ಈಚೆಗೆ ಸಮಾಜದಲ್ಲಿ ನಡೆಯುತ್ತಿರುವ ಒಂದು ಬೆಳವಣಿಗೆ ಅತ್ಯಂತ ಸ್ವಾಗತಾರ್ಹವಾಗಿದೆ. ಕೆಲ ದಿನಗಳ ಹಿಂದೆ ಏನೋ ಬರೆಯುತ್ತಾ ಕುಳಿತಿದ್ದೆ ಸಂಗೀತ ಪ್ರೇಮಿ ನನ್ನ ಬೇಗಂ ಅದನ್ನು ಬದಿಗಿಟ್ಟು ನಾನು ಕಳಿಸಿದ ವಾಟ್ಸಪ್ ಲಿಂಕ್ ಕೇಳಿ ಅಂದಳು. ಬೇಗಂ ಆದೇಶ ಮೀರಲಾಗುತ್ತದಾ ಎಸ್ ಅಂತ ಲಿಂಕ್ ತೆಗೆದೆ ಅಷ್ಟೇ. ಅನಂತರ ಮೈ ಮರೆತೆ. ಅದು ಒಬ್ಬ ಮಗು ಹಾಡಿದ ದಾಸರ ಪದ ಅಬ್ಬಾ ಅದೆಂಥ ಮೋಡಿ ಮಾಡುವ ಉಚ್ಚರಣೆ, ಲಯ, ಏರಿಳಿತ ಹಾಗೂ ದನಿ? ಅತ್ಯಂತ ಪ್ರಬುದ್ಧ ಗಾಯಕರು ಮಾತ್ರ ಕಂಠದಿಂದ ಹೊರಡಿಸಬಹುದಾದ ಏರಿಳಿತ. ಸಂಪೂರ್ಣ ಫಿದಾ ಆಗಿಬಿಟ್ಟೆ. ಆ ಮಗುವಿನ ಹೆಸರು ಶಾಲ್ಮಲಾ ಶ್ರೀನಿವಾಸ್. ಹೆಚ್ಚೆಂದ್ರೆ ಹತ್ತು ವರ್ಷ ಇರಬೇಕು. ದಾಸ ವಚನಾಮೃತ ಎನ್ನುವ ಹೆಸರಲ್ಲಿ ಆ ಮಗು ಹಾಡಿದ ಯೂ ಟ್ಯೂಬ್ನಲ್ಲಿ ಲಭ್ಯ ಇರುವ ಎಲ್ಲ ಹಾಡುಗಳನ್ನೂ ಗಮನವಿಟ್ಟು ಆಲಿಸಿದೆ. ಮತ್ತಷ್ಟು ಇನ್ನಷ್ಟು ಅಭಿಮಾನ ಉಕ್ಕಿತು. ಎಂಥ ಮಗು! ಆಕೆಯ ಹೆತ್ತವರು, ಬಂಧುಗಳೆಲ್ಲ ಧನ್ಯರು. ಛೆ, ನಾನು ಈ ಅದೃಷ್ಟ ಪಡೆದಿಲ್ಲವಲ್ಲ ಅನಿಸಿಅಸೂಯೆ ಆಗಿ ಈ ಮೂಲಕ ನಾನು ಕೂಡ ಆ ಮಗುವಿನ ಬಂಧುವಾದೆ.ಭಕ್ತನಾದೆ. ನೀವು ಕೂಡ ಈ ಮಗುವಿನ ಹೆಸರನ್ನು ಯೂ ಟ್ಯೂಬಲ್ಲಿ ಹುಡುಕಿ ಕೇಳಿ ಧನ್ಯರಾಗಿ.ನಿಮ್ಮನ್ನು ನೀವು ಕ್ಷಣಕಾಲ ಮರೆಯುವಿರಿ. ಇದಕ್ಕೆ ನಾನು ಹೊಣೆಗಾರನಲ್ಲ.
