ಅದು ಹಾವು ಕಡಿತಕ್ಕೆ, ಸರ್ಪದ ಹುಣ್ಣು ಅಥವಾ ನಾಗರ ಸುತ್ತು ಅಥವಾ ಹರ್ಪಿಸ್ ಎಂದು ಕರೆಯಲಾಗುವ ಚರ್ಮವ್ಯಾಧಿಗೆ ಕೊಡುವ ಪಾರಂಪರಿಕ ಚಿಕಿತ್ಸೆ. ಇದರಲ್ಲಿ ಎರಡು ವಿಧಗಳನ್ನು ನೋಡಿದ್ದೇನೆ, ಒಮ್ಮೆ ಸ್ವತಃ ಅನುಭವಿಸಿಯೂ ನೋಡಿದ್ದೇನೆ. ಇದು ನಂಬಲು ಅಸಾಧ್ಯ. ಅಥವಾ ಆಧುನಿಕ ಶಿಕ್ಷಿತರು ಸಾಮಾನ್ಯವಾಗಿ ಕರೆಯುವಂತೆ ಒಂದು ಬಗೆಯ ಮೌಢ್ಯ!
ನಮ್ಮೂರಿನ ಒಂದು ಮಂತ್ರ ಚಿಕಿತ್ಸಕರ ಮನೆ. ತಲೆ ತಲಾಂತರದಿಂದ ಅದು ಅವರ ಮನೆಯ ಸದಸ್ಯರಿಗೆ ಕೈ ಹತ್ತಿದ ವಿದ್ಯೆ. ಊರಲ್ಲಿ ಯಾರಿಗೇ ಸರ್ಪಸುತ್ತು ಆದರೆ ಮೊದಲು ಜನ ಹೋಗುವುದು ಇವರ ಬಳಿ. ಅವರು ಪ್ರತಿಯಾಗಿ ಪಡೆಯುವುದು ಒಂದೆರಡು ತೆಂಗಿನಕಾಯಿ ಮತ್ತು ಹಣ್ಣು ಮಾತ್ರ. ಅದೂ ಜನ ಕೊಟ್ಟರೆ, ಇಲ್ಲವಾದಲ್ಲಿ ಅದೂ ಇಲ್ಲ. ಹಾವು ಕಡಿದವರು ಅಥವಾ ಸರ್ಪಸುತ್ತು ಆದವರನ್ನು ತಮ್ಮ ಎದುರು ಕೂರಿಸಿಕೊಂಡು ಮಂತ್ರ ಪಠಿಸುತ್ತ, ನವಿಲುಗರಿಯಿಂದ ಗಾಳಿ ಬೀಸುತ್ತ, ಒಂದು ಸುತ್ತಿನ ಮಂತ್ರ ಪಠಣೆ ಆದ ಮೇಲೆ ಗರಿಯ ಚೂರನ್ನು ಮುರಿಯುತ್ತಾರೆ. ಇದನ್ನು ಸೂರ್ಯ ಮುಳುಗಿದ ಮೇಲೆ ಮಾಡುವುದಿಲ್ಲ, ಅಲ್ಲದೇ ಹೀಗೆ ಮಾಡುವವರು ಕಟ್ಟುನಿಟ್ಟಿನ ಜೀವನ ಕ್ರಮ ನಡೆಸುತ್ತಾರೆ. ಒಂಟಿಯಾಗಿ ಯಾರೊಂದಿಗೂ ಮಾತನಾಡದೇ ಊಟ ಮಾಡುವುದು, ಆ ಸಮಯ ಬಳೆ ಶಬ್ದ ಕೂಡ ಕೇಳಿಸಿಕೊಳ್ಳಬಾರದು, ನಿಯತವಾಗಿ ಜಪತಪಾದಿ ಮಾಡಬೇಕು, ಮಡಿಮೈಲಿಗೆ ಕಡ್ಡಾಯವಾಗಿ ಅನುಸರಿಸಬೇಕು, ಇನ್ನೂ ಹತ್ತಾರು ನಿಯಮಗಳು ಅವರಿಗೆ ಇರುತ್ತದೆ. ಜೀವಮಾನಪರ್ಯಂತ ಅವರು ಇದನ್ನನುಸರಿಸಬೇಕು. ಹೀಗೆ ಮಾಡದಿದ್ದರೆ ಆ ವಿದ್ಯ ಕೈಬಿಟ್ಟುಹೋಗುತ್ತದೆ, ಮಾತ್ರವಲ್ಲ, ಅವರಿಗೆ ಕೇಡುಂಟಾಗುತ್ತದೆ ಅನ್ನುತ್ತಾರೆ. ಅದೆಷ್ಟು ನಿಜವೋ ಸುಳ್ಳೋ ತಿಳಿಯದು. ಇದೆಲ್ಲ ನಮ್ಮ ತರ್ಕ. ಆದರೆ ಅವರ ಚಿಕಿತ್ಸೆಯ ಫಲ ಕಂಡವರಿಗೆ ಲೆಕ್ಕವಿಲ್ಲ.
ನನ್ನಪ್ಪ ಇವರ ಬಳಿ ಆದ ತನ್ನ ಅನುಭವ ಹೇಳುತ್ತಿದ್ದ. ಒಮ್ಮೆ ಆತ ಕಷ್ಟಪಟ್ಟು ಖರೀದಿಸಿದ್ದ ಎತ್ತಿಗೆ ಹಾವು ಕಡಿದು ಅದು ಸಾಯುವುದು ಖಚಿತ ಅನ್ನುವ ಸ್ಥಿತಿ ಏರ್ಪಟ್ಟಿತ್ತಂತೆ. ದಾರಿ ಕಾಣದ ಅಪ್ಪ ಐದಾರು ಮೈಲಿ ದೂರದ ಇವರ ಬಳಿ ಹೋಗಿ ಕಷ್ಟ ಹೇಳಿದನಂತೆ, "ಎತ್ತು ಎಲ್ಲಿದೆ?" ಎಂದು ಅವರು ಕೇಳಿದಾಗ "ಮನೆಯಲ್ಲಿ" ಅಂದನಂತೆ. ಎತ್ತಿನ ಹೆಸರು ಕೇಳಿದ ಅವರು ಒಂದು ಬಿಳಿ ಬಣ್ಣದ ಕಲ್ಲು ಎತ್ತಿಕೊಂಡು ಅದರ ಮುಂದೆ ಪರಿಸ್ಥಿತಿ ಹೇಳಿ ಕಲ್ಲನ್ನು ಅಲ್ಲೇ ಇಡುವಂತೆ ಹೇಳಿದರಂತೆ. ಅನಂತರ ಅವರು ಮಂತ್ರ ಪಠಿಸುತ್ತ ಸ್ವಲ್ಪ ಹೊತ್ತಾದ ಮೇಲೆ ಕಲ್ಲು ನೋಡುವಂತೆ ಹೇಳಿದರಂತೆ. ಆ ಕಲ್ಲು ಕಪ್ಪು ಬಣ್ಣಕ್ಕೆ ತಿರುಗಿತ್ತಂತೆ. ಅವರು "ಚಿಂತೆ ಮಾಡಬೇಡ. ನಿನ್ನ ಎತ್ತು ಆರಾಮವಾಗಿದೆ ಹೋಗು" ಅಂದರಂತೆ. ಮನೆಗೆ ಧಾವಿಸಿದ ಅಪ್ಪ ನೋಡಿದರೆ ಎತ್ತು ಮನೆ ಬಳಿ ಹುಲ್ಲು ಮೇಯುತ್ತ ಸುಖವಾಗಿ ನಲಿಯುತ್ತಿತ್ತಂತೆ.
ಇನ್ನೊಂದು ವಿಧ. ಅವರು ಮೈಸೂರಿನಲ್ಲಿರುವ ಸಂಸ್ಕೃತ ಪ್ರಾಧ್ಯಾಪಕರು. ಅವರೂ ಈ ವಿದ್ಯೆ ಕಲಿತವರು. ಹಿರಿಯ ಜನಪದ ವಿದ್ವಾಂಸರಾಗಿದ್ದ ಜೇಶಂಪ ಅವರು ಇದೇ ಕಾಹಿಲೆಯಿಂದ ಬಳಲುತ್ತಿದ್ದರು. ಅಮೆರಿಕ್ಕೂ ಹೋಗಿ ಚಿಕಿತ್ಸೆ ಪಡೆದಿದ್ದರು. ಹೈ ಡೋಸೇಜಿನ ಔಷಧ ತಿಂದು ಬಳಲಿದ್ದರು. ಆದರೆ ಅದು ಸ್ವಲ್ಪ ದಿನಕ್ಕೆ ಮರುಕಳಿಸುತ್ತಿತ್ತು. ಅವರು ನನ್ನ ಪ್ರೀತಿಯ ಮೇಷ್ಟ್ರು ಬೇರೆ. ಅವರ ಕಷ್ಟ ನೋಡಲಾಗದೇ ನಾನು "ಸರ್ ಹೀಗೊಂದು ವಿಧಾನವಿದೆ ಏಕೆ ಒಮ್ಮೆ ಪ್ರಯತ್ನಿಸಬಾರದು?" ಅಂದೆ. ಇವೆಲ್ಲ ಆಗಲ್ಲ ಅಂದ್ರು. ಒತ್ತಾಯಿಸಿದೆ. "ಸರ್ ಒಂದು ಬಾಟಲು ಶುದ್ಧ ಕೊಬ್ಬರಿ ಎಣ್ಣೆ ಎರಡು ತೆಂಗಿನಕಾಯಿ ಮಾತ್ರ ಇದಕ್ಕೆ ತಗಲುವ ವೆಚ್ಚ. ಬನ್ನಿ ಸರ್. ನೀವು ಹೇಗಿದ್ದರೂ ಮೈಸೂರಲ್ಲೇ ಇದ್ದೀರ" ಎಂದು ಒತ್ತಾಯಿಸಿದೆ. ಅವರಿಗೆ ಸಕ್ಕರೆ ಕಾಹಿಲೆ ಬೇರೆ ಇದ್ದ ಕಾರಣ ಸರ್ಪಸುತ್ತಿನ ವ್ರಣ ಹುಣ್ಣಾಗಿ ಕೀವು ಬರುತ್ತಿತ್ತು. ಅಸಾಧ್ಯ ಉರಿ, ನೋವು ಅನ್ನು ತ್ತಿದ್ದರು. ನಾನು ಅವರನ್ನು ಈ ಚಿಕಿತ್ಸಕರ ಬಳಿ ಕರೆದೊಯ್ದೆ. ಪರಿಸ್ಥಿತಿ ನೋಡಿದ ಅವರು ವಾರಕ್ಕೆ ಮೂರುಬಾರಿ ಮಂತ್ರ ಚಿಕಿತ್ಸೆ ಆಗಬೇಕು ಅಂದ್ರು. ಒಂದು ಬಾರಿ ಒಂದುಗಂಟೆಯ ಕೆಲಸ. "ಆಯ್ತು ಇದನ್ನೂ ಮಾಡಿಬಿಡೋಣ" ಅಂದ್ರು ಮೇಷ್ಟ್ರು. "ಸರಿ ಸರ್" ಅಂದೆ. ಕೆಲವು ಪಥ್ಯ ಹೇಳಿದ ವೈದ್ಯರು ಮಂತ್ರಿಸಿದ ಎಣ್ಣೆಯನ್ನು ಮಲಗುವ ಮುಂಚೆ ಲೇಪಿಸಿಕೊಳ್ಳಲು ಹೇಳಿದರು. ಅವರು ಹದಿನೈದು ದಿನ ನಿಷ್ಠೆಯಿಂದ ಮಾಡಿದರು, ಎಲ್ಲ ಗುಣವಾಯ್ತು. ಕೆಲ ಕಾಲ ಆರಾಮವಾಗಿದ್ದ ಅವರು ಬೋನ್ ಕ್ಯಾನ್ಸರ್ ಇಂದ ಕಾಲವಾದರು. ಆ ಮಾತು ಬೇರೆ. ಆದರೆ ಸರ್ಪಸುತ್ತಿನಿಂದ ಅವರು ಸಂಪೂರ್ಣ ಗುಣವಾಗಿದ್ದರು. ಗಾಯವೂ ಮಾಸಿತ್ತು. ಇದೊಂದು ವಿಚಿತ್ರ ವಿದ್ಯೆ ಎಂದು ಮೆಚ್ಚಿಕೊಂಡಿದ್ದ ಅವರು ಹೋದಲ್ಲಿ ಬಂದಲ್ಲಿ ಪರಂಪರೆಯ ಈ ವಿದ್ಯೆಯನ್ನು ಮನಸಾರೆ ಹೊಗಳುತ್ತಿದ್ದರು.
ಒಮ್ಮೆ ಅಲ್ಲೇ ಕ್ಷೇತ್ರಕಾರ್ಯದಲ್ಲಿದ್ದ ನನಗೆ ವಿಷದ ಹುಳವೊಂದು ಕಡಿಯಿತು. ಕೈ ಅಸಾಧ್ಯ ನೋವು ಉರಿ ಮತ್ತು ಊತದಿಂದ ಕಾಲಿನ ಗಾತ್ರ ಪಡೆದಿತ್ತು. ಕೈ ಎತ್ತಲೂ ಆಗುತ್ತಿರಲಿಲ್ಲ. ಹತ್ತಿರದಲ್ಲಿ ಆಸ್ಪತ್ರೆಯೂ ಇರಲಿಲ್ಲ. ಗತಿ ಇಲ್ಲದೇ ಅವರ ಬಳಿ ಹೋದೆ. ಇಂದು ನಾಳೆ ಎರಡು ಬಾರಿ ಚಿಕಿತ್ಸೆ ಸಾಕು ಅಂದರು. ಸರಿ ಅಂದೆ. ಮೊದಲದಿನ ಚಿಕಿತ್ಸೆ ನಂತರ ಊತ ದಿಢೀರನೆ ಇಳಿಯಿತು. ಮರುದಿನವೇ ನೋವು ನಾಪತ್ತೆ. ಆಮೇಲೆ ಅದು ಮರೆತೇ ಹೋಯ್ತು. ಈಗ ಕಲೆ ಮಾತ್ರ ಉಳಿದಿದೆ. ನನಗೆ ಇದು ಇಂದಿಗೂ ಅಚ್ಚರಿ. ಆಧುನಿಕ ವೈದ್ಯರು ಅಥವಾ ಶಿಕ್ಷಣ ಪಡೆದವರ ಪ್ರತಿಕ್ರಿಯೆ ಇದಕ್ಕೆ ಏನಿರಬಹುದೆಂಬುದು ನಿರೀಕ್ಷಿತ. ಆದರೆ ಅನುಭವವನ್ನು ನಿರಾಕರಿಸಲು ಆಗದು. ಅಭಿಪ್ರಾಯ ಏನೇ ಇರಲಿ.
ಇನ್ನೊಬ್ಬರಿದ್ದರು ಬೈರಾಗಿಯಂತೆ ಅಲೆಯುತ್ತಿದ್ದರು. ಆದರೆ ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಕಳೆದಿದ್ದರೆ ಅದರ ಖಚಿತ ಮಾಹಿತಿಯನ್ನು ಕುಳಿತಲ್ಲೇ ಕೊಡುತ್ತಿದ್ದರು. ಒಮ್ಮೆ ನಮ್ಮನೆಯ ಎಮ್ಮೆ ಮನೆಗೆ ಬರದೇ ಎರಡು ದಿನವಾಗಿತ್ತು. ತಲೆ ಕೆಡಿಸಿಕೊಂಡ ಅಪ್ಪ ಅವರನ್ನು ಭೇಟಿಯಾದ. "ಅದು ನಿಮ್ಮ ಜಮೀನಲ್ಲೇ ಇದೆ. ಹಳ್ಳದಲ್ಲಿ ದಿಕ್ಕು ಕಾಣದೇ ನಿಂತಿದೆ ನೋಡಿ" ಅಂದರು. ನಮ್ಮ ಜಮೀನಿನ ಸುತ್ತ ಎರಡು ಹಳ್ಳಗಳಿವೆ. ಎಲ್ಲ ಹುಡುಕಿದ್ದಾಯ್ತು. ಒಂದುಕಡೆ ಎಮ್ಮೆ ಸುಮ್ಮನೆ ನಿಂತಿತ್ತು. ಎಮ್ಮೆ ಸಿಕ್ಕ ಖುಷಿ ಒಂದು ಕಡೆ. ಇದು ಅವರಿಗೆ ಹೇಗೆ ಗೊತ್ತಾಯ್ತು ಎಂಬ ಅಚ್ಚರಿ ಮತ್ತೊಂದು ಕಡೆ. ಇಂಥವರ ಸಂತತಿ ಈಗ ಇಲ್ಲವೇ ಇಲ್ಲ ಎಂಬಷ್ಟು ಅಪರೂಪವಾಗಿದೆ. ಇಂಥ ವಿಚಿತ್ರಳು ಎಲ್ಲಿ ಬೇಕಾದರೂ ನಡೆಯಬಹುದು. ತುಮಕೂರು ವಿವಿಯ ಪ್ರಸಾರಾಂಗ ಪ್ರಕಟಿಸಿದ ಸಿನಿಮಾ ಮತ್ತು ರಂಗಭೂಮಿಯ ಪರಿಶ್ರಮಿ ಶಂಕರೇಗೌಡರನ್ನು ಕುರಿತ ಕೃತಿಯಲ್ಲಿ ಅವರಿಗೆ ತಿಳಿದಿದ್ದ ಇಂಥ ವಿದ್ಯೆಯ ಉಲ್ಲೇಖವಿದೆ. ಕವಿ ಸಿದ್ದಯ್ಯನವರು ಇದನ್ನು ಕುರಿತು ವಿಶೇಷ ಉಪನ್ಯಾಸ ಕೂಡ ಮಾಡಿದ್ದರು.
ಇಂಥ ವಿದ್ಯೆಗಳು ಬ್ರಿಟಿಷರ ಅಪರಿಚಿತ ಸಂಪ್ರದಾಯದ ಹಿನ್ನೆಲೆಯ ಅಪನಂಬಿಕೆ ಹಾಗೂ ಅವಿಶ್ವಾಸದ ಕಾರಣ ವೈಜ್ಞಾನಿಕ ದಾಖಲೆ, ಪುರಾವೆ ಇತ್ಯಾದಿಗಳ ನೆಪದಲ್ಲಿ ಗೇಲಿಗೆ ಒಳಗಾಗಿ ಮೂಲೆಗುಂಪಾದವು. ಅವರ ಶಿಕ್ಷಣ ಪಡೆದ ನಾವು ಕೂಡ ಅದನ್ನೇ ನಂಬಿ ನಮ್ಮ ಅಮೂಲ್ಯ ಜ್ಞಾನ ಪರಂಪರೆಯನ್ನು ಸ್ವತಃ ಬದಿಗೆ ತಳ್ಳಿ "ಯೇ ಇವೆಲ್ಲ ನಂಬಕಾಗಕಿಲ್ಲ" ಅನ್ನುತ್ತ ಮೆರೆಯುತ್ತಿದ್ದೇವೆ. ಕಲಿಯುವ ಆಸಕ್ತಿ ಇದ್ದರೂ ಈಗ ಕಲಿಸುವವರಿಲ್ಲ. ಅವೆಲ್ಲ ವಿದ್ಯೆಗಳ ಪರಂಪರೆ ಸಂದುಹೋಗಿ ನಾಲ್ಕಾರು ತಲೆಮಾರು ಕಳೆದಿದೆ. ಈಗ ಏನು ಮಾಡ್ತೀರಿ? ಇಂಥವೆಲ್ಲ ಸುಳ್ಳು ಅನ್ನುವವರಿಗೆ ಒಂದೋ ಅನುಭವದ ಕೊರತೆ ಅಥವಾ ನಮ್ಮ ಪರಂಪರೆಯ ಬಗ್ಗೆ ಅಪನಂಬಿಕೆ. ಇಂಥವರು 'ಯೇಗ್ದಾಗೆಲ್ಲ ಐತೆ' ಕೃತಿ ಓದಬೇಕು. ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ಬೇರೆ ದಾರಿ ಇಲ್ಲ.

No comments:
Post a Comment