ನಾವೆಲ್ಲ ಹೀಗೆಯೇ ಕಣ್ರೀ. ಸುಖವಿದ್ದಾಗ ಇವೆಲ್ಲ ನನಗೇಕೆ ದೇವರೇ ಎಂದು ಕೇಳುವುದಿಲ್ಲ. ಆದರೆ ಸ್ವಲ್ಪ ಕಷ್ಟ ಬಂದಕೂಡಲೇ ನಮ್ಮ ನಮ್ಮ ಕಲ್ಪನೆಯ ದೇವರನ್ನು ತೆಗಳಲು ಶುರುಮಾಡುತ್ತೇವೆ. ಬೇರೆಯವರ ಕತೆ ಬೇಕಿಲ್ಲ. ನನ್ನ ಪ್ರಸಂಗವನ್ನೇ ಹೇಳುತ್ತೇನೆ. ಉನ್ನತ ವ್ಯಾಸಂಗ ಮಾಡುವಾಗ ಕಷ್ಟವೋ ನಷ್ಟವೋ ಓದಿ ಮೊದಲ ರ‍್ಯಾಂಕ್ ಬಂದೆ. ಚಿನ್ನದ ಪದಕ ಸಿಕ್ಕಿಸಿಕೊಂಡು ಸಂಭ್ರಮಿಸಿದೆ. ಆ ಸಂದರ್ಭದಲ್ಲಿ ಯಾರೋ ಊಟ ಹಾಕಿ ಓದಲು ನೆರವಾದರು. ಸಂಶೋಧನೆ, ಪ್ರಾಜೆಕ್ಟ್ ಗಳನ್ನು ಮಾಡಿ ಸೈ ಅನಿಸಿಕೊಂಡೆ. ಆಗ ಇವೆಲ್ಲ ನನ್ನ ಶ್ರಮದ ಫಲ ಎಂದು ಬೀಗಿದೆ. ಅಂದು ದೇವರೇ ಇವೆಲ್ಲ ನನಗೇ ಏಕೆ ಎಂದು ಕೇಳಿಕೊಳ್ಳಲಿಲ್ಲ. ಅನಂತರ ಬಯಸಿದ ಒಳ್ಳೆಯ ವೃತ್ತಿ ಸಿಕ್ಕಿತು. ಒಳ್ಳೆಯ ಹೆಂಡತಿ ಸಿಕ್ಕಿದಳು. ಉತ್ತಮ ಆರೋಗ್ಯ ಇತ್ತು. ಸಂತೋಷವಾಗಿದ್ದೆ. ಬೇಕಾದ್ದು ಉಂಡು-ತಿಂದು ಖುಷಿಯಾಗಿದ್ದೆ. ಆಗ ಯಾವ ಕ್ಷಣದಲ್ಲೂ ದೇವರೇ ಇದೆಲ್ಲ ನನಗೇ ಏಕೆ ಎಂದು ಕೇಳಲಿಲ್ಲ. ಕಾಲ ಒಂದೇ ರೀತಿ ಇರುವುದಿಲ್ಲ. ಜೀವನ ಸರಳರೇಖೆಯೂ ಅಲ್ಲ. ಹೊಳೆಯುವ ಕನ್ನಡಿ ಮೇಲೆ ಗೀರು ಗೀಚು ಬಿದ್ದಂತೆ ಅದು ಇರಬಹುದು. ಮುಂದೆ ಒಂದು ದಿನ ಇಂಥ ದಿನ ಬರಬಹುದು ಎಂಬ ಕಲ್ಪನೆಯನ್ನೂ ಮಾಡಿಕೊಳ್ಳಲುಪುರುಸೊತ್ತು ಇಲ್ಲದಷ್ಟು ಸಂಭ್ರಮದ ದಿನಗಳು ಅವು. ಆದರೆ ಸಂಭ್ರಮದಲ್ಲಿ ನಾವು ಯಾರೂ ದೇವರನ್ನು ನೆನೆಯುವುದಿಲ್ಲ, ಕಷ್ಟದಲ್ಲಿ ಮಾತ್ರ ದೇವರ ನೆನಪಾಗುತ್ತದೆ. ಹೀಗಾಗಿಯೇ ಜನಪದರು ಸಂಕಟಬಂದಾಗ ವೆಂಕಟರಮಣ ಎಂದು ಹೇಳಿರುವುದು. ನಮ್ಮ ಪ್ರದಾಯದಲ್ಲೂ ದೇವರ ಕಲ್ಪನೆ ಭಿನ್ನ ಭಿನ್ನವಾಗಿದೆ. ಅದು ಸಂತೋಷದ ವಿಷಯ ಮಾತ್ರ. ಹುಟ್ಟಿದ ಮೇಲೆ ಸುಖ ನಮ್ಮ ಹಕ್ಕು ಎಂದು ಭಾವಿಸುತ್ತೇವೆ. ಆದರೆ ಜೀವನ ಒಂದು ಪ್ಯಾಕೇಜು. ಅದರಲ್ಲಿ ಕಷ್ಟ ನಷ್ಟಗಳೂ ಇರುತ್ತವೆ. ಒಂದು ಮಾತ್ರ ಸಾಕು ಎಂದು ಹೇಳುವಂತಿಲ್ಲ. ನಮ್ಮ ಸಂಪ್ರದಾಯದಲ್ಲಿ ಜೀವನದಲ್ಲಿ ಏನು ಬರುತ್ತದೋ ಅದನ್ನು