Wednesday, 14 June 2023

4. ಸದಾ ಕಾಡುವ ಅಪ್ಪನ ನೆನಪು – ೪


ಊರಿಗೆ ಶಾಲೆ ಬಂದುದು

ಅದು ೧೯೬೦ರ ದಶಕ. ಊರಿಗೆ ಸರ್ಕಾರಿ ಶಾಲೆ ಬರಬೇಕೆಂದು ಊರಜನ ಸರ್ಕಾರಕ್ಕೆ ಕೋರಿದ್ದರು. ಆದರೆ ಶಾಲೆಗೆ ಸೂಕ್ತವಾದ ಸರ್ಕಾರಿ ಜಾಗ ಇರಲಿಲ್ಲ ಊರಲ್ಲಿ ಸಾಕಷ್ಟು ಜಮೀನು ಇದ್ದ ದೊಡ್ಡ ಕುಳಗಳು ಜಾಗ ಕೊಡಲು ಮುಂದಾಗಲಿಲ್ಲ. ಹೀಗಾಗಿ ಶಾಲೆ ಬರುವ ಸಾಧ್ಯತೆ ಇಲ್ಲವಾಗತೊಡಗಿತು. ಅಪ್ಪ ಅವನ ಕಾಲದಲ್ಲಿ ೩-೪ನೆಯ ಇಯತ್ತೆ ಪಾಸು ಮಾಡಿಕೊಂಡಿದ್ದ. ಶಿಕ್ಷಣದ ಬಗ್ಗೆ ಅವನಿಗೆ ಆಪಾರ ಕಾಳಜಿ ಇತ್ತು ಊರ ಮಕ್ಕಳು ಹತ್ತಾರು ಮೈಲಿ ದೂರ ನಡೆದು ಕಷ್ಟಪಟ್ಟು ಮಳೆ ಬಿಸಿಲಲ್ಲಿ ಶಾಲೆಗೆ ಹೋಗುವ ಬಗ್ಗೆ ಆಗಾಗ ಅನುಕಂಪ ತೋರುತ್ತಿದ್ದ. ಊರಿಗೆ ಶಾಲೆ ಬರುವ ಬಗ್ಗೆ ಅವನಿಗೆ ಖುಷಿ ಇತ್ತು. ಆದರೆ ಪರಿಸ್ಥಿತಿ ಹೀಗಾದ ಬಗ್ಗೆ ಸಿಟ್ಟು ಬಂದಿತ್ತು. ಈಗ ತಡಮಾಡದೆ ತನ್ನ ಮಾಲಕಿಯಲ್ಲಿದ್ದ ೧೦ ಎಕರೆ ಅರಣ್ಯ ಭೂಮಿಯಲ್ಲಿ ಸುಮಾರು ಒಂದೆರೆಡು ಎಕರೆ ಜಾಗವನ್ನು ಶಾಲೆಗೆ ಕೊಡಲು ನಿರ್ಧರಿಸಿದ. ಆನಂತರ ಅದೇ ಜಾಗದಲ್ಲಿ ಶಾಲೆ ಆಟದ ಮೈದಾನ ನಿರ್ಮಾಣವಾಗಿ ಈಗಲೂ ಚೆನ್ನಾಗಿ ನಡೆಯುತ್ತಿದೆ. ಅಪ್ಪನ ಕಾಳಜಿ ಇಷ್ಟಕ್ಕೆ ನಿಲ್ಲುತ್ತಿರಲಿಲ್ಲ ತುಂಬಾ ದೂರದ ಊರಿನಿಂದ ಬರುತ್ತಿದ್ದ ಮಕ್ಕಳನ್ನು ನಮ್ಮ ಮನೆಯಲ್ಲೇ ಉಳಿದು ಶಾಲೆಗೆ ಹೋಗುವಂತೆ ಮಾಡುತ್ತಿದ್ದ. ಶಾಲೆ ನಮ್ಮ ಮನೆಯ ಹಿಂದೆಯೇ ಇದ್ದ ಕಾರಣ ಮಕ್ಕಳ ಪಾಲಕರು ಸಂತೋಷದಿಂದ ಮಕ್ಕಳನ್ನು ಬಿಟ್ಟುಹೋಗುತ್ತಿದ್ದರು. ಹೀಗೆ ಏಳನೆಯ ತರಗತಿವರೆಗೆ ಇದ್ದ ಶಾಲೆಯಲ್ಲಿ ಓದುತ್ತಿದ್ದ ಅನೇಕ ಮಕ್ಕಳು ನಮ್ಮ ಮನೆಯಲ್ಲೇ ಊಟ ವಸತಿ ಮಾಡಿಕೊಂಡಿದ್ದವು.  