Monday, 11 July 2022

ಕಾನೂನಿನಿಂದ ಕನ್ನಡ ಉಳಿಯುತ್ತದೆಯೇ?


ಎಂದಿನಂತೆ ಇಂದು ಕೂಡ ಕನ್ನಡ ಉಳಿಸುವ ಬಗ್ಗೆ ಕರ್ನಾಟಕ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಈಗಾಗಲೇ ಈ ಬಗೆಯ ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಕನ್ನಡ ಉಳಿಸಲು ಪ್ರಾಧಿಕಾರಗಳು, ಆಕಾಡೆಮಿಗಳು, ಶಾಲೆಗಳಲ್ಲಿ ಕಡ್ಡಾಯ ಕನ್ನಡ ಮಾಧ್ಯಮ ಇತ್ಯಾದಿ ನಿಯಮಗಳು ಜಾರಿಯಾಗಿ ಚರ್ಚೆಯಾಗಿ ಹೋಗಿವೆ. ಆದರೂ ಕನ್ನಡ ನಿರೀಕ್ಷಿತ ಮಟ್ಟಕ್ಕೆ ಬೆಳೆಯುತ್ತಿಲ್ಲ, ಬಳಕೆಯಾಗುತ್ತಿಲ್ಲ. ಏಕೆ ಹೀಗೆ? ಯಾವುದೇ ಭಾಷೆ ಕಾನೂನುಗಳಿಂದ ಉಳಿದುಬರುವುದಿಲ್ಲ. ಅದೇನಿದ್ದರೂ ಪೂರಕವಾಗಿ ಕೆಲಸ ಮಾಡಬಲ್ಲುದು. ಈಗ ಜಾರಿಮಾಡಲಾದ ಕಾನೂನಿನಂತೆ ಕನ್ನಡಿಗರಿಗೆ ಉದ್ಯೋಗ ಮೀಸಲು, ಕೋರ್ಟು-ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ ಕಡ್ಡಾಯ ಕನ್ನಡ ಬಳಕೆ, ತಪ್ಪಿದಲ್ಲಿ ಶಿಕ್ಷೆ, ದಂಡ ಮುಂತಾದವನ್ನು ವಿಧಿಸಲಾಗಿದೆ. ಸಂತೋಷ. ಇವೆಲ್ಲ ಸರಿ. ಜೊತೆಗೆ ಕನ್ನಡದ ಬದಲು ಬೇರೆ ಭಾಷೆ ಮಾತನಾಡಿದಲ್ಲಿ ಜೀವಾವಧಿ ಶಿಕ್ಷೆ, ಗಲ್ಲು ಶಿಕ್ಷೆ, ಮುಂತಾದವನ್ನು ವಿಧಿಸಲಾಗುತ್ತದೆ ಎಂದು ನಿಯಮ ಜಾರಿ ಮಾಡಿದಲ್ಲಿ ಕನ್ನಡ ಪರ ಹೋರಾಟಗಾರರಿಗೆ ತುಂಬಾ ಸಂತೋಷವಾಗಬಹುದು. ಆದರೆ ಇಂಥ ಕ್ರಮಗಳಿಂದ ಕನ್ನಡ ಬೆಳೆಯುತ್ತದೆಯೇ? ಇಲ್ಲ ಅನಿಸುತ್ತದೆ.

ಈ ಹಿಂದೆ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಎಂದು  ಸರ್ಕರ ಕಾನೂನು ಜಾರಿಮಾಡಿದಾಗ ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಅದು ಕಡ್ಡಾಯವಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಖಾಸಗಿ ಶಾಲೆಯವರಿಗೆ ಸಂಭ್ರಮವಾದರೆ, ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳಿಗೆ ಸಂಕಟ ಆರಂಭವಾಗಿತ್ತು. ರಾಜ್ಯ ಮಟ್ಟದ ಪತ್ರಿಕೆಯ ಮಿತ್ರರೊಬ್ಬರು ಕರೆ ಮಾಡಿ ಈ ತೀರ್ಪು ಸರಿ ಇಲ್ಲ, ಇದರಿಂದ ಕನ್ನಡ ಸರ್ವನಾಶವಾಗುತ್ತದೆ. ಇದನ್ನು ಕುರಿತು ಸ್ಟ್ರಾಂಗ್ ಆಗಿ ಲೇಖನ ಬರೆದುಕೊಡಿ ಸಾರ್ ಎಂದರು. ಇಲ್ಲ, ಸುಪ್ರೀಂ ತೀರ್ಪು ಸರಿಯಾಗಿಯೇ ಇದೆ ಎಂದು ನನ್ನ ಅಭಿಪ್ರಾಯ ಹೇಳುವಷ್ಟರಲ್ಲಿ ಏನ್ ಸಾರ್, ಕನ್ನಡ ಮೇಷ್ಟ್ರಾಗಿ ನೀವೇ ಹಿಂಗದ್ರೆ ಹೆಂಗೆ ಎನ್ನುತ್ತ ಆಮೇಲೆ ಕರೆ ಮಾಡ್ತೀನಿ ಅಂತ ಫೋನ್ ಇಟ್ಟರು. ಅವರು ನನ್ನನ್ನು ಕನ್ನಡ ವಿರೋಧಿ ಸ್ಥಾನದಲ್ಲಿ ಸ್ಥಾಪಿಸಿಬಿಟ್ಟರು. ಈ ತೀರ್ಪು ಕುರಿತಂತೆ ಕನ್ನಡ ಪರ ಎಂದುಕೊಳ್ಳುವ ಬಹುತೇಕರ ನಿಲುವು ಹೀಗೇ ಇದ್ದರೆ ಅಚ್ಚರಿ ಇಲ್ಲ.

ಸಮಸ್ಯೆಯ ಮೂಲ ೩೩ ವರ್ಷಗಳ ಹಿಂದಿದೆ. ಗೋಕಾಕ್ ಸಮಿತಿ ೧೯೮೧ರಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು ಎಂದು ವರದಿ ನೀಡಿದ್ದರ ಆಧಾರದಲ್ಲಿ ೧೯೮೨ರಲ್ಲಿ ಸರ್ಕಾರ ಹೀಗೆ ಆದೇಶ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. ೧೯೮೪ರಲ್ಲಿ ಕೇಸು ಬಿತ್ತು. ಸ್ವಲ್ಪ ಕಾಲ ಸುಮ್ಮನಿದ್ದ ಸರ್ಕಾರ ಮತ್ತೆ ೧೯೯೪ರಲ್ಲಿ ೧ರಿಂದ ೪ ನೇ ತರಗತಿವರೆಗೆ ಕನ್ನಡವಲ್ಲದೇ ಬೇರೆ ಮಾಧ್ಯಮದಲ್ಲಿ ಕಲಿಸುವ ಶಾಲೆಗಳಿಗೆ ಅನುಮತಿ ಕೊಡುವುದಿಲ್ಲ ಎಂದು ಆದೇಶಿಸಿತು. ಕೆಲವು ಖಾಸಗಿ ಶಾಲೆಗಳು ಕನ್ನಡದಲ್ಲೇ ಕಲಿಸುತ್ತೇವೆಂದು ಅನುಮತಿ ಪಡೆದು ಇಂಗ್ಲಿಷ್‌ನಲ್ಲಿ ಬೋಧಿಸತೊಡಗಿದವು. ಮತ್ತೆ ತಕರಾರು ಎದ್ದು ನ್ಯಾಯಾಲಯದ ಮೆಟ್ಟಿಲಿಗೆ ಹೋಯಿತು. ಮತ್ತೆ ಸರ್ಕಾರದ ಆದೇಶ ಬಿತ್ತು. ೨೦೦೯ರಲ್ಲಿ ಕೇಸು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಈಗ ತೀರ್ಪು ಹೊರಬಿದ್ದಿದೆ. ಈ ತೀರ್ಪಿನಿಂದ ಕನ್ನಡ ಶಾಶ್ವತವಾಗಿ ಸತ್ತೇ ಹೋಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಹೌದೇ? ಇದರಿಂದ ಕನ್ನಡ ಸತ್ತೇ ಹೋಗುತ್ತಾ?

