ಈ ನೆಪದಲ್ಲಿ ಭಾರತಕ್ಕೆ ಕಾನೂನು ಪ್ರವೇಶಪಡೆದ ಹಿನ್ನೆಲೆ ಸಮಾನ ಸಂಹಿತೆ ಭಾರತದಲ್ಲಿ ಕಾನೂನು ಬೆಳೆದುಬಂದ ಇತಿಹಾಸ, ಅದರ ವಿಕಾಸ, ವಿವಿಧ ಆಯಾಮಗಳು, ರಿಲಿಜನ್ ಮತ್ತು ಕಾನೂನುಗಳು ತಳಕು ಹಾಕಿಕೊಂಡ ಬಗೆ ಇತ್ಯಾದಿಗಳೆಲ್ಲ ಯಾವ ಕಥೆ ಕಾದಂಬರಿಗಳಿಗೂ ಕಡಿಮೆ ಇಲ್ಲದಂತೆ ಕುತೂಹಲ ಕರವಾಗಿ ನೀಡಲಾಗಿದೆ. ಗಂಭೀರ ವಿಷಯವೊಂದನ್ನು ವಿಷಯ ಪ್ರತಿಪಾದಿಸುವ ರೀತಿಯಿಂದ ಹೇಗೆ ಸ್ವಾರಸ್ಯಗೊಳಿಸಬಹುದು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಕೃತಿಯನ್ನು ಓದುತ್ತ ಹೋದಂತೆ ತಾನಾಗಿಯೇ ಓದಿಸಿಕೊಂಡು ಹೋಗುತ್ತದೆ. ಇಷ್ಟು ಗಂಭೀರ ವಿಷಯ ಮತ್ತೆ ಮತ್ತೆ ಓದಿಸಿಕೊಳ್ಳುವ ಆತ್ಮೀಯ ಕಥಾನಕದ ಸ್ವರೂಪ ಪಡೆಯುತ್ತದೆ. ಕೃತಿಯ ಶೀರ್ಷಿಕೆ ಹೇಳುವಂತೆ ಸಮಾನ ನಾಗರಿಕ ಸಂಹಿತೆಯ ನಿನ್ನೆಗಳ ಜೊತೆಗೆ ಇಂದಿನ ಸಮಸ್ಯೆ ಹಾಗೂ ನಾಳಿನ ಸವಾಲುಗಳ ನೋಟದೊಂದಿಗೆ ಸಮಗ್ರತೆಯ ರೂಪವನ್ನು ಕೊಡಲಾಗಿದೆ. ಸಮೃದ್ಧ ಪೂರಕ ಗ್ರಂಥಗಳ ವಿವರ ನೀಡಲಾಗಿದ್ದು ಕಾನೂನಿನ ಬಗ್ಗೆ ಆಸಕ್ತಿ ಇರುವವರಿಗೆ ಸಮೃದ್ಧ ಗ್ರಾಸ ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಸಮಾಜದಲ್ಲಿ ಆಗಾಗ ಕಾಣಿಸಿಕೊಳ್ಳುವ ಗಂಭೀರ ವಿಷಯವನ್ನು ನಾವು ಹೇಗೆ ಮತ್ತು ಯಾವ ದೃಷ್ಟಿಯಲ್ಲಿ ಸ್ವೀಕರಿಸಿ ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ಇದು ತೋರಿಸುತ್ತದೆ. ಸದ್ಯ ನಮ್ಮ ಸಮಾಜದಲ್ಲಿ ಉರಿಯುತ್ತಿರುವ ಅನೇಕ ಸಮಸ್ಯೆಗಳಲ್ಲಿ ಜ್ಞಾನವ್ಯಾಪಿ ಮಸೀದಿ ಕುರಿತ ವಿವಾದವೂ ಒಂದು, ಇಂಥ ವಿಷಯಗಳು ಆಗಾಗ ಏಳುತ್ತಲೇ ಇರುತ್ತವೆ, ಇದು ಜೀವಂತ ಸಮಾಜದ ಲಕ್ಷಣ. ಆದರೆ ಇವುಗಳಿಗೆ ಪ್ರತಿಕ್ರಿಯಿಸುವಾಗ ಭಾವನಾತ್ಮಕ ನಿಲುವಿಗೆ ಅಂಟಿಕೊಂಡು ಅಪಾಯ ಸ್ವಾಗತಿಸುವ ಸಂದರ್ಭವೇ ಹೆಚ್ಚು. ಅಂಥ ಅಪಾಯಗಳಿಗೆ ಎಡೆಕೊಡದೇ ಒಂದು ಸಂಗತಿಯನ್ನು ಶುದ್ಧ ಶೈಕ್ಷಣಿಕ ರೀತಿಯಲ್ಲಿ ನೋಡುವುದು ಹೇಗೆ ಎಂಬುದನ್ನು ಇದು ಮನಗಾಣಿಸುತ್ತದೆ. ನಮ್ಮಲ್ಲಿ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾನಿಲಯಗಳಿಗೆ ಕೊರತೆ ಇಲ್ಲ. ಆದರೆ ಆಗಾಗ ಮೇಲೇಳುವ ಸಾಮಾಜಿಕ ಸಮಸ್ಯೆಗಳಿಗೆ ಶುದ್ಧ ಶೈಕ್ಷಣಿಕ ನಿಲುವಿನ ಮಾರ್ಗವನ್ನು ಸಮಾಜಕ್ಕೆ ತೋರಿಸುವ ನಿದರ್ಶನಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ, ಇಂಥ ಸಂದರ್ಭದಲ್ಲಿ ಇದು ಗಮನ ಸೆಳೆಯುವ ಕೃತಿಯಾಗಿದೆ. ಮುಂಬರುವ ಎಲ್ಲ ಇಂಥ ಸಂಗತಿಗಳಿಗೂ ಉನ್ನತ ಶಿಕ್ಷಣ ಸಂಸ್ಥೆಗಳು ಇದೇ ಮಾದರಿಯಲ್ಲಿ ಪ್ರತಿಕ್ರಿಯಿಸಿ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಕೊಡಲು ಉಳಿದ ಸಂಸ್ಥೆಗಳಿಗೆ ಇದು ಮಾರ್ಗದರ್ಶಿಯಾಗಲಿ ಎಂದಷ್ಟೇ ಹೇಳಬಹುದು. ಉಳಿದಂತೆ ಕೃತಿ ಓದಿ ತಿಳಿಯುವುದು ಲೇಸು.
ಅಂದಹಾಗೆ ಈ ಕೃತಿಯನ್ನು ಯಾವುದೋ ಪ್ರಸಿದ್ಧ ಪ್ರಕಾಶನ ಸಂಸ್ಥೆ ಪ್ರಕಟಿಸಿಲ್ಲ. ಸಮಾನ ಆಸಕ್ತಿಯ ಒಂದಿಷ್ಟು ಜನ ಸೇರಿ ಕಟ್ಟಿಕೊಂಡ ಸಮನ್ವಿತ ಎಂಬ ಸಂಸ್ಥೆ ಇದನ್ನು ಹೊರತಂದಿದೆ. ಈ ಕೃತಿಯೇ ಸಂಸ್ಥೆಗೆ ದೊಡ್ಡ ಹೆಸರು ಮತ್ತು ಖ್ಯಾತಿಯನ್ನು ತರುವುದರಲ್ಲಿ ಅನುಮಾನವಿಲ್ಲ. ಆದರೆ ಈ ಜವಾಬ್ದಾರಿ ಇರುವುದು ಮುಕ್ತ ಮನಸ್ಸಿನ ಕನ್ನಡ ಓದುಗರ ಮೇಲೆ. ಈ ಕೃತಿಯನ್ನು ಶ್ರದ್ಧೆ ಹಾಗೂ ಶ್ರಮದಿಂದ ಸಂಪಾದಿಸಿದ ಚಾಣಕ್ಯ ವಿವಿಯ ಪ್ರೊ. ಎಂ. ಎಸ್. ಚೈತ್ರ ಹಾಗೂ ಕುವೆಂಪು ವಿವಿಯ ಪ್ರೊ. ಷಣ್ಮುಖ ಇವರನ್ನು ತುಂಬು ಹೃದಯದಿಂದ ನಾವೆಲ್ಲ ಅಭಿನಂದಿಸಬೇಕಿದೆ. ಹೇಳಲೇಬೇಕಿದ್ದ ಒಂದು ಮಾತನ್ನು ಮರೆಯುವ ಮುನ್ನ ಹೇಳುವೆ. ಈ ಕೃತಿಯಲ್ಲಿ 170 ಪುಟಗಳ ಸಮಗ್ರ ಕಾನೂನು ಮಾಹಿತಿಗಳಿದ್ದು ಒಂದೇ ಒಂದು ಪುಟವನ್ನೂ ಒಬ್ಬ ನ್ಯಾಯವಾದಿ ಅಥವಾ ನ್ಯಾಯ ಪಂಡಿತ ಬರೆದಿಲ್ಲ. ಬದಲಿಗೆ ಓದು ಮತ್ತು ಶಿಕ್ಷಣ ಹಾಗೂ ಯಾವುದೇ ವಿಷಯದ ಬಗ್ಗೆ ಗಂಭೀರ ಚಿಂತನೆ ಮಾಡುವ ಮನಸ್ಸಿನ ಯುವ ಉತ್ಸಾಹಿ ಮನಸ್ಸುಗಳು ಪ್ರಾಮಾಣಿಕವಾಗಿ ಬರೆದಿದ್ದಾವೆ, ಸಂಪಾದಕರೂ ಇದಕ್ಕೆ ಅಷ್ಟೇ ಶ್ರಮ ಹಾಕಿದ್ದಾರೆ. ಒಂದು ಸಸೂತ್ರತೆ, ಬದ್ಧತೆ ಇಡೀ ಕೃತಿಯಲ್ಲಿ ಇರುವಂತೆ ಸಂಪಾದಕರು ನೋಡಿಕೊಂಡಿದ್ದಾರೆ. ಇಡೀ ಕೃತಿ ತನ್ನ ಓಘದಿಂದ ಒಂದೇ ಓದಿಗೆ ಓದಿ ಮುಗಿಸುವ ಉತ್ತೇಜನ ಕೊಡುತ್ತದೆಯಾದರೂ ಕೃತಿಯ ಅಧ್ಯಾಯಗಳನ್ನು ಇಡಿಯಾಗಿಯೂ ಬಿಡಿಯಾಗಿಯೂ ಓದಿ ಆನಂದಿಸಬಹುದಾಗಿದೆ. ಇಂಥ ಗಂಭೀರ ಕೃತಿಯಲ್ಲಿ ಈ ಬಗೆಯ ಗುಣ ಇರುವುದು ಕಡಿಮೆ.
ಒಟ್ಟಿನಲ್ಲಿ ಸಮಾಜ, ಶಿಕ್ಷಣ ಹಾಗೂ ಸುತ್ತಲಿನ ವಿದ್ಯಮಾನಗಳ ಬಗ್ಗೆ ಕಿಂಚಿತ್ತಾದರೂ ಕಳಕಳಿ ಇರುವ ಸಮಸ್ತರೂ ಇದನ್ನು ಒಮ್ಮೆಯಾದರೂ ಓದಬೇಕು ಅನಂತರ ಅನೇಕ ಬಾರಿ ಕೃತಿಯೇ ಓದಿಸಿಕೊಳ್ಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಥ ಕೃತಿ ದೇಶದ ಬಹುಭಾಷೆಗಳಲ್ಲಿ ಬರಬೇಕು. ಕನಿಷ್ಠಪಕ್ಷ ಬಹುಜನರನ್ನು ತಲಪುವ ಇಂಗ್ಲಿಷ್ ನಲ್ಲಾದರೂ ಬರಬೇಕು ಅಂಥ ಅಗತ್ಯವಿದೆ. ಸಂಪಾದಕರು ಹಾಗೂ ಪ್ರಕಾಶಕರು ಈ ಬಗ್ಗೆ ಅವಲೋಕಿಸುವ ಅನಿವಾರ್ಯತೆ ಇದೆ. ಇದರಿಂದ ಇಂಥದೊಂದು ಕೃತಿ ಕನ್ನಡದಲ್ಲಿ ಮೊದಲು ಬಂದು ದೇಶವನ್ನು ಸುತ್ತುವಂತಾಯಿತು ಎಂಬ ಹೆಗ್ಗಳಿಕೆ ನಮ್ಮದಾಗುತ್ತದೆ. ಆದಷ್ಟು ಬೇಗ ಅದು ಸಾಧ್ಯವಾಗಲಿ ಎಂದಷ್ಟೇ ನಾವು ಬಯಸಬಹುದು.

No comments:
Post a Comment