Tuesday, 8 August 2023

ಆಯಿ ನನ್ನ ಆಯಿ


ನನ್ನ ಆಯಿಯ ಕಣ್ಮರೆಯಾಗಿ ಪಂಚಾಂಗದ ತಿಥಿ ಪ್ರಕಾರ ಇಂದಿಗೆ ೧ ವರ್ಷವಾಯಿತು. ಆ ನೆಪದಲ್ಲಿ ಆಯಿಯ ಧ್ಯಾನ. 

ಅವಳು  ನನ್ನನ್ನು ಹೊತ್ತು ಹೆತ್ತವಳು. ಒಂದೆರಡು ತಿಂಗಳ ಹಿಂದೆ ಕಣ್ಣು ಮುಚ್ಚಿದಳು. ‘ಶರಣರ ಬಾಳನ್ನು ಮರಣದಲ್ಲಿ ನೋಡು’ ಎಂಬ ಮಾತಿದೆ. ಇದಕ್ಕೆ ತಕ್ಕಂತೆ ಬದುಕು ನಡೆಸಿದವಳು. ಸಾಯಲು ಒಂದೆರಡು ತಿಂಗಳಿದ್ದಾಗ ಅದೇಕೋ ಸುಸ್ತು ಅನ್ನುತ್ತಿದ್ದಳಂತೆ. ಏನೋ ಹೆಚ್ಚು-ಕಡಿಮೆ ಆಗಿರಬೇಕೆಂದು ತಲೆಕೆಡಿಸಿಕೊಂಡ ಅಣ್ಣ ವೈದ್ಯರಿಗೆ ತೋರಿಸಿದ್ದನಂತೆ. ಕೆಲವು ಔಷಧಗಳನ್ನು ಕೊಟ್ಟ ವೈದ್ಯರು ಇದನ್ನು ಪಾಲಿಸುವಂತೆ ಸೂಚಿಸಿದ್ದರಂತೆ. ಸ್ವತಃ ನಾಟಿ ವೈದ್ಯಳಾದ ಆಯಿ ಔಷಧದ ಕ್ರಮವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಳಂತೆ. ಆದರೆ ಆಕೆ ಕಣ್ಣು ಮುಚ್ಚುವ ದಿನ ಸುಸ್ತು ಅತಿಯಾಗಿ ಒಂದು ಹೆಜ್ಜೆಯನ್ನೂ ಮುಂದಿಡಲಾಗದ ಸ್ಥಿತಿಗೆ ಬಂದಿದ್ದಳಂತೆ. ಮತ್ತೆ ವೈದ್ಯರ ಬಳಿಗೆ ಕರೆದೊಯ್ದಿದ್ದರಂತೆ. ತಪಾಸಣೆ ಮಾಡಿದ ವೈದ್ಯರು ಇವರಿಗೆ ರಕ್ತಹೀನತೆ (ಅನೀಮಿಯ) ಎಂದು ಹೇಳಿ ಇವರಿಗೆ ಯಾರಾದರೂ ರಕ್ತ ಕೊಡಬೇಕಾಗುತ್ತದೆ. ಒಂದೆರಡು ದಿನದಲ್ಲಿ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದ್ದರಂತೆ. ಆಯಿತು ಎಂದು ಹೇಳಿ ಸನಿಹದಲ್ಲೇ ಇದ್ದ ನನ್ನ ಅಕ್ಕನ ಮನೆಗೆ ವಿಶ್ರಾಂತಿಗೆ ಬಂದರಂತೆ. ಅದೂ ಇದೂ ಮಾತನಾಡುತ್ತಾ ಬಚ್ಚಲಿಗೆ ಹೋಗಿಬರುತ್ತೇನೆಂದು ಹೋಗಿ ಬರುವಾಗ ಅಲ್ಲೆಲ್ಲೋ ಕುಸಿದು ಕುಳಿತರಂತೆ. ಅನಂತರ ಅಕ್ಕನ ಕಾಲಮೇಲೆ ಒರಗಿದರಂತೆ. ಹಾಗೆಯೇ ನಿದ್ದೆಹೋದವರು ಮತ್ತೆ ಮೇಲೇಳಲಿಲ್ಲ.

83 ವರ್ಷಗಳ ಕಾಲ ಹೊಲಗದ್ದೆ ತೋಟ ಜನ-ದನಕ್ಕೆ ಔಷಧ ಓದುವ ಮಕ್ಕಳಿಗೆ ಊಟೋಪಚಾರ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಆಯಿ ಯಾರಿಂದಲೂ ಒಂದು ಲೋಟ ನೀರನ್ನು ಕುಡಿಸಿಕೊಳ್ಳದೇ ಕಣ್ಣು ಮುಚ್ಚಿದ್ದರು. ಒಂದು ಅರ್ಥದಲ್ಲಿ ಇದು ದೇವರಿಂದ ಕೇಳಿಕೊಂಡುಬಂದ ಸಾವು. ಹಿರಿಯರು ಹೇಳುತ್ತಾರಲ್ಲ- ‘ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ’ ಎನ್ನುವಂತೆ ಬದುಕು ಸಾವನ್ನು ಕಂಡವರು ಅವರು. ಒಮ್ಮೆ ಘೋರ ಮಳೆಯಿಂದಾಗಿ ಬೆಳೆದ ಬೆಳೆಯಲ್ಲ ಕೈಕೊಟ್ಟಿತ್ತು. ಸಾಲದ್ದಕ್ಕೆ ಮನೆಯಲ್ಲಿದ್ದ ಪಾತ್ರೆಪಗಡೆಗಳನ್ನು ಒಂದೂ ಬಿಡದಂತೆ ಕಳ್ಳರು ಗುಡಿಸಿಕೊಂಡು ಹೋಗಿದ್ದರು. ನಾವು ಆರೇಳು ಮಕ್ಕಳು. ಜೊತೆಗೆ ಶಾಲೆಗೆ ಹೋಗುವ ನಾಲ್ಕಾರು ವಿದ್ಯಾರ್ಥಿಗಳು. ಈ ಚಿತ್ರಣ ಅಪ್ಪನ ನೆನಪಿನ ಸರಣಿಯಲ್ಲಿ ಈಗಾಗಲೇ ಬಂದಿದೆ. ಇಂಥ ಹೀನಾಯ ಸ್ಥಿತಿಯಲ್ಲಿ ಮನೆಯಲ್ಲಿದ್ದ ಮಣ್ಣಿನ ಮಡಕೆಯನ್ನು ಮುಂದಿಟ್ಟುಕೊಂಡು ಸೌದೆ ಓಲೆಯಲ್ಲಿ  ಗಂಜಿ ಬೇಯಿಸಿ ತಿಂಗಳಾನುಗಟ್ಟಲೆ ಎಲ್ಲರ ಹೊಟ್ಟೆ ತುಂಬಿಸಿದ್ದಳು. ಆದರೆ ಗಂಜಿ ಬಡಿಸಲು ಬಟ್ಟಲುಗಳಿರಲಿಲ್ಲ. ಅಂಥ ಸಂದರ್ಭದಲ್ಲಿ ತೆಂಗಿನ ಚಿಪ್ಪನ್ನು ನಾಜೂಕಾಗಿ ಕೆತ್ತಿ ಬಟ್ಟಲು ಮಾಡಿ ನಮಗೆಲ್ಲಾ ಊಟಹಾಕಿದ್ದಳು. ಯಾರ ಮುಂದೆಯೂ ಏನನ್ನೂ ತೋರಿಸಿಕೊಂಡಿರಲಿಲ್ಲ. ಪರಿಸ್ಥಿತಿ ನಿಧಾನವಾಗಿ ಸುಧಾರಿಸಿತು. ನಮಗೆಲ್ಲ ಯಾವ ಪರಿಸ್ಥಿತಿಯಲ್ಲಿ ಹೇಗಿರಬೇಕೆಂದು ಕೆಲಸದ ಮೂಲಕವೇ ಕಲಿಸಿದ್ದಳು. ಜೀವನದ ಶಿಷ್ಟಾಚಾರಗಳನ್ನು ಆಗಾಗ ಕ್ರಿಯೆಯ ಮೂಲಕ ತೋರಿಸಿ ಕಲಿಸುತ್ತಿದ್ದಳು. ಇದರಿಂದಾಗಿ ನಾವೆಲ್ಲ ಪುಟ್ಪಾತಿನಿಂದ ಫೈವ್‍ಸ್ಟಾರ್ ಹೊಟೇಲಿನ ತನಕ ಎಲ್ಲಿ ಹೇಗಿರಬೇಕೆಂದು ಕಲಿಸಿದಳು. ನಾವು ಎಲ್ಲಾದರು ಸೈ ಅನ್ನುವಂತೆ ಬದುಕುವಂತೆ ರೂಪಿಸಿದಳು. ನಮಗೆಲ್ಲಾ ಕೆಲವು ಸಂಪ್ರದಾಯ, ಆಚರಣೆ, ಹಾಡು-ಹಸೆಗಳ ಪರಿಚಯ ಮಾಡಿಸಿದಳು. ಕೆಲವು ಅಪರೂಪದ ಕ್ರಮ ಕಲಿಸಿದಳು. ಈಗ ಮೊಸರು ಮಾಡುವುದು ತುಂಬ ಸುಲಭ. ಎಲ್ಲಾದರೂ ಮಜ್ಜಿಗೆ ಅಥವಾ ಮೊಸರು ಸಿಗುತ್ತದೆ. ಡೈರಿ ಉತ್ಪನ್ನಗಳಿವೆ. ಆದರೆ ಐದಾರು ದಶಕಗಳ ಹಿಂದೆ ಪ್ರತಿ ವರ್ಷ ಹೊಸದಾಗಿ ಮೊಸರು ಮಾಡಿಕೊಂಡು ವರ್ಷ ಪೂರ್ತಿ ಅದನ್ನು ಬಳಸುತ್ತಿದ್ದರು. ಹೊಸದಾಗಿ ಮೊಸರು ಮಾಡುವುದು ಹೇಗೆ? ಮನೆಯ ಸುತ್ತ ಬಾಳೆ ಗಿಡಗಳಿದ್ದವು. ಚಳಿಗಾಲ ಬಂತೆಂದರೆ ಆಯಿ ಹೊಸ ಮೊಸರು ಮಾಡಲು ತಯಾರಾಗುತ್ತಿದ್ದಳು. ಕಾಯಿಸಿದ ಉಗುರು ಬೆಚ್ಚಗಿನ ಹಾಲಿಗೆ ಬಾಳೆಗಿಡದ ಹೊಸ ಎಲೆ ಚಿಗುರುವ ಕುಡಿಯನ್ನು ತೆಗೆದು ಆ ಹಾಲಿನಲ್ಲಿ ಹಾಕುತ್ತಿದ್ದಳು. ಇದನ್ನು ಮುಚ್ಚಿಟ್ಟರೆ ಬೆಳಿಗ್ಗೆ ವೇಳೆಗೆ ರುಚಿಕಟ್ಟಾದ ಮೊಸರು ಸಿದ್ಧವಾಗಿರುತ್ತಿತ್ತು. ಇದು ಮೊಸರಿನ ‘ಮದರ್ ಕಲ್ಚರ್’ ಅಕಸ್ಮಾತ್ ಮೊಸರೇ ಇಲ್ಲ ಅಂದರೆ ಹೊಸದಾಗಿ ಮೊಸರು ಮಾಡಿಕೊಳ್ಳಲು ನಮಗೆ ಇಂದು ತಿಳಿದಿಲ್ಲ. ಜನಪದ ಜ್ಞಾನದ ಅರಿವನ್ನು ಮತ್ತು ಅದರ ಮುಂದುವರಿಕೆ ಎಷ್ಟೋ ವಿಷಯಗಳಲ್ಲಿ ಹೀಗೆ ತುಂಡಾಗಿ ಹೋಗಿದೆ. ಇಂಥ ಅನೇಕ ಸಂಗತಿಗಳನ್ನು ಆಯಿ ನಮಗೆ ವರ್ಗಾಯಿಸಿದ್ದಳು. ಇದಕ್ಕಾಗಿ ನಾವೆಲ್ಲ ಅವಳಿಗೆ ಋಣಿಗಳು. ಅಂಥ ಆಯಿ ನಿಮಗೆಲ್ಲ ಬದುಕಲು ಮತ್ತು ನನಗಿರುವ ತಿಳಿವಳಿಕೆಯನ್ನೆಲ್ಲಾ ಧಾರೆ ಎರೆದಿದ್ದೇನೆ. ಚನ್ನಾಗಿ ಬದುಕಿ ಎಂದು ಹೇಳುತ್ತಾ ಹೋಗೇ ಬಿಟ್ಟಳು. ಆದರೆ ಅವಳ ಜೀವನದ 83 ವರ್ಷ ಸಣ್ಣದೇನೂ ಆಗಿರಲಿಲ್ಲ. ಅವಳು ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳನ್ನು ಕಂಡಿದ್ದಳು. ಬದುಕಿನಲ್ಲಿ ತನ್ನಿಂದ ಸಾಧ್ಯವಾದ ಎಲ್ಲ ನೆರವನ್ನು ಸುತ್ತಲಿನ ಜನ-ದನಗಳಿಗೆ ಕೈತುಂಬ ಮಾಡಿದ್ದಳು. ಜೀವನದಲ್ಲಿ ಅವಳಿಗೊಂದು ತೃಪ್ತಿ ಇತ್ತು. ಇದು ಆಕೆ ಸತ್ತಾಗ ಅವಳ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಾವೆಲ್ಲ ಮಕ್ಕಳು ಮೊಮ್ಮಕ್ಕಳು ದೂರದೂರಿನಿಂದ ಅವಳ ಸ್ಥಾನ ತಲುಪಲು ಅವಳು ತೀರಿಕೊಂಡ ಮೇಲೆ ಹೆಚ್ಚೂ ಕಡಿಮೆ ಒಂದೂವರೆ ದಿನ ಬೇಕಾಯಿತು. ಅಲ್ಲಿಯವರೆಗೆ ಅವಳ ಶವಸಂಸ್ಕಾರ ಅಗಿರಲಿಲ್ಲ. ಮನೆಯ ಅಂಗಳದಲ್ಲಿ ಒಂದು ಮೂಲೆಯಲ್ಲಿ ಅಂಗಾತ ಮಲಗಿಸಿದ್ದರು. ಏನೇನೋ ವಿಧಿ ಸಂಸ್ಕಾರಗಳು ನಡೆಯುತ್ತಿದ್ದವು. ಅದನ್ನು ಕಂಡು ಇನ್ನಿಲ್ಲದಂತೆ ದುಃಖ ಉಮ್ಮಳಿಸಿಬಂತು. ಆದರೆ ಅವಳ ಮುಖವನ್ನು ಕಂಡಾಗ ಸಮಾಧಾನ ಆಗುತ್ತಿತ್ತು. ಏಕೆಂದರೆ ಆಕೆ ಕಣ್ಣು ಮುಚ್ಚಿ ಎರಡು ದಿನಗಳಾಗುತ್ತಾ ಬಂದಿದ್ದರೂ ಅವಳ ಮುಖ ಕೊಂಚವೂ ಬಾಡಿರಲಿಲ್ಲ. ಈಗ ತಾನೇ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಂತೆ ಇನ್ನೇನು ಚಹಾ ಸೇವಿಸಲು ಎದ್ದೇಳುತ್ತಾರೆ ಅನ್ನುವಂತೆ ಹೊಳೆಯುತ್ತಿತ್ತು. ಇದನ್ನು ಕಂಡಾಗ ಬದುಕಿನಲ್ಲಿ ಅವರು ಕಂಡ ತೃಪ್ತಿ ಎದ್ದು ಕಾಣುತ್ತಿತ್ತು. ಯಾರಿಗೇ ಆಗಲಿ, ಅವರ ಆಪ್ತರು ಎಷ್ಟು ವರ್ಷ ಜೊತೆಗಿದ್ದರೂ ತೃಪ್ತಿ ಇರುವುದಿಲ್ಲ. ನಮ್ಮ ಆಯಿ ನಮ್ಮ ಜೊತೆಗೆ ಇನ್ನೂ ಮುನ್ನೂರು ವರ್ಷ ಇದ್ದಿದ್ದರೂ ನಮಗೆ ಸಾಕಾಗುತ್ತಿರಲಿಲ್ಲ. ಪ್ರಶ್ನೆ ಇದಲ್ಲ ಅವರು ಹೇಗೆ ಬದುಕಿದರು ಎಂಥ ಸಾವು ಕಂಡರು ಎಂಬುದು.

ನನಗೆ ಮತ್ತೆ ಮತ್ತೆ ನೆನಪಾಗುವ ಘಟನೆ ಎಂದರೆ ನಾವು ಓದಲು ಮೈಸೂರಿಗೆ ಹೊರಟ ಸಂದರ್ಭ. ಆಗ ನಮ್ಮ ಬಳಿ ನಯಾಪೈಸೆ ಹಣವಿರಲಿಲ್ಲ. ಹೊಟ್ಟೆ-ಬಟ್ಟೆ ಕಟ್ಟಿಕೊಂಡು ಅಪ್ಪ ಕೂಡಿಟ್ಟ ಸ್ವಲ್ಪ ಹಣ ನಮ್ಮ ನೆರವಿಗೆ ಬಂದಿತ್ತು. ಯಾವಾಗಲಾದರೂ ಊರಿಗೆ ಬರಬೇಕಾದರೆ ಬಸ್ಸು ರೈಲುಗಳ ಪ್ರಯಾಣ ವೆಚ್ಚ ತಲೆ ಬಿಸಿ ಉಂಟುಮಾಡುತ್ತಿತ್ತು. ಆದರೆ ನಮಗೆ ಬರುತ್ತಿದ್ದ ವಿದ್ಯಾರ್ಥಿ ವೇತನ ಇದಕ್ಕೆ ನೆರವಾಗುತ್ತಿತ್ತು. ಊರಿಗೆ ಬಂದಾಗ ಆಯಿ ‘ಛೇ ನಿಮಗೆಲ್ಲ ನಾನೇನೂ ಮಾಡಲಾಗಲಿಲ್ಲ. ತೆಗೆದುಕೊಳ್ಳಿ ಏನಾದರೂ ಒಳ್ಳೆಯದಕ್ಕೆ ಬಳಸಿಕೊಳ್ಳಿ’ ಅನ್ನುತ್ತಾ ತನ್ನ ಬಳಿ ಇದ್ದ ಹತ್ತಿಪ್ಪತ್ತು ರೂಗಳನ್ನು ಕೈಯೊಳಗೆ ತುರುಕುತ್ತಿದ್ದಳು. ಈ ಹಣ ಅವಳು ಎಲ್ಲಾದರೂ ಅರಿಸಿನ ಕುಂಕಮಕ್ಕೆ ಹೋದಾಗ ಬಂದದ್ದು ಅಥವಾ ಅಡಕೆ ಸುಲಿಯಲು ಹೋದಾಗ ಬಂದ ಕೂಲಿ ಹಣವಾಗಿರುತ್ತಿತ್ತು. ಇದು ತಿಳಿದ ನಾವು ನೀನೇ ಇಟ್ಟುಕೋ ಎಂದರೆ ನನಗ್ಯಾವ ಖರ್ಚು ನಿಮಗೆ ಬೇಕಾಗುತ್ತದೆ ಎನ್ನುತ್ತಿದ್ದಳು. ಅವಳ ಔದಾರ್ಯಕ್ಕೆ ಪಾರವೇ ಇರಲಿಲ್ಲ. ಇಂಥ ಆಯಿ ಈಗ ಕೇವಲ ನೆನಪಾಗಿ ಹೋಗಿದ್ದಾಳೆ. ಅವಳಿಗೆ ಎಷ್ಟುಬಾರಿ ಹೇಗೆ ವಂದಿಸಬೇಕು. ಅವಳ ಋಣವನ್ನು ಎಂದಾದರೂ ತೀರಿಸಲು ಸಾಧ್ಯವೇ ಎಂಬುದು ಎಂದೂ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ.

2 comments:

  1. I would really consider a mother like yours as a empowered woman . The place of a mother is irreplaceable.

    ReplyDelete
  2. ಮನಮುಟ್ಟುವಂತಿದೆ.

    ReplyDelete