ಪಡಿತರ ಕಾರ್ಡುಗಳ ಅವ್ಯವಹಾರ ಕುರಿತು ತನಿಖೆ ನಡೆಸಿದ ವಾಧ್ವಾ ಸಮಿತಿ ಗುರುತಿಸಿದಂತೆ ಕರ್ನಾಟಕದಲ್ಲಿ ನ್ಯಾಯವಾಗಿ 31.29 ಲಕ್ಷ ಕಾರ್ಡುದಾರರಿರಬೇಕು. ಆದರೆ ಈ ಸಮಿತಿಗೆ ಸಿಕ್ಕ ಲೆಕ್ಕದಂತೆ 47.08 ಲಕ್ಷ ಹೆಚ್ಚುವರಿ ಕಾರ್ಡುದಾರರಿದ್ದಾರೆ. ಈ ಸಮಿತಿ ಹೇಳುವಂತೆ ಕರ್ನಾಟಕದಲ್ಲಿ ಇರುವ ಬಿಪಿಎಲ್ ಕಾರ್ಡುದಾರರ ಸಂಖ್ಯೆ 78.37 ಲಕ್ಷ. ಇದು 2006-07ರ ಲೆಕ್ಕ. 2013 ಜುಲೈ ವೇಳೆಗೆ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡುವಾಗ 87 ಲಕ್ಷ ಬಿಪಿಎಲ್ ಕಾರ್ಡುದಾರರೂ 11 ಲಕ್ಷ ಅಂತ್ಯೋದಯ ಜನರಿಗೂ ಇದರ ಉಪಯೋಗವಾಗುತ್ತದೆ ಎಂದು ಲೆಕ್ಕ ಕೊಟ್ಟಿದೆ.
ನಗರ ಪ್ರದೇಶದಲ್ಲಿ ವಾರ್ಷಿಕ 17,000 ರೂ ಹಾಗೂ ಗ್ರಾಮೀಣ ಭಾಗದಲ್ಲಿ ವಾರ್ಷಿಕ 12,000 ರೂ.ಗಿಂತ ಕಡಿಮೆ ಆದಾಯ ಇರುವವರನ್ನು ಬಿಪಿಎಲ್ ಕಾರ್ಡುಪಡೆಯಲು ಅರ್ಹರೆಂದು ಗುರುತಿಸಲಾಗಿದೆ. ತಿಂಗಳಿಗೆ ಒಂದು ಅಥವಾ ಒಂದೂವರೆ ಸಾವಿರ ರೂ.ಗಳಲ್ಲಿ ಜೀವನ ಸಾಗಿಸುವ ಜನ ನಿಜಕ್ಕೂ ಎಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಲೆಕ್ಕ ಎಲ್ಲೂ ಸರಿಯಾಗಿಲ್ಲ. ಎಲ್ಲೂ ಸಿಗಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ಪ್ರಾಮಾಣಿಕತೆ ಅಂಥದ್ದು. ಇಲ್ಲಿ ನಮ್ಮ ಅಂದರೆ ಸರ್ಕಾರ ಅಥವಾ ಸರ್ಕಾರಿ ಅಧಿಕಾರಿಗಳದ್ದು ಎಂದಲ್ಲ. ಜನಸಾಮಾನ್ಯರದ್ದು. ಭ್ರಷ್ಟಾಚಾರವೂ ಸೇರಿದಂತೆ ಯಾವುದೇ ಇಂಥ ಸಾಮಾಜಿಕ ಪಿಡುಗುಗಳಲ್ಲಿ ಕೇವಲ ಸರ್ಕಾರವನ್ನು ಅಥವಾ ಅದರ ವ್ಯವಸ್ಥೆಯನ್ನು ತೆಗಳುವಂತಿಲ್ಲ. ಯಾಕೆಂದರೆ ಸರ್ಕಾರ ನಮ್ಮದು. ನಾವೇ ಆಯ್ಕೆ ಮಾಡಿದ್ದು. ಅದರ ವ್ಯವಸ್ಥೆಯೂ ನಮ್ಮದೇ. ನಾವು ಹೇಗೋ ನಮ್ಮ ಸರ್ಕಾರವೂ ಹಾಗೆಯೇ. ಒಂದರ್ಥದಲ್ಲಿ ಅವ್ಯವಸ್ಥೆಗೆ ಸರ್ಕಾರವನ್ನು ತೆಗಳುವುದೂ ಒಂದೇ, ಆಕಾಶ ನೋಡುತ್ತ ಉಗುಳುವುದೂ ಒಂದೇ! ಇಲ್ಲಿರುವುದು ನಾವು ಎಷ್ಟರಮಟ್ಟಿಗೆ ನೆಟ್ಟಗೆ ಇದ್ದೇವೆ ಎಂಬ ಪ್ರಶ್ನೆ.
