ಇಲ್ಲಿ ಇವರು ಬಳಸುತ್ತಿರುವ 'ಧರ್ಮ' ಅನ್ನುವುದು ರಿಲಿಜನ್ ಎಂಬುದರ ಕೆಟ್ಟ ಅನುವಾದ. ರಿಲಿಜನ್ ಎಂದಿಗೂ ಧರ್ಮವಾಗಲು ಸಾಧ್ಯವಿಲ್ಲ. ಅದಕ್ಕೂ ಇದಕ್ಕೂ ಪರಿಕಲ್ಪನಾತ್ಮಕ ಅರ್ಥವ್ಯತ್ಯಾಸಗಳಿವೆ. ಧಾರಯತಿ ಇತಿ ಧರ್ಮಃ ಏನನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಲಾಗುತ್ತದೆಯೋ ಅದು ಧರ್ಮ ಎಂದು ಸರಳ ಅರ್ಥ. ಸಂಕೀರ್ಣ ಅರ್ಥಗಳು ಅಗೆದಷ್ಟೂ ಇವೆ. ರಿಲಿಜನ್ ಹಾಗಲ್ಲ. ಅದಕ್ಕೊಬ್ಬನೇ ದೇವ/ದೇವದೂತನಿರತಕ್ಕದ್ದು, ಒಂದೇ ಗ್ರಂಥ ಇರತಕ್ಕದ್ದು, ಅದು ಹೇಳುವ ಸೂತ್ರ ಬಿಟ್ಟು ಮತ್ತೇನೂ ಮಾಡಕೂಡದು ಇತ್ಯಾದಿ ವಿಪರೀತ ಷರತ್ತುಗಳು ರಿಲಿಜನ್ನಿಗೆ ಅನ್ವಯ. ಭಾರತದ ಸನಾತನ ಜೀವನದ ಸಂಪ್ರದಾಯ ಮತ್ತು ಆಚರಣೆಗಳನ್ನು ಕಂಡ ಪರಕೀಯ ಇಂಡಾಲಜಿಸ್ಟರು ಭಾರತದ ಭೂ ಪ್ರದೇಶದಲ್ಲಿದ್ದ ತಮಗೆ ಪರಕೀಯವಾಗಿದ್ದ ಇಲ್ಲಿನ ಆಚರಣೆ/ಸಂಪ್ರದಾಯ/ಪದ್ಧತಿಗಳಗನ್ನು ಒಂದು ಧರ್ಮ ಎಂದೂ ಅವನ್ನು ಅನುಸರಿಸುವ ಜನರನ್ನು 'ಹಿಂದೂ' ಎಂದೂ ದಾಖಲಿಸಿ ಹಣೆಪಟ್ಟಿಹಚ್ಚಿದರು. ರಿಲಿಜನ್ ಅನ್ನುವುದು ಅನುವಾದವಾಗಿ ಧರ್ಮವಾಗಿ ಪ್ರಚಲಿತವಾಯಿತು. ರಿಲಿಜನ್ನಿನ ದೃಷ್ಟಿಯಲ್ಲಿ 'ಹಿಂದೂ' ವನ್ನು ವಿಶ್ಲೇಷಿಸಲು ಸಾಧ್ಯವೇ ಇಲ್ಲ. ದಾರಿಯಲ್ಲಿ ಹೋಗುವ ಭಿಕ್ಷುಕನೊಬ್ಬ 'ಅಮ್ಮಾ ತಾಯೀ, ಧರ್ಮ ಮಾಡಿ' ಅಂದರೆ ರಿಲಿಜನ್ನ್ ಮಾಡಿ!! ಅಂದುಕೊಳ್ಳಲಾಗದು. ಹೀಗಾಗಿಯೇ ಧರ್ಮಕ್ಕೂ ರಿಲಿಜನ್ನಿಗೂ ಸಂಬಂಧವೇ ಇಲ್ಲ.