ನಾವು ಅಪ್ಪನಿಗೆ ಏಳು ಮಕ್ಕಳು ಆಗಲೇ ಮನೆ ತುಂಬಿಕೊಂಡಿದ್ದೆವು. ನಿಮ್ಮ ಜೊತೆ ಇವೂ ಓದಿಕೊಂಡಿರುತ್ತವೆ ನೀವು ಚೆನ್ನಾಗಿ ಓದಿ ಜೀವನ ಮಾಡಿಕೊಳ್ಳಿ ಎಂದು ಫರ್ಮಾನು ಹೊರಡಿಸಿದ. ಪ್ರತಿ ವರ್ಷ ಇದೇ ಕತೆ ಮುಂದುವರೆಯುತ್ತಿತ್ತು. ನಾನು ೭ರ ವರೆಗೆ ಅಲ್ಲಿ ಓದಿ ಮುಂದೆ ಓದಲು ಊಟ-ವಸತಿ ವ್ಯವಸ್ಥೆಯ ಕಾರಣಕ್ಕೆ ಮೈಸೂರು ಸೇರಿದೆ. ಅಲ್ಲಿ ಹೇಗೋ ಅನೇಕರ ನೆರವಿನಿಂದ ಓದಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕಗಳನ್ನು, ಮೊದಲ ರ‍್ಯಾಂಕನ್ನು ಪಡೆದೆ. ಆಗ ಅಪ್ಪನ ಸಂಭ್ರಮ ಮೇರೆ ಮೀರಿತ್ತು. ಆ ಪದಕಗಳನ್ನು ಹಿಡಿದು ಇದು ನಿಜಕ್ಕೂ ಚಿನ್ನದ್ದಾ ಅನ್ನುತ್ತಾ ಹಿಂದೆ-ಮುಂದೆ ತಿರುಗಿಸಿ ಮತ್ತೆ ಮತ್ತೆ ನೋಡಿದ್ದ, ಅಲ್ಲ ಅದರಲ್ಲಿ ಕೇವಲ ಒಂದು ಗ್ರಾಂ ಚಿನ್ನವಿರುತ್ತದೆ ಉಳಿದಂತೆ ಲೇಪ ಅಂದೆ. ಏನೇ ಆಗಲಿ ನೀನು ಓದಿ ಇಷ್ಟು ಸಾಧಿಸಿದೆಯಲ್ಲ ಖುಷಿಯಾಯಿತು. ನಿನಗೇನು ಬೇಕು ಕೇಳು ಅಡಕೆ ಮಾರಿದ ಹಣವಿದೆ ಅಂದ. ರೇಡಿಯೋ ಕೇಳುವ ಹುಚ್ಚು ಹತ್ತಿದ್ದ ನಾನು ಒಂದು ಒಳ್ಳೆಯ ಟು ಇನ್ ಒನ್ ಟೇಪ್ ರೆಕಾರ್ಡರ್‌ಗೆ ಬೇಡಿಕೆ ಇಟ್ಟೆ. ನಡಿ ಎನ್ನುತ್ತಾ ಪೇಟೆಗೆ ಹೊರಟೇಬಿಟ್ಟ. ಒಂದು ದೊಡ್ಡ ಅಂಗಡಿಯ ಮುಂದೆ ನಿಲ್ಲಿಸಿ ಇದೇ ರೇಡಿಯೋ ಅಂಗಡಿ ನಡಿ ಅಂದ. ಒಳಹೋಗಿ ಯಜಮಾನನ ಬಳಿ ಇವನು ನನ್ನ ಮಗ ಶಾಲೆಯಲ್ಲಿ ಬಂಗಾರದ ಪದಕ ತೆಗೆದುಕೊಂಡಿದ್ದಾನೆ. ಒಂದು ಉಂಛಾ ರೇಡಿಯೋ ಕೊಡಿ ಅಂದ. ಚೌಕಾಸಿ ಮಾಡಿದ ಮೇಲೆ ಯಜಮಾನ ತನ್ನ ಅಂಗಡಿಯಲ್ಲಿದ್ದ ಆ ಕಾಲದ ಅತೀ ದುಬಾರಿ ಅನಿಸುವ ಏಳುವರೆ ಸಾವಿರದ ರೇಡಿಯೋ, ಟೇಪ್‌ರೇಕಾರ್ಡರ್ ಕೊಟ್ಟ. ಇಷ್ಟೇ ಸಾಕ ಎಂದು ಅಪ್ಪ ಕೇಳಿದ. ತಲೆಯಾಡಿಸಿದೆ. ಆದರೆ ಒಂದು ಮಾತು ನೀನು ಪದಕಗಳನ್ನ ನನಗೆ ಕೊಟ್ಟು ಹೋಗಬೇಕು ಅಂದ ಆಯಿತೆಂದೆ. ಅದನ್ನು ಆತ ಬಂಧು-ಬಾಂಧವರಿಗೆಲ್ಲ ಹೆಮ್ಮೆಯಿಂದ ತೋರಿಸುತ್ತಿದ್ದ. ಆದರೆ ಅವರೆಲ್ಲ ಇದು ನಿಜವಾದ ಚಿನ್ನವಲ್ಲವೆಂದು ಮೂಗು ಮುರಿಯುತ್ತಿದ್ದರು. ಮಗನ ಸಾಧನೆ ಇವರಿಗೆ ಕಾಣುತ್ತಿಲ್ಲವೆಂದು ಬೇಸರಿಸಿಕೊಳ್ಳುತ್ತಿದ್ದ. ನನಗೂ ರೋಸಿ ಹೋಗಿತ್ತು. ಪದಕಗಳನ್ನು ವಾಪಸ್ಸು ಕೊಡುವಂತೆ ಕೇಳಿದೆ.