ಸರ್ಕಾರದ ಯೋಜನೆಗಳು ಸರಿಯಾಗಿಯೇ ಇರುತ್ತವೆ. ಅದನ್ನು ಬಳಸಿಕೊಳ್ಳುವವರು ಸರಿಯಾಗಿರಬೇಕಷ್ಟೆ. ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದು, ಜನತಂತ್ರ ವ್ಯವಸ್ಥೆ ಅಳವಡಿಸಿಕೊಂಡಿದ್ದರೂ ಜನಸಾಮಾನ್ಯರ ಪಾಲಿಗೆ ಇಂದಿಗೂ ಸರ್ಕಾರ ಅಂದರೆ ಅದು ನಮ್ಮದು ಎಂಬ ಭಾವನೆಯೇ ಬಂದಿಲ್ಲ. ಸರ್ಕಾರ ಆಳುವ ಪಕ್ಷದ ಕಾರ್ಯಕರ್ತರಿಗೆ ಅಥವಾ ಆಡಳಿತ ಪಕ್ಷದ ಶಾಸಕ-ಸಚಿವರಿಗೆ ಅಥವಾ ಆಡಳಿತ ಪಕ್ಷದ ನಿಷ್ಠರಿಗೆ ಅಂಥ ಭಾವನೆ ಇರಬಹುದು ಅಷ್ಟೆ. ಇವರ ದೃಷ್ಟಿ ಬೇರೆ. ಜನಸಾಮಾನ್ಯರ ದೃಷ್ಟಿ ಬೇರೆ. ಸರ್ಕಾರ ಏನಿದ್ದರೂ ಕೊಡುತ್ತಿರಬೇಕು, ನಾವು ಪಡೆಯುತ್ತಿರಬೇಕು ಎಂಬ ಭಾವನೆ ನಮ್ಮಲ್ಲಿದೆ.
ಒಂದೆರಡು ನಿದರ್ಶನಗಳು: ಸಾಮಾನ್ಯವಾಗಿ ಎಲ್ಲ ಊರಿನಲ್ಲೂ ನಡೆಯುವ ವಿದ್ಯಮಾನ ಇದು. ಬೆಂಗಳೂರಿನಿಂದ ತುಮಕೂರಿಗೆ ಹೊರಡುವ ಸರ್ಕಾರಿ ಬಸ್‍ಗಳಲ್ಲಿ ಆಗಾಗ ನಡೆಯುವ ಸಂಗತಿ ಇಲ್ಲಿದೆ. ಕೆಲವರು ಕೆಂಪೇಗೌಡ ಬಸ್ ನಿಲ್ದಾಣದಿಂದ ತುಮಕೂರು ಕಡೆಗೆ ಹೊರಡುವ ಬಸ್ ಹತ್ತುತ್ತಾರೆ. ಕಂಡಕ್ಟರ್‍ನನ್ನೇನೂ ಅವರು ಬಸ್ ಎಲ್ಲಿ ಹೋಗುತ್ತದೆ ಎಂದೂ ಕೇಳುವುದಿಲ್ಲ. ಕಂಡಕ್ಟರ್ ಟಿಕೇಟು ಕೊಡುತ್ತ ಬಂದಂತೆ ಯಶವಂತಪುರ ಸಮೀಪಿಸಿಬಿಡುತ್ತದೆ. ಟಿಕೆಟ್ ಪಡೆಯುವವರಂತೆ ಕೆಬಿ ಕ್ರಾಸ್‍ಗೆ, ಬೆಳ್ಳೂರಿಗೆ, ಹಾಸನಕ್ಕೆ ಅಥವಾ ಮತ್ಯಾವುದೋ ಸದರಿ ಬಸ್ ಮಾರ್ಗಕ್ಕೆ ಸಂಬಂಧವೇ ಇಲ್ಲದ ಊರಿಗೆ ಟಿಕೆಟ್ ಕೇಳುತ್ತಾರೆ. ಇದು ಅಲ್ಲಿ ಹೋಗಲ್ಲ ಅನ್ನುತ್ತಿದ್ದಂತೆ ಹಂಗಾದ್ರೆ ಇಲ್ಲೇ ಇಳೀತೀವಿ, ಬಸ್ ನಿಲ್ಸಪ್ಪಾ ಅನ್ನುತ್ತಾರೆ. ಆರಾಮವಾಗಿ ಇಳಿದು ಅಲ್ಲೇ ಮರೆಯಾಗುತ್ತಾರೆ. ಅವರು ನಿಜವಾಗಿ ಬರಬೇಕಾದುದೇ ಇಲ್ಲಿವರೆಗೆ! ಸಿಟಿ ಬಸ್ ಹತ್ತಿದರೆ ಕನಿಷ್ಠ 12 ರೂ.