Monday, 30 January 2023

ಕಲಿಕೆಯ ಸ್ವರೂಪ


ನನ್ನ ತರಗತಿಯಲ್ಲಿ ಏನಾದರೂ ಪ್ರಯೋಗ ನಡೆಯುತ್ತಿರುತ್ತದೆ. ಒಂದಿಷ್ಟು ಹುಡುಗ ಹುಡುಗಿಯರಿದ್ದರು. ಏನ್ರಪ್ಪಾ ನೀವೆಲ್ಲ ಹಾಸ್ಟೆಲ್ನಲ್ಲಿ ಇದ್ದೀರಾ ಇಲ್ಲಾ ಮನೆಯಿಂದ ಓಡಾಡ್ತೀರಾ ಎಂದು ಕೇಳಿದೆ. ಅರ್ಧ ಜನ ಹಾಸ್ಟೆಲ್ ಅಂದ್ರೆ ಮಿಕ್ಕವರು ಮನೆ ಅಂದ್ರು. ನಿಮ್ಮ ಕತೆ ಏನ್ರಮ್ಮಾ ಅಂದೆ. ಅವರ ಉತ್ತರವೂ ಹೆಚ್ಚೂ ಕಡಿಮೆ ಇದೇ ಇತ್ತು. ಎಲ್ಲಾದರೂ ಇರಿ. ಪ್ರಶ್ನೆ ಅದಲ್ಲ. ನಿಮ್ಮಲ್ಲಿ ಎಷ್ಟು ಜನಕ್ಕೆ ನೀವು ಸ್ವೀಕರಿಸುವ ಆಹಾರ ತಯಾರಿಸಲು ಬರುತ್ತದೆ ಹೇಳಿ ಅಂದೆ. ಉತ್ತರವಿಲ್ಲ. ಹೋಗಲಿ ಅನ್ನ ಮಾಡಲು ಎಷ್ಟು ಜನಕ್ಕೆ ಬರುತ್ತದೆ ಅಂದ್ರೆ ಅದಕ್ಕೂ ಮೌನವೇ ಉತ್ತರ. "ಮೆಸ್ ಐತೆ ಸಾ" ಅಂದ್ರು. ಈಗ ಚರ್ಚೆಗೆ ಮೆಟ್ಟಿಲು ಸಿಕ್ತು. ಹೋಗಲಿ, ಎಷ್ಟು ಜನಕ್ಕೆ ರಂಗೋಲಿ ಹಾಕಲು, ಹಾಲು ಹಿಂಡಲು ಬರುತ್ತದೆ ಎಂದು ಕೇಳಿದೆ. ಮೌನ, ಬಟ್ಟೆ ಒಗೆದುಕೊಳ್ಳಲು, ತುಪ್ಪ ಮಾಡಲು... ಎಂದು ನಿತ್ಯ ಹಳ್ಳೀ ಜೀವನದ ಒಂದೊಂದೇ ಕೆಲಸದ ಬಗ್ಗೆ ಕೇಳುತ್ತ ಹೋದೆ, ಬಹುತೇಕ ಉತ್ತರ ಮೌನವೇ ಆಗಿತ್ತು. ಎಂಎ ಓದ್ತಿದ್ದೀರಾ ಏನಾದ್ರೂ ಬರೀತೀರಾ ಅಂದ್ರೆ ಮತ್ತೆ ಮೌನ. ಮತ್ತೆ ಏನು ಕಲಿತಿದ್ದೀರಪ್ಪಾ ಇಷ್ಟು ವರ್ಷದಲ್ಲಿ ಅಂದ್ರೆ ತಲೆ ಕೆಳಗೆ ಹಾಕಿಕೊಂಡಿದ್ರು.

ಬೆಂಗಳೂರಲ್ಲಿ ಕೆಲವು ಕಲಿಕಾ ಕೇಂದ್ರಗಳಿವೆ. ಇವುಗಳ ಕೆಲಸ ವಿದೇಶಕ್ಕೆ ಹೋಗುವ ಯುವಜನತೆಗೆ ಅನ್ನ ಹೆಚ್ಚೆಂದ್ರೆ ಉಪ್ಪಿಟ್ಟು ಮಾಡಲು ಕಲಿಸುವುದು. ಇದಕ್ಕೆ 20-30 ಸಾವಿರ ತೆರಬೇಕು.ಇದು ನಮ್ಮ ಸಮಾಜದ ಕಲಿಕೆಯ ಕತೆ. ನನ್ನ ಕ್ಲಾಸು ಅಂತಲ್ಲ. ಏನೇ ಓದುತ್ತಿರಲಿ ಅವರ ಕೌಶಲದ ಬಗ್ಗೆ ಕೇಳಿ. ನಿಮಗೆ ಒಂದಿಬ್ಬರ ಹೊರತು ಬೇರೆಯವರಿಂದ ಸಿಗುವ ಉತ್ತರ ಮೌನವೇ. ನಾನೂ ಹಳ್ಳಿಯಲ್ಲೇ ಹುಟ್ಟಿ ಬೆಳೆದೆ. ಸಮಾನ್ಯವಾಗಿ ಹಳ್ಳೀ ಜನ ಆದಷ್ಟೂ ತಮ್ಮ ಕೆಲಸ ತಾವೇ ಮಾಡಿಕೊಳ್ಳಲು ಆದ್ಯತೆ ಕೊಡುವುದರಿಂದ ಅನೇಕ ಕೌಶಲಗಳು ಅವರಿಗೆ ತಿಳಿದಿರುತ್ತವೆ. ಅಲ್ಲದೆ ಅವರಿಗೆ ಬೇರೆ ದಾರಿಯೂ ಇಲ್ಲ. ಹಳ್ಳಿಗಳ ಕುಟುಂಬಗಳು ಛಿದ್ರವಾದ ಪರಿಣಮ ಏನು ಎಂಬುದು ಸ್ವಲ್ಪ ಇದರಿಂದ ತಿಳಿಯುತ್ತದೆ. ನಮ್ಮೂರಲ್ಲಿ ಒಬ್ಬ ಹುಡುಗನಿದ್ದನೆ ಹತ್ತನೇ ಕ್ಲಾಸು ಅಷ್ಟೇ ಓದಿದ್ದು. ಆದರೆ ಮನೆ ಪರಿಸರದ ಮರಳು, ಇದ್ದಿಲು ಬಳಸಿ ಒಂದು ದೊಡ್ಡ ಪಾತ್ರೆಗೆ ನಲ್ಲಿ ಕೂರಿಸಿ ಸ್ವಂತ ವಾಟರ್ ಫಿಲ್ಟರ್ ಸಿದ್ಧಮಾಡಿದ್ದ. ನೋಡಿ ಖುಷಿ ಪಟ್ಟಿದ್ದೆ. ಆತ ತನ್ನ ಮನೆಯ ವಿದ್ಯುತ್ ಕೆಲಸ, ನೀರಿನ ಪಂಪ್ ರಿಪೇರಿ ಎಲ್ಲ ಮಾಡಿಕೊಳ್ಳುತ್ತಾನೆ. ಭಲೇ. ಇದಲ್ಲವೇ ಕೌಶಲ್ಯ? ಆದರೆ ನಮ್ಮ ಆಧುನಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಏಕೆ ಹೀಗಗುತ್ತಿದ್ದಾರೆ? ನಗರದ ಆಕರ್ಷಣೆ. ಅಲ್ಲಿ ಎಲ್ಲದಕ್ಕೂ ಜನ ಸಿಕ್ತಾರೆ. ದುಡ್ಡು ಇದ್ದರೆ ಆಯ್ತು, ಅಂದ್ರೆ ಹೇಗಾದ್ರೂ ªಮಾಡಿ ದುಡ್ಡು ಮಾಡಬೇಕು. ಇಂಥ ಮನೋಭಾವದಿಂದಲೇ ಭ್ರಷ್ಟಾಚಾರ ಕೂಡ ಹೆಚ್ಚಿದೆ ಅನ್ನಬಹುದಲ್ಲ? ಇರಬಹುದು. ಕೌಶಲವಿಲ್ಲದ ಸಮಾಜ ರೂಪಿಸುವ ಶಿಕ್ಷಣ ನಮ್ಮನ್ನೆಲ್ಲ ಎಲ್ಲಿಗೆ ಒಯ್ಯುತ್ತದೆ?

ಸಂಪ್ರದಾಯ ಪರಂಪರೆಯ ಬಂಧನ ಕೆಲವು ಕೌಶಲ್ಯಗಳನ್ನು ಒತ್ತಾಯದಿಂದ ಕಲಿಯುವಂತೆ ಮಾಡುತ್ತದೆ. ಬೆಳಿಗ್ಗೆ ಎದ್ದು ರಂಗವಲ್ಲಿ ಹಾಕಬೇಕು ಅಂದ್ರೆ ಮನೆಬಾಗಿಲು ತೊಳೆದು ಬಳಿದು ಮಾಡಬೇಕು, ಪೊರಕೆ ಹಿಡಿಯಲು ಇದು ಕಲಿಸುತ್ತದೆ, ನೀರು ಸೇದಲು, ರಂಗೋಲಿ ಬಿಡಿಸಲು ಕಲಿಸುತ್ತದೆ. ಒಂದೇ ಕೆಲಸ ಎಷ್ಟೆಲ್ಲ ಕಲಿಸುತ್ತದೆ ನೋಡಿ.

ನಿಮ್ಮ ಹಳ್ಳೀ ಮನೆಯಲ್ಲಿ ಒಂದು ತೋಟ, ಕೊಟ್ಟಿಗೆಯಲ್ಲಿ ಒಂದಿಷ್ಟು ದನ ಎಮ್ಮೆ ಕರುಗಳು ಇದ್ದರೆ ನಿಮ್ಮ ಜೀವನ ಪಾಠಕ್ಕೆ ಶಾಲೆ ಕಾಲೇಜು ಬೇಕಿಲ್ಲ. ಸುಮ್ಮನೇ ನೋಡಿ- ಒಂದು ಎಮ್ಮೆ ಇದ್ದರೆ ಅದನ್ನು ಮೇಯಿಸಲು ಹೋಗಬೇಕು ಅದರ ಸುತ್ತ ಬರುವ ಹಕ್ಕಿ ಹುಳ ಹುಪ್ಪಟೆ. ಅದು ಹಕುವ ಸೆಗಣ ಒಂದೆರಡು ದಿನದಲ್ಲಿ ಏನಾಗುತ್ತದೆ ಎಂಬ ಕುತೂಹಲ, ಅದು ಕಲಿಸುವ ಪಾಠ. ಕಡಿಮೆಯೇ? ಒಮ್ಮೆ ನಮ್ಮ ಹಾಕಿದ ಸೆಗಣಿ ಕುಪ್ಪೆಯನ್ನು ನಿತ್ಯ ಅದೇನೋ ಮಹಾ ಸಂಪತ್ತು ಎಂಬಂತೆ ಗಮನಿಸುವುದು ಮಾಡುತ್ತಿದ್ದೆವು. ಅದನ್ನು ಬೆದಕುತ್ತಿದ್ದೆವು. ಆಸೆಗಣಿ ಕುಪ್ಪೆ ಕೆದಕಿದಗ ಅದರಡಿಯಲ್ಲಿ ಒಂದು ಸಣ್ಣ ಕುಳಿಯಾಗಿತ್ತು. ಅದನ್ನೂ ತಿವಿದು ಸ್ವಲ್ಪ ಅಗೆದೆವು, ಅಲ್ಲಿ ನೋಡಿದ್ರೆ ಸಣ್ಣ ಗಾತ್ರದ ಹುಳಗಳು. ಸೆಗಣಿ ಉಂಡೆಮಾಡಿಕೊಂಡು ಮೇಲಕ್ಕೂ ಕೆಳಕ್ಕೂ ತಳ್ಳುತ್ತಿದ್ದವು. ಆ ಕುಳಿಯ ಆಳದಲ್ಲಿ ಒಂದಿಷ್ಟು ಸೆಗಣಿ ಉಂಡೆಗಳು. ಕೆಲವು ಹುಳಗಳು ಅದನ್ನು ಮೆಲ್ಲುತ್ತಿದ್ದವು. ಮಳೆಗಾಲ ಬಂದಾಗ ಈ ಕುಳಿಯಲ್ಲಿದ್ದ ಹುಳಗಳು ಏನಾದವೋ ಪಾಪ ಅಂದುಕೊಂಡು ಕುಳಿಯಲ್ಲಿ ನೀರು ಹೋಗದಂತೆ ಕಾಯುವ ಪರಮ ದಡ್ಡ ಕೆಲಸ ಮಾಡಿದ್ದೆವು. ಅಲ್ಲಿ ನೋಡಿದ್ರೆ ಒಂದು ಹುಳಕ್ಕೂ ಏನೂ ಆಗಿರಲಿಲ್ಲ. ಕುಳಿಯಲ್ಲಿ ನೀರು ಇಂಗಿ ಹೋಗುತ್ತಿತ್ತು. ಅಲ್ಲಿಗೆ ಅಂತರ್ಜಲ ಕೂಡುತ್ತಿತ್ತು. ಇನ್ನು ಅಲ್ಲಿಗೆ ಬರುತ್ತಿದ್ದ ಬಗೆಬಗೆಯ ಹಕ್ಕಿಗಳು. ಕೆಲವು ಸೆಗಣಿ ಹುಳ ತಿಂದರೆ ಕೆಲವಕ್ಕೆ ಆ ಹುಳ ಲೆಕ್ಕಕ್ಕೇ ಇರುತ್ತಿರಲಿಲ್ಲ. ಎಮ್ಮೆ ಮೇಲೆ ಬಂದು ಕೂರುತ್ತಿದ್ದ ಕೀಟಗಳು ಅವುಗಳ ಆಸಕ್ತಿ ಆಗಿರುತ್ತಿತ್ತು. ಹೀಗೆ ಹಳ್ಳಿ ಜೀವನ ಅನೇಕ ತಿಳಿವಳಿಕೆ ಕೊಡುತ್ತದೆ, ಬೇಕಾದ್ದು ಒಂದೇ-ಕುತೂಹಲ. ಮತ್ತೆ ಯಾವ ಶಾಲೆಯೂ ಬೇಕಿಲ್ಲ. ಇಂಥ ತಿಳಿವಳಿಕೆಯನ್ನು ನಮ್ಮ ಆಧುನಿಕ ಶಿಕ್ಷಣ ಎಂದಾದರೂ ಕೊಡಬಲ್ಲುದೆ? ಅದರ ಸ್ವರೂಪ ಹೀಗೆ ಪ್ರಾಯೋಗಿಕತೆಯ ರೂಪ ಪಡೆಯಲು ಸಾಧ್ಯವೇ? ಈ ಪ್ರಶ್ನೆಗೆ ನನ್ನ ಉತ್ತರ ಮೌನ. ನಿಮ್ಮದು?

    


1 comment:

  1. Excellent. Diverse knowledge and skills will be acquired by self interest. Everything cannot be taught. Thanks for your highlight. B N Yalamalli

    ReplyDelete