ಇನ್ನೇನು ನಾವು ಸದ್ಯದಲ್ಲೇ ೭೫ನೆಯ ಸ್ವಾತಂತ್ರ್ಯ ಉತ್ಸವ ಆಚರಿಸಲಿದ್ದೇವೆ. ಈ ಹಂತದಲ್ಲಿ ನಾವು ನಿರೀಕ್ಷಿತ ಪ್ರಗತಿ ಸಾಧಿಸಿದ್ದೇವೆಯೇ? ಇಲ್ಲಿದೆ ಭಟ್ಟರ ಒಂದು ನೋಟ -
ಮಾನ್ಯ ಪ್ರಧಾನ ಮಂತ್ರಿಗಳು ಕೆಂಪುಕೋಟೆಯ ಮೇಲಿನಿಂದ ದೇಶವನ್ನು ಉದ್ದೇಶಿಸಿ ಮಾತನಾಡುತ್ತ ಐದಾರು ವರ್ಷಗಳ ಹಿಂದೆಯೇ ಎಲ್ಲ ವಲಯದಲ್ಲೂ ನಮ್ಮ ಯುವಜನತೆಯ ಕನಸಿನ ಕಂಪನಿಗಳು ಬರಲಿ, ಇದಕ್ಕಾಗಿ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಅಗತ್ಯವಿದೆ ಎಂದಿದ್ದಾರೆ. ಇ ಆಡಳಿತ, ಪ್ರವಾಸೋದ್ಯಮ ಇತ್ಯಾದಿ ಸಂಗತಿಗಳಿಗೆ ಅವರು ಹೆಚ್ಚು ಒತ್ತು ನೀಡಿದ್ದಾರೆ. ಸ್ವಾತಂತ್ರ್ಯ ದಿನದ ಅವರ ಭಾಷಣದಲ್ಲಿ ಅಭಿವೃದ್ಧಿ ಕುರಿತು ಹೆಚ್ಚು ನಿರೀಕ್ಷಿಸುವುದು ತಪ್ಪಾಗುತ್ತದೆ. ಏಕೆಂದರೆ ಇದು ಅವರ ಸರ್ಕಾರದ ಬಜೆಟ್ ಮಂಡನೆಯಲ್ಲ, ದೇಶವನ್ನು ಮುನ್ನಡೆಸುವ ಅವರ ಕನಸನ್ನು ಅವರಿಲ್ಲಿ ಬಿಚ್ಚಿಡಬಹುದು ಅಷ್ಟೆ. ಆದರೆ ಅವರ ಭಾಷಣದಲ್ಲಿ ದೇಶವನ್ನು ಎತ್ತ ಕೊಂಡೊಯ್ಯಲು ಯತ್ನಿಸುತ್ತಿದ್ದಾರೆ ಎಂಬ ಸುಳಿವು ದೊರೆಯಬಹುದು. ಇದು ಕೂಡ ಅಗತ್ಯವೇ.
ನಮ್ಮ ವ್ಯವಸ್ಥೆಯನ್ನು ನಾವೇ ರೂಪಿಸಿಕೊಂಡು ೬೭ ವರ್ಷಗಳು ಕಳೆದವು. ಈ ವ್ಯವಸ್ಥೆಯನ್ನು ನಮ್ಮನ್ನು ನಾವೇ ಆಳಿಕೊಳ್ಳುವುದು ಎನ್ನುವುದಾಗಲೀ, ಈ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನುವುದಾಗಲೀ ಅಷ್ಟು ಸರಿಯಾಗದು. ಇಲ್ಲಿ ಯಾರೂ ಯಾರನ್ನೂ ಆಳುವುದಿಲ್ಲ, ಯಾರೂ ಯಾರಿಗೂ ಪ್ರಭುಗಳಲ್ಲ. ಜನಸಾಮಾನ್ಯರನ್ನು ಮೆಚ್ಚಿಸಲು ಈ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಜನಪ್ರಿಯ ಘೋಷಣೆಯನ್ನು ನೇತಾಗಳು ನೀಡಿದ್ದಾರೆ. ಹಾಗೆ ನೋಡಿದರೆ ಜನತೆ ಮತ ಚಲಾಯಿಸುವ ಸಂದರ್ಭದಲ್ಲಿ ಮಾತ್ರ ಅವರು ಪ್ರಭುಗಳು. ಅನಂತರ ನಿಜವಾದ ಪ್ರಭು ಮತ ಪಡೆದು ಗೆದ್ದ ವ್ಯಕ್ತಿ! ಅಷ್ಟಕ್ಕೂ ಈ ಪ್ರಭು ಎಂಬುದು ಆಳುವ ರಾಜನಿಗೆ ಅನ್ವಯವಾಗುತ್ತಿದ್ದ ಪದ. ಈಗ ಅಂಥ ಒಬ್ಬ ಪ್ರಭುವಿಲ್ಲ. ಪಂಚಾಯ್ತಿ ಸದಸ್ಯನಿಂದ ಹಿಡಿದು ಪ್ರಧಾನಿವರೆಗೆ ಎಲ್ಲ ಜನಪ್ರತಿನಿಧಿಗಳೂ ಪ್ರಭುಗಳೇ. ಕೆಲವರು ಸಾಮ್ರಾಟರು, ಕೆಲವರು ಚಕ್ರಾಧಿಪತಿಗಳು, ಹಲವರು ಮಹಾರಾಜರುಗಳು, ಕೆಲವರು ರಾಜರುಗಳು, ಇನ್ನು ಕೆಲವರು ಪಾಳೆಯಗಾರರು, ಮತ್ತೆ ಕೆಲವರು ಸಾಮಂತರು. ಇಲ್ಲಿ ಮತದಾರ ಎಂಬ ಪ್ರಜೆಗೆ ಇರುವ ಪ್ರಭುವಿನ ಸ್ಥಾನ ಕೇವಲ ಹೊಗಳಿಕೆಯದು. ಹೀಗಾಗಿ ಇದಕ್ಕೆಲ್ಲ ಅರ್ಥವಿಲ್ಲ. ಆದ ಕಾರಣ ಇದನ್ನು ಜನತಂತ್ರ ವ್ಯವಸ್ಥೆ ಎನ್ನಲು ಅಡ್ಡಿ ಇಲ್ಲ.
ಈ ವ್ಯವಸ್ಥೆಯಲ್ಲಿ ಕಳೆದ ಆರು ದಶಕಗಳಿಂದ ಆಡಳಿತ ನಡೆಸಿದವರು ದೇಶವನ್ನು ಅಭಿವೃದ್ಧಿಪಡಿಸಬೇಕೆಂದೇ ಯೋಜನೆಗಳನ್ನು ರೂಪಿಸಿದರು. ಪಂಚವಾರ್ಷಿಕ ಯೋಜನೆಗಳು ದೇಶದ ಅಭಿವೃದ್ಧಿಗಾಗಿಯೇ ರೂಪುಗೊಂಡವು. ಆದರೆ ಇಂದಿಗೂ ನಿರೀಕ್ಷಿತ ಮಟ್ಟದ ಗುರಿ ತಲುಪಲಾಗುತ್ತಿಲ್ಲ. ಇದರಿಂದ ನಾವು ಹಾಕಿಕೊಂಡ ಯೋಜನೆಗಳು ಸಮಾಜದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡಿಲ್ಲವೇನೋ ಅಥವಾ ನಮ್ಮ ಆರ್ಥಿಕ ನೀತಿಗಳೇ ದೋಷಪೂರ್ಣವಾಗಿವೆಯೇನೋ ಎಂಬ ಅನುಮಾನ ಹುಟ್ಟಿಸುತ್ತವೆ.
ಒಬ್ಬ ವ್ಯಕ್ತಿಯ ದೃಷ್ಟಿಯಿಂದ ೬೦ ವರ್ಷ ಒಂದು ಜೀವನಾವಧಿ ಕಾಲ ಎಂಬಂತೆ ಕಂಡರೂ ದೇಶದ ದೃಷ್ಟಿಯಲ್ಲಿ ಇದಿನ್ನೂ ಚಿಕ್ಕ ಮಗುವಿನ ವಯಸ್ಸು. ಆದರೆ ಅದಕ್ಕೆ ತಿಳಿವಳಿಕೆಯ ವಯಸ್ಸು ಬಂದಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಅದರ ನೋಟ, ಆಸಕ್ತಿ ಏನಿವೆ ಎಂಬುದನ್ನು ಅರಿಯಬೇಕಾಗುತ್ತದೆ.