ನಿಜವಾಗಿ ಭಾರತದ ಸಂಪ್ರದಾಯಗಳು ಹುಟ್ಟು-ಜೀವನ-ಸಾವುಗಳನ್ನು ಮೀರಿದ ಮತ್ತೊಂದು 'ಶಾಶ್ವತ ಆನಂದ'ದ ಮಾರ್ಗವನ್ನು ತೋರಿಸುತ್ತವೆ. ಇವೆಲ್ಲ ವಿಭಿನ್ನ ಪಥಗಳು. ಅವುಗಳ ಉದ್ದೇಶ ಮಾತ್ರ ಒಂದೇ. ಹಾಗಾಗಿಯೇ ಅಲ್ಲಿ ಜಾತಿ, ಕುಲ, ವೃತ್ತಿ, ಸಿರಿತನ, ಬಡತನ ಇತ್ಯಾದಿ ಜೀವನದ ತೀರ ಸಾಮಾನ್ಯ 'ಸಂಕಟ' 'ಅಂತರ'ಗಳಿಗೆ ಜಾಗವಿಲ್ಲ. ಅಲ್ಲಿ ಬೇಕಿರುವುದು ಸಾಧನೆ ಮಾತ್ರ. ಆದ್ದರಿಂದ ವೇದಗಳಲ್ಲೂ ವಚನಗಳಲ್ಲೂ ದಾಸರ ಕರ‍್ತನೆಗಳಲ್ಲೂ ಮಾದೇಶ್ವರ-ಮಂಟೇಸ್ವಾಮಿ ಸಂದೇಶಗಳಲ್ಲೂ ಯಾವುದೇ ರಿಲಿಜನ್ನಿನ ನೈಜ ಸಂದೇಶಗಳಲ್ಲೂ ಇಂಥವೆಲ್ಲ ತೀರಾ ಸಾಮಾನ್ಯ ಸಂಗತಿಗಳು. ಈ ವಾಸ್ತವ ಅರಿವಾದರೆ ತಮ್ಮದು ಆ ರಿಲಿಜನ್ನು, ನಮ್ಮದು ಈ ಧರ್ಮ, ನಮ್ಮದೇ ಶ್ರೇಷ್ಠ, ನಾವ್ ಬೇರೆ ನೀವ್ ಬೇರೆ ಇತ್ಯಾದಿ ಮಾತುಗಳಿಗೆ ಜಾಗವೇ ಇರುವುದಿಲ್ಲ. ಬಸವಣ್ಣ ಹೇಳಿದ್ದೂ ಇದೇ. ಆದರೆ-ರಿಲಿಜನ್ನಿನ ಸೀಮಿತ ಧರ್ಮದಲ್ಲೇ ತಮ್ಮ 'ಧರ್ಮ'ವನ್ನು ಗ್ರಹಿಸಿದ 'ಲಿಂಗಾಯತರು' ನಾವ್ ಬೇರೆ ನಮ್ಮ ಧರ್ಮವೇ ಬೇರೆ ಅಂತಿದ್ದಾರೆ!
ಇವರ ಇಂಥ ಧೋರಣೆಗೂ ಸೆಕ್ಯುಲರ್ ವಾದಿಗಳಿಗೂ ಏನೂ ವ್ಯತ್ಯಾಸವಿಲ್ಲ. ಲಿಂಗಾಯತರಲ್ಲಿ ೭೧ಕ್ಕೂ ಮಿಕ್ಕ ವಿವಿಧ ಜಾತಿಗಳಿವೆ ಎಂದು ಹೇಳಲಾಗುತ್ತದೆ. ಇವನ್ನೆಲ್ಲ ಬಸವಣ್ಣ ಒಂದು ಮಾಡಿ ಎಲ್ಲರಿಗೂ ಸಮಾನತೆ ನೀಡಲು ಯತ್ನಿಸಿದ್ದ ಎಂದು ಸೆಕ್ಯುಲರ್ ವಾದಿಗಳು ಹೇಳುತ್ತಾರೆ. ನಾವು ಲಿಂಗಾಯತರು ಬೇರೆ ಅನ್ನುವ ಬಹುತೇಕ ಲಿಂಗಾಯತ ಸ್ವಾಮಿಗಳೂ ಹೀಗೇ ವಾದಿಸುತ್ತಾರೆ. ಆಯ್ತು ಆದರೆ, ೧೨ನೆಯ ಶತಮಾನದಿಂದ ಈ ಎಲ್ಲ ಜಾತಿಗಳು ಲಿಂಗ ಕಟ್ಟಿಕೊಂಡು ‘ಸಮಾನ’ರಾದರೂ 'ಸ್ವಂತದ' ಜಾತಿಯನ್ನು ಇನ್ನೂ ಉಳಿಸಿ ಬೆಳೆಸಿಕೊಂಡು ಬರಲು ಕಾರಣವೇನು ಅನ್ನುವ ಪ್ರಶ್ನೆಗೆ ಬಹುಶಃ ಅವರು 'ಅದಕ್ಕೆ ಪುರೋಹಿತಶಾಹಿ ಕಾರಣ' ಅನ್ನಬಹುದಷ್ಟೆ! ಭಾರತೀಯ ಸಮಾಜದ ಸಂಕರ‍್ಣತೆ ಇರುವುದೇ ಇಂಥ ಸ್ವಂತಿಕೆಗಳಲ್ಲಿ.