ಇಸ್ರೇಲಿನಲ್ಲಿ ಅರೇಬಿಕ್ ಜೊತೆ ಹೀಬ್ರೂ ಕೂಡ ಇಂದು ಅಧಿಕೃತ ಆಡಳಿತ ಭಾಷೆ. ಕ್ರಿ.ಶ ಆರಂಭದ ವೇಳೆಗೆ ಜನಮಾನಸದಿಂದ ದೂರವಾಗಿ ನಿಜಕ್ಕೂ ಸತ್ತೇ ಹೋಗಿದ್ದ ಈ ಭಾಷೆಗೆ ೧೯ನೆಯ ಶತಮಾನದಿಂದ ಜೀವಕೊಡುವ ಕೆಲಸ ಒಬ್ಬ ವ್ಯಕ್ತಿಯಿಂದ ನಡೆಯತೊಡಗಿತು. ಒತ್ತಡ, ಹೇರಿಕೆ ಮೂಲಕ ಅಲ್ಲ, ಸಾಂಸ್ಕೃತಿಕ ಎಚ್ಚರ ಹಾಗೂ ಅಭಿಮಾನವನ್ನು ಯಹೂದಿ ಜನರಲ್ಲಿ ಹುಟ್ಟಿಸುವ ಮೂಲಕ. ಅದಕ್ಕೆ ಏನೆಲ್ಲ ಕೆಲಸ ನಡೆಯಿತು ಎಂಬುದೇ ಬೇರೆ ಕತೆ. ಆದರೆ ಈಗ ಅಮೆರಿಕವೂ ಸೇರಿ ಪ್ರಪಂಚದ ೯ ದಶಲಕ್ಷ ಜನ ಈ ಭಾಷೆ ಮಾತನಾಡುತ್ತಾರೆ! ಸರ್ಕಾರ ಅಲ್ಲಿ ಹೀಬ್ರೂವನ್ನು ಎಲ್ಲೂ ಕಡ್ಡಾಯ ಮಾಡಿರಲಿಲ್ಲ, ಜನರ ಯತ್ನಕ್ಕೆ ಪೂರಕ ವಾತಾವರಣ, ಉತ್ತೇಜನಗಳನ್ನು ನೀಡಿತ್ತು ಅಷ್ಟೆ. ಈಗ ಹೇಳಿ. ಜನ ಮನಸ್ಸು ಮಾಡಿದರೆ ಏನು ಬೇಕಾದರೂ ನಡೆಯುತ್ತದೆ. ಅವರಿಗೆ ಬೇಡ ಅಂದರೆ ಜನತಂತ್ರ ವ್ಯವಸ್ಥೆಯಲ್ಲಿ ನೀವು ಯಾವುದೇ ಹೇರಿಕೆ, ಒತ್ತಡ, ಬೆದರಿಕೆ ಒಡ್ಡುವಂತಿಲ್ಲ. ಅದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಸುಪ್ರೀಂ ಕೋರ್ಟ್ ಭಾಷೆ ಎಂದಲ್ಲ, ಯಾವುದೇ ವಿಷಯದಲ್ಲೂ ಗಮನಿಸುವುದು ಈ ಸಂಗತಿಯನ್ನು. ಈಗ ಆಗಿರುವುದು ಅದೇ. ಕನ್ನಡ ಕಲಿಸಬೇಡಿ ಎಂದು ಘನ ನ್ಯಾಯಾಲಯ ಹೇಳಿಲ್ಲ. ಮುಗಿಬಿದ್ದು ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಕಲಿಸುವ ಶಾಲೆಗೆ ಸೇರಿಸುತ್ತೇವೆ ಎಂದರೆ ಅದನ್ನೂ ಬೇಡ ಅನ್ನುವುದಿಲ್ಲ. ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಕುಸ್ಮಾ) ಕೂಡ ಒಂದು ಭಾಷೆಯಾಗಿ, ವಿಷಯವಾಗಿ ಕನ್ನಡವನ್ನು ಕಲಿಸಲು ಸಿದ್ಧವಿದೆ. ಅದು ಕೂಡ ಕನ್ನಡ ವಿರೋಧಿ ಸಂಘವಲ್ಲ. ಆದರೆ ಈ ಸಂಸ್ಥೆಯ ಜೊತೆ ಸೇರಿ ದಶಕಗಳ ಕಾಲ ಕನ್ನಡ ನೆಲದ ಪೋಷಕರು, ಪಾಲಕರು ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತಾರೆಂದರೆ ಸಮಸ್ಯೆಯನ್ನು ಸರ್ಕಾರ ಸರಿಯಾಗಿ ಅರ್ಥಮಾಡಿಕೊಂಡಿಲ್ಲ, ಹೋರಾಟಗಾರರು, ಸಾಹಿತಿಗಳು, ಮಾಧ್ಯಮಗಳು ಸರ್ಕಾರವನ್ನು ಹಾದಿ ತಪ್ಪಿಸುತ್ತಿವೆ ಎಂದೇ ಅರ್ಥ.

ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸಬೇಕೆಂಬ ನಿರ್ಧಾರ ಪಾಲಕ, ಪೋಷಕರದ್ದು ಎಂದು ವಿಶ್ವಸಂಸ್ಥೆ ಬಹಳ ಹಿಂದೆಯೇ ಜಾಗತಿಕ ಮಾರ್ಗದರ್ಶಿ ಸೂತ್ರ ನೀಡಿದೆ. ಎಲ್ಲ ದೇಶಗಳೂ ಅದನ್ನು ಪಾಲಿಸುತ್ತಿವೆ ಎಂಬುದನ್ನು ಈ ಜಗತ್ತಿನ ಭಾಗವಾದ ನಾವು ಮರೆಯುವಂತಿಲ್ಲ. ೧೯೯೮ರಲ್ಲಿ ತಮಿಳುನಾಡು ಸರ್ಕಾರವೂ ಪ್ರಾಥಮಿಕ ಹಂತದಲ್ಲಿ ತಮಿಳು ಮಾಧ್ಯಮವೇ ಕಡ್ಡಾಯ ಎಂದು ಆದೇಶ ಹೊರಡಿಸಿದಾಗ ಮದ್ರಾಸ್ ಉಚ್ಚ ನ್ಯಾಯಾಲಯ ಆ ಆದೇಶವನ್ನು ೨೦೦೧ರಲ್ಲಿ ರದ್ದು ಮಾಡಿತ್ತು. ಆಗಲೂ ಆ ನ್ಯಾಯಾಲಯ ನೀಡಿದ ತೀರ್ಪು ಕರ್ನಾಟಕ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪುಗಳಿಗೆ ಅನುಗುಣವಾಗಿಯೇ ಇತ್ತು. ಹಾಗಾದರೆ ಈ ಯಾವುದೇ ನ್ಯಾಯಾಲಯದ ಆಶಯಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ ಅಲ್ಲವೇ?

ಕನ್ನಡವೇ ಕರ್ನಾಟಕದ ಮಾತೃಭಾಷೆ, ಹಾಗಾಗಿ ಅದರಲ್ಲೇ ಕಲಿಕೆ ಎಂದು ಹೇಳುವ ನಮ್ಮ ಸರ್ಕಾರಕ್ಕೆ ಈ ವಾದದ ಸಮಸ್ಯೆ ನಾಳೆ ಏನಾಗಬಹುದೆಂಬ ಅರಿವು ಇದ್ದಂತಿಲ್ಲ. ಮಾತೃಭಾಷೆ ಎಂದರೆ ಸಂವಿಧಾನದ ೩೫೦ (ಎ) ವಿಧಿಯಂತೆ ಯಾವುದೇ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಭಾಷೆ ಎಂದರ್ಥ ಎಂದಿದೆ ನ್ಯಾಯಾಲಯ. ಹಾಗಾದರೆ ಕನ್ನಡದಲ್ಲಿ ಹವ್ಯಕ, ಕೊಂಕಣಿ, ಕೊಡವ, ತುಳು, ಸಂಕೇತಿ ಮೊದಲಾದ ಭಾಷಾ ಅಲ್ಪ ಸಂಖ್ಯಾತರು ನಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ ಎಂದು ಸರ್ಕಾರಕ್ಕೆ ದುಂಬಾಲು ಬಿದ್ದರೆ... ಸರ್ಕಾರ ಇದನ್ನು ಆಗುಮಾಡಬಲ್ಲುದೇ? ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿರುವ ಪ್ರಾಥಮಿಕ ಶಾಲೆಗಳ ಅಂಕಿ ಅಂಶಗಳನ್ನು ಸುಮ್ಮನೇ ನೋಡೋಣ. ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳು: ೪೫,೬೮೧; ಅನುದಾನಿತ ಖಾಸಗಿ ಶಾಲೆಗಳು: ೨೬೦೩, ಅನುದಾನವಿಲ್ಲದ ಖಾಸಗಿ ಶಾಲೆಗಳು ೧೦,೯೬೦. ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು) ಹೇಳಿರುವಂತೆ ೨೦೦೯ರಲ್ಲಿ ೨,೫೩೨ ಅನುದಾನವಿಲ್ಲದ ಖಾಸಗಿ ಶಾಲೆಗಳಿದ್ದವು. ೨೦೧೩ರಲ್ಲಿ ಅವು ೧೦,೯೬೦ ಆಗಿವೆ! ಅವು ಇನ್ನೂ ಹೆಚ್ಚುತ್ತಲೇ ಹೋಗಲಿವೆ! ಪಾಲಕ, ಪೋಷಕರ ಒತ್ತಡ ಇದಕ್ಕೆ ಕಾರಣ. 