ನಮ್ಮ ದೇಶದ ಆರ್ಥಿಕ ನೀತಿ ವ್ಯಾಪಾರ-ವಾಣಿಜ್ಯೋದ್ದೇಶಗಳನ್ನು ಗಮನದಲ್ಲಿಟ್ಟುಕೊಂಡಂತಿದೆ. ಲಾಭ-ನಷ್ಟಗಳೂ ಈ ವಲಯವನ್ನೇ ಆಧಾರವಾಗಿಟ್ಟುಕೊಂಡಿವೆ. ಹೀಗಾಗಿಯೇ ಎಲ್ಲ ಯೋಜನೆಗಳೂ ಮೂಲತಃ ವಾಣಿಜ್ಯೋದ್ದೇಶವನ್ನೇ ಲಕ್ಷ್ಯಿಸುತ್ತವೆ. ಒಂದೂರಿನಲ್ಲಿ ಉತ್ತಮ ರಸ್ತೆ ನಿರ್ಮಿಸಬೇಕು ಅಥವಾ ಆ ಊರಿನ ನದಿ, ಹಳ್ಳಕ್ಕೆ ಸೇತುವೆ ಕಟ್ಟಬೇಕು ಅಂದರೆ ಅಲ್ಲಿನ ವಹಿವಾಟಿನ ಶಕ್ತಿಯನ್ನು ಮೊದಲು ನೋಡಲಾಗುತ್ತದೆ. ಊರಿನಲ್ಲಿ ಇರುವವರೇ ಐನೂರು ಜನ, ಕೃಷಿ ಬಿಟ್ಟರೆ ಬೇರೇನೂ ಚಟುವಟಿಕೆ ಇಲ್ಲ ಎಂಬ ಊರುಗಳಿಗೆ ರಸ್ತೆಯಂಥ ಉತ್ತಮ ಸೌಕರ್ಯಗಳು ಇಂದಿಗೂ ಕನಸಾಗಿರುವುದು ಇದೇ ಕಾರಣಕ್ಕೆ. ಹೇಳಿ ಕೇಳಿ ನಮ್ಮದು ಕೃಷಿ ಆಧರಿತ ದೇಶ. ಕೃಷಿಗೆ ಉತ್ತೇಜನ ನೀಡದೇ ದೇಶದ ಉದ್ಧಾರ ಅಸಾಧ್ಯ. ಆದ್ದರಿಂದ ನಮ್ಮ ಆರ್ಥಿಕ ನೀತಿ ವ್ಯಾಪಾರದ ಬದಲು ಮೂಲತಃ ಕೃಷಿ ಆಧರಿತವಾಗಿರಬೇಕಿತ್ತು. ಅದಾಗಲಿಲ್ಲ. ಕೃಷಿಯ ಸಾಂಪ್ರದಾಯಿಕ ಪದ್ಧತಿಯನ್ನೇ ನೋಡಿದರೆ ಸಮಾಜದ ಒಟ್ಟೂ ಅಭಿವೃದ್ಧಿಗೆ ಅದು ನೀಡಿದ ಕೊಡುಗೆ ಅರಿವಾಗುತ್ತದೆ. ಮೇದರಿಕೆ, ಕುಂಬಾರಿಕೆ, ಕಮ್ಮಾರಿಕೆಯಾದಿಯಾಗಿ ಎಲ್ಲ ಬಗೆಯ ಸೃಜನಶೀಲ ಚಟುವಟಿಕೆಯನ್ನೂ ಬೆಳೆಸಿದ್ದು ಕೃಷಿ. ಕೃಷಿಯಲ್ಲಿ ಆಧುನಿಕತೆ ಇಣುಕಲು ಆರಂಭಿಸಿದ ಮೇಲೆ ಇಂಥ ಒಂದೊಂದೇ ವೃತ್ತಿ-ಕೌಶಲಗಳು ನಾಶವಾಗುತ್ತ ಬಂದವು. ಬೆನ್ನೆಲುಬಿನ ಒಂದೊಂದೇ ಕೊಂಡಿಗಳು ಕಳಚುತ್ತ ಬಂದಿತು ಎನ್ನುವುದು ಸರಿ. ನೆಹರೂ ಆರ್ಥಿಕ ದೃಷ್ಟಿಯಲ್ಲಿ ರೂಪುಗೊಂಡ ಬೃಹತ್ ಕೈಗಾರಿಕೆಗಳು, ಭಾರೀ ನೀರಾವರಿ ಯೋಜನೆಗಳು