ಲಿಂಗಾಯತ ಬೇರೆ ಅನ್ನುವುದಕ್ಕೆ ಕಾರಣವೂ ಇದೆ. ೧೯೧೦ರ ಜನಗಣತಿ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿ ವೀರಶೈವರನ್ನು ಪ್ರತ್ಯೇಕ ರಿಲಿಜನ್ನಿನಲ್ಲಿ ಗುರುತಿಸಿ ಮೊದಲು ಒಡೆದ! ಹಾಗೆ ನೋಡಿದರೆ ಯೂರೋಪಿನ ಮಾನವಶಾಸ್ತ್ರಜ್ಞರಿಗೆ ‘ಒಡೆಯುವುದು, ಒಡೆದು ನೋಡುವುದು, ಆಗ ತಮಗೆ ಅನಿಸಿದ್ದನ್ನು ವಿಶ್ಲೇಷಣೆ’ ಎಂದು ಕರೆಯುವುದು ಒಂದು ಅಭ್ಯಾಸ. ವಿಕ್ಟೋರಿಯನ್ ಯುಗದ ಮಾನವಶಾಸ್ತ್ರಜ್ಞರು ಇಡೀ ಮನುಷ್ಯಕುಲವನ್ನು ಜನಾಂಗಗಳಾಗಿಯೂ ಮಾನವ ಸಮಾಜವನ್ನು ಆದಿವಾಸಿ (ಸ್ಯಾವೆಜರಿ), ಗ್ರಾಮ್ಯ (ಬರ‍್ಬರಿಕ್) ಮತ್ತು ನಾಗರಿಕ (ಸಿವಿಲ್) ಎಂದು ಮೂರು ರೀತಿಯಾಗಿ ದೊಡ್ಡದಾಗಿ ಒಡೆದು ವಿಶ್ಲೇಷಿಸಿದರು. ಮರ‍್ಗನ್, ಫ್ರಾಂಜ್ ಬೊವಾಸ್, ಮಲಿನೋಸ್ಕಿ ಮೊದಲಾದ ವಿದ್ವಾಂಸರು ಸಮಾಜ ನೋಡುವ ಮತ್ತು ಅಧ್ಯಯನ ಮಾಡುವ ಇಂಥ ವಿಧಾನವನ್ನು ಜಗತ್ತಿಗೆ ಕಲಿಸಿದರು. ಯೂರೋಪಿನಿಂದ ಬಂದ ಇದೇ ತಜ್ಞತೆಯ ವಿದ್ವಾಂಸರು ಭಾರತೀಯ ಸಮಾಜವನ್ನು ಇನ್ನು ಹೇಗೆ ನೋಡಬಲ್ಲರು? ಹಿಂದೂ ಮತ್ತು ಮುಸ್ಲಿಂ ಎಂದು ಮೊದಲು ಒಡೆದರು, ಅನಂತರ ಹಿಂದೂಗಳಲ್ಲೇ ಸಾವಿರಾರು ವರ್ಷಗಳಿಂದ ಇದ್ದ ‘ಜಾತಿ’ಗಳನ್ನು ಮುಂದುಮಾಡಿ ಒಂದೊಂದು ಜಾತಿಗಳನ್ನೂ ವ್ಯವಸ್ಥಿತವಾಗಿ ಒಡೆದರು. ಇದರ ಪರಿಣಾಮ ಜಾತಿಗಳಲ್ಲೇ ಒಳ ಜಾತಿಗಳು, ಪಂಗಡ-ಉಪಪಂಗಡಗಳು ಮೊದಲಾದವೆಲ್ಲ ಢಾಳಾಗಿ ಇಂದು ಕಾಣಿಸಿಕೊಂಡು ತಮ್ಮ ತಮ್ಮ ಅನನ್ಯತೆಯನ್ನು ಅದರಲ್ಲೇ ಕಂಡುಕೊಂಡು ಧನ್ಯತೆ ಅನುಭವಿಸುತ್ತಿವೆ! ಯೂರೋಪಿನ ವಿದ್ವಾಂಸರು ಕೂಡ ತಾವು ಒಡೆಯುವುದು ಸಮಾನತೆಯ ಹುಡುಕಾಟಕ್ಕೆ ಎಂದೇ ಹೇಳುತ್ತಾರೆ ಅನ್ನುವುದು ತಮಾಷೆಯ ಸಂಗತಿ. ಲಿಂಗಾಯತರು ತಮ್ಮ ರ‍್ಮ ಬೇರೆ ಅನ್ನುವುದು ಕೂಡ ಸಮಾನತೆಯ ಸಾಧನೆಗಾಗಿ ಎಂದೇ ಹೇಳುತ್ತಿದ್ದಾರೆ ಎಂಬುದನ್ನು ಗಮನಿಸಬೇಕು.
