ಪಿವಿಕೆ ಮೂಲತಃ ಒಬ್ಬ ಶಿಕ್ಷಕರು, ಒಬ್ಬ ಗುರು. ನಮ್ಮ ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಕಾಲ ಕಾಲದ ಸಮಾಜದ ಅಗತ್ಯವನ್ನು ಗುರುತಿಸಿ ಅದಕ್ಕೆ ತಕ್ಕಂತೆ ಸಮಾಜವನ್ನು ಆ ದಿಕ್ಕಿಗೆ ಸರಿಯಾಗಿ ತಳ್ಳುವುದು ಅವನ ಮುಖ್ಯ ಕೆಲಸ. ಆರು ದಶಕಗಳ ಕಾಲ ಪಿವಿಕೆಯವರು ಮಾಡಿದ್ದು ಇದೇ, ಈ ಅರ್ಥದಲ್ಲಿ ಅವರು ತಾವು ಕಲಿಸಿದ, ಕೆಲಸ ಮಾಡಿದ ಸ್ಥಳದಲ್ಲಿ ಮಾತ್ರವಲ್ಲ, ಸಮಾಜದಲ್ಲಿ ಹೋದಲ್ಲಿ ಬಂದಲ್ಲೆಲ್ಲ ಶಿಕ್ಷಕರು, ಗುರುಗಳು. ಇಂದಿನ ಕಾಲದಲ್ಲಿ ಯಾವುದೋ ಸಂಸ್ಥೆಯಲ್ಲಿ ಅಚಾನಕ್ಕಾಗಿ ಶಿಕ್ಷಕ ವೃತ್ತಿಗೆ ನೇಮಕವಾದವರೆಲ್ಲ ತಮ್ಮ ಪಟಾಲಮ್ಮಿನಿಂದ 'ಮೇಷ್ಟು' ಎಂದು ಕರೆಯಿಸಿಕೊಂಡು ಬೀಗುತ್ತಾರೆ, ಪಿವಿಕೆಅವರನ್ನು ಇಂಥವರ ಜೊತೆ ಹೋಲಿಸುವುದಲ್ಲ, ಆ ಸಾಲಿನಲ್ಲಿ ಇವರ ಹೆಸರು ಕೂಡ ಬರಬಾರದು. ಹಾಗಿದ್ದಾರೆ ಇವರು. ಏಕೆಂದರೆ ಮೊದಲನೆಯದಾಗಿ ಪಿವಿಕೆ ಅವರಿಗೆ ಪಟಾಲಂ ಇಲ್ಲ, ಅದರ ಅಗತ್ಯವೂ ಇಲ್ಲ, ಎರಡನೆಯದಾಗಿ ಅವರು ಅಚಾನಕ್ಕಾಗಿಯೋ ಹೊಟ್ಟೆಪಾಡಿಗೋ ಶಿಕ್ಷಕ ವೃತ್ತಿಗೆ ಬಂದವರಲ್ಲ, ಅದು ಅವರ ಇಷ್ಟದ ಆಯ್ಕೆ. ಅವರು ಮನಸ್ಸು ಮಾಡಿದ್ದರೆ, ಬೇರೆ ಯಾವುದೋ ಹುದ್ದೆಗೋ ಸಾಕು ಬೇಕಾದಷ್ಟು ಹಣ ಮಾಡಲು ಹೇರಳ ಅವಕಾಸವಿತ್ತು. ಇಲ್ಲ, ಅವರು ಹಠಮಾಡಿ ಅಂಟಿಕೊಂಡಿದ್ದು ಎಂಥ ಕಷ್ಟದ ಸಮಯದಲ್ಲೂ ಶಿಕ್ಷಕ ವೃತ್ತಿಗೆ ಮಾತ್ರ. ಅದು ಅವರ ನಿಷ್ಠೆ ಮಾತ್ರವಲ್ಲ, ಕಾಯಕ ಶ್ರದ್ಧೆ.