ಕಳೆದ ಬಾರಿಯ ಬಜೆಟ್ ನಲ್ಲಿ ಘೋಷಿಸಲಾದ ಯೋಜನೆ ಹಾಗೂ ಮೀಸಲಾದ ಹಣದಲ್ಲಿ ಕೇವಲ ಶೇ.46 ಹಣ ವ್ಯಯಿಸಲಾಗಿದ್ದು ಉಳಿದ ಮೀಸಲು ಹಣ ಹಾಗೆಯೇ ಉಳಿದಿದೆ ಅನ್ನಲಾಗಿದೆ. ಈ ದೃಷ್ಟಿಯಿಂದ ಬಜೆಟ್ ನಲ್ಲಿ ಘೋಷಿಸಲಾದ ಎಲ್ಲವನ್ನೂ ಪೂರೈಸಲು ಸಾಧ್ಯವಾಗದಿದ್ದರೂ ಅದರಲ್ಲಿ ಅರ್ಧದಷ್ಟಾದರೂ ಉಪಯೋಗ ಕಾಣಬೇಕಿತ್ತು. ಆಗ ಅದು ಬಜೆಟ್ ಸದುಪಯೋಗವಾಗಿದೆ ಅನ್ನಲು ಸಾಕಾಗುತ್ತಿತ್ತು. ಆದರೆ ರಾಜ್ಯ ತಲಾದಾಯದಲ್ಲಿ ಶೇ.9 ರಷ್ಟು ಏರಿಕೆ ಆಗಿರುವುದು ತೃಪ್ತಿದಾಯಕ ಸಂಗತಿ. ಮೂರು ಲಕ್ಷ ಕೋಟಿಯನ್ನು ಮೀರಿದ ಹೆಚ್ಚುವರಿ ಬಜೆಟ್ ಈ ಬಾರಿ ಮಂಡನೆಯಾಗಿದ್ದು ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದು ಉತ್ತಮ ಸಂಗತಿ. ರೈತರಿಗೆ ಹೆಚ್ಚಿನ ಸಾಲದ ಪ್ರೋತ್ಸಾಹ, ಯುವಕರಿಗೆ ಮಹಿಳೆಯರಿಗೆ ಪ್ರೋತ್ಸಾಹಗಳು ಉತ್ತೇಜನಕಾರಿಯಾಗಿವೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕ್ರೀಡಾಂಗಣ ನಿರ್ಮಾಣ, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹದ ಜೊತೆಗೆ ಕ್ರೀಡಾ ತರಬೇತಿ ಸಂಸ್ಥೆಗಳಿಗೆ ಪ್ರೋತ್ಸಾಹಧನ ಮೊದಲಾದವು ನಿಜಕ್ಕೂ ಉತ್ತಮ ಬೆಳವಣಿಗೆಗಳು. ಸಕಾರಿ ನೌಕರರಿಗೆ ಸಂಬಂಧಿಸಿದಂತೆ ಏಳನೆಯ ವೇತನ ಆಯೋಗ ರಚನೆಗೆ ಸಂಬಂಧಿಸಿದ ಉಲ್ಲೇಖ ಬಜೆಟ್ನಲ್ಲಿ ಇಲ್ಲವಾದರೂ ಇಂಥ ಉದ್ದೇಶಕ್ಕಾಗಿ ಮೀಸಲಿಟ್ಟ ಆರುಸಾವಿರ ಕೋಟಿ ರೂಗಳಲ್ಲಿ ಇದನ್ನು ಈಡೇರಿಸಬಹುದಾಗಿದೆ, ಅಲ್ಲದೇ ಎಲ್ಲವನ್ನೂ ಬಜೆಟ್ ಘೋಷಣೆಯ ಮೂಲಕವೇ ಮಾಡಬೇಕಿಲ್ಲ. ಶಾಲಾಲಾ ಶಿಕ್ಷಕರ ನೇಮಕಾತಿ ಘೋಷಣೆಯಾದುದು ನಿರೀಕ್ಷೆಯಂತೆ ನಡೆದಿದೆ. ಮೂಲಸೌಕರ್ಯ ಅಭಿವೃದ್ಧಿಗೂ ಸಾಕಷ್ಟು ಉತ್ತೇಜನ ಕೊಡಲಾಗಿದೆ. ಇದೇ ಮೊದಲ ಬಾರಿಗೆ ನಮ್ಮ ರಾಜ್ಯ ಬಜೆಟ್ 3 ಲಕ್ಷ ಕೋಟಿ ರೂಗಳನ್ನು ದಾಟಿದೆ. ಕೊರೋನಾ ಕಾಟದ ಹೊಡೆತದಿಂದ ಚೇತರಿಸಿಕೊಂಡು ಈ ಮಟ್ಟಿಗೆ ಬಜೆಟ್ ನೀಡಿರುವುದು ಎಲ್ಲವನ್ನೂ ಸರಿದೂಗಿಸಿದ್ದು ಸಣ್ಣ ಸಾಧನೆಯಲ್ಲ. ವಾರ್ಷಿಕ ಜಿ.ಎಸ್.ಟಿ ಸಂಗ್ರಹಣೆ ಶೇ. 26ಕ್ಕೇರಿದೆ. ತೆರಿಗೆ ಸಂಗ್ರಹಣೆ ಶೇ. 21ಕ್ಕೇರಿದೆ. ತಮ್ಮ ತವರು ಜಿಲ್ಲೆ ಹಾವೇರಿಗೆ ಹೊಸ ಯೋಜನೆಗಳನ್ನು ಕೊಟ್ಟಿದ್ದಾರೆ, ತುಮಕೂರು ಸೇರಿದಂತೆ ಉಳಿದೆಡೆಯ ಬೇಡಿಕೆಗಳು ಹಾಗೆಯೇ ಉಳಿದಿವೆ. ಮಠ ಮಾನ್ಯಗಳಿಗೆ ಬಿಜೆಪಿ ಸರ್ಕಾರ ಅನುದಾನ ಕೊಡುವುದು ಹೊಸದಲ್ಲ, ಈ ಬಾರಿ ಬೊಮ್ಮಾಯಿ ಅದನ್ನು ಮುಂದುವರೆಸಿದ್ದಾರೆ. ಒಂದು ಅರ್ಥದಲ್ಲಿ ಮಠ ಮಾನ್ಯಗಳು ಆಯಾ ಸಮುದಾಯಗಳನ್ನು ಪ್ರತಿನಿಧಿಸಿ ಸಮುದಾಯಗಳ ಅಭಿವೃದ್ಧಿಗೆ ಮುಂದಾಗುತ್ತವೆ. ಹೀಗಾಗಿ ಸಮುದಾಯಗಳು ಅಭಿವೃದ್ಧಿಯಾದರೆ ಸಮಾಜದ ಅಭಿವೃದ್ಧಿ ಸಹಜವಾಗಿ ಆಗುತ್ತದೆ. ಕೆಲವು ಮಠ ಮಾನ್ಯಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅನುದಾನ ನೀಡುವಾಗ ಸರ್ಕಾರ ಇಂಥ ಸಂಗತಿಯನ್ನು ಗಮನಿಸಬೇಕು. ಸಮಾಜದ ತೆರಿಗೆ ಹಣ ಸಮಾಜಕ್ಕೆ ಪರೋಕ್ಷ ಅಥವಾ ಪ್ರತ್ಯಕ್ಷ ರೀತಿಯಲ್ಲಿ ತಲುಪಬೇಕು ಅದರಲ್ಲಿ ಪಕ್ಷಪಾತ ಆಗಬಾರದು ಇದು ಆಯವ್ಯಯದ ಮೂಲಮಂತ್ರವಾಗಿರಬೇಕು. ಈ ನಿಟ್ಟಿನಲ್ಲಿ ಸದ್ಯದ ಬಜೆಟ್ ನ್ಯಯ ಕೊಡಲು ಯತ್ನಿಸಿದೆ ಅನ್ನಬೇಕು. ಚುನಾವಣಾ ವರ್ಷದಲ್ಲಿ ಬರುವ ಬಜೆಟ್ಟಿಗೆ ಯಾವಾಗಲೂ ಮತವನ್ನು ತಗುಲಿಸಲಾಗುತ್ತದೆ, ಈ ಬಾರಿಯೂ ಇದೇ ನಡೆದಿದೆ. ಬಹುತೇಕ ಸಮುದಾಯಗಳನ್ನು ತಲುಪುವ ಕೆಲಸ ಬಜೆಟ್ಟಿನಲ್ಲಿನಡೆದಿರುವ ಕಾರಣ ಇದನ್ನು ಆ ಹಿನ್ನೆಲೆಯಲ್ಲಿಯೇ ನೋಡಲಾಗುತ್ತಿದೆ. ಇದರಲ್ಲಿ ತಪ್ಪಿಲ್ಲ.
ಬಜೆಟ್ ಮಂಡನೆಯಾದಾಗ ಬೆಂಗಳೂರಿಗೆ ಏನು ದೊರೆತಿದೆ ಎಂದು ನೋಡುವುದು ಈಚೆಗೆ ಸಾಮಾನ್ಯವಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ತೆರಿಗೆಯನ್ನು ಬೆಂಗಳೂರು ಪಾವತಿಸುತ್ತದೆ ಎಂಬುದು ನಿಜವಾದರೂ ಉಳಿದ ಜಾಗಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಜೊತೆಗೆ ಬಜೆಟ್ಟಿನಲ್ಲಿ ನೀಡಿದ ಎಲ್ಲ ಯೋಜನೆಗಳು ಮತವನ್ನೇ ಗುರಿಮಾಡಿಕೊಂಡಿವೆ ಅನ್ನಲಾಗದು. ಆದರೆ ಈ ಬಜೆಟ್ ಸದ್ಯದಲ್ಲೇ ಒಂದೆರಡು ತಿಂಗಳಲ್ಲಿ ಬರಲಿರುವ ಚುನಾವಣೆವರೆಗೆ ಮಾತ್ರವಾದ್ದರಿಂದ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನವಂತೂ ಇದರಲ್ಲಿ ನಡೆದಿದೆ, ರಾಮನಗರದಲ್ಲಿ ರಾಮಮಂದಿರ ನಿರ್ಮಾಣ, ಹನುಮಾದ್ರಿ ಅಭಿವೃದ್ಧಿ ಯೋಜನೆಗಳು ಬಿಜೆಪಿ ಪಕ್ಷದ ಉದ್ದೇಶಗಳನ್ನು ತೋರಿಸುತ್ತವೆ. ನಿರುದ್ಯೋಗಿ ಮಹಿಳೆಯರಿಗೆ ಉಚಿತ ಬಸ್ ಮೀನುಗಾರರ ಅಭಿವೃದ್ಧಿ ಯೋಜನೆಗಳು ಉತ್ತಮವಾಗಿವೆಯಾದರೂ ಇದರಲ್ಲಿ ಸೂಕ್ತ ಫಲಾನುಭವಿಗಳ ಪತ್ತೆಗೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಗಮನಾರ್ಹ. ಬಜೆಟ್ ನಲ್ಲಿ ವಿದ್ಯಾನಿಧಿ ಮತ್ತು ವಿದ್ಯಾ ಸಿರಿಗಳ ಹೆಸರಲ್ಲಿ ಮಕ್ಕಳ ಓದಿಗೆ ನೆರವಾದುದು ಹಾಗೂ ಸಣ್ಣ ಕೆರೆಗಳ ಅಭಿವೃದ್ಧಿಗೆ ಉತ್ತೇಜನ ನೀಡಿರುವುದು ಹಾಗೂ ಅಂತರ್ಜಲ ಹೆಚ್ಚಳಕ್ಕೆ ಒತ್ತು ಕೊಟ್ಟಿರುವುದು ಜೊತೆಗೆ ನಿರುದ್ಯೋಗಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಕೂರುವಂತೆ ಉತ್ತೇಜಿಸಲು 2000ರೂ ಹಣ ಸಹಾಯ ಕೊಡಲು ಮುಂದಾದುದು ಕೂ ಡ ಪ್ರಶಂಸನೀಯ. ಆದರೆ ಈ ಹಣ ಅದೇ ಉದ್ದೇಶಕ್ಕೆ ಬಳಕೆಯಾಗಿದೆ ಎಂದು ಸ್ಪಷ್ಟಪಡಿಸುವ ದಾರಿಯನ್ನೂ ರೂಪಿಸಬೇಕಿದೆ, ಅಂದರೆ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಈ ಸಹಾಯ ದೊರಕುವಂತೆ, ಮತ್ತೆ ಮತ್ತೆ ಸಹಾಯಕ್ಕೆ ಹೋಗದಂತೆ ತಡೆಯುವ ಕ್ರಮವನ್ನೂ ಜಾರಿಗೆ ತರಬೇಕು. ಇಲ್ಲವಾದಲ್ಲಿ ಹಳ್ಳದ ಬಳಿ ಹಸಿದು ಕುಳಿತವನಿಗೆ ಎಲ್ಲೋ ಯಾರೋ ಹಿಡಿದ ಮೀನನ್ನು ಮಾನವೀಯತೆ ಹೆಸರಲ್ಲಿ ತಂದು ಉದಾರವಾಗಿ ಕೊಟ್ಟಂತಾಗುತ್ತದೆ, ಇಂಥ ಸಂದರ್ಭದಲ್ಲಿ ಹಸಿದವನು ಮೀನು ಹಿಡಿಯಲು ಕಲಿಯಬೇಕೇ ವಿನಾ ಹಿಡಿದ ಮೀನಿಗೆ ಕಾಯುವುದಲ್ಲ. ಸರ್ಕಾರ ಈ ಮೂಲಕ ಮೀನು ಹಿಡಿಯಲು ಕಲಿಸುವ ಯತ್ನ ಮಾಡುತ್ತಿದೆ. ಇಲ್ಲವಾದಲ್ಲಿ ತೂಕಡಿಸುವವನಿಗೆ ಹಾಸಿಗೆ ದಿಂಬು ಕೊಟ್ಟಂತಾಗುತ್ತದೆ. ಯಾವುದೇ ಸರ್ಕಾರ ಅಥವಾ ಪಕ್ಷ ನೆರವು ಅಥವಾ ಮಾನವೀಯತೆಯ ಹೆಸರಲ್ಲಿ ಇಂಥ ಅರ್ಥ ಹೀನ ನೆರವು ಕೊಡುವುದು ನಕಾರಾತ್ಮಕವಾಗುತ್ತದೆ. ಹಾಗಾಗಿ ಸರ್ಕಾರದ ಇಂಥ ದೃಷ್ಟಿ ಸರಿ ಅನ್ನಬಹುದು. ಜನರನ್ನು ಮೆಚ್ಚಿಸಿ ಓಟು ಪಡೆಯಲು ತೆರಿಗೆ ಹಣದಿಂದ ಪುಕ್ಕಟೆ ಆಮಿಷ ತೋರಿಸುವ ಯೋಜನೆಗಳು ಬಜೆಟ್ಟಿನಲ್ಲಿ ಮೊದಲು ನಿಲ್ಲಬೇಕು, ಅಂಥ ಬಜೆಟ್ ನೀತಿ ಜಾರಿಯಾಗಬೇಕು. ಒಂದು ವಿಷಯವೆಂದರೆ ಸದ್ಯದಲ್ಲೇ ಚುನಾವಣೆ ನಡೆದು ಹೊಸ ಸರ್ಕಾರ ಹೊಸ ಬಜೆಟ್ ಮಂಡುಸುವ ಅವಕಾಶ ಪಡೆಯುತ್ತದೆ ಹಾಗಾಗಿ ಇದು ಏನಿದ್ದರೂ ತಾತ್ಕಾಲಿಕ ಬಜೆಟ್ ಎಂಬುದು ಈ ರ್ಸಾರಕ್ಕೆ ತಿಳಿದಿದೆ. ಹಾಗಿದ್ದರೂ ಇದು ತನ್ನ ಎಲ್ಲ ಅಧಿಕಾರ ಬಳಸಿ ಲಭ್ಯವಿರುವ ಎಲ್ಲ ಸಂಪನ್ಮೂಲವನ್ನು ಬಳಸಿ ಪೂರ್ಣ ಪ್ರಮಾಣ ಅನಿಸುವ ಬಜೆಟ್ಟನ್ನೇ ನೀಡಿದೆ, ಎಲ್ಲ ವಲಯಗಳಿಗೆ ಹಣವನ್ನು ಮೀಸಲಿಟ್ಟಿದೆ. ಹೀಗಾಗಿ ಮುಂದೆ ಬರುವ ಸರ್ಕಾರ ಮತ್ತೆ ಬಜೆಟ್ ಮಂಡಿಸಲು ಹೆಣಗಬೇಕಾದ ಅಥವಾ ಇದೇ ಮುಂಗಡಪತ್ರವನ್ನು ಹೀಗೆಯೇ ಜಾರಿ ಮಾಡುವ ಪರಿಸ್ಥಿತಿಗೆ ಒಳಗಾಗುತ್ತದೆ.
ಡಾ. ಶ್ರೀಪಾದ ಭಟ್, ಕನ್ನಡ ವಿಭಾಗ ಹಾಗೂ ಪ್ರ. ಪಿ ಪರಮ ಶಿವಯ್ಯ. ವಾಣಿಜ್ಯಶಸ್ತ್ರ ಅಧ್ಯಯನ ವಿಭಾಗ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು

No comments:
Post a Comment