ಲಿಂಗಾಯತ ಬೇರೆ ಅನ್ನುವ ವಾದ ಸೆಕ್ಯುಲರ್ ಬಸವವಾದಿಗಳಿಗೆ ಪ್ರಿಯವಾದುದು. ಲಿಂಗಾಯತರಲ್ಲಿ ಎಲ್ಲೆಲ್ಲಿ ಜಾತಿ-ಮಡಿ-ಮೈಲಿಗೆ ಇತ್ಯಾದಿ ಕಾಣಿಸುತ್ತದೋ ಅಲ್ಲೆಲ್ಲ ಇದು 'ವೀರಶೈವ' ಕ್ರಮ, ಲಿಂಗಾಯತರಲ್ಲಿ ಎಲ್ಲರೂ ಒಂದೇ ಅನ್ನುವುದು ಅವರ ಐಡಿಯಾಲಜಿಗೆ ಸರಿ ಹೊಂದುವ ಮಾತು. ಹೀಗಾಗಿ ಸೆಕ್ಯುಲರ್ ಸ್ವಾಮೀಜಿಗಳು, ಬಸವಾನುಯಾಯಿ ಎಂದು ಹೇಳಿಕೊಳ್ಳುವವರು ಈ ವ್ಯತ್ಯಾಸವನ್ನು ಪ್ರೀತಿಯಿಂದ ಆದರಿಸುತ್ತಾರೆ.
ಇನ್ನೂ ದೊಡ್ಡ ಸಮಸ್ಯೆ ಇದರಿಂದ ಏಳುತ್ತದೆ. ವಚನಕಾರರಲ್ಲಿ ಇವೆರಡು ಬೇರೆಯಾಗಿ ಕಾಣುವುದಿಲ್ಲ. ಹೀಗಾಗಿ ವೀರಶೈವ ಮತ್ತು ಲಿಂಗಾಯತ ವಚನಕಾರರನ್ನು ಹೇಗೆ 'ಹಿಸ್ಸೆ' ಮಾಡಿಕೊಳ್ಳುವುದು ಎಂಬುದೇ ಈ ಸಮಸ್ಯೆ!
ನಾವು, ಲಿಂಗಾಯತರೇ ಬೇರೆ ಅನ್ನುವವರು ಮೊದಲು ಬಸವಣ್ಣನನ್ನೇ ಕೈ ಬಿಡಬೇಕಾಗುತ್ತದೆ.