ಮನೆಯ ಗದ್ದೆ-ತೋಟದ ಕೆಲಸಕ್ಕೆ ಗಂಡು-ಹೆಣ್ಣಾಳುಗಳು ಬರುತ್ತಿದ್ದರು. ಇವರಲ್ಲಿ ಕೆಲವು ಜೋಡಿಗಳು ಇರುತ್ತಿದ್ದರು. ಒಂದು ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅನ್ಯೋನ್ಯವಾಗಿದ್ದರು. ಆತ ಸರಿಯಾಗಿ ಊಟ-ತಿಂಡಿ ಮಾಡದೆ ಕುಡಿತ ಬೇರೆ ಹಚ್ಚಿಕೊಂಡಿದ್ದ. ಆಕೆ ದಷ್ಟ-ಪುಷ್ಟವಾಗಿ ಚನ್ನಾಗಿದ್ದಳು. ಆತ ಒಂದೆರಡು ದಿನ ಯಾರದೋ ಜೊತೆ ಹೊರಗೆ ಹೋಗಿದ್ದ ಎಂಬುದನ್ನು ತಿಳಿದ ಆಕೆ ತಕರಾರು ಎತ್ತಿದ್ದಳು. ಈತ ಕೂಡ ಏನೋ ಕಿರುಚುತ್ತಿದ್ದ. ಗದ್ದಲ ಜೋರಾದಾಗ ಅಪ್ಪ ಅದೇನೆಂದು ನೋಡಲು ಹೋದ. ಆಕೆ ನೋಡಿ ಒಡೆಯ ಇವ ಆಚೆ ಕೇರಿ ಸುಕ್ರಿ ಸಂಗ್ತಿ ಓಡಾಡ್ತ. ಕೇಳಿದರೆ ಜೋರು ಮಾಡ್ತಾ ಅಂದಳು. ಆತ ಪ್ರತಿಯಾಗಿ ಸುಳ್ಳು ಹೇಳುತ್ತಾಳೆ ನಾನು ಇವಳನ್ನು ಮದುವೆಯಾಗುವ ಮೊದಲಿನಿಂದ ಇದ್ದ ಸಂಬಂಧ ಅದು. ಈಗ ಹೇಗೆ ಬಿಡೋದು, ಆದರೆ ಇವಳು ಆಚೆ ಮನೆಯವನ ಸಂಗ್ತಿ ಹೋಗಿ ಸೀರೆ ತಗೊಂಡು ಬಂದಿದ್ದಾಳೆ ಎಂದ. ಆಕೆ ಸಿಟ್ಟಿನಿಂದ ನಮ್ಮ ಮದಿಯಾಗಿ ಹತ್ತು ವರ್ಷವಾಯಿತು. ಒಂದಾದರೂ ಇಷ್ಟು ಚೊಲೊ ಸೀರೆ ಕೊಡಿಸಿದ್ದಾನಾ ಪಾಪ ಆಚೆ ಮನೆಯವ ವರ್ಷದಿಂದ ಕರೀತ್ತಿದ್ದ ಒಂದೆರಡು ದಿವಸ ಹೋಗಿ ಬಂದೆ ಒಳ್ಳೆ ಸೀರೆ ಕೊಟ್ಟ ಅಷ್ಟೇ. ನಾನೇನು ಇವನನ್ನ ಬಿಟ್ಟು ಹೋದ್ನ ಅವನಿಗೆ ಏನು ಕಡಿಮೆ ಮಾಡಿದ್ದೇನೆ ಹೇಳಿ ಅಂದಳು. ಆತ ನಾನು ಸುಕ್ರಿ ಜೊತೆ ಹೋದರೂ ಮತ್ತೆ ಈ ಹಾಳಾದವಳನ್ನು ಹುಡುಕಿ ಬಂದಿಲ್ವ ಅಂದ. ಇದ್ಯಾಕೋ ಮುಗಿಯುವ ಕತೆಯಲ್ಲ ಎಂದು ಅಪ್ಪನಿಗೆ ಅನಿಸಿ ಒಬ್ಬರಿಗೊಬ್ಬರು ಸರಿ ಇದ್ದೀರಿ ಮತ್ಯಾಕೆ ಜಗಳ ಅಂದ. ಅಷ್ಟೇಯ ಅನ್ನುತ್ತಾ ಅವರಿಬ್ಬರು ಅತ್ತ ತಿರುಗಿದರು. ಅವರಿಬ್ಬರ ಅನ್ಯೋನ್ಯತೆ ಕಂಡಾಗ ಗಂಡ-ಹೆಂಡಿರ ನಡುವಿನ ಜಗಳ ಗಂಧ ತೀಡಿದಾಂಗ ಎನ್ನುವ ಜನಪದ ಮಾತು ನೆನಪಾಗುತ್ತದೆ.

No comments:

Post a Comment