ಈ ಮೊದಲು ನಾನು ಫಿದಾ ಆದ ಮಗುವಿನ ದನಿ ಸೂರ್ಯ ಗಾಯತ್ರಿ ಎಂಬ ಕೂಸು. ಅರೆರೆ, ಲತಾ ಮಂಗೇಶ್ಕರ್ ಹೀಗೆ ಮತ್ತೆ ಕನ್ನಡದಲ್ಲಿ ಅವತರಿಸಿದ್ದಾರೆ ಅನಿಸಿತ್ತು, ಈಗ ಮತ್ತೆ ಇನ್ನೊಬ್ಬ ಲತಾ ಸಿಕ್ಕಿದ್ದಾರೆ. ನಾವು ಧನ್ಯರು. ಇದು ನಮ್ಮ ಸಂಪ್ರದಾಯ, ಪರಂಪರೆಯ ಮುಂದರಿಕೆ. ನಮ್ಮ ಮಣ್ಣಿನ ಕಸುವು. ಇಂಥ ಮಕ್ಕಳು ಎಲ್ಲ ಕಡೆಯೂ ಇರುತ್ತಾರೆ. ಆದರೆ ಎಳವೆಯಲ್ಲಿ ಅವರ ಶಕ್ತಿಯನ್ನು ಗುರುತಿಸಿ ಅದನ್ನು ಪುರೆಯುವುದು ಪೋಷಕರ, ಹತ್ತಿರದ ಬಂಧುಗಳ ಹೊಣೆಗಾರಿಕೆ, ಒಂದು ರೀತಿಯಲ್ಲಿ ಅದು ಆಯಾ ಮಕ್ಕಳ ಅದೃಷ್ಟವೂ ಹೌದು. ಎಲ್ಲ ಕಡೆ ಎಲ್ಲ ಮಕ್ಕಳಿಗೂ ಅವರ ಪ್ರತಿಭೆ ಹೊರ ಬೀಳುವ ಪರಿಸ್ಥಿತಿ ಒದಗಿಬರುವುದಿಲ್ಲ. ನಮಗೂ ಹೀಗೆ ಆನಂದ ಅನುಭವಿಸುವ ಅವಕಾಶ ಸಿಗುವುದಿಲ್ಲ. ಯೋಗಾಯೋಗ ಅಂದ್ರೆ ಇದೇ. ಇಂಥ ಬೆಳವಣಿಗೆ ಪಾಶ್ಚಾತ್ಯರಲ್ಲಿ ಅಥವಾ ನಮ್ಮದೇ ಉತ್ತರ ಭಾಗದಲ್ಲಿ ಅಷ್ಟಾಗಿ ಕಾಣುವುದಿಲ್ಲ, ಇದ್ದರೂ ಮಕ್ಕಳಿಗೆ ತುಂಡುಡುಗೆ ತೊಡಿಸಿ ಕುಣಿಸಿ ಪ್ರದರ್ಶನಕ್ಕೆ ಇಡುತ್ತಾರೆ. ಒಮ್ಮೆನೋಡಿದ್ದೆ- ಹತ್ತನ್ನೂ ದಾಟದ ಹೆಣ್ಣುಮಗುವಿಗೆ ತುಂಡುಬಟ್ಟೆ ತೊಡಿಸಿ 'ಧಕ್ ಕರನೇ ಲಗಾ' ಎಂದು ಕುಣಿಸಿದ್ದರು. ಆ ವಯಸ್ಸು, ಹಾಡು ಆ ಮಗು ಒಂದಕ್ಕೂ ತಾಳ ಮೇಳವಿರಲಿಲ್ಲ. ಆ ಮಗು ಎದೆಯುಬ್ಬಿಸಿ ಸೊಂಟ ಬಳುಕಿಸುತ್ತಿತ್ತು.
