ಬಿದಿರಿನಿಂದ ತಯಾರಿಸುವ ವಸ್ತುಗಳು ಪಡೆಯಲ ನಿರ್ದಿಷ್ಟ ಕ್ರಮಗಳಿವೆ. ಹೋಗಿ ಸುಮ್ಮನೆ ಹಣ ಕೊಟ್ಟು ಇವನ್ನು ತರಲಾಗುವುದಿಲ್ಲ. ತೊಟ್ಟಲು ಪಡೆಯಲು ಅದನ್ನು ತಯಾರಿಸುವ ವ್ಯಕ್ತಯ ಬಳಿ ಹೋಗಿ ಕೋರಿಕೆ ಇಟ್ಟು ಇಂಥ ದಿನ ಬೇಕು ಎಂದು ಹೇಳಿ ವೀಳ್ಯ ಕೊಟ್ಟು ಬರುವ ಕ್ರಮವಿದೆ. ಅನಂತರ ತಯಾರಕ ಅದನ್ನು ಸಿದ್ಧಗೊಳಿಸಿ ಕೊಡುವಾಗ ಕೂಡ ನಿರ್ದಿಷ್ಟ ಪೂಜಾ ಕ್ರಮ ನಡೆಸಿ ಕೊಡುತ್ತಾನೆ. ಅದನ್ನು ಮನೆಯೊಳಗೆ ತಂದು ಮಗುವನ್ನು ಅದರಲ್ಲಿ ಮೊದಲ ಬಾರಿ ಮಲಗಿಸುವ ಶಾಸ್ತ್ರವಂತೂ ಬಹಳ ಸಂಭ್ರಮದ್ದು. ಪೂಜೆ ಮಾಡಲಾಗುತ್ತದೆ, ಹಾಡು ಹಸೆಗಳಿರುತ್ತವೆ. ತೊಟ್ಟಿಲು ತೂಗುವ ಶಾಸ್ತ್ರ ದೀರ್ಘವಾದುದು. ಈಗ ಬಿದಿರಿನ ತೊಟ್ಟಿಲುಗಳಿಲ್ಲ, ಹಾಗೆಯೇ ಅದಕ್ಕೆ ಸಂಬಂಧಿಸಿದ ಶಾಸ್ತ್ರ ಸಂಪ್ರದಾಯಗಳೂ ಇಲ್ಲ. ಹೀಗೆ ಒಂದು ಕುಲಕಸುಬು ನಮ್ಮ ದೇಶದಲ್ಲಿ ಸೃಷ್ಟಿಸಿದ ಆಚರಣೆಯಂತೆಯೇ ಎಲ್ಲ ಬಗೆಯ ಆಚರಣೆಗಳಿಗೂ ಇಂಥ ಹಿನ್ನೆಲೆಗಳಿವೆ.
ಇದನ್ನೆಲ್ಲ ಗಮನಿಸಿದರೆ ಸರ್ಕಾರ ಇಂಥ ನಿರ್ಧಾರ ಮಾಡಿದೆ ಅನ್ನಲಾಗುವುದಿಲ್ಲ. ಆದರೆ ಇಲ್ಲೊಂದು ಸಮಸ್ಯೆ ಇದೆ. ಸರ್ಕಾರ ಹಣ ಕೊಡಬಹುದು. ಆದರೆ ಬಿದಿರಿನಂಥ ಕಚ್ಚಾ ವಸ್ತುವನ್ನು ಹಣದಿಂದ ಸರಿದೂಗಿಸುವ ಬಗೆ ಹೇಗೆ? ಕುಲಕಸುಬುಗಳ ಕೆಲವು ಕಚ್ಚಾ ವಸ್ತುಗಳು ಇಂದು ಬದಲಾದ ಜೀವನ ಕ್ರಮದಿಂದ ನಾಪತ್ತೆಯಾಗಿವೆ. ಅವು ರೂಪಿಸಿದ್ದ ಉಪ ಸಂಪ್ರದಾಯಗಳು ಕೂಡ ಕಾಣೆಯಾಗಿವೆ. ಇವನ್ನು ಮತ್ತೆ ಊರ್ಜಿತಗೊಳಿಸುವುದು ಹೇಗೆ ಎಂಬುದು ಒಂದುಕಡೆಯಾದರೆ, ಇವು ನಾಪತ್ತೆಯಾಗಿ ನಾಲ್ಕಾರು ತಲೆಮಾರುಗಳು ಕಳೆದ ಕಾರಣ ಇವುಗಳ ಪರಿಚಯವಿದಿರುವ ಜನ ಹಾಗೂ ಅವನ್ನು ಮತ್ತೆ ಜೀವಂತಗೊಳಿಸುವುದು ಸುಲಭವಲ್ಲ. ಮಲೆನಾಡಿನ ಭಾಗದಲ್ಲಿ ಮಳೆಗಾಲದ ವೇಳೆ ಕೃಷಿ ಕೆಲಸಕ್ಕೆ ಹೋಗಲು ಮಳೆಯಿಂದ ರಕ್ಷಣೆ ಪಡೆಯಲು ಬಲಸುವ ಸಾಧನ ಗೊರಂಬು. ಇದನ್ನು ತಾಳೆ ಎಲೆಯಿಂದ ತಯಾರಿಸಲಾಗುತ್ತದೆ. ಅರಣ್ಯದ ಕಿರು ಉತ್ಪನ್ನ ಅವಲಂಭಿಸಿ ಇದು ತಯಾರಾಗುತ್ತದೆ. ಒಂದೆಡೆ ಇದಕ್ಕೆ ಅಗತ್ಯವಿರುವ ತಾಳೆ ಎಲೆ ಸಿಗುವುದಿಲ್ಲ. ಸಿಕ್ಕಿದರೂ ಗೊರಂಬು ತಯಾರಿಸುವ ಕುಶಲ ಕೆಲಸಗಾರರಿಲ್ಲ. ಗೊರಬನ್ನು ಬಳಸಿದವರಿರಲಿ, ಇತ್ತೀಚೆಗೆ ಅದನ್ನು ಕಂಡವರೂ ಕಡಿಮೆ. ಗೊರಂಬಿನ ಬದಲಾಗಿ ಮಳೆಗಾಲದಲ್ಲಿ ಛತ್ರಿಯನ್ನೂ ಇನ್ನೇನೋ ಬಳಸಬಹುದಲ್ಲ ಅನ್ನಬಹುದು. ಆದರೆ ಗೊರಂಬು ನಾಪತ್ತೆಯಾದರೆ ಅದೊಂದು ಪದ ಕನ್ನಡ ಭಾಷೆಯಲ್ಲಿ ನಾಪತ್ತೆಯಾಗುತ್ತದೆ. ಅದಕ್ಕೆ ಸಂಬಂಧಿಸಿದ ಜ್ಞಾನ ಕೂಡ ಶಾಶ್ವತವಾಗಿಹೋಗಿಬಿಡುತ್ತದೆ. ಇವನ್ನೆಲ್ಲ ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲ.
ಮತ್ತೊಂದು ಸಮಸ್ಯೆ ಎಂದರೆ, ಬೆತ್ತ ಸಿಕ್ಕಿದರೂ ಅದನ್ನು ಸಂಗ್ರಹಿಸಿ ಸಾಗಿಸಲು ಅರಣ್ಯ ಕಾನೂನು ಅಡ್ಡಬರುತ್ತದೆ. ಅಲ್ಲದೆ, ಕೆಲವು ವೃತ್ತಿಗಳಿಗೆ ಅವುಗಳದ್ದೇ ಆದ ನಿಯಮಗಳಿವೆ. ಉದಾಹರಣೇಗೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಗುಡಿಗಾರರು ಎಂಬ ಕುಲಕಸುಬು ಕಲಾವಿದರಿದ್ದಾರೆ. ಇವರು ಗಣೇಶ ವಿಗ್ರಹವನ್ನು ಅಚ್ಚಿನಿಂದ ತಯಾರಿಸುವುದಿಲ್ಲ. ವಿಗ್ರಹ ಬೇಕಾದವರು ನಿರ್ದಿಷ್ಟ ಕ್ರಮದಂತೆ ಅವರಿಗೆ ಅರಿಕೆ ಮಾಡಿಕೊಳ್ಳಬೇಕು. ಗೊತ್ತಾದ ದಿನದಂದು ವಿಗ್ರಹ ಪಡೆಯುವವರು ತೆಂಗಿನಕಾಯಿಯೊಂದಿಗೆ ಪೂಜಾ ಸಾಮಗ್ರಿಯನ್ನು ಮತ್ತು ಹಣವನ್ನು ಕೊಟ್ಟು ವಿಗ್ರಹ ಪಡೆಯುವಾಗ ಮಾತ್ರ ವಿಗ್ರಹಕ್ಕೆ ಕಣ್ಣಿನ ಭಾಗವನ್ನು ರಚಿಸಲಾಗುತ್ತದೆ. ಮೊದಲೇ ವಿಗ್ರಹಕ್ಕೆ ಕಣ್ಣ ಬರೆಯಲಾಗುವುದಿಲ್ಲ. ಕುಲ ಕಸುಬುಗಳಿಗೆ ಸಂಬಂಧಿಸಿದಂತೆ ಇಂತಹ ಹತ್ತಾರು ವಿಧಿ ನಿಯಮಳಿವೆ. ಇವುಗಳನ್ನೆಲ್ಲ ಪುನರುಜ್ಜೀವನ ಗೊಳಿಸುವುದು ಸುಲಭವಲ್ಲ. ಇಂಥದ್ದೊಂದು ಉಪಕ್ರಮಕ್ಕೆ ಸರ್ಕಾರ ಮುಂದಾಗಿರುವುದು ಮಾತ್ರ ಸ್ತುತ್ಯರ್ಹ ಎಂದಷ್ಟೇ ಸದ್ಯ ಹೇಳಬಹುದು.

No comments:
Post a Comment