ಸಂತೋಷದಿಂದ ಸ್ವೀಕರಿಸಬೇಕು ಅನ್ನಲಾಗುತ್ತದೆ. ನಮ್ಮ ಕರ್ಮದಂತೆ ಇವೆಲ್ಲ ಜೀವನದಲ್ಲಿ ನಡೆಯುತ್ತದೆ ಅನ್ನಲಾಗುತ್ತದೆ. ಅದನ್ನೇ ವಿಸ್ತರಿಸುವ ಆಶ್ ವಿಶಿಷ್ಟ ರೀತಿಯಲ್ಲಿ ಅದನ್ನು ನಮ್ಮ ಮುಂದಿಡುತ್ತಾನೆ. ಆತ ಅರ್ಥರ್ ಆಶ್. ಅವನ ಪ್ರಕಾರ ಎಂದೂ ದೇವರನ್ನು ಯಾಕಪ್ಪಾ ಹೀಗೆ ಎಂದು ಅದರಲ್ಲೂ ನನಗೇ ಹೀಗೆ ಎಂದು ಕೇಳಬಾರದು. ಅರ್ಥರ್ ಆಶ್ (೧೯೪೩-೧೯೯೩) ಅಮೆರಿಕದ ಒಬ್ಬ ಅಸಾಧಾರಣ ಟೆನಿಸ್ ಆಟಗಾರನಾಗಿದ್ದವನು. ಆತ ೧೯೬೦ರ ದಶಕದಲ್ಲಿ ನಡೆದ ಅಪಘಾತವೊಂದರಲ್ಲಿ ರಕ್ತಪಡೆಯಬೇಕಾಗಿಬಂತು. ಅವನ ಅಭಿಮಾನಿಗಳು ಮುಗಿಬಿದ್ದು ರಕ್ತಕೊಟ್ಟರು. ಅವನ ಜೀವ ಉಳಿಯಿತು. ಆದರೆ ಅಂದು ಸೂಕ್ತ ರಕ್ತ ಪರೀಕ್ಷೆ ಇರದ ಕಾರಣ ಸೋಂಕಿತ ರಕ್ತ ಅವನ ದೇಹ ಸೇರಿ ಅವನಿಗೆ ಏಡ್ಸ ಹತ್ತಿಕೊಂಡಿತು. ಆತ ನರಳಿದ. ಯಾರೋ ಅವನಿಗೆ ಒಮ್ಮೆ ‘ದೇವರು ನಿಮಗೆ ಎಂಥ ಕಷ್ಟಕೊಟ್ಟನಲ್ಲ’ ಅಂದರಂತೆ. ಆಶ್ ಹೇಳುತ್ತಾನೆ- “೫೦ ದಶಲಕ್ಷ ಮಕ್ಕಳು ಟೆನಿಸ್ ಆಡುತ್ತಾರೆ. ಐದು ದಶಲಕ್ಷ ಜನ ವೃತ್ತಿಪರ ಟೆನಿಸ್ ಆಡುತ್ತಾರೆ. ೫೦ ಸಾವಿರ ಜನ ವಿಂಬಲ್ಡನ್ ಗೆ ಬರುತ್ತಾರೆ.ನಾಲ್ವರು ಸೆಮಿಫೈನಲ್ ಗೆ ಬರುತ್ತಾರೆ ೫ ಸಾವಿರ ಜನ ಗ್ರಾನ್ ಸ್ಲಾ ತಲುಪುತ್ತಾರೆ.ನಾನು ಗೆದ್ದು ಕಪ್ ಹಿಡಿದು ಸಂಭ್ರಮಿಸುವಾಗ ಇಷ್ಟೆಲ್ಲ ಜನರ ನಡುವೆ ನಾನೇ ಏಕೆ ದೇವರೇ ಎಂದು ಕೇಳಲಿಲ್ಲ ನಾನು. ಈಗ ನೋವಿನಲ್ಲಿದ್ದೇನೆ. ಈಗ ನಾನು ಇದು ನನಗೇಕೆ ಎಂದು ಹೇಗೆ ಕೇಳಲಿ”
ಇದು ಅತ್ಯಂತ ಸರಳವೂ ಉದ್ಭೋಧಕವೂ ಆದ ತತ್ವ. ನಾವು ಸಂತಸದಲ್ಲಿದ್ದಾಗ ಎಂದಾದರೂ ಇದು ನನಗೆ ಏಕೆ ಅನ್ನುತ್ತೀವಾ? ನೋವಾದಾಗ ಹಾಗೆ ಕೇಳುವುದೇಕೆ? ಎರಡನ್ನೂ ಸಮನಾಗಿ ಕಾಣಿ ಅನ್ನುವುದು ಇಲ್ಲಿನ ಸೂಕ್ಷö್ಮ.ಈ ಮಾತನ್ನು ಅಳವಡಿಸಿಕೊಂಡರೆ ನೀವು ಅಸಾಮಾನ್ಯರಾಗುತ್ತೀರಿ. ಮಾಡಿನೋಡಿ. ಇದು ಅತ್ಯಂತ ಸುಲಭದ ಮಾರ್ಗ.ಇಂಥ ಪ್ರಾಯೋಗಿಕ ತತ್ವಶಾಸ್ತç ನಮಗೆ ಅಗತ್ಯವಿದೆ.

No comments:
Post a Comment