ಇಂತಪ್ಪ ಪಿವಿಕೆ ಅವರ ಬಗ್ಗೆ ಅವರ ಮಾರ್ಗದರ್ಶನದಿಂದ ತಮ್ಮ ಜೀವನದಲ್ಲಿ ಕೃತಕೃತ್ಯತೆ ಕಂಡವರು ಅವರ ಒಪ್ಪಿಗೆಗೂ ಕಾಯದೆ ಪ್ರೀತಿಯಿಂದ ಹೊರತಂದ ಗ್ರಂಥ ಪಥದರ್ಶಿ. ಹೀಗಾಗಿ ಇದು ವಿಶಿಷ್ಟ, ಮಾತ್ರವಲ್ಲ, ಈಗ ನಮ್ಮ ಸುತ್ತ ಮದುವೆಯಾಗಿ ಗಂಡ ಹೆಂಡತಿ ವರ್ಷಗಟ್ಟಲೆ ಒಟ್ಟಿಗೇ ಜೀವಿಸಿದ್ದಾರೆ ಎಂಬ ಕಾರಣಕ್ಕೆ, ಈ ಭೂಮಿಯ ಮೇಲೆ ಐದಾರು ದಶಕ ಓಡಾಡಿಕೊಂಡಿದ್ದಾರೆ, ಹಣ ಮಾಡಿದ್ದಾರೆ, ದೊಡ್ಡ ಪಟಾಲಂ ಕಟ್ಟಿದ್ದಾರೆ ಇತ್ಯಾದಿ ಏನೇನೋ ಕಾರಣಕ್ಕೆ ಅಭಿನಂದನ ಗ್ರಂಥಗಳು ಹೊರಬರುತ್ತಿವೆ. ವ್ಯಕ್ತಿಗೆ ಒಂದು ಐವತ್ತು ವರ್ಷವಾದರೆ ಸಾಕು . ಅಕ್ಕಪಕ್ಕದ ಮನೆಯವರೋ (ಅವರೊಂದಿಗಾದರೂ ಹೊಂದಿಕೊಂಡಿದ್ದಾರೆ) ಹೆಂಡತಿ ಮಕ್ಕಳು, ಮೊಮ್ಮಕ್ಕಳು, ಸೊಸೆ, ನಾಲ್ಕಾರು ಗೆಳೆಯರು ಮೊದಲಾದವರಿಂದ ಏನಾದರೂ ಕೆತ್ತಿಸಿ ದೊಡ್ಡ ವೈಭವೋಪೇತ ಸಮಾರಂಭ ಏರ್ಪಡಿಸಿ ಅವರಿಗೊಂದು ಅಭನಂದನ ಗ್ರಂಥ ಅರ್ಪಿಸುವ ಕೆಟ್ಟ ಚಾಳಿ ಬೆಳೆದಿದೆ. ಇದರಿಂದ ಸಾಹಿತ್ಯಕ್ಕಾಗಲೀ ಸಮಾಜಕ್ಕಾಗಲೀ ಏನುಪಯೋಗ ಎಂಬುದು ಯಾರಿಗೂ ಗೊತ್ತಿರುವುದಿಲ್ಲ, ಆದರೆ ಅದರಿಂದ ಕಾಗದ ಬಳಕೆಯಿಂದ ಪರಿಸರ ಹಾನಿ, ಪುಸ್ತಕ ತೂಕದಿಂದ ಒಂದಿಷ್ಟು ಭೂಭಾರವಂತೂ ಖಂಡಿತ ಆಗುತ್ತದೆ. ಸದ್ಯದ ಗ್ರಂಥ ಹೀಗಲ್ಲ, ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ವಲಯದಲ್ಲಿ ತೀನಂಶ್ರೀ, ಕುವಂಪು ಅವರಿಗೆ ಸಂದ ಅಭಿನಂದನ ಕೃತಿಗಳಂತೆ ಶಿಕ್ಷಕ ವರ್ಗದ ಅಭಿನಂದನ ಗ್ರಂಥಗಳ ಸಾಲಿನಲ್ಲಿ ಇದಕ್ಕೊಂದು ಶಾಶ್ವತ ಸ್ಥಾನ ಸಿಗಲಿದೆ- ಮುಂದೆ ಇಂಥ ಪರಂಪರೆ ಮುಂದರೆದರೆ. ಅಷ್ಟಂತೂ ಗ್ಯಾರಂಟಿ ಈ ಕೃತಿಯಲ್ಲಿದೆ. ಏಕೆಂದರೆ, ಒಬ್ಬ ಶಿಕ್ಷಕನ ವೃತ್ತಿ ಬೇರೆ ವೃತ್ತಿಯವರು ಹೊಟ್ಟೆ ಉರಿದುಕೊಳ್ಳುವಂಥದ್ದು-ಆತ ನಿಜವಾದ ಶಿಕ್ಷಕನಾಗಿದ್ದರೆ. ಆತನಿಂದ ಪಾಠಕಲಿತ ಹತ್ತಾರು ಮಕ್ಕಳು ಸಮಾಜದ ಹತ್ತಾರು ದಾರಿಗಳಲ್ಲಿ ಸಾಗಿ ಏನಾದರೂ ಸಾಧಿಸುತ್ತಾರೆ. ಇದಕ್ಕೆ ಗಡಿ-ಮಿತಿ ಎರಡೂ ಇಲ್ಲ. ಆದ್ದರಿಂದ ಅಂಥ ಶಕ್ಷಕ ಯಾವಾಗಲೂ ಪ್ರಸ್ತುತನಾಗಿರುತ್ತಾನೆ, ಅವನಿಂದ ಪಾಠ ಕಲಿತವರು ತಮ್ಮ ಮಕ್ಕಳಿಗೋ ಮುಂದಿನ ತಲೆಮಾರಿಗೋ ಇಂಥ ಶಿಕ್ಷಕರೊಬ್ಬರು ನನಗಿದ್ದರೆಂದು ಹೇಳಿ ಅವರನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಾರೆ. ಅವರು ನಮ್ಮ ತಂದೆಯೋ ತಾತನೋ ಅವರ ಶಿಕ್ಷಕರ ಬಗ್ಗೆ ಹೀಗೆ ಹೇಳುತ್ತಿದ್ದರೆಂದು ಮುಂದರಿಸುತ್ತಾರೆ. ಹೀಗೆ ನಿಜ ಶಿಕ್ಷಕ ಅಜರಾಮರವಾಗುತ್ತಾನೆ. ಇಂಥ ಅಸಂಖ್ಯ ಶಿಕ್ಷಕರು ನಮ್ಮ ನಡುವೆ ಇದ್ದಾರೆ, ಅಂಥ ಸಾಲಿಗೆ ಸೇರಿದವರು ಪಿವಿಕೆ, ಅವರು ಶಿಕ್ಷಕರ ಹೆಮ್ಮೆ, ಅಭಿಮಾನ. ಇದು ಏಕೆ ಅನ್ನುವುದಕ್ಕೆ ಇಲ್ಲಿನ ಲೇಖನಗಳ ಪುಟಪುಟದಲ್ಲಿಯೂ ನಿದರ್ಶನಗಳಿವೆ.ಆದರೆ ಎಲ್ಲರಿಗೂ ಇಂಥ ಗ್ರಂಥ ಪಡೆಯುವ ಭಾಗ್ಯ ಇರುವುದಿಲ್ಲ, ಈ ದೃಷ್ಟಿಯಿಂದಲೂ ಪಿವಿಕೆ ಅಭಿನಂದನೀಯರು.
ಪ್ರಸ್ತುತ ಕೃತಿ ಬಹುತೇಕ ಅಭನಂದನ ಕೃತಿಗಳಂತೆ ಸದರಿಯವರ ಭಜನೆಗೆ ಸೀಮಿತವಲ್ಲ, ಪಿವಿಕೆ ಏಕೆ, ಹೇಗೆ ಯಾವ ಕಾರಣಕ್ಕೆ ತಮ್ಮನ್ನು ಮುಟ್ಟಿದರು ಎಂಬ ಸಕಾರಣ ಸಂಗತಿಗಳು ಇಲ್ಲಿ ದಾಖಲಾಗಿವೆ. ಒಬ್ಬರಿಗೆ ವಾರಾನ್ನ ನೀಡಿ ಓದಲು ನೆರವಾದ ಕಾರಣಕ್ಕೆ, ಮತ್ತೊಬ್ಬರಿಗೆ ಈ ಜೀವನ ಸಾಕು ಅನಿಸಿದಾಗ ಬದುಕುವ ಹುಮ್ಮಸ್ಸು ತುಂಬಿದ್ದಕ್ಕಾಗಿ, ಜೀವನಕ್ಕೊಂದು ದಾರಿ ಕಾಣಿಸಿದ್ದಕ್ಕಾಗಿ- ಹೀಗೆ ಒಂದೇ ಎರಡೇ. ನೂರಾ ಹದಿನೈದು ಕಾರಣಗಳು ಪಿವಿಕೆಯವರ ಸುತ್ತ ಸದ್ಯ ಸುತ್ತುತ್ತಿವೆ. ಒಬ್ಬ ಶಿಕ್ಷಕನ ಧನ್ಯತೆಗೆ ಇಷ್ಟು ಸಾಕಲ್ಲ!