ಉದಾಹರಣೆಗೆ ಅಣ್ಣನ ಈ ವಚನಗಳನ್ನು ನೋಡಿ:
- "ಅಂಗಲಿಂಗಸಂಗಸುಖಸಾರಾಯದನುಭಾವ ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ. ಏಕಲಿಂಗಪರಿಗ್ರಾಹಕನಾದ ಬಳಿಕ, ಆ ಲಿಂಗನಿಷ್ಠೆ ಗಟ್ಟಿಗೊಂಡು, ಸ್ವಯಲಿಂಗರ‍್ಚನೋಪಚಾರ ರ‍್ಪಿತ ಪ್ರಸಾದಭೋಗಿಯಾಗಿ, ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ..." (ಸಮಗ್ರ ವಚನ ಸಂಪುಟ-೧, ವಚನ ೧೦೯೩)
- "ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿಘನವೆತ್ತಿ ತೋರಿ, ಎನ್ನ ಹೊಂದಿದ ಶೈವಮರ‍್ಗಂಗಳನತಿಗಳೆದು, ನಿಜವೀರಶೈವಾಚಾರವನರುಹಿ ತೋರಿ, ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ ಜಪ ಧ್ಯಾನ ರ‍್ಚನೆ ಉಪಚರಿಯ ರ‍್ಪಿತ ಪ್ರಸಾದಭೋಗಂಗಳಲ್ಲಿಸಂದಿಸಿದ ಶೈವರ‍್ಮವ ಕಳೆದು..." (ವಚನ ೯೬೬)
- "...ಸದ್ಗುರೋಃ ಪಾಣಿಜಾತಸ್ಯ ಸ್ಥಿತೇ ಸದ್ಭಕ್ತಸಂಗಿನಾಂ ಲೀಯತೇ ಚ ಮಹಾಲಿಂಗೀ ವೀರಶೈವೋತ್ತಮೋತ್ತಮಂ ಎಂದುದಾಗಿ, ನಿಜಲಿಂಗೈಕ್ಯವಾದ ಸದ್ಭಕ್ತಂಗೆ ಪ್ರೇತಸೂತಕವೆಂಬುದೆ ಪಾತಕ ನೋಡಾ. ಇಂತೀ ಪಂಚಸೂತಕವನುಳ್ಳ ಪಾತಕಂಗಳ ಪಂಚಾಚಾರಯುಕ್ತನಾದ ಸದ್ಭಕ್ತಂಗೆ ಕಲ್ಪಿಸುವ ಪಂಚಮಹಾಪಾತಕರ ಅಘೋರ ನರಕದಲ್ಲಿಕ್ಕುವ ಕೂಡಲಸಂಗಯ್ಯ" (ವಚನ ೧೧೯೬)
ವಚನ ಸಾಹಿತ್ಯದಲ್ಲಿ ವೀರಶೈವ ಮತ್ತು ಲಿಂಗಾಯತಗಳನ್ನು ಬೇರೆಯಾಗಿ ಕಂಡಿಲ್ಲ. ಇಷ್ಟಾಗಿಯೂ ನಿಜವಾಗಿ ಯಾವುದೇ ರಿಲಿಜನ್ನು ಅಥವಾ ರ‍್ಮ ಎಂದೇ ಇಟ್ಟುಕೊಳ್ಳಿ-ಅಧ್ಯಾತ್ಮದ ಸಾಧನೆ ಅದಕ್ಕೆ ಅಂತಿಮ ಗುರಿಯೇ ವಿನಾ ಲೌಕಿಕ ಭೋಗವಲ್ಲ. ಯಾವ ರಿಲಿಜನ್ನಾದರೇನು, ರ‍್ಮವಾದರೇನು-ದೈವ ಸಾಕ್ಷಾತ್ಕಾರಕ್ಕೆ? ಆದರೆ ರಿಲಿಜನ್ನು ಮತ್ತು ರ‍್ಮಗಳ ಲಾಭ ಲೌಕಿಕದಲ್ಲಿದೆ ರಾಜಕೀಯದಲ್ಲಿದೆ ಆರ್ಥಿಕ ಸಂಗತಿಗಳಲ್ಲಿದೆ! ಇದು ಧರ್ಮದ ಹೆಸರಿನಲ್ಲಿ "ನಾವ್ ಬೇರೆ ನಮ್ ಧರ್ಮ ಬೇರೆ" ಅನ್ನಲು ಇರುವ ಏಕೈಕ ಕಾರಣ ಅನ್ನದೇ ವಿಧಿ ಇಲ್ಲ.
ಲಿಂಗಾಯತ ರ‍್ಮ ಬೇರೆ ಅಂದೊಡನೆ-ಅಲ್ಪಸಂಖ್ಯಾತ ಧರ್ಮದ ಲೌಕಿಕ ಲಾಭಗಳ ಬೇಡಿಕೆ, ಮತ ಓಲೈಕೆ, ಪ್ರತ್ಯೇಕ ಮೀಸಲು,ಇವೆಲ್ಲ ಶುರುವಾಗುತ್ತವೆ. ಕೊನೆಗೂ 'ಸಮಾನತೆ' ಅನ್ನುವವರು ತಾವೇ ಬೇರೆ ನೀವೆಲ್ಲ ಬೇರೆ ಎಂದು ಅಧಿಕೃತವಾಗಿ ಸಾಧಿಸಲು ಹೊರಟಿದ್ದಾರೆ. ಸಮಾನತೆಯ ಹೆಸರಲ್ಲಿ ಅಂತಿಮವಾಗಿ ಸಾಧಿಸ ಹೊರಟಿದ್ದು ಇಷ್ಟೇ.

No comments:
Post a Comment