ಕೃಷಿಯನ್ನು ಮೂಲತಃ ದೃಷ್ಟಿಯಲ್ಲಿಟ್ಟುಕೊಂಡವಾಗಿರಲಿಲ್ಲ. ಕೈಗಾರಿಕೆಗಳಿಗೆ ವಿದ್ಯುತ್ ಒದಗಿಸುವುದಕ್ಕಾಗಿಯೇ ಅಣೆಕಟ್ಟೆಗಳನ್ನು ಕಟ್ಟಲಾಯಿತು. ಕಟ್ಟೆಗಳಲ್ಲಿನ ನೀರಿನ ಎರಡನೆಯ ಉಪಯೋಗ ಕುಡಿಯುವ ನೀರಿನ ಪೂರೈಕೆಯಾದರೆ ಮೂರನೆಯ ಉಪಯೋಗ ಕೃಷಿ! ಇದು ಅಣೆಕಟ್ಟೆಗಳ ವಿವಿಧೋದ್ದೇಶ ಈಡೇರಿಕೆ.
ದೇಶದಲ್ಲಿ ನೈಸರ್ಗಿಕ ಸಂಪನ್ಮೂಲಕ್ಕೇನೂ ಕೊರತೆ ಇಲ್ಲ. ಇದರಿಂದಾಗಿಯೇ ಬೇಸಾಯೋತ್ಪನ್ನಗಳಲ್ಲಿ ಇಂದಿಗೂ ಭಾರತ ಪ್ರಪಂಚದಲ್ಲೇ ಎರಡನೆಯ ಸ್ಥಾನದಲ್ಲಿದೆ. ಕೃಷಿ ಹಾಗೂ ಪೂರಕ ವಲಯಗಳಾದ ಅರಣ್ಯ, ಮೀನುಗಾರಿಕೆ ಮತ್ತು ಮರಮಟ್ಟುಗಳಲ್ಲಿ ಜಿಡಿಪಿಯ ಶೇ.೧೭ ಪಾಲು ಪಡೆದಿವೆಯಲ್ಲದೇ ಒಟ್ಟೂ ಕಾರ್ಮಿಕ ಶಕ್ತಿಯಲ್ಲಿ ಶೇ.೫೧ ಜನರಿಗೆ ಉದ್ಯೋಗ ನೀಡಿವೆ. ಇಷ್ಟಾದರೂ ೧೯೫೧ರಿಂದ ೨೦೧೧ರವರೆಗಿನ ಅಧ್ಯಯನದಲ್ಲಿ ಎದ್ದು ಕಾಣುವ ಸಂಗತಿ ಎಂದರೆ ಒಟ್ಟೂ ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಒಂದೇ ಸಮನೆ ಇಳಿಯುತ್ತಿರುವುದು. ಕಳೆದ ಮೂರು ಯೋಜನೆಗಳ ಅವಧಿಯನ್ನೇ ನೋಡಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ: ಒಂಬತ್ತನೆಯ ಯೋಜನೆ (೧೯೯೭-೯೮ ರಿಂದ ೨೦೦೧-೦೨)- ಶೇ.೨.೫೦; ಹತ್ತನೆಯ ಯೋಜನೆ (೨೦೦೨-೦೩ ರಿಂದ ೨೦೦೬-೦೭)-ಶೇ.೨.೪೭; ಹನ್ನೊಂದನೆಯ ಯೋಜನೆ (೨೦೦೭-೦೮ ರಿಂದ ೨೦೦೯-೧೦) ಶೇ.೨.೨೦. ಇದಲ್ಲದೇ ೧೯೮೨ರಲ್ಲಿ ನಬಾರ್ಡ್ ರೂಪುಗೊಂಡಾಗಿನಿಂದ ತಳಮಟ್ಟದ ಕೃಷಿ ಸಾಲದ ಶೇಕಡಾವಾರಿನಲ್ಲಿ ಕೃಷಿ ಮರುಸಾಲದ ಪ್ರಮಾಣ ೧೯೮೯-೯೦ರಲ್ಲಿ ಶೇ.೨೩ರಿಂದ ಶೇ.