Saturday, 15 October 2022

ಪ್ರೊ. ಡಿ.ವಿ.ಯವರ ಹೊಸ ಕೃತಿ

ಕರ್ನಾಟಕದ ಹಳಗನ್ನಡ ಮತ್ತು ಶಾಸನ ಲಿಪಿ ಓದಬಲ್ಲ ಬೆರಳೆಣಿಕೆಯ ತಜ್ಞರಲ್ಲಿ ಮುಂಚೂಣಿ ಸಾಲಿನಲ್ಲಿ ನಿಲ್ಲುವವರು ಪೊ. ಡಿ.ವಿ. ಪರಮಶಿವಮೂರ್ತಿಯವರು. ಇವರು ಈಗಾಗಲೇ ಈ ಬಗೆಯ ಹತ್ತಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಇವರ ‘ಲಕ್ಕಣ್ಣ ಡಂಡೇಶ ಮತ್ತು ಶಿವತತ್ತ್ವ ಚಿಂತಾಮಣಿ’ ಎಂಬ ಕೃತಿ ಪ್ರಕಟವಾಗಿದೆ. ಸಾಮಾನ್ಯವಾಗಿ ಈ ಹೆಸರನ್ನು ‘ಲಕ್ಕಣ ದಂಡೇಶ ಮತ್ತು ಶಿವತತ್ವ ಚಿಂತಾಮಣಿ’ ಎಂದು ತಪ್ಪಾಗಿ ದಾಖಲಿಸಲಾಗುತ್ತದೆ. ಆದರೆ ಪ್ರಸ್ತುತ ಕೃತಿಯಲ್ಲಿ ‘ಲಕ್ಕಣ್ಣ’ ಮತ್ತು ಶಿವತತ್ತ್ವ ಎಂದು ಸರಿಯಾಗಿ ಕೊಡಲಾಗಿದೆ. ಇಷ್ಟು ಮಾತ್ರವಲ್ಲ ಒಬ್ಬ ಪ್ರಾಚೀನ ಕವಿ ಮತ್ತು ಅವನ ಕೃತಿಯ ಬಗ್ಗೆ ಹೇಗೆ ಅಧ್ಯಯನ ಮಾಡಬೇಕೆಂಬ ಒಂದು ಮಾದರಿ ಕೂಡ ಇದರಲ್ಲಿ ಕಾಣಿಸುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ರಚಿಸಿದವರೆಲ್ಲ ಲಕ್ಕಣ್ಣ ದಂಡೇಶ ಮತ್ತು ಅವನ ಕೃತಿಯ ಬಗ್ಗೆ ದಾಖಲಿಸಿದ್ದಾರೆ. ಆದರೆ ಇಷ್ಟು ಸಮಗ್ರ ವಿವರವನ್ನು ಅವುಗಳಲ್ಲಿ ಕಾಣಲು ಸಾಧ್ಯವಿಲ್ಲ ಮಾತ್ರವಲ್ಲ. ಅವುಗಳಲ್ಲಿ ವ್ಯಾಪ್ತಿ ಸೀಮಿತವಾಗಿರುತ್ತದೆ. ಈ ಕವಿ ಮತ್ತು ಕೃತಿಯನ್ನು ಕುರಿತು ಮೊದಲಬಾರಿಗೆ ಸಂಪಾದಿಸಿಕೊಟ್ಟವರು ಪಂಡಿತ ಎಸ್. ಬಸಪ್ಪನವರು. ಇವರ ಕೃತಿ ೧೯೬೦ರಲ್ಲಿ ಪ್ರಕಟವಾಗಿತ್ತು. ಇದು ಅಲಭ್ಯವಾಗಿತ್ತು. ಇದನ್ನು ಗಮನಿಸಿದ ಡಿ.ವಿ.ಪಿಯವರು ಪ್ರಸ್ತುತ ಕೃತಿಯನ್ನು ಆಮೂಲಾಗ್ರವಾಗಿ ಮತ್ತೊಮ್ಮೆ ಸಂಪಾದಿಸಿಕೊಟ್ಟಿದ್ದಾರೆ ಜೊತೆಗೆ ಕವಿ ಕೃತಿಗೆ ಸಂಬಂಧಿಸಿದಂತೆ ಸಾಕಷ್ಟು ಪೂರಕ ಮಾಹಿತಿಗಳನ್ನು ಸಮೃದ್ಧವಾಗಿ ನೀಡಿದ್ದಾರೆ. ಪ್ರಸ್ತಾವನೆಯೇ ನೂರು ಪುಟಗಳನ್ನು ಮೀರಿದೆ. ಇದರಲ್ಲಿ ಉಪಯುಕ್ತ ಮಾಹಿತಿಗಳು ಹೇರಳವಾಗಿವೆ. ಇದಲ್ಲದೇ ಕವಿಗೆ ಸಂಬಂಧಿಸಿದ ಶಾಸನೋಕ್ತ ಮಾಹಿತಿಗಳೆಲ್ಲವನ್ನು ಕೊಟ್ಟಿದ್ದಾರೆ. ಕರ್ನಾಟಕ, ಆಂಧ್ರ ಮತ್ತು ತಮಿಳುನಾಡುಗಳಲ್ಲಿ ದೊರೆತ ಸಂಬಂಧಿಸಿದ ಎಲ್ಲ ಶಾಸನಗಳನ್ನೂ ಮೂಲ ಪಠ್ಯ ಸಮೇತ ವಿವರಣೆಗಳೊಂದಿಗೆ ಕೊಟ್ಟಿರುವುದು ತುಂಬ ಉಪಯುಕ್ತವಾಗಿದೆ. ಪ್ರಸ್ತಾವನೆಯಲ್ಲಿ ವಿಜಯನಗರ ಕಾಲದ ಸಾಹಿತ್ಯಿಕ ಪ್ರೋತ್ಸಾಹದ ಬಗ್ಗೆ ವಿವರವಾಗಿ ಹೇಳಿದ್ದಾರೆ. ಈ ಕೃತಿ ಅರ್ಚನೆಯಾದ ಹಿನ್ನೆಲೆಯ ಕುತೂಹಲಕಾರಿ ಸಂಗತಿಯನ್ನು ದಾಖಲಿಸುತ್ತಾರೆ. ಈ ಎಲ್ಲ ದೃಷ್ಟಿಗಳಿಂದ ಇದು ಸಾಹಿತ್ಯ ಆಸಕ್ತರಿಗೆ ಮಾತ್ರವಲ್ಲದೇ ಇತಿಹಾಸಕ್ತರಿಗೂ ತುಂಬ ಪ್ರಯೋಜನಕಾರಿಯಾಗಿದೆ. ವಿಜಯನಗರ ಕಾಲದಲ್ಲಿ ಉಂಟಾದ ಸಾಹಿತ್ಯ ಮತ್ತು ಧರ್ಮದ ನಂಟು ಯಾವ ಬಗೆಯದು? ಇದರ ಹಿಂಚು – ಮುಂಚುಗಳನ್ನು ವಿವರವಾಗಿ ನೀಡಿದ್ದಾರೆ. ಇದು ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಗಳ ತಿಳಿವಳಿಕೆಗೆ ಅತ್ಯಂತ ಉಪಯುಕ್ತ ಅನಿಸುತ್ತದೆ. ಈ ಕೃತಿಯಲ್ಲಿ ಶಿವತತ್ತತ್ತ್ವ ಚಿಂತಾಮಣಿಯ ಎಲ್ಲ ಐವತ್ತಾ ನಾಲ್ಕು ಸಂಧಿಗಳ ಪೂರ್ಣ ವಿವರಣೆಗಳೊಂದಿಗೆ ಅನುಬಂಧಗಳನ್ನು, ಸಂಕ್ಷೇಪ ಸೂಚಿಯನ್ನು ಕೊಡಲಾಗಿದೆ. ಈ ಎಲ್ಲ ಕಾರಣಗಳಿಂದ ಪ್ರಸ್ತುತ ಕೃತಿ ವಿಶಿಷ್ಟ, ವಿನೂತನ ಅನಿಸುತ್ತದೆ.

ಇತ್ತೀಚಿಗೆ ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ನಡೆಸುವವರು ಹಳಗನ್ನಡ, ಶಾಸನಗಳನ್ನು ಪರಿಶ್ರಮದ ದೃಷ್ಟಿಯಿಂದ ಬೇಕಂತಲೇ ದೂರವಿಡುತ್ತಾರೆ. ಇಂಥ ಸಂದರ್ಭದಲ್ಲಿ ಇವೆರಡು ಕ್ಷೇತ್ರಗಳನ್ನು ಪ್ರೀತಿಯಿಂದ ತಬ್ಬಿಕೊಂಡು ಬೆಳೆಸುವ ಪ್ರಯತ್ನವನ್ನು ನಮ್ಮ ಡಿ.ವಿ.ಪಿ.ಯವರು ಮಾಡುತ್ತಿದ್ದಾರೆ. ಅವರ ಈ ಬಗೆಯ ಕೆಲಸಕ್ಕೆ ಹತ್ತಾರು ಸಂಘಸಂಸ್ಥೆಗಳ ಗೌರವ ಪ್ರಶಸ್ತಿಗಳ ಜೊತೆಗೆ ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ. ಈ ಕೃತಿಯನ್ನು ಅಧ್ಯಯನ ಮಾಡಿದರೆ ಅವರ ಮಡಿಲಿಗೆ ಮತ್ತೊಂದು ಪ್ರಶಸ್ತಿ ಬಂದುಬಿದ್ದರೂ ಅಚ್ಚರಿ ಇಲ್ಲ. ಈ ಕೃತಿಯನ್ನು ಅತ್ಯಂತ ಪ್ರೀತಿ ಮತ್ತು ಶ್ರದ್ದೆಗಳಿಂದ ಪ್ರಕಟಿಸಿದ ತುಮಕೂರಿನ ಜಿ.ಎಸ್.ಎಸ್. ಟ್ರಸ್ಟ್ ಅಭಿನಂದನಾರ್ಹ ಕೆಲಸವನ್ನು ಮಾಡಿದೆ. ಇಂಥ ಮತ್ತಷ್ಟು ಇನ್ನಷ್ಟು ಕೆಲಸಗಳನ್ನು ಪ್ರೊ. ಡಿ.ವಿ.ಪಿ.ಯವರು ಮಾಡಲೆಂಬುದು, ಇವರ ಕೆಲಸ ನವಪೀಳಿಗೆಯ ಸಂಶೋಧಕರಿಗೆ ಉತ್ತೇಜನ ಕೊಡಲಿ ಎಂದಷ್ಟೇ ನಾವು ಹಾರೈಸಬಹುದು. ಇಂಥ ಅಪರೂಪದ ಕೆಲಸಮಾಡಿದ ಪ್ರೊ. ಡಿ.ವಿ.ಪಿ. ಅವರಿಗೆ ಎಲ್ಲ ಒಳಿತೂ ಆಗಲಿ.  


No comments:

Post a Comment