ಡಿ ಐ ಎಸ್ ಇ (ಜಿಲ್ಲಾ ಶೈಕ್ಷಣಿಕ ಮಾಹಿತಿ ವ್ಯವಸ್ಥೆ) ಎಂಬುದು ಎಲ್ಲ ರಾಜ್ಯಗಳ ಶೈಕ್ಷಣಿಕ ಅಂಕಿಅಂಶಗಳನ್ನು ದಾಖಲಿಸುವ ರಾಷ್ಟ್ರೀಯ ಸರ್ಕಾರಿ ಸಂಸ್ಥೆ. ಇದು ೨೦೧೨-೧೩ರ ಶೈಕ್ಷಣಿಕ ವಿವರಗಳನ್ನು ತನ್ನ ವೆಬ್‌ಸೈಟಿನಲ್ಲಿ ಹಾಕಿದೆ. ಇದು ಅಧಿಕೃತ ಮಾಹಿತಿ. ಇದರ ಪ್ರಕಾರ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಕೇವಲ ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ೯೦೩೦೫೦, ಇಂಗ್ಲಿಷ್ ಮಾಧ್ಯಮದ ಮಕ್ಕಳು: ೩೫೧೧೧, ಉರ್ದು-೭೭೫೪೮, ಮರಾಠಿ-೧೧೭೦೬ ಹಾಗೂ ತಮಿಳು-೧೪೧೨. ಇನ್ನು ಪ್ರೌಢಶಾಲೆಯ ಮಟ್ಟದವರೆಗೆ ಕನ್ನಡ ಮಾಧ್ಯಮ ಆಯ್ದುಕೊಂಡವರ ಒಟ್ಟು ಸಂಖ್ಯೆ ೭೫ ಲಕ್ಷ ದಾಟುತ್ತದೆ. ಇಂಗ್ಲಿಷ್ ಮಾಧ್ಯಮದ ಸಂಖ್ಯೆ ೨೦ ಲಕ್ಷದಷ್ಟಿದೆ. ಈ ಅಂಕಿಅಂಶ ಏನು ಹೇಳುತ್ತಿದೆ ಅಂದರೆ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ಕನ್ನಡವಲ್ಲದೇ ಉಳಿದ ಮಾತೃಭಾಷಿಕ ಮಕ್ಕಳೂ ಕಲಿಕೆಯಲ್ಲಿದ್ದಾರೆ. ಕನ್ನಡವೇ ಕಲಿಕಾ ಮಾಧ್ಯಮ ಎಂದರೆ ಇವರೆಲ್ಲ ಏನು ಮಾಡಬೇಕು? ಕರ್ನಾಟಕದಲ್ಲಿದ್ದ ಮೇಲೆ ಕನ್ನಡದಲ್ಲೇ ಕಲಿಯಬೇಕು ಎಂದು ಷರತ್ತು ವಿಧಿಸುವಂತಿಲ್ಲ. ನಮ್ಮದು ಗಣರಾಜ್ಯ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಪಂಕ್ತಿಭೇದ ಪ್ರಶ್ನಿಸುವವರು ಭಾಷಾಭೇದವನ್ನೂ ಪ್ರಶ್ನಿಸಬೇಕಾಗುತ್ತದೆ. ಘನ ನ್ಯಾಯಾಲಯ ಇದನ್ನೂ ಗಮನಿಸಿದೆ. ಉಳಿದ ಮಾಧ್ಯಮಗಳಲ್ಲಿ ಓದುವ ಮಕ್ಕಳ ಕತೆ ಹಾಗಿರಲಿ, ಕನ್ನಡದಲ್ಲೇ ಕಲಿಯುತ್ತಿರುವ ಶೇ.೭೪ರಷ್ಟು ಮಕ್ಕಳಿಗೆ ಯಾವ ಪ್ರೋತ್ಸಾಹದಾಯಕ ಕಾರ್ಯಕ್ರಮವನ್ನು ಸರ್ಕಾರ ಕೊಟ್ಟಿದೆ? ಶೇ.೧ರ ವ್ಯಾಸಂಗ ಅಥವಾ ಉದ್ಯೋಗ ಮೀಸಲಾತಿ? ಜ್ಞಾನ? ಮಾಹಿತಿ? ಕನ್ನಡದಲ್ಲಿ ಇಲ್ಲದ ಸಂಗತಿಗಳ ಪಟ್ಟಿಗೆ ಕೊನೆ ಇಲ್ಲ. ಪಾಲಕರು ನೋಡುವುದು ಇದನ್ನು.

ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಕಲಿತರೆ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂಬ ಭ್ರಮೆ ೧೯೯೦ರ ದಶಕದಿಂದ ಪಾಲಕರ ತಲೆಯಲ್ಲಿ ಹೊಗತೊಡಗಿತು. ಇಂಥ ವಾತಾವರಣ ನಿರ್ಮಿಸಿದ್ದು ಸರ್ಕಾರದ ನೀತಿಗಳೇ ವಿನಾ ಬೇರೆ ಯಾವುದೂ ಅಲ್ಲ. ಜಿಲ್ಲಾ, ತಾಲ್ಲೂಕು ಕೇಂದ್ರಗಳಿಂದ ದೂರವಿರುವ ಬಹುತೇಕ ಗ್ರಾಮೀಣ ಮಕ್ಕಳು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲೇ ಇಂದಿಗೂ ಕಲಿಯುತ್ತಾರೆ. ಏಕೆಂದರೆ ಅವರಿಗೆ ಬೇರೆ ಆಯ್ಕೆ ಇಲ್ಲ. ಆಯ್ಕೆ ಇದ್ದಿದ್ದರೆ? ಸರ್ಕಾರದ ಬಳಿ ಇದಕ್ಕೆ ಉತ್ತರವಿಲ್ಲ. ಶಿಕ್ಷಕರಿಗೆ, ಅಧಿಕಾರಿಗಳಿಗೆ ಇನ್ನಿಲ್ಲದ ಸವಲತ್ತು, ಊಟ ಕೊಡುವ, ಹಣ ಕೊಡುವ ಆಮಿಷಗಳನ್ನು ಮಕ್ಕಳಿಗೆ ನೀಡಿಯೂ ಸರ್ಕಾರಿ ಶಾಲೆಗಳು ದಿನೇ ದಿನೇ ಸೊರಗುತ್ತಿವೆ. ಇದರ ಬಗ್ಗೆ ಬೇಕಾದಷ್ಟು ಚರ್ಚೆಗಳೂ ಆಗಿವೆ. ಆದರೂ ಪಾಲಕರು ಅನಿವಾರ್ಯವಲ್ಲದಿದ್ದರೆ ಖಂಡಿತ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಬಯಸುತ್ತಿಲ್ಲ. ಇದರ ಮೂಲ ಕಾರಣಗಳನ್ನು ಸರ್ಕಾರ ಶೋಧಿಸಿ ಸರಿಪಡಿಸಿದ್ದರೆ ಇಂಥ ದುರ್ಗತಿ ಬರುತ್ತಿರಲಿಲ್ಲ. ಬೇಡವೆಂದು ದೂರ ಹೋಗುವ ಜನರನ್ನು ಹಗ್ಗ ಹಾಕಿ ಎಳೆದು ತರುತ್ತೇವೆ ಎಂಬುದು ಸರಿಯಲ್ಲ. ಮಕ್ಕಳಿಗೆ ಉತ್ತಮ ವ್ಯವಸ್ಥೆ, ಮೂಲಸೌಕರ್ಯ ಒದಗುವುದನ್ನು ಕಂಡು ಅವರೇ ಒಲಿದು ಓಡೋಡಿ ಬರುವಂತೆ ಮಾಡದೇ ಹಿಡಿದಿಡುವ ಕಾನೂನು ಮಾಡಲು ಹೊರಟರೆ ಯಶ ದೊರೆಯದು. 

ಪ್ರಾಥಮಿಕ ಹಂತದಲ್ಲಿರುವ ಮೂರು ಬಗೆಯ ಪಠ್ಯಗಳು, ಸರ್ಕಾರ ಪದೇ ಪದೇ ಮೂಗು ತೂರಿಸುವ ೧೪ ಹಂತಗಳ ಅಸಂಬದ್ಧ ಆಡಳಿತ ವ್ಯವಸ್ಥೆ, ಬದ್ಧತೆ ಇಲ್ಲದ ಶಿಕ್ಷಕರು, ಇತ್ಯಾದಿ ಸಮಸ್ಯೆಗಳನ್ನು ಜರೂರಾಗಿ ಸರಿಪಡಿಸಲು ಮುಂದಾಗುವ ಬದಲು ಕನ್ನಡವನ್ನೇ ಮಾಧ್ಯಮವನ್ನಾಗಿ ಹೇರುವ ಕಾನೂನು ಮಾರ್ಗ ಹುಡುಕುವ ವಿಫಲ ಯತ್ನದಲ್ಲಿ ಕಾಲತಳ್ಳಿದರೆ ಕನ್ನಡ ಉಳಿಸುವ ಆಶಯ ಮತ್ತಷ್ಟು ದೂರಾಗುತ್ತದೆ.

No comments:

Post a Comment