೫೧ಕ್ಕೆ ಏರಿದ್ದು, ನಂತರ ೨೦೦೯-೧೦ರ ವೇಳೆಗೆ ಶೇ.೧೦ಕ್ಕೆ ಕುಸಿದಿದೆ. ಇವೆಲ್ಲವೂ ಕೃಷಿಯ ಹಿನ್ನೆಡೆಯನ್ನೇ ತೋರಿಸುತ್ತವೆ. ಇನ್ನೂ ಅಪಾಯಕಾರಿ ಸಂಗತಿ ಎಂದರೆ ದೇಶದ ಪ್ರತಿ ಜಿಲ್ಲೆಯಲ್ಲೂ ಪ್ರತಿ ವರ್ಷ ೧೦೦೦-೨೦೦೦ ಹೆಕ್ಟೇರ್ ಕೃಷಿಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಜಸಂಖ್ಯೆಯಂತೂ ಪ್ರತಿ ವರ್ಷ ೭.೮೫ ಲಕ್ಷ ದರದಲ್ಲಿ ಏರುತ್ತಿದೆ. ಆಹಾರ ಉತ್ಪಾದನೆ ಮಾತ್ರ ಕಳೆದ ಎರಡು ದಶಕಗಳಿಂದ ನಿಂತಲ್ಲೇ ಇದೆ! ಪ್ರತಿ ವರ್ಷ ರೈತರ ಸಂಖ್ಯೆ ಶೇ೨ರಿಂದ ೩ರಷ್ಟು ಇಳಿಕೆಯಾಗುತ್ತಿದೆ. ಅಂದರೆ ತಿನ್ನುವ ಹೊಟ್ಟೆಗಳು ಹೆಚ್ಚುತ್ತಿರುವಂತೆ ಬೆಳೆಯುವ ಕೈಗಳು, ಬೆಳೆಯುವ ಭೂಮಿ ಹೆಚ್ಚುತ್ತಿಲ್ಲ.
ಇದು ನಿಜಕ್ಕೂ ಗಾಬರಿ ಹುಟ್ಟಿಸುವ ಸಂಗತಿ. ಈ ದೃಷ್ಟಿಯಿಂದ ನಮ್ಮ ಅಭಿವೃದ್ಧಿ ಮತ್ತು ಹಣಕಾಸು ನೀತಿ ಕೃಷಿ ಆಧರಿತವಾಗಿ ಪರಿವರ್ತನೆಯಾಗಬೇಕಿದೆ. ಪ್ರಪಂಚದಲ್ಲಿ ಭಾರತ ಅತಿ ಹೆಚ್ಚು ಉತ್ಪಾದನೆ ಮಾಡುತ್ತಿರುವುದೇನು ನೋಡಿ: ಸಕ್ಕರೆ, ಕ್ಷೀರ ಮತ್ತು ಅದರ ಉತ್ಪನ್ನಗಳು, ಗೋಡಂಬಿ, ತೆಂಗು, ಚಹಾ, ಶುಂಠಿ, ಅರಿಶಿಣ ಹಾಗೂ ಕಾಳು ಮೆಣಸು! ಜನತೆ ನಿತ್ಯ ಬಳಸುವ ಆಹಾರೋತ್ಪನ್ನಗಳಾದ ರಾಗಿ, ಅಕ್ಕಿ, ಗೋದಿ, ಜೋಳ ಮೊದಲಾದವುಗಳಲ್ಲಿ ವರ್ಷೇ ವರ್ಷೇ ಸ್ಥಾನ ಕುಸಿದುಹೋಗುತ್ತಿದೆ. ಆದರೆ ಔದ್ಯಮಿಕ ಜಿಡಿಪಿಯಲ್ಲಿ ಮಾತ್ರ ಸದ್ಯ ಪ್ರಪಂಚದಲ್ಲೇ ೧೦ನೇ ಸ್ಥಾನ ಪಡೆದಿದೆ. ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗದ ದೇಶ ಏನು ಅಭಿವೃದ್ಧಿ ಸಾಧಿಸಿ ಏನು?
