Thursday, 16 February 2023

ಇತಿಹಾಸ ಕುರಿತ ಹೊಸ ಆಯಾಮದ ಕೃತಿ


ಮೂಲತಃ ಇಂಜಿನಿಯರ್ ಅವರಾದ ಬಿ.ಎನ್. ಯಳಮಳ್ಳೀಯವರು ಸ್ವಂತ ಆಸಕ್ತಿಯ ಮೇಲೆ ಇತ್ತೀಚಿಗೆ 'ಭಾರತದ ಇತಿಹಾಸದ ತಿರುಚಿದ ಪುಟಗಳು' ಎಂಬ ಕೃತಿಯನ್ನು ರಚಿಸಿ ಹೊರತಂದಿದ್ದಾರೆ. ಇವರು ಇತಿಹಾಸ, ಸಾಹಿತ್ಯ ಅಥವಾ ಮಾನವಿಕ ವಿಷಯಗಳ ವಿದ್ಯಾರ್ಥಿ ಅಲ್ಲ. ಆದರೂ ಕುತೂಹಲ ಮತ್ತು ಆಸಕ್ತಿಗಳಿಂದ ಸಮಕಾಲೀನ ವಿದ್ಯಮಾನಗಳ ಬೆಳವಣಿಗೆಯಿಂದ ಭಾರತದ ನೈಜ ಇತಿಹಾಸ ಏನಿದೆ ಎಂಬ ಅಧ್ಯಯನಕ್ಕೆ ಮುಂದಾಗಿ ಈ ಕೃತಿಯನ್ನು ರಚಿಸಿದ್ದಾರೆ. ಇದಕ್ಕೆ ಮೂಲ ಕಾರಣ ಶಾಲಾ ಪಠ್ಯಪುಸ್ತಕ ರಚನೆಯ ವಿವಾದ ಇದನ್ನು ಲೇಖಕರು ತಮ್ಮ ಮಾತಿನಲ್ಲಿ ಹೇಳಿಕೊಂಡಿದ್ದಾರೆ: 'ವಿದ್ಯಾಸ್ಥಾನಗಳ ಪಠ್ಯ ಪುಸ್ತಕಗಳಲ್ಲಿ ಇತಿಹಾಸವನ್ನು ಮತ್ತು ಸಮಾಜ ಸರಕಾರ ನೇಮಿಸಿದ ಪಠ್ಯ ಪರಿಷ್ಕರಣ ಸಮಿತಿ ಏನು ಮಾಡಿತ್ತು. ಈಗಿನ ಸರಕಾರ ನೇಮಿಸಿದ ಸಮಿತಿ ಏನು ಮಾಡಿದೆ ಎನ್ನುವುದು ಒಂದು ಅತೀ ಸೀಮಿತ ವಿವಾದ. ಇಲ್ಲಿನ ವಿಷಯ ಇನ್ನೂ ತುಂಬಾ ಹಳೆಯದು, ಇನ್ನೂ ಗಹನವಾದುದು. ಭಾರತದ ಇತಿಹಾಸ ಕೇವಲ ಪಠ್ಯಪುಸ್ತಕಗಳ ಮಾತ್ರ ತಿರುಚಲ್ಪಟ್ಟಿದೆ.'

ನಿಜವಾಗಿ ಈ ಬಗೆಯ ದೃಷ್ಟಿಕೋನ ನಮ್ಮ ಸಮಾಜದಲ್ಲಿ ಇತ್ತೀಚೆಗೆ ಅದರಲ್ಲೂ ಕಳೆದ ವರ್ಷ ನಡೆದ ಅಯೋಧ್ಯೆಯ 'ಜ್ಞಾನವ್ಯಾಪಿ' ಮಸೀದಿ - ಮಂದಿರ ಗಲಭೆಯಿಂದ ತೀವ್ರವಾಗಿದೆ. ಸಮಾಜದಲ್ಲಿ ಅಕ್ಷರಬಲ್ಲವರೆಲ್ಲ ತಮ್ಮ ತಮ್ಮ ಊರಿನ ಗತವನ್ನು ಅಗೆಯಲು ಆರಂಭಿಸಿದ್ದಾರೆ. ಒಂದು ದೃಷ್ಠಿಯಲ್ಲಿ ಇದು ಉತ್ತಮ ಬೆಳವಣಿಗೆಯಾದರೂ ಯುರೋಪಿನ ಇತಿಹಾಸದದೃಷ್ಟಿ ಎರಡು ಪಕ್ಷಗಳನ್ನು ಸೃಷ್ಟಿಸಿ ಇಂಥ ವಿವಾದಗಳನ್ನು ಎಂದಿಗೂ ಸಾಯಲು ಬಿಡದೆ ಜಾಗೃತವಾಗಿ ಇಟ್ಟಿರುತ್ತದೆ. ಅಂದರೆ ಈ ಬಗೆಯ ಇತಿಹಾಸದ ದೃಷ್ಟಿಯಿಂದ ಯಾವುದೇ ಘಟನೆ ವಸ್ತು, ವ್ಯಕ್ತಿಗಳನ್ನು ಕುರಿತ ವಿವಾದ ಎಂದಿಗೂ ಅಂತ್ಯಕಾಣುವುದಿಲ್ಲ ಅಥವಾ ಶಾಂತಿ ಮೂಡಿಸುವುದಿಲ್ಲ. ಯುರೋಪಿನ ಹಿಸ್ಟ್ರಿ ಅಥವಾ ಇತಿಹಾಸ ಬೇಡುವ ಆಧಾರಗಳು ಎರಡು ಪಕ್ಷಗಳಿಗೆ ಸಾಕಷ್ಟು ಗ್ರಾಸ ಒದಗಿಸುತ್ತವೆ. ಟಿಪ್ಪು, ಔರಂಗಜೇಬ ಮೊದಲಾದವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳು ಈ ಬಗೆಯವು. ಪ್ರಸ್ತುತ ಕೃತಿಯಲ್ಲಿ ಲೇಖಕರು ಗ್ರಹಿಸುವಂತೆ 'ಇಸ್ಲಾಮಿಕ್ ಆಕ್ರಮಣಕಾರರು ಭಾರತದ ಮೇಲೆ ಇಸ್ಲಾಮಿಕ್ ಆಳ್ವಿಕೆಯನ್ನು ಹೂಡುವ ಸಲುವಾಗಿ ಭಾರತದ ಪ್ರವೇಶಿಸಿ, ಅತಿಕ್ರಮಿಸಿ ಸ್ವಾಧೀನಪಡಿಸಿಕೊಂಡು. ನಿಜವಾದ ಇತಿಹಾಸದ ಸಂಕೇತಗಳನ್ನು ಭೌತಿಕವಾಗಿ ನಾಶಪಡಿಸಿ,ಅವುಗಳ ಮೇಲೆ ಇಸ್ಲಾಮಿಕ್ ಚಿಹ್ನೆಗಳನ್ನು ನಿರ್ಮಿಸಿದರು. ನಂತರ ಬಂದ ಬ್ರಿಟಿಷರು ಆಕ್ರಣಕಾರರು ಮುಖ್ಯವಾಗಿ ಸಂಪತ್ತಿನ ಲೂಟಿಯ ಮೇಲೆ ಗಮನ ಕೇಂದ್ರೀರಿಸಿದರು. ಪ್ರಸ್ತುತ ಕೃತಿಯಲ್ಲಿ ಒಟ್ಟು 15 ಅಧ್ಯಾಯಗಳಿದ್ದು ಇತಿಹಾಸ ಎಂದರೇನು? ಎಂಬಂಲ್ಲಿಂದ ಹಿಡಿದು ಮಹಾನ್ ಇತಿಹಾಸಕಾರರು ಅವಲೋಕದವರೆಗೆ ಇದರ ವ್ಯಾಪ್ತಿ ಹರಡಿಕೊಂಡಿದೆ. ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಸಿದ್ಧ ರಾಜಮನೆತನಗಳನ್ನು ಮತ್ತು ಆಡಳಿತಗರರನ್ನು ಮಾತ್ರ ಗಮನಿಸಿ ಸ್ಥಳೀಯ ರಾಜರು ಮತ್ತು ಪಾಳೆಪಟ್ಟುಗಳನ್ನು ನಿರ್ಲಕ್ಷ್ಯಮಾಡಲಾಗಿದೆ ಎಂದು ಲೇಖಕರು ಉದ್ದಕ್ಕೂ ಪ್ರತಿಪಾದಿಸುತ್ತಾರೆ. ಇದಕ್ಕಾಗಿ ಸಾಕಷ್ಟು ಆಧಾರಗಳನ್ನು ಕೂಡ ಸಂಗ್ರಹಿಸಿದ್ದಾರೆ. ಸಾಕಷ್ಟು ಶ್ರಮವಹಿಸಿ ಈ ಕೃತಿಯನ್ನು ರಚಿಸಿ ಇತಿಹಾಸದ ಇನ್ನೂಂದು ಆಯಾಮವನ್ನು ಸಮಾಜದ ಮುಂದೆ ತೆರೆದು ತೋರೊಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ.

ಆದರೆ ಇವರು ಇತಿಹಾಸಕಾರರಲ್ಲದ ಅಥವಾ ಶಿಕ್ಷಣ ಕ್ಷೇತ್ರದವರು ಅಲ್ಲದ ಕಾರಣ ಇವರ ಕೃತಿ ಹೆಚ್ಚು ಚರ್ಚೆಗೆ ಬರುತ್ತಿಲ್ಲ. ಈ ಕೃತಿಯಲ್ಲಿ ಕೆಲವು ಚಚಾರ್ಹ ಸಂಗತಿಗಳಿದ್ದು ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಉದಾಹರಣೆಗೆ ಬ್ರಿಟಿಷ್ ಅವಧಿಯ ನೀತಿಗಳು, ಮೆಕಾಲೆಯ ತಟಸ್ಥ ನೀತಿ, ಆರ್ಯರ ವಲಸೆ ಸಿದ್ಧಾಂತ ಮುಂತಾದವು ಈಗಾಗಲೇ ಸ್ಥಾಪಿತವಾದ ಜನಪ್ರಿಯ ತಪ್ಪು ಅಭಿಪ್ರಾಯಗಳನ್ನು ಪ್ರಶ್ನೆಸುತ್ತದೆ. ಪ್ರಜಾಪ್ರಭುತ್ವದ ಜಾಗೃತ ಸಮಾಜದಲ್ಲಿ ಇಂಥ ಸಂಗತಿಗಳು ಮುಕ್ತವಾಗಿ ಚರ್ಚೆಗೆ ಒಳಗಾಗಬೇಕಾದ ಅಗತ್ಯವಿದೆ. ಒಬ್ಬ ಪ್ರಾಮಾಣಿಕ ಪ್ರಜ್ಞಾವಂತ ಪ್ರಜೆ ಇಂಥ ಪ್ರಯತ್ನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಇಂಥ ಪ್ರಯತ್ನಗಳಿಂದ ಸಮುದಾಯ ಜಾಗೃತವಾಗಿರುತ್ತದೆ. ಆರೋಗ್ಯಕರ ಚರ್ಚೆಯಿಂದ ತನ್ನನ್ನು ತಾನು ಅವಲೋಕಿಸಿಕೊಳ್ಳುತ್ತದೆ. ಆದರೆ ಪ್ರಸ್ತುತ ಕೃತಿಯನ್ನು ಸಮಕಾಲೀನ ವ್ಯವಸ್ಥೆ ಮತ್ತು ಸಮಾಜ ಯಾವ ರೀತಿಯಲ್ಲಿ ಸ್ವೀಕರಿಸುತ್ತದೆ ಎಂಬುದನ್ನು ನೋಡಬೇಕಿದೆ. ಈ ಕೃತಿಯನ್ನು ಬೆಂಗಳೂರಿನ ಸಾಧನ ಪಬ್ಲಿಕೇಷನ್ ಪ್ರಕಟಿಸಿದೆ. ಇತಿಹಾಸೇತರ ಕ್ಷೇತ್ರದ ವ್ಯಕ್ತಿಯೊಬ್ಬರು ಈ ಬಗೆಯ ಪ್ರಯತ್ನಕ್ಕೆ ಕೈಹಾಕಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. ತಮ್ಮ ಪ್ರಯತ್ನಕ್ಕೆ ಅಡಿಪಾಯವಾಗಿ ಪ್ರಸಿದ್ಧ ಇತಿಹಾಸಕಾರರಾದ ಜದುನಾಥ ಸರ್ಕಾರ್,ರವರ "ಸತ್ಯವು ಹಿತಕರವೋ ಅಥವಾ ಅಪ್ರಿಯವೋ, ಮತ್ತು ಪ್ರಸ್ತುತ ದೃಷ್ಟಿಕೋನಗಳಿಗೆ ಅನುಗುಣವಾಗಿ ಅಥವಾ ವಿರುದ್ಧವಾಗಿದೆಯೋ ಎಮದು ನಾನು ಹೆದುರುವುದಿಲ್ಲ. ಸತ್ಯವು ನನ್ನ ದೇಶದ ವೈಭವಕ್ಕೆ ಮಾರಕವಾಗಿದೆಯೇ, ಇಲ್ಲವೇ ಎಂದು ನಾನು ಸ್ವಲ್ಪವೂ ತಲೆ ಕೆಡಿಸಿಕೊಳ್ಳುವುದಿಲ್ಲ ಅಗತ್ಯವಿದ್ದರೆ, ಸತ್ಯವನ್ನು ಬೋಧಿಸುವುದಕ್ಕಾಗಿ ಸ್ನೇಹಿತರ ಮತ್ತು ಸಮಾಜದ ಅಪಹಾಸ್ಯ ಮತ್ತು ನಿಂದನೆಗಳನ್ನು ನಾನುತಾಳ್ಮೆಯಿಂದ ಸಹಿಸಿಕೊಳ್ಳುತ್ತೇನೆ. ಆದರೆ ನಾನು ಸತ್ಯವನ್ನು ಹುಡುಕುತ್ತೇನೆ. ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತೇನೆ ಮತ್ತು ಸತ್ಯವನ್ನು ಒಪ್ಪಕೊಳ್ಳುತ್ತೇನೆ ಎನ್ನುವುದು ನೈಜ ಇತಿಹಾಸಕಾರನ ದೃಢ ಸಂಕಲ್ಪವಾಗಿರಬೇಕು". ಎಂಬ ಮಾತನ್ನು ಉಲ್ಲೇಖಿಸಿ ಕೃತಿಯನ್ನು ಆರಂಭಿಸುತ್ತಾರೆ. ಲೇಖಕರು ತಮ್ಮ ಕೃತಿಯುದ್ದಕ್ಕೂ ಭಾರತದ ಇತಿಹಾಸವನ್ನು ಅಥವಾ ಇತಿಹಾಸವೆಂದು ನಂಬಲಾದ ಸಂಗತಿಗಳನ್ನು ಯಾವ ಯಾವ ಹಂತದಲ್ಲಿ ಯಾರೆಲ್ಲ ಹೇಗೆ ತಿರುಚಿದ್ದಾರೆ ಎಂಬುದನ್ನು ನಿರೂಪಿಸುವ ಯತ್ನಮಾಡಿದ್ದಾರೆ. ಕುತೂಹಲಕರ ಸಂಗತಿ ಎಂದರೆ ಅವರ ಈ ಪ್ರಯತ್ನ ಕೂಡ ಯುರೋಪಿನ ಇತಿಹಾಸ ದೃಷ್ಟಿಯಿಂದಲೇ ಹುಟ್ಟಿಕೊಂಡಿದೆ ಮತ್ತು ಪ್ರತಿಪಾದಿತವಾಗಿದೆ ಎಂಬುದು. ಈ ಬಗೆಯ ದೃಷ್ಟಿಕೋನ ಸಮಸ್ಯಾತ್ಮಕ. ಏಕೆಂದರೆ ರಾಮಾಯಣ, ಮಹಾಭಾರತಗಳ ಸಂಗತಿಗಳನ್ನು ಇಂಥ ದೃಷ್ಟಿಯಿಂದ ಪರಿಶೀಲಿಸುತ್ತಾ ಹೋದರೆ ಅದಕ್ಕೆ ಅಂತ್ಯವೇ ಇರುವುದಿಲ್ಲ ಉದಾಹರಣೆಗೆ ರಾಮಸೇತುವನ್ನು ಗಮನಿಸಬಹುದು. ಇದೊಂದು ಜನಪ್ರಿಯ ಸಂಗತಿ. ರಾಮಸೇತು ನಿಜಕ್ಕೂ ಇದೆಯೇ? ಎಲ್ಲಿದೆ ಹೇಗಿದೆ ಎಂಬುದು ಮೊದಲ ಪ್ರಶ್ನೆ ಅದನ್ನು ಕಟ್ಟಿದವರು ಯಾರು? ಅವರಿಗೆ ಪದವಿ ಪ್ರಶಸ್ತಿ ಕೊಟ್ಟ ಕಾಲೇಜು ಯಾವುದು ಇತ್ಯಾದಿ ಅರ್ಥಹೀನ ಪ್ರಶ್ನೆಗಳು ಒಂದರ ಹಿಂದೆ ಒಂದರಂತೆ ಹುಟ್ಟುತ್ತವೆ. ನಿಜವಾಗಿ ಸಮಾಜದ ನಂಬಿಕೆಯನ್ನು, ಐತಿಹ್ಯವನ್ನು ಯುರೋಪಿನ ಇತಿಹಾಸದ ದೃಷ್ಟಿಯಲ್ಲಿ ಪರಿಶೀಲನೆಗೆ ಒಡ್ಡಿದರೆ ಈ ಬಗೆಯ ಸಮಸ್ಯಗಳು ಎಂದಿಗೂ ನಿಲುಗಡೆ ಕಾಣುವುದಿಲ್ಲ. ಆದರೆ ಎರಡು ಭಿನ್ನ ದೃಷ್ಟಿಗಳ ಬದಲು ಯುರೋಪಿನ ದೃಷ್ಟಿಯಲ್ಲಿಯೇ ಭಾರತೀಯ ಇತಿಹಾಸವನ್ನು ಹೇಗೆ ತಿರುಚಲಾಗಿದೆ ದ್ವಂದ್ವ ರೀತಿಯಲ್ಲಿ ಹೇಗೆ ಪ್ರತಿಪಾದಿಸಲಾಗಿದೆ ಎಂಬುದನ್ನು ಈ ಕೃತಿ ನಿರೂಪಿಸುತ್ತದೆ. ಯಾವುದೇ ವಿವಾದ ಸೃಷ್ಟಿಸುವುದು ಇಲ್ಲಿನ ಉದ್ದೇಶವಲ್ಲ ಇದ್ದುದನ್ನು ಇರುವಂತೆ ತೆರೆದಿಡುವ ಪ್ರಯತ್ನ ಮಾತ್ರ ಎಂಬ ತಮ್ಮ ಮಾತಿಗೆ ಲೇಖಕರು ಬದ್ಧರಾಗಿದ್ದಾರೆ. ಇಂಥ ಕೃತಿಯನ್ನು ರಚಿಸಿದ ಯಳಮಳ್ಳೀಯವರು ಅಭಿನಂದನಾರ್ಹರು ಪ್ರಸ್ತುತ ಕೃತಿ ಶಿಕ್ಷಣ ವಲಯದ ಗಮನ ಸೆಳೆಯಲಿ ಹೆಚ್ಚು ಚರ್ಚೆಗೆ ಒಳಗಾಗಲಿ ಎಂದು ಬಯಸಬಹುದು.

No comments:

Post a Comment