![]() |
| ಅಪ್ಪಯ್ಯನ ಭಾವಚಿತ್ರ |
ದಿನಾ ಊಟಕ್ಕೆ ಮುಂಚೆ ಆದಿನದ ತನ್ನ ದುಡಿಮೆ ಏನೆಂದು ಪರಿಶೀಲನೆ ಮಾಡಿಕೊಳ್ಳುತ್ತಿದ್ದ. ಗದೆ ತೋಟ ಸುತ್ತಿ ಉತ್ಪನ್ನಗಳನ್ನು ತಂದಾಗಲೇ ಅವನಿಗೆ ಊಟ ಸೇರುತ್ತಿದ್ದುದು. ಇದಕ್ಕಾಗಿ ಆತ ಒಂದು ಕೈಚೀಲ ಇಟ್ಟುಕೊಂಡಿದ್ದ. ಅವನಜೊತೆಗೆ ರಕ್ಷಣೆಗಾಗಿ ಸದಾ ಒಂದು ಕತ್ತಿಇರುತ್ತಿತ್ತು. ಒಮ್ಮೆ ಮನೆಯ ಅಂಗಳದಲ್ಲಿದ್ದ ತೆಂಗಿನ ಮರದ ಕಾಯಿಗಳು ಬೆಳೆದು ಒಣಗಿ ಬೀಳುತ್ತಿತ್ತು. ಅಣ್ಣನಿಗೆ ಕಾರಣಾಂತರದಿಂದ ಕಾಯಿಕೀಳುವುದು ಸಾಧ್ಯವಾಗಿರಲಿಲ್ಲ. ಅದನ್ನು ಒಂದೆರಡು ದಿನ ನೋಡಿದ ಅಪ್ಪ ಮರ ಹತ್ತುವ ತನ್ನ ಕೌಶಲ್ಯ ನೆನಪಾಗಿ ಮನೆಯಲ್ಲಿ ಅಣ್ಣನಿಲ್ಲದ್ದು ಖಾತ್ರಿ ಮಾಡಿಕೊಂಡು ಮರವೇರಿದ್ದ. ಶಸ್ತ್ರ ಚಿಕಿತ್ಸೆಯಾಗಿ ಮೂರು ದಿನವೂ ಆಗಿರಲಿಲ್ಲ. ಮರವನ್ನು ಅರ್ಧ ಏರಿದವನು ನೋವು ತಾಳಲಾರದೇ ಅಲ್ಲೇ ಕೂತಿದ್ದ. ಪುಣ್ಯಕ್ಕೆ ಅವನ ಜೊತೆ ಕಡಕಲಮಣೆ ಅಡಕೆ, ತೆಂಗಿನ ಮರ ಏರುವವರು ಮರದಲ್ಲಿ ಕುಳಿತುಕೊಳ್ಳಲು ಬಳಸುವ ಉಪಕರಣ. (ಅರ್ದ ಅಡಿಯಷ್ಟು ಅಗಲದ ಮರದ ಹಲಗೆಗೆ ತೆಂಗಿನ ಹಗ್ಗ ಬಿಗಿದು ಮಣೆ ಜಾರದಂತೆ ಕಟ್ಟು ಹಾಕಿರುತ್ತಾರೆ. ಹಗ್ಗದೊಳಗೆ ನಿರ್ದಿಷ್ಟ ರೀತಿಯಲ್ಲಿ ಮರ ಬಳಸಿ ಮಣೆಂ ಸೇರಿಸಿ ಸೆಳೆದುಕೊಂಡರೆ, ಅದು ಮರಕ್ಕೆ ಬಿಗಿಯಾಗಿ ಅಂಟಿಕೊಳ್ಳುತ್ತದೆ. ಅದನ್ನು ಕಾಲುಗಳನ್ನು ಸೇರಿಸಿ ಕುಳಿತುಕೊಳ್ಳಬಹುದು. ಅರ್ಧಮರವೇರಿದ್ದ ಅಪ್ಪ ಹೇಗೋ ಸಾವರಿಸಿಕೊಂಡು ಮಣೆಹಾಕೊಕೊಂಡು ಕೂತಿದ್ದ. ಇಳಿಯಲು ಅವನಿಗೆ ಸಾಧ್ಯವಾಗಿರಲಿಲ್ಲ. ಅದನ್ನು ಕಂಡ ಆಯಿ ನಿಮಗೇಕೆ ಈ ಸಾಹಸ ಮಾಡಬೇಕಿತ್ತು? ಇನ್ನು ಮಗ ಬರುವವರೆಗೆ ಅಲ್ಲೇ ಕೂತಿರಿ ಅಂದಳು. ಅಪ್ಪನಿಗೆ ಊಟದ ಸಮಯವಾಗಿತ್ತು. ಹಸಿವಿನಿಂದ ಕಂಗೆಟ್ಟಿದ್ದ. ಸ್ವಲ್ಪ ಹೊತ್ತಾದ ಮೇಲೆ ಬಂದ ಅಣ್ಣ ಅಪ್ಪನಿಗೊಂದು ಕ್ಲಾಸ್ ತೆಗೆದುಕೊಂಡ.ಅಪ್ಪ ಏನೂ ಆಗಿಲ್ಲ ಎಂಬಂತೆ ನಿನಗೆ ಸಹಾಯ ಮಾಡಲು ಬಯಸಿದೆ ಎಂದು ತಣ್ಣಗೆ ನಕ್ಕ. ಅಣ್ಣನ ಪಿತ್ತ ನೆತ್ತಿಗೇರಿತ್ತು ನೀನು ಇನ್ನು ಮೇಲೆ ಇಂಥ ಸಹಾಯ ಮಾಡೋದು ಬೇಡ ಮಾರಾಯ ಆರಾಮವಾಗಿ ಮನೇಲಿ ಇರು ಎಂದು ಕೂಗುತ್ತ ಒಂದು ಏಣಿ ತಂದ. ಆದರೆ ಅದು ಅಪ್ಪ ಇರುವ ಎತ್ತರಕ್ಕೆ ಬರಲಿಲ್ಲ. ಇನ್ನೇನು ದಾರಿ ತೋಚದ ಅಣ್ಣ ತಾನೇ ಮರವೇರಿ ಅಪ್ಪನ ಬಳಿ ಹೋಗಿ ನಿಧಾನಕ್ಕೆ ಅವನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ನೆಲಕ್ಕೆ ತಂದ. ಇದು ಇಲ್ಲಿಗೆ ಮುಗಿಯಿತು. ನಾಳ ಅಪ್ಪ ಮತ್ತೊಂದು ಪ್ರಕರಣ ಎತ್ತಿದ್ದ. ಸಮೀಪದ ಕಾಡಲ್ಲಿ ಬೆಳೆದಿದ್ದ ಮುರುಗಲ ಹಣ್ಣು ಕೀಳಲು ಗೋಣಿ ಸಮೇತ ಒಂದು ಬೆಳಿಗ್ಗೆ ಹೊರಟ. ಸಂಜೆ ಆದರೂ ಸುಳಿವಿಲ್ಲ. ಚಿಂತೆ ಮಾಡಿದ ಅಣ್ಣ ಹುಡುಕಲು ಹೊರಟ. ಅಪ್ಪ ಅಲ್ಲೆಲ್ಲೋ ಕಾಡಿನ ಮಧ್ಯೆ ಮುರುಗಲ ಚೀಲ ಚೆಲ್ಲಿಕೊಂಡು ಆರಾಮವಾಗಿ ಎಲೆ ಅಡಕೆ ಮೆಲ್ಲುತ್ತ ಕುಳಿತಿದ್ದನಂತೆ. ಸಿಟ್ಟಾದ ಅಣ್ಣ ನಿನಗೆ ಎಷ್ಟು ಸಾರಿ ಹೇಳುವುದು ಸುಮ್ಮನೆ ಮನೆಯಲ್ಲಿ ಇರುವುದು ಬಿಟ್ಟು ಎಂದು ರೇಗುತ್ತಿದ್ದರೆ ಅಪ್ಪ ಅಲ್ಲಾ ಮಾರಾಯ ನೀವೆಲ್ಲ ಕಷ್ಟ ಪಡುತ್ತಿದ್ದರೆ ನಾನು ಸುಮ್ಮನೇ ಹೇಗಪ್ಪಾ ಉಂಡುತಿಂದುಕೊಂಡು ಇರಲಿ ಹೇಳು ಅನ್ನುವುದೇ?
ಅಪ್ಪಿಗೆ ಭ್ರಷ್ಟ ಅಧಿಕಾರಿಗಳನ್ನು ಕಂಡರಾಗುತ್ತಿರಲಿಲ್ಲ. ಕೃಷಿ ಇಲಾಖೆಗೆ ಬರುತ್ತಿದ್ದ ಬಹುತೇಕರು ಅಂಥವರೇ ಆಗಿರುತ್ತಿದ್ದರು. ಒಮ್ಮೆ ಭ್ರಷ್ಟಾತಿಭ್ರಷ್ಟನೊಬ್ಬ ಅಲ್ಲಿ ವಕ್ಕರಿಸಿದ್ದ. ಬೆಳೆಸಾಲ ನೀಡಲು ಆತ ರೈತರ ಜೀವ ಹಿಂಡುತ್ತಿದ್ದ. ಅಪ್ಪ ಅವನಿಗೆ ಬುದ್ಧಿ ಕಲಿಸ್ತೇನೆ ಅಂದವನೇ ಅಧಿಕಾರಿಯ ಬಳಿ ಹೋಗಿ ಬೆಳೆಸಾಲ ಕೇಳಿದ ಆತ ಏನೇನೋ ವರಾತ ತೆಗೆದಾಗ ಅವನ ಇಂಗಿತ ಅರಿವಾದ ಅಪ್ಪ, ರಾಯರೇ, ನಿಮ್ಮ ಬಗ್ಗೆ ಊರ ಜನ ಏನು ಮಾತಾಡಿಕೊಳ್ಳುತ್ತಿದ್ದಾರೆ ಗೊತ್ತಾ ಅಂದ. ಕುತೂಹಲಗೊಂಡ ಅಧಿಕಾರಿ ಏನಂತಾರೆ ಅಂದ. ಅಪ್ಪ ಈಗ ಬಂದ ನಮ್ಮ ಸಾಹೇಬ್ರು ನಹಳ ಒಳ್ಳೆಯವರು. ಅವರು ರೈತರ ಎಂಜಲು ಹೇಲು ತಿನ್ನುವುದಿರಲಿ, ಅತ್ತ ಕಣ್ಣು ಕೂಡ ಹಾಕುವುದಿಲ್ಲ ಅಂತಿದಾರೆ ಅಂದ. ಈಗ ಬಾಯಿಮುಚ್ಚಿ ಕೆಲಸ ಮಾಡಿವ ಸರದಿ ಅಧಿಕಾರಿಯದಾಗಿತ್ತು.
ಅಪ್ಪ ಸ್ವಾಭಿಮಾನಿ ಅಂದೆ. ಅದೇ ಅವನಿಗೆ ಕೊನೆಗಾಲದಲ್ಲಿ ಮುಳುವಾಯ್ತು. ಹರ್ನಿಯಾದಿಂದ ಬಳಲಿದ್ದ ಅಪ್ಪನ ಸಾಹಸಗಳಿಂದ ಒಮ್ಮೆ ಯಾರ ನೆರವೂ ಇಲ್ಲದೇ ಬಚ್ಚಲಿಗೆ ಹೋಗುವ ಭರದಲ್ಲಿ ಕಾಲುಜಾರಿಬಿದ್ದು ಸೊಂಟದ ಕೀಲು ಮುರಿದುಕೊಂಡು ಹಾಸಿಗೆ ಹಿಡಿಯಬೇಕಾಯಿತು, ಒಂದುದಿನ ಹಾಗೆಯಾ ತಣ್ಣಗೆ ಕಣ್ಣುಮುಚ್ಚಿದ.
ಜೇನು ಕೀಳುವುದು ಅಪ್ಪನ ಉಪವೃತ್ತಿಯಾಗಿತ್ತು ಎಂಬುದು ಹಿಂದೆಯೇ ಬಂದಿದೆ, ಆತ ಕೊನೆಯ ಕೆಲವರ್ಷ ಜೇನು ಕೀಳುವುದನ್ನು ಸಂಪೂರ್ಣ ಬಿಟ್ಟಿದ್ದ. ಅದಕ್ಕೊಂದು ಕಥೆ ಹೇಳುತ್ತಿದ್ದ. ಮರ ಹತ್ತುವುದರಲ್ಲಿ ಆತ ನಿಸ್ಸೀಮ. ಯಾವುದೇ ಮರವನ್ನು ಸವಳಿ(ಕೆಂಜಿರುವೆ) ಹತ್ತುವಂತೆ ಸರಸರ ಏರುತ್ತಿದ್ದ. ಜೇನು ಕೀಳಲು ಇದು ನೆರವಾಗಿತ್ತು. ಒಮ್ಮೆ ಸುಮಾರು ನೂರೈವತ್ತು ಅಡಿ ಎತ್ತರದ ಮರ ಏರಿ ಜೇನು ಕೀಳುವ ಸಾಹಸ ಮಾಡುವಾಗ ಮರದ ಟೊಂಗೆ ಮುರಿದು ಕೆಳಗೆ ಬಿದ್ದಿದ್ದ. ಹಾಗೆ ಬೀಳುವಾಗ ಇನ್ನು ತನ್ನ ಕಥೆ ಮುಗಿಯಿತು ಎಂದು ಲೆಕ್ಕ ಹಾಕಿದನಂತೆ. ಅಷ್ಟರಲ್ಲಿ ತನ್ನನ್ನು ಯಾರೋ ಎತ್ತಿ ಹಿಡಿದು ಮೆಲ್ಲಗೆ ನೆಲಕ್ಕೆ ತಂದುಬಿಟ್ಟ ಅನುಭವವಾಯ್ತಂತೆ. ಅವರಿಬ್ಬರಲ್ಲಿ ಮಾತುಕತೆ ನಡೆಯಿತಂತೆ, ಆತ ತಾನು ವನದೇವಿಯ ಸೇವಕ. ನೀನು ಮಾಡುತ್ತಿರುವ ಕೆಲಸ ಸರಿಯಲ್ಲ. ನಿನ್ನ ಕೆಲಸದಿಂದ ಅದೆಷ್ಟು ಜೇನುಹುಳಗಳು ಸಾಯುತ್ತಿವೆ, ಅವುಗಳ ಸಂಸಾರ ಕೆಡುತ್ತಿದೆ, ಇನ್ನು ಮೇಲೆ ನೀನು ಜೇನು ಕೀಳ ತಕ್ಕದ್ದಲ್ಲ, ಒಳಿತಾಗಲಿ ಎಂದು ಆತ ಹೇಳಿ ಮಾಯವಾದನಂತೆ, ಒಟ್ಟಿನಲ್ಲಿ ಜೀವ ಉಳಿಯಿತಲ್ಲ ಅಂದುಕೊಂಡ ಅಪ್ಪ ಮತ್ತೆಂದೂ ಜೇನು ಹುಟ್ಟಿಗೆ ಕೈಹಾಕಲಿಲ್ಲ. ಅದರೆ ಜೇನು ಸವಿಯುವ ಆಸೆಯಾದಾಗ ಮರದ ಪೊಟರೆಯಲ್ಲಿ ಗೂಡು ಕಟ್ಟುತ್ತಿದ್ದ ತುಡವಿ ತೆಗೆಯುತ್ತಿದ್ದ. ಆದರೆ ಯಾವ ಹುಳವೂ ಸಾಯದಂತೆ ಕೇವಲ ದಟ್ಟ ಹೊಗೆ ಹಾಕಿ ಹುಳ ಓಡಿಸಿ ಮೆಲ್ಲಗೆ ಹುಟ್ಟು ಕೀಳುತ್ತಿದ್ದ.
ಅಪ್ಪನ ಬಗ್ಗೆ ಬರೆಯುತ್ತ ಹೋದರೆ ಅದಕ್ಕೆ ಕೊನೆ ಇರುವುದಿಲ್ಲ. ಸದ್ಯಕ್ಕೆ ಅವನ ದಿವ್ಯ ಸ್ಮರಣೆಗೆ ಇದನ್ನು ಸಲ್ಲಿಸಿ ಇಲ್ಲಿಗೆ ವಿರಮಿಸುವೆ, ಒಟ್ಟಿನಲ್ಲಿ ಅಪ್ಪ ನಮ್ಮ ಸುತ್ತಲಿನ ಗಿಡ ಮರ ಬಳ್ಳಿ ಆಕಾಶಗಳಲ್ಲಿ ಸೇರಿ ಸದಾ ಜೊತೆಗೇ ಇರುವಂತೆ ಭಾಸವಾಗುತ್ತದೆ. ಆತನ ದೇಹವಿಲ್ಲ, ನೆನಪಿಗೆ ಸಾವಿಲ್ಲ. ಅವನ ಕೃಪೆ ಸದಾ ಇರಲಿ.



No comments:
Post a Comment