ಕೊಡಬೇಕು. ಈಗ ಪುಕ್ಸಟ್ಟೆ ಪ್ರಯಾಣವಾಯ್ತಲ್ಲ! ಹೆಚ್ಚೆಂದರೆ ಕಂಡಕ್ಟರ್ ಒಂದಿಷ್ಟು ಬೈದುಕೊಳ್ಳಬಹುದು ಅಷ್ಟೆ. ಬೈಕೊಳ್ಳಲಿ ಬಿಡಿ.
ನಿತ್ಯ ಬಸ್‍ನಲ್ಲಿ ಕಾಣುವ ಮತ್ತೊಂದು ಸನ್ನಿವೇಶವಿದೆ. ಇದೂ ಎಲ್ಲೆಡೆ ಸಾಮಾನ್ಯ-ಚಿಕ್ಕ ಮಕ್ಕಳೊಂದಿಗೆ ಬಸ್ ಏರುವ ಪಾಲಕ-ಪೋಷಕರು ಮತ್ತು ಕಂಡಕ್ಟರ್ ನಡುವೆ ನಡೆಯುವ ವಾಗ್ವಾದ. ಮೂರ್ನಾಲ್ಕು ವರ್ಷದ ನಿತ್ಯ ಬಸ್ ಪ್ರಯಾಣದಲ್ಲಿ ಒಂದು ಸಂಗತಿಯಂತೂ ಅರ್ಥವಾಗಿದೆ. ಅದೆಂದರೆ ಪಾಲಕರೊಂದಿಗೆ ಸರ್ಕಾರಿ ಬಸ್ ಹತ್ತುವ ಯಾವ ಮಕ್ಕಳಿಗೂ ಮೂರಕ್ಕಿಂತ ಹೆಚ್ಚು ವರ್ಷ ಆಗಿರುವುದೇ ಇಲ್ಲ! ಈಚೆಗೆ ಹೀಗಾಯಿತು: ಟಿಕೆಟ್ ಕೊಡುತ್ತ ಬಂದ ಕಂಡಕ್ಟರ್ ಜೊತೆ ಪಾಲಕನೊಬ್ಬ ತನ್ನ ಮಗು ಇನ್ನೂ ಎಲ್‍ಕೆಜಿ, ಟಿಕೆಟ್ ತಗೊಳಲ್ಲ ಅಂತ ತಕರಾರು ತೆಗೆದ. ಮಗು ತುಸು ಬೆಳೆದಿತ್ತು. ಕಂಡಕ್ಟರ್‍ಗೆ ಅನುಮಾನ ಬಂದು ಪುಟ್ಟಾ ಯಾವ ಸ್ಕೂಲು ಅಂದ. ಅದ್ಯಾವುದೋ ಶಾಲೆ ಹೆಸರು ಹೇಳಿತು. ಎಷ್ಟನೇ ಕ್ಲಾಸು ಅಂದ. ಮೂರು ಅಂದಿತು! ತಡ ಮಾಡದೇ ಕಂಡಕ್ಟರ್ ಟಿಕೇಟ್ ಹರಿದ. ಪಾಲಕ ಸುಮ್ಮನಿದ್ದಾನೆಯೇ? ಆ ಮಗುವಿಗೆ ನಾಲ್ಕು ಬಿಟ್ಟ. ಮಗು ಸತ್ಯ ಹೇಳಿದ್ದಕ್ಕೆ ದೊರೆತದ್ದು ಏಟು. ಆ ಯಜಮಾನನನ್ನು ಬೈದು ಸುಮ್ಮನಿರಿಸಿದ್ದಾಯಿತು. ಆ ಕಂಡಕ್ಟರ್‍ನನ್ನು ಮಾತಿಗೆ ಎಳೆದೆ. ಹತ್ತಿರ ಹತ್ತಿರ ಮೂವತ್ತು ವರ್ಷ ಆತ ಇದೇ ಸೇವೆಯಲ್ಲಿದ್ದಾನಂತೆ. ಪಾಲಕರು ನಿಜವಾಗಿಯೂ ನನ್ನ ಮಗುವಿಗೆ ಅರ್ಧ ಟಿಕೇಟು ಅಥವಾ ಪೂರ್ತಿ ಟಿಕೇಟು ಕೊಡಿ ಎಂದು ಅವರಾಗಿಯೇ ಎಷ್ಟು ಜನ ಕೇಳಿದ್ದನ್ನು ನಿಮ್ಮ ಸರ್ವೀಸಿನಲ್ಲಿ ನೋಡಿದ್ದೀರಿ ಎಂದೆ. ಅಬ್ಬಬ್ಬ ಅಂದ್ರೆ ಒಂದು ಪರ್ಸೆಂಟು ಸಾರ್ ಅಂದ!
ಸರ್ಕಾರದ ಯೋಜನೆಗಳಿಗೆ ಪೂರಕವಾಗುವ ಆರ್ಥಿಕ ಗಣತಿ ಈಚೆಗೆ ನಡೆಯುತ್ತಿತ್ತು. ಅನುಭವದ ಜೊತೆಗೆ ಸಂಪಾದನೆಯೂ ಆಗುವ ಕಾರಣ ಬಿಡುವಿನ ವೇಳೆಯಲ್ಲಿ ಕೆಲವು ವಿದ್ಯಾರ್ಥಿಗಳು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅವರ ಅನುಭವ ಕೇಳಿದೆ. ಅದು ಮಜವಾಗಿದೆ. ತುಮಕೂರು ಆಸುಪಾಸಿನ ಹಳ್ಳಿಯೊಂದರಲ್ಲಿ ಕೆಲವು ಊರ ಜನ ಒಟ್ಟಾಗಿ ಇವರಿಗೆ ಊರ ಒಳಹೋಗಲು ಬಿಡಲಿಲ್ಲವಂತೆ. ಕಾರಣ ಹುಡುಕಿದಾಗ ಗೊತ್ತಾದುದು: ಒಂದೆರಡು ವಾರದ ಹಿಂದೆ ಅಡ್ಡಫಲಾನುಭವಿಗಳನ್ನು ಪತ್ತೆ ಹಚ್ಚಿ ಅವರ ಪಡಿತರ ಕಾರ್ಡನ್ನು ರದ್ದುಮಾಡಲಾಗಿತ್ತಂತೆ. ಇವರೆಲ್ಲ ಕುಳಗಳು. ಅನಾಯಾಸವಾಗಿ ಬರುತ್ತಿದ್ದ ಲಾಭ ಇಂಥ ಸರ್ವೇ ಮಾಡುವವರ ಕಾಟದಿಂದ ಇಲ್ಲವಾಯ್ತಲ್ಲಾ ಎಂಬ ಸಿಟ್ಟು ಅವರದ್ದು. ನಾವು ಬಂದಿದ್ದು ಬೇರೆ ಕೆಲಸಕ್ಕೆ ಎಂದು ಇವರು ಸಬೂಬು ಹೇಳಬೇಕಾಯ್ತಂತೆ. ಇನ್ನೊಂದೆಡೆ ಮಾಹಿತಿ ಕಲೆಹಾಕುವಾಗ ಅನುಕೂಲಸ್ಥರ ಮನೆಗಳೇ ಎಂದು ಕಾಣುತ್ತಿದ್ದರೂ ಯಾರೊಬ್ಬರೂ ತಮ್ಮ ವಾರ್ಷಿಕ ಆದಾಯವನ್ನು 11 ರಿಂದ 12 ಸಾವಿರದ ಮೇಲೆ ಬಿಲ್‍ಕುಲ್ ಹೇಳುತ್ತಿರಲಿಲ್ಲವಂತೆ. ಮನೆ, ಸುತ್ತಲ ವಾತಾವರಣ ನೋಡಿದರೆ ಲಕ್ಷಾಧಿಪತಿಗಳಂತೆ ಇದ್ದಾರಲ್ಲ ಎಂಬ ಅನುಮಾನದಿಂದಲೇ ಅವರು ಕೊಟ್ಟ ಮಾಹಿತಿ ಪಡೆದು ಹೋಗುವಾಗ ಒಂದು ಮನೆಗೆ ಆಗದವನೊಬ್ಬ ಸಾ, ಅವರ ಆದಾಯ ಸಿಕ್ಕಾಪಟ್ಟೆ ಐತೆ, ಇಬ್ಬರೂ ಮಕ್ಕಳು ನೌಕರಿಯಲ್ಲವ್ರೆ, ತಿಂಗ್ಳಿಗೆ ಎಪ್ಪತ್ತು ಸಾವಿರ ಬತ್ತದೆ ಸಾ ಅಂದನಂತೆ. ಚುರುಕು ಬುದ್ಧಿಯ ಹುಡುಗ ನಿಮ್ಮ ಮನೆ ಎಲ್ಲಿ ಅಂದಾಗ ಅವರ ಪಕ್ಕದ್ಮನೆ ಸಾ ಅಂದನಂತೆ. ಈ ಮನೆಯ ಗುಟ್ಟನ್ನು ಪಕ್ಕದ್ಮನೆಯಲ್ಲಿ ಕೇಳ್ಬೇಕು ಎಂಬ ಹೊಸ ಸತ್ಯವನ್ನು ಕ್ಷೇತ್ರಕಾರ್ಯ ಹುಡುಗನಿಗೆ ತೋರಿಸಿತ್ತು! ಆತ ಮೊದಲು ಆ ಮನೆಯಲ್ಲಿ ಇವರ ವಿವರ ಕೇಳಿ ಅನಂತರ ಈ ಮನೆಯಲ್ಲಿ ಅದನ್ನು ತಾಳೆ ಹಾಕುವ ಕೆಲಸ ಮಾಡತೊಡಗಿದನಂತೆ. ಆಗ ಸತ್ಯಕ್ಕೆ ಹತ್ತಿರವಾದ ಮಾಹಿತಿಗಳು ಲಭಿಸಲಾರಂಭಿಸಿದವಂತೆ.
ಅಬಲರಿಗೆ ಇರುವ ಸದುದ್ದೇಶದ ಸರ್ಕಾರದ ಯೋಜನೆಯ ದುರ್ಲಾಭವನ್ನು ಸಬಲರೂ ಹೊಡೆದುಕೊಳ್ಳುವುದು ಹೀಗೆ. ಯಾಕೆ ಹೀಗೆ ಮಾಡ್ತೀರಿ ಎಂದು ಅಂಥವರನ್ನು ಕೇಳಿ ನೋಡಿ. ನಿಮಗೇನ್ ಕಷ್ಟ? ಬೇಕಾದ್ರೆ ನೀವೂ ಪಡ್ಕೊಳ್ಳಿ ಎಂಬ ಉತ್ತರವೇ ಸಾಮಾನ್ಯವಾಗಿ ದೊರೆಯುತ್ತದೆ. ಸರ್ಕಾರದ ಯೋಜನೆಗಳ ದುರ್ಲಾಭ ಪಡೆಯಲು ವೃದ್ಧ ತಂದೆ-ತಾಯಿಗಳಿಂದ ಬೇರೆ ಇರುವ ಹಿಸೆ ಮಾಡಿಸಿ, ಅವರಿಗೆ ಅಲ್ಪ ಜಮೀನು, ಅಲ್ಪ ಆದಾಯ ಇರುವಂತೆ ಮಾಡಿ, ಆ ವೃದ್ಧರಿಗೆ ಬರುವ ವೃದ್ಧಾಪ್ಯ ವೇತನದಿಂದ ಹಿಡಿದು, ಅನ್ನಭಾಗ್ಯದ ಅನುಕೂಲದವರೆಗೆ ಏನೆಲ್ಲವನ್ನೂ ತಾವೇ ಅನುಭವಿಸುವ ಮಹಾ ಮಕ್ಕಳಿಗೂ ಕೊರತೆ ನಮ್ಮ ಸಮಾಜದಲ್ಲಿ ಇಲ್ಲ.
