ಮನೆಯಲ್ಲಿ ಒಂದು ಒಳ್ಳೆಯ ಎಮ್ಮೆ ಇತ್ತು. ಅದನ್ನು ತಂದಾಗಿನಿಂದಲೂ ಅದಕ್ಕೆ ಆಯಿಯ ಒಡನಾಟ. ಆಯಿಗೆ ಮಾತ್ರ ಹಾಲು ಹಿಂಡಲು ಬಿಡ್ತಿತ್ತು. ಒಮ್ಮೆ ಆಯಿ ತನ್ನ ತವರಿಗೆ ಹೋದಾಗ ಹಾಲು ಹಿಂಡುವ ಸರದಿ ಅಪ್ಪಯ್ಯನದಾಯಿತು. ಆದರೆ ಎಮ್ಮೆಯ ಹಠ. ಅಪ್ಪ ತಾಳು ಹೇಳಿ ಕೇಳಿ ನೀನು ಎಮ್ಮೆ ನನಗೇ ಪಾಠ ಹೇಳ್ತೀಯಾ ಅಂದವನೇ ಮನೆಯೊಳಗೆ ಹೋಗಿ ಆಯಿಯ ಸೀರೆ ಸುತ್ತಿಕೊಂಡುಬಂದ. ಒಮ್ಮೆ ಮೂಸಿದ ಎಮ್ಮೆ ಹಾಲು ಹಿಂಡಲು ಅವಕಾಶ ಕೊಟ್ಟಿತು. ಅನಂತರ ತುಂಬಿದ ಹಾಲಿನ ಚೊಂಬನ್ನು ಅದೇ ಎಮ್ಮೆಗೆ ತೋರಿಸುತ್ತಾ ಸುಮ್ಮನೇ ನಿನ್ನನ್ನು ಎಮ್ಮೆ ಅನ್ನಲ್ಲ, ನೋಡು ನೀ ನು ಹೇಗೆ ಮೋಸ ಹೋದೆ ಎಂದು ಎಮ್ಮೆ ಜೊತೆ ಮಾತಾಡಿದ್ದ. ಅಪ್ಪಯ್ಯ ಹೀಗೆಯೇ ಜನ ಮಾತ್ರವಲ್ಲ ಪಶು ಪಕ್ಷಿಗಳ ಜೊತೆ ಮಾತುಕತೆ ಮಾಡುತ್ತಿದ್ದ. ಅವೂ ಅವನೊಂದಿಗೆ ಮಾತಾಡಿದಂತೆ ಅನಿಸುತ್ತಿತ್ತು. ಅವನ ಮಾತು ಕೇಳುತ್ತಿದ್ದವು. ಒಮ್ಮೆ ಮನೆಯ ಅಂಗಳಕ್ಕೆ ನಾಗರಹಾವು ಬಂದು ಕೂತಿತ್ತು. ಇದು ಅಪರೂಪವಾಗಿರಲಿಲ್ಲ. ಅವು ಯಾರಿಗೂ ಕಡಿದ ದಾಖಲೆ ಇರಲಿಲ್ಲ. ಅದನ್ನು ಕಂಡ ಅಪ್ಪ 'ಏನಪ್ಪಾ ಇಲ್ಯಾಕೆ ಬಂದಿದ್ದೀಯಾ ನಡಿ ನಿನ್ನ ಮನೆಗೆ. ಆಮೇಲೆ ನಿನಗೆ ಪೂಜೆ ಕೊಡ್ತೇನೆ' ಅಂದ ಅದು ಹಾಗೆಯೇ ಅಂಗಳ ಇಳಿದು ಹೋಯ್ತು. ಇಂಥ ಸಂದರ್ಭಗಳಿಗೆ ಲೆಕ್ಕವೇ ಇಲ್ಲ. ಟಪ್ಪ ಮನೆ ಔಷಧದ ಜೊತೆ ಸಣ್ಣಪುಟ್ಟ ಮಂತ್ರ ಚಿಕಿತ್ಸೆಯನ್ನೂ ಮಾಡುತ್ತಿದ್ದ. ಇದರಲ್ಲಿ ಮುಖ್ಯವಾದುದು ಪುಟ್ಟ ಮಕ್ಕಳಿಗೆ ಕಾಡುತ್ತಿದ್ದ ಬಾಲಗ್ರಹ ಪೀಡೆ. ಮಕ್ಕಳು ವೃಥಾ ರಚ್ಚೆ ಹಿಡಿಯುವುದು, ಸರಿಯಾಗಿ ಊಟ ನಿದ್ರೆ ಮಾಡದಿರುವುದು ಇತ್ಯಾದಿಗಳಿಗೆ ಆತ ವಿಭೂತಿ ಮಂತ್ರಿಸಿ ಕೊಡುತ್ತಿದ್ದ. ಇದು ತುಂಬ ಪರಿಣಾಮಕಾರಿಯಾದ್ದರಿಂದ ಸುತ್ತಮುತ್ತಲ ಹತ್ತೂರಿನ ಎಲ್ಲ ಬಗೆಯ ಜನರೂ ತಮ್ಮ ಮಕ್ಕಳ ಸಮಸ್ಯೆ ಹೊತ್ತು ಅಪ್ಪಯ್ಯನ ಬಳಿ ಬರುತ್ತಿದ್ದರು. ಒಂದೇ ಕಂಡೀಶನ್ ಏನೆಂದರೆ ಮಂತ್ರಿಸಿದ್ದ ವಿಭೂತಿಯನ್ನು ಮುಸುರೆ ಮೈಲಿಗೆ ಆಗದಂತೆ, ಎಲ್ಲಿಯೂ ನೆಲಕ್ಕೆ ಸೋಕಿಸದಂತೆ ಮಗುವಿನ ಹಣೆಗೆ ದೇವರನ್ನು ನೆನೆದು ಹಚ್ಚಬೇಕು ಎನ್ನುವುದು. ಒಮ್ಮೆ ಕೂಲಿ ಕೆಲಸಕ್ಕೆ ಬರುತ್ತಿದ್ದ ¥ಫಾತಿಮಾ ಭಟ್ರೆ ನಮ್ಮ ಕೂಸಿಂಗೆ ಆರಾಂ ಇಲ್ಲೆ ಮಂತ್ರ ಹಾಕಿ ಅನ್ನುತ್ತ ಬಂದಳು ಕೂಸು ಎಲ್ಲಿ ಅಂದಾಗ ಮನೇಲಿ ಮಲಗಿದೆ ಅಂದಳು. ಹಾಗಾದರೆ, ಮಂತ್ರಿಸಿ ಕೊಡುತ್ತೇನೆ ಎಂದು ಕಂಡೀಶನ್ ಪಾಲಿಸುವಂತೆ ಹೇಳಿದ. ಆಕೆ ಹೂಂ ಅಂದಳು. ಯಾವುದೋ ಜ್ಞಾನದಲ್ಲಿ ಆತ ಮಂತ್ರಿಸಿಕೊಟ್ಟ ವಿಭೂತಿಯನ್ನು ತನ್ನ ಕೂಲಿ ಚೀಲಕ್ಕೆ ತುರುಕಿ ಮೂಲೆಗೆ ತಳ್ಳಿದಳು. ಇದನ್ನು ಕಂಡ ಅಪ್ಪ ನೋಡು ನೀನು ಹೀಗೆ ಮಾಡ್ತೀಯಾ ಅಂತ ಗೊತ್ತಿತ್ತು, ಹೀಗೆ ಮಾಡಿದರೆ ಮಗುವಿಗೆ ಹೇಗೆ ಗುಣವಾಗಬೇಕೆಂದು ಮೃದುವಾಗಿ ಬೈದ.ಆಯ್ತ ಒಡೆಯಾ ಮತ್ತೆ ಹೀಗೆ ಮಾಡಲ್ಲ ಈಗ ಏನಾದ್ರೂ ಮಾಡಿ ಅನ್ನುತ್ತ ಅಲ್ಲೇ ಕೂತಳು. ಅಪ್ಪ ಮತ್ತೆ ಮಂತ್ರಿಸಿ ಕೊಟ್ಟ. ಆಕೆ ಸಮಾಧಾನ ಪಟ್ಟು ಹೋದಳು.
Sunday, 11 June 2023
7. ಸದಾ ಕಾಡುವ ಅಪ್ಪನ ನೆನಪು - ೭
ಅಪ್ಪ ಸದಾ ಹಾಸ್ಯ ಮಾಡುತ್ತಿದ್ದ. ಆದರೆ ಅದು ನೇರವಾಗಿ ಇರುತ್ತಿರಲಿಲ್ಲ. ಏನಾದರೂ ಪನ್ ಇರುತ್ತಿತ್ತು. ನಾನೊಮ್ಮೆ ಅಡಕೆ ಮರ ಹತ್ತುವಾಗ ಸ್ವಲ್ಪ ಜಾರಿದ್ದೆ. ತಕ್ಷಣ ಆತ ಹೆದರ ಬೇಡ ನಾನು ಇದ್ದೇನೆ. ಅಕಸ್ಮಾತ್ ನಾನು ಏನೂ ಮಾಡಲಾಗದಿದ್ದರೆ, ಬಿದ್ದರೂ ನೆಲ ಬಿಡಬೇಡ ಅಂದಿದ್ದ. ಇನ್ನೊಮ್ಮೆ ಹಸಿರು ಹಾವನ್ನು ತೋರಿಸಿ ಅದು ಸದಾ ತಲೆ ಆಡಿಸುವುದನ್ನು ನೋಡು ಅನ್ನುತ್ತಾ ಅದು ನೂರರವರೆಗೆ ಎಣಿಸುತ್ತಿದೆ. ಆದರೆ ಲೆಕ್ಕ ತಪ್ಪಿ ಮತ್ತೆ ಎಣಿಸುತ್ತದೆ. ಅದು ಮುಗಿಯುವುದೇ ಇಲ್ಲ. ಹಾಗೇನಾದರೂ ಎಣಿಕೆ ಮುಗಿದರೆ ಅದು ಕಚ್ಚುತ್ತದೆ. ಹಾಗೇನಾದರೂ ಕಚ್ಚಿದರೆ ಅದಕ್ಕೆ ಔಷಧವೇ ಇಲ್ಲ, ಆಯ್ತಾ ಅಂದ. ನಾನು ಪೆದ್ದನ ರೀತಿ ತಲೆ ಆಡಿಸಿದೆ.'ಹೋಗೋ ಮಳ್ಳ, ಕಚ್ಚಲು ಅದಕ್ಕೆ ಹಲ್ಲು ಇಲ್ಲ' ಅಂದ.
Subscribe to:
Post Comments (Atom)

No comments:
Post a Comment