ಕೃಷಿ ಕ್ಷೇತ್ರ ಕುಂಠಿತವಾಗಲು ಅನೇಕ ಕಾರಣಗಳಿವೆ. ಆರ್ಥಿಕ ನೀತಿಗಳ ಜೊತೆಗೆ ಕೃಷಿ ನೀತಿಯೂ ಬದಲಾಗಬೇಕಿದೆ. ತುಮಕೂರು ವಿವಿಯ ಪ್ರಾಧ್ಯಾಪಕರಾದ ಪರಮಶಿವಯ್ಯನವರು ಹೇಳುವಂತೆ ಕೃಷಿ ಉತ್ಪನ್ನಗಳನ್ನು ಕೆಡದಂತೆ ಸಂಗ್ರಹಿಸಿಡುವ ಶೀತಲ ಕೋಠಿಗಳ ಜೊತೆಗೆ ಸಾಗಣೆಗೆ ಸೂಕ್ತ ಸಂಪರ್ಕ ವ್ಯವಸ್ಥೆಗಳು ತಾಲ್ಲೂಕು ಮಟ್ಟದಲ್ಲೂ ಬರಬೇಕು. ಆಹಾರೋತ್ಪನ್ನಗಳ ಬೆಲೆಯನ್ನು ದಲ್ಲಾಳಿಗಳು ಸದ್ಯ ನಿಯಂತ್ರಿಸುತ್ತಿದ್ದಾರೆ. ಇದನ್ನು ಮೊದಲು ತಪ್ಪಿಸಬೇಕು. ಹಾದಿ ತಪ್ಪುತ್ತಿರುವ ಕಿರು ಸಾಲ ವ್ಯವಸ್ಥೆಯನ್ನು ಸರಿಪಡಿಸಬೇಕು. ಮಧ್ಯಮ ಮತ್ತು ಚಿಕ್ಕ ಹಿಡುವಳಿದಾರರಿಗೆ ಸದ್ಯ ಸಾಲ ಸಿಗುವುದು ದುರ್ಲಭವಾಗುತ್ತಿದೆ. ಕೃಷಿಗೆ ಮೀಸಲಾದ ಹಣದಲ್ಲಿ ಬಹುಪಾಲು ಕೃಷಿ ಯಂತ್ರೋಪಕರಣಗಳಿಗೂ ದೊಡ್ಡ ಹಿಡುವಳಿದಾರರಿಗೂ ಹೋಗುತ್ತಿದೆ. ಹೀಗಾದರೆ ಅಭಿವೃದ್ಧಿ ಸಾಧ್ಯವಿಲ್ಲ. ಸೇವಾ ವಲಯಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಸುಸ್ಥಿರ ಪರಿಸರ ಪ್ರೇಮಿ ವಿದ್ಯುತ್ ಉತ್ಪಾದನೆ ಮತ್ತು ಬಳಕೆಗೆ ಒತ್ತು ದೊರೆಯಬೇಕು. ಕೃಷಿಗೆ ಉತ್ತೇಜನ ದೊರೆಯದೇ ನಗರ ವಲಸೆ ತಡೆಯಲಾಗದು. ನಗರ ವಲಸೆ ನಿಲ್ಲದೇ ಇದ್ದರೆ ಅದರ ಜೊತೆಗೆ ಬೆಳೆಯುವ ಸಮಸ್ಯೆಗಳ ನಿವಾರಣೆಯೂ ಸಾಧ್ಯವಿಲ್ಲ.
ಕೇಂದ್ರ ಹೋಗಲಿ, ರಾಜ್ಯ ಮಟ್ಟದಲ್ಲಾದರೂ ನಮ್ಮ ಸರ್ಕಾರಗಳ ಯೋಜನೆಗಳು ಇಂಥ ದೃಷ್ಟಿಯನ್ನು ಒಳಗೊಂಡಿವೆಯೇ? ಉತ್ತರ ನಿರಾಶಾದಾಯಕ. ಆರ್ಥಿಕ ಬೆಳವಣಿಗೆ (ಎಕನಾಮಿಕ್ ಗ್ರೋತ್), ಖಂಡಿತ ವಿಕಾಸ (ಡೆವೆಲಪ್‌ಮೆಂಟ್) ಅಲ್ಲ ಎಂಬುದನ್ನು ನಾವು ಅರಿಯುವುದು ಯಾವಾಗ?

No comments:
Post a Comment