಿಯಲ್ಲಿ ಹಾಳುಮಾಡಿದ ನಿದರ್ಶನಗಳಿವೆ. ಇಷ್ಟೇ ಅಲ್ಲ ಮೊಬೈಲ್‍ನ ಸಂದೇಶ ವ್ಯವಸ್ಥೆ ಭಾಷೆಯ ಸ್ವರೂಪವನ್ನು, ವ್ಯಾಕರಣವನ್ನು ಒಂದು ರೀತಿಯಲ್ಲಿ ಸಂವಹನ ಕ್ರಮವನ್ನೇ ಬದಲಿಸಿಬಿಟ್ಟಿದೆ ಅಥವಾ ಕೆಡಿಸಿದೆ.
ಮೊಬೈಲ್‍ಗಳು ವ್ಯಕ್ತಿಯ ಇಂದಿನ ಜೀವನದ ಎಲ್ಲ ಅಗತ್ಯಗಳನ್ನು ಪೂರೈಸುವ ಅನಿವಾರ್ಯ ಮಾಧ್ಯಮವಾಗಿ ಕೆಲಸಮಾಡುತ್ತವೆ. ಆಹಾರ, ಔಷಧ ಪೂರೈಕೆ, ಯಾವುದೇ ಬಗೆಯ ಸಂವಹನ ಮತ್ತು ಮಾರುಕಟ್ಟೆ ವ್ಯವಹಾರಗಳು ಮಾತ್ರವಲ್ಲದೇ ಒಂದು ಗಣಕ ಯಂತ್ರದ ಕೆಲಸವನ್ನು ಕೂಡ ಮಾಡಿಕೊಡುತ್ತದೆ. ಇದರಿಂದ ವ್ಯಕ್ತಿ ಮೊಬೈಲನ್ನು ತೀರ ಅತಿಯಾಗಿ ಅವಲಂಬಿಸುವಂತಾಗಿದೆ. ಇದು ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಸಂಪರ್ಕ ವೈಯಕ್ತಿವಾಗಿ ಮತ್ತು ನೇರವಾಗಿ ಕಡಿಮೆಯಾಗುವಂತೆ ಮಾಡಿದೆ ಹಾಗೂ ಇತ್ತೀಚಿನ ಅಧ್ಯಯನವೊಂದು ಹೇಳುವಂತೆ ಹೆಚ್ಚಾಗಿ ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವವರು ನೇರವಾಗಿ ಸಂವಹನ ಮಾಡುವಲ್ಲಿ ವಿಫಲರಾಗುತ್ತಾರೆ ಅಥವಾ ಕಳಪೆಯಾಗಿ ಸಂವಹನ ಮಾಡುತ್ತಾರೆ. ಇದರಿಂದ ಸಾಮಾಜಿಕ ಸಂಬಂಧಗಳು ಸಡಿಲವಾಗುತ್ತಿವೆ. ಅಲ್ಲದೆ ಇದು ವ್ಯಕ್ತಿ ಹೆಚ್ಚು ಅಂತರ್ಮುಖಿಯಾಗುವಂತೆ ಮಾಡುತ್ತದೆ. ಇದು ವ್ಯಕ್ತಿಯ ಮನಸ್ಸನ್ನು ಕೆಡಿಸುವುದಲ್ಲದೆ ಆತ ದುಶ್ಚಟಗಳಿಗೆ ದಾಸನಾಗುವಂತೆ, ಕೆಟ್ಟ ಅಪರಾಧಗಳಲ್ಲಿ ಬಾಗಿಯಾಗುವಂತೆ ಪ್ರಚೋದಿಸುತ್ತದೆ. ಜೊತೆಗೆ ಸಾಮಾಜಿಕ ಆತಂಕ ಹಾಗೂ ಒಂಟಿತನವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಈ ಕಾರಣದಿಂದ ಪರಸ್ಪರ ಮನುಷ್ಯ ಸಂಬಂಧಗಳು ದೂರವಾಗತೊಡಗಿವೆ. ಇದು ವ್ಯಕ್ತಿಯಲ್ಲಿ ನಕಾರಾತ್ಮಕ ಧೋರಣೆ ಬೆಳೆಯುವಂತೆ ಮಾಡುತ್ತದೆ. ಅಲ್ಲದೆ ದೂರ ಕುಳಿತು ಇನ್ನೆಲ್ಲೋ ಅಪರಾಧ ಘಟಿಸುವಂತೆ ಮಾಡಬಹುದಾಗಿದೆ. ಒಂದು ಅಧ್ಯಯನದ ಪ್ರಕಾರ ಮೊಬೈಲ್ ಬಳಕೆ ಹೆಚ್ಚಾದಷ್ಟು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಹೀಗೆಂದ ಮಾತ್ರಕ್ಕೆ ಮೊಬೈಲ್‍ನಿಂದ ಬರೀ ಕೆಟ್ಟದಾಗುತ್ತಿದೆ ಎಂದು ಬಾವಿಸಬೇಕಿಲ್ಲ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಕುರಿತಂತೆ ಐನ್‍ಸ್ಟೈನ್ ಅವರು ಹೇಳಿದ ಕತ್ತಿಯನ್ನು ಒಬ್ಬರ ತಲೆ ಕತ್ತರಿಸಲು ಅಥವಾ ಹಣ್ಣೊಂದನ್ನು ಹೆಚ್ಚಿ ಹತ್ತಾರು ಜನಕ್ಕೆ ಹಂಚಿ ಖುಷಿಪಡಲು ಬಳಸಬಹುದು. ಅದನ್ನು ಬಳಸುವವರ ವಿವೇಕಕ್ಕೆ ಇದು ಬಿಟ್ಟದ್ದು ಇದರಲ್ಲಿ ಕತ್ತಿಯ ತಪ್ಪಿಲ್ಲ. ಮೊಬೈಲ್ ಕುರಿತು ಇದೇ ಮಾತನ್ನು ಮತ್ತೆ ನೆನಪಿಸಿಕೊಳ್ಳಬಹುದು. ಆದರೆ ಮೊಬೈಲ್ ಬಳಕೆಯಿಂದ ಸಾಮಾಜಿಕ ಒತ್ತಡ ಮತ್ತು ಮನುಷ್ಯನ ಆರೋಗ್ಯ ಸಮಸ್ಯೆ, ಜೇನು ನೋಣ, ಪಕ್ಷಿಗಳ ಸಂವಹನ ಸಮಸ್ಯೆ ಆ ಮೂಲಕ ಪರಿಸರ ಸಮಸ್ಯೆ ಕೂಡ ಹೆಚ್ಚಿದೆ ಮತ್ತು ದಾರಿ ತಪ್ಪುತಿದೆ ಎಂಬುದು ಸುಳ್ಳಲ್ಲ. ಈ ದೃಷ್ಟಿಯಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಮೊಬೈಲ್‍ನೊಂದಿಗೆ ಹೇಗೆ ಎಷ್ಟರಮಟ್ಟಿಗೆ ಸಂಬಂಧ ಉಳಿಸಿಕೊಳ್ಳಬೇಕು ಎಂಬುದನ್ನು ವ್ಯಕ್ತಿಯೇ ನಿರ್ದರಿಸಿಕೊಳ್ಳಬೇಕಾಗಿದೆ. ಹೀಗಾಗಿ ಮೊಬೈಲ್ ಏಕಕಾಲಕ್ಕೆ ವೈದ್ಯರಿಗೆ ಸಮಾಜ ವಿಜ್ಞಾನಿಗಳಿಗೆ ತುಂಬ ದೊಡ್ಡ ಸವಾಲನ್ನು ಎಸೆದಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಈ ಬಗ್ಗೆ ಇಂದಿನ ಸಮಾಜ ಗಂಭೀರವಾಗಿ ಚಿಂತಿಸಬೇಕಾಗಿದೆ. ನಮ್ಮ ಸಮಾಜ ಶಾಸ್ತ್ರಜ್ಞರು ಗಂಭೀರ ಸಂಶೋಧನೆಗಳನ್ನು ನಡೆಸುವ ಅಗತ್ಯವಿದೆ. ಏಕೆಂದರೆ ದೈಹಿಕ ಮತ್ತು ಮಾನಸಿಕ ಅರೋಗ್ಯಕ್ಕೆ ಅಗತ್ಯವಾದ ಕ್ರೀಡೆಯಲ್ಲಿ ಕೂಡ ಹೊಸಪೀಳಿಗೆ ತೊಡಗಿಸಿಕೊಳ್ಳದೆ ಮೊಬೈಲ್ ಆಟದಲ್ಲೇ ಮಗ್ನವಾಗಿರುವ ಕೆಟ್ಟ ಪರಿಸ್ಥಿತಿ ಉಂಟಾಗಿದೆ. ಸಮಾಜದ ಅರೋಗ್ಯಕ್ಕೆ ಇದು ಹಾನಿಕರವಾಗಿದೆ.

No comments:
Post a Comment