
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 14ನೆಯ ಶತಮಾನದ ಬಾಹುಬಲಿ ಪಂಡಿತನಿಗೆ ವಿಶಿಷ್ಟ ಸ್ಥಾನವಿದೆ. ಈತ ಗೊಮ್ಮಟನಾಥ ಚರಿತೆಯನ್ನು ಸಂಸ್ಕೃತದಲ್ಲೂ ಧರ್ಮನಾಥ ಪುರಾಣವನ್ನು ಕನ್ನಡದಲ್ಲೂ ರಚಿಸಿದ್ದಾನೆ. ಈತನನ್ನು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಉಭಯ ಭಾಷಾ ಕರ್ತೃವೆಂದು ಕರೆಯಲಾಗಿದೆ. ಈತ ಉಭಯ ಭಾಷಾ ಕವಿ ಚಕ್ರವರ್ತಿಯೂ ಹೌದು. ಧರ್ಮನಾಥ ಪುರಾಣದಲ್ಲಿ ತನ್ನ ಕಾಲವನ್ನು ಈತನೇ ಪಂಚಾಂಗದ ರೀತಿಯಲ್ಲಿ ಹೇಳಿಕೊಂಡಿದ್ದಾನೆ. ಇದರಂತೆ ಈ ಕಾಲ ಕ್ರಿ.ಶ. 1352 ಕ್ಕೆ ಸರಿಹೋಗುತ್ತದೆ. ಈತನ ಎರಡು ಕೃತಿಗಳಿಗೆ ಸಂಸ್ಕೃತ ಅಥವಾ ಪ್ರಾಕೃತ ಕೃತಿಗಳು ಮೂಲವಿರಬಹುದೆಂದು ಹೇಳಲಾಗಿದೆ. ಸಂಸ್ಕೃತ ಭಾಷೆಯ ಹರಿಚಂದ್ರನ ಧರ್ಮಾಭ್ಯುದಯ ಕೃತಿಯನ್ನು ಆಧರಿಸಿ ಕನ್ನಡದಲ್ಲಿ ಧರ್ಮನಾಥ ಪುರಾಣವನ್ನು ರಚಿಸಿದ್ದಾನೆ. ಧರ್ಮನಾಥ ಪುರಾಣದಲ್ಲಿ ಬಾಹುಬಲಿ ಪಂಡಿತನು ಆಸಕ್ತಿಕರವಾದ ಸಮಕಾಲೀನ ಜನಜೀವನ ವಿವರವನ್ನು ಕಾಣಿಸುತ್ತಾನೆ. ಈ ಕೃತಿಯಲ್ಲಿ ಬರುವ ಹೆಂಡದ ಅಂಗಡಿಯ ವಿಸ್ತಾರವಾದ ವರ್ಣನೆ ಇದಕ್ಕೆ ಮೂಲ ಎನಿಸಿದ ಉತ್ತರ ಪುರಾಣ ಮತ್ತು ಚಾವುಂಡರಾಯ ಪುರಾಣಗಳಲ್ಲಿ ಕಾಣಿಸುವುದಿಲ್ಲ. ಅದೇ ರೀತಿ ಪ್ರಸ್ತುತ ಕಾವ್ಯದಲ್ಲಿ ಶೃಂಗಾರ ವರ್ಣನೆಯನ್ನು ಕೂಡ ಅತ್ಯಂತ ರಸಭರಿತವಾಗಿ ವರ್ಣಿಸುತ್ತಾನೆ. ಒಟ್ಟಿನಲ್ಲಿ ವರ್ಣನೆ ಎಂದರೆ, ಬಾಹುಬಲಿ ಪಂಡಿತನಿಗೆ ಇನ್ನಿಲ್ಲದ ಪ್ರೀತಿ. ರೂಪಕ ಪ್ರತಿಮೆಗಳನ್ನು ಬಳಸಿ ಕೆಲಮೊಮ್ಮೆ ಅವಿಲ್ಲದೆ ಶಬ್ಧ ಚಿತ್ರದಲ್ಲಿ ಎಲ್ಲ ವರ್ಣನೆಯನ್ನು ಕಟ್ಟಿಕೊಡುತ್ತಾನೆ. ಉದಾಹರಣೆಗೆ;
“ಪಿಂದೆ ಕುಳ್ಳಿರ್ದ ದೇವಿಯ
ನಂದು ನೃಪಾಳಂ ಮಲಂಗೆ ಕಳಶಕುಚಂಗಳ್
ಸಂಧಿಸೆ ಬೆನ್ನಂ ಸೋಂಕಲ್
ಕುಂದದ ಸುಖದಿಂದಮೊಂದಿ ತಣ್ಣನೆ ತಣಿದಂ” (14-50)
ಈ ಸಾಲುಗಳಲ್ಲಿ ದಣಿದ ರಾಜ ತನ್ನ ಪತ್ನಿಗೆ ಒರಗಿದ ಒಂದು ಸಣ್ಣ ಚಿತ್ರಣವನ್ನು ಶೃಂಗಾರಾತ್ಮಕವಾಗಿ ಕವಿ ವರ್ಣಿಸಿದ ರೀತಿ ಅನನ್ಯವಾಗಿದೆ. ಇದೇ ರೀತಿ
"ಹಿಡಿಯೊಳಡಂಗಿ ತೋರ್ಪ ನಡು ವೃತ್ತಕುಚಂಗಳ ಭಾರದಿಂ ಕರಂ
ನಡುಗೆ ನಿತಂಬಭಾಗ ಘನಭಾರದೆ ಮೆಲ್ಲನೆ ಗುಜ್ಜು ಮೆಟ್ಟತುಂ
ನಡೆವಡಿಗಳ್ ಪರಿಸ್ಖಳಿಸಿ ಭೂತಳಪಾಲನ ಪಿಂದುಗೊಂಡು ಕೈ
ವಿಡಿದು ಪರಸ್ಪರಂ ನಡೆದು ಬಂದುದು ವಿಶ್ವವಿಳಾಸಿನೀಕುಳಂ” (14-66)
ಹೀಗೆ ಧರ್ಮನಾಥ ಮಹಾರಾಜನ ವಿವಿಧ ಪ್ರಸಂಗಳ ವರ್ಣನೆಯನ್ನು ಮನತಣಿಯುವಂತೆ ಮಾಡುತ್ತಾನೆ. ಕವಿಯ ಕವಿತಾ ಸಾಮಥ್ರ್ಯ ಈತ ಬಳಸುವ ವೀಕ್ರೀಡಿತಗಳು, ಸ್ರಗ್ಧರೆ, ಮಹಾಸ್ರಗ್ಧರೆ, ಮಾಲಾ ಮತ್ತು ವಿಕ್ರೀಡಿತಗಳು ಹಾಗೂ ಕಂದಪದ್ಯಗಳಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಉದಾಹರಣೆಗೆ ಮೇಲ್ಕಂಡ ಪದ್ಯ ಭಾಗಗಳನ್ನು ಗಮನಿಸಬಹುದು.
ಇದು ಬಾಹುಬಲಿ ಪಂಡಿತನ ಸ್ವತಃ ವಿವರಣೆ. ತನ್ನ ಕಾಲದ ಜೀವನವನ್ನು ಇಲ್ಲಿ ಕವಿ ಚಿತ್ರಿಸುತ್ತಾನೆ. ಇದರಲ್ಲಿ ವಿಕ್ರಮಾರ್ಜುನ ವಿಜಯ ಕೃತಿಯಲ್ಲಿ ಅರ್ಜುನನ್ನು ಪಂಪ ಊರೆಲ್ಲ ಸುತ್ತಿಸಿ ಸೂಳೆಗೇರಿ ಇತ್ಯಾದಿಗಳನ್ನು ವಿವರಿಸುವ ಪ್ರಬಾವ ದಟ್ಟವಾಗಿ ಕಾಣಿಸುತ್ತದೆ. ಹಾಗೆ ನೋಡಿದರೆ ಈ ಬಗೆಯ ಚಿತ್ರ ಪಂಪನನ್ನು ಬಿಟ್ಟರೆ ವಿಸ್ತಾರವಾಗಿ ಕಾಣಿಸುವುದು ಬಾಹುಬಲಿ ಪಂಡಿತನಲ್ಲಿಯೇ. ಈ ಕೃತಿಯ 134- 137ರ ವರೆಗಿನ ಪದ್ಯಗಳು ಈ ಬಗೆಯ ಚಿತ್ರಣವನ್ನು ವಿಸ್ತಾರವಾಗಿ ಕೊಡುತ್ತವೆ. ಹೆಂಡದ ಅಂಗಡಿಯ ಸಮಗ್ರ ಚಿತ್ರಣವನ್ನು ಕಣ್ಣು ಕಟ್ಟುವಂತೆ ಚಿತ್ರಿಸುತ್ತಾನೆ; ಉದಾಹರಣೆಗೆ ವಿಟ ಮತ್ತು ಸೂಳೆಯರ ವರ್ತನೆಯನ್ನು ಪದ್ಯವೊಂದರಲ್ಲಿ ಚಿತ್ರಿಸುತ್ತಾನೆ.