ಹಾಗಂತ ಹೀಗೆ ಸರ್ಕಾರದ ಯೋಜನೆಗಳ ದುರ್ಲಾಭ ಪಡೆಯುವವರೆಲ್ಲ ಕೆಟ್ಟವರಲ್ಲ. ಅನ್ನಕ್ಕೆ ಗತಿ ಇಲ್ಲದವರಲ್ಲ. ನಿತ್ಯ ಹತ್ತಾರು ಜನರಿಗೆ ಬೇರೆ ರೀತಿಯ ಸಹಾಯ ಮಾಡುತ್ತಲೂ ಇರುತ್ತಾರೆ. ಹತ್ತಾರು ಜನಕ್ಕೆ ಅನ್ನದಾನವನ್ನೂ ಮಾಡಬಲ್ಲರು. ಆದರೂ ಇಂಥ ಕೆಲಸ ಯಾಕೆ ಮಾಡ್ತೀರಿ ಎಂದು ಅವರನ್ನು ಕೇಳಿದರೆ ಸರ್ಕಾರದ ಯೋಜನೆ, ಯಾಕೆ ಬಿಡಬೇಕು? ಎಂಬ ಪ್ರಶ್ನೆಯೇ ಎದುರಾಗುತ್ತದೆ.
ನಮ್ಮ ಜನ ಅಷ್ಟೊಂದು ಕೆಟ್ಟವರಲ್ಲ, ಅಪ್ರಾಮಾಣಿಕರೂ ಅಲ್ಲ. ಅವರು ಸರ್ಕಾರ ಮತ್ತು ಅದರ ವ್ಯವಸ್ಥೆಯನ್ನು ಅರ್ಥಮಾಡಿಕೊಂಡ ರೀತಿಯೇ ಹಾಗಿದೆ. ಇದು ನಮ್ಮದೇ ಬಸ್ಸು, ಇದಕ್ಕೆ ಕೊಡುವ ಹಣ ನಮ್ಮ ಸರ್ಕಾರಕ್ಕೇ ಹೋಗುತ್ತದೆ, ಮಾಡುವ ಪ್ರಯಾಣಕ್ಕೆ ನಿಗದಿತ ಟಿಕೆಟ್ ಪಡೆಯುವುದು ಕರ್ತವ್ಯ ಹೋಗಲಿ, ನಮ್ಮ ಧರ್ಮ ಎಂದಾಗಲೀ, ಬಡವರಿಗಾಗಿ ನಿರ್ಗತಿಕರಿಗಾಗಿ ಇರುವ ಸರ್ಕಾರಿ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ಸಲ್ಲಬೇಕು, ತನ್ನ ಪರಿಸ್ಥಿತಿ ಅನುಕೂಲಕರವಾಗಿದೆ, ಅಂಥ ಯೋಜನೆಯ ಅಗತ್ಯ ತನಗಿಲ್ಲ ಎಂದು ಸಬಲನೊಬ್ಬ ಭಾವಿಸಿ ಹಾಗೆ ನಡೆದುಕೊಳ್ಳುವುದಾಗಲೀ ಎಂದಾದರೂ ನಮ್ಮ ಸಮಾಜದಲ್ಲಿ ನಡೆದೀತೆ? ಅಂಥ ದಿನಗಳು ಬೇಗನೇ ಬರಲಿ.
No comments:
Post a Comment