Monday, 25 July 2022

ಡಬ್ಬಿಂಗ್ ವಿರೋಧ ಕನ್ನಡಕ್ಕೆ ಪೂರಕವಲ್ಲ


ಕನ್ನಡ ಸಿನಿಮಾ ರಂಗದ ಕೆಲವರು ಹಾಗೂ ಕೆಲ ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ವಿರೋಧಿಸಿ ಹೋರಾಟ ಪ್ರತಿಭಟನೆ ಮತ್ತು ಸಿನಿಮಾ ಬಂದ್ ನಡೆಸಿದ್ದಾರೆ. ಡಬ್ಬಿಂಗ್ ವಿರೋಧಿ ಪ್ರತಿಭಟನೆ ಅಂತಿಮವಾಗಿ ಸಾಧಿಸುವುದೇನು? ‘ನಿಮ್ಮ ಡಬ್ಬಿಂಗ್ ಸಿನಿಮಾಗಿಂತ ಅತ್ಯುತ್ತಮ ಚಿತ್ರವನ್ನು ಸ್ವತಃ ತಯಾರಿಸಿ ಪ್ರೇಕ್ಷಕರನ್ನು ಸೆಳೆಯುತ್ತೇವೆ. ಯಾರು ಗೆಲ್ಲುತ್ತಾರೋ ನೋಡೋಣ’ ಎಂಬ ಆರೋಗ್ಯಕರ ಸ್ಪರ್ಧೆಯಂತೂ ಇದರಲ್ಲಿ ಕಾಣುತ್ತಿಲ್ಲ. ಕನ್ನಡ ಚಿತ್ರರಂಗದ ಇಂಥ ಬಂದ್‍ನಿಂದ, ಪ್ರತಿಭಟನೆಗಳಿಂದ ಕರ್ನಾಟಕದಲ್ಲಿರುವ ಪ್ರೇಕ್ಷಕರಿಗಂತೂ ಖಂಡಿತ ನಷ್ಟವಿಲ್ಲ. ಕಲಾವಿದರು, ತಂತ್ರಜ್ಞರು ಹಾಗೂ ಚಿತ್ರ ಕಾರ್ಮಿಕರಿಗೇ ಅದರ ನೇರ ಹೊಡೆತ ಬೀಳುವುದು. ಇದು ಎಲ್ಲರಿಗೂ ತಿಳಿದಿದೆ. ಆದರೂ ವಿರೋಧ ಏಕೆ? ‘ಕನ್ನಡದ ಭಾಷೆ, ಸಂಸ್ಕøತಿ ನಾಶವಾಗುತ್ತದೆ ಮತ್ತು ಕನ್ನಡದ ತಂತ್ರಜ್ಞರು, ಕಾರ್ಮಿಕರು ಹಾಗೂ ಕಲಾವಿದರಿಗೆ ಅವಕಾಶಗಳಿರುವುದಿಲ್ಲ’ ಎಂಬುದು ಡಬ್ಬಿಂಗ್ ವಿರೋಧಿಗಳ ವಾದ. ಹೌದೇ? ವಾಸ್ತವ ಗಮನಿಸಿದರೆ ಡಬ್ಬಿಂಗ್ ವಿರೋಧಿಗಳೇ ಕನ್ನಡದ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದಾರೆ ಅನಿಸದಿರದು.

ಕನ್ನಡ ಸಿನಿಮಾ ಜಗತ್ತಿಗೆ ಈಗ 79 ವರ್ಷ ವಯಸ್ಸು (2014). ಈ ಅವಧಿಯಲ್ಲಿ ಪ್ರೇಕ್ಷಕ ವರ್ಗ ಬದಲಾಗಿದೆ. ಜನರ ನಿರೀಕ್ಷೆ, ಅಭಿರುಚಿ ಕೂಡ ಬದಲಾಗಿದೆ. ಕನ್ನಡದ ಕಲಾತ್ಮಕ ಚಿತ್ರಗಳನ್ನು ಬಿಟ್ಟರೆ ಹೊಸ ಪ್ರಯೋಗ, ಕಥೆಗಳು ನಮ್ಮವರಿಗೆ ಹೊಳೆಯುವುದೇ ಇಲ್ಲ. ತಾರೇ ಜಮೀನ್ ಪರ್‍ನಂಥ ನವಿರಾದ ಚಿತ್ರ ನಿರ್ಮಾಣ ಸ್ವಂತ ಚಿತ್ರ ತಯಾರಿಸುವ ನಮ್ಮ ಡಬ್ಬಿಂಗ್ ವಿರೋಧಿ ಪ್ರತಿಭೆಗಳಿಗೇಕೆ ಸಾಧ್ಯವಿಲ್ಲ? ಭಾಷೆಯ ಕಾರಣದಿಂದ ಇಂಥ ಚಿತ್ರಗಳಿಂದ ನಮ್ಮ ಸಾಕಷ್ಟು ಜನ ವಂಚಿತರಾಗಿದ್ದಾರೆ. ಚಿತ್ರ ಮಂದಿರಕ್ಕೆ ಜನ ಹಣ ಕೊಟ್ಟು ಬರುತ್ತಾರೆ. ಹಣವನ್ನೂ ಮೂರು ಗಂಟೆ ಸಮಯವನ್ನೂ ಮತ್ತೆ ಮತ್ತೆ ಕಳೆದುಕೊಳ್ಳಲು ಯಾರೂ ಬಯಸುವುದಿಲ್ಲ. ಹೀಗಾಗಿಯೇ ಕನ್ನಡ ಸಿನಿ ಪ್ರೇಕ್ಷಕ ಈಗ ‘ಕಾದು ನೋಡುವ’ ತಂತ್ರ ಅಳವಡಿಸಿಕೊಂಡಿದ್ದಾನೆ. ಚಿತ್ರ ಬಿಡುಗಡೆಯಾದ ಮೊದಲ ಪ್ರದರ್ಶನವನ್ನೇ ನೋಡಬೇಕು, ಮೊದಲ ದಿನವೇ ನೋಡಬೇಕು ಎಂಬ ಧಾವಂತ ಈಗ ಉಳಿದಿಲ್ಲ. ಹೀಗಾಗಿ ಬಿಡುಗಡೆಯಾಗಿ ನಾಲ್ಕೇ ದಿನಗಳಿಂದ ‘ಅಮೋಘ ಐದನೇ ದಿನ’ ‘ಭಾರೀ ಜನಮನ್ನಣೆಯ ಏಳನೇ ದಿನ’ ಎಂಬಂಥ ನಗೆಪಾಟಲಿನ ಪೋಸ್ಟರುಗಳೂ ಚಿತ್ರ ಬಿಡುಗಡೆಯ ದಿನವೇ ಪ್ರಚಾರಕ್ಕೆ ಸಿದ್ಧವಾಗಿರುತ್ತವೆ! ಇಂದು ಸರಾಸರಿ ವರ್ಷಕ್ಕೆ ನೂರರ ಆಸುಪಾಸು ಸಂಖ್ಯೆಯಲ್ಲಿ ತಯಾರಾಗುವ ಬಹುತೇಕ ಕನ್ನಡ ಸಿನಿಮಾಗಳು ‘ಜೋರಾಗಿ ಓಡುವುದು’ ನಿಜ. ಅವು ಬಿಡುಗಡೆಯಾದ ವಾರದಲ್ಲೇ ಇಡೀ ರಾಜ್ಯ ಸುತ್ತಿಬಂದು ಗಾಂಧಿನಗರದ ಡಬ್ಬ ಸೇರಿಕೊಳ್ಳುತ್ತವೆ! ಯಾವ ಪೂರಕ ಪ್ರಚಾರವೂ ಇಲ್ಲದೇ ಡಾ. ರಾಜ್ ಅವರ ಶಬ್ದವೇಧಿಯಂಥ ಕೊನೆ ಕೊನೆಯ ಸಿನಿಮಾ ಕೂಡ ನೂರಾರು ದಿನ ರಾಜ್ಯಾದ್ಯಂತ ಪ್ರದರ್ಶನ ಕಂಡಿತು. ಆ ಬಂಗಾರದ ಮನುಷ್ಯನನ್ನು ಇದೇ ಜನ ಈಗಲೂ ಮತ್ತೆ ಮತ್ತೆ ನೋಡಬಯಸುತ್ತಾರೆ. ಯಾಕೆ? ಭಾಷೆ, ಸಾಹಿತ್ಯ, ಸಂಗೀತ ಮತ್ತು ತಂತ್ರಜ್ಞಾನಗಳ ಮೂಲಕ ಜನರ ಭಾವಕೋಶದಲ್ಲಿ ಹೊಸ ಲೋಕವೊಂದನ್ನು ಸೃಷ್ಟಿಸುವಂತಿದ್ದಾಗ, ಜನರ ಭಾವನೆಯನ್ನು ಮೀಟುವಂತಿದ್ದಾಗ, ಆ ಮೂಲಕ ಜ್ಞಾನವನ್ನೋ ಗುಣಾತ್ಮಕ ಸಂದೇಶವನ್ನೋ ಕೊಡುವಂತಿದ್ದಾಗ ಜನರೆಂದೂ ಅಂಥ ಸಿನಿಮಾವನ್ನು ತಿರಸ್ಕರಿಸಿಲ್ಲ. ಅಂಥ ಸಿನಿಮಾದ ಭಾಷೆ-ದೇಶ ಯಾವುದೇ ಇರಲಿ, ಪ್ರೇಕ್ಷಕ ಅದನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತಾನೆ. ಅದು ಅವನ ಹಕ್ಕು. ಅದನ್ನು ಯಾರೂ ತಮಗೆ ಕೆಲಸವಿರುವುದಿಲ್ಲ ಎಂಬಂಥ ನೆಪದ ಯಾವ ಪ್ರತಿಭಟನೆಯ ಮೂಲಕವೂ ಕಿತ್ತುಕೊಳ್ಳಲಾಗದು.