"ರವಿಬಿಂಬಂ ಪ್ರತಿಬಿಂಬಿಸಿರ್ದದರೊಳಂ ತೋರುತ್ತಿರಲ್ ಕಂಡು ಮ
ದ್ಯಮನಾಸ್ವಾದಿಸುತಿರ್ದವಳ್ ಬೆದರ ಕಂಪಂಗೊಂಡು ನೀನಾರೊ ಮಾ
ನವನೋ ದೈವನೋ ಪೇಳುಪೇಳೆನಗೆನುತ್ತುಂ ಪೋಗುಪೋಗೆಂದು ಡೊಂ
ಗುವ ಕೈಯಂ ಮಿಗೆ ನೀಡಿ ಮತ್ತೆ ಬಲಿದೌಡಂ ಕಚ್ಚುತಂ ನೂಂಕಿದಳ್” (10-135)
ಇದರಲ್ಲಿ ಕುಡುಕರ ವರ್ತನೆ ಅತ್ಯಂತ ಸುಂದರವಾಗಿ ಮೂಡಿಬಂದಿದೆ. “ಪದ್ಯ 136ರ ಅನಂತರದಲ್ಲಿನ ವಚನದಲ್ಲಿ ‘ಕಳ್ಳಂಕುಡಿಯಡಗಂ ತಿಂದದರಮಹಿಮೆಯಂ ಮೆಚ್ಚಿಬಿಚ್ಚತಂ ನಡಿದೊರ್ವರ್ವರ ನಗೆಮೊಗಮಂ ನೋಡಿ’ ಎಂದು ಇದೆ.
ಬಾಹುಬಲಿ ಪಂಡಿತ ಒಬ್ಬ ಯತಿ. ಯತಿಗೆ ನಿಷಿದ್ಧ ಎಂದು ಈಗ ನಾವೆಲ್ಲ ಭಾವಿಸಿದ ಗ್ರಹಿಕೆಗೆ ವಿರುದ್ಧವಾದ ಚಿತ್ರಣವನ್ನು ಕೊಡುತ್ತಾನೆ. ನಿಜವಾಗಿ ಸಂನ್ಯಾಸಿಯಾದವನಿಗೆ ಇಡೀ ಲೋಕದ ಜನಜೀವನದ ನೇರ ಅನುಭವ ಸಹಜವಾಗಿ ಇರುತ್ತಿತ್ತು. ಆತ ಸದಾ ಕಾಲ ಜನರೊಂದಿಗೆ ಇದ್ದು ಲೋಕ ಸುತ್ತುತ್ತಾ ಜೀವನವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಆನಂತರ ಬದುಕಿನ ಅಂತ್ಯಭಾಗದಲ್ಲಿ ಸಂನ್ಯಾಸಿಯಾಗುತ್ತಿದ್ದ. ಇಷ್ಟರಲ್ಲಿ ಮನುಷ್ಯ ಜೀವನದ ಎಲ್ಲ ಬಗೆಯ ಸಹಜ ಅನುಭುವಗಳು ಅವನಿಗೆ ಆಗಿರುತ್ತಿದ್ದವು ಮತ್ತು ಲೋಕದ ಬಗ್ಗೆ ಯಾವ ಆಸಕ್ತಿಯೂ ಉಳಿದಿರುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಆತ ವೈರಾಗ್ಯ ಹೊಂದುವುದು ಕಷ್ಟವಾಗುತ್ತಿರಲಿಲ್ಲ. ಬಹುಶಃ ಬಾಹುಬಲಿ ಯತಿ ಈ ಬಗೆಯ ಮಾಗಿದ ವ್ಯಕ್ತಿತ್ವ ಉಳ್ಳವನಾಗಿರಬೇಕು ಎಂಬುದು ಇವನು ಮಾಡುವ ಬದುಕಿನ ವಿವಿಧ ಸನ್ನಿವೇಶಗಳ ವರ್ಣನೆಗಳಿಂದ ಊಹಿಸಲು ಸಾಧ್ಯವಿದೆ. ಈತ ಮನುಷ್ಯ ಜೀವನ ಮಾತ್ರವಲ್ಲದೆ ಪರಿಸರವನ್ನು ಕೂಡ ಅಷ್ಟೇ ಪ್ರೀತಿಯಿಂದ ಮುಕ್ತವಾಗಿ ಚಿತ್ರಿಸುತ್ತಾನೆ. ಪರಿಸರ ಅಥವಾ ನಿಸರ್ಗದ ಸನ್ನಿವೇಶವನ್ನು ಮನುಷ್ಯ ಜೀವನಕ್ಕೆ ಅನ್ವಯಿಸಿ ವಿವರಿಸುವುದರಲ್ಲಿ ಬಾಹುಬಲಿ ಪಂಡಿತ ನಿಜಕ್ಕೂ ಇತರ ಕವಿಗಳಿಂದ ಭಿನ್ನವಾಗಿ ನಿಲ್ಲುತ್ತಾನೆ. ಒಬ್ಬ ಸಂನ್ಯಾಸಿ ನಿಜವಾಗಿ ಮನುಷ್ಯ ಜೀವನವನ್ನು ಹೇಗೆ ನೋಡುತ್ತಾನೆ ಎಂಬುದು ಬಾಹುಬಲಿ ಪಂಡಿತನ ಕಾವ್ಯದಿಂದ ಸ್ಪಷ್ಟವಾಗಿ ಕಂಡುಬರುತ್ತದೆ. ಬಾಹುಬಲಿ ಪಂಡಿತ ಸಂಸ್ಕೃತ ಸಾಹಿತ್ಯಲೋಕದಲ್ಲಿ ಕಾಣಿಸುವ ವಾತ್ಸ್ಯಯನ ಮುನಿಯಂತೆ ಮುಕ್ತವಾಗಿ ಜೀವನವನ್ನು ಕಂಡುಂಡು ಅದನ್ನು ಚಿತ್ರಿಸುತ್ತಾನೆ. ಹೀಗಾಗಿ ಯತಿಧರ್ಮ ನಿಜವಾಗಿ ನಿತ್ಯಜೀವನಕ್ಕೆ ವಿರುದ್ಧವಾದುದಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ. ಆದರೆ ಸಂನ್ಯಾಸಿ ಅಥವಾ ಯತಿ ನಿಯಮಗಳು ನಮ್ಮ ಸಮಾಜದಲ್ಲಿ ಅನಂತರ ಸೇರಿಕೊಂಡಿವೆ ಅನಿಸುತ್ತದೆ. ನಿಜವಾಗಿ ಯತಿಗೆ ಬದುಕಿನ ಎಲ್ಲ ಬಗೆಯ ಅನುಭವಗಳೂ ಇರಬೇಕಾಗುತ್ತದೆ. ಈತ ಬಹುಶಃ ಈ ಹಿನ್ನೆಲೆಯಲ್ಲಿಯೇ ಇಂಥ ಚಿತ್ರಣವನ್ನು ಕೊಟ್ಟಿದ್ದಾನೆ. ಏನೇ ಆದರೂ ಬಾಹುಬಲಿ ಪಂಡಿತ ಕಟ್ಟಿಕೊಡುವ ಈ ಬಗೆಯ ಚಿತ್ರಣ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ರೀತಿಯ ಜೀವನಾನುಭವವನ್ನು ತೋರಿಸಿಕೊಟ್ಟಿದೆ. ಚಾರಿತ್ರಿಕವಾಗಿಯೂ ಇದು ಗಮನಾರ್ಹ ಅನಿಸುತ್ತದೆ.
No comments:
Post a Comment