ಪಿವಿಕೆ ಮೂಲತಃ ಮಲೆನಾಡಿನ ಜನ. ಅವರಿಗೆ ಚಿಲ್ಲರೆ ಜಾತಿ ಮತಗಳೆಲ್ಲ ಲೆಕ್ಕಕ್ಕಿಲ್ಲ, ಜೊತೆಗೆ ಪಿವಿಕೆ ಬೆಳೆಯುತ್ತ ಬೆಳೆಯುತ್ತ ರಾಜ್ಯ, ಭಾಷೆಗಳ ಗಡಿಯನ್ನೂ ಮೀರಿ ದೇಶದ ಸಂತರಾಗಿದ್ದಾರೆ. ನಮ್ಮ ಸಂತ ಪರಂಪರೆಯಲ್ಲಿನ ಬಹುದೊಡ್ಡ ಪರಿಕಲ್ಪನೆ ಅಂದರೆ ಸಮಾಜ, ಸಂಸಾರದೊಳಗಿದ್ದುಕೊAಡೇ ಎಲ್ಲವನ್ನೂ ಕಟ್ಟಿಕೊಂಡುಅವನ್ನೆಲ್ಲ ಬಿಚ್ಚಿಕೊಂಡ ಅವಧೂತನಂತೆ ಇರುವುದು. ಅವರಿಗೆ ಏಕಕಾಲಕ್ಕೆ ಎಲ್ಲವೂ ಸ್ವಂತ ಹಾಗೂ ಸಂಬಂಧ ಇಲ್ಲದ್ದಾಗಿರುತ್ತದೆ. ಅಂಥವರು ಪಿವಿಕೆ ಇಲ್ಲಿ ಅವರದೇನಿದ್ದರೂ ಸದಾ ಎಚ್ಚರ ಹಾಗೂ ಕರ್ತವ್ಯ ಅಷ್ಟೇ. ಹೀಗಾಗಿ ಪಿವಿಕೆ ಸದ್ಯ ನಮ್ಮ ನಡುವಿನ ಸಂತಾವಧೂತ. ಸಂತರು, ಅವಧೂತರು ಪವಾಡ ಮಾಡುತ್ತಾರೆ ಅನ್ನಲಾಗುತ್ತದೆ, ಪಿವಿಕೆ ಕೂಡ ಪವಾಡ ಮಾಡಿದ್ದಾರೆ, ಆರು ದಶಕಗಳ ಅವರು ಬರಿಗೈನಲ್ಲಿ ಕಟ್ಟಿದ ಸಂಸ್ಥೆಗಳು, ರೂಪಿಸಿದ ಜೀವಚೈತನ್ಯಗಳೆಲ್ಲ ಪವಾಡಗಳೇ. ಈ ಕೃತಿ ಅದಕ್ಕೆ ಸಾಕ್ಷಿ! ಈ ಕೃತಿಯಲ್ಲಿ ಒಂದು ಹಿಂದೀ, ೧೫ ಇಂಗ್ಲಿಷ್ ಸೇರಿ ೧೧೫ ಲೇಖನಗಳಿವೆ, ಮಲೆನಾಡಿನ ಮೂಲೆಯಿಂದ ದೂರದ ಜೈಪುರದವರೆಗಿನ ವಿಳಾಸ ಹೊಂದಿದ ಪಿವಿಕೆ ಕುರಿತ ಲೇಖನಗಳಿವೆ. ಕಟ್ಟಡವೊಂದು ಎತ್ತರವಾದಂತೆ ಅದರ ನೆರಳು ಹಾಸುವ ವ್ಯಾಪ್ತಿ ಕೂಡ ವಿಸ್ತಾರವಾಗುತ್ತದೆ, ಪಿವಿಕೆ ಹೀಗೆ. ಅವರು ತಾವು ಮಾತ್ರ ಬೆಳೆಯಲಿಲ್ಲ, ತಮ್ಮ ಸುತ್ತಲನ್ನೂ ಬೆಳೆಸಿದರು. ಇಲ್ಲಿ ಶಿಕ್ಷಕರು, ಕುಲಪತಿಗಳು, ವಿಜ್ಞಾನ ತಂತ್ರಜ್ಞಾನ, ಸಮಾಜಸೇವೆ, ಪತ್ರಿಕೋದ್ಯಮ ಹೀಗೆ ಹತ್ತಾರು ವಲಯದ ಜನ ಪಿವಿಕೆಯವರನ್ನು, ಅವರ ವ್ಯಕ್ತಿತ್ವವನ್ನು ಕುರಿತು ಚಿತ್ರಿಸಿದ್ದಾರೆ. ಇವೆಲ್ಲ ಒಟ್ಟಾಗಿ ಒಬ್ಬ ಪಿವಿಕೆ ಕಾಣಿಸುತ್ತಾರೆ, ಅಥವಾ ನಾವು ಅವರನ್ನು ಹಾಗೆ ಗ್ರಹಿಸಬೇಕು. ಅವರು ಸಮಾಜ ಸೇವೆಯ ಹೆಸರಲ್ಲಿ ಮನೆ ಮಠ ಮರೆತವರಲ್ಲ, ವೃತ್ತಿಗೂ ಎಳ್ಳು ನೀರು ಬಿಟ್ಟವರಲ್ಲ, ಹೋದಲ್ಲಿ ಬಂದಲ್ಲಿ ಎಲ್ಲವನ್ನೂ ಉಳಿಸಿ ಬೆಳೆಸಿದವರು, ಅವರು ತಮ್ಮ ಕ್ಷೇತ್ರವ್ಯಾಪ್ತಯನ್ನು ಹುಡುಕಿ ಹೋದವರಲ್ಲ, ಅವೆಲ್ಲ ಅವರ ಜೀವನದೊಂದಿಗೆ ತಾವಾಗಿ ಬಂದವು. ಅವನ್ನೆಲ್ಲ ಅವರು ಪ್ರಾಮಾಣಿಕವಾಗಿ ನಿಭಾಯಿಸಿ ಸೈ ಅನಿಸಿಕೊಂಡವರು. ಅವರ ನಡೆದುಬಂದ ದಾರಿ ಲೇಖನದಲ್ಲಿ ಇದು ಸ್ಪಷ್ಟವಾಗುತ್ತದೆ, ಒಟ್ಟಿನಲ್ಲಿ ಸಮಾಜದಲ್ಲಿ ಸಾಧಿಸಲು ಜೀವನ ಪ್ರೀತಿ ಸಹಜೀವಿಗಳ ಬಗ್ಗೆ ಸಹಾನುಭೂತಿ, ಪ್ರಾಮಾಣಿಕತೆಗಳಿದ್ದರೆ ಬದುಕು ಸಾರ್ಥಕ ಎಂಬುದನ್ನು ಅರಿಯಲು ಈ ಕೃತಿ ನೆರವಾಗುತ್ತದೆ. ಸರಳ ಜೀವನದಲ್ಲಿ ಸಾಧಿಸುವುದೆಷ್ಟಿದೆ ಎಂಬುದನ್ನೂ ಇದು ಮನಗಾಣಿಸುತ್ತದೆ. ಈ ಕಾರಣಕ್ಕೆ ಈ ಕೃತಿ ಕನ್ನಡ ಓದಿನ ಸಾಗರಕ್ಕೆ ಹೊಸದಾಗಿ ಸೇರಿದ ಅಮೂಲ್ಯ ಹನಿ ಎಂದು ಘಂಟಾಘೋಷವಾಗಿ ಹೇಳಬಹುದು. ಇದನ್ನು ಸಂಪಾದಿಸಿದ ದ.ಗು. ಲಕ್ಷಣ ಹಾಗೂ ಸಂಪಾದಕ ಮಂಡಳಿಗೆ, ಲೇಖನ ಬರೆದ ಎಲ್ಲರಿಗೆ ಕನ್ನಡ ಓದುಗ ಸಮುದಾಯ ಕೃತಜ್ಞ. ಈ ಕೃತಿಯನ್ನು ಶೃಂಗೇರಿಯ ಶಾರ್ವರಿ ಪ್ರಕಾಶನ ಹೊರತಂದಿದೆ.

No comments:
Post a Comment