ಸರಳವಾಗಿ ನೋಡಿದರೆ ಡಬ್ಬಿಂಗ್ ಎಂಬುದು ಒಂದು ಬಗೆಯ ಭಾಷಾಂತರದ ಕೆಲಸ. ಅದಕ್ಕೂ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ರೀತಿಯ ಕೆಲಸಗಳಿರುತ್ತವೆ. ಕನ್ನಡ ಸಾಹಿತ್ಯವನ್ನೇ ಈ ದೃಷ್ಟಿಯಿಂದ ಗಮನಿಸಿದರೆ ಭಾಷಾಂತರದಿಂದ ಕನ್ನಡ ಸಾಹಿತ್ಯ ಮತ್ತು ಭಾಷೆ ಸಾಕಷ್ಟು ಬೆಳೆದಿರುವುದು ಅರಿವಾಗುತ್ತದೆ. ಆಧುನಿಕ ಕಾದಂಬರಿ, ಕಾವ್ಯ, ನಾಟಕ ಮೊದಲಾದ ಪ್ರಕಾರಗಳು, ಬಗೆಬಗೆಯ ವಾದಗಳು, ಸಿದ್ಧಾಂತಗಳೆಲ್ಲ ಕನ್ನಡಕ್ಕೆ ಬಂದುದು ಭಾಷಾಂತರದ ಮೂಲಕ. ಭಾಷಾಂತರವೇ ಬೇಡ, ಇದರಿಂದ ಕನ್ನಡದ ಸೃಜನಶೀಲತೆ ಹಾಳಾಗುತ್ತದೆ ಎಂದು ಸಿನಿಕತನವನ್ನೋ ಸಂಕುಚಿತ ಮನೋಭಾವವನ್ನೋ ತೋರಿಸಿದ್ದರೆ ಕನ್ನಡ ಭಾಷೆಯ ಬೆಳವಣಿಗೆ ಇಂದಿನಷ್ಟೂ ಇರುತ್ತಿರಲಿಲ್ಲ. ಒಂದು ಕಡೆ ಭಾಷಾಂತರದಿಂದ ಕನ್ನಡದ ಸಮೃದ್ಧಿಯೂ ಹೆಚ್ಚಿತು, ಸೃಜನಶೀಲತೆಯೂ ಸ್ಪರ್ಧಾತ್ಮಕವಾಗಿ ಬೆಳೆಯಿತು. ಇದು ಗುಣಾತ್ಮಕ ಸಂಗತಿ. ಇದರ ಪಾಠವನ್ನು ಡಬ್ಬಿಂಗ್ ವಿರೋಧಿಗಳು ಅರ್ಥಮಾಡಿಕೊಳ್ಳುವುದು ಒಳಿತು.
   
ಯಾವುದೇ ಜ್ಞಾನವಿರಲಿ, ಆಡಳಿತವಿರಲಿ ಅವೆಲ್ಲ ಆಯಾ ದೇಶ-ಭಾಷೆಗಳಲ್ಲೇ ಇರುವುದು ಸೂಕ್ತ ಎಂದು ದಶಕಗಳ ಹಿಂದೆಯೇ ವಿಶ್ವಸಂಸ್ಥೆ ಎಲ್ಲ ದೇಶಗಳಿಗೂ ಸೂಚಿಸಿದೆ. ಕನ್ನಡ ಇದರಿಂದ ಹೊರತಾಗಲು ಸಾಧ್ಯವಿಲ್ಲ. ಡಿಸ್ಕವರಿ, ನ್ಯಾಶನಲ್ ಜಿಯೋಗ್ರಫಿಕ್, ಆನಿಮಲ್ ಪ್ಲಾನೆಟ್‍ನಂಥ ವಾಹಿನಿಗಳು ತಯಾರಿಸುವ ಕಾರ್ಯಕ್ರಮಗಳನ್ನು ಇನ್ನು ನೂರು ವರ್ಷದ ಮೇಲಾದರೂ ಡಬ್ಬಿಂಗ್ ಇಲ್ಲದೇ ಕನ್ನಡ ಚಿತ್ರ, ಕಿರು ಚಿತ್ರ ನಿರ್ಮಾಪಕರು ತಯಾರಿಸಿ ‘ನೋಡಿರಪ್ಪಾ’ ಎಂದು ಕೊಡಬಲ್ಲರೇ? ಸದ್ಯ ಡಬ್ಬಿಂಗ್‍ನಲ್ಲೂ ಇವು ಲಭ್ಯವಿಲ್ಲ. ಆದರೆ ಹಿಂದಿ, ತಮಿಳು, ತೆಲುಗು ಇತ್ಯಾದಿ ಭಾಷೆಗಳಲ್ಲಿದೆ. ಕನ್ನಡಕ್ಕೆ ಮಾತ್ರ ಇನ್ನೂ ಅದೊಂದು ಕನಸು. ಯಾಕೆ ಇಂಥ ಜ್ಞಾನ ಕನ್ನಡದಲ್ಲಿ ಲಭಿಸಬಾರದು? ಸಂಭಾಷಣೆ ರೂಪದ ಕನ್ನಡ ಭಾಷೆ ಮಾತ್ರವಲ್ಲ, ಆಧುನಿಕ ತಂತ್ರಜ್ಞಾನದಲ್ಲೂ ಕನ್ನಡದ ಉದ್ಧಾರದ ಮಾರ್ಗ ಇದರಿಂದ ತೆರೆಯುತ್ತದೆ. 1843ರ ವೇಳೆಯಿಂದ ಮುದ್ರಣ ಮಾಧ್ಯಮದೊಂದಿಗೆ ಆಧುನಿಕ ತಂತ್ರಜ್ಞಾನವನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತ ಬಂದ ಕನ್ನಡ ಬೆರಳಚ್ಚು ಯಂತ್ರ, ದಶಕಗಳ ಹಿಂದೆ ಕಂಪ್ಯೂಟರ್ ಕೀಲಿಮಣೆ ವಿನ್ಯಾಸದವರೆಗೆ ಹೊಸ ತಂತ್ರಜ್ಞಾನಕ್ಕೆ ಹೆಗಲೆಣೆಯಾಗಿ ಬೆಳೆಯುತ್ತ ಬಂದಿತು. ಆದರೆ ನಾವೀಗ ತುಂಬ ಹಿಂದಿದ್ದೇವೆ.

ಧ್ವನಿ ಗುರುತಿಸುವ ಸಾಫ್ಟ್‍ವೇರ್, ಮಲ್ಟಿ ಮೀಡಿಯಾ ಸಾಫ್ಟ್‍ವೇರ್, ಕೈಬರಹ-ಹಸ್ತಪ್ರತಿ ಗುರುತಿಸುವ ಸಾಫ್ಟ್‍ವೇರ್-ಇವೆಲ್ಲ ಭವಿಷ್ಯದಲ್ಲಿ ಕನ್ನಡ ಉಳಿಸಲು ಅನಿವಾರ್ಯ. ಇವೆಲ್ಲ ಇನ್ನೂ ಕನ್ನಡದಲ್ಲಿ ಲಭ್ಯವಿಲ್ಲ. ಕನ್ನಡದ ಈ ಕೊರತೆ ತುಂಬುವುದು ತಡವಾದಷ್ಟೂ ಆಧುನಿಕರಿಂದ ಅದು ಅಷ್ಟಷ್ಟು ದೂರವಾಗುತ್ತಲೇ ಹೋಗುತ್ತದೆ. ಸರ್ಕಾರವೇ ಎಲ್ಲವನ್ನೂ ಮಾಡಲಾಗುವುದಿಲ್ಲ. ಈ ಬಗೆಯ ಸಾಫ್ಟವೇರ್ ಅಭಿವೃದ್ಧಿಗೆ ಅಗತ್ಯ ಹಣವನ್ನು ಉದ್ಯಮಗಳು ನೀಡಬೇಕು. ಅಪಾರ ಹಣವಿರುವ ಚಿತ್ರೋದ್ಯಮ ಡಬ್ಬಿಂಗ್ ಕಲೆಯನ್ನೂ ಉತ್ತೇಜಿಸಿದರೆ, ಡಬ್ಬಿಂಗ್ ನಿರ್ಮಾಪಕರು ಇಂಥ ಇನ್ನಷ್ಟು ತಂತ್ರಜ್ಞಾನವನ್ನು ಅನಿವಾರ್ಯವಾಗಿ ಉತ್ತೇಜಿಸುತ್ತಾರೆ. ಇತರೆ ಭಾಷೆಗಳು ಇಂಥ ತಂತ್ರಜ್ಞಾನದಲ್ಲಿ ಮುಂದುವರೆಯಲೂ ಡಬ್ಬಿಂಗ್ ಪರೋಕ್ಷ ಕಾರಣ. ಡಬ್ಬಿಂಗ್ ವಿರೋಧಿಗಳು ಬಹುಶಃ ತಮ್ಮ ಸಾಮಥ್ರ್ಯವನ್ನು ತಾವೇ ಅನುಮಾನಿಸುತ್ತಿದ್ದಾರೆ. ನಿಜವಾದ ಕಲಾವಿದ, ಕಾರ್ಮಿಕ, ತಜ್ಞನಿಗೆ ಯಾವಾಗಲೂ ಎಲ್ಲೆಡೆಯೂ ಮನ್ನಣೆ ಇದ್ದೇ ಇದೆ. ಕೆಟ್ಟದಾಗಿ ತೆಗೆದ ಸ್ವಂತ ಸಿನಿಮಾದಂತೆಯೇ ಅರ್ಥವಿಲ್ಲದ ಡಬ್ಬಿಂಗ್ ಕೆಲಸವನ್ನೂ ಜನ ಕಸದಬುಟ್ಟಿಗೆ ಎಸೆಯುತ್ತಾರೆ. ಡಬ್ಬಿಂಗ್‍ನಿಂದ ಕನ್ನಡಕ್ಕೆ ಅಪಕಾರಕ್ಕಿಂತ ಉಪಕಾರವೇ ಹೆಚ್ಚಿದೆ. ಈಗೀಗಂತೂ ಅಪ್ಪ ಲೂಸು, ಅಮ್ಮ ಲೂಸು, ನಾನು ಲೂಸು-ನೀನೂ ಲೂಸು ಕೊನೆಗೆ ಎಲ್ಲರೂ ಲೂಸು ಎಂಬಂಥ ಮಟ್ಟಕ್ಕೆ ಕನ್ನಡ ಚಿತ್ರರಂಗ ಬಂದು ಮುಟ್ಟಿದೆ. ಒಳ್ಳೆಯದು ಎಲ್ಲಿದ್ದರೂ ಬರಲಿ ಎಂದು ಶತಮಾನಗಳಿಂದ ಆಶಿಸಿದ ದೇಶ ನಮ್ಮದು. ಡಬ್ಬಿಂಗ್ ವಿರೋಧದ ನೆಪದಲ್ಲಿ ಅನ್ಯ ಭಾಷೆಯ ಆಗಮನವನ್ನು ‘ತಮ್ಮ ಮೇಲಿನ ದಾಳಿ’ ಎಂದು ಭಾವಿಸುವವರು ನಟಿಯರನ್ನು, ತಂತ್ರಜ್ಞರನ್ನು, ಕೊನೆಗೆ ಲೈಟ್ ಬಾಯ್‍ಗಳನ್ನೂ ಪರಭಾಷೆಯಿಂದ ಆಹ್ವಾನಿಸುವುದೇಕೆ? 
ಕನ್ನಡದ ಸಾಹಿತ್ಯ ಕೃತಿಗಳು ಅನ್ಯ ಭಾಷೆಗಳಿಗೆ ಹೆಚ್ಚು ಹೆಚ್ಚು ಭಾಷಾಂತರವಾಗಬೇಕೆಂದು ಬಯಸುವ ನಾವು ಅನ್ಯರೂ ನಮ್ಮ ಸಿನಿಮಾ, ಸಾಹಿತ್ಯ ತಮ್ಮಲ್ಲೂ ಇರಲಿ ಎಂದು ಬಯಸುವಂತೆ ಸಿನಿಮಾ, ಸಾಹಿತ್ಯ ನೀಡಬೇಕಲ್ಲವೇ? ಈಗಾಗಲೇ ಕನ್ನಡದ ಅನೇಕ ಸಿನಿಮಾಗಳು ಅನ್ಯ ಭಾಷೆಗಳಿಗೆ ಡಬ್ಬಿಂಗ್ ಆಗಿವೆ, ಆಗುತ್ತಿವೆ. ಅಂಥ ಗುಣಮಟ್ಟದ ಪ್ರಶ್ನೆ ಬಂದಾಗ ಆರೋಗ್ಯಕರ ಸ್ಪರ್ಧೆ ಉಂಟಾಗುತ್ತದೆ. ತಾನೂ ಹೊರ ಹೋಗುವುದಿಲ್ಲ, ಅನ್ಯರೂ ನಮ್ಮ ಮನೆಗೆ ಬರಬಾರದು ಎಂಬುದು ಒಂದು ಬಗೆಯ ಅಸ್ಪøಶ್ಯತೆ. ಮಹಾರಾಷ್ಟ್ರವೆಲ್ಲ ಮರಾಠಿಗರದು ಎಂದು ಅನ್ಯ ಭಾಷಿಕರನ್ನು ಹೊಡೆದೋಡಿಸುವ ಶಿವಸೇನೆಯ ನಿಲುವಿನಲ್ಲೂ ತಮ್ಮ ತಮ್ಮ ಮತಗಳೇ ಶ್ರೇಷ್ಠ ಎಂದು ಹೊಡೆದಾಡುವ ಮತೀಯ ಮೂಲಭೂತವಾದಿಗಳ ನಿಲುವಿನಲ್ಲೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಡಬ್ಬಿಂಗ್ ವಿರೋಧವೂ ಬಹುಶಃ ಇದೇ ಮಾರ್ಗದಲ್ಲಿ ನಡೆಯುತ್ತಿದೆ. ಅಷ್ಟಕ್ಕೂ ಡಬ್ಬಿಂಗ್ ಚಿತ್ರಗಳಿಗೂ ಮುಕ್ತ ಅವಕಾಶ ನೀಡಿದ ನಮ್ಮ ನೆರೆಯ ತಮಿಳು, ತೆಲುಗು ಚಿತ್ರರಂಗಕ್ಕೆ ಇಲ್ಲದ ಭೀತಿ ಕನ್ನಡ ಚಿತ್ರರಂಗಕ್ಕೆ ಮಾತ್ರವೇ ಏಕೆ? 






ಪುಸ್ತಕ:

ಶೋಧ-ಪರಿಶೋಧ (ಪ್ರಚಲಿತ, ಭಾಷೆ, ಸಾಹಿತ್ಯ ಮತ್ತು ಜಾನಪದ ಕುರಿತ ಲೇಖನಗಳು)

ಪ್ರಕಾಶಕರು:
ರಚನ ಪ್ರಕಾಶನ, ಮೈಸೂರು
9880939952 / 9480107298

No comments:

Post a Comment