ಇದು ಬರಿಯ ಮಾತಲ್ಲ, ಪ್ರಸ್ತುತ ಕೃತಿಯ ಪ್ರಸ್ತಾವನೆಯಲ್ಲಿ ಒಂದು ನಿದರ್ಶನ ಕೊಡಲಾಗಿದೆ ಐದಾರು ದಶಕಗಳ ಹಿಂದೆ ದೆಹಲಿಯಲ್ಲಿ ಎನ್ ಬಿಟಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡಿದವರು ಉದ್ದೇಶಪೂರ್ವಕವಾಗಿ ಭೈರಪ್ಪನವರ ಕೃತಿ ಪರ್ವದ ಬಗ್ಗೆ ಉಲ್ಲೇಖ ಮಾಡುವುದಿಲ್ಲ, ಆದರೆ ಅಷ್ಟರಲ್ಲಿ ಆ ಕೃತಿಯ ಅನುವಾದ ಓದಿದ್ದ ಅನ್ಯ ಭಾಷೆಯ ಹಿರಿಯರು ಈ ಕೃತಿ ಭಾರತಕ್ಕೆ ಸೇರಿದ್ದು ಎಂಬಂತೆ ಮಾತನಾಡುತ್ತಾರೆ. ಆಗ ಕನ್ನಡ ಪ್ರತಿನಿಧಿಯ ಪ್ರತೊಕ್ರಿಯೆ ಏನಾಗಿತ್ತು ಎಂಬ ಉಲ್ಲೇಖ ಇಲ್ಲಿ ಬರುವುದಿಲ್ಲ. ಅದನ್ನು ನಾವು ಊಹಿಸಬಹುದು. ಹೀಗೆ ಲಾಗಾಯ್ತಿನಿಂದ ಆಧುನಿಕ ಕನ್ನಡ ಸಾಹಿತ್ಯ ಹಾಗೂ ವಿಮರ್ಶೆಗಳನ್ನು ಆಳುತ್ತ ಬಂದಿರುವ ಹಿತಾಸಕ್ತ ಕನ್ನಡದಲ್ಲಿ ಆಳವಾಗಿ ಬೇರೂರಿದೆ. ಅಂಥ ಹಿತಾಸಕ್ತಿಯ ವಿರುದ್ಧ ಇದು ಒಂದು ಪ್ರಾಮಾಣಿಕ ಯತ್ನ ಮಾಡಿದೆ. ಅದರ ಫಲ ಈ ಕೃತಿ.
ಒಂದು ಗೊತ್ತಾದ ಗುಂಪು ಅಥವಾ ಸೋ ಕಾಲ್ಡ್ ಪ್ರಗತಿಪರ ಪಡೆ ಕನ್ನಡ ಸಾಹಿತ್ಯವನ್ನು ಪ್ರತಿಗಾಮಿ ಹಾಗೂ ಪ್ರಗತಿಪರ ಎಂಬ ಗುಂಪಾಗಿ ಒಡೆದು ಪ್ರಗತಿಪರ ಎಂದು ತಾನು ಗುರುತಿಸಿದ ಲೇಖಕ ವರ್ಗದ ಸಾಹಿತ್ಯವನ್ನು ಮಾತ್ರ ಕೈಗೆತ್ತಿಕೊಳ್ಳುತ್ತದೆ. ಉಳಿದವನ್ನು ಓದುಗರು ಕೂಡ ಮುಟ್ಟದಂತೆ ದೂರ ಸರಿಸುವ ಧೋರಣೆ ತಾಳುತ್ತದೆ. ಇಂದಿಗೂ ಕನ್ನಡದ ಶೈಕ್ಷಣಿಕ ಸಂಸ್ಥೆಗಳಲ್ಲಿ ಇದು ಬದಲಾಗಿಲ್ಲ. ಹೀಗಾಗಿಯೇ ದೇಶವೇ ಹೆಮ್ಮೆಪಡುವ ಭೈರಪ್ಪರಂಥ ಲೇಖಕರ ಬರೆಹ ಎಲ್ಲಿಯೂ ಪಠ್ಯವಾಗದಂತೆ ಆ ಲಾಬಿ ಕೆಲಸ ಮಾಡುತ್ತದೆ. ಪಠ್ಯ ಮಾತ್ರವಲ್ಲ, ಪಿಎಚ್ಡಿ ಯಂಥ ಗಂಭೀರ ಅಧ್ಯಯನಕ್ಕೂ ಭೈರಪ್ಪನವರಂಥ ಲೇಖಕರು ಬಾರದಂತೆ ಅಡ್ಡಿಪಡಿಸುವ ಕೆಲಸವನ್ನೂ ವ್ಯವಸ್ಥಿತವಾಗಿ ಅದು ಮಾಡುತ್ತಿದೆ. ಆದರೇನು ಬೆಳಕನ್ನು ಮುಚ್ಚಿಡುವುದು ಹೇಗೆ? ಇಲ್ಲಿ ಅಲ್ಲದಿದ್ದರೆ ಅಲ್ಲಿ ಅದು ಹೊರಬೀಳುತ್ತದೆ. ಭೈರಪ್ಪನವರೂ ಅಷ್ಟೇ. ಮೂಲತಃ ತತ್ವ್ತಶಾಸ್ರ್ತಜ್ಞರಾದ ಅವರಿಗೆ ಇವೆಲ್ಲ ತಿಳಿಯದ ವಿಷಯವಲ್ಲ. ಹಾಗಾಗಿ ಅವರು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವ ಬದಲು ಹೊಸ ಕೃತಿ ರಚನೆಯಲ್ಲಿ ತೊಡಗಿ ಮತ್ತೆ ಅಂಥವರ ಹೊಟ್ಟೆ ಉರಿಸುತ್ತಾರೆ. ಇದುವರೆಗೂ ಭೈರಪ್ಪರಂಥ ಭೈರಪ್ಪನವರಿಗೆ ದೇಶದ ಪ್ರತಿಷ್ಠಿತ ಜ್ಞಾನಪೀಠಪ್ರಶಸ್ತಿ ಬಾರದಂತೆ ತಡೆಯುವ ವ್ಯವಸ್ಥಿತ ಕಾರ್ಯದಲ್ಲೂ ಅಂಥ ಪಡೆ ಯಶ ಕಂಡಿದೆ. ನಿಜವಾಗಿ ನಮ್ಮ ದೇಶವಲ್ಲದೇ ಅನ್ಯದೇಶದಲ್ಲಾಗಿದ್ದರೆ ಅವರಿಗೆ ಇಷ್ಟರಲ್ಲಿ ಸಾಹಿತ್ಯಕ ನೋಬಲ್ ಬರುತ್ತಿತ್ತು ಅನಿಸುತ್ತದೆ. ಸಾಹಿತ್ಯಕ್ಕೆ ಇದುವರೆಗೆ ಸಂದ ನೋಬಲ್ ಪಟ್ಟಿ ನೋಡಿದರೆ ಈ ಮಾತು ಮತ್ತಷ್ಟು ಸ್ಪಷ್ಟವಾಗುತ್ತದೆ. ಆದರೆ ನಿಜವಾದ ಸಾಹಿತಿಗೆ ಪ್ರಶಸ್ತಿ ಅಮುಖ್ಯ. ನಿಜವಾದ ಓದುಗರೇ ಅವನ ನಿಜ ಪ್ರಶಸ್ತಿ. ಅದು ಅವರಿಗೆ ದೇಶ ಭಾಷೆಗಳ ಗಡಿ ಮೀರಿ ಲಭಿಸಿದೆ. ಹೀಗಿರುವಾಗ ಇನ್ಯಾವ ಜ್ಞಾನಪೀಠ? ಇನ್ಯಾವ ನೋಬೆಲ್ ಚಿಂತೆ? ಆ ಮಟ್ಟಿಗೆ ಭೈರಪ್ಪನವರು ಬೆಳೆಯುವುದನ್ನು ಯಾವ ಲಾಬಿಯೂ ತಡೆಯಲು ಸಾಧ್ಯವಾಗಲಿಲ್ಲ. ಛೆ. ಭೈರಪ್ಪನವರು ನಮ್ಮ ಭಾಷೆಯ ಮೂಲ ಸಾಹಿತಿ ಅಲ್ಲವಲ್ಲಾ ಎಂದು ಅಲವತ್ತುಕೊಳ್ಳುವ ಓದುಗರಿಗೆ ಕೊರತೆ ಇಲ್ಲ. ಆದರೆ ಅನುವಾದದ ಮೂಲಕ ಅಂಥ ಓದುಗರು ಭೈರಪ್ಪರನ್ನು ತಮ್ಮ ಸ್ವಂತ ಸಾಹಿತಿಯಾಗಿ ಸ್ವೀಕರಿಸಿದ್ದಾರೆ. ಮರಾಠಿಗರಂತೂ ಭೈರಪ್ಪ ತಮ್ಮದೇ ಸಾಹಿತಿ, ಕರ್ನಾಟಕದಲ್ಲಿ ಅವಕಾಶವಶಾತ್ ಇದ್ದಾರೆಂದು ಇಂದಿಗೂ ಭಾವಿಸುತ್ತಾರೆ. ಹೀಗೆ ಭೈರಪ್ಪನವರು ಇತರರ ಮನದಲ್ಲಿ ಕನ್ನಡಿಗರ ಬಗ್ಗೆ ಅಸೂಯೆ ಹುಟ್ಟುವಂತೆ ಮಾಡಿ ಅಸೂಯೆ ಕೂಡ ಗುಣಾತ್ಮಕವಾಗಬಲ್ಲುದು ಎಂದು ಸಾಧಿಸಿದ್ದಾರೆ. ಇದು ಕನ್ನಡಿಗರ ನಿಜವಾದ ಹೆಮ್ಮೆ. ಭೈರಪ್ಪನವರಿಗೆ ಕನ್ನಡಿಗರಿಂದ ಸಲ್ಲಬೇಕಾದ ಗೌರವ ಸಲ್ಲಲಿ, ಬಿಡಲಿ ಭೈರಪ್ಪನವರಂತೂ ಕನ್ನಡದ ಋಣವನ್ನು ಈ ಮೂಲಕ ಎಂದೋ ತೀರಿಸಿಬಿಟ್ಟಿದ್ದಾರೆ ಓದುಗರ ಕಡೆಯಿಂದ ಸದಾ ಇರುವ ಇಂಥ ಅತೃಪ್ತಿ ನಿಜವಾದ ಸಾಹಿತಿಗೆ ಸಲ್ಲುವ ಗೌರವ. ಅದು ಭೈರಪ್ಪನವರಿಗೆ ಯಾವಾಗಲೂ ಸಲ್ಲುತ್ತ ಬಂದಿದೆ.ಭೈರಪ್ಪನವರ ಸಾಹಿತ್ಯದ ಒಂದು ವಿಶಿಷ್ಟ ಗುಣ ಎಂದರೆ ಅವರಿಗೆ ಸದಾ ಇರುವ ಯುವ ಓದುಗ ವರ್ಗ. ಅನೇಕರಿಗೆ ಇದು ದುರ್ಲಭ. ಅವರು ಆಯ್ದುಕೊಳ್ಳುವ ವಸ್ತು ವಿಷಯಗಳಿಂದ ಹಿರಿಯರು ಅವರತ್ತ ಇರುವುದು ಸಹಜ. ಹಾಗೆಯೇ ಯುವ ಜನತೆ ಅತ್ತ ಆಕರ್ಷಿತರಾಗುವುದು ಅಚ್ಚರಿಯ ಸಂಗತಿ ಅನ್ನುವುದಕ್ಕಿಂತ ಇದಕ್ಕೆ ಅವರ ಬರೆಹದ ಆಯಸ್ಕಂತೀಯ ಶಕ್ತಿ ಕಾರಣ ಅನ್ನದೇ ಬೇರೆ ಮಾತಿಲ್ಲ.
ಪ್ರಸ್ತುತ ಕೃತಿ ಸುಮಾರು 215 ಪುಟಗಳಷ್ಟಿದ್ದು, ಇದರಲ್ಲಿ ಪ್ರಬುದ್ಧವಾದ 15 ಲೇಖನಗಳಿವೆ. ಜೊತೆಗೆ ಭೈರಪ್ಪನವರಿಗೆ ಸಂಬಂಧಿಸಿದ ಕೃತಿ, ಪ್ರಶಸ್ತಿ ಇತ್ಯಾದಿ ವಿವರವುಳ್ಳ ಅನುಬಂಧವಿದೆ. ಭೈರಪ್ಪನವರಿಗೆ ಸಂಬಂಧಿಸಿದ ಕಿರು ವಿಶ್ವಕೋಶ ಇದಾಗಿದೆ. ಅವರ ಬಗ್ಗೆ ಅವರ ಸಾಹಿತ್ಯ ಮತ್ತದರ ಪ್ರಭಾವದ ಬಗ್ಗೆ ತಿಳಿಯಬಯಸುವ ಎಲ್ಲರಿಗೂ ಇದೊಂದು ಕೈಪಿಡಿಯಾಗಿದೆ. ತಮ್ಮ ಇಪ್ಪತ್ತೈದು ಕಾದಂಬರಿಗಳ ಮೂಲಕ ಜನಮನ ಮುಟ್ಟಿ ಎಚ್ಚರಿಸಿದ ಭೈರಪ್ಪನವರು ಮತೇನು ಬರೆಯುತ್ತಿರಬಹುದೆಂಬ ಕುತೂಹಲ ಇಂದಿನ ದಿನದಲ್ಲೂ ಹುಟ್ಟುವಂತೆ ಮಾಡಿದ್ದು ಕಡಿಮೆ ಸಾಧನೆ ಅಲ್ಲ. ಪುಸ್ತಕಗಳ ಕಡೆ ತಿರುಗಿಯೂ ನೋಡದ ವಿಚಿತ್ರ ವಾತಾವರಣ ನಮ್ಮ ಸಮಾಜದಲ್ಲಿ ರೂಪುಗೊಂಡಿರುವಾಗ, ಲೇಖಕನೊಬ್ಬ ಮುಂದೆ ಮತ್ತೇನು ಬರೆಯುತ್ತಾನೆಂದು ಜೂಜು ಕಟ್ಟುವ ಸ್ಥಿತಿ ನಿರ್ಮಿಸುವುದು ಸಣ್ಣ ಮಾತೇ? ಒಬ್ಬಲೇಖಕನ ಕೃತಿಗೆ ಮುದ್ರಣ ಪೂರ್ವ ಪುಸ್ತಕ ಬುಕಿಂಗ್, ಮುಂಗಡ ಹಣ ಪಾವ್ತಿಯಂಥ ಹೊಸ ಟ್ರೆಂಡ್ ನಿರ್ಮಿಸಿದವರು ಭೈರಪ್ಪನವರು. ಲೇಖಕನೊಬ್ಬನಿಗೆ ಇಂಥ ಗೌರವ ಲಭಿಸುವಂತಾದುದು ಕೂಡ ಅವರಿಂದಲೇ. ನಟರಿಗೆ ಮಾತ್ರ ಸಲ್ಲುತ್ತಿದ್ದ ಸ್ಟಾರ್ ಪಟ್ಟ ಸಾಹಿತಿಗೆ ಒಲಿದಿದ್ದರೆ ಅದು ಭೈರಪ್ಪರಿಂದ. ಇದಕ್ಕೆಲ್ಲ ನಿದರ್ಶನಗಳು. ಈ ಕೃತಿಯಲ್ಲಿ ಸಾಕಷ್ಟು ಲಭಿಸುತ್ತವೆ. ವೈವಿಧ್ಯಮಯ ಲೇಖನಗಳಿಂದ ಈ ಕೃತಿ ಮನಸೆಳೆಯುತ್ತದೆ. ಒಂದು ಸಂಗ್ರಹಯೋಗ್ಯ ಕೃತಿ ಇದು. ಇಂಥ ಕೃತಿಯನ್ನು ಹೊರತಂದ ಮುಂಬೈ ವಿವಿಯ ಕನ್ನಡ ವಿಭಾಗಕ್ಕೆ ಅಭಿನಂದನೆಗಳು ಸಲ್ಲಬೇಕು. ಕನ್ನಡಿಗರಿಂದ ಸೂಕ್ತ ಓದಿನ ಮೂಲಕ ಅದು ಸಲ್ಲುತ್ತದೆ ಎಂದು ಧಾರಾಳವಾಗಿ ಹೇಳಬಹುದು.

No comments:
Post a Comment