ಮಕ್ಕಳನ್ನು ಹೀಗೆ ಸಿದ್ಧಗೊಳಿಸಿದರೆ ನಾಳೆಗಳು ಯಾವ ಹಾಗೂ ಎಂಥ ಸಮಾಜ, ಸೃಷ್ಟಿಸಬಲ್ಲುದು? ಆದರೆ ಒಬ್ಬ ಸೂರ್ಯ ಗಾಯತ್ರಿ, ಶಾಲ್ಮಲೀಯರನ್ನು ಕಂಡಾಗ ಭರವಸೆ ಮೂಡುತ್ತದೆ. ಇನ್ನೊಂದು ವಿಷಯವಿದೆ. ಸಾಮಾನ್ಯವಾಗಿ ಹಿರಿಯರು, ಮಧ್ಯವಯಸ್ಕರು ಹಾಗೂ ಯುವಕರು ಹಾಡುವ mಟ್ರೆಂಡ್ ಬದಲಾಗಿದೆ. ಎಳೆಯ ಮಕ್ಕಳಿಂದ ಹಾಡಿಸಿ, ಕುಣಿಸುವ ಅವರಲ್ಲಿರುವ ಪ್ರತಿಭೆಗೆ ನೀರೆರೆಯುವ ಪ್ರಯತ್ನ ಸಮಾಜದಲ್ಲಿ ಕಾಣಿಸುತ್ತಿದೆ. ಕೆಲವೊಮ್ಮೆ ಇದು ಪೋಷಕರ ಸ್ವಾರ್ಥಕ್ಕೆ ಕಾರಣವಾಗಿ ಮಕ್ಕಳ ಭವಿಷ್ಯ ಬಲಿಯಾಗುವ ಬಲಿಯಾಗುವ ಸಾಧ್ಯತೆ ಹಾಗೂ ಅಪಾಯವೂ ಇದೆ ಈ ಬಗ್ಗೆ ಎಚ್ಚರ ಅಗತ್ಯ ಅನ್ನುತ್ತಾರೆ ವೈದ್ಯರು. ಇದು ನಿಜ ಕೂಡ. ಕೆಲವೊಮ್ಮೆ ಮಕ್ಕಳು ಹೆಚ್ಚು ಹೆಚ್ಚು ಅಂಕ ತೆಗೆದು ಶಲೆಯಲ್ಲಿ ಎಲ್ಲರಿಗಿಂತ ಮುಂದೆ ಬರಬೇಕೆಂದು ಬಯಸಿ ಅವರ ಮೇಲೆ ಸಲ್ಲದ ಒತ್ತಡ ಹೇರಿ ಹೆಚ್ಚು ಹಾಲು ಬರಲಿ ಎಂದು ಹಸುವಿನ ಕೆಚ್ಚಲನ್ನು ಹಿಂಡಿದರೆ ಬರುವುದು ಹಾಲಲ್ಲ, ರಕ್ತ ಎಂಬುದು ಪೋಷಕರಿಗೆ ಕೆಲವೊಮ್ಮೆ ಅರ್ಥವಾಗುವುದಿಲ್ಲ, ಆಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಸಹಜ ಪ್ರತಿಭೆ ಸಹಜವಾಗಿ ಬೆಳೆಯುವ ಪರಿಸರ ಒದಗಿಸಬೇಕು. ಬದಲಿಗೆ ಗಾಂಧಾರಿಯAತೆ ಹೊಟ್ಟೆ ಹಿಸುಕಿಕೊಳ್ಳುವ ಪ್ರಯತ್ನ ಆಗಬಾರದು. ಬಹುತೇಕ ಸಂದರ್ಭಗಳಲ್ಲಿ ಗಾಂಧಾರಿಯ ಪ್ರಕರಣವೇ ಬಡೆಯುತ್ತದೆ, ಸಂತೋಷ ಅಂದ್ರೆ ಈ ಮಕ್ಕಳ ಸಂದರ್ಭದಲ್ಲಿ ಹೀಗೆ ಆಗಿಲ್ಲ. ನಮ್ಮೆಲ್ಲರ ಪುಣ್ಯ. ಮಕ್ಕಳ ಪ್ರತಿಭೆ ಎಲ್ಲ ಕಡೆ ಹೀಗೆಯೇ ಉಕ್ಕುತ್ತಿರಲಿ. ಇವರ ಭವಿಷ್ಯ ಉಜ್ವಲವಾಗಲಿ ಎಂದಷ್ಟೇ ಹಾರೈಸಬಹುದು. ಒಳಿತಾಗಲಿ